ಬಾಗಿಲೆದುರು ಹೊಂಗನಸು
ಅವಳ ಹೆಜ್ಜೆಯ ಸದ್ದು
ಕಣ್ಣಂಚಿನ ಮಿಂಚು
ಒಳಗಡಿಯಿಟ್ಟು
ಹುಟ್ಟಿದ ಕವಿತೆ ಹೊಸರಾಗ
ಹೆಸರಿಡುವ ಹಂಗು ಅವಳದಲ್ಲ
ಅಗೋ ಬಾಗಿಲು ಸದ್ದು
ತೆರೆಯಿತೋ ಮುಚ್ಚಿತೋ ತಿಳಿಯಲಿಲ್ಲ
ಮತ್ತೆ ರಿಂಗಣಿಸುತ್ತದೆ
ಮೌನಕ್ಕೆ ಸಿಗುವ ಬೆಲೆ ಮಾತಿಗಿಲ್ಲ
ಮತ್ತೆ ಬಾಗಿಲು ಸದ್ದು
ಗೆಜ್ಜೆಯ ಸದ್ದು
ಬಂದಳೋ... ಹೊರಟಳೋ...
ಎದೆಯೊಳಗಿನ ತಾಳಕ್ಕೆ
ಅವಳು ಹಾಡಿದ ರಾಗ
ಇದೀಗ ದನಿಯೂ ಕೇಳುತ್ತಿಲ್ಲ
ಸೆರಗಂಚಿನ ತಣ್ಣನೆಯ ಬಣ್ಣ
ಬೆರಳಂಚು ಸವರಿದ ನವಿರು
ಸರಿದ ಮುಂಗುರುಳು
ಹೊಳೆದ ನತ್ತಿನೊಳಗಿನ ಮುತ್ತು
ಮುದ್ರೆಯುಂಗುರ
ಕನ್ನಡಿಗೂ ಕಾಣದ ಹರಳಿನ ಬಣ್ಣ
ಸಕಲಬಣ್ಣಗಳ ಕಲಸು ಮೋಲೋಗರ
ಕದಡದಿರು ಭಾವಗಳ
ಮನದೊಳಗೀಗ ಮೌನರಾಗ