March 23, 2011

ಖುಷಿಯ ಕ್ಷಣ

ನಾನು ಬರುವತನಕ ಬ್ರಹ್ಮಕಮಲಕ್ಕೆ ಅರಳಿಕೊಂಡೇ ಇರೋಕೆ ಹೇಳು ಅಂತ ಹೇಳಿದ್ನಲ್ಲೇ, ನೀನು ನೋಡಿದ್ರೆ ಬ್ರಹ್ಮಕಮಲನ್ನ ಬಾಡಿಸಿಟ್ಟಿದೀಯ ಅಂದೆ. ಅದೂ... ಬಾಡಿದೆ, ಈ ಎಲೆ ತಿನ್ನಿ ನೀವು ಅಂತ ದೊಡ್ಡಪತ್ರೆ ಎಲೆ ಕೊಟ್ಟಳು.
ಆವತ್ತು ಹಾಸ್ಟೆಲಿನ ಟೆರೆಸಿನಲ್ಲಿ ಜುಮುರು ಮಳೆ ಹೊಯ್ಯುತ್ತಿರೋದನ್ನೂ ಗಮನಿಸಿದೇ ಯೋಚಿಸ್ತಿದ್ದಾಗ ಮೆಸ್ಸಿನ ಆಂಟಿ ಮಗಳು ಮಾತಾಡಿದ್ದೂ ಸಹ ಹೀಗೆಯೇ ಅಲ್ವ ಅನ್ನಿಸಿತು.
‘ಅಕ್ಕಾ... ಎಲೀ ಹೆಂಗ್ ಬೀಳ್ತಾವ್ ಹೇಳ್ರೀ ನೋಡೂಣು’ ಅಂದಿದ್ದಳು ಮೂರು ವರ್ಷದವಳು. ಪರೀಕ್ಷೆಯ ಎದುರಿಗೇ ಸಿಗಬಹುದಾದ ಬೃಹದ್ ದಿನಗಳ ಬಗ್ಗೆ ಯೋಚಿಸೋದು ಮರೆತಂತೆ ತಿರುಗಿ ‘ಎಲೆ ಹೇಗ್ ಬೀಳತ್ತೆ, ತೋರ್ಸು ನೀನು’ ಅಂದಿದ್ದೆ.
‘ಹಿಂಗ್.... ಬೀಳ್ತಾವ್ ನೋಡ್ರೀ...’ ಅಂತ ಪುಟ್ಟ ಹಸ್ತಗಳೆರಡನ್ನೂ ಮುಂದೆ ಮಾಡಿ ಮೇಲಿಂದ ಕೆಳಾತನಕ ಪುಟ್ಟ ಹಸ್ತಗಳನ್ನ ತಿರುವಿ ಮುರುವಿ ತಿರುವೀ ಮುರುವೀ ಎಲೆಗಳು ಮರದಿಂದ ಉದುರೋ ಅಂದವನ್ನ ತೋರಿಸಿದ್ದಳು. ಅಂಥ ಮಳೆಯ ಹೊತ್ತಿಗೆ ನಾನೊಬ್ಬಳೇ ಹೀಗೆ ಟೆರೆಸಿನಲ್ಲಿ ನಿಂತಿರಲಿಲ್ಲ ಅನ್ನುವುದಕ್ಕೆ ಸಾಕ್ಷಿಯಾಗಿ ಓಡಿಹೋಗಿದ್ದಳು.
ಅಂಥದೇ ಗರಿಗರಿ ಖುಷಿ, ದೊಡ್ಡಪತ್ರೆಯ ಘಮ. ‘ನಂಗೆ ದೊಡ್ದಪತ್ರೆ ಇಷ್ಟ’ ಅಂದೆ. ನಂಗೂ ಅಂದಳು. ನಾನು ಅಗಿದಗಿದು ನುಂಗಿದೆ. ಅವಳೂ.

ಗೊಂಬೆಯಾಟವ ಮುಂದುವರೆಸಿದಳು. ಮಗುವಿನ ಹೆಸರೇನು ಅಂತ ಕೇಳಿದೆ. ಅದಕ್ಕಿನ್ನೂ ಹೆಸರಿಟ್ಟಿಲ್ಲ ಅಂದಳು. ಸರಿ ಹಾಗಾದರೆ ನಾವಿಬ್ಬರೂ ಸೇರಿ ಇವತ್ತು ಮಗುವಿಗೆ ಹೆಸರಿಡೋಣ ಅಂದೆ.
ಕೈಯಲ್ಲಿರುವ ಕೂಸು ಗಂಡೋ ಹೆಣ್ಣೋ ಕೇಳಿದೆ. ಗಂಡೆಂದಳು ಹೆಮ್ಮೆಯಿಂದ. ಸಣ್ಣಗೆ ಹೇಳು ಸ್ತ್ರೀವಾದಿಗಳು ನಮ್ಮಿಬ್ಬರನ್ನೂ ಹಿಡಿದು ನಿಲ್ಲಿಸಿಯಾರು ಅಂದೆ. ಹಾಗೆಂದರೇನೆಂಬಂತೆ ನನ್ನನ್ನೇ ನೋಡಿದಳು. ಮಗು ಹೆಣ್ಣಾದರೆ ಖುಷಿ. ಗಂಡಾದರೆ! ದುಃಖ ಅಂತ ಹೆಸರಿಟ್ಟರೂ ಸಾಕು ಬಿಡು ಅಂದೆ.

ನನ್ನನ್ನೇ ನೋಡಿದಳು. ಏನೋ ಗೊತ್ತಾದಂತೆ ಮುಗುಳ್ನಕ್ಕು ದುಃಖ ಅಂದ್ರೆ ಬೇಜಾರು ಅಂತ. ಹಾಗೆ ಹೆಸರಿಡೋದು ಬೇಡ ಮಗೂಗೆ ಅಂದಳು ನಿಘಂಟನ್ನು ತಾನೂ ಓದಿದವಳಂತೆ. ಮತ್ತೆ ಖುಷಿಯಾದಳು. ನಾನೂ ಖುಷಿಯಾದೆ.
ಇವತ್ತು ಮಗೂಗೆ ತಲೆಸ್ನಾನ ಬೇಡ, ನೆಗಡಿಯಾಗಿದೆ ಅಂದಳು. ಸರಿಯೆಂದೆ. ಸ್ನಾನ ಮಾಡಿಸಿದಳು ಮಗುವಿಗೆ. ನಾನು ಮಗುವಿನ ಮೈಯೊರೆಸಿ ಗೊಬ್ಬೆ ಕಟ್ಟಿದೆ. ಕುಳಿತಿದ್ದ ಕುರ್ಚಿ ತಾನಾಗಿಯೇ ತಿರುಗಿತು. ಗೋಡೆಯ ಮೇಲೆ ವೈಯನ್ಕೆ ನಮ್ಮಿಬ್ಬರನ್ನೂ ನೋಡಿ ನಕ್ಕಂತೆ ಭಾಸವಾಯಿತು. ಇಷ್ಟೂ ಹೊತ್ತು ನಾನು ಎಲ್ಲಿ ಕುಳಿತಿದ್ದೆ ಅಂತ ಯೋಚಿಸುವ ಮುನ್ನ ನಿಧಾನಕ್ಕೆ ಎದ್ದೆ.
ಮಗು ಅಳ್ತಿದೆ ಅಂದಳು. ನಿಜ, ಮಗು ಅಳ್ತಿರಬೇಕು, ನನ್ನಾಲೋಚನೆಗಳು ಸದ್ದು ಮಾಡಿ ಮಲಗಿದ್ದ ಮಗುವನ್ನು ಏಳಿಸಿರಬೇಕು. ತಟ್ಟಿ ಮಲಗಿಸು ಅಂದೆ. ತಟ್ಟಿದಳು, ಮಗು ಮಲಗಿತು. ಖುಷಿಯಾದೆವು. ಖುಷಿಯೊಂದೇ ಅಲ್ಲ, ಖುಷಿ ಖುಷಿ.

March 3, 2011

Flipkart ಮತ್ತು ಪುರ್ಯೋತ ಭಟ್ರು

ಫ್ಲಿಪ್ ಕಾರ್ಟ್ ಇಂದ ನಾಲ್ಕಾರು ಪುಸ್ತಕಗಳನ್ನ ಆರ್ಡರ್ ಮಾಡಿದ್ದೆ. ಆರ್ಡರ್ ಮಾಡಿದವಳು ಅಮ್ಮಂಗೆ ಫೋನಾಯಿಸಿ ‘ಅಮ್ಮಾ... ಹಿಂಗೆ ಫ್ಲಿಪ್ ಕಾರ್ಟ್ ಇಂದ ನಾಲ್ಕಾರು ಪುಸ್ತಕಗಳನ್ನ ಆರ್ಡರ್ ಮಾಡಿದೀನಿ, ಮೂರ್ನಾಲ್ಕು ದಿನದಲ್ಲಿ ಕೊರಿಯರಿನವರು ನಿಂಗೆ ಕಾಲ್ ಮಾಡ್ಬಹುದು ಪುಸ್ತಕ ಬಂದಿದೆ ಅಂತ’ ಎಂಬುದಾಗಿ ಅಮ್ಮನಿಗೆ ಹೇಳಿಟ್ಟಿದ್ದೆ. ಸರಿಯಾಗಿ ಮೂರು ದಿನದೊಳಗೆ ಪುಸ್ತಕಗಳು ಬಂದಿವೆ ಅಂತ ಕೊರಿಯರಿನವರು ಅಮ್ಮಂಗೆ ಕಾಲ್ ಮಾಡಿದ್ರಂತೆ.
ಮತ್ತೆ ಅಮ್ಮಂಗೆ ಫೋನು ಮಾಡಿದಾಗ ಪುಸ್ತಕಗಳು ಮನೇಲಿದ್ವು. ಅಮ್ಮ ಸುಮಾರು ಬಿಜಿ ಇದ್ರು. ನಾನೇ ಆರ್ಡರ್ ಮಾಡಿದ ಪುಸ್ತಕಗಳಾಗಿದ್ರಿಂದ ಯಾವ್ಯಾವ ಪುಸ್ತಕಗಳು ಅಂತ ಗೊತ್ತಿದ್ರೂ ಎಲ್ಲಾನೂ ಬಂದಿದೆಯೋ ಇಲ್ಲವೋ ಅನ್ನೋ ಆಸಕ್ತಿಯೋ ಕಾಳಜಿಯೋ ಗೊತ್ತಿಲ್ಲ. ಫೋನಿನಲ್ಲಿ ಅಮ್ಮನ್ನ ಕೇಳಿದೆ ‘ಯಾವ್ಯಾವ ಪುಸ್ತಕ ಬಂದಿದೆ ಅಮ್ಮ? ಅಂತ.

ಕೇಳಿದ್ದೇ ತಡ ಅವಸರದಲ್ಲಿದ್ದ ಅಮ್ಮ ‘ಒಂದು ಸಿಡಿನೂ ಇದ್ದು ಮಗಾ, ಯಾರು ಹಾಡಿದ್ದಿದು?’ ಅಂದರು ಅಮ್ಮ.
ಪುಸ್ತಕದ ಗುಂಗಿನಲ್ಲೇ ಇದ್ದ ನಾನು ‘ಎಂತ ಸಿಡಿ?’ ಅಂತ ಕೇಳಿದೆ. ಅಮ್ಮ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ಅಂತಿದ್ಯಪ್ಪ ಅಂದ್ರು. ಅಮ್ಮ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ಪುಸ್ತಕವನ್ನ ಓದಿದಾರೆ. ಆದ್ರೆ ಕೆಲಸದ ಗಡಿಬಿಡಿಯಲ್ಲಿ ಆ ಹೆಸರು ನೋಡಿದಮೇಲೂ ಆ ಸಿಡಿ ಹಾಡಿನದಲ್ಲ ಅನ್ನೋ ನೆನಪು ಅಮ್ಮನಿಗೆ ಬಂದಿರಲಿಕ್ಕಿಲ್ಲ ಪಾಪ, ಅಮ್ಮ ಮತ್ತೆ ಕೇಳಿದ್ರು ‘ಯಾರು ಹಾಡಿದ್ದಿದು ಮಗಾ?’ ಅಂತ.
‘ಅಮ್ಮಾ... ಅದು ಹಾಡಿಂದಲ್ಲ, ಪ್ರಬಂಧಗಳದ್ದು ಸಿಡಿ, ವಸುಧೇಂದ್ರ ಅವರದ್ದು, ಸರ್ಯಾಗಿ ಓದಿ ನೋಡು, ಗೊತ್ತಾಗ್ತು,’ ಅಂದೆ.
‘ಅಯ್ಯೋ ಹೌದಲ ಮಗ! ಎಂತಾರೂ ಕೆಲಸ ಮಾಡ್ಕ್ಯೋತನಾರೂ ಕೇಳಲ್ಬರ್ತು, ಎಷ್ಟು ಚೊಲೋ ಇದ್ದಲೇ ಈ ಉಪಾಯ’ ಅಂತೆಲ್ಲ ಖುಷಿಪಟ್ಟರು.

ಅದೇ ಹೊತ್ತಿಗೆ ತರಕಾರಿ ಮಾರೋ ಅಜ್ಜಿನೂ ಅಲ್ಲೇ ಇದ್ರು. ಅಮ್ಮ ಅಲ್ಲಿಯೇ ತರಕಾರಿ ಅಜ್ಜಿಯ ಹತ್ತಿರ ತರಕಾರಿ ಕೊಳ್ತಲೇ ನನ್ನ ಜೊತೆಯೂ ಮಾತನಾಡುತ್ತ ಇದ್ದ ಕಾರಣ ಫೋನಿನ ಲೌಡ್ ಸ್ಪೀಕರ್ ಆನ್ ಮಾಡಿಕೊಂಡಿದ್ದರು. ನಮ್ಮ ಸಂಭಾಷಣೆ ತರಕಾರಿ ಅಜ್ಜಿಗೆ ಅರ್ಧಂಬರ್ಧ ಗೊತ್ತಾಗ್ತಾ ಇತ್ತು ಅನ್ಸತ್ತೆ,ತಮ್ಮದೇ ಆದ ಆಲೋಚನೆಗಳನ್ನ ಗೊಣಗೋಕೆ ಶುರುಮಾಡಿದ್ರು. ಈಗ ಅವರ ಮಾತು ಕೇಳೋ ಸರದಿ ನಂದೂ ಮತ್ತು ಅಮ್ಮನದೂ ಆಯ್ತು.

‘ಈಗಿನ್ ಕಾಲದಲ್ಲಿ ಎಂತೆಂತ ಬತ್ತೈತ, ಎಂತೆಂತ ಹೋಗ್ತೈತ, ಆ ಶಿವನೇ ಬಲ್ಲ. ಹಾಡು, ಗೀಡು, ಕತೆ,ಪತೆದೆಲ್ಲ ಶಿಡಿ ಬಂದೈತಿ ಅಂದ್ರೆ ಏನ್ ಅನ್ಸಂಗಿಲ್ರಿ. ಪೂಜೆದೂ ಬತ್ತೈತಿ. ಮನ್ನೆ ನಮ್ ಶಣ್ ಹುಡುಗನ್ ಮನ್ಯಾಗೆ ಸತ್ತಗಣಪತಿ ಕತಿಯಾತು. ಅದಕ್ಕೇ ನಿಮ್ ಶಣ್ಣಮ್ಮ ಹೇಳ್ದಂಗೆ ಶೀಡಿನೇ ಹಾಕಿದ್ರು ಪೂಜಿಗೆ. ಮಂತ್ರ ಹೇಳ್ತೈತಿ, ಪೂಜಿ ಹೆಂಗ್ ಮಾಡ್ಬಕೂ ಹೇಳೂ ಹೇಳ್ತೈತಿ. ಆದ್ರೂ ಪುರ್ಯೋತ್ ಭಟ್ರು ಬಂದು ಪೂಜಿ ಮಾಡ್ದಂಗಾಗ್ಲುಲ್ಲ ಬಿಡ್ರಿ’ ಅಂತ ಗೊಣಗಿದ್ರು.

‘ಹಂಗಲ್ಲೇ... ಕಾರು ಗೀರು ಓಡುಸ್ತಾರಲೇ ಆವಾಗೆಲ್ಲ ಈ ಸಿಡಿ ಹಾಕ್ಯಂಡು ಕತೆ ಕೇಳಕ್ಕೆ ಚೊಲೋ ಆಗ್ತದಲೇ ಈಗಿನ ಮಕ್ಕಳಿಗೆ, ಓದಕ್ಕೆ ಹೊತ್ತು ಎಲ್ಲಿರ್ತದೆ ಆಫೀಸಿಗ್ ಹೋಗೋವ್ರಿಗೆಲ್ಲ, ಅದಕ್ಕೆ ಕತೆನ ಇದ್ರಲ್ಲಿ ಓದಿಟ್ಟಿದ್ದನ್ನ ಕೇಳ್ತಾರೆ’ ಅಂತೆಲ್ಲ ಅಮ್ಮ ತರಕಾರಿ ಅಜ್ಜಿನ್ನ ಸಮಜಾಯಿಷಿ ಮಾಡೋಕೆ ನೋಡಿದ್ರೂ ಅವ್ರು ತಮ್ಮ ಮಗನ ಮನೆಲ್ಲಿ ಪುರೋಹಿತರಿಲ್ಲದೆ ಬರೇ ಸಿಡಿಯಲ್ಲಿ ಪೂಜೆ ಮುಗಿಸಿದ್ದರ ಬಗ್ಗೆ ಅಲವತ್ತುಕೊಳ್ತಲೇ ಇದ್ರು .

‘ ಶೀಡಿನೇ ಹಾಕಿದ್ರು ಪೂಜಿಗೆ. ಮಂತ್ರ ಹೇಳ್ತೈತಿ, ಪೂಜಿ ಹೆಂಗ್ ಮಾಡ್ಬೇಕೂ ಹೇಳೂ ಹೇಳ್ತೈತಿ. ಹಿಂಗೆಲ್ಲ ಆಗಿ ಪುರ್ಯೋತ ಭಟ್ರುನ್ನ ಮೂಶಿ ನೋಡವ್ರು ಇಲ್ದಂಗಾಗೈತಿ ಈಗ. ನೋಡಕ್ ಮಾತ್ರ ಏನೂ ಕಾಣ್ಸದಿಲ್ ಬಿಡ್ರಿ, ಹೊಸಾ ಅಲಿಮಿನಿ ಬಟ್ಲು ಹೊಳದಂಗ್ ಹೊಳಿತೈತಿ. ಪೂಜಿಗ್ ಭಟ್ರು ಬಂದಂಗ್ ಆಗ್ಲಿಲ್ಲ್ ಬಿಡ್ರಿ. ಮಿಸನ್ ಮಂತ್ರ ಹೇಳ್ತೈತಿ, ಪ್ರಸಾದ ಕೊಡ್ತೈತೇನ್ರೀ ಅಮಾ? ಬಗ್ಗಿ ಭಟ್ರ ಪಾದ ಮುಟ್ಟಿದ್ ಪುಣ್ಣೆ ಬತ್ತೈತ ಮಿಸನ್ನಾಗೆ?’ ಅಂತ ತರಕಾರಿ ತೂಗೋದು ಮರ್ತು ಹೇಳ್ತಾ ಇದ್ರು.

ನಂಗೇನೂ ಮಾತಾಡೋಕೆ ಗೊತ್ತಾಗದೇ ‘ನಾನು ಆಮೇಲೆ ಫೋನು ಮಾಡ್ತೀನಿ’ ಅಂತ ಅಮ್ಮನಿಗೆ ಹೇಳಿ ಫೋನಿಟ್ಟೆ. ಈವತ್ತು ಮತ್ತೆ ಫೋನಾಯಿಸಿದಾಗ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ಸಿಡಿಯ ಬಗ್ಗೆ, ಜೊತೆಗೆ ಬಂದ ಪುಸ್ತಕಗಳ ಬಗ್ಗೆ ಮತ್ತೆ ಪ್ರಸ್ತಾಪ ಬಂದಾಗ ನೆನಪಾದ ಮೇಲಿನ ಘಳಿಗೆಯನ್ನು ನಿಮ್ಮ ಮುಂದೆ ಗಳಿಗೆ ಮುರಿದಿಟ್ಟೆ.

*****
ಶಬ್ದಾರ್ಥ

ಪುರ್ಯೋತ ಭಟ್ರು = ಪುರೋಹಿತರು
ಶೀಡಿ = ಸಿಡಿ
ಅಲುಮಿನಿ = ಅಲ್ಯುಮಿನಿಯಂ
ಮಿಸನ್ = ಮಷಿನ್
ಪುಣ್ಣೆ = ಪುಣ್ಯ

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.