February 18, 2011

‘ಹೊಂದಿಸಿ ಬರೆಯಿರಿ’

ಹೊಂದಿಸಿ ಬರೆದರೀಗ ಮುಗಿಯುತ್ತದೆ ಪರೀಕ್ಷೆ
ನೂರಕ್ಕೆ ನೂರು ಮಾರ್ಕ್ಸು
ತೆಗೆಯದೇ ಹೋದ ಪಕ್ಷ
ಅಪ್ಪನಿಗೆ ಬೇಜಾರು
ಅಮ್ಮ ನೊಂದುಕೊಳ್ಳುತ್ತಾಳೆ
ನಿದ್ರಿಸುವುದಿಲ್ಲ ರಾತ್ರಿಯಿಡೀ

ಹತ್ತುನಿಮಿಷವಿದೆ ಬಾಕಿ
ಬರೇ ಹತ್ತು ನಿಮಿಷ
ಹೊಂದಿಸಿ ಬರೆಯಬೇಕು
‘ಅ’ ಪಟ್ಟಿಯದನ್ನು ‘ಬಿ’ಪಟ್ಟಿಗೆ

ಒಂದೇ ಪಟ್ಟಿಗೆ ಬರೆಯಲಾಗುತ್ತಿಲ್ಲ
ತೆಗೆಯದಿದ್ದರೆ ನೂರಕ್ಕೆ ನೂರು
ಹೊರಟುಹೋಗುತ್ತದೆ
ನನ್ನ ಮೇಲಿನ ನಂಬುಗೆ ಆಗ ಮಾಸ್ತರರಿಗೂ

ಅಪ್ಪನಿಗೆ ಬೇಜಾರು
ಅಮ್ಮ ನೊಂದುಕೊಳ್ಳುತ್ತಾಳೆ
‘ಹೊಂದಿಸಿ ಬರೆಯುವುದು ಗೊತ್ತಲ್ಲವ ಪುಟ್ಟಾ?’
ಅಪ್ಪ ಗದರುತ್ತಾರೆ
ಕಣ್ಣು ದೊಡ್ಡದು ಮಾಡಿ
‘ಹೊಂದಿಕೊಳ್ಳುವುದೇ ಗೊತ್ತಿಲ್ಲದೇ
ಹೊಂದಿಸುತ್ತಾಳೆ ಹೇಗೆ?’
ಅಮ್ಮ ನೊಂದುಕೊಳ್ಳುತ್ತಾರೆ

ಹತ್ತೇ ನಿಮಿಷ ಬಾಕಿಯಿದೆ
‘ಅ’ ಪಟ್ಟಿಯದೀಗ ‘ಬಿ’ ಪಟ್ಟಿಗೆ
ಹೊಂದಿಕೆಯಾಗುತ್ತಲೇ ಇಲ್ಲ
ಆದರೂ ಹೊಂದಿಸಿ ಬರೆಯಲೇಬೇಕೀಗ
ನೂರಕ್ಕೆ ನೂರು ಬೇಕೆಂದರೆ

ಹೇಗಾದರೂ ಹೊಂದಿಸಬೇಕು
ಸರಿ ತಪ್ಪನ್ನು ಪರಿಶೀಲಕರು ನೋಡಿಕೊಳ್ಳುತ್ತಾರೆ
ಮಾರ್ಕ್ಸ್ ಕಾರ್ಡು ಅಮ್ಮ ಓದುತ್ತಾರೆ
ನೂರಕ್ಕೆ ನೂರಿದ್ದರೆ ಅಪ್ಪ ಸಹಿ ಹಾಕುತ್ತಾರೆ
ನಾನು ಹೊಂದಿಸಬೇಕು

ಹತ್ತೇ ನಿಮಿಷ ಬಾಕಿಯಿದೆ
ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು
ಓದುತ್ತಿದ್ದಾರೆ ದೊಡ್ಡದಾಗಿ ‘ಅನೌನ್ಸುಮೆಂಟು’
ಕೊನೆಯ ಮುಖ್ಯಪ್ರಷ್ನೆಯ ‘ಹೊಂದಿಸಿ ಬರೆಯಿರಿ’
ನೀವು ಬರೆಯಬೇಕಿಲ್ಲ
ತಪ್ಪು ಪ್ರಕಟವಾಗಿದೆ ಪ್ರಷ್ನೆ
ಕೊಡುತ್ತಾರೆ ನಿಮಗೆ
ಬರೆಯದಿದ್ದರೂ ಆ ಪ್ರಷ್ನೆಗೆ
ಪೂರ್ತಿಗೆ ಪೂರ್ತಿ ಮಾರ್ಕ್ಸು!

ನೂರಕ್ಕೆ ನೂರಾದರೆ ಮಾರ್ಕ್ಸು
ಅಮ್ಮ ಗೆಲುವಾಗುತ್ತಾರೆ
ಅಪ್ಪ ಗೆಲ್ಲುತ್ತಾರೆ
ಮತ್ತೆ ನಾನು ಲೈಬ್ರರಿಗೆ ಹೋಗಿ
ದಪ್ಪ ಪುಸ್ತಕಗಳನ್ನು ಓದುತ್ತಿದ್ದಂತೆಯೇ
ದಿನ ಬೆಳಗಿನ ಕನಸು
ದಿನವಿಡಿಯ ವಾಸ್ತವ

ಆದರೂ ಕೆಲವೊಮ್ಮೆ ಕನಸು
ಬೆಚ್ಚಿಬೀಳುತ್ತೇನೆ
ನೂರಕ್ಕೆ ಒಂದೇ ಒಂದು ಮಾರ್ಕ್ಸು ಕಮ್ಮಿ
ಬರೇ ತೊಂಬತ್ತೊಂಬತ್ತು
ಅಪ್ಪನ ಕಣ್ಣು ಕೆಂಪು ಕೆಂಪು
ಕಾರಣ ಅಮ್ಮನಿಗೂ ಗೊತ್ತು
ನನ್ನ ಕಣ್ಣೂ ಕೆಂಪೂ
ಅತ್ತೂ ಅತ್ತು.

February 10, 2011

ಊರ ಬಾಗಿಲಿಂದ ಹಂಗೇ ಕೆರೆ ಏರಿ ಮೇಲೆ...

ನೋಡು ಹಿಂಗೇ ನಡೀತಾ ನಡೀತಾ ಸಾಗ್ತೀವಲ್ಲ ಹಂಗೇ ಜೀವನ. ಎಷ್ಟು ಬೇಗ ಇಲ್ಲಿತನಕ ತಲುಪಿದ್ವಿ. ಇನ್ನೊಂಚೂರು ನಡಿ ಸಾಕು, ಮನೆ ಬಂದು ಬಿಡತ್ತೆ.
ಯೋಚ್ನೆ ಮಾಡಿದ್ರೆ ನಗುಬರತ್ತೆ, ಒಂದೊಂದ್ಸಲ ಬೇಜಾರಾಗತ್ತೆ. ಹಳೇದನ್ನೇ ಯೋಚ್ನೆ ಮಾಡಿದ್ರೂ ಸಾಕು, ಎಷ್ಟೆಲ್ಲ ಅರ್ಥ ಸಿಗತ್ತೆ ಆ ಹಳೇ ಮಾತಿಗೆ.
ನಂಗಿನ್ನೂ ನೆನಪಿದೆ, ಯಾವುದೂ ಮರೆಯೋದೇ ಇಲ್ಲ. ಅಲ್ಲಿ ಪಣತದ ಮನೆ ಹತ್ರ ಬಾಗಿಲು ಇತ್ತಲ್ಲ, ಹಂಗೇ ಎರಡೇ ಎರಡು ಹೆಜ್ಜೆಗೆ ಕೊಟ್ಟಿಗೆ ಮೆಟ್ಟಿಲು. ನಾನಾಗ ಏಳನೇ ಕ್ಲಾಸು ಅನ್ಸತ್ತೆ. ಎಷ್ಟು ಖುಷಿಯಾಗಿ ಆಡ್ಕೊಂಡು, ಬರ್ಕೊಂಡು, ತಿಂದ್ಕೊಂಡು, ಚಂದಮಾಮ, ಬಾಲಮಂಗಳ ಓದ್ಕೋಂಡು ಹಾಯಾಗಿದ್ವಿ. ಶನಿವಾರ ಮಧ್ಯಾಹ್ನ ಇರ್ಬೇಕು, ಸ್ಕೂಲಿನ ಹೋಮವರ್ಕು ಗೀಮ್ ವರ್ಕೆಲ್ಲ ಮುಗಿಸ್ಕೊಂಡು ಅಲ್ಲೆಲ್ಲೋ ಬುಟ್ಟೀಲಿ ಒಣಗೋಗಿದ್ದ ಜೇಡಿಮಣ್ಣು ನೆನ್ಪಾಗಿ ಅಜ್ಜಿ ಹತ್ರ ಹಠ ಮಾಡಿ ಅದನ್ನ ತೆಗಿಸಿಟ್ಕೊಂಡು ನೀರು ಹಾಕಿ ಮೆತ್ತಗೆ ಮಾಡಿ ಎರಡೂ ಕೈಯಿಂದ ಕಲ್ದೂ ಕಲ್ದೂ ಹದ ಮಾಡೋಷ್ಟರಲ್ಲಿ ಹದಾ ಹೊತ್ತಿಗೆ ನೀ ಬಂದಿದ್ದೆ. ನಿಂಗೆ ನೆನಪಿರ್ಲಿಕ್ಕಿಲ್ಲ, ನಂಗೆ ನೆನಪಿದೆ.

ಓದೋದ್ರಲ್ಲಿ ಸಿಕ್ಕಾಪಟ್ಟೆ ಹುಷಾರು ನೀನು. ನಾನು ಏಳನೇ ಕ್ಲಾಸು ಓದ್ತಿದ್ದೆ ಅನ್ಸತ್ತೆ, ನೀನಾವಾಗ ಎರಡನೇ ಕ್ಲಾಸು ಇದ್ದಿರ್ಬಹುದು. ಎಲ್ಲಿದ್ರೂ ಆಡೋಕೆ ಅಂತ ನೀನು ನನ್ನ ಹುಡ್ಕೊಂಡು ಬರ್ತಿದ್ದೆ. ನಾನು ನಿನ್ನ ಹುಡ್ಕೊಂಡು ಬರ್ತಿದ್ದೆ, ಆದ್ರೆ ನಿನ್ನನ್ನೇ ಹುಡ್ಕೊಂಡು ಬಂದೆ ಅನ್ನೋದನ್ನ ನಾನು ಹೇಳ್ತಿರಲಿಲ್ಲ, ನಿಂಗೇ ನಿಂಗಾಗಿ ಅದು ಅರ್ಥ ಆಗ್ತಿರಲಿಲ್ಲ. ಮಣ್ಣಿಂದ ಒಲೆ ಮಾಡಿದ್ವಿ. ಪಾತ್ರೆ ಮಾಡಿದ್ವಿ. ‘ಅಕ್ಕಾ... ಅಡುಗೆ ನೀನ್ ಮಾಡು, ನಾನು ಅಂಗಡಿಗೆ ಹೋಗಿ ಸಾಮಾನು ತರ್ತೀನಿ’ ಅಂದೆ. ಅಂಗಡಿಗೆ ಸಾಮಾನು ತರೋಕೆ ಅಂತ ಹೋದೋನು ವಾಪಸ್ಸು ಬರ್ದೇ ಹೋದ್ರೆ ಈ ಹೊತ್ತಿನ ಆಟ ಅರ್ಧಕ್ಕೇ ನಿಂತು ಹೋಗತ್ತಲ್ಲ ಅನ್ನೋ ಯೋಚ್ನೆ ಬಂದು ‘ಬೇಡ, ಈವತ್ತಿದರಲ್ಲಿ ಅಡುಗೆ ಮಾಡೋಕೆ ಆಗಲ್ಲ, ಇದಿನ್ನೂ ಹಸೀದು, ಒಲೆನೂ ಹಸಿದೇ, ಪಾತ್ರೆನೂ ಹಸೀದು. ಇದ್ರಲ್ಲಿ ಏನಾರ ತುಂಬಿದ್ರೆ ಹಂಗೇ ಅಂಟಿಕೊಂಡುಬಿಡತ್ತೆ’ ಅಂದೆ ನಾನು. ನಿಂಗೂ ಹೌದು ಅಂತ ಅನ್ನಿಸೋ ಹೊತ್ತಿಗೆ ಅನ್ನ ಮಾಡೋಕೆ ಅಂತ ನಾನು ಮಾಡಿಟ್ಟ ಪಾತ್ರೇನ ನೀನು ಹಿಡಕೊಂಡು ನೈಸು ಮಾಡ್ತಾ ಇದ್ದೆ. ಹಂಗೇ ನೀನು ಯಾವ್ದೋ ಯೋಚ್ನೆಲ್ಲಿ ಒಂದು ಮಾತು ಹೇಳ್ದೆ ಸಣ್ಣಗೆ ಉಸಿರಂತೆ ಬಂದಂಥ ಧ್ವನೀಲಿ. ‘ನಮ್ಮಮ್ಮ ನಿನ್ನೆ ಏನು ಹೇಳಿದ್ರು ಗೊತ್ತಾ? ಅಮ್ಮಂಗೆ ಬೇಜಾರಂತೆ, ನನ್ನನ್ನೂ ಬಾವಿಗೆ ನೂಕಿ, ಅವಳೂ ಬಾವಿಗೇ ಇಳಿದುಬಿಡ್ತಾಳಂತೆ, ನಂಗೆ ಹೆದ್ರಿಕೆ ಅಕ್ಕ, ನಂಗೆ ಬಾವಿಗೆ ಬೀಳೋಕೆ ಇಷ್ಟ ಇಲ್ಲ.’

ಅಜ್ಜಿ ಅಷ್ಟ್ರಲ್ಲಿ ನನ್ನ ಊಟಕ್ಕೆ ಕರದ್ರು, ಊಟದ ಹೊತ್ತಲ್ಲಿ ಇಬ್ರೂ ಜೊತೇಲಿದ್ರೆ ನಿಮ್ಮನೆಯಾದ್ರೂ ಸರಿ, ನಮ್ಮನೆಯಾದ್ರೂ ಸರಿ ಒಟ್ಟಿಗೇ ಊಟಮಾಡ್ತಿದ್ವಿ ನೆನಪಿದೆಯ? ಆವತ್ತು ನಾನಿನ್ನ ಊಟಕ್ಕೆ ಕರೀಲಿಲ್ಲ. ‘ನಾನು ಊಟಮಾಡ್ಕೊಂಡು ಬರ್ತೀನಿ, ಸಂಜೆಗೆ ಆಡೋಣ, ಅಷ್ಟ್ರಲ್ಲಿ ಈ ಮಣ್ಣಿನ್ ಪಾತ್ರೆ ಎಲ್ಲ ಒಣಗಿರತ್ತೆ,’ ಅಂತ ಹೇಳಿ ಹೊರಟಿದ್ದೆ. ಆದ್ರೆ ನಾನು ಆವತ್ತು ಊಟ ಮಾಡ್ಲಿಲ್ಲ, ಒಂದೊಂದು ತುತ್ತು ಬಾಯಿಗೆ ಹಾಕೋಕೆ ಹೋದಾಗಲೂ ನೀನಾಡಿದ ಮಾತು ನೆನಪಿಗೆ ಬರ್ತಾ ಇತ್ತು. ನಂಗೂ ನಿಮ್ಮಮ್ಮ ಹೇಳಿದ್ದು ಇಷ್ಟವಾಗಿರ್ಲಿಲ್ಲ ಗೊತ್ತ? ನೀನು ಹೇಳಿದ್ದನ್ನ ನಾನು ಕೇಳಿಸಿಕೊಂಡಿರ್ಲಿಲ್ಲ ಅಂದುಕೋಬೇಡ, ಕೇಳಿಸಿಕೊಂಡಿದ್ದೆ, ಮಾತಾಡಿರ್ಲಿಲ್ಲ ಅಷ್ಟೇ. ಊಟಾನೂ ಮಾಡಿರ್ಲಿಲ್ಲ.

ಆವತ್ತಿಡೀ ಹಿತ್ತಲಲ್ಲಿದ್ದ ಚಿಕ್ಕುಮರದಡಿಗೆ ಕೂತ್ಕೊಂಡು ಅತ್ತಿದ್ದೆ. ಚಿಕ್ಕು ಮರಕ್ಕೆ ಕೆಳಗಿಂದ ಮೊದಲನೇ ರೆಂಬೆ ನಂದು, ಎರಡನೆಯದು ಅವನದ್ದು, ಮೂರನೇಯದು ಅವಳದ್ದು, ನಾಲ್ಕನೆಯದು ಇವಳದ್ದು, ಐದನೇದು ಎತ್ತರದಲ್ಲಿರೋದು ನಿಂದು. ಯಾಕೇಂದ್ರೆ ನಿಂಗೆ ಮರ ಹತ್ತಿದ್ರೆ ಇಳಿಯೋಕೆ ಸಹ ಬರ್ತಿತ್ತು. ನಂಗೆ ಮರ ಹತ್ತೋಕೂ, ಇಳಿಯೋಕೂ ಬರ್ತಿರಲಿಲ್ಲ, ಅದಕ್ಕೇ ಕೆಳಾಗಿಂದ ಮೊದಲನೇ ರೆಂಬೆ ನಂದು ನಮ್ಮ ಟೀಮಿನ ಯಾರದ್ದೇ ಮನೆಯ ಯಾವುದೇ ಮರದಲ್ಲಿ. ಕೊನೇ ರೆಂಬೆ ನಿಂದು. ಎಲ್ರೂ ಒಟ್ಟು ಸೇರ್ದಾಗ ಅವರವರ ರೆಂಬೇಲಿ ಅವರವರು ಕೂತು ಸುಂದರ್ಶಿ ಮಾವಿನ್ ಕಾಯಿನೋ, ಪೇರಲೇ ಕಾಯಿನೋ ತಿಂತಾ ಮಾತಾಡ್ತಿದ್ವಿ. ಆವತ್ತಿಡೀ ಒಬ್ಬಳೇ ಚಿಕ್ಕು ಮರದಡಿಗೆ ಕೂತು ಅತ್ತಿದ್ದೆ. ನೀನು ಸಂಜೆ ನನ್ನ ಹುಡ್ಕೊಂಡು ಬಂದಾಗಲೂ ನಾನು ಅಲ್ಲೇ ಇದ್ದೆ. ನೀನು ಬಂದಿದ್ದು ನಂಗೆ ಗೊತ್ತಾಗಿತ್ತು. ಆದ್ರೆ ನಿನ್ನೆದುರು ಅತ್ತು, ನಿನ್ನನ್ನ ಇನ್ನಷ್ಟು ಹೆದ್ರಿಸಬಾರ್ದು ನೋಡು ಅದಕ್ಕೇ ನಾನು ಅಲ್ಲೇ ಇದ್ರೂ ಮಾತಾಡಿರ್ಲಿಲ್ಲ. ಆದ್ರೆ ನೀನಿಲ್ದೇ ನನ್ನ ಸಂಜೆಯ ಹೊತ್ತನ್ನ, ಆಟಗಳನ್ನ ಕಲ್ಪಿಸಿಕೊಳ್ಳೋಕೆ ನಂಗೆ ಸಾಧ್ಯ ಇರ್ಲಿಲ್ಲ. ನೀನು ಹೋದ್ಮೇಲೆ ಮತ್ತೆ ಬೇಜಾರಾಯ್ತು. ನೀನು ಏನಾದ್ರೂ ಹೇಳೋಕೆ ಅಂತ ಬಂದಿದ್ರೆ... ನಾಳೆ ನೀನು ಆಡೋಕೆ ಬರದೆಲೇ ಹೋದ್ರೆ...
ಓಡಿ ಬಂದು ಎದುರಿಗಿನ ಅಂಗಳಕ್ಕೆ ಬರೋಷ್ಟರಲ್ಲಿ ನೀನು ನಡೆದಿದ್ದೆ.

ನಾಳೆ ಆಡೋಕೆ ಬಂದ್ಯಲ್ಲ, ಆವಾಗ ಸಖತ್ ಖುಷಿಯಾಗಿತ್ತು. ಭಾನುವಾರನೂ ಆಗಿತ್ತು, ದಿನ ಪೂರ್ತಿ ಆಡಿದ್ವಿ, ಒಟ್ಟಿಗೇ ಊಟ ಮಾಡಿದ್ವಿ. ನಾನು ಯಾವಾಗಾಲೂ ನಿನ್ ಜೊತೆ ಇರ್ತೀನಿ, ನಿಂಗೆ ಭಯವಾದಾಗೆಲ್ಲ ನನ್ನ ನೆನಪು ಮಾಡ್ಕೋ, ನಿನ್ನ ಜೊತೇಲೇ ಇರ್ತೀನಿ ಅಂತ ನಾನು ನಿಂಗೆ ಹೇಳಿದ್ದೆ. ನೆನಪಿದೆಯ? ಒಂದಿಷ್ಟು ನೆನಪು ಮಾಡ್ಕೊಳ್ತಾ, ಒಂದಿಷ್ಟು ಮರೀತಾ ನಾನು ಕಾಲೆಜಿಗೆ ಸೇರ್ಕೊಂಡ್ರೂ ನೀನು ಇನ್ನೂ ಏಳನೇ ಕ್ಲಾಸೇ ಮುಗ್ಸಿರ್ಲಿಲ್ಲ.

ಗೊಂಬೆ ಆಟ, ಮಣ್ಣಾಟ, ಎಲ್ಲಾ ಬಿಟ್ಟು ಕ್ರಿಕೆಟ್ಟು ಆಡ್ತಿದ್ವಿ. ನಾನು ಮತ್ತೂ ನನ್ನಷ್ಟಕ್ಕೇ ಆಗೋಗ್ತಿದ್ದ ವಯಸ್ಸು ಅದು. ಯಾರ ಜೊತೇಲೂ ಮಾತಾಡ್ದೇ ನಾನಾಯ್ತು, ಓದೋದಾಯ್ತು, ಬರೆಯೋದಾಯ್ತು ಅಂದ್ಕೊಂಡು ಮೆತ್ತಿಯಲ್ಲೇ ಕೂತಿರ್ತಿದ್ದೆ. ಸಂಜೆ ಐದುಗಂಟೆಗೆ ನೀನು ಬಂದು ಕ್ರಿಕೆಟ್ಟು ಆಡೋಕೆ ಕರದ್ರೆ ಆಗ ಮೆತ್ತಿಯಿಂದ ಇಳ್ದು ಕೆಳಗೆ ಬರ್ತಿದ್ದೆ ನಾನು. ಒಟ್ಟಿಗೇ ಕ್ರಿಕೆಟ್ಟು ಆಡ್ತಾ ಆಡ್ತಾ ಬಸ್ಸು ಬಂದ ಶಬ್ದ ಕೇಳ್ತು ಅಂದ್ರೆ ಆರು ಗಂಟೆ ಆಗೋಗಿರ್ತಿತ್ತು. ಆಟ ನಿಲ್ಸಿ, ಬಸ್ಸಿಂದ ಯಾರ್ಯಾರು ಇಳಿದ್ರು ಅಂತ ನೋಡ್ಕೊಂಡು ಹಂಗೇ ಕೆರೆಏರಿ ಮೇಲೆ ವಾಕಿಂಗಿಗೆ ಹೋಗೋದು ಏನು ಖುಷಿಯಾಗ್ತಿತ್ತು. ಕೆರೆಏರಿ ಮೇಲೆ ಹೋದಾಗ ಏನೇನು ಮಾತಾಡ್ತಿದ್ವಿ ಅಂತ ನೆನಪಾಗ್ತಿಲ್ಲ. ಸೂರ್ಯ ಇಳಿಯೋದು ನೋಡೋಕೆ ಚಂದ ಕಾಣ್ತಿತ್ತು. ಒಂದೊಂದ್ಸಲ ಸೂರ್ಯ ಆ ಕಡೇ ಕೆರೆಯೊಳಗೆ ಇಳೀತಿದ್ದ ಹಂಗೇ ಈ ಕಡೆ ತೋಟದ ಮೇಲಿಂದ ಚಂದ್ರ ಕಾಣ್ತಿದ್ದ, ಅದೊಂಥರ ಮಜ ಅನ್ನಿಸ್ತಿತ್ತು, ಆಶ್ಚರ್ಯನೂ ಆಗ್ತಿತ್ತು.

ನಾನು ಕಾಲೇಜಿಗೆ ಹೋಗೋಕೆ ಶುರುಮಾಡಿದ ದಿನಗಳಲ್ಲಿ ನಂಗೆ ಓರಗೆಯ ಹುಡುಗಿಯರು ಯಾರೂ ಇರ್ಲಿಲ್ಲ ಜೊತೇಲಿ. ನೀನು ನನ್ನ ಒಳ್ಳೇ ಫ್ರೆಂಡ್ ಆಗಿದ್ದೆ. ಹುಡುಗರ ಜೊತೆ ಆಡಿ ಬೆಳ್ದಿದ್ದಕ್ಕೇನೂ ಇವತ್ತೀಗೂ ನಂಗೆ ಹುಡುಗರು ಹುಡ್ಗೀರು ಅನ್ನೋ ತಾರತಮ್ಯವೇ ಬರ್ಲಿಲ್ಲ. ಸಾದಾ ಸೀದಾ ಮಾತಾಡೋ ಹುಡುಗರೇ ಕೆಲ ಹುಡಿಗೀರಿಗಿಂತ ಜಾಸ್ತಿ ಇಷ್ಟವಾಗ್ತಾರೆ. ನಿನ್ನ ಓರಗೆಯ ಹುಡುಗರಲ್ಲಿ ನೀನೇ ಕಾಣಿಸ್ತೀಯ.

ಕೆರೆಯೇರಿಯ ಈಚೆಯ ದಿಬ್ಬದ ಕಲ್ಲಿನ ಮೇಲೆ ಅಪ್ಪಳಿಸಿ ಕೂತು ಸೂರ್ಯಾಸ್ತ ನೋಡಿ ಎದ್ದು ಬರೋವಾಗ ಬಟ್ಟೆಗೆ ಅಂಟಿಕೊಂಡಿರ್ತಿದ್ದ ಮಣ್ಣನ್ನ ಸಲೀಸಾಗಿ ಹೇಗೆ ಒರೆಸಿಕೊಳ್ಳೋದು ಅನ್ನೋದನ್ನ ಕಲಿಸಿಕೊಟ್ಟಿದೀಯ. ನೀನು ನಂಗೆ ಇಷ್ಟವಾಗ್ತಿದ್ದೆ. ನಮ್ಮಿಬ್ಬರ ನಡುವಿನ ದೂರದೆಳೆಯ ಆ ರಕ್ತ ಸಂಬಂಧಕ್ಕಿಂತ ನಂಗೆ ನಿನ್ನ ಒಡನಾಟ ಇಷ್ಟವಾಗೋದು. ಆಮೇಲಾಮೇಲೆ ಇಬ್ಬರೂ ಸುಮ್ಮ್ ಸುಮ್ನೆ ಖುಷಿಯಾಗಿರ್ತಿದ್ವಿ. ಹಂಚಿಕೊಳ್ಳೋಕೆ ಬೇಜಾರು ಅನ್ನೋ ಪದವೇ ಇರ್ಲಿಲ್ಲ. ಬೇಕಂತಲೆ ಹಿಂಗೆ ಮಾಡ್ತಿದ್ವ? ಅಂಥ ಭಾನುವಾರಗಳು ಮತ್ತೆ ಸಿಗತ್ವ? ಆವಾಗೆಲ್ಲ ಜೊತೆಯಲ್ಲಿ ಯಾರಾದ್ರೂ ಇರ್ಬೇಕು ಅಂತ ಅಂದುಕೊಳ್ತಿದ್ದರೆ ಅದು ನೀನು. ಎಲ್ಲಿಗೋ ಹೋಗ್ಬೇಕು ಅನ್ನಿಸಿದ್ರೆ ಅದು ಕೆರೆಯೇರಿ.
ಈಗಲೂ ಹಂಗೇ.

ಈ ಸಲ ರಾಣಿ ಮಹಲ್ ತನಕ ನಡ್ಕೊಂಡು ಹೋಗಿದ್ದೆ. ಇನ್ನೂತನಕ ರಾಣಿಮಹಲ್ಲೇ ನೋಡಿರ್ಲಿಲ್ಲ. ಆ ಸುತ್ತಲ್ಲಿ ನಡಕೊಂಡು ಹೋಗೋವಾಗ ನಂಗೆ ನೀನು ನೆನಪಾದೆ. ಯಾರೋ ಅಕ್ಕಾ ಅಂದ್ರೆ ನೀನೇ ಕೂಗಿದಂಗೆ ಕೇಳಿಸ್ತು. ಜೊತೇಲಿ ಸುಮ್ ಸುಮ್ನೆ ಖುಷಿಯಾಗೊಕೆ ನಗೋಕೆ ನೀನೂ ಇರ್ಬೇಕಾಗಿತ್ತು ಅನ್ನಿಸ್ತು. ರಾಣಿಮಹಲ್ ಎದ್ರಿಗೆ ಅಮಟೆ ಮರ ಇದೆ, ಕಾಯಿ ಕಾಯಿ ಗೊಂಚಲು ಗೊಂಚಲು ಗೊತ್ತ? ನೀನಿದ್ರೆ ಒಂದಿಷ್ಟು ಅಮಟೆಕಾಯಿ ಕೊಯ್ದುಕೊಡ್ತಿದ್ದೆ ಅನ್ನಿಸ್ತು. ದಾರೀಲಿ ಬರೋವಾಗ ಊದ್ದಕ್ಕೂ ಪೈನಾಪಲ್ ತೋಟ. ನೀನಿದ್ದಿದ್ರೆ ಒಂದಾದ್ರೂ ಹಣ್ಣು ಕೀಳ್ದೇ ಬರ್ತಿದ್ಯ? ಜೊತೇಲಿ ನೀನಿರಬೇಕಾಗಿತ್ತು ಅನ್ನಿಸಿತು. ಬೇಜಾರೇ ಇಲ್ದೇ ಸುಮ್ಮ್ ಸುಮ್ನೇ ಖುಷಿಯಾಗ್ಬಹುದಿತ್ತು. ಸುಮ್ ಸುಮ್ನೇ ನಗ್ಬಹುದಿತ್ತು ಅನ್ನಿಸ್ತು ಅಲ್ಲಿಂದಿಲ್ಲಿಗೂ.

ದಾರಿಯುದ್ದಕ್ಕೂ... ದಾರಿಯುದ್ದಕ್ಕೂ ಎಲ್ರೂ ಜೊತೇಲೇ ಇರ್ಬೇಕು ಅಂದ್ರೆ ನಂದೂ ಒಂಥರಾ ಅತಿಯಾಸೆ ಬಿಡು. ಆದ್ರೂ ಒಂದ್ಸಲ ಜೊತೇಲಿ ಕೆರೆ ಏರಿಮೇಲೆ ವಾಕಿಂಗಿಗಾದ್ರೂ ಹೋಗ್ಬಹುದಿತ್ತು. ಆ ಕಡೇ ದಿಬ್ಬದ ಕಲ್ಲಿನ ಮೇಲೆ ಮಾತೇ ಆಡದೇ ಒಂದಿಷ್ಟು ಹೊತ್ತು ಕೂತಿರಬೇಕಿತ್ತು. ಐದು ಗಂಟೆ ಆದತಕ್ಷಣ ಕ್ರಿಕೆಟ್ ಆಡೋಕೆ ಕರೆಯೋಕೆ ಅಂತ ನೀನು ಬರ್ಬೇಕಾಗಿತ್ತು ಮತ್ತೆ ಒಂದೇ ಒಂದು ಬಾರಿಗೆ. ಒಂದೇ ಒಂದು ಬಾರಿಗೆ ಒಣಗಿದ ಜೇಡಿಮಣ್ಣಿಗೆ ಇಬ್ಬರೂ ಸೇರಿ ನೀರು ಚಿಮುಕಿಸಿ ಒದ್ದೆಯಾಗಿಸಿ, ಒಣಮಣ್ಣ ಮೆತ್ತಗಾಗಿಸಿ ಆವತ್ತು ಮಾಡಿದ್ದೆವಲ್ಲ ಅಂತದೇ ಪಾತ್ರೆ ಮಾಡೋಕೆ ಸಾಧ್ಯವ ಅಂತ ಪ್ರಯತ್ನಿಸಬಹುದಿತ್ತು. ನನ್ನ ಕರೆಯೋಕೆ ಅಂತ ನೀನು ಬರಬೇಕಿತ್ತು. ಕರೆದ ತಕ್ಷಣ ಊರ ಬಾಗಿಲಿಂದ ಹಂಗೇ ಕೆರೆಯೇರಿ ಮೇಲೆ ಹೋಗಿಬರಬೇಕಿತ್ತು.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.