May 30, 2012

ಮನೆ ಮೊಳಕೆಯೊಡೆದ ಕಥೆ

ಅಕ್ಕಪಕ್ಕದ್ ಬಾಗ್ಲು. ಹಬ್ಬಕ್ಕೂ ಹುಣ್ಣಿಮೆಗೂ ಬಾಗ್ಲಿಗೆ ನೀರು ಹಾಕಿ ರಂಗೋಲೆ ಹಾಕಿದ್ವಿ ಇಬ್ರೂ. ಅವಳ ರಂಗೋಲೆ ಚೆನ್ನಾಗಿ ಬಂದಾಗ ನಾನೂ, ನನ್ನ ರಂಗೋಲೆ ಚೆನ್ನಾಗಿ ಬಂದಾಗ ಅವಳೂ ಒಬ್ಬರ ಮೇಲೊಬ್ಬರು ಹೊಟ್ಟೆಕಿಚ್ಚುಪಟ್ಕೊಂಡ್ವಿ. ದಿನಾ ಮಧ್ಯಾಹ್ನದ್ ಕಾಫಿ ಒಂದಿನ ಅವಳ ಮನೇಲಿ. ಇನ್ನೊಂದಿನ ನಮ್ಮನೇಲಿ. ಒಟ್ಗೇ ಕೂತ್ಕೊಂಡು ಕುಡಿದ್ವಿ. ಎಲ್ಲಾ ಖುಷೀನೂ ಒಟ್ಟೊಟ್ಟಿಗೇ ಹಂಚ್ಕೊಂಡ್ವಿ. ಕೆಲವು ಸಲ ಜ್ವರನೂ ಹಂಚ್ಕೊಂಡ್ವಿ. ಅವಳ ಅಡಿಗೆ ನಂಗೆ ಪ್ರೀತಿ. ನಾನು ಮಾಡಿದ್ದು ಅಡಿಗೆ ಹೆಂಗೇ ಆದ್ರೂ ಅವಳಿಗೆ ಇಷ್ಟ. ಒಂದಿನ ಅವಳು ಊರಿಗೆ ಹೋಗಿಬರ್ತೀನಿ, ನಮ್ಮನೆನೂ ಹುಷಾರಾಗಿ ನೋಡ್ಕೋ ಅಂತಂದ್ಲು, ಊರಿಗೆ ಹೋದ್ಲು. ನಾನು ಗಂಡ ಮಕ್ಕಳಿಗೆ ಮೂರುದಿನ ರಜ ಇತ್ತು ಅಂತ ನಾನು ಇನ್ನೆಲ್ಲೋ ಹೋದೆ. ಆ ಪಕ್ಕದ್ಮನೆಯವ್ರು ತುಂಬಾನೇ ದುಬಾರಿ ಫ್ರೆಂಚ್ ಫ್ರೈಸ್ ಮಾಡಿ ಇಡೀ ಬಿಲ್ಡಿಂಗಿಗೆ ಬೆಂಕಿ ತಗುಲಿ ನಮ್ಮಗಳದ್ದೂ ಸೇರಿ ಎಂಟು ಮನೆಗಳು ಫ್ರೈ ಆದ್ವು. ಒಟ್ಟೂ ಹದಿನಾರು ಮನೆಗಳು ಡ್ಯಾಮೇಜು.  ಬಾಡಿಗೆದಾದರೂ ಇಷ್ಟು ದಿನ ಇದ್ದ ಮನೆ. ಸುಟ್ಟುಹೋಯ್ತು ಅಂತ ಬಿಟ್ಟು ಹೋಗೋದು ಕಷ್ಟವೇ.

ಎದುರಿಗೇ ಖಾಲಿ ಇದ್ದ ಮನೆ ಸೇರ್ಕೊಂಡ್ವಿ. ಊರಿಂದ ಬಂದೋಳು ಕೇಳಿದ್ಲು. ಎಲ್ರೀ ನಮ್ಮನೆ?

ಚಳಿಗೆ ಸತ್ತೋಯ್ತು. ಹೊಸಮನೆ ಬೀಜ ಹಾಕಿದೀವಿ, ಮೊಳಕೆ ಒಡೀತೀದೆ ನೋಡಿದ್ಯಾ? ಅಂದೆ. ನಕ್ಳು ಕಣ್ತುಂಬಿ. ಒಂದಿಷ್ಟು ದಿನಗಳು ಕಳದ್ವು.

ಗೋಡೆ ನೋಡಿದ್ಯೇನೆ ಮತ್ತದೇ ನನ್ನಿಷ್ಟದ್ದು ಬಿಳೀ ಬಣ್ಣ ಬಳ್ದಿದಾರೆ ಅಂದೆ. ಈಗ ಇಬ್ರೂ ನಕ್ವಿ.

ಮತ್ತಿವತ್ತು ಮಧ್ಯಾಹ್ನ ಎರಡೂ ಮನೆಗಳ ಬಾಗಿಲೂ ತೆರೆದೇ ಇದ್ವು.
ಬಾರೇ ಹೊಸಮನೆ ನೋಡ್ಕೊಂಡುಬರೋಣ ಅಂದೆ. ಇಬ್ರೂ ಹೊಸಾಮನೆ ರೆಡೀ ಆಗ್ತಿರೋದನ್ನ ನೋಡಿ ಒಳಗೆಲ್ಲ ಓಡಾಡ್ಕೊಂಡು ಖುಷ್ ಖುಷಿಯಿಂದ ಹೊರಗೆ ಬಂದ್ವಿ.

ಈ ಸಾಲ ನಾನು ಊರಿಗೆ ಹೋಗ್ತಿದೀನಿ, ನೀನು ನಮ್ಮನೆ ಹುಷಾರಾಗಿ ನೋಡ್ಕೋ ಅಂದೆ. ಹೊರಗೆ ಧಗ ಧಗ ಬಿಸ್ಲು. ನಾವಿಬ್ರೂ ನಕ್ಕೊಂಡು ನಕ್ಕೊಂಡು ತಂಪಾದ್ವಿ :-)

May 9, 2012

ಏಳು ಹೆಜ್ಜೆಗಳನಿಟ್ಟ ಎಂಟು ವರುಷಕ್ಕೆ...

ಪ್ರೀತಿ ಹುಡುಗಾ...

ಅದೆಷ್ಟೋ ದಿನಗಳಾದವು ನಿನಗೊಂದು ಪತ್ರ ಬರೆಯದೆಲೆ. ದಿನಗಳಲ್ಲ, ಅದೆಷ್ಟೋ ವರ್ಷಗಳೇ ಸರಿದುಹೋಗಿದ್ದಾವೆ. ಆವತ್ತು ಪರಸ್ಪರ ಮಾತುಗಳಾಡದೇ ಇರುವಂಥ ದಿನಗಳಲ್ಲೊಂದು ದಿನ ಮತ್ತೆ ಪತ್ರ ಬರೆದಿದ್ದೆ. ಪೋಸ್ಟ್ ಮಾಡಲಿಲ್ಲ. ನಮ್ಮ ಪ್ರೀತಿಯೂ ಇದೀಗ ಕಥೆಯೇ ಆಗುತ್ತಿದೆ ಅಂತ ಭಾವಿಸುತ್ತಿರುವಾಗಲೇ ಅವರೆಲ್ಲ ಸೇರಿ ನಮ್ಮಿಬ್ಬರಿಗೆ ಮದುವೆ ನಿಶ್ಚಯಿಸಿದ್ದರು. ನಿನಗೆ ಖುಷಿಯಾಯಿತ? ಅಂತ ಕೇಳೋಣವೆಂದುಕೊಳ್ಳುವಷ್ಟರಲ್ಲಿ ಮದುವೆ ನಡೆದೇ ಹೋಯಿತು. ಆಗ ಏನನ್ನಿಸಿತೆಂದರೆ ಅದೇ ಈಗಲೂ ಅನ್ನಿಸುತ್ತಿದೆ. ಏನೆಂದರೆ ಸತ್ಯವಾದ ಪ್ರೀತಿಯು ಮೇಲಿನ ಆ ಲೋಕದಲ್ಲಿಯೇ ನಿಶ್ಚಯವಾಗುವ ವಿಚಾರವೆಂದು. ಪ್ರೀತಿಯು ಯಾವುದೇ ನಿರ್ಧಾರ, ನಿಶ್ಚಯಗಳನ್ನು ಕಿತ್ತುಬಿಸಾಕುವಷ್ಟು ಆಳಕ್ಕೆ ಬರೆದಿರಲ್ಪಟ್ಟಿರುತ್ತದೆ ಅನ್ನುವುದಕ್ಕಿಂತ ಮಾಸದ ಹಾಗೆ ಕೆತ್ತಿರಲ್ಪಟ್ಟಿರುತ್ತದೆಯೆಂದು.

ಬೇರೆ ಬೇರೆಯ ಎರಡೂ ಪಯಣದ ಹಾದಿ ಒಂದೇ ಆಗಿ ಎಷ್ಟು ಚೆಂದವಾಗಿ ಸಾಗಿತು. ಇಂಥಹಾದಿಯ ನಿರ್ಮಿಸಿಕೊಂಡ ಹೆಜ್ಜೆಗಳ ಹರಿವನ್ನೇ ಹಿಂಬಾಲಿಸಬೇಕೆಂದು ಇತರರು ಬಯಸುವಷ್ಟು ಚೆಂದದ ಹಾದಿಯಲ್ಲೇ ಬಂದುಬಿಟ್ಟೆವು. ನಿಂತುಸಾಗಿದೆವೇ ಹೊರತು ಪಯಣ ನಿಲ್ಲಿಸಲಿಲ್ಲ. ನಮ್ಮಿಬ್ಬರ ನೋವನ್ನು ನಾವೇ ಹಂಚಿಕೊಂಡೆವು. ನೋವನ್ನು ನಮ್ಮೊಳಗೇ ಹಂಚಿಕೊಳ್ಳುವುದರಲ್ಲಿರುವ ಸುಖ ಬಲ್ಲವನಿಗೇ ಗೊತ್ತು. ನಮ್ಮ ನಡುವಿನ ಪ್ರೀತಿಯೊಳಗಿನ ಒರತೆ ಪ್ರೀತಿಯೊಳಗಿನ ಕೊರತೆಯನ್ನು ಮುಚ್ಚಿಹಾಕುತ್ತಲೇ ಬಂತು. ಮುದ್ದಾಡಲೂ ಇಲ್ಲ, ಕಚ್ಚಾಡಲೂ ಇಲ್ಲ, ಅಂಥ ಪ್ರೀತಿಯೊಂದು ನಮ್ಮನ್ನು ನೇವರಿಸುತ್ತಲೇ ಇತ್ತು. ಹಾದಿಬದಿಯಲ್ಲಿ ನಡೆವಾಗಲೂ ಚೆಂದದೊಂದು ಹಕ್ಕಿಜೋಡಿಯಾಗಿಯೇ ಹಾರಿದೆವು. ಯಾರೂ ನಮ್ಮನ್ನು ನೋಡಿ ನಗಲಿಲ್ಲ. ಪ್ರೀತಿಸಲೇ ಗೊತ್ತಿರದವರು ಒಂದಿಷ್ಟು ಪ್ರೀತಿಸುವುದ ಕಲಿತರು, ಇಷ್ಟು ಸಾರ್ಥಕ್ಯ ಇಡಿಯ ಬದುಕಿಗೆ ಸಾಕಲ್ಲವೇ?

ವಿದ್ಯಾಭ್ಯಾಸವನ್ನು ಇನ್ನಷ್ಟು ಮುಂದುವರೆಸಬೇಕೆಂದಿದ್ದ ನೀನು ಒಂದುಹಂತಕ್ಕೆ ಓದನ್ನು ನಿಲ್ಲಿಸಿದ್ದು ನನಗಾಗಿ ಮಾತ್ರ ಎನ್ನುವುದು ನನಗೂ ಗೊತ್ತಿದೆ. ವಿದ್ಯಾಭ್ಯಾಸದ ಬಗೆಗಿನ ಕೆಲ ಕನಸುಗಳೆಲ್ಲ ಉದ್ಯೋಗದತ್ತ ವಾಲುವಂತಾಗಿದ್ದು ನನ್ನಿಂದಲೆ ಎಂಬ ಬೇಸರವೇನೂ ನನ್ನೊಳಗಿಲ್ಲದ್ದಕ್ಕೆ ಕಾರಣ ಬದುಕನ್ನು ಚೆಂದವಾಗಿ ರೂಪಿಸಿಕೊಳ್ಳಬಲ್ಲಷ್ಟು ವಿದ್ಯಾರ್ಹತೆಯನ್ನಾಗಲೇ ನೀ ಗಳಿಸಿಕೊಂಡಿದ್ದೆ ಎಂಬುದೂ ಸುಳ್ಳಲ್ಲ. ಆದರೀಗ ಪುಸ್ತಕದ ಜ್ಞಾನ ಮಾತ್ರವಲ್ಲದೇ ಬದುಕಿದ ಅನುಭವ ಹೆಚ್ಚು ಪ್ರಯೋಜನವೆಂಬ ಅರಿವು ನಿನ್ನ ಕಣ್ಣುಗಳಲ್ಲಿದೆಯಲ್ಲ ಅಷ್ಟು ಸಾಕು ನನಗೆ. ಪ್ರೀತಿ ಮತ್ತು ವಿದ್ಯಾಭ್ಯಾಸವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುತ್ತ ಸಮತೋಲನ ಕಾಪಾಡುವಲ್ಲಿ ಹೆಣಗಾಡಿದ್ದಂತೂ ಸತ್ಯ. ಆ ಹೆಣಗಾಟಕ್ಕೊಂದು ಯಶಸ್ಸು ಸಿಕ್ಕಿದ್ದು ಇನ್ನಷ್ಟು ಸತ್ಯ. ಪ್ರೀತಿಯನ್ನು ಉಳಿಸಿಕೊಳ್ಳುವಲ್ಲಿ ಇಬ್ಬರ ವಿದ್ಯಾಭ್ಯಾಸಕ್ಕೊಂದು ಸಾರ್ಥ್ಯಕ್ಯ ಸಿಕ್ಕಿದೆಯೆಂಬ ಖುಷಿ ಮಾಸುವುದಿಲ್ಲ.

ಕಾಲಿಗೆ ಅಂಟಿದ ಮುಳ್ಳನ್ನು ಪ್ರೀತಿಯಿಂದಲೇ ಮುಳ್ಳಿಗೂ ನನಗೂ ನೋವಾಗದ ತೆರನಾಗಿ ತೆಗೆಯುವಾಗ ಅಲ್ಲೊಂದು ಪ್ರೀತಿಯ ಅನುಭವವೇ ನನಗಾಗುತ್ತದೆ. ಆ ಮುಳ್ಳನ್ನೂ ಬಿಸಾಡದೆಲೆ ಆದಷ್ಟು ದೂರ ಕೈಯಲ್ಲಿಟ್ಟುಕೊಂಡು ಕ್ರಮಿಸುತ್ತೇನಲ್ಲ, ಹೀಗಿರುವಾಗ ನನಗಿಂತ ಹೆಚ್ಚಾಗಿ ನನ್ನ ಪ್ರೀತಿಸುವ ನಿನ್ನ ಪ್ರೀತಿಸದೇ ಹೇಗಿರಲಿ ಹೇಳು.

ಜೊತೆ ಸಾಗಿದ ಪಯಣದ ಪ್ರತಿ ಹಂತದ ಹೆಜ್ಜೆಗಳೂ ನನ್ನೊಳಗೆ ಆಗಾಗ ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತವೆ. ತಪ್ಪುವ ತಾಳ ಮತ್ತೆ ಸರಿಯಾಗುವ ಸದ್ದು ಮನಸ್ಸಿಗೆ ಮುದಕೊಡುತ್ತದೆ. ನಿನ್ನ ಸಹನೆಯ ಲಯದೊಳಗೆ ನಾನು ಸದಾ ತಣ್ಣಗೆ ಹಾಡೊಂದನ್ನು ಗುನುಗುಡತ್ತಲೇ ಇದ್ದದ್ದು ನಿನಗೆ ಕೇಳಿಸುತ್ತಲಿದೆಯೆಂಬುದೇ ಅತ್ಯಂತ ಖುಷಿ. ಇಬ್ಬರೂ ಜತೆಯಲ್ಲಿರುವಾಗ ಬೆಟ್ಟದ ತುದಿಯಲ್ಲಿನ ಮೋಡ ಹಿಡಿಯುವುದೇನೂ ಕಷ್ಟವಲ್ಲ ಅಂತ ಗೊತ್ತಾಗಿದೆಯಲ್ಲ,ಜತೆಯಲ್ಲೇ ಬರುತ್ತೇನೆ ಮುಂದೆ ಸಾಗು. ಹಿಂದೆ ಇದ್ದುಕೊಂಡು ನಿನ್ನ ಹಿಂದೆಳೆಯುವ ಮನದಿಂದಲ್ಲ, ನಿನ್ನ ಬೆನ್ನಿಗಾಸರೆಯಾಗಿ ಬರುತ್ತೇನೆ. ನೀನು ನನ್ನ ಕೈಹಿಡಿದು ಮುಂದೆಳೆದುಕೊಂಡು ಹೋಗುತ್ತಿರು.ಯಾವ ಮೋಡ ಬೇಕಂತ ನಾನು ನಿನಗೆ ಹೇಳುತ್ತೇನೆ, ಆ ಮೋಡ ಹಿಡಿಯುವುದು ಕಷ್ಟವಾದರೊಮ್ಮೆ ನಿಂತು ದಣಿವಾರಿಸಿಕೋ, ನನ್ನ ಮನದ ಬೊಗಸೆಯಲ್ಲಿ ನಿನ್ನ ದಣಿವಾರಿಸಲಿಕ್ಕಾಗಿಯೇ ಒಂದಿಷ್ಟು ನೀರು ಸದಾ ಜಿನುಗುತ್ತಿರುತ್ತದೆ. ಸುಸ್ತಾದರೆ ಈ ಮಡಿಲು ಅಮ್ಮನ ಮಡಿಲಿನಷ್ಟೇ ಮೃದುವೆನ್ನುವುದನ್ನು ಮರೆಯಬೇಡ. ಒಂದಿಷ್ಟು ಹೊತ್ತು ವಿರಮಿಸು. ಜೊತೆಯಲ್ಲಿಯೇ ಇದ್ದೇನೆ.

ಇವತ್ತಷ್ಟೇ ಪ್ರಪೋಸ್ ಮಾಡಿಕೊಂಡ ಪ್ರೇಮಿಗಳ ಹಾಗೆ ಎಲ್ಲಿದ್ದರೂ ಜತೆಯಾಗಿರುತ್ತ, ನಾಳೆಯೇ ಡಿವೋರ್ಸ್ ಕೊಟ್ಟುಕೊಳ್ಳುವ ಗಂಡಹೆಂಡಿರ ಹಾಗೆ ಜಗಳಾಡುತ್ತ,ಭಾರತ ಪಾಕಿಸ್ತಾನದಂಥ ಭಿನ್ನಾಭಿಪ್ರಾಯಗಳ ನಡುವೆಯೂ ಒಂದೇ ನಿರ್ಧಾರ ತೆಗೆದುಕೊಳ್ಳುತ್ತ, ಒಂದೇ ತರಗತಿಯಲ್ಲಿ ಇಪ್ಪತ್ತು ವರ್ಷ ಓದಿದ ಸ್ನೇಹಿತರ ಹಾಗೆ ಬಡಿದಾಡುತ್ತ, ಒಂದೇ ಗೂಡಿನಲ್ಲಿ ಬೆಳೆದ ಹಕ್ಕಿಗಳ ಹಾಗೆ ಕಿಚಪಿಚಗುಡುತ್ತ, ಜೊತೆಯಾಗಿದ್ದು ಯಶಸ್ವಿಯಾಗಿ ಎಂಟು ವರ್ಷ ಪೂರೈಸಿದ ನಮಗೆ ಶುಭಾಶಯಗಳು ಹುಡುಗಾ...

ನಾವು ಜೊತೆಯಾಗಿ ಪಯಣಿಸಲಾರಂಭಿಸಿ ಇಂದಿಗೆ ಎಂಟುವರ್ಷಗಳಾದವು ಹುಡುಗಾ. ‘ಎಲ್ಲಿಗೆ ಪಯಣ?’ ಅಂತ ನಮ್ಮನ್ನು ಯಾರೂ ಕೇಳಲಿಲ್ಲ. ಕೇಳಿದರೆ ನಮಗದು ಗೊತ್ತೂ ಇಲ್ಲ. ನೀ ಕೊಟ್ಟ ಬಾಡದ ಹೂವು ನನ್ನೊಂದು ಕೈಯಲ್ಲಿದೆ. ನನ್ನೀ ಬಲಗೈ ನಿನ್ನ ಕೈಯೊಳಗಿದೆ.
" ಕರುಣಾಳು ಬಾ ಬೆಳಕೆ
ಮುಸುಕಿದೀ ಮಬ್ಬಿನಲಿ
ಕೈಹಿಡಿದು ನಡೆಸೆನ್ನನು
"

ನಿನ್ನ ಪಯಣದ ಹಾದಿ ನನ್ನ ಅಂಗೈಯೊಳಗಿದೆಯೆಂಬ ನಿನ್ನ ನಂಬಿಕೆ ಸುಳ್ಳಾಗದಿರಲಿ. ಪಯಣಕ್ಕೆ ಜತೆಯಾದ ನಿನಗೆ ಧನ್ಯವಾದ ಮತ್ತು ವಂದನೆ.


ಜಗಳಾಡಬೇಕೆನ್ನಿಸಿ ದಾರಿಮಧ್ಯದಲ್ಲಿಯೇ ನಿಲ್ಲಿಸಿ ಜಗಳಾಡಿದ್ದಕ್ಕೆ, ಬೈಕಲ್ಲಿ ಹಿಂದೆ ಕುಳಿತವರಿಗೂ ಹೆಲ್ಮೆಟ್ ಖಡ್ಡಾಯವಾಗಿದ್ದಾಗ ಫೋಲೀಸಿನವ ಬಂದ ಅಂತ ಬೈಕ್ ರೈಡ್ ಮಾಡ್ತಿದ್ದ ನಿನ್ನ ಹೆಲ್ಮೆಟ್ ತೆಗೆದು ನಾನು ಧರಿಸಿದ್ದನ್ನು ಕಂಡು ಪೋಲೀಸಿನವ ನಕ್ಕಿದ್ದಕ್ಕೆ, ಜೋರುಮಳೆ ಬರೋಕೆ ಶುರುವಾದಾಗ ನಿನ್ನ ಜರ್ಕಿನ್ ನಾನು ಧರಿಸಿದ್ದಕ್ಕೆ, ಹೊಟೆಲ್ ಅಲ್ಲಿ ನಿನ್ನ ಪ್ಲೇಟಿನಲ್ಲಿದ್ದದ್ದನ್ನೇ ಹೆಚ್ಚು ತಿಂದಿದ್ದಕ್ಕೆ, ಡ್ರೈವ್ ಮಾಡೋವಾಗ ನಿನ್ನ ಕನ್ನಡಕ ತೆಗೆದು ನಾನು ಹಾಕ್ಕೊಂಡು ನಿಂಗೆ ಮುಂದಿನ ದಾರಿಯೇ ಕಾಣದಂಗೆ ಮಾಡಿದ್ದಕ್ಕೆ, ನೀ ಉಪಯೋಗಿಸುವ ಕಂಪ್ಯೂಟರ್ರೇ ಬೇಕು,ನೀನು ಓದ್ತಿರೋ ಪುಸ್ತಕಾನೇ ಬೇಕು, ನೀ ಕುಡೀತಿರೋ ಟೀ ಕಪ್’ಏ ಬೇಕು ಅಂತೆಲ್ಲ ನಿನ್ನ ಗೋಳಾಡಿಸುವುದಕ್ಕೆ, ಖರ್ಜೂರ-ಹಲಸಿನ ಹಣ್ಣುಗಳಂಥವನ್ನು ತಿಂದು ಅವುಗಳ ಬೀಜವನ್ನ, ಜೋಳ ತಿಂದು ಉಳಿದ ಅದರ ಭಾಗವನ್ನ, ಟೀ ಕುಡಿದ ಖಾಲೀ ಕಪ್ಪನ್ನು ನಿನ್ನ ಕೈಗಿತ್ತಂಥ ಖಾಯಂ ತಪ್ಪುಗಳಿಗೆಲ್ಲ ಯಾವತ್ತಿನಂತೆ ನಿನ್ನ ಒಪ್ಪಿಗೆಯಿರಲಿ. ಇವಕ್ಕೆಲ್ಲ ಪಕ್ಕದಲ್ಲೊಂದು ಪುಟ್ಟ ಕ್ಷಮೆಯೂ ಇರಲಿ.


ಇಂಥದೊಂದು ದಿನದಂದು ಇಬ್ಬರಿಗೂ ದೇವನು ಮತ್ತೆ ಒಳ್ಳೆಯದನ್ನೇ ಮಾಡುತ್ತಾನೆಂಬ ಯಾವತ್ತಿನ ಅದೇ ಭರವಸೆಯಲ್ಲಿ...
ಎಲ್ಲರಿಗೂ ಎಲ್ಲವೂ ಇನ್ನಷ್ಟು ಒಳಿತಾಗಲಿ.

ಪ್ರೀತಿಯಿಂದ,
-ಹುಡುಗಿ

May 1, 2012

ನೀಲುವಿನ ಅಂಗಳದ ಆ ಬೆಳದಿಂಗಳು

ಬೆಳಕು ಅರೆಬಿರಿದು ಕಣ್ಣುಮಿಟುಕಿಸುತ್ತಿದೆ ಚುಮು ಚುಮು ತುಂತುರಿನಲ್ಲಿ. ಅಂಗಳದ ಮಣ್ಣು ತುಂತುರ ನೆನೆದು ನಗುತ್ತಿದೆ. ಕೊಂಚವೇ ಹಸಿಯಾಗುತ್ತ ನಾಚುತ್ತಲಿದೆ. ಘಮ ಘಮವೆನಿಸುತ್ತದೆ. ಸೀರೆಯಂಚನ್ನ ಚೂರು ಮೇಲಕ್ಕೆತ್ತಿ ಪಾದಗಳನ್ನ ಅಂಗಳದ ಹಸಿಯೊಳಗಿಡುತ್ತಿದ್ದೇನೆ. ತಂಪು, ತಂಪೇ ಇದು. ಆಹ್ಲಾದ. ಮಳೆಯಲ್ಲಿ ಮನೆಯೊಳಗೆ ಕುಳಿತು ಹೀರುವ ಬಿಸಿಕಾಫಿಗಿಂತ ಆಹ್ಲಾದ. ನಿನ್ನ ನೆನಪಾಗುತ್ತದೆ. ನೀನಿದ್ದರೆ ಇನ್ನೂ ಖುಷಿ ಪಡುತ್ತಿದ್ದೆಯೆನಿಸಿ ನಗು. ಮೊನ್ನೆಯಷ್ಟೇ ನೀ ತಂದ ಹೊಸ ಕಾಲ್ಗೆಜ್ಜೆ ಕೆಸರೊಂದಿಗೆ ಆಟವಾಡ್ತಿದೆ. ಎಲ್ಲವೂ ಹೊಸತು, ಹೊಸತನದ ಗುಂಗಿನಲ್ಲಿ ಅಂಗಳದಲ್ಲಿ ಸಾಲು ಚುಕ್ಕಿಗಳಿಳಿದು ಮೂಡುತ್ತವೆ. ಒಂದೊಂದು ಚುಕ್ಕಿಯನ್ನೂ ಸೇರಿಸುತ್ತ ಸೇರಿಸುತ್ತ ಮನಸಿಗೆ ಬಂದಂತೆ ನನ್ನಿಷ್ಟದ ಹಾಗೆ ಗೆರೆ ಎಳೆಯುತ್ತ ಸುತ್ತದಿಕ್ಕುಗಳಿಂದೆಲ್ಲ ಕತ್ತು ಹೊರಳಿಸಿ ಬಗ್ಗಿಸಿ ತಿರುವುತ್ತ ಆಹ್! ಎಂದುಕೊಳ್ಳುತ್ತೇನೆ. ರಂಗೋಲೆ! ನಾನು ಬಿಡಿಸಿದ ನನ್ನೊಳಗಿನ ಚಿತ್ರ ಅಂಗಳದ ಬಾಗಿಲಿಗಿಂದು ರಂಗೋಲೆ. ನೀನಿರಬೇಕಿತ್ತು ಎನ್ನಿಸುತ್ತಿದೆ. ಸುತ್ತೆಲ್ಲ ನೋಡುತ್ತೇನೆ. ಹಸಿರೆಲೆಗಳೇ ಹೂಬಿಟ್ಟಂತೆ! ಒಂದೊಂದು ಎಲೆಗೂ ಬೆಳ್ಳನೆಯ ಹೂಗುಚ್ಚ. ಆಗಸವೂ ಮಂದ ಬಿಳುಪು. ತುಂತುರು. ಎಳೆಬಿಸಿಲು ಯಾರನ್ನೋ ಚುಂಬಿಸಲೆಂದೇ ಬಂದಿರುವಂತೆ, ಹಸಿರೆಲೆಗಳ ನಡುವೆ ಬಿಳಿ ಹೂಗಳಲಿ ನೆಲೆಯಾಗುವಂತೆ ಹರಡಿಕೊಳ್ಳುತ್ತಿದೆ. ಹೂಗಳು ನನ್ನ ನೋಡಿ ಮಂದಹಾಸ ಬೀರುತ್ತಿವೆ. ನಾನೂ ನಗುತ್ತೇನೆ.
ನನ್ನದೇ ಗುಂಗಿನಲ್ಲಿ ಕತ್ತೆತ್ತಿದರೆ ಸೂರ್ಯನ ಬಣ್ಣ ಬೆಳಕಾಗುವುಷ್ಟರಲ್ಲಿ ಬೇರೆಯದೇ! ಆ ಬಣ್ಣವೂ ಇಷ್ಟವೇ ಎನಿಸಿಬಿಡುತ್ತದೆ. ಅವನು ಯಾವ ಬಣ್ಣದಲ್ಲಿದ್ದರೂ ನನಗಿಷ್ಟವೇ, ಅವನೇ ಹಾಗೆ. ಬೆಳಿಗ್ಗೆ, ಮಧ್ಯಾಹ್ನ ಸಂಜೆಯೊಳಗೆ ಬಣ್ಣಬದಲಾಯಿಸಿಕೊಳ್ಳುತ್ತಲೇ ಸಂಜೆಯಾರಿದ ಮೇಲೆ ಅವನು ಅವನಾಗಿಯೇ ಇರುವ ಅವನ ನೆನೆದು ಮುದ್ದು ಬರತ್ತೆ. ಮುಗುಳ್ನಕ್ಕು ಕಣ್ಣುಮಿಟುಕಿಸಿ ಮಗುವಾಗುತ್ತೇನೆ. ತುಂತುರುವೊಂದು ಆಗಸದಿಂದ ಕಣ್ಣಂಚಿಗೆ ಬಂದು ‘ನನಗಿಂತ ನಿನ್ನ ಮನ ತಣ್ಣಗಿದೆಯಲ್ಲೆ, ಮನಸನ್ನೊಂಚೂರು ಬಿಸಿಲಿಗೆ ಹರವು, ಸರಿಹೋಗಬಹುದು’ ಅಂತ ಪಿಸುನುಡಿದು ಕೆನ್ನೆಗುಂಟ ಬಳಸಿ ಹರಿದ ಹಾದಿಯನ್ನ ಹಿಡಿದು ನನ್ನೆದೆಗಿಳಿದು ಆರಿ ಹೋದಹಾಗೆ ಅನ್ನಿಸುತ್ತದೆ. ಕತ್ತೆತ್ತಿ ಸುತ್ತ ದಿಟ್ಟಿಸಿದರೆ ಸುತ್ತಲಿನ ಪ್ರಕೃತಿ ನನ್ನೆಡೆಗೆ ಮುತ್ತಿಕೊಂಡು ಕಳೆದುಹೋಗುತ್ತೇನೆ. ಅಂಗಳವನ್ನು ಇನ್ನಷ್ಟು ಚಂದ ಮಾಡುವ ಹುಮ್ಮಸ್ಸು ಯಾವತ್ತೂ ಇದೆ. ತುಂತುರುವಿನ ಸಾನ್ನಿಧ್ಯದಲ್ಲೂ ಇಬ್ಬನಿಯ ನೆನಪು.ಇಬ್ಬನಿಗೂ ತುಂತುರುವಿಗೂ ಹೊಂದಿಕೆಯಾಗುವ ಹೂಗಿಡವೊಂದನ್ನು ನೆಡಬೇಕೆನ್ನಿಸುತ್ತದೆ. ಹಾಡೊಂದನ್ನ ಗುನುಗುತ್ತೇನೆ.
"ಮೂಡಲ ಮನೆಯ ಮುತ್ತಿನ ನೀರಿನ
ಎರಕಾವ ಹೊಯ್ದ, ನುಣ್ಣನೆ ಎರಕಾವ ಹೊಯ್ದ"
ಹಾಡುಮುಗಿವಂತೆ ಅಂಗಳ ಮಂಗಳದ ಮನೆಯಾಗುತ್ತದೆ. ಸುತ್ತೆಲ್ಲ ಕಣ್ಣು ಹಾಯಿಸಿ ನನ್ನೊಳಗೇ ಹಿಗ್ಗುತ್ತೇನೆ. ಅಂಗಳದ ತುಂಬೆಲ್ಲ ಸಂತಸದ ಹರಿವು. ನೀ ತಂದ ಬಿಳಿಸೀರೆಯ ನಿರಿಗೆಗಳನ್ನ ಉದ್ದಕ್ಕೆ ಅಲೆಸುತ್ತ ಅಂಗಳದಲ್ಲೆಲ್ಲ ನಡೆದಾಡುತ್ತೇನೆ. ನಾಲ್ಕು ಹೆಜ್ಜಯಿಡುವಷ್ಟರಲ್ಲಿ ನನ್ನದೇ ಹೆಜ್ಜೆಗುರುತುಗಳ ಅಲ್ಲಿ ಕಂಡು ನಾಚುತ್ತೇನೆ. ಅಲ್ಲೆಲ್ಲೋ ನೀನು ಅವಿತು ಕುಳಿತಿರಬಹುದೆನಿಸುತ್ತದೆ ಇದನ್ನೆಲ್ಲ ನೋಡುತ್ತ, ಭಯ ಆವರಿಸಿ ಕೈಯೊಳಗಿನ ಹೂವಿನ ಪಾತ್ರೆ, ರಂಗೋಲೆ ಬಟ್ಟಲುಗಳನ್ನ ಸರಕ್ಕನೆ ಎತ್ತಿಕೊಂಡು ಅಂಗಳದಿಂದ ಮಾಯವಾಗುತ್ತೇನೆ.
ಬಿಸಿಯಕಾಫಿ ಬಟ್ಟಲ ಹಿಡಿದು ಬರುವಷ್ಟರಲ್ಲಿ ನೀನಲ್ಲಿ ಕುಳಿತು ತಂಬೂರ ನುಡಿಸುತ್ತಿರುತ್ತೀಯ. ನಾನದನು ನಿಧಾನಕ್ಕೆ ಪಕ್ಕಕ್ಕಿಟ್ಟು ಕಾಫಿಬಟ್ಟಲನ್ನು ಕೈಯೊಳಗಿತ್ತು ಪಕ್ಕ ನಿಲ್ಲುತ್ತೇನೆ. ನೀನ್ಯಾವತ್ತಿನಂತೆ ‘ನೀಲಾ’ ಅಂತ ಕರೆಯೋದಿಲ್ಲ. ನೀಲಿಯಂಗಳದ ತುಂಬೆಲ್ಲ ನೀಹಾರ! ಸುತ್ತಲಿನ ನೀಹಾರ ಕೂಡ ನೀರಸವೆನಿಸುತ್ತದೆ. ಬಿಸಿಲಿಗೂ ಬೇರೆಯದೇ ಬಣ್ಣ. ನೂಪುರದ ಸದ್ದಡಗಿ ನೀರವ. ‘ಅಂಗಳ ಹೇಗಿದೆ’ ಕೇಳುತ್ತೇನೆ. ‘ಆತ್ಮರತಿ ಅನಿಸುತ್ತಿಲ್ಲವಾ’ ನಿನ್ನ ಧ್ವನಿಯೊಳಗಿನ ಭಾವ ಕೇಳಿಸುವುದಿಲ್ಲ, ಮಾತು ಮಾತ್ರ. ನಿಲ್ಲದೆ ಹೊರಟುಹೋಗುತ್ತೀಯ. ‘ನಿನ್ನಮನೆ ಬೀಗದಕೈ,ನನಗಿದು ಭಾರ, ನೀನಿಟ್ಟುಕೋ’ ಅಂತ ಅಂಗಲಾಚಿದ್ದು ಕೇಳದಷ್ಟು ಆಳಕ್ಕಿಳಿದ ಯೋಚನೆ ನಿನ್ನಾಳವನ್ನು ಅಲುಗಿಸಗೊಡುವುದಿಲ್ಲ, ನಾನೂ ಮೌನಿಯಾಗಿ ಮನೆಯೊಳಗಡಿಯಿಡುತ್ತೇನೆ.
ಮತ್ತೆ ವಾಪಸಾಗುವಷ್ಟರಲ್ಲಿ ಅಂಗಳದ ಅಲಂಕಾರವೇ ಹೊಸತೆನಿಸುತ್ತದೆ. ಹಸಿರುಗಿಡದ ನೀಲಿಹೂಗಳ ಬಿಟ್ಟು ನಾನಿತ್ತ ರಂಗೋಲೆಯ ಹರಿವಿಲ್ಲ, ಬೆಳ್ಳಿಚುಕ್ಕೆಗಳ ಬೆಳದಿಂಗಳಿಲ್ಲ, ಸುತ್ತ ಬಳ್ಳಿಗಿಡದ ನಿಲುವಿಲ್ಲ. ಬಿಳಿ ಬಣ್ಣದ ಹೂಗಳ ನಡುವೆ ನೀಲ ನಕ್ಷತ್ರಗಳು, ಸುತ್ತ ನೀಲಬೆಳದಿಂಗಳು ಮಾತ್ರ ನೆಲೆಯಾಗಿರುತ್ತವೆ. ಹೊಸತೆನಿಸುತ್ತದೆ. ಅಲ್ಲಿ ನನ್ನ ಹೆಜ್ಜೆಯ ಗುರುತನ್ನೆಲ್ಲ ಯಾರೋ ಅಳಿಸಿದ ನೋವು. ಅದು ನೀನೆಂಬ ಅನುಮಾನಕ್ಕೆ ಸಾಕ್ಷಿಯನ್ನು ಅಂಗಳದ ಗಿಡಗಳ ನಡುವೆ ಹುಡುಕುತ್ತೇನೆ. ಕೋಪದಿಂದ ನಿನ್ನ ಕಣ್ಣುಗಳ ದಿಟ್ಟಿಸುತ್ತೇನೆ, ಅಲ್ಲಿಯೂ ಮಂದ ಹೊಳಪು. ಕೇಳುತ್ತೇನೆ ‘ನಾನು ಬಡವ ಅನ್ನುತ್ತಿದ್ದೆಯಲ್ಲ, ಒಲವೇ ನಮ್ಮ ಬದುಕಾಗಿರುವಾಗ ಇಷ್ಟು ದುಬಾರಿಯ ಹೊಳಪು ನಿನ್ನ ಕಣ್ಣುಗಳಿಗೆ ಹೇಗೆ ಬಂತು? ಅಂಗಳದಲ್ಲಿ ಬೆಲೆಬಾಳುವ ಈ ನಕ್ಷತ್ರಗಳ ತಂದಿಟ್ಟವರಾರು?’ ಅಂತ. ಮಾತು ಕಳೆದವನಂತೆ ಬಿಳಿಹೂ ಗಿಡಗಳ ನೆಡುವುದರಲ್ಲಿ ನೀನು ಮಗ್ನನಾಗಿದ್ದು ಅಳು ಬರಿಸುತ್ತದೆ. ಮುಖಕ್ಕೆ ಸೆರಗು ಮುಚ್ಚಿಕೊಂಡು ಹೊರಟುಬಿಡುತ್ತೇನೆ. ಮನಸ್ಸು ತಡೆಯದೇ ಮತ್ತೆ ವಾಪಸ್ಸಾದರೆ ಅಲ್ಲಿ ನೀನಿರುವುದಿಲ್ಲ. ಅಂಗಳದ ತುಂಬ ಬಿಳಿಬಣ್ಣದ ಹೂ, ನಕ್ಷತ್ರ,  ಬೆಳಕು ಮತ್ತು ಬೆಳ್ಳ ಬೆಳದಿಂಗಳು ಹಗಲಿನಲ್ಲೂ, ದೂರದಲ್ಲೊಂದು ನನ್ನದೇ ಹೆಜ್ಜೆಗುರುತು.
ಏನಾಗುತ್ತಿದೆ ಅಂತ ಅರಿವುದರೊಳಗೆ ಒಪ್ಪ‌ಓರಣಗಳನೆಲ್ಲ ಕಿತ್ತುಬಿಸಾಕುತ್ತೇನೆ. ಮೌನಿ ನೀನು, ನೀನಿದ್ದರೂ ಮಾತು ಸಿಗುತ್ತಿರಲಿಲ್ಲ ಈ ಹೊತ್ತಿಗೆ ಅನ್ನುವದನರಿತೂ ಅಂಗಳದ ತುಂಬೆಲ್ಲ ಹರಿದಾಡುತ್ತೇನೆ "ಯಾರು ಹೇಳ್ತಾರೆ ಬೆಳಗಿಗೆ ಬೆಳಕಿದೆ ಅಂತ. ನೋಡು ಬೆಳಗಿಗೆ ಬಣ್ಣವೂ ಇಲ್ಲ, ಬೆಡಗೂ ಇಲ್ಲ. ಬೆಳಗು ಬಂಧನ. ನೀನು ಮಾತಾಡ್ಬೇಡ, ನಂಗಿಷ್ಟವಾಗೋಲ್ಲ. ನಿನ್ನ ಧ್ವನಿ ನನಗೆ ಹಿಡಿಸೋಲ್ಲ. ಇನ್ನು ಮೇಲೆ ಹಾಡಬೇಡ. ಆ ತಂಬೂರವಿದೆಯಲ್ಲ! ಅದರ ತಂತಿಗಳನ್ನ ಕಿತ್ತು ಬಿಸಾಕಿದ್ದೇನೆ. ಅದು ಹೇಗೆ ನುಡಿಸುತ್ತೀಯೋ ನಾನೂ ನೋಡುತ್ತೇನೆ. ಹಾರ್ಮೋನಿಯಂ ಇದೆಯಲ್ಲ, ಅದರ ಮನೆಗಳೆಲ್ಲ ನೋಡು ಚೂರಾಗಿ ಬಿದ್ದಿವೆ ನನ್ನೆದೆ ಗೂಡಿನ ಹಾಗೆ. ಯಾವುದೋ ಹಾಡು ಕೇಳಿಸಿದೆಯಲ್ಲ..ನೋಡು ಅದಕ್ಕೆ ಧ್ವನಿಯೇ ಇಲ್ಲ.ಅಥವಾ ನನ್ನ ಕಿವಿ ಸತ್ತು ಹೋಗಿರಬೇಕು ನಿನ್ನ ಮಾತುಗಳ ಹಾಗೆ. ಹಾಡು ಅಲ್ಲಿ ಬಿದ್ದಿದೆ ನೋಡು ಕಾಗದ ಚೂರೊಳಗಿನ ದೋಣಿಯಾಗಿ! ತೇಲುವಷ್ಟು ನೀರಿಲ್ಲದೆ ತುಂತುರಲ್ಲಿ ನೆನೆದು ನೀಲಿ ನೀಲಿಮಸಿಯನೆಲ್ಲ ಹೀರಿಕೊಂದು ನೀಲಿಯಾಗಿ ಬಿದ್ದಿದೆ.
ನಾನು ನಿನ್ನ ಹಾಗಲ್ಲ ನೋಡು, ನಿನಗೊಂದು ಬದುಕಿದೆ, ಆ ಬದುಕಿಗೆ ಬೆಳ್ಳಗಿನ ಬಣ್ಣವಿದೆ. ‘ನೀನೋ ಬೆಳದಿಂಗಳು’ ಎನ್ನುತ್ತಿದ್ದೆಯಲ್ಲ! ಹೌದಲ್ಲವಾ? ನಗು ಬೆಳದಿಂಗಳಲ್ಲ ಸದಾ ಅಂತ ನಾನು ಹೇಳಿರಲಿಲ್ಲವ ನಿನಗೆ? ನೀನಾಗಲೇ ಅರಿತುಕೊಳ್ಳಬೇಕಿತ್ತು. ನನ್ನ ಕೋಪವೆಂದರೆ ಅಳು ಮಾತ್ರ. ಅಳುವನ್ನ ನೀನು ನೋಡಿಲ್ಲ. ಅದಕ್ಕೇ ಕೋಪವೂ ಚಂದವೇ ಅಂದ್ಯಲ್ಲ. ಇನ್ನೊಂದಿಷ್ಟು ಸಾಲುಗಳು ಬೇಕಿದ್ದವು ನಿನಗೆ, ಅದಕ್ಕೆ ಕೋಪದಲ್ಲೂ ಚೆಲುವನರಸಿದ್ದು. ಬಿಸಿ ಕಾಫಿ ಆರುವ ತನಕವೂ ನಿಂತಲ್ಲೇ ನಿಂತಿದ್ದೆನಲ್ಲ. ನಿನ್ನ ಕಣ್ಣುಗಳು ಅಲ್ಲಿ ಏನನ್ನೋ ಅರಸುತ್ತಿದ್ದವು, ನನಗಾಗಿ ಅಲ್ಲ, ಕಳೆದುಕೊಂಡಿದ್ದನ್ನೇನೋ, ಇನ್ನೇನೋ ಪಡೆಯಲಿಕ್ಕಾಗಿ.
ನೀನು ಏನು ಅಂತ ಚೆನ್ನಾಗಿ ಗೊತ್ತಿತ್ತು, ಗೊತ್ತಿದೆ, ನಿನ್ನಂಥವರೇ ಇಷ್ಟವಾಗೋದು, ಯಾಕೆ ಹೇಳು. ದುರ್ಜನರ ಸಂಗಕ್ಕಿಂತ ಸಜ್ಜನರೊಡನೆ ಜಗಳ ಲೇಸು." ನೆನಪುಗಳ ಸರಿಸುತ್ತಿರುವಂತೆ ಮಧ್ಯಾಹ್ನ ಅಂಗಳವನ್ನಾವರಿಸುತ್ತಿದೆ. ನಿಂತಲ್ಲೆ ನಿಧಾನಕ್ಕೆ ಕುಳಿತುಕೊಳ್ಳುತ್ತೇನೆ, ನಿನ್ನ ಬರುವಿಕೆಯ ಹಾದಿಯಲ್ಲಿ.
. ಬೆಳ್ಳನೆಯ ಪರದೆಯೊಳಗೆ ಬಿಳಿ ಮಂಚದ ಬಿಳಿ ಹಾಸಿಗೆಯಲ್ಲಿ ನಾನು ಬೆಳ್ಳನ ಬೆಳದಿಂಗಳಾಗಿ ಮಲಗಿರುವಂತೆ ಭಾಸವಾಗುತ್ತದೆ. ಎಚ್ಚರವಾಗುತ್ತದೆ. ಏಳುತ್ತಿರುವಂತೆಯೇ ನೀ ತಂದ ನೀಲಿ ಪೀತಾಂಬರ ನೆನಪಿಗೆ ಬಂದು ‘ನೀಲಿ ಪೀತಾಂಬರ ’ ಬೇಕು ಅಂತ ಹಠಮಾಡುತ್ತೇನೆ . ನಾಲ್ಕೈದು ದಾದಿಯರು ನನ್ನ ಗಟ್ಟಿಯಾಗಿ ಹಿಡಿದು ಮತ್ತೆ ಹಾಸಿಗೆಯಲ್ಲಿಟ್ಟು ರಮಿಸುತ್ತಾರೆ. ನೀನು ನನ್ನ ನೀಲಿ ಪೀತಾಂಬರ ಹಿಡಿದು ಬರುತ್ತೀಯ. ನೀನು ಮೌನಿ. ನಾನೂ ಶಾಂತವಾಗುತ್ತೇನೆ.
ದಿನವೂ ನೀ ಬರುವ ಹೊತ್ತು ‘ನೀಲ ಮನೋಚೇತನ’ ಆಸ್ಪತ್ರೆಯಲ್ಲಿ ನನ್ನ ಕೋಣೆ ಶಾಂತವಾಗಿರುತ್ತದೆ. ಸುತ್ತಲೂ ಮೌನ ಕವಿದುಕೊಳ್ಳುತ್ತದೆ. ತಿಂಗಳು ಕಳೆಯುತ್ತಿದ್ದಂತೆಯೇ ಅಂಥದೇ ಒಂದುಸಂಜೆ ನೀ ಬಂದಾಗ ನಿನ್ನ ಕೈಯೊಳಗೊಂದು ಹೊತ್ತಿಗೆಯಿರುತ್ತದೆ, ನೀನೇ ಬರೆದದ್ದು. ನಿನ್ನ "ಬೆಳ್ಳನ ಬೆಳದಿಂಗಳು" ನಿನ್ನ ಈ ಹೊತ್ತಿಗೆಯ ಮೂವತ್ಮೂರು ಕತೆಗಳೂ ಹೊತ್ತ ನಾಯಕಿ ನಾನೇ ಆಗಿರುತ್ತೇನೆ.

(ಅಕ್ಕದ ಸುದ್ದಿಪತ್ರ ‘ಜಗಲಿ’ಯಲ್ಲಿ ಪ್ರಕಟ.
http://www.akkaonline.org/newsletter/2012_04_april_jagali.pdf )

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.