June 20, 2011

ಬಿಸಿಲು

ಬೆಳಬೆಳಗ್ಗೆ ಕೂಗುತ್ತ ಬರುವ ಕಸದ ಗಾಡಿಯ ಸದ್ದು, ಕಿಟಕಿಯಲ್ಲಿ ಚೂರೇ ಚೂರು ಇಣುಕುವ ಎಳೆಬಿಸಿಲು, ಬೇಸಿಗೆ ರಜೆಗೆ ಬಿಸಿಲ ರಜೆಯೆಂದು ಇನ್ನೂ ಎದ್ದಿರದ ಮಗು, ಬಯೋಲೇಜ್ ಬಾಡಿ ಲೋಷನ್ನಿನ ಪರಿಮಳ, ಮುಖದಲ್ಲಿನ್ನೂ ಆರಿರದ ಜಾನ್ಸನ್ ಬೇಬಿ ಸೋಪಿನ ಪರಿಮಳ, ಇನ್ನೂ ಮುಗಿದಿರದ ಪಕ್ಕದ ಬಿಲ್ಡಿಂಗಿನ ಕೆಲಸ, ಧೂಳು, ಆ ಸದ್ದು ಎಲ್ಲದಕ್ಕೂ ಅಂಟಿಕೊಂಡು ಮುನ್ನುಗ್ಗುವ ನೆನಪು.

ಯಾರದೋ ಮೇಲಿನ ಕೋಪಕ್ಕೆ ನಿನ್ನನ್ನೇ ಸುತ್ತಿಕೊಳ್ಳುತ್ತಿದ್ದ ನನ್ನ ಸಿಟ್ಟು, ಹಿತ್ತಲಿನ ಅಂಗಳದಿಂದೆಸೆದ ವಾಚು ಮೇಲಿನ ಹಿತ್ತಲಿನ ಬೇಲಿ ದಾಟಿ ಪೇರಲೆ ಗಿಡದಡಿಗೆಲ್ಲ ಒಣಕರಡದ ಹುಲ್ಲಿನ ನಡುವೆಲ್ಲೋ ಕಳೆದು ಹೋಗಿ ಒಪ್ಪತ್ತಿನ ತನಕ ಬಿಸಲಲ್ಲಿ ಅಲೆದಲೆದು ಹುಡುಕಿತಂದುಕೊಟ್ಟ ಅದೇ ವಾಚು ಹಳೇದಾಗಿ ನಡೆಯುತ್ತಲೇ ಇಲ್ಲವಾದರೂ ಆಗಾಗ ಕಟ್ಟಿಕೊಂಡರೆ ಮತ್ತೆ ನಿನ್ನ ಕೈಹಿಡಿದು ನಡೆದಾಗಿನ ಕಾನ್ಫಿಡೆನ್ಸು.

ಮೊದಲ ಸಂಬಳದಲ್ಲಿ ಖಾಲಿಮನೆಯೊಳಗೆ ಸಮಯನೋಡುವುದಕ್ಕೆಂತ ನೀ ತಂದಿಟ್ಟ ಅಲಾರ್ಮ್ ಫೀಸು, ನನ್ನ ಸಿಟ್ಟಿಗೆ ಸಿಕ್ಕು ಅರೆತಾಸಿನೊಳಗೆ ಚೂರಾದ್ದಕ್ಕೇ ಇರಬೇಕು ಆ ನಂತರ ಇಬ್ಬರೂ ಸಂಧಿಸುವ ಸಮಯ ಬರಲೇ ಇಲ್ಲ. ಎಲ್ಲಮರೆತ ಬೆಳಗು ನೀ ನನ್ನ ಬಿಟ್ಟು ಒಬ್ಬನೇ ಇಡ್ಲಿಸಾಂಬಾರ್ ತಿನ್ನದೇ ಹೋಗಿದ್ದರೆ ಬಹುಷಃ ನನ್ನ ಮನೆಯೊಳಗೆ ಗೋಡೆಗೋಡೆಗೂ ನೀ ತಂದು ತೂಗುಹಾಕಿದ ಗಡಿಯಾರವೊಂದು ಇರುತ್ತಿತ್ತು. ನಿನ್ನ ಮನೆಯ ಎಲ್ಲ ಕಿಟಕಿಯ ಪಕ್ಕ ನಾ ಬರೆದ ಚಿತ್ರವಿರುತ್ತಿತ್ತು.

ಲಿವ್ ಇನ್ ಜೀನ್ಸು, ನೈಕೆ ಶೂ, ನೋಕಿಯಾ ಮೊಬೈಲುಗಳೆಲ್ಲ ಹಳೇ ಬ್ರ್ಯಾಂಡ್ಸ್ ಅಂತನ್ನಿಸಿದರೂ ಓಲ್ಡ್ ಈಸ್ ಗೋಲ್ಡ್ ಅಂತಾರಲ್ಲ ಹಾಗೆ. ಸಿಹಿಯೊಳಗಿನ ಏಲಕ್ಕಿ ಪರಮಳಕ್ಕೀಗ ಕಿತ್ತಾಡಿ ದೂರಾಗುವ ಪ್ರಮೇಯವೇ ಬರಲಿಲ್ಲ ನೋಡು ಅದಕ್ಕೇ ಇರಬೇಕು ಒಟ್ಟಾಗುವ ಗುಣವೂ ಇಬ್ಬರಿಗೂ ಒದಗಲಿಲ್ಲ. ಆದರೂ ಏಲಕ್ಕಿ ಪಾನಕ ಕುಡಿಯುವುದನ್ನೇ ಬಿಟ್ಟಿದ್ದೇನೆ. ಏಕೆಂದರೆ ನೆನಪುಗಳನ್ನು ಅರೆದರೆದು ಕುಡಿಯುವುದು ಆಗದ ಕೆಲಸ.

ಬಕೀಟಿನಲ್ಲಿ ಅದ್ದಿಟ್ಟ ಬಿಸಿನೀರಿನ ಕಾಯಿಲ್ ಜಂಗುಹಿಡಿದು ಪುಡಿಯಾಗುತ್ತಿದ್ದರೂ ಬಿಸಾಡಲು ಮನಸಾಗುತ್ತಿಲ್ಲ. ಗುಲಾಬಿ ಬಣ್ಣದ ಟರ್ಕಿಷ್ ಟವೆಲ್ಲು ಹಳತಾಗಿ ಬೆಳ್ಳಗಾಗಿದೆಯೆಂದ ಮೇಲೆ ಇನ್ನೂ ಹಳತಾಗಲು ಸಾಧ್ಯವಿಲ್ಲ ಬಿಡು ಅಂತ ಸಮಾಧಾನದಿಂದಿದ್ದೇನೆ. ಬಿಳಿಯ ಕರ್ಚಿಫ್ ನಲ್ಲಿ ಒರೆಸಿ ಒಣಗಿದ ಕಲೆ ಇಂದಿಗೂ ಸಾಂತ್ವನ ಹೇಳುತ್ತಲೇ ಗಾಯ ಮರೆಸಲು ಒರೆಸಲು ನಾನಿದ್ದೇನೆ ಬಿಡು ಎಂದು. ನೀನು ಕಲಿಸಿದ ಅನ್ನ, ದಾಲ್, ಸಾಂಬಾರ್ ಇವತ್ತಿನ ನನ್ನ ಅದೆಷ್ಟೋ ದಿನಗಳ ಊಟವನ್ನು ರುಚಿಯಾಗಿಸುತ್ತಿದೆ.

ನೀನಿರದ ಗಳಿಗೆಯಲ್ಲಿ ಮರೆತುಹೋದ ಅಂಗಳದ ಕಪ್ಪುಗುಲಾಬಿ ಹೂವಿನ ಗಿಡ ಎಷ್ಟೋ ದಿನಗಳ ಮೆಲೆ ನೆನಪಾಗಿ ಹೋಗಿನೋಡಿದರೆ ಅಂಗಳ ಖಾಲಿಯಿತ್ತು. ಬಾಗಿಲ ತೆರದು ಒಳಗಡಿಯಿಟ್ಟರೆ ಒಳಗೆ ಹೋಗಲಾರದೇ ಅರೆಕ್ಷಣ ಬಾಗಿಲಲ್ಲೇ ನಿಂತಿದ್ದನ್ನು ಪಕ್ಕದ ಬಿಲ್ಡಿಂಗಿನ ಹೆಂಗಸೊಬ್ಬಳು ಬಾಲ್ಕನಿಯಲ್ಲಿ ನಿಂತು ನೋಡುತ್ತಿದ್ದಳು. ಬಾತ್ ರೂಮಿಗೆ ಹೋಗಿ ನೀನು ಉಪಯೋಗಿಸುತ್ತಿದ್ದ ಶಾಂಪೂ,ಅಡುಗೆ ಮನೆಗೆ ಹೋಗಿ ನಿನ್ನಿಷ್ಟದ ಆ ಸ್ಪೂನು ಎರಡನ್ನು ಬ್ಯಾಗಿನೊಳಗೆ ಹಾಕಿಕೊಂಡು ಹೊರಟರೆ ಬ್ಯಾಗು ಅಷ್ಟಕ್ಕೆ ಭಾರವೆನಿಸಿ ಮುಂದೆ ಹೆಜ್ಜೆ ಇಡಲಾರದೇ ಅಲ್ಲಿ ನಿಲ್ಲಲೂ ಆಗದೇ ನಡೆದುಬಂದಿದ್ದೇನೆ.

ಬರುವಾಗ ಮರೆಯದೇ ಮನೆ ಬಾಗಿಲಿಗಿದ್ದ ನಿನ್ನಿಷ್ಟದ ಆ ತೋರಣವನ್ನು ತೆಗೆದು ಸ್ಕೂಟಿಯ ಸೀಟಿನಡಿಗಿಟ್ಟು ‘ಮನೆ ಮಾರಾಟಕ್ಕಿದೆ’ ಬೋರ್ಡನ್ನು ಬಾಗಿಲಿಗೆ ನೇತು ಹಾಕಿ ಬರುವಷ್ಟರಲ್ಲಿ ಬಿಸಿಲು ನೇರ ನೆತ್ತಿಗೇ ಬೀಳುತ್ತಿತ್ತು. ನೀನಿದ್ದಾಗ ಯಾವತ್ತೂ ಹೀಗೆ ನೆತ್ತಿಯ ಸುಡುವಂಥ ಬಿಸಿಲೇ ಬಿದ್ದಿರಲಿಲ್ಲ. ಎಲ್ಲವೂ ಈಗ ತಣ್ಣನೆಯ ನೆನಪು.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.