May 24, 2011

ಬರವಣಿಗೆಯಲ್ಲಿ ಪ್ರಾದೇಶಿಕ ಕನ್ನಡ

ಪ್ರಾದೇಶಿಕ ಕನ್ನಡವೆಂದರೆ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿ ಬಳಸಲಾಗುವ ಕನ್ನಡ. ಒಂದು ಪ್ರದೇಶದ ಜನರ ಆಡುಭಾಷೆಯಾಗಿ ಬಳಸಲಾಗುವಂಥಹ ಕನ್ನಡ.
ಉದಾಹರಣೆಗೆ ನೀವು ಧಾರವಾಡ ಕಡೆ ಹೋದ್ರೆ ‘ನಮಸ್ಕಾರ್ರೀ ಮೇಡಾಮಾವ್ರ, ಹೆಂಗದಿರ್ರೀ, ಭಾಳ ಚೊಲೋ ಆತ್ ಬಿಡ್ರಿ, ನಮ್ ಮನೀ ಮಟ ಬಂದ್ರಲ್ಲ, ಭಾಗ್ಯಲಕ್ಷ್ಮಿ ಬಂದಂಗಾತ್ ಬಿಡ್ರೀ’ ಅಂತಾರೆ. ಹವ್ಯಕರ ಮನೆಗಳಿಗೆ ಹೋದ್ರೆ ‘ಓಹೋಹೋಹೋ... ಆರಾಮನೇ, ಅಂತೂ ಬಂದ್ಯಲಾ, ಬಾ ಬಾ ಬಾ" ಅಂತಾರೆ. ಹಾಗೇ ಮುಂದೆ ಬಂದು ಸಿರ್ಸಿ ಪೇಟೆಯೊಳಗಿಂದ ಸಿ.ಪಿ.ಬಾಜ಼ಾರಿಗ್ ಬಂದ್ರೆ ‘ಅರೇ... ಡಿಸ್ಕೌಂಟ್ ಬಂದದೆ, ಚೂಡಿದಾರ್ ತಗುಳುದಿಲ್ಲ ನೀನು? ಮತ್ತೆಂತಕ್ಕೆ ಬಂದಿದ್ದೆ ಇಲ್ಲಿಗೆ? ನಡಿ ನಮ್ಮೆನಾಗಾರು ಹೋಗುವ, ಅಯ್ಯೋ ನೀಲೇಕಣಿ ರಸ್ತೆಲಂತೂ ಮಂಗಳಾರ ದಿಸ ಓಡಾಡ್ಲಿಕ್ ಆಗೂದಿಲ್ಲೆ ಮಾರಾಯ್ತೀ..ಮೀನ್ ವಾಸ್ನೇ ಅಂದ್ರೇ, ನಾವು ಒಳದಾರೆಲ್ಲಿ ಹೋಗುವ ಹ್ಞಾ...’ಅಂತಾರೆ. ಹಾಗೇ ಒಂದಿಡೀ ರಾತ್ರಿಯ ಪ್ರಯಾಣ ಮಾಡಿ ಬೆಂಗಳೂರಿಗೆ ಬಂದಿದೀರಿ. ತರಕಾರಿಗೋ, ಬ್ಯಾಂಕಿಗೋ, ಶಾಪಿಂಗ್ ಅಂತಲೋ ಮನೆಯಿಂದಚೆ ಬಂದಿದೀರಿ. ನಿಮ್ ಫ್ರೆಂಂಡ್ ಒಬ್ರು ಸಿಕ್ತಾರೆ ‘ಊರುಗ್ ಹೋಗಿದ್ರಾ? ಯಾವಾಗ್ ಬಂದ್ರಿ? ಹೆಂಗಾಯ್ತು ಜರ್ನಿ? ಪೇರೆಂಟ್ಸೆಲ್ಲ ಚೆನಾಗಿದಾರಾ? ಓ... ಬಿಜಿ ಇದೀರ ಅನ್ಸತ್ತೆ, ಫ್ರೀ ಮಾಡ್ಕೊಂಡು ಬನ್ರೀ ಮನೆಕಡೇ’ ಅಂತ ಹೇಳ್ತಾರೆ.

ಈ ತೆರನಾಗಿ ಆಡುವಾಗ ಬಳಸೋ ಕನ್ನಡವನ್ನ ನಾವು ಬರವಣಿಗೆಯಲ್ಲಿ ಬಳಸಿದರೆ ಆ ಆಡುಭಾಷೆಗೆ ಮತ್ತು ಅದನ್ನಾಡುವ ಜನರಿಗೆ ಉಪಯೋಗ ಆಗೋ ಹಾಗೇನೇ ಬರವಣಿಗೆಯ ಶೈಲಿಯಲ್ಲಿ ಸಹ ಸಾಕಷ್ಟು ವ್ಯತ್ಯಾಸ ಕಾಣುವುದರ ಜೊತೆಗೆ ಓದುಗರ ಮೇಲೂ ಸಾಕಷ್ಟು ಬೇರೆ ಬೇರೆ ನಮೂನೆಯ ಅಂದರೆ ಅವರವರ ಭಾವಕ್ಕೆ ಅನುಗುಣವಾಗಿ ಬೇರೆ ಬೇರೆ ರೀತಿಯ ಪರಿಣಾಮ ಬೀರಬಬಹುದು. ಕೆಲವರು ಅಂಥಹ ಭಾಷೆಯನ್ನು ಬಳಸಲಾದ ಕಲ್ಪನಾ ಸಾಹಿತ್ಯವೆನ್ನಬಹುದಾದ ಕತೆ/ಕಾದಂಬರಿ/ಕವನ/ಪ್ರಬಂಧಗಳನ್ನು ಅರ್ಥವಾದವರು ಹೆಚ್ಚು ಖುಷಿಯಿಂದ ಓದ್ಬಹುದು. ಕತೆಯೊಂದರಲ್ಲಿ ಬಳಸಲಾದ ಆಡುಭಾಷೆಯ ಪರಿಚಯವೇ ಇಲ್ಲದ ಪ್ರದೇಶದ ಜನರಿಗೆ ಓದಿದ್ದು ಅರ್ಥವೇ ಆಗದೆಯೇ ಗೊಂದಲ ಉಂಟಾಗಲೂಬಹುದು. ಅಥವಾ ಕಷ್ಟಪಟ್ಟು ಅರ್ಥೈಸಿಕೊಳ್ಳಲು ಯತ್ನಿಸಿದ ಓದುಗನೊಬ್ಬ ಕಂಡುಕೊಂಡ ಭಾವವು ಬಳಸಲಾದ ಭಾಷೆಯ ಭಾವಕ್ಕೆ ಹೊರತಾದ ಅರ್ಥವನ್ನು ತನ್ನೊಳಗೆ ಹುಟ್ಟುಹಾಕಿ ಕಥೆಯೊಂದರ ರಸವೇ ಬೇರೆಯಾಗುವ ಪರಿಸ್ಥಿತಿಯೂ ಮೂಡಬಹುದು.

ಮಗನ ಕ್ಲಾಸೊಂದು ಮುಗಿಯುವುದರ ಒಳಗಿನ ಅವಧಿಯಲ್ಲಿ ಸ್ವಲ್ಪ ಓದೋಣ ಅಂತ ‘ಕುಸುಮ ಬಾಲೆ’ ತೆರೆದರೆ ಅಲಮೇಲುಮೇಡಮ್ ಕೊಟ್ಟ ಈ ಪುಸ್ತಕವನ್ನ ಓದಿ ನಾನು ಪ್ರಾದೇಶಿಕ ಭಾಷೆಯನ್ನು ಬರವಣಿಗೆಯಲ್ಲಿ ಬಳಸುವ ಬಗ್ಗೆ ಮಾತನಾಡಬಲ್ಲೆನ? ಈ ಪುಸ್ತಕದ ತಿರುಳು ನಂಗೆ ದಕ್ಕೀತ ಅಂತ ಯೋಚಿಸ್ತಾ ನಿಜವಾಗಿಯೂ ಭಯವಾಯ್ತು. ಒಂದು ಕಾವ್ಯದ ರೂಪದಲ್ಲಿದೆ ಕುಸುಮಬಾಲೆ ಕಾದಂಬರಿ. ಕಷ್ಟಪಟ್ಟು ಮತ್ತೆ ಮೊದಲ ಪುಟದಿಂದ ಓದೋಕೆ ಶುರು ಮಾಡ್ದೆ. ಓದ್ತಾ ಓದ್ತಾ ಹನ್ನೊಂದನೇ ಪುಟದಲ್ಲಿದ್ದೇನೆ ಅಂತ ಅರಿವಾಗಿದ್ದು ಮಂಚವೊಂದು ಸೋಮಪ್ಪನವರ ಜೀವಾತ್ಮದ ಜೊತೆ ಆತ್ಮಕಥೆಯನ್ನ ಹೇಳೋಕೆ ಶುರುಮಾಡಿದಾಗ. ಕಾಲುಭಾಗಕ್ಕಿಂತ ಹೆಚ್ಚಿನ ಕಾದಂಬರಿಯ ಕತೆಯನ್ನು ಮಂಚವೇ ಹೇಳತ್ತೆ. ಅಲ್ಲಿ ಬಳಕೆಯಾದ ಭಾಷೆಯ ಪರಿಚಯವೇ ಇಲ್ಲದೆಯೂ ಎಲ್ಲವೂ ಅರ್ಥವಾದಂತೆ ನಾನು ಕಥೆ ಕೇಳ್ತಾ ಇದ್ದೆ. ಮಂಚ ಕಥೆಯನ್ನ ಹೇಳ್ತಾ ಇತ್ತು. ಅರ್ಥವಾಗುತ್ತ ಹೋದಂತೆ ದಕ್ಕುತ್ತ ಹೋದಂತೆ ಇದು ಆಡು ಭಾಷೆಯ ಸಾರ್ಥಕತೆ. ಬರವಣಿಗೆಯಲ್ಲಿ ಆಡುಭಾಷೆಯಿದ್ದಾಗ ಓದುಗನೊಬ್ಬ ಕತೆಯನ್ನು ಓದುವುದಿಲ್ಲ, ಕೇಳುತ್ತಾನೆ. ಕೆಲವೊಮ್ಮೆ ಕಥೆಯೊಳಗಿನ ಪಾತ್ರವನ್ನು ತಾನು ಹೊಕ್ಕು ಓದುವ ಓದುಗನಿಗೆ ಅಲ್ಲಿನ ಆಡುಭಾಷೆಯ ಸಂಭಾಷಣೆ ಬರೆದಿಟ್ಟ ಸಂಭಾಷಣೆಯಾಗಿರದೇ ಓದುಗನ ಸ್ವಗತವಾಗುತ್ತದೆ.

ದೇವನೂರು ಮಹಾದೇವರ ‘ಕುಸುಮ ಬಾಲೆ’ ಯನ್ನು ಓದುವಾಗ ಭಾಷೆ ತಕ್ಕಮಟ್ಟಿಗೆ ನಂಗೆ ಹತ್ತಿರವಾದಂತೆ ಅತ್ರಾಸದ ನೆನಪಾಯಿತು. ನಮ್ಮೂರಲ್ಲಿ ಗಣೇಶನ ಹಬ್ಬದ ಹೊತ್ತಲ್ಲಿ ಅತ್ರಾಸ ಅಂತ ಒಂದು ಸಿಹಿ ತಿಂಡಿ ಮಾಡ್ತಾರೆ. ಅಕ್ಕಿಹಿಟ್ಟು, ಬೆಲ್ಲ, ಎಳ್ಳು, ತೆಂಗಿನತುರಿ ಎಲ್ಲ ಏನೇನೋ ಸೇರ್ಸಿ ಕಾಯಿಸಿ ಉಂಡೆಕಟ್ಟಿ ಲಟ್ಟಿಸಿ ಆಮೇಲೆ ಎಣ್ಣೆಯಲ್ಲಿ ಕರೀತಾರೆ. ಅದು ನಾರು ನಾರಾಗಿರತ್ತೆ. ಜಗ್ದೂ ಜಗ್ದೂ ತಿನ್ಬೇಕು ಅದನ್ನ, ಎಲ್ಲಾರಿಗೂ ಈ ಸಿಹಿತಿಂಡಿ ಇಷ್ಟವಾಗೋಲ್ಲ, ಕಾರಣ ಇಷ್ಟೇ, ಒಂದು ಅದನ್ನ ಕಷ್ಟಪಟ್ಟು ಅಗ್ದೂ ಅಗ್ದೂ ಯಾಕಾದ್ರೂ ತಿನ್ಬೇಕು ಅನ್ಸತ್ತೆ ಒಂದೊಂದ್ಸಲ. ಇನ್ನೊಂದು ಅಂದ್ರೆ ತಿನ್ನೋಕೆ ಸ್ವಲ್ಪ ಬಿಡುವಿನ ಸಮಯನೂ ಬೇಕು. ಅಮ್ಮ ನಂಗೆ ಅತ್ರಾಸ ತಿನ್ನು ಅಂತ ಕೊಟ್ಟಾಗ ನಾನು ಮೊದ್ಲು ಮೊದ್ಲು ತಿಂತಿರಲಿಲ್ಲ. ಆಮೇಲೆ ಅಮ್ಮ ಅದನ್ನ ತಿನ್ನೋ ಬಗೆಯನ್ನ ಕಲಿಸಿದ್ರು ಒಂದಿನ. ಬಿಡುವು ಮಾಡ್ಕೊಂಡು ಆರಾಮಾಗಿ ಕೂತ್ಕೊಂಡು ಚೂರ್ ಚೂರೇ ನಿಧಾನಕ್ಕೆ ಅಗ್ದೂ ಅಗ್ದೂ ತಿಂದ್ರೆ ಬಾಯಲ್ಲಿ ಸಿಹಿಸಿಹಿ ರಸಬರತ್ತೆ. ಅದನ್ನ ನುಂಗ್ಬೇಕು ಅಂತ ಬಾಯಲ್ಲಿ ನೀರುಬರೋ ಹಾಗೆ ಅಮ್ಮ ವಿವರಿಸಿದ್ರು. ಆಗ ನಂಗೆ ಅತ್ರಾಸ ತಿನ್ಬೇಕು ಅಂತ ಅನ್ನಿಸ್ತು. ತಿಂದೆ. ನಿಜ, ಕಷ್ಟಪಟ್ರೆ ಸುಖ ಸಿಗತ್ತೆ ಅನ್ನೋ ಮಾತು ತಿಂಡಿಗಳಿಗೂ ಅನ್ವಯಿಸುತ್ತೆ ಅಂತ ಅನ್ನಿಸ್ತು. ಹಾಗೆಯೇ ಈ ಆಡುಭಾಷೆಯನ್ನ ಬಳಸಿಕೊಂಡ ಕತೆಗಳೂ ಸಹ, ನಿಧಾನಕ್ಕೆ ಅದರ ರಸವನ್ನ ಎಳಕೊಳ್ತಾ ಎಳಕೊಳ್ತಾ ಎಷ್ಟಾಗತ್ತೋ ಅಷ್ಟಷ್ಟೇ ಅರ್ಥ ಮಾಡಿಕೊಳ್ತಾ ಹೋದ ಹಾಗೆ ಅದರ ರಸವನ್ನು ನಾವು ಸವೀಬಹುದು ಅನ್ನೋದನ್ನ ಅಲಮೇಲುಮೇಡಮ್ ನನಗೆ ತೋರಿಸಿಕೊಟ್ರು. ಕಷ್ಟಪಟ್ಟು ತಿಂದ್ರೆ ರುಚಿಯಾಗಿರತ್ತೆ. ಹಾಗಂತ ಕಷ್ಟಪಟ್ಟು ತಿನ್ನಬಹುದಾದ ಎಲ್ಲ ತಿಂಡಿಗಳೂ ಅತ್ರಾಸದಷ್ಟೇ ರುಚಿಯಾಗಿರ್ತಾವೆ ಅಂತಲ್ಲ, ಅಲ್ಲದೇ ಅತ್ರಾಸ ಎಷ್ಟೇ ರುಚಿಯಾಗಿದ್ರೂ ಎಲ್ಲರಿಗೂ ಇಷ್ಟವಾಗ್ಲೇಬೇಕು ಅನ್ನೋ ಒತ್ತಾಯನೂ ಅಲ್ಲ. ತಿಂಡಿ ಅವರವರ ರುಚಿಗೆ. ಓದು ಅವರವರ ಅಭಿರುಚಿಗೆ.

ಆಡುವವರೊಂದಿಗೆ ಮುಗಿದುಹೋಗಬಲ್ಲಂಥ ಭಾಷೆಯೊಂದನ್ನ ತನ್ನುದ್ದಕ್ಕೂ ಬಳಸಿಕೊಂಡ ಕುಸುಮ ಬಾಲೆಯಂಥ ಸುಂದರ ಕಾವ್ಯದಂಥವು ನಿಧಾನಕ್ಕೆ ನಮ್ಮನ್ನು ಆವರಿಸಿಕೊಳ್ತಾವೆ. "ಪಸುಪಕ್ಸಿಯಾದಿಯಾಗಿ ನರಮನುಸರನ್ನೆಲ್ಲ ನಿದ್ದಾವು ಆವರಿಸಲು ಆಗ ಸೋಮಪ್ಪರು ಮಲುಗಿದ್ದ ಮಂಚಾವು ವಯ್ಸಾದ ನಾಯ್ಕಸಾನಿ ಮಾಡುವೋಪಾದಿ ವಯ್ಯಾರದಲಿ ತಲ್ವ ಎತ್ತಿ ಒಂದ್ಸಲ ನೋಡಿತು. ಸುಸ್ತಾರಿಸ್ತಿರೋ ಜೀವಾತ್ಮನ ಕಂಡು ಊಕಳಕ ಒಬ್ಬರು ಆದರು ಅಂದುಕೊಂಡು ಸಂತೋಸವಾಗಿ ಹೇಳತೊಡಗಿತು." ಹೀಗೆ ಮಂಚ ಮಾತನಾಡುವ ರೀತಿ ನಮ್ಮನ್ನು ಆಕರ್ಷಿಸುತ್ತದೆ.

ಶ್ರೀನಿವಾಸ ವೈದ್ಯರ ‘ಹಳ್ಳ ಬಂತು ಹಳ್ಳ’ ಸೆಳೆವ ಬಗೆಯು ಧಾರವಾಡದ ಆಡುಮಾತಿನಲ್ಲೇ ಇದೆ. ‘ಅಲ್ಲೇ ಮಡಿಯಲ್ಲಿ ಕೊಬ್ಬರಿ ಹೆರಕೋತ ಕೂತ ಅಂಬಕ್ಕಗ ಅಷ್ಟೇ ಸಾಕಾತು. ಆಕಿ ಖಟ್ ಅಂತ ಈಳಿಗಿ ಮುಚ್ಚಿ, ರಪ್ಪಂತ ಕೊಬ್ಬರಿ ಬಟ್ಟಲಾ ಅಪ್ಪಳಿಸಿ " ಅನ್ನರೀ ಅನ್ನರೀ... ಯಲ್ಲಾರೂ ನನಗ ಅನ್ನರೀ.. ನಾ ಒಬ್ಬಾಕಿ ಸಿಕ್ಕೇನಲ್ಲ, ಏನು ಪಾಪ ಮಾಡಿದ್ದೆನೋ ಏನೋ, ಕೊಟ್ಟ ಮನೀಗೆ ಯರವಾದೆ... ಹುಟ್ಟಿದ ಮನೀ ಸೊಜ್ಜಳ ಆಗಲೀ ಅಂತ ಎಷ್ಟ ಬಡಕೊಂಡರ ಏನದ? ಬರೀ ಒಲೀ ಮುಂದ ಕೂತ ಬಿಟ್ರೆ ಆತೇನು? ಇತ್ತಲಾಗ ಮ್ಯಾಲಕೆಲಸ ಏನು ಕಡಿಮಿ ಇರತಾವೇನು? ನನ್ನ ನಸೀಬ ಖೊಟ್ಟಿ. ದೇವರು ಕರಕೊಂಡು ಹೋಗ್ವಲ್ಲ" ಎನ್ನುತ್ತ ಎಂದಿನ ರಾದ್ಧಾಂತಕ್ಕೆ ತೊಡಗಿದಳು.

ನಾಗವೇಣಿ ಎಚ್ ಅವರ ‘ಗಾಂಧಿ ಬಂದ’ ಕಾದಂಬರಿ ಸಹ ಆಡುಮಾತಿನಿಂದಲೇ ಆಕರ್ಷಿಸುತ್ತದೆ. ಇಂಥ ಚಂದದ ಪುಸ್ತಕವನ್ನು ಈ ಹೊತ್ತಿಗೆ ಓದುವುದಕ್ಕಾಗಿ ಪ್ರಿಯಾರಿಟಿ ಮೇಲಿನಲ್ಲಿ ‘ಗಾಂಧಿ ಬಂದ’ ಪುಸ್ತಕ ಕಳಿಸಿದ ಎಚ್, ವೈ, ರಾಜಗೋಪಾಲ್ ಸರ್ ಅವರಿಗೆ ಧನ್ಯವಾದ.

ಕನ್ನಡದಲ್ಲಿ ಆಡುಭಾಷೆಯನ್ನು ದುಡಿಸಿಕೊಂಡು ತಮ್ಮ ಸೊಗಡಿನ ಸೌಂದರ್ಯಕ್ಕಾಗಿಯೇ ಹೆಚ್ಚು ಹೆಚ್ಚು ಜನಪ್ರಿಯವಾದ ಕತೆ/ಕಾದಂಬರಿಗಳು ಸಾಕಷ್ಟಿವೆಯಾದರೂ ಕನ್ನಡ ಸಾಹಿತ್ಯ ಸಾಗರದಲ್ಲಿ ಅಲೆಗಳಾಗುವಷ್ಟರ ಮಟ್ಟಿನ ಸಂಖ್ಯೆಯಲ್ಲಿಲ್ಲ. ಕೆಲ ಕೃತಿಗಳು ಬಳಸಿಕೊಂಡ ಭಾಷೆಯ ಸಲುವಾಗಿಯೇ ನಮ್ಮನ್ನು ಹತ್ತಿರಕ್ಕೆ ಎಳಕೊಳ್ತಾವೆ. ಇತ್ತೀಚೆಗೆ ಬರೆಯಲು ಆರಂಭಿಸಿರುವ ಹಲವಾರು ಲೇಖಕರು ಅರಿತೋ ಅರಿಯದೆಯೋ ಶಿಷ್ಟ ಕನ್ನಡಕ್ಕಿಂತ ಸುಲುಭವಾಗಿ ಬರವಣಿಗೆಗೆ ಇಳಿಸಬಹುದಾದ ತಮ್ಮ ಆಡುಭಾಷೆಯನ್ನೇ ಬಳಸಿಕೊಂಡು ಬರೆಯುತ್ತಿರುವುದು ಖುಷಿಯ ಸಂಗತಿ. ಈ ರೀತಿಯಲ್ಲಾದರೂ ಪ್ರಾದೇಶಿಕ ಭಾಷೆಯೆನ್ನುವುದು ಲಿಖಿತ ರೂಪದಲ್ಲಿ ಉಳಿದುಕೊಳ್ಳುತ್ತ ಹೋಗುತ್ತದೆಯೆನ್ನುವುದು ಒಂದು ತೆರನಾದ ಉಪಯೋಗವಾದರೆ ತಮಗೆ ಗೊತ್ತಿರುವ ಕನ್ನಡ ಆಡುಭಾಷೆಯನ್ನು ಪ್ರಯೋಗಿಸಲಾದ ಕತೆಕಾದಂಬರಿಗಳೆಡೆ ಹೆಚ್ಚು ಜನರು ಆಕರ್ಷಿತರಾಗಿ ಕನ್ನಡವನ್ನು ಓದುವವರ ಸಂಖ್ಯೆಯೂ ಹೆಚ್ಚಾಗಬಹುದು. ಸುಲುಭವಾಗಿ ಬರೆಯಬಲ್ಲ ತನ್ನದೇ ಭಾಷೆಯೊಂದು ಬಳಕೆಗೆ ಬಂದಾಗ ಬರೆಯುವವರ ಸಂಖ್ಯೆಯೂ ಹೆಚ್ಚಬಹುದು. ಕನ್ನಡ ಭಾಷೆಯೊಳಗಿನ ಈ ವೈವಿಧ್ಯತೆ ಬರವಣಿಗೆಯ ರೂಪದಲ್ಲಿ ಓದುಗನಿಗೆ ಪರಿಚಯವಾಗಬಹುದು.

ಹಾಗೆಯೇ ಬರಹಗಾರನಿಗೆ ತನಗೆ ಗೊತ್ತಿರುವ ಭಾಷೆಯನ್ನು ಬರವಣಿಗೆಗೆ ಇಳಿಸುವುದು ಸುಲುಭವೆನ್ನಿಸಬಹುದು. ಓದುವವನಿಗೆ ಅದೇ ಭಾಷೆ ಅಷ್ಟೇ ಸುಲುಭಕ್ಕೆ ಅರ್ಥವಾಗಿಬಿಡುತ್ತದೆಯೆಂದು ಹೇಳಲಾಗದು.

ಬರಹಕ್ಕೂ ಮತ್ತು ಓಗುಗನಿಗೂ ನಡುವೆ ಒಂದು ಅಂತರವೇರ್ಪಟ್ಟಾಗ ಬರವಣಿಗೆ ಅಂಥ ಸಾರ್ಥಕ್ಯವನ್ನು ಪಡೆದುಕೊಳ್ಳದೆಯೇ ಉಳಿಯಬಹುದು. ಬರಹದ ಸಾರ್ಥಕತೆಗೆ ಬರಹದಲ್ಲಿ ಬಳಸಲಾದ ಭಾಷೆಯು ಹೇಗೆ ಕಾರಣವಾಗುತ್ತದೆಯೋ ಹಾಗೆಯೇ ಓದುಗನಿಗೆ ಆ ಭಾಷೆ ಎಷ್ಟರಮಟ್ಟಿಗೆ ನಿಲುಕಬಲ್ಲುದು ಎಂಬುದೂ ಕಾರಣವಾಗುತ್ತದೆ. ಕತೆಯೊಂದು ಬೀರಬಹುದಾದ ಪರಿಣಾಮಕ್ಕೆ ಓದುಗ ಯಾವರೀತಿಯಲ್ಲಿ ಸ್ಪಂಧಿಸುತ್ತಾನೆಯೋ ಅದೇ ತೆರನಾಗಿ ಭಾಷೆಯೂ ಓದುಗನೊಳಗೆ ಬೀರಬಹುದಾದ ಪರಿಣಾಮಕ್ಕೆ ಕಾರಣವಾಗಿರುತ್ತದೆ.

ಬರವಣಿಗೆಯಲ್ಲಿ ಪ್ರಾದೇಶಿಕ ಭಾಷೆಯ ಬಳಕೆ ಓದುವಾಗ ಖುಷಿ ಕೊಡುತ್ತದೆಯೋ ಅಥವಾ ಸ್ಟ್ಯಾಂಡರ್ಡ್ ಕನ್ನಡವನ್ನು ಮಾತ್ರ ಬಳಸಲಾದ ಬರಹಗಳು ಹೆಚ್ಚು ಖುಷಿ ಕೊಡುತ್ತವೆಯೋ? ಎಂಬುದಾಗಿ ನನ್ನ ಸ್ನೇಹವೃಂದದಲ್ಲಿ ಪ್ರಶ್ನೆಯಿಟ್ಟಾಗ ರಾಘವೇಂದ್ರ ತೆಲಗಡಿ, ಶೋಭಾ ಕರಣಿಕ್, ರಾಜೇಂದ್ರ ಭಂಡಿ, ಮೀರಾ ರಾಜಗೋಪಾಲ್, ರಾಮಪ್ರಸಾದ್ ಕೆ.ವಿ., ರಮ್ಯಾ ಸದಾಶಿವ, ಸೌಮ್ಯಾ ಭಾಗವತ್, ಜ್ಯೋತಿ ಮಹದೇವ್, ಗುರುಮೂರ್ತಿ ಹೆಗಡೆ, ಪ್ರೀತಿ ಹೆಗಡೆ, ದಿವ್ಯಾ ಹೆಗಡೆ, ವಿಕಾಸ ಹೆಗಡೆ, ಪತ್ರಕರ್ತೆ ಮತ್ತು ಬರಹಗಾರ್ತಿ ಉಷಾಕಟ್ಟೆಮನೆ, ಆನಂದ ಕೆ, ಐ ಹೀಗೆ ಕೆಲವರು ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಅವರಲ್ಲಿಯೇ ಕೆಲವರು ಆಡುಭಾಷೆಯ ಪ್ರಯೋಗ ಓದುವಾಗ ಅರ್ಥವಾಗದೇ ಇದ್ದ ಪಕ್ಷ ತಮಗೆ ಇಷ್ಟವಾಗುವುದಿಲ್ಲ ಅಂತಲೂ, ಇನ್ನು ಕೆಲವರು ಆಡುಭಾಷೆಯ ಪ್ರಯೋಗ ಖುಷಿ ಕೊಡುತ್ತದೆಯೆಂತಲೂ ಉತ್ತರ ನೀಡಿದರು. ಆ ಎಲ್ಲ ಅಭಿಪ್ರಾಯಗಳ ಸಾರಾಂಶವನ್ನು ನಿಮ್ಮ ಮುಂದಿಡಲು ಇಷ್ಟಪಡುತ್ತೇನೆ.

"ಕಥೆಯ ಓಟಕ್ಕೆ ಹೊಂದಿಕೆಯಾಗುವ ಪ್ರಾದೇಶಿಕತೆ ಓದುಗನನ್ನು ಹೆಚ್ಚು ಸೆಳೆಯಬಹುದು. ಒಂದುಪ್ರದೇಶದ ಜನರಿಗೆ ತಮ್ಮದೇ ಆಡುಭಾಷೆಯನ್ನು ಲಿಖಿತ ಸಾಹಿತ್ಯದಲ್ಲಿ ಓದುವಾಗ ಆಗುವ ಖುಷಿ ಇನ್ನಿತರ ಪ್ರಾದೇಶಿಕರಿಗೆ ಆಗದೇ ಇರಬಹುದು. ಹಾಗಂತ ಆಡುಮಾತಿನ ಪ್ರಯೋಗ ಲಿಖಿತ ಸಾಹಿತ್ಯದಲ್ಲಿ ತಪ್ಪೆಂದಲ್ಲ, ಬಳಸಿದರೆ ಓದುಗರಿಗೆ ಬೇರೆ ಬೇರೆ ಆಡುಮಾತಿನ ಪರಿಚಯ ಆಗುವ ಪ್ರಯೋಜನವಂತೂ ಖಂಡಿತ. ಸಾಹಿತ್ಯದ ಉಪಯೋಗಗಳಲ್ಲಿ ಇದೂ ಒಂದು. ವಿಷಯಕ್ಕೆ ಪೂರಕವಾಗಿದ್ದರೆ ಯಾವ ಆಡುಮಾತಾದರೂ ಸರಿಯೇ (ಕಲ್ಪಿತ ಸಾಹಿತ್ಯದಲ್ಲಿ)- ಅದೇ ಯಾವುದಾದರೂ ವಿಷಯದ ಬಗ್ಗೆ ಆಳವಾದ ಅಧ್ಯಯನದ ಮೆಲಿದ್ದರೆ ಸ್ಟ್ಯಾಂಡರ್ಡ್ ಕನ್ನಡವೇ ಹಿಡಿಸುತ್ತೆ. ಬರವಣಿಗೆಯಲ್ಲಿ ಅಕಾಡಮಿಕ್ ಅಲ್ಲದ ಸರಳವಾದ ಭಾಷೆ ಹೆಚ್ಚು ಖುಷಿ ಕೊಡುತ್ತದೆ. ವಸ್ತುವಿನ ಗಂಭೀರತೆಗೆ ಅನುಗುಣವಾಗಿ ಬಾಗುವ, ಬಳುಕುವ ಶಕ್ತಿ ಪ್ರತಿ ಭಾಷೆಗಿರುತ್ತದೆ. ಬರಹಗಾರನಿಗೆ ತಾನು ಹೇಳಬೇಕಾದುದರ ಬಗ್ಗೆ ಸ್ಪಷ್ಟತೆ ಇದ್ದಾಗ ಅದು ತಾನಾಗೇ ಸಿದ್ದಿಸುತ್ತದೆ. ಆಡುಮಾತಿನಲ್ಲಿ ಉತ್ತರಕನ್ನಡದ ಗಂಡುಭಾಷೆ ಚಂಪಾ ಮತ್ತು ಕಂಬಾರರು ಆಡುವ ಕನ್ನಡ ತುಂಬಾ ಇಷ್ಟವಾಗುತ್ತದೆ. ಸತ್ವಯುತವಾದ ಈ ಭಾಷೆ ರಂಗಭೂಮಿಗೂ ಶಕ್ತಿಯನ್ನು ತುಂಬಿದೆ. ಕಥೆಗೆ ಪೂರಕವಾಗಿದ್ದರೆ ಆಡುಭಾಷೆಯ ಮಜ ಸ್ಟ್ಯಾಂಡರ್ಡ್ ಭಾಷೆಗೆ ಬರಲ್ಲ. ಇನ್ನೊಂದು ವಿಷ್ಯ, ಆಡುಭಾಷೆಯನ್ನ ಕೇವಲ ಆ ಪ್ರದೇಶದ ಜನ ಮಾತ್ರ ಅಲ್ಲ, ಬೇರೆಯವರು ಕೂಡ ಇಷ್ಟಪಡಬಹುದು. ನಾವು ಧಾರವಾಡದವರು ಅಲ್ಲದಿದ್ರೂ ಶ್ರೀನಿವಾಸ ವೈದ್ಯರ ‘ಹಳ್ಳ ಬಂತು ಹಳ್ಳ’ದ ಆಢುಭಾಷೆ ಸಿಕ್ಕಾಪಟ್ಟೆ ಇಷ್ಟವಾಗುತ್ತದೆ. ಆಡುಭಾಷೆಯಿಂದ ಆ ಪ್ರದೇಶದ ಬಗ್ಗೆ ಎಷ್ಟೋ ಇಂಟರೆಸ್ಟಿಂಗ್ ಮಾಹಿತಿ ಸಿಗತ್ತೆ’ ಅಂತೆಲ್ಲ ಇಂಟರೆಸ್ಟಿಂಗಾಗಿ ಅಭಿಪ್ರಾಯಗಳನ್ನ ಹೇಳಿದ್ರು.

ಇನ್ನು ಕೆಲವರು ಯಾವ್ದೂ ಬೇಡ ಅಂತ ‘ಬ್ಲೆಂಡ್ ಆಫ್ ಬೋತ್ ಫಾರ್ ಮಿ’ ಅಂತ ಇಂಗ್ಲೀಷಲ್ಲಿ ಹೇಳಿದ್ರು. ಹಾಗೆಯೇ ಇನ್ನೊಬ್ರು ಹೀಗೇ ಹೀಳಿದ್ರು "ನೌವ್ವಾ ಡೇಸ್ ಟ್ರೆಂಡ್ ಈಸ್ ನ್ಯೂಟ್ರಲ್ ಕನ್ನಡ" ಇವಿಷ್ಟು ಕೆಲವರ ಅಭಿಪ್ರಾಯ.

ಮತ್ತೆ ಕಥೆಯ ವಿಷಯಕ್ಕೆ ಮರಳಿದರೆ ವಸುಧೇಂದ್ರ ಅವರ ಕತೆಗಳು ನಮ್ಮನ್ನು ಸೆಳೆವ ಕಾರಣವೂ ಅವರು ಬಳ್ಳಾರಿ ಕಡೆಯ ಭಾಷೆ. ’ಅಕ್ಕನ ಮನೆಯಲ್ಲಿ ಎಲ್ಲರ ಕಣ್ಣಲ್ಲಿ ನಾನು ಮಿಂಚಬಹುದೆಂಬ ಆಸೆಯಿಂದ ಬಸ್ಸೇರಿದೆ. ಅಮ್ಮ ಹೇಳಿದಂತೆ ಕಾಲಬುಡದಲ್ಲಿಯೇ ಡಬ್ಬವನ್ನಿಟ್ಟುಕೊಂಡೆ. ಆದರೆ ದಿವಂಗತ ಟಿ.ಕೆ. ರಾಮರಾಯರ ಒಂದು ಭರ್ಜರಿ ಪತ್ತೇದಾರಿ ಕಾದಂಬರಿ ಓದುತ್ತಾ ಕುಳಿತೆ. ರಾಯರು ಒಂದರ ಮೇಲೊಂದು ಹೆಣ ಉರುಳಿಸುತ್ತಿದ್ದರು. ನಾನು ಯಾರನ್ನು ಕೊಲೆಗಾರ ಎಂದು ಊಹಿಸಿದ್ದೆನೋ ಅವನದೇ ಕೊಲೆಮಾಡಿಸಿಬಿಟ್ಟರು. ಯಾರೋ ಸ್ವಲ್ಪ ಕಾಲು ಎತ್ತಿ ಆ ಕಡೆ ಇಡರಿ ಎಂದರು. ಇಟ್ಟೆ. ಅವರು ಲಕ್ಷಣವಾಗಿ ಯಾವುದೋ ನಿಲ್ದಾಣದಲ್ಲಿ ಡಬ್ಬವನ್ನು ಇಳಿಸಿಕೊಂಡು ಹೋದರು. ಕೊಲೆ-ಗಿಲೆ ಎಲ್ಲಾ ಮುಗಿದು ಅಕ್ಕನ ಮನೆ ಸೇರಿದಾಗ ಡಬ್ಬ ಕಾಣೆಯಾದ್ದು ನನಗೆ ಆಗ ಗೊತ್ತಾಯ್ತು. ಅಕ್ಕನ ಮನೆಯಲ್ಲಿ ಎಲ್ಲರೂ ನನ್ನನ್ನು ’ ಹುಡುಗಿ ತಮ್ಮ, ಮದುವಿ ಸ್ಟೀಲ್ ಪಾತ್ರೆನೆಲ್ಲ ಬಸ್ಸಿನ್ಯಾಗೆ ಕಳಕೊಂಡಾನೆ’ ಅಂತ ಪರಿಚಯಿಸಿದರು. ಅಮ್ಮನ ಗೋಳಂತೂ ಹೇಳುವುದಕ್ಕೇ ಸಾಧ್ಯವಿಲ್ಲ. ‘ಕಾಲಾಗೆ ಇಟ್ಟಿದ್ದ ಡಬ್ಬಿ ತಕ್ಕೊಂಡು ಹೋಗಿದ್ದೂ ಗೊತ್ತಾಗದಂಥ ಸುಡುಗಾಡು ಪುಸ್ತಕ ಅದ್ಯಾರು ಬರೆದಿದ್ದರಾತು ಹೇಳವ್ವಾ’ ಎಂದು ಅಪರಿಚಿತ ರಾಮರಾಯರಿಗೆ ಬೈದಳು.

ವೈದೇಹಿಯವರ ಕತೆಗಳಲ್ಲಿಯೂ ನೀವೊಮ್ಮೆ ಹುಟ್ಟೂರು ಸುತ್ತಿ ಬಂದಷ್ಟು ಆ ಕಥೆಗಳು ಆಪ್ತವಾಗುವುದು ಆಡುಮಾತನ್ನು ಹಿಡಿದಿಟ್ಟ ಕುಶಲತೆಯಲ್ಲಿ. " ಹಾಂ, ಹಾಗೆ ಹೊರಟಳಲ್ಲ ಎರಡು ಜಡೆ ಬಿಟ್ಟುಕೊಂಡು ಅಮ್ಮಚ್ಚಿ, ಸತ್ಯನಾರಾಯಣ ಪೂಜೆಗೆ. ವೆಂಕಪ್ಪಯ್ಯ ದಾರಿಯಲ್ಲೇ ಸಿಕ್ಕಿದ. ‘ಏನಿಯ? ಇದೇನಿಯ ಏಸ. ಬೊಂಬಾಯಿ ಲೇಡಿಯ ಹಂಗೆ, ವಾರೆ ಬಕ್ತಲೆ! ಶಿ..ಶೀ.. ನಡೆ ಮನೆಗೆ. ಸರಿಯಾಯಿ ಬಾಚಿಂಡು ಹೋವು’ ಎಂದ. ಅದಕ್ಕೆ ಅಮ್ಮಚ್ಚಿ ’ ಹೋವುಯ, ನೀ ಮನೆಗೆ ಹೋವು. ಹೋಯಿದ್ದ ಗಡದ್ದು ಒಂದು ಲೋಟ ಚಾಯ ಕುಡಿ. ಅಮ್ಮನ ಹಕ್ಕೈ ಹೇಳ್, ಹೆಂಗೂ ಮಾಡಿ ಕೊಡತ್ಲ್... ನನ್ನ ಸುದ್ದಿಗೆ ಮಿನಿ ಬರಳೆ, ಬೋಳುಮಂಡೆ ಕಾಕ. ನಿಂಗೆ ವಾರೆ ಬಿಡು, ಯಾವ ಬಕ್ತಲೆಯೂ ತೆಗೆಯಗಾಗದ ಸಂಕಟಕ್ಕೆ ನಂಗೆ ಯಾಕೆ ಹೇಳ್ತೆ?’ ಎಂದವಳು ನನ್ನ ಕೈಹಿಡಿದು ‘ಬಾಯ ಬೀಸು ನೀನು. ಮೆಲ್ಲ ನಡದ್ರೆ ಹಿಂಗೇ. ನಾಯಿ ಸಂತಾನಗಳೆಲ್ಲ ಎದುರಾತೋ’ ಎಂದು ಎಳೆದುಕೊಂಡು ಮುಂದೆ ನಡೆದೇ ಬಿಟ್ಟಳು. ಇಷ್ಟೆಲ್ಲ ಮಾತನಾಡುವ ಅಮ್ಮಚ್ಚಿ ಕತೆಮುಗಿದರೂ ಮರೆಯಳು. ಹೀಗೆ ಸಂಭಾಷಣೆ ಒಂದು ಪರಿಸರವನ್ನೇ ವಿವರಿಸುವ ಶಕ್ತಿಯಾಗಿರುತ್ತದೆ ಕೆಲವೊಮ್ಮೆ. ಕತೆ ಮುಗಿದಾಗ ನೀವು ಅಮ್ಮಚ್ಚಿಯನ್ನು ನಿಮ್ಮೂರಲ್ಲೆ ನೋಡುರುತ್ತೀರಿ. ಪದೇ ಪದೇ ಅಮ್ಮಚ್ಚಿ ನೆನಪಾಗುತ್ತಾಳೆ ಸುಮಾರು ದಿನದತನಕ.

ಇವಿಷ್ಟು ಬರವಣಿಗೆಯಲ್ಲಿ ಆಡುಭಾಷೆಯ ಬಳಕೆಯ ಬಗ್ಗೆ ನನ್ನ ಅನಿಸಿಕೆ. ಇನ್ನು ನಿಮ್ಮ ಅಭಿಪ್ರಾಯದಲ್ಲಿ ಪ್ರಶ್ನೆಗಳಿದ್ದರೆ ಸ್ವಾಗತ. ಇಲ್ಲಿಯತನಕ ಪ್ರೀತಿಯಿಂದ ನನ್ನ ಮಾತುಗಳಿಗೆ ಅವಕಾಶ ಕೊಟ್ಟು ಆಲಿಸಿದ ನಿಮ್ಮೆಲ್ಲರಿಗೂ ನನ್ನ ಅನಂತ ಧನ್ಯವಾದಗಳು.


(ಕನ್ನಡಸಾಹಿತ್ಯರಂಗದ ‘ವಸಂತಸಾಹಿತ್ಯೋತ್ಸವ’ದಲ್ಲಿ ‘ಬರವಣಿಗೆಯಲ್ಲಿ ಪ್ರಾದೇಶಿಕ ಕನ್ನಡ’ದ ಕುರಿತಾದ ನನ್ನ ಭಾಷಣ. ಹೀಗೆ ಒಂದು ದಿನ ನಾನು ಭಾಷಣ ಮಾಡಬೇಕಾಗಿ ಬಂದೀತೆಂದು ಯಾವತ್ತೂ ಅಂದುಕೊಂಡಿರಲಿಲ್ಲ. ಭಾಷಣ ಮುಗಿದು ಸುಮಾರು ದಿನದ ಮೇಲೂ ನಾನಾವತ್ತು ಮಾತನಾಡಿದ್ದನ್ನು ಕೇಳಿದವರೆಲ್ಲರ ಕ್ಷಮೆ ಕೋರುತ್ತ ಮತ್ತೆ ಧೈರ್ಯಮಾಡಿ ಇದನ್ನಿಲ್ಲಿ ಇಡುತ್ತಿದ್ದೇನೆ :-)

May 2, 2011

ಕಾವ್ಯ ಎಂದರೆ ಏನು?

ಇಷ್ಟು ಮಾತ್ರ ಹೇಳಬೇಕಾಗಿದೆ ನೀವು ಅಷ್ಟೆಲ್ಲ ಹೇಳಿದ ಮೇಲೆ.ಯಾರೋ ಕೇಳಿದ ಪ್ರಶ್ನೆಗೆ ‘ಈ ಬಗ್ಗೆ ಇವಳಿಗೆ ಹೇಳಿದ್ದೇನೆ, ’ ಅಂತ ನನ್ನ ತೋರಿಸಿದಿರಿ. ಇಷ್ಟು ಮಾತ್ರ ಹೇಳುತ್ತೇನೆ. ನನಗೇನೂ ಗೊತ್ತಿಲ್ಲ, ನಾನೇನೂ ಹೇಳುವುದಿಲ್ಲ.
ಬರೆಯುವಾಗ ಕೆ.ಎಸ್.ನ, ಕುವೆಂಪು, ಅಡಿಗರು ಬಂದರೆ ಅವರನ್ನು ಪಕ್ಕಕ್ಕೆ ಕೂರಿಸಿ, ನನ್ನ ಮನೆಗೆ ನಾನೇ ಒಡತಿ, ನಾನು ಮಾಡಬೇಕಾದ್ದನ್ನು ನಾನೇ ಮಾಡುತ್ತೇನೆ ಅಂತ ಅವರನ್ನೆಲ್ಲ ಪಕ್ಕಕ್ಕೆ ಕೂರಿಸಿ ನೀವು ಬರೆಯಿರಿ, ನೀವು ಬರೆಯಬೇಕಾದ್ದನ್ನು ಅವರಿಗೆ ಬರೆಯಲು ಬಿಡಬಾರದು ಅಂತ ಹೇಳಿದಿರಿ. ಆದರೆ ನಾನೇನು ಬರೆಯಬೇಕು ಅಂತ ನೀವು ಹೇಳಲೇ ಇಲ್ಲ, ಅಥವಾ ನಾನು ಬರೆದದ್ದೆಲ್ಲವನ್ನೂ ನಿಮ್ಮ ಮುಂದೆ ನಾನು ಹರವಿಡಲೇ ಇಲ್ಲ, ನನ್ನ ತಪ್ಪೂ ಇದೆ.

ಸುಮ್ಮನೆ ಯಾಕೆ ದ್ವೇಷಿಸುವಂತೆ ಪ್ರೀತಿಸುತ್ತೀರಿ. ಮಾತು ಬೇಸರವಾಯಿತೆ? ಅಥವಾ ಸುಮ್ಮನಿದ್ದದ್ದೇ ಇಷ್ಟವಾಗಲಿಲ್ಲವ? ಸಮಸ್ಯೆಯೆಂದರೆ ನಿಮ್ಮ ಮಾತಿಗೆ ಬೇಕಾಗಿರದ ಏಕಾಂತವೊಂದು ನನ್ನ ಜಗಳಕ್ಕೆ ಬೇಕಿದೆ. ಕಾಯುತ್ತಿದ್ದೇನೆ. ಎಲ್ಲವನ್ನೂ ಹೇಳಿದರೆ ಕವಿತೆಯಾಗುವುದಿಲ್ಲ ಅಂತ ಹೇಳುತ್ತೀರಿ. ಹೇಳಬೇಕೆನಿಸಿದ್ದೆಲ್ಲವನ್ನೂ ಹೇಳಿಬಿಡುವುದು ಮಾತೂ ಅಲ್ಲ.

ಫ್ರೆಂಚ್ ಕವಿಯೊಬ್ಬ ಯಾವತ್ತೋ ಹೇಳಿದ ಮಾತು ಇವತ್ತಿಗೆ ನೀವು ಮತ್ತೊಬ್ಬನಿಗೆ ಕೊಡುವ ಸಮಜಾಯಿಷಿ. ಯಾರದ್ದೋ ಮಾತಿಗೆ ಮೊಂಡುವಾದ ಎನ್ನುತ್ತೀರಿ. ನಾನು ಸುಮ್ಮನಿದ್ದದ್ದೇ ತಪ್ಪು ಎನ್ನುತ್ತೀರಿ. ನಿಮ್ಮದೇ ಹೊಸ ಹೊಸಸಾಲುಗಳ ಬರೆದು ನನ್ನ ಹೆಸರನ್ನು ಕರೆದು ನನ್ನ ಮೌನವನ್ನೇಕೆ ಪ್ರಶ್ನಿಸುತ್ತೀರಿ? ನನ್ನ ಹೆಸರು ಇಷ್ಟವಾಯಿತೆ ನಿಮಗೂ? ಗೊತ್ತಿದೆ ನೀವು ನಿಮ್ಮ ಮನೆಯ ತೆಂಗಿನಮರ, ಹೂಗಿಡ, ಅಲ್ಲಿಗೆ ಬರುವ ಹಕ್ಕಿ, ಪ್ರಾಣಿ ಪಕ್ಷಿ ಎಲ್ಲದರ ಮೇಲೆ ಕವಿತೆ ಬರೆದಿದ್ದೀರಿ ಎಂದು. ಅಷ್ಟೂ ಪುಸ್ತಕ ತಂದಿದ್ದೇನೆ ನಾಳೆ ಓದೋಣ ಅಂತ.

ಎದುರಿಗೆ ನಿಂತರೆ ನಿಂತಿದ್ದೇ ಸರಿಯಿಲ್ಲ. ದೂರ ಸರಿದರೆ ಕೈಬೀಸಿ ಕರೆಯುತ್ತೀರಿ. ಕೊನೆಯಲ್ಲೊಂದು ಮಾತು. ನೀವು ನನಗೆ ಇಷ್ಟವಾಗಿದ್ದೀರಿ. ಇವಿಷ್ಟನ್ನಿಲ್ಲಿ ಬರೆದಿಟ್ಟುಕೊಳ್ಳುತ್ತಿದ್ದೇನೆ, ಇವಿಷ್ಟೇ ಸಾಕು, ಇನ್ಯಾವತ್ತೋ ಎಲ್ಲವನ್ನೂ ನೆನಪಿಸುವುದಕ್ಕೆ.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.