December 20, 2010

ನನ್ನ ಅಂಗಳದಲ್ಲಿ ‘ಮೌನಿ’ಯ ಜೊತೆಗೆ ‘ಆಕಾಶ ಮತ್ತು ಬೆಕ್ಕು’ಭಾವಿಕೆರೆ ಕುಪ್ಪಣ್ಣಭಟ್ಟರ ಹಾಗೂ ಸೀಬಿನಕೆರೆ ಅಪ್ಪಣ್ಣಭಟ್ಟರ ನಡುವಿನ ಅಗಮ್ಯ ಹಗೆಯ ಹೊಗೆಯಾಟದ ಕತೆಯಾಗಿ ‘ಮೌನಿ’ ಸಾಗುತ್ತದೆ. ಕೇವಲ ಒಂದು ಬೇಲಿಯ ಆಚೀಚಿನ ಮೌನ ಮಾತುಗಳ ನಡುವಿನ ಹೋರಾಟವಾಗಿ ಈ ಕತೆ ಕೊನೆಯಲ್ಲಿ ಮಾತಿನ ಸಂಧಾನವಾಗಿ, ಮೌನಕ್ಕೆ ಸಿಕ್ಕ ಜಯವಾಗಿ ಅಂತ್ಯವಾಗುತ್ತದೆ.

ಮೌನಿ ಕಥೆಯೊಳಗೆ ಇಬ್ಬರು ವ್ಯಕ್ತಿಗಳ ನಡುವಿನ ಹಗೆಯೇ ಮುಖ್ಯ ನಾಯಕನಂತೆ ವಿಜೃಂಭಿಸುತ್ತದೆ. ಶ್ರೀ ಅನಂತಮೂರ್ತಿಯವರೇ ಬರೆದ ‘ಆಕಾಶ ಮತ್ತು ಬೆಕ್ಕು’ ಇದಕ್ಕಿಂತ ತೀರ ಭಿನ್ನವಾಗಿರುವುದು ಆರಂಭದಲ್ಲಿಯೇ ಅರಿವಾಗುತ್ತದೆ. ಇಲ್ಲಿ ಪ್ರತಿಪಾತ್ರ ಹಾಗೂ ಆ ಪಾತ್ರವು ಹೊತ್ತ ಭಾವನೆಗಳು ಲೌಕಿಕ ಭಾವನೆಗಳಾಗಿ ತೋರಿದರೂ ಸಹ ಅದೇ ಕಾರಣಕ್ಕೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ.

‘ಮೌನಿ’ ಕಥೆಯಲ್ಲಿನ ‘ಇಬ್ಬರೂ ಕೈಲಿ ಬರಿಯ ತೀರ್ಥದ ಬಟ್ಟಲು ಹಿಡಿದು ಘಟ್ಟದ ಕೆಳಗಿನಿಂದ ದುಗ್ಗಾಣಿಯಿಲ್ಲದೆ ಅಡಿಕೆ ತೋಟ ಮಾಡಲು ಬಂದವರು.’ ಎಂಬ ವಾಕ್ಯವು ಘಟ್ಟದ ಕೆಳಗಿನಿಂದ ಬಂದ ಅಪ್ಪಣ್ಣಭಟ್ಟರು ಹಾಗೂ ಕುಪ್ಪಣ್ಣಭಟ್ಟರು ಬರಿಗೈಲಿ ಘಟ್ಟದ ಮೇಲೆ ಬಂದವರೆಂಬುದನ್ನು ಸೂಚ್ಯವಾಗಿ ಹೇಳುತ್ತದೆ. ಘಟ್ಟದ ಮೇಲೆ ಬಂದು ಶ್ರೀ ಮಠದ ನರಸಿಂಹ ದೇವರುಗಳ ಒಕ್ಕಲಾಗಿ ಜೀವನ ಸಾಗಿಸುತ್ತಾರೆ. ಕಥೆಯು ಬರಿಯ ಕಥೆಯಾಗಿರದೇ ಅಲ್ಲೆಲ್ಲೋ ಸುತ್ತೂರುಗಳಲ್ಲೊಂದೂರಲ್ಲಿ ನಡೆದೇ ಇರಬೇಕು ಎನ್ನಿಸುವಷ್ಟರ ಮಟ್ಟಿಗೆ ನೈಜವಾಗಿ ಕಣ್ಮುಂದೆ ಬರುತ್ತದೆ.

ಪುಟ್ಟ ಊರೊಂದರಲ್ಲಿನ ಪರಸ್ಪರ ವಿರುದ್ಧ ವ್ಯಕ್ತಿತ್ವದ ಇಬ್ಬರು ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ಕಥೆ ಚಲಿಸುತ್ತದೆ. ಯಾವುದೇ ಚಾಣಾಕ್ಷತನವಿಲ್ಲದೆ ತೀರ ಆಸಕ್ತಿಯೂ ಇರದೆಯೋ, ಕಳಕೊಂಡವರಾಗಿಯೋ ಇದ್ದಂತಹ ಕುಪ್ಪಣ್ಣಭಟ್ಟರ ಜೀವನ ಸಾಗುತ್ತಲಿರುತ್ತದೆ. ಆದರೆ ಅಪ್ಪಣ್ಣ ಭಟ್ಟರು ಜೀವನವನ್ನು ಸಾಗಿಸುತ್ತಲಿರುವಂಥ ವ್ಯಕ್ತಿಯಾಗಿ ತೋರಿಬರುತ್ತಾರೆ. ತಮ್ಮಲ್ಲಿರುವ ಚಾಣಾಕ್ಷತನವನ್ನು ಉಪಯೋಗಿಸಿಕೊಳ್ಳುವುದನ್ನೂ ಅರಿತ ವ್ಯಕ್ತಿ ಅಪ್ಪಣ್ಣಭಟ್ಟರು. ಅಲ್ಲದೇ ಪರರಲ್ಲಿನ ಕೊರತೆಯನ್ನೂ, ದೌರ್ಬಲ್ಯವನ್ನೂ ಉಪಯೋಗಿಸಿಕೊಂಡು ತಮ್ಮ ಶಕ್ತಿಯನ್ನು ಇಮ್ಮಡಿಯಾಗಿಸಿಕೊಳ್ಳುವುದನ್ನೂ ಬಲ್ಲವರು. ಹೀಗಿರುವಂಥ ಅಪ್ಪಣ್ಣ ಭಟ್ಟರು ಹಾಗೂ ಕುಪ್ಪಣ್ಣಭಟ್ಟರುಗಳ ಕಥೆಯೇ ‘ಮೌನಿ’.

‘ಕುಪ್ಪಣ್ಣಭಟ್ಟರು ವಯಸ್ಸಿನಲ್ಲಿ ಹಿರಿಯರು. ಅವರು ಕಳೆದ ಐವತ್ತು ಸಂವತ್ಸರ ಒಣಗಿದ ಹುಳಿ ಮಾವಿನ ಹಣ್ಣಿನಂತಹ ಅವರ ಮುಖದಲ್ಲಿ ಎದ್ದು ಕಾಣುತ್ತದೆ.’- ಅನಂತಮೂರ್ತಿಯವರು ಕುಪ್ಪಣ್ಣಭಟ್ಟರ ಮುಖವನ್ನು ವರ್ಣಿಸುವಾಗ ಒಬ್ಬ ವ್ಯಕ್ತಿಯ ಮುಖವು ಆತನ ಭೂತಕಾಲವನ್ನೂ ಸಾರುತ್ತದೆ ಎಂದೆನ್ನಿಸುವ ಜೊತೆಗೆ ‘ಮುಖವೇ ಮನಸಿನ ಕನ್ನಡಿ’ ಎಂಬ ಮಾತು ಸಹ ನೆನಪಿಗೆ ಬಾರದೇ ಇರಲಾರದು.

ಒಂದುಕಾಲದಲ್ಲಿ ಮಿತಭಾಷಿಯಾದರೂ ಅತೀ ನೇರ ಮಾತುಗಳನ್ನಾಡುತ್ತಿದ್ದ ಕುಪ್ಪಣ್ಣಭಟ್ಟರು ಕೊನೆಕೊನೆಯಲ್ಲಿ ಮೌನಿಯೇ ಆಗಿಬಿಡುತ್ತಾರೆ, ಬದುಕಿನ ಪರಿಸ್ಥಿತಿ ತಂದುಕೊಡುವ ಅನಿವಾರ್ಯ ಮೌನವೋ ಎನ್ನುವಂತೆ. ‘ಕಪ್ಪಗೆ ಕುಳ್ಳಗೆ ಕೃಶವಾದ ಅವರ ಶರೀರ ಮಾತ್ರ ದಿನಗಳೆದಂತೆ ಸೊರಗುತ್ತಿದೆ. ಉಳಿದ ಮರ್ಜಿಯಲ್ಲೇನು ಬದಲಿಲ್ಲ. ಅದೇ ಹೊಳೆಯುವ ಬೋಳುತಲೆ, ಒಂದು ಕಾಲದಲ್ಲಿ ಸದಾಸಿಡುಕಿನ, ಈಗ ಮಂಕಾಗಿ ಉರಿಯುವ ಸಣ್ಣ ಕಣ್ಣುಗಳು. ಗುಜ್ಜ ಮೂಗು. ದಿಂಡು ಮಾವಿನ ಮೂತಿಯ ಗದ್ದ. ಉಟ್ಟ ಪಂಚೆ ಹೊದ್ದ ದೋತ್ರಗಳ ಮೇಲೆ ಅವರ ಸಾಲದಂತೆಯೇ ವರ್ಷಾಂತರದಿಂದ ಉಳಿದು ಬಂದ ಬಾಳೆ ಕರೆ. ಅಡಿಕೆ ಕರೆ. ಬಾಯಿಯ ಒಂದು ಪಾರ್ಶ್ವದಲ್ಲಿ ಸದಾ ಒಂದು ಹೊಗೆಸೊಪ್ಪಿನ ಉಂಡೆ ಇದ್ದೇ ಇರಬೇಕು.’ - ಹೀಗೆ ಕಥೆಗಾರ ತನ್ನ ಕತೆಯ ಒಂದು ಪಾತ್ರವಾದ ಕುಪ್ಪಣ್ಣಭಟ್ಟರ ವ್ಯಕ್ತಿತ್ವನ್ನು ನಮಗೆ ಕಟ್ಟಿಕೊಡುತ್ತಾನೆ. ಈ ಕಥೆಯಲ್ಲಿ ಪ್ರತಿಯೊಂದು ಪಾತ್ರದ ಕಥೆಯನ್ನು ಕಥೆಗಾರನೇ ನಮ್ಮ ಮುಂದೆ ಇಡುತ್ತಾ ನಡೆಯುತ್ತಾನೆ. ಪ್ರತಿಯೊಂದು ಪಾತ್ರವೂ ಕಥೆಗಾರನ ಕಾಲ್ನಡಿಗೆಯ ಜೊತೆ ಸಾಗುತ್ತದೆ.ಅಪ್ಪಣ್ಣ ಭಟ್ಟರ ಪಾತ್ರವು ಕಥೆಯ ಅಂತ್ಯದತನಕ ಹಿನ್ನೆಲೆಯಲ್ಲೇ ಇದ್ದು ಅಂತ್ಯದಭಾಗದಲ್ಲಿ ಕುಪ್ಪಣ್ಣಭಟ್ಟರನ್ನು ಸಂಧಿಸುತ್ತಾ ನಮ್ಮೆದುರಾಗುತ್ತದೆ.

ಅಪ್ಪಣ್ಣಭಟ್ಟರು ಜಮೀನನ್ನು ತುಂಬ ಚೆಂದವಾಗಿ ನೋಡಿಕೊಳ್ಳುವುದಲ್ಲದೆ ಮಠಕ್ಕೆ ಒಪ್ಪಿಸಬೇಕಾದ ವರ್ಷದ ಕಂತನ್ನು ಒಪ್ಪಿಸಿಬಿಡುತ್ತಾರೆ. ಕುಪ್ಪಣ್ಣಭಟ್ಟರು ವರ್ಷದ ಕಂತನ್ನು ಸರಿಯಾಗಿ ಮಠಕ್ಕೆ ಕಟ್ಟಲಾರದೇ ಮೈಮೇಲೆ ಒಂದಿಷ್ಟು ಸಾಲ ಹೊತ್ತು ಕೂತವರಾಗಿರುತ್ತಾರೆ. ಉಬ್ಬಸವಿರುವ ಹೆಂಡತಿ ಗೌರಮ್ಮನಂಥವರು ಪತಿಯ ಸರಾಗವಾದ ಉಸಿರಾದಾರು ಹೇಗೆ? ಸದಾ ಗೂರಲು ಹಿಡಿದ ಅವರು ಮೂಲೆಯಲ್ಲಿ ಕುಳಿತಿರುತ್ತಾರೆ. ವಯಸ್ಸಿಗೆ ಬಂದ ಮಗಳು ಭಾಗೀರತಿಯ ಮದುವೆಯ ಬಗೆಗಿನ ಚಿಂತೆ ಇವರ ಸಾಲದ ಭಾರಕ್ಕೆ ಇನ್ನಷ್ಟು ಭಾರಕೊಡಲು ಕಾಯುತ್ತಿರುತ್ತದೆ. ಜೊತೆಗೆ ಜ್ವರದಗಡ್ಡೆಯನ್ನು ಹೊಟ್ಟೆಯಳಗಿಟ್ಟುಕೊಂಡ ಐದು ವರ್ಷದ ಮಗ ಗಣಪನ ಹಸಿವು ಕುಪ್ಪಣ್ಣಭಟ್ಟರನ್ನು ಸದಾ ತಿನ್ನುತ್ತದೆ.

ಇಂತಹ ಎಲ್ಲ ಒತ್ತಡಗಳ ಮಧ್ಯೆ ಕುಪ್ಪಣ್ಣಭಟ್ಟರು ತಮ್ಮೊಳಗೆ ದಟ್ಟೈಸಿರುವ ಸಿಟ್ಟು, ಛಲ, ದಿಟ್ಟತನದಂತಹ ವ್ಯಕ್ತಿ ವೈಲಕ್ಷಣ್ಯಗಳನ್ನು ಬಿಟ್ಟುಕೊಡದೆ ಕೊನೆಯಲ್ಲಿ ಜಮೀನು, ಸಂಬಂಧಗಳು, ಸಂಸಾರ ಸಕಲವನ್ನೂ ಕಳೆದುಕೊಂಡವರಾಗಿ ತಮ್ಮ ಛಲಕ್ಕೆ ತಾವೇ ಸೋಲಲಾರದೇ ಮೌನವಾಗುತ್ತಾರೆ. ಒಬ್ಬ ವ್ಯಕ್ತಿಯ ಗೆಲುವು ಆ ವ್ಯಕ್ತಿಯು ಸಮಾಜಕ್ಕೆ ತನ್ನನ್ನು ಹೇಗೆ ಒಗ್ಗಿಸಿಕೊಂಡಿರುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆಯೆಂಬ ಅಂಶ ಈ ಕಥೆಯಲ್ಲಿ ಕಾಣುತ್ತದೆ. ಏಕೆಂದರೆ ಈ ಕಥೆಯಲ್ಲಿ ಕುಪ್ಪಣ್ಣಭಟ್ಟರ ಮೌನವು ಕೊನೆಯಲ್ಲಿ ನಾಯಕನಂತೆ ಭಾಸವಾದರೂ ಕಥೆಯೊಳಗೆ ಕಥೆಯೊಳಗಿನ ಸಾಮಾಜಿಕ ಸಂಬಂಧಗಳ ನಡುವಿನ ಏರುಪೇರು, ಈ ಸಂಬಂಧಗಳನ್ನೇರ್ಪಡಿಸಲು ಬೇಕಾದ ಸಮಾಜದ ಪ್ರತಿಯೊಬ್ಬನ ಆಂತರಿಕ ವ್ಯತಿರಿಕ್ತತೆ ಕಥೆಗೆ ಆಧಾರವಾದದ್ದು ಕಾಣುತ್ತದೆ.

ಕಥೆಯೊಳಗಿನ ಪ್ರತಿಪಾತ್ರವೂ ನಾವಾಗಿ ಚಿಂತಿಸುವಂತೆ ಮಾಡುತ್ತದೆ. ಅಪ್ಪಣ್ಣಭಟ್ಟರ ಪಾತ್ರದೊಳಗೆ ಬದುಕುವ ಹುಮ್ಮಸ್ಸು ಬೆಳಕಿನಂತೆ ಬೆಳಗಿದರೆ ಕುಪ್ಪಣ್ಣಭಟ್ಟರ ಪಾತ್ರದೊಳಗೆ ಪ್ರತಿ ಹೆಜ್ಜೆ ಸಾಗುವ ಮಾರ್ಗವೂ ಮಸಿಯಂಟಿಸಿಕೊಂಡ ಲಾಟೀನು ಹಿಡಿದು ಕತ್ತಲಲ್ಲಿ ಪಯಣಿಸುವ ಪಯಣಿಗನ ಪಯಣದ ಹಾಗೆ. ಬೆಳಕಿದ್ದೂ ಸುತ್ತ ಬೆಳಕರಿಯದ ಹಾಗೆ ಮಾಡುವಂಥ ಶಕ್ತಿಯಾಗಿ ಪರಿಣಮಿಸುತ್ತದೆ.

ಬರಿಯೊಂದು ಬೇಲಿಯಾಚೆಗಿನ ಇಬ್ಬರ ತೋಟದ ಭೂಮಿ ಕೊಡುವ ಪ್ರತಿಫಲವೂ ಬೇರೆಯೇ. ಜೀವನ ಪೀತಿಯೆಂದರೆ ಬರಿ ತನ್ನನ್ನು ತಾನು ಪ್ರೀತಿಸಿಕೊಳ್ಳುವುದು ಮಾತ್ರವಲ್ಲ, ಸುತ್ತಲಿನ ಎಲ್ಲವನ್ನೂ ಪ್ರೀತಿಸುತ್ತ ಸಾಗಿದಾಗ ಸಿಗುವ ಪ್ರತಿಫಲದ ಪರಿಣಾಮ ಉಣಬಡಿಸಿದ ಪ್ರೀತಿಯ ತೂಕದಷ್ಟನ್ನೇ ಹಲವು ಬಾರಿ ತೂಗುತ್ತಲಿರುತ್ತದೆ. ಇದಕ್ಕೆ ಭೂಮಿತಾಯಿಯೂ ಹೊರತಲ್ಲ. ಜಮೀನನ್ನು ಸದಾ ಕಾಳಜಿಯಿಂದ ನೋಡಿಕೊಳ್ಳುವ ತೆಗೆದುಕೊಳ್ಳುವ ಅಪ್ಪಣ್ಣಭಟ್ಟರ ತೋಟವು ಒಳ್ಳೆಯ ಫಸಲುಭರಿತವಾಗಿದ್ದರೆ, ಆರೈಕೆಯನ್ನೇ ಕಾಣದ ಕುಪ್ಪಣ್ಣಭಟ್ಟರ ಜಮೀನು ಫಸಲು ಬರುವುದಿರಲಿ, ಕೊಳೆರೋಗ ಹಿಡಿದು ನೆಲದ ಪಾಲಾಗಿರುತ್ತದೆ.

‘ಭಾಗೀರತಿ ಅಡಿಗೆ ಮನೆಯಲ್ಲಿ ಹಸಿ ಸೌದೆಗೆ ಅಗ್ನಿ ಆವೇಶಿತನಾಗುವಂತೆ ಮಾಡಲು ಊದುಗೊಳವೆಯಲ್ಲಿ ಊದಿ ಊದಿ ಕೆಮ್ಮಿದಳು. ನೀರು ಹರಿದು ಹರಿದು ಒಣಗಿದ ಕಣ್ಣುಗಳನ್ನು ಸೆರಗಿನಿಂದ ಒರೆಸಿಕೊಂಡಳು. ಕೆದರಿದ ತಲೆಗೂದಲನ್ನು ನೇವರಿಸಿಕೊಂಡಿದ್ದಳು. ಬತ್ತಿದ ಕೆನ್ನೆಗಳ ಪೆಚ್ಚು ಮೋರೆಯನ್ನೆತ್ತಿ ನಡುಮನೆಗೆ ಬಂದು “ಅಮ್ಮ ಹುಳಿ ಮಾಡಲು ತೊಗರಿಬೇಳೆಯಿಲ್ಲ”ವೆಂದಳು. “ಸೌತೆ ಬೀಜದ ಸಾರು ಮಾಡು”ಎಂದರು, ಗೌರಮ್ಮ.’ - ಕಥೆಯೊಳಗಿನ ಇಂಥ ಸಾಲುಗಳು ಕುಪ್ಪಣ್ಣಭಟ್ಟರ ಸಂಸಾರದೊಳಗಿನ ಕೊರತೆಯ ಜಾಡನ್ನು ಹಿಡಿದೆತ್ತಿ ತೋರುವಲ್ಲಿ ಸಫಲವಾಗುತ್ತವೆ. ಅಲ್ಲದೇ ಹಸಿಯ ಸೌದೆಗೆ ಅಗ್ನಿ ಆವೇಶಿತನಾಗುವಂತೆ ಊದುತ್ತ ಕುಳಿತುಕೊಳ್ಳುವ ಪರಿಸ್ಥಿತಿಯಿದೆಯೆಂದರೆ ಮನೆಯೊಳಗೆ ಒಣಕಟ್ಟಿಗೆಯ ಸಂಗ್ರಹ ಇಲ್ಲವೆಂಬುದೇ ಅರ್ಥ. ಭವಿಷ್ಯದ ಬಗ್ಗೆ ಜಾಗ್ರತೆಯಿಲ್ಲದೆ ಬದುಕು ಸಾಗಿದರೆ ಬದುಕಿನ ಉದ್ದಕ್ಕೂ ಹಸಿಕಟ್ಟಿಗೆ ಊದಿ ಅದು ಉಗುಳುವ ಹೊಗೆಯನ್ನೇ ಉಣಬೇಕಾದೀತೆನ್ನುವ ಸಾರ ಕಥೆಯೊಳಗೆ ಸೂಚ್ಯವಾಗಿ ಕಂಡರೆ ಅದು ಕಥೆಗಾರನ ಸೂಕ್ಷ್ಮ ಹೆಣಿಗೆಯ ಜಾಣ್ಮೆ.

ಜೀವನದ ಮಧ್ಯಂತರದವರೆವಿಗೂ ಒಣಪ್ರತಿಷ್ಠೆ, ಅತೀಸ್ವಾಭಿಮಾನ, ನಿಷ್ಠುರ ಸ್ವಭಾವಗಳಿಂದಲೇ ಗೆಲುವು ಗಳಿಸಿಯೇನೆಂಬಂತೆ ನಡೆದು, ಏನೂ ಗಳಿಸಲಾಗದ ಮಧ್ಯಂತರದಲ್ಲಿ ಕಳೆದದ್ದನ್ನೆಲ್ಲ ಕೂಡುವ ಹಂಬಲ, ಪ್ರಯತ್ನಗಳ ಪ್ರತಿಫಲವು ಅಡಿಪಾಯವಿಲ್ಲದೇ ಮಧ್ಯಂತರದಿಂದಲೇ ಆರಂಭವಾಗುತ್ತದೆ. ಭದ್ರ ಬುನಾದಿಯಿಲ್ಲದ ತೂರಾಡುವ ಪ್ರಯತ್ನಕ್ಕೆ ತೂಗಾಡುವ ಫಲವೇ ಸಿಗುತ್ತದೆ. ಅಂತೆಯೇ ಒಣಪ್ರತಿಷ್ಠೆಯಿಂದ ಏನನ್ನೂ ಗಳಿಸಲಾಗದವರಾಗಿ ಕಳೆದುಕೊಂಡಿದ್ದೇ ಜಾಸ್ತಿಯೆನ್ನುವುದನ್ನು ಅರಿತ ಕುಪ್ಪಣ್ಣಭಟ್ಟರ ಆ ನಂತರದ ಪ್ರಯತ್ನಗಳೆಲ್ಲ ಸೋತು ಮೌನವಾಗುವ ಕಥೆಯೇ ಮೌನಿ.

‘ಗೊಬ್ಬರದ ಗುಂಡಿಯಿಂದೆದ್ದು ಬಂದ ನೊಣ ಮೂಗಿನ ಮೇಲೆ ಏರಿಕೂತು ಉರಿಯಿತು. ಅಟ್ಟಿದರೂ ಕಣ್ಣಿಗೆ ಕಟ್ಟುವ ನುಸಿ. ಉಶ್, ಎಂದರು. ಕಿವಿಯಲ್ಲಿ ಕರ್ಣಪಿಶಾಚಿಯಂತೆ ಕಾಡುವ ಸೊಳ್ಳೆ. ಅಂಗಳದ ಮೂಲೆಯಲ್ಲೊಂದು ಹಲಸಿನ ಸೇಡೆ ಒಣಗುತ್ತಿತ್ತು. ಗಾಳಿ ಬೀಸಿದರೆ ಕೊಟ್ಟಿಗೆಯ ನಾತ. ಜ್ವರಗಡ್ಡೆಯಿಂದ ಹೊಟ್ಟೆ ಡೊಳ್ಳಾದ ಐದು ವರ್ಷದ ಮಗ ಅಂಗಳದೊಂದು ಮೂಲೆಯಲ್ಲಿ ಬೆತ್ತಲೆ ಮೈಯಲ್ಲಿ ಕುಕ್ಕುರು ಕೂತಿದ್ದ. ಅಂಗಳದಲ್ಲಿದ್ದೊಂದು ಬೂದು ನಾಯಿ, ಬೂದಿ ಗುಡ್ಡೆಯ ಮೇಲೊರಗಿದ್ದೊಂದು ಕರಿ ನಾಯಿ ಕುಳಿತ ಹುಡುಗನಲ್ಲೆ ತದೇಕ ಮಗ್ನರಾಗಿದ್ದವು.’- ದಾರಿದ್ರ್ಯಕ್ಕೂ ಅಶುಭ್ರ ವಾತಾವರಣಕ್ಕೂ ಇರುವ ಒಂದು ಅಂಟಿನ ನಂಟನ್ನು ಕುಪ್ಪಣ್ಣಭಟ್ಟರ ಮನೆಯ ಸುತ್ತಮುತ್ತಲಿನ ವಾತಾವರಣದ ಚಿತ್ರವಾಗಿ ಕಾಣಬಹುದು. ಆರ್ಥಿಕತೆಗೆ ಒದಗಿದ ಕೆಳಮಟ್ಟದ ಸ್ಥಿತಿ ಬಡತನ. ದಾರಿದ್ರ್ಯವೆನ್ನುವುದು ಮನಸ್ಸಿಗೂ ಅಂಟಿಕೊಳ್ಳುವ ಸ್ಥಿತಿ. ಅದು ಅಶುಭ್ರ ವಾತಾವರಣವನ್ನು ಸೃಷ್ಟಿಸಬಲ್ಲುದು. ಅಂಥದೊಂದು ವಾತಾವರಣದ ಚಿತ್ರಣವು ಕಥೆಯನ್ನೋದುತ್ತಿದ್ದಂತೆ ಯಥಾವತ್ತಾಗಿ ಕಣ್ಮುಂದೆ ಕಟ್ಟಿಕೊಳ್ಳುತ್ತದೆ.

ಹೆಂಡತಿ ಮಕ್ಕಳ ವ್ಯಾಧಿ, ಬಡತನ, ಮದುವೆಗೆ ನಿಂತ ಮಗಳು, ಹಸಿದ ಮಕ್ಕಳು-ಇಂಥ ಪಾತ್ರಗಳ ನಡುವೆ ಸುತ್ತೆಲ್ಲ ನಿಷ್ಠುರ ಕಟ್ಟಿಕೊಂಡ ಕುಪ್ಪಣ್ಣಭಟ್ಟರ ಪ್ರಯತ್ನ ಸೋಲುತ್ತ ಹೋಗುವಾಗ ಸಮಾಜದಲ್ಲಿ ಮುನ್ನುಗ್ಗಬೇಕಾದಾಗ ಹೇಗಿರಬೇಕು, ಹೇಗಿರಬಾರದೆಂಬ ಸಂದೇಶ ಇಡಿಯ ಕಥೆಯೊಳಗೆಲ್ಲ ಹರಿಯುತ್ತಿದೆಯೆಂಬುದು ಭಾಸವಾಗುತ್ತದೆ.

ಆಪದ್ಬಾಂಧವಳಂತೆ ಕೊನೆಯಲ್ಲಿ ಕಾಣಿಸಿಕೊಳ್ಳುವ ಸೀತಕ್ಕ ಎಂಬ ಒಂಟಿ ಹೆಂಗಸಿನ ಪಾತ್ರವು ಆದಿಯಿಂದ ಅಂತ್ಯದತನಕವೂ ಇರುವ ಕುಪ್ಪಣ್ಣಭಟ್ಟರ ಪಾತ್ರದಷ್ಟೇ ನಾಜೂಕಾಗಿ ಕಾಡುತ್ತದೆ. ಕಥೆಯ ಅಂತ್ಯದಲ್ಲಿ ಅಪ್ಪಣ್ಣಭಟ್ಟರು ಕುಪ್ಪಣ್ಣಭಟ್ಟರನ್ನು ಖುದ್ದಾಗಿ ತಾವೇ ನೋಡಿಹೋಗಲು ಬಂದಾಗಿನ ಕುಪ್ಪಣ್ಣಭಟ್ಟರ ಅಯೋಮಯ ಸ್ಥಿತಿ ಸೋತು ಬಿದ್ದವನಿಗೂ ಸತ್ತುಬಿದ್ದವನಿಗೂ ಇರುವ ಸಾಮ್ಯತೆಯನ್ನು ಹೇಳುತ್ತದೆ. ಕಥೆಯ ಪಾತ್ರಗಳಷ್ಟೇ ಮುಖ್ಯವಾಗಿ ಕತೆಯಲ್ಲಿ ವರ್ಣಿಸಲಾದ ಸುತ್ತಮುತ್ತಲಿನ ವಾತಾವರಣವೂ ಸಹ ಅಷ್ಟೇ ಪ್ರಾಮುಖ್ಯವಹಿಸಿ ಕಥೆಯ ಆಳವನ್ನು ಇನ್ನಷ್ಟು ತೀವ್ರವಾಗಿಸುತ್ತದೆ.

ಕತೆಯೊಳಗಿನ ಪಾತ್ರಗಳು:
ಭಾವಿಕೆರೆ ಕುಪ್ಪಣ್ಣಭಟ್ಟರು, ಸೀಬಿನಕೆರೆ ಅಪ್ಪಣ್ಣಭಟ್ಟರು, ಶ್ರೀ ಮಠ, ವಸೂಲಿಸಾಬ, ಶಾನುಭೋಗರು, ಏಜೆಂಟರು, ಕುಪ್ಪಣ್ಣಭಟ್ಟರ ಮೈದುನ ಸುಬ್ರಹ್ಮಣ್ಯ, ಕುಪ್ಪಣ್ಣಭಟ್ಟರ ಹೆಂಡತಿ ಗೌರಮ್ಮ, ಕುಪ್ಪಣ್ಣಭಟ್ಟರ ಮಗಳು ಭಾಗೀರತಿ, ಗಿಂಡಿಮಾಣಿ, ಗುರುಗಳು, ಮಠದ ಉಗ್ರಾಣಿ, ಜ್ವರಗಡ್ಡೆಯಿಂದ ಹೊಟ್ಟೆಡೊಳ್ಳಾದ ಐದು ವರ್ಷದ ಮಗ ಗಣಪ, ಕುಪ್ಪಣ್ಣಭಟ್ಟರ ಅಂಗಳದ ಬೂದುನಾಯಿ ಮತ್ತು ಕರಿನಾಯಿ, ಮಂಜ, ಊರಜನ(ಕುಪ್ಪಣ್ಣಭಟ್ಟರಿಗೆ ಅಡಿಕೆ ಮಾರಿದವರು), ಕಾಂಪೌಂಡರ್, ಗೋಪಾಲಕಮ್ತಿಯ ಶಡ್ಡಗ, ಅಪ್ಪಣ್ಣಭಟ್ಟರ ಆಳು, ಅಮೀನ, ಬಾಲವಿಧವೆಯಾದ ಸೀತಕ್ಕ ಎಂಬ ಅಜ್ಜಿ.

ಕಥೆಯೊಳಗೆ ಶ್ರೀ ಮಠ ಮತ್ತು ಕಥೆಗಾರ ಇಬ್ಬರೂ ಕಥೆಯ ಎದಿರು ಬಾರದೆಯೇ ಕಥೆಯ ಮುಖ್ಯ ಪಾತ್ರವೆನಿಸುತ್ತಾರೆ. ಕಥೆಯನ್ನು ನಮ್ಮೆದುರು ಯಾರೋ ಕುಳಿತು ಹೇಳುತ್ತಿರುವಂಥ ಆಪ್ತಭಾವಗಳು ಕಾಡುವಾಗ ಕಥೆಗಾರ ಇಲ್ಲೆಲ್ಲೋ ಕುಳಿತು ಕಥೆ ಹೇಳುತ್ತಿರುವಂತೆ ಕೆಲವೊಮ್ಮೆ ಅನ್ನಿಸದೇ ಇರಲಾರದು. ಇದು ಈ ಕಥೆಯ ಇನ್ನೊಂದು ವೈಶಿಷ್ಟ್ಯವೆನಿಸುತ್ತದೆ.
***


ಯು. ಆರ್. ಅನಂತಮೂರ್ತಿಯವರು ಬರೆದ ‘ಆಕಾಶ ಮತ್ತು ಬೆಕ್ಕು’ ‘ಮೌನಿ’ ಕಥೆಗಿಂತ ತೀರ ಭಿನ್ನವಾಗಿರುವುದು. ‘ಮೌನಿ’ ಕಥೆಯನ್ನು ಕಥೆಗಾರ ನಮ್ಮೆದುರು ಬಣ್ಣಿಸುತ್ತ ಹೋಗುವುದು ಭಾಸವಾದರೆ ‘ಆಕಾಶ ಮತ್ತು ಬೆಕ್ಕು’ ತನ್ನೊಳಗಿನ ಪಾತ್ರಗಳಿಂದಲೇ ತಾನು ಹೆಣೆಹೆಣೆದುಕೊಳ್ಳುತ್ತ ಬಿಚ್ಚಿಕೊಳ್ಳುವುದು ವಿಶೇಷ. ನಿರೂಪಕನಿಂದಲೇ ಕಥೆಯ ನಿರೂಪಣೆಯಾದರೂ ತದನಂತರದಲ್ಲಿ ಮುಖ್ಯ ಪಾತ್ರವಾದ ಜಯತೀರ್ಥ ಆಚಾರ್ಯರ ವ್ಯಕ್ತಿತ್ವ ಮತ್ತು ಜೀವನ ಚರಿತ್ರೆ ಮಗ ಕೃಷ್ಣಮೂರ್ತಿಯ ವ್ಯಥೆಯಾಗಿ ಶುರುವಿಟ್ಟುಕೊಳ್ಳುತ್ತದೆ.

ಇಪ್ಪತ್ತು ವರ್ಷಗಳ ಪ್ರಿಯತಮ ಜಯತೀರ್ಥ ಆಚಾರ್ಯರು ಮರಣಶಯ್ಯೆಯಲ್ಲಿ ಇರುವಾಗಲೂ ಮೌನವಾಗಿದ್ದುಕೊಂಡು ಅವರ ಶುಶ್ರೂಷೆ ಮಾಡುವ ಗಂಗೂಬಾಯಿ ಮೆಲುವಾಗಿ ನಮ್ಮನ್ನೆಳೆದುಕೊಳ್ಳುತ್ತಾಳೆ. ಮತ್ತೆಲ್ಲೋ ಇಷ್ಟವಾಗುತ್ತಾಳೆ ಕೂಡ.

ಸಾವಿನ ಅಂಚಿನಲ್ಲಿರುವ ಮನುಷ್ಯ ಕೊನೆಗಾಲದಲ್ಲಿ ಹೆಂಡತಿ, ಮಕ್ಕಳು, ಮೊಮ್ಮಕ್ಕಳು ಹೀಗೆ ಸಂಬಂಧಗಳಿಗೆ ಹೇಗೆ ಹೆಚ್ಚು ಒತ್ತುಕೊಡುತ್ತಾನೆ ಎಂಬುದು ಕಥೆಯನ್ನೋದುವಾಗ ಮನದಟ್ಟಾಗುತ್ತದೆ. ಸಮಾಜಕ್ಕೆ ವಿರುದ್ಧವಾದ ಕಾರ್ಯಗಳನ್ನೆಸಗುತ್ತಲಿರುವ ನಲವತ್ತು ವರ್ಷಗಳಷ್ಟು ಹಳೆಯ ಸ್ನೇಹಿತನಿಗೂ, ಹೆಂಡತಿ ಹಾಗೂ ಬೆಳೆದು ಸಂಸಾರೊಂದಿಗರಾಗಿರುವ ಮಕ್ಕಳೆಲ್ಲ ಇದ್ದೂ ಸಹ ಇಪ್ಪತ್ತು ವರ್ಷಗಳ ಪ್ರೇಯಸಿಗೂ ಪ್ರಾಶಸ್ತ್ಯ ಕೊಡುವುದನ್ನು ಕಂಡಾಗ ಸಾವು ಹಾಗೂ ಅದರ ಸಾಮೀಪ್ಯದ ಗಡುವು ತಂದುಕೊಡುವ ನಿರ್ಲಿಪ್ತ ಧೈರ್ಯದ ಬಗ್ಗೆ ಕಥೆ ಸೂಚ್ಯವಾಗಿ ಹೇಳುತ್ತದೆ.

ಜಯತೀರ್ಥಾಚಾರ್ಯರ ಮರಣಾನಂತರ ಮಗ ಕೃಷ್ಣಮೂರ್ತಿಯ ಯೋಚನೆಗಳಾಗಿ ಸಾಲಾಗಿ ಸರಗಟ್ಟುವ ಆಚಾರ್ಯರ ಬದುಕಿನ ಒಂದರ ಹಿಂದೊಂದು ಹಂತಗಳು ಅವನನ್ನು ಕಾಡತೊಡಗುತ್ತವೆ. ತೀರ ವಾಸ್ತವದ ಬದುಕಿಗೆ ಹೊಂದಿಕೊಂಡು ಅತೀಸಾಮಾನ್ಯ ಜೀವನ ನಡೆಸುತ್ತಿರುವ ಕೃಷ್ಣಮೂರ್ತಿಗೆ ತನ್ನ ತಂದೆ ಜಯತೀರ್ಥಾಚಾರ್ಯರು ಹಾಗೂ ನಾಯರ್ ನಡುವಿನ ಮಾತುಕತೆಗಳು ಒಗಟಾಗಿ ಕಾಣಿಸತೊಡಗುತ್ತವೆ. ಬಾಂಧವ್ಯಕ್ಕೆ ಒತ್ತುಕೊಡುವವನಂತೆ ಕಾಣುವ ನಾಯರ್ ಆಡುವ ಒರಟು ಮಾತುಗಳೂ ಕೃಷ್ಣಮೂರ್ತಿಗೆ ಒಗಟುಗಳೇ. ಇಬ್ಬರು ವ್ಯಕ್ತಿಗಳ ನಡುವಿನ ಭಾವನೆಗಳು ಮತ್ತು ವಾಸ್ತವಗಳ ತೀವ್ರ ಸಮ್ಮಿಶ್ರ ಮೂರನೆಯ ವ್ಯಕ್ತಿಗೆ ಅರ್ಥವಾಗದ ಒಗಟಾಗಿ ಪರಿಣಮಿಸುವ ಪರಿಗೆ ಕೃಷ್ಣಮೂರ್ತಿ ಉದಾಹರಣೆಯೆನಿಸುತ್ತಾನೆ.

ಒಬ್ಬ ವ್ಯಕ್ತಿಯ ಸಾವಿಗಿಂತಲೂ ಸಾಯುತ್ತಲಿರುವ ವ್ಯಕ್ತಿಯ ಸುಪರ್ದಿನಲ್ಲಿರುವ, ತಮಗೆ ಸಂದಬೇಕಾದ ವಸ್ತುಗಳು ಹೆಚ್ಚು ಬೆಲೆ ಪಡೆದುಕೊಳ್ಳುವಂಥ ಸೂಕ್ಷ್ಮ ಎಳೆಗಳು ವಿಷ್ಣುಮೂರ್ತಿಯಂಥ ಪಾತ್ರದೊಳಗೆ ಸಿಗುತ್ತವೆ.

ಒಬ್ಬ ಸಂಪ್ರದಾಯಸ್ಥ ಬ್ರಾಹ್ಮಣ ಹೆಂಗಸು ಭಾವನೆಗಳಿಗೆ ಕೊಟ್ಟಷ್ಟೇ ಪ್ರಾಮುಖ್ಯವನ್ನು ಸಂಪ್ರದಾಯದ ಕಟ್ಟಳೆಗಳಿಗೂ ಕೊಡುತ್ತಾಳೆ ಎಂಬಂತಹ ಆಳದ ಎಳೆಗಳು ಜಯತೀರ್ಥಾಚಾರ್ಯರ ಸಾವಿನ ಎದುರು ಹೆಂಡತಿ ರುಕ್ಮಿಣಿಯಮ್ಮನ ತಳಮಳಗಳಲ್ಲಿ ಕಾಣಬಹುದು. ಅನ್ಯಜಾತಿಯವಳನ್ನು ವಿವಾಹವಾದ ಮಗನ ಕೊರಳಲ್ಲಿ ಅಪ್ಪನ ಸಾವಿನ ಈ ಸಂದರ್ಭದಲ್ಲಿ ಜನಿವಾರ ಇದೆಯೋ ಇಲ್ಲವೋ ಎಂದೆಲ್ಲ ಕಳವಳಗೊಳ್ಳುವ ರುಕ್ಮಿಣಿಯಮ್ಮ ಎಲ್ಲ ಸಂಪ್ರದಾಯಸ್ಥ ಹೆಂಗಳೆಯರಿಗೆ ಸಾಕ್ಷ್ಯರೂಪವಾಗಿ ಭಾಸವಾಗುತ್ತಾರೆ. ಜಯತೀರ್ಥಾಚಾರ್ಯರ ಪ್ರೇಯಸಿ ಈ ಸಮಯದಲ್ಲಿ ತಮ್ಮ ಮನೆಯಲ್ಲಿಯೇ ಇರುವುದು ರುಕ್ಮಿಣಿಯಮ್ಮನಂಥ ಮರ್ಯಾದೆಗೆ ಅಂಜುವ ಹೆಣ್ಣಿಗೆ ಗಂಡನ ಸಾವಿಗಿಂತಲೂ ಬದುಕಿನ ನೀತಿಯೆದುರು ಮುಜುಗರವಾಗಿ ಬಿಂಬಿತವಾಗುತ್ತದೆ.

ಎಲ್ಲವುಗಳ ನಡುವೆ ಗಂಗೂಬಾಯಿ ಇಡಿಯ ಕಥೆಯೊಳಗಿನ ಸಾರವನ್ನೆಲ್ಲ ಅರಿತ ವ್ಯಕ್ತಿಪಾತ್ರವಾಗಿ ಒಮ್ಮೊಮ್ಮೆ ಕಾಣುತ್ತಾಳೆ. ಎಲ್ಲರೂ ಕಂಡಂತಿರುವ ಆಚಾರ್ಯರ ಬದುಕಿನ ಒಂದು ಪಾರ್ಶ್ವದ ಕಥೆಯನ್ನು ಮಗ ಕೃಷ್ಣಮೂರ್ತಿಯ ಯೋಚನೆಗಳು, ಎಡಬಿಡದೆ ಆತನನ್ನು ಕಾಡುವ ತಂದೆಯ ನೆನಪುಗಳು ಸಾರುತ್ತವೆ. ಯಾರೂ ನೇರವಾಗಿ ಕಂಡಿರದ ಆಚಾರ್ಯರರ ಬದುಕಿನ ಇನ್ನೊಂದು ಮಗ್ಗುಲಿನ ಕಥೆ ಪ್ರೇಯಸಿ ಗಂಗೂಬಾಯಿಯ ನೆನಪುಗಳಾಗಿ ಹೊರಳುತ್ತದೆ.

ದೇವಸ್ಥಾನದ ಪೂಜಾರಿಯ ಮಗನಾಗಿ ಹುಟ್ಟಿದ ಆಚಾರ್ಯರು ಸದಾ ಜ್ಞಾನದಾಹವುಳ್ಳವರು. ಅನೇಕ ವಿಚಾರಗಳಲ್ಲಿ ಆಸಕ್ತಿ ಇರುವ ವ್ಯಕ್ತಿಯ ಜೀವನವು ಏಕಮುಖವಾಗಿ ನಡೆಯದೇ ಕವಲು ಕವಲಾಗಿ ಹಂಬಿಕೊಳ್ಳುವ ರೀತಿಯನ್ನು ಈ ಕಥೆಯಲ್ಲಿ ಕಾಣಬಹುದು. ಆಚಾರ್ಯರ ಹರೆಯದ ಪ್ರೇಯಸಿ ಅಲಕಾದೇವಿಯ ಸಾವು ಕುವೆಂಪುರವರ ‘ಕಾನೂರು ಹೆಗ್ಗಡತಿ’ಯ ಸಾವನ್ನು ನೆನಪಿಸಿದರೆ, ಕೆಲಕಾಲ ಪೋಸ್ಟ್ ಮಾಸ್ಟರ್ ವೃತ್ತಿಯಲ್ಲಿರುವಾಗ ಅಲಕಾದೇವಿಯ ಎಸ್ಟೇಟಿನಲ್ಲಿ ರೈಟರ್ ಆಗಿಯೂ ಕೆಲಸ ಮಾಡುವ ಆಚಾರ್ಯರು ಅಬಚೂರಿನ ಪೋಸ್ಟ್ ಮಾಸ್ಟರ್ ಪಾತ್ರವನ್ನೂ ನೆನಪಿಸುತ್ತಾರೆ.

ಕಥೆಯ ಪಾತ್ರಗಳು:
ಜಯತೀರ್ಥ ಆಚಾರ್ಯರು, ಗೆಳೆಯ ಗೋವಿಂದನ್ ನಾಯರ್ (ಕೇರಳದ ಕಮ್ಯುನಿಸ್ಟ್), ಮಗ ಕೃಷ್ಣಮೂರ್ತಿ, ವಿಧವೆ ಮಗಳು ಸಾವಿತ್ರಿ, ಅವಳ ಹನ್ನೆರಡು ವರ್ಷದ ಮಗ ಹರಿಕುಮಾರ, ಸೊಸೆ ಮೀರಾ, ಮೊಮ್ಮಗ, ಇಪ್ಪತ್ತು ವರ್ಷಗಳ ಪ್ರೇಯಸಿ ಗಂಗೂಬಾಯಿ, ಹರೆಯದ ಪ್ರೇಯಸಿ ಅಲಕಾದೇವಿ, ಹೆಂಡತಿ ರುಕ್ಮಿಣಿಯಮ್ಮ, ಜಮೀನ್ದಾರ್ ವಿಷ್ಣುಮೂರ್ತಿ, ಎಂ. ವಿ. ವಾರಿಯರ್, ವೆಂಕಪ್ಪ ನಾಯಕ, ವಿಷ್ಣುಮೂರ್ತಿಯನ್ನು ದತ್ತು ತಂದೆ ನರಸಿಂಹಭಟ್ಟರು, ನರಸಿಂಹ ಭಟ್ಟರ ಹೆಂಡತಿ (ವಿಷ್ಣುಮೂರ್ತಿಯ ಸಾಕುತಾಯಿ), ವಿಷ್ಣುಮೂರ್ತಿಯ ಹೆಂಡತಿಯ ವಿಧವೆ ತಂಗಿ.

ಎರಡೂ ಕಥೆಗಳ ಕುರಿತು:

‘ಮೌನಿ’ ಕಥೆಯಲ್ಲಿ ಸುತ್ತಲಿನ ವಾತಾವರಣದ ಬಗೆಗಿನ ನಿರೂಪಣೆಯು ಕಥೆಯ ಜೀವಂತಪಾತ್ರಗಳ ಸಂವಹನಕ್ಕೆ ಸಂವಾದಿಯಾಗಿ ನಿಲ್ಲುತ್ತದೆ. ಸುತ್ತಲಿನ ವಾತಾವರಣವೂ ಪಾತ್ರಗಳಷ್ಟೇ ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ಭಾವಾಭಿವ್ಯಕ್ತಿಯನ್ನು ಪಾತ್ರಗಳ ಮೂಲಕ ಮಾತ್ರವಲ್ಲದೇ ಸುತ್ತಲಿನ ವಾತಾವರಣ ವರ್ಣನೆಯಲ್ಲೂ ಕಾಣಬಹುದು. ‘ಆಕಾಶ ಮತ್ತು ಬೆಕ್ಕು’ ಕಥೆಯಲ್ಲಿ ಮಾನವೀಯ ಸಂಬಂಧಗಳ ಮೌಲ್ಯ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿರುವುದನ್ನು ಕಾಣಬಹುದು. ಸಾಮಾಜವು ಈ ಕಥೆಯ ಪ್ರಮುಖ ಮುಖ.

ಕಥೆಗಳ ಸಾಮ್ಯ:

ಮಾತಿನೊಳಗಿನ ನಯ, ನಿಷ್ಠುರ ಗುಣಗಳು ಜೀವನದ ಹಾದಿಯಲ್ಲಿ ಎಷ್ಟರ ಮಟ್ಟಿಗಿನ ಪರಿಣಾಮ ಬೀರುತ್ತವೆಂಬುದು ‘ಮೌನಿ’ ಕಥೆಯೊಳಗಿನ ಅಪ್ಪಣ್ಣಭಟ್ಟರು ಹಾಗೂ ಕುಪ್ಪಣ್ಣಭಟ್ಟರುಗಳ ಪಾತ್ರರೂಪಗಳಾಗಿ ಕಾಣಸಿಗುತ್ತವೆ. ಒಬ್ಬ ವ್ಯಕ್ತಿಯ ಸ್ವಭಾವವೂ ಸಹ ಸಮಾಜದಲ್ಲಿ ಸಮಬೆರೆಯುವ ಸಾಮರ್ಥ್ಯವನ್ನು ತಂದುಕೊಡುತ್ತದೆ, ನಡುವಳಿಕೆಯ ರೀತಿಯು ಜೀವನಶೈಲಿಯನ್ನು ಕೊಡುತ್ತದೆ ಎಂಬ ಸತ್ಯದ ಅರಿವು ‘ಮೌನಿ’ ಕಥೆಯನ್ನೋದುತ್ತ ಅರಳುತ್ತ ಹೋಗುತ್ತದೆ.

ಹಾಗೆಯೇ ‘ಆಕಾಶ ಮತ್ತು ಬೆಕ್ಕು’ ಕಥೆಯಲ್ಲಿ ಕಾಣಸಿಗುವ ಸಮಕಾಲೀನ ವ್ಯಕ್ತಿಗಳಾದ ಆಚಾರ್ಯರು ಮತ್ತು ನಾಯರ್ ಇವರ ಸ್ವಭಾವಗಳಲ್ಲಿನ ಭಿನ್ನತೆ ಅವರ ಜೀವನ ರೀತಿಯಲ್ಲೂ ವ್ಯತ್ಯಾಸ ಮೂಡಿಸಿರುತ್ತದೆ. ಅಂದರೆ ಬದುಕಿರುವಾಗಿನ ಪ್ರತಿಕ್ಷಣದ ಪರಿಣಾಮ ಸಮುದಾಯದ ಮೇಲೆ ಏನಾಗುತ್ತದೆಯೆಂಬುದು ಮುಖ್ಯವೆಂದು ಭಾವಿಸುವ ನಾಯರ್ ಹಾಗೂ ಜಯತೀರ್ಥಾಚಾರ್ಯರು ಇಬ್ಬರೂ ಜೀವನದುದ್ದಕ್ಕೂ ಬಯಸಿದ್ದು, ಎಸಗಿದ್ದು ಜನೋಪಕಾರವನ್ನೇ ಆದರೂ ಅದರ ರೀತಿ ಹಾಗೂ ಜೀವನಶೈಲಿಯೊಳಗಿನ ವ್ಯತ್ಯಾಸ ಗಮನಾರ್ಹವಾಗಿದೆ.‘ಮೌನಿ’ಯು ಮೌನವಾಗಿಯೇ ಮನತಟ್ಟಿದರೆ ‘ಆಕಾಶ ಮತ್ತು ಬೆಕ್ಕು’ ಆಗಸದಷ್ಟೇ ಒಗಟಾಗಿ ಕಾಡುವ ಕಥೆಯೆನಿಸುತ್ತದೆ. ಸರಳವಾಗಿ ಅರ್ಥೈಸಿಕೊಳ್ಳುವಂತೆ ಹೆಣೆದ ಈ ಎರಡು ಕಥೆಗಳು ಓದುತ್ತಿರುವಾಗಲೂ, ಓದಿಮುಗಿದಬಳಿಕವೂ ಸುತ್ತ ಸುಳಿಯುತ್ತಿದ್ದರೆ ಕಾರಣ ಮಾತ್ರ ಕಥೆಗಳೊಳಗಿನ ರಸ ಮತ್ತು ಸ್ವಾರಸ್ಯ.

-ಶಾಂತಲಾ ಭಂಡಿ

(‘ಅನಂತಮುಖದಮೂರ್ತಿ’ ಗ್ರಂಥದಲ್ಲಿ ಪ್ರಕಟವಾದ ಬರಹ.)

‘ಅನಂತಮುಖದಮೂರ್ತಿ’ ಯು.ಆರ್.ಅನಂತಮೂರ್ತಿಯವರ ಸಾಹಿತ್ಯ ಸಮೀಕ್ಷೆ
೨೦೦೯ ಡಿಸೆಂಬರಿನಲ್ಲಿ ಬೆಂಗಳೂರಿನಲ್ಲಿ ಬಿಡುಗಡೆ
ಸಂಪಾದಕರು: ಅಹಿತಾನಲ(ನಾಗ ಐತಾಳ)
ಪ್ರಕಾಶಕರು : ಸಾಹಿತ್ಯಾಂಜಲಿ, ಕ್ಯಾಲಿಫೋರ್ನಿಯಾ ಮತ್ತು ಅಭಿನವ ಬೆಂಗಳೂರು

ಡಾ ಅನಂತಮೂರ್ತಿಯವರಿಗೆ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳ್ತಾ ಈ ಲೇಖನವನ್ನ ಇಲ್ಲಿ ನನ್ನ ಬ್ಲಾಗಲ್ಲಿ ಇಟ್ಕೋತಾ ಇದೀನಿ.

December 17, 2010

ನೋಟು ಚಿಲ್ಲರೆಗಳ ನಡುವೆ

ಸುರೇಶ ಅಲ್ಲಿಯೂ ಸಲ್ಲದೇ ಇಲ್ಲಿಯೂ ಸಲ್ಲದೇ ಹೋದವನಂತೆ ಕಾರ್ನರ್ ಸೈಟಿನಲ್ಲಿ ಮನೆ ಕಟ್ಟಿ ಕೂತುಬಿಟ್ಟಿದ್ದೇನೆ ಅಂತ ತನ್ನ ಆರಾಮ ಖುರ್ಚಿಯಲ್ಲಿ ಕೂತು ಯೋಚಿಸುತ್ತಿರುವ ಹೊತ್ತಿಗೆ ಹೆಂಡತಿ ಸಾವಿತ್ರಿ ಬಿಸೀ ಚಹವನ್ನು ತಂದು ಅವನ ಮುಂದಿನ ಟೇಬಲ್ಲಿನಲ್ಲಿ ಕುಕ್ಕಿ ಹೋಗಿದ್ದಳು.
ಚಹದ ಕಪ್ಪಿಗೆ ಕೈ ಹಾಕಿ ಇನ್ನೇನು ತುಂಬಿದ ಕಪ್ಪನ್ನು ಮೇಲಕ್ಕೆತ್ತಬೇಕು ಎನ್ನುವಷ್ಟರಲ್ಲಿ ಅಡುಗೆಮನೆಯಲ್ಲಿ ಪಾತ್ರೆ ಬಿದ್ದ ಸದ್ದಿಗೆ ಕೈ ಅದುರಿ ಬಿಸೀ ಚಹ ಸುರೇಶನ ಪ್ಯಾಂಟಿನ ಒಳಗಿದ್ದ ತೊಡೆಯನ್ನು ಚುರ್ರೆನ್ನಿಸಿತು. ಥಟ್ಟಕ್ಕನೇ ಚಹದ ಕಪ್ಪನ್ನು ಟೇಬಲ್ಲಿನ ಮೇಲಿಟ್ಟವನ ಕಿವಿಗೆ ಕೇಳಿಸಿದ್ದು ಹೆಂಡತಿ ಸಾವಿತ್ರಿಯ ಗೊಣಗಾಟ.

‘ಮೂರನೇ ತಾರೀಖಿಗೇ ಮೂಲೆ ಅಂಗಡಿ ಮಾದಪ್ಪನಿಗೆ ಕಿರಾಣಿಸಾಮಾನಿನ ಲಿಶ್ಟು ಕಳಿಸಿದ್ದೇನೆ. ಆಗಲೇ ಇವತ್ತು ಹದಿಮೂರನೇ ತಾರೀಖು, ಇನ್ನೂ ಕಿರಾಣೀನ ಮನೆಗೆ ಕಳ್ಸಿಲ್ಲ. ಲಿಸ್ಟಿನ ಜೊತೇಲೇ ಸಾವಿರದ ಎಂಟುನೂರು ರೂಪಾಯಿನ್ನೂ ಕಳಿಸಿದ್ದೀನಿ. ಎಷ್ಟಾಗತ್ತೆ ಅಂತ ಲೆಕ್ಕಾಚಾರ ಮಾಡಿ ಚಿಲ್ಲರೆನಾದ್ರೂ ವಾಪಸ್ಸು ಕಳಿಸ್ತಾನೋ ಅದೂ ಇಲ್ಲ ಬೆಪ್ಪುಮುಂಡೇದು. ವಿಚಾರಿಸಿದ್ರೆ ಮಂಡಿಯವ್ರು ಕಳಿಸಿದ್ ತಕ್ಷಣ ಕಳಿಸ್ತೀನಿ ಕಿರಾಣಿ ಜೊತೀಗೇ ಚಿಲ್ರೆನೂ ಕಳಿಸ್ತೀನಿ ನಮ್ ಹುಡುಗನ್ ಹಾಕಿ ಅಂತಾನೆ ಬೆಪ್ಪುತಕ್ಕಡಿ ಮಾದಪ್ಪ. ಮುಂದಿನ್ ತಿಂಗಳಿಂದ ಬೇರೆ ಅಂಗಡಿ ನೋಡ್ಕೊಳ್ಳದೇ ವಾಸಿ. ಗೊತ್ತಿರೋನು, ಪಕ್ಕದ್ ಬೀದೀಲೇ ಮನೆ ಬೇರೆ, ಇದೇ ಬೀದೀಲೇ ಅಂಗಡಿ ಹಾಕೀದಾನೆ ಪಾಪ, ಹೆಂಗಾದ್ರೂ ಬದಕ್ಲಿ ಅಂತ ನಾವು ನೋಡಿದ್ರೆ ... ಮನ್ಷ ನಂಬಿಕಸ್ಥನೂ ಅಲ್ಲಾ ಅಂತ ಪಕ್ಕದ್ಮನೆ ದೇವೀರಿ ಅಂತಿದ್ರು. ನಮ್ಮೆದ್ರುಗಡೆ ಚಂದಾಗೇ ಹಲ್ ಕಿಸೀತಾನೆ, ಈಚೆ ಬಂದ ಕ್ಷಣ ನಮ್ಮನ್ನೇ ಆಡ್ಕಂಡು ನಗ್ತಾನೆ, ನಂಬಬಾರ್ದು ಮಾತ್ರ ಮನ್ಷನ್ನ’ ಅಂತಿದ್ರು ನಿನ್ನೆ ರಾಯರ ಮಠದ ಭಜನೆಯಲ್ಲಿ ಸಿಕ್ಕಾಗ’ ಅಂತ ಊದ್ದಕ್ಕೆ ದೇವರ ಮುಂದಿನ ಅಗರಬತ್ತಿ ಹೊಗೆ ಬಿಟ್ಟಂಗೆ ಬಿಡ್ತಾನೇ ಇದ್ದಳು ಸಾವಿತ್ರಿ.

ಕಪ್ಪಿನಲ್ಲಿ ಉಳಿದಷ್ಟು ಚಹವನ್ನ ಇದ್ದಷ್ಟೇ ಬಿಸಿಗೆ ಹಳ್ಳಿಮದ್ದು ಗಂಟಲಿಗರಿಸಿದಂಗೆ ಏರಿಸಿಕೊಂಡ ಸುರೇಶ. ಝಾಂಡೀಸಾದಾಗ ಹಳ್ಳಿ ಮದ್ದು ಕುಡ್ದು ವಾಂತಿ ಮಾಡಿದ್ದು ಮತ್ತೆ ನೆನಪಾಯ್ತು. ಸಿಂಕಿಗೆ ಹೋಗಿ ಬಾಯಿ ಮುಕ್ಕಳಿಸಿ ಬಂದ. ರೂಮಿಗೆ ಹೋಗಿ ಬೇರೆ ಪ್ಯಾಂಟು ಹಾಕ್ಕೊಂಡು ಚಹ ಚೆಲ್ಲಿದ್ ಪ್ಯಾಂಟನ್ನ ಮನೆಹಿಂದಿನ್ ಬಟ್ಟೆ ಒಗೆಯೋ ಕಲ್ಲಿಗೆ ಬಿಸಾಕಿದ. ಅದು ಅಲ್ಲೇ ಬಾಗಿಲ ಬುಡದಲ್ಲೇ ಬಿದ್ದಿದ್ದನ್ನೂ ತಲೆಗೆ ಹಾಕ್ಕೊಳ್ಳದೇ ಸಣ್ಣಗೇ ಸಿಳ್ಳೆ ಹಾಕೊಂಡು ರೂಮಿಗೆ ಬಂದ. ಕನ್ನಡಿ ಮುಂದೆ ನಿಂತ ಶಾಸ್ತ್ರ ಮಾಡಿ ಕೂದಲನ್ನ ಕೈಯ್ಯಲ್ಲೇ ಬಾಚಿಕೊಂಡು ಮನೆಯಿಂದ ಹೊರಗೆ ಬಂದೇ ಬಿಟ್ಟ. ಹೊರಗಿನ ಹವೆ ಪರವಾಗಿಲ್ಲ ಅನ್ನಿಸಿತು.

ಚಪ್ಪಲಿ ಮೆಟ್ಟಿಕೊಂಡು ಈಗ ಸೀದ ಮಾದೇವಪ್ಪನ ಅಂಗಡಿ ಕಡೆ ಮುಖ ಮಾಡಿ ಹೊರಟ. ಅರ್ಧ ದಾರಿಗೆ ಬರೋಷ್ಟರಲ್ಲಿ ಗೊತ್ತಾಗಿದ್ದು ಮಗನ ಹಳೇ ಹಾವಾಯಿ ಚಪ್ಪಲಿ ಮೆಟ್ಟಿಕೊಂಡು ಬಂದಿದ್ದು. ನಾಲ್ಕು ಹೆಜ್ಜೆ ನಡೆದಿರಲಿಲ್ಲ, ಚಪ್ಪಲಿ ಬಾರು ಕಿತ್ತು ಪ್ಯಾರ್ ಬೇರೆ ಗಾನ್ ಬೇರೆ ಆಗಿ ಹಳೇ ಪ್ಯಾರಗಾನ್ ಚಪ್ಪಲಿಯ ಜಾಹೀರಾತು ಸುರೇಶನಿಗೆ ನೆನಪಾಗಿ ಚಪ್ಪಲಿಯನ್ನ ಅಲ್ಲೇ ರಸ್ತೆ ಪಕ್ಕಕ್ಕೆ ಬಿಸಾಕಿ ಪ್ಯಾರಗಾನ್, ಪ್ಯಾರಗಾನ್, ಪ್ಯಾರಗಾನ್ , ಪ್ಯಾರಗಾನ್... ಅಂತ ರಾಗವಾಗಿ ಹಾಡುತ್ತ ನಡೆದ. ಸುಮಾರು ಮುಂದೆ ಹೋದ ಮೇಲೆ ಯಾವುದೋ ಫ್ಯಾನಿನ ಜಾಹೀರಾತು ಹಿಂಗೇ ಬರ್ತಿತ್ತಲ್ಲ ಅಂತ ಅನ್ನಿಸೋಕೆ ಶುರುವಾಯ್ತು. ಯಾವ್ದು ಅಂತಲೆ ನೆನಪಾಗದೇ ತಲೆ ಕೆರೆಯುತ್ತ ನಡೆದ.

ಮಾದೇವಪ್ಪ ಹಲ್ಕಿರಿದು ‘ಸುರೇಶಪ್ಪಾ ನಮಸ್ಕಾರ. ಏನು ತಮ್ಮ ಸವಾರಿ ಇಲ್ಲಿವರ್ಗೂ. ಸಾವಿತ್ರಮ್ಮಂಗೆ ಹುಸಾರಿಲ್ವ? ಅಂದವನು ಸುರೇಶನ ಉತ್ತರಕ್ಕೂ ಕಾಯದೇ ಅನ್ನುವುದಕ್ಕಿಂತ ಸುರೇಶನಿಗೆ ಉತ್ತರಿಸುವುದಕ್ಕೂ ಬಿಡದೇ ‘ಓಹೋ ಇವತ್ತು ಶೆನೀವಾರ.... ಅದ್ಕೇ ನಿಮ್ಮ ಸವಾರಿ ಈ ಕಡೆ ... ಹೆ ಹ್ಹೆ ಹ್ಹೆ’ ಅಂದ.

ಈ ಮಾದೇವಪ್ಪ ಯಾವಾಗ ಶಕಾರಕ್ಕೆ ಸಕಾರ ಹಚ್ಚುತ್ತಾನೋ ಎಂಬುದು ಮುಸ್ಸಂಜೆಯಿಂದ ಬೀದೀಬಲ್ಬು ಹಾರುವತನಕವೂ ಅವನ ಅಂಗಡಿಯ ಮುಂದೇ ಕುಳಿತು ಅವರಿವರನ್ನು ಟೀಕೆ ಮಾಡುತ್ತ ಒಂದಾದ ಮೇಲೆ ಒಂದು ಸಿಗರೇಟು ಸೇದುತ್ತ ಕುಳಿತಿರುತ್ತಿದ್ದ ಆಚೆಬೀದಿಯ ಶೀನಂಗೂ ಗೊತ್ತಾಗದೇ ‘ಮಾದಪ್ಪನ್ನ ಅಣಕ ಮಾಡೋದು ಸಾನೇ ಕಷ್ಟ’ ಅಂತ ಊದ್ದ ಕೂದಲಡಿಯ ಕುತ್ತಿಗೆಯನ್ನ ತುರಿಸಿಕೊಳ್ಳುತ್ತಲೇ ಒಪ್ಪಿಕೊಂಡಿದ್ದ. ಅಂಥಾದ್ದರಲ್ಲಿ ಅಪರೂಪಕ್ಕೆ ಮಾದೇವಪ್ಪನನ್ನು ನೋಡುವ ಸಾದಾಸೀದಾ ಸುರೇಶನಿಗೆ ಮಾದೇವಪ್ಪ ಒಗಟಾಗಿ ಕಂಡಿದ್ದರಲ್ಲಿ ಅಂಥಾ ವಿಶೇಷವೇನಿರಲಿಲ್ಲ.

ಆದರೂ ಮನೆಯಲ್ಲಿ ಬೆಳಗ್ಗೆದ್ದು ಮಾದೇವಪ್ಪನಿಗೆ ಹಚ್ಚಲಾಗಿದ್ದ ಊದುಬತ್ತಿ ತನ್ನ ಕಡೆ ತಿರುಗುವುದರೊಳಗಾಗಿ ಕಿರಾಣಿಯನ್ನು ಮನೆಗೆ ತಗೆದುಕೊಂಡು ಹೋಗಲೇಬೇಕಾದ ಅನಿವಾರ್ಯತೆ ಇತ್ತು ಸುರೇಶನಿಗೆ. ಒಂದುವೇಳೆ ಕಿರಾಣಿ ಸಿಗದಿದ್ದರೂ ಕೊಟ್ಟದುಡ್ಡಿನ ಚಿಲ್ಲರೆಯನ್ನಾದ್ರೂ ತೆಗೆದುಕೊಂಡುಹೋಗದಿದ್ರೆ ಸುರೇಶನ ಇವತ್ತಿಡೀ ದಿನ ಚಿಲ್ಲರೆಯಾಗುವ ಎಲ್ಲ ಸೂಚನೆಯನ್ನೂ ಸಾವಿತ್ರಮ್ಮನ ಬೆಳಗಿನ ಊದುಬತ್ತಿ ಹೊಗೆ ಹೇಳಿಬಿಟ್ಟಿತ್ತು.

ಅದೂ ಇದೂ ಮಾತಾಡೀ ಕೊನೇಲೀ ಕಿರಾಣಿ ಸಾಮಾನುಗಳನ್ನೆಲ್ಲ ತೂಗಿಸಿ ಅಂಗಡಿಯ ಹುಡುಗನ್ನ ಜೊತೇಲೇ ಕರೆದುಕೊಂಡು ಕಿರಾಣಿಯನ್ನ ಮನೆಗೆ ತರುವಷ್ಟರಲ್ಲಿ ಮಧ್ಯಾಹ್ನ ಹನ್ನೆರಡೂ ಮುಕ್ಕಾಲು. ಗೇಟು ತೆರೆದು ಒಳಗೆ ಕಾಲಿಟ್ಟ ಸುರೇಶನಿಗೆ ಮೊದಲು ಕಂಡಿದ್ದು ಹಗ್ಗಕ್ಕೆ ತೂಗಾಡುತ್ತಿದ್ದ ಪ್ಯಾಂಟು. ಮೊನ್ನೆಯಷ್ಟೇ ಮಗ ಹೊಸಾ ಕೆಲಸ ಸಿಕ್ಕಾಗ ಕೊಡ್ಸಿದ್ದು, ರ್ಯಾಂಗ್ಲರ್ ಪ್ಯಾಂಟು, ಎರಡೂವರೆ ಸಾವರ ಕೊಟ್ಟು ಗರುಡಾ ಮಾಲಿಂದ ತಂದಿದ್ದು. ಬಲತೊಡೆಯ ಭಾಗಕ್ಕೆ ಸಮಾ ಅಂಗೈಯಷ್ಟಗಲ ಕಲೆ. ಸಾವಿತ್ರಮ್ಮನ ಕೋಪ ಕಲೆಯಾಗಿ ಪರಿಣಮಿಸಿದ್ದು ಮಾದಪ್ಪನ ಅಂಗಡಿಯ ಕಿರಾಣಿಗಿಂತ ಹೆಚ್ಚು ಭಾರವೆನಿಸಿ ಗೇಟಿನ ಬಳಿಯೇ ಕಿರಾಣಿಯನ್ನೆಲ್ಲ ಇಟ್ಟು ಹುಡುಗನಿಗೆ ಅವನ್ನೆಲ್ಲ ಮನೆಯೊಳಗೆ ಇಡುವಂತೆ ಕೈಸನ್ನೆ ಮಾಡಿದರು.

ಕಲೆಯಾಗಿದ್ದು ಸಾವಿತ್ರಮ್ಮನ ಕೋಪದ ಶಕ್ತಿಯೋ ಅಥವಾ ಬೆಳಿಗ್ಗೆ ಚೆಲ್ಲಿದ ಚಹದ ಪರಿಣಾಮವೋ ಅಂತೆಲ್ಲ ಯೋಚಿಸುತ್ತಲಿರುವಾಗ ಆರಿದ ಬಟ್ಟೆಗಳನ್ನು ಒಳಗೆತ್ತಲು ಬಂದಿದ್ದ ಸಾವಿತ್ರಮ್ಮ ಇಂಥ ಚಹದ ಕಲೆಗೆ ಯಾವುದಾದ್ರೂ ಹೊಸಾ ಸ್ಟೈನ್ ಕಿಲ್ಲರ್ ಸಿಗಬಹುದಾ ಅಂತ ಯೋಚಿಸುತ್ತ ಆರಿದ ಬಟ್ಟೆಗಳನ್ನ ಎತ್ತಿಕೊಂಡು ‘ಒಳಗ್ಬನ್ನಿ... ಊಟಮಾಡೋಣ’ ಅಂದು ಒಳನಡೆದರು.

[‘ನಾನು’ ಎಂಬ ಪ್ರಯೋಗವಿಲ್ಲದೆ ನಾನು ಬರೆದ ಮೊದಲ ಕತೆಯಿದು. ‘ನಾನು’ ಎಂಬ ಪದ ಬಳಸದೇ ಬರೆಯುವುದು ಸರಾಗ ಅಂತ ನಿನ್ನೆ ಈ ಕತೆ ಬರೆದಾಗ ಅನ್ನಿಸಿದ್ದು. ನನ್ನನ್ನು ನಾನು ತಿರುಗಿ ನೋಡಿಕೊಂಡಾಗ ಬೇಕಾಗಬಹುದಾದ ಮಾಹಿತಿಗಾಗಿ ಇಲ್ಲಿ ಈ ವಾಕ್ಯವನ್ನು ಬರೆದಿಟ್ಟುಕೊಳ್ಳುತ್ತಿದ್ದೇನೆ]

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.