December 5, 2016

ನಿತ್ಯಸ್ಥಾಯಿ ಚಿತ್ರ

ಕ್ಷಣದಲ್ಲಿ ಸರಿ ಸರಿದ ಕುಂಚ
ಕಲ್ಪನೆಯ ಚಿತ್ರ
ಎಡತೋಳಿನಿಂದಿಳಿದು ಕೈಯವರೆಗೂ
ನಿತ್ಯಸ್ಥಾಯಿಯಾಗಿ
ಅರಳಿದ ಚಂದ ಕಂಡವರೀಗ
ಪದೇ ಪದೇ ಕೇಳುತ್ತಿದ್ದಾರೆ
ಈ ಚಿತ್ರ ಬರೆದವರು ಯಾರೆಂದು
ಗೊತ್ತಿಲ್ಲದವರ ಗುರುತು ಹೇಳುವುದು ಹೇಗೆ
ಗೊತ್ತಿಲ್ಲವೆಂದರೆ ನಂಬುತ್ತಲೂ ಇಲ್ಲ
ಖಾಲಿಯಿರುವ ಈ ತೋಳಮೇಲೂ
ಚಿತ್ರ ಕೆತ್ತಲಿಕ್ಕೆಂದು
ಕನಸೊಳಗೆ ಬಂದೇ ಬರುತ್ತೀಯಲ್ಲ ಹೇಗೂ
ಚಿತ್ರ ಬರೆಯುವ ನಿನ್ನ ಚಿತ್ರ ಸೆರೆಹಿಡಿದು
ಇವರಿಗೆಲ್ಲ ತೋರಿಸಿಬಿಡುತ್ತೇನೆ
ಮತ್ತೊಮ್ಮೆ ಕನಸಿಗೆ ಬಂದು ನೋಡುನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.