ಒಂದೊಂದೇ ಅಗುಳು ಬಾಯಲ್ಲಿಡುತ್ತ ಯೋಚಿಸ್ತಾ ಅದೆಷ್ಟೋ ಹೊತ್ತಾಗಿರ್ಬೇಕು. ಆಗಲೇ ಜನ ಖಾಲಿಯಾಗಿ ಮೆಸ್ಸಿನ ಖುರ್ಚಿಗಳೆಲ್ಲ ಆಕಳಿಸೋಕೆ ಸುರು ಮಾಡಿದ್ವು. ನಿಧಾನಕ್ಕೆ ಎದ್ದುಹೋಗಿ ಪ್ಲೇಟು ಮತ್ತು ಕೈ ತೊಳಕೊಂಡು ರೂಮಿನ ಕಡೆ ವಾಪಸಾಗ್ತಾ ಇದ್ದೆ. ನನ್ನಗಿಂತ ಹತ್ತು ಅಡಿ ಮುಂದಕ್ಕೆ ಒಬ್ಬಳೇ ಹುಡುಗಿ ಹೋಗ್ತಾ ಇದ್ಲು ಊಟ ಮುಗ್ಸಿ. ಸರಸರ ನಡಕೊಂಡು ಹೋಗಿ ಅವಳ ಮುಖನೋಡಿ ಮಾತಾಡಿದ್ ಮೇಲೆ ಧೈರ್ಯ ಬಂತು.
ಮನಸ್ಸು ಹೆಂಗಿತ್ತು ಅಂದ್ರೆ ಆ ನಿಶ್ಶಬ್ಧದಲ್ಲಿ ಒಬ್ಬಳೇ ನಡಕೊಂಡು ಹೋಗ್ತಿರೋ ಅವಳೇ ಸೀತೀನಾ ಅಂತೆಲ್ಲ ಅರೆಕ್ಷಣದಲ್ಲಿ ಯೋಚಿಸಿ ಅರ್ಧಂಬರ್ಧ ಧೈರ್ಯ ಮತ್ತು ಆ ಅನಾಥಭಾವದೊಳಗಿನ ಅಸಹಾಯಕತೆ ಅವಳನ್ನ ಹಿಡಿದು ಮಾತಾಡಿಸೋ ಹಾಗೆ ಮಾಡಿಬಿಡ್ತು. ಪರಿಚಯ ಮಾಡಿಕೊಳ್ಳೋ ಬದಲು ನಾನು ನೂರನೇ ನಂಬರ್ ರೂಮಲ್ಲಿದೀನಿ ಅಂತಲೇ ಮೊದಲಿಗೆ ಹೇಳಿದ್ದೆ. ಹೌದಾ? ಅಂತ ಕೇಳಿದವಳ ಮಾತಿನೊಳಗೆ ಭಾವಗಳ ಗುರ್ತೇ ಸಿಗಲಿಲ್ಲ. ಮತ್ತೆ ನಾನಾಗೇ ಮಾತಾಡೋಕೆ ಏನೂ ತೋಚ್ಲಿಲ್ಲ. ಜೊತೇಲೇ ಹೆಜ್ಜೆ ಹಾಕಿದ್ರೆ ಮಧ್ಯೆ ಯಾವುದೋ ರೂಮಿನೊಳಗೆ ಅವಳು ಹೊರಟುಹೋದ್ಲು.
ಆಗಲೇ ಮತ್ತೆ ಅರಿವಾಗಿದ್ದು, ಜೊತೇಲಿ ಎಲ್ಲೀತನಕ ಯಾರೇ ಬಂದ್ರೂ ನೂರನೇ ನಂಬರ್ ರೂಮಿನೊಳಗೆ ಮಾತ್ರ ನನ್ನ ಜೊತೆ ಯಾರೂ ಬರೋಲ್ಲ ಅನ್ನೋದು. ರೂಮಿನ ಬೀಗ ತೆಗೆದು ರೂಮೊಳಗೆ ಹೊಕ್ಕೆ.
ಹುಡುಗ ಮತ್ತೆ ನೆನಪಾದ. ಅಪ್ಪ ನೆನಪಾದ್ರು. ಅಮ್ಮ ನೆನಪಾದ್ರು ಅನ್ನೋದಕ್ಕಿಂತ ಮರೆತೇ ಇರಲಿಲ್ಲ ಅನ್ನೋದೇ ಸರಿ. ಯಾಕೆ ಇವರೆಲ್ಲ ನನ್ನನ್ನ ತಮ್ಮ ಪರಿಧಿಯೊಳಗೇ ಇಟ್ಕೊಂಡು ಪ್ರೀತಿ ಮಾಡ್ತಾರೆ ಅನ್ನಿಸಿತು. ಮತ್ತೆ ನಾನಾದರೂ ಅಷ್ಟೇ, ಇದೇ ಹುಡುಗನ್ನ ಮದ್ವೆ ಆಗ್ಬೇಕು ಅನ್ನೋ ಕಾರಣಕ್ಕೆ ಮುಂದೆ ಓದ್ಬೇಕು ಅನ್ನೋ ನಿರ್ಧಾರ ತಗೊಂಡು ಅಪ್ಪನ ಮಾತನ್ನ ಮೀರಿ ಇಲ್ಲೀತನಕ ಬಂದಿದ್ದೀನಿ ಅಂದ್ರೆ...
ಏನೇ ಆದ್ರೂ ವಾಪಸ್ಸಾಗ್ಬಾರ್ದು, ಅವರೆಲ್ಲ ಬಾ ಅನ್ನೋತನಕ ಊರಿಗೂ ಹೋಗ್ಬಾರ್ದು. ನಿರ್ಧರಿಸಿಯಾದಮೇಲಿನ ನಿಟ್ಟುಸಿರು. ಸೋಪು ಬ್ರಷ್ ತಗೊಂಡು ಬಾತ್ ರೂಮುಗಳಿರೋ ಕಡೆ ಹೊರಟೆ.
ರೂಮಿಗೆ ಬಂದು ಮಲಗಿದ್ರೆ ಸ್ವಲ್ಪ ಹೊತ್ತು ನಿದ್ರೆ ಬರಲೇ ಇಲ್ಲ ಅನ್ನೋದು ಮಾತ್ರ ಗೊತ್ತು, ಬೆಳಿಗ್ಗೆ ಶ್ರೀನಗರದ ಹತ್ತಿರ ಬಂದ ಟ್ರೇನು ಕೂಗಿದಾಗ್ಲೇ ಎಚ್ಚರವಾಯ್ತು. ಗಂಟೆ ಐದೂವರೆ.
ಎದ್ದು ಹೊರಬಂದುನೋಡಿದ್ರೆ ಆಗಲೆ ದೊಡ್ಡ ಬಾಯ್ಲರಿನ ಪುಟ್ಟ ನಲ್ಲಿಯ ಮುಂದೆ ಸಾಲು ಸಾಲು ಬಕೀಟು. ಹಿಂದೆ ನನ್ನ ಬಕೀಟು ಇಟ್ಟೆ. ಬಕೀಟಿನ ಹೊಸಹೊಳಪನ್ನು ಕಂಡ ಧ್ವನಿಯೊಂದು ಪ್ರಷ್ನೆ ಕೇಳ್ತು, ಪ್ರೀವಿಯಸ್ ಈಯರ್ರಾ? ಯಾವ ಡಿಪಾರ್ಟ್ಮೆಂಟು? ಅಂತ.
ಜಿಯಾಗ್ರಫಿ ಅಂತ ಹೇಳಿ ಅಲ್ಲೇ ನಿಂತೆ.
ಯಾವ ರೂಮಲ್ಲಿರೋದು? ಮತ್ತೊಂದು ಪ್ರಷ್ನೆ.
ನೂರನೇ ನಂಬರ್ರು.
ನೂರಾ? ಆ ರೂಮು ಯಾರ್ಗೂ ಕೊಡಾಂಗಿಲ್ಲಲ್ಲ!
ನಂಗೆ ಕೊಟ್ಟಿದಾರೆ,
ಮುಖ ಮುಖ ನೋಡಿಕೊಂಡಾಗ್ಲೇ ಗೊತ್ತಾಗಿದ್ದು ಅಲ್ಲಿ ಇನ್ನೂ ಎರಡ್ಮೂರು ಮುಖಗಳಿದ್ವು ಅನ್ನೋದು. ಇವತ್ತು ಬೆಳಗಾಗಿದೆ. ನಿನ್ನೆ ರಾತ್ರಿಯ ಭಯ, ಭಾವ ಏನೂ ಇರಲಿಲ್ಲ. ನಿರ್ಧಾರ ಮಾತ್ರ ಗಟ್ಟಿಯಾಗಿತ್ತು ಬೆಳಗಿನ ಈ ಬೆಳಕಿನಲ್ಲಿ. ನಾನು ಇದೇ ರೂಮಲ್ಲಿರಬೇಕು, ಇನ್ನೂ ತುಂಬ ಜನಕ್ಕೆ ನೂರನೆ ನಂಬರ್ರು ಅನ್ನೋ ಉತ್ತರ ಆಶ್ಚರ್ಯವಾಚಕಾನೋ, ಪ್ರಶ್ನಾರ್ಥಕಾನೋ ಆದ್ರೂ ಸರಿಯೇ. ನಾನು ಈ ವಿಚಾರಕ್ಕೆ ಪೂರ್ಣವಿರಾಮ ಕೊಟ್ಟು ಈ ವರ್ಷ ಪೂರ್ತಿ ಇದೇ ರೂಮಲ್ಲಿರ್ತೀನಿ ಅನ್ನೋದನ್ನ ನಿರ್ಧರಿಸಿಯಾಗಿತ್ತು. ಸ್ನಾನವಾದ ಮೇಲೆ ತೊಟ್ಟುಕೊಳ್ಳೋ ಬಟ್ಟೆ ಬರೆ ತರೋಣವೆಂದು ರೂಮಿಗೆ ಬಂದೆ.
ಅರೆರೆ! ಬ್ಯಾಗೇ ಕಾಣಿಸ್ತಿಲ್ಲ! ಈ ಕಡೆ ತಿರುಗಿದ್ರೆ ಕಾಟಿನ ಮೇಲೆ ಬಿಳೀ ಚೂಡಿದಾರಕ್ಕೆ ಹೊದಿಕೆಯಾಗಿ ಗುಲಾಬಿ ಬಣ್ಣದ ವೇಲು. ಹೊರಗೆ ಹೋಗೋ ಮೊದಲು ಬ್ಯಾಗಿನಿಂದ ನಾನೇ ತೆಗೆದಿಟ್ಟದ್ದ? ಗುಲಾಬಿ ಬಣ್ಣದಲ್ಲಿ ನಗ್ತಾ ಕುಂತಿದೆ. ಮೆತ್ತನೆಯ ದುಪಟ್ಟಾ. ಕೆನ್ನೆಗೆ ಒತ್ತಿಕೊಂಡ್ರೆ ನವಿರುಭಾವ ಬರೋಹಾಗೆ. ಈ ದುಪಟ್ಟಾ ನನ್ನದೇ ಅಂದುಕೊಂಡ್ರೆ ಇನ್ನೆಂತದೋ ಪುಳಕ. ಅಷ್ಟು ಪ್ರೀತಿ ಬಿಳೀ ಬಣ್ಣಕ್ಕೆ ಗುಲಾಬಿಯ ಹೊಂದಿಕೆ ಅಂದರೆ. ನನ್ನ ಮತ್ತು ಹುಡುಗನ ಹೊಂದಿಕೆಯ ಹಾಗೆ.
ನಾನು ಬಿಳಿ, ಅಂವ ಗುಲಾಬಿ ಅಂದುಕೊಂಡೆ. ಅಲ್ಲಲ್ಲ, ಗುಲಾಬಿ ಅವಗೆ ಹೋಲಿಕೆ ಆಗೊದಲ್ಲ, ನಾನೇ ಗುಲಾಬಿ ಅಂತೆಲ್ಲ ಯೋಚಿಸುತ್ತ ಬತ್ಟೆ ಎತ್ತಿಕೊಂಡು, ರೂಮಿನ ಬಾಗಿಲು ಭದ್ರಪಡಿಸಿ ಬಾತ್ ರೂಮಿನ ಎದುರು ಬಂದಾಗ ಮತ್ತೆ ನೆನಪಾಯ್ತು. ಮೊದಲೇ ಎತ್ತಿಟ್ಟುಕೊಂಡ ಬಟ್ಟೆ ಇತ್ತು, ಆದ್ರೆ ಬ್ಯಾಗು ರೂಮಲ್ಲೆಲ್ಲೂ ಕಾಣಿಸದೇ ಇದ್ದದ್ದು!!!
ಈಗ ಮತ್ತೆ ಭಯ ಆವರಿಸೋಕೆ ಶುರುವಾಯ್ತು. ಎಲ್ಲಕ್ಕಿಂತ ಹೆದ್ರಿಕೆಯಾಗಿದ್ದೆಂದರೆ ಬ್ಯಾಗಿನಿಂದ ಬಟ್ಟೆಯನ್ನು ನಾನು ಹೊರಗೆ ಎತ್ತಿಟ್ಟಿರಲೇ ಇಲ್ಲ. ಈ ಬಟ್ಟೆ ಹೊರಗೆ ಕಾಟಿನ ಮೇಲೆ ಬಂತಾದರೂ ಹೆಂಗೆ?
ಬೆಳಕಿನೊಳಗೆ ಬಣ್ಣ ಮಾತ್ರವಲ್ಲ, ಭಯವೂ ಇದೆ ಅನ್ನಿಸೋಕೆ ಶುರುವಾಯ್ತು. ಸೀತಿಯಿನ್ನೂ ಅದೇ ರೂಮಲ್ಲಿದ್ದಾಳ ಅಂತ ಯೋಚನೆ ಬರೋಷ್ಟರಲ್ಲಿ ದುಗುಡ ಇಡೀ ಮೈಯಲ್ಲಿ ಹರಿದು ಕಣ್ಣಲ್ಲಿ ಹೊರಗೆ ಬಂತು.
ಹಬ್ಬ ಮುಗೀಲಿ, ಮತ್ತೆ ಸೀತಿ ಬರ್ತಾಳೆ.
ಎಲ್ರಿಗೂ ಹಬ್ಬದ ಶುಭಾಶಯ.
ನೆನಪನ್ನೆಲ್ಲಾ ಉಳಿಸಿಕೊಳ್ಳುತ್ತಾ,
ಕನಸಲೂ ನೆನಪನೇ ಗಳಿಸುತ್ತಲಿಹ
ಆಂತರ್ಯದ ನಡುವಣ ವಾಸ್ತವಸೇತುವೆಗೆ
ಹೆಸರಿಡಲಾಗದೇ ಹೆಸರು
"ನೆನಪು ಕನಸುಗಳ ನಡುವೆ"
September 9, 2010
Subscribe to:
Posts (Atom)
ನಿನ್ನ ಪ್ರೀತಿಗೆ ಅದರ ರೀತಿಗೆ...
ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.
ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.
ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...