ಇವತ್ತಿನ್ನು ಬೇರೆ ಎಂತ ಇಲ್ಲೆ, ಇದು ಅಮವಾಸ್ಯೆಯೇ ಸೈ ಅಂತ ಕುಳಿತವಳಿಗೆ ದೂರದಲ್ಲಿ ಅಡಕತ್ತರಿಯನ್ನ ಅಗಲಿಸಿಟ್ಟ ಹಾಂಗೆ ಚಂದಿರ ಕಂಡ. ಓಹೋ ಬಿದಿಗೆಯೋ ತದಿಗೆಯೋ ಸೈ ಅಂದುಕೊಂಡೆ. ಕಶಾಯಕ್ಕೆ ಮೆಂತೆ ಒಂದು ಹಿಡಿ ಹಾಕ್ಲನೆ? ಅಂತ ಅಮ್ಮಮ್ಮ ಕರೆದದ್ದಕ್ಕೆ ದೊಡ್ಡಮ್ಮ ಬ್ಯಾಡ ಬ್ಯಾಡ, ತಂಡ್ಯಾಘೋಕು ಅಂದಿದ್ದಷ್ಟೇ ಕೇಳಿದ್ದು. ಮತ್ತೆಲ್ಲ ಅದೇ ಯೋಚನೆ.
ಹಾಂಗಾದರೆ ೧೦೦ನೇ ನಂಬರ್ ರೂಮನ್ನ ಯಾರಿಗೂ ಕೊಡದಿದ್ದಕ್ಕೆ ಸರಿಯಾದ ಕಾರಣ ಯಾವ್ದು. ಸೀತಿ ಹೆಂಗೆ ಸತ್ತಳು? ಸತ್ತದ್ದ? ಕೊಲೆಯ? ಆತ್ಮಹತ್ಯೆ ಇರ್ಬಹುದ? ಎಂಥ ಚೆಂದ ಹೆಸರು, ಸೀತಿ. ಅಷ್ಟು ಚೆಂದದ ಹೆಸರಿನವ್ಳು ಎಂತಕೆ ಸತ್ತದ್ದು? ಅಂತ ಯೋಚನೆ. ಹಾಂಗೇ ಯೋಚನೆ ಹಿಂದೆ ಹೋದರೆ ಬರೀ ನೆನಪು. ತೀರ ಹಳೇದಲ್ಲ, ಮೊನ್ನೆ ಮೊನ್ನೆಯದಷ್ಟೇ ಮೂರು ಮಡಿಕೆ ಅಡಿಯದ್ದು.
ಮೆರಿಟ್ ಅಲ್ಲಿ ಸೀಟು ಸಿಕ್ಕರೂ ಹಾಸ್ಟೆಲಲ್ಲಿ ಗೋಳು. ಲೇಟ್ ಎಡ್ಮಿಷನ್ ಆದವರು ಹಾಸ್ಟೆಲ್ ಅಲ್ಲಿ ಒಂದು ರೂಮು ಯಾರಾದ್ರೂ ಬಿಟ್ಟು ಹೋಗೋತನಕ ಕಾಯ್ಬೇಕು, ಸಾಲಲ್ಲಿ ನಿಂತು ಕಾಲೆಲ್ಲ ಸತ್ತೇಹೋಗಿತ್ತು. ಸ್ವಲ್ಪ ಆದ್ರೆ ಕುಸಿದುಬೀಳೋ ಹಾಗೆ. ಇನ್ನೇನು ನಂದೇ ಸರದಿ, ವಾರ್ಡನ್ ಮುಂದೆ ಹೋಗೋಷ್ಟರಲ್ಲಿ ಸೀರೆ ಉಟ್ಟ ವಾರ್ಡನ್ ಅಮ್ಮನಂಗೆ ಕಂಡು ಕಣ್ಣಲ್ಲಿ ಊದ್ದ ನೀರು. ಅರೆರೆ, ಒಂದೇ ಹೆಜ್ಜೆಗೆ ನೀರನ್ನೆಲ್ಲ ಒಳಗೆ ಎಳೆದಿದ್ದ? ಒಣಕಣ್ಣು, ಮಾತು ಆಚೆ ಬರೋಷ್ಟರಲ್ಲಿ. ಬಂಡವಾಳ ಅಂದ್ರೆ ಮಾರ್ಕ್ಸ್ ಕಾರ್ಡು, ಅದನ್ನೇ ಮುಂದಿಟ್ಟೆ. ಮೆರಿಟ್ ಅಲ್ಲಿ ಸೀಟು ಸಿಕ್ತು, ಹಾಸ್ಟೆಲಲ್ಲಿ ಸೀಟು ಸಿಗೋದೇ ಕಷ್ಟವಾಗ್ತಿದೆ ಅಂದೆ.
ಅಮ್ಮನಂಗೆ ಕಂಡ ವಾರ್ಡನ್ನು ಅಮ್ಮನಂಗೆ ಇರಲಿಲ್ಲ. ಅಮ್ಮನೇ ಎನ್ನುವಂಗೆ ಮಾತು. ಅರೆಕ್ಷಣ ಮಾರ್ಕ್ಸ್ ನೋಡಿದಂಗೆ ಮಾಡಿದವ್ರು ಇವತ್ತು ಒಂದ್ಕೆಲ್ಸ ಮಾಡು, ಸಂಜೆತನಕ ನೋಡು, ಈ ಹಾಸ್ಟೆಲಲ್ಲಿ ಯಾರಾದ್ರೂ ಹುಡ್ಗೀರು ಫ್ರೆಂಡ್ಸ್ ಆದ್ರೆ ಅವರೊಟ್ಟಿಗೆ ಒಂದು ದಿನದ ಮಟ್ಟಿಗೆ ಉಳಕೋ, ನಾಳೆ ನಿಂಗೊಂದು ರೂಮು ಇದೇ ಹಾಸ್ಟೆಲಲ್ಲಿ ಸಿಗೋ ಹಾಂಗೆ ಮಾಡ್ಕೊಡ್ತೇನೆ, ಯಾವ್ದುಕ್ಕೂ ಸಂಜೆ ನಂಗೊಂದು ಕಾಲ್ ಮಾಡು, ಅಂತ ಒಂದಿಷ್ಟು ನಂಬರ್ ಬರ್ದಿರೋ ಚೀಟಿಯನ್ನ ಕೊಟ್ಟು ಹೊರಟೇ ಹೋದ್ರು ಅಮ್ಮನಂಥ ವಾರ್ಡನ್ ಮೇಡಮ್ಮು.
ಐದು ವರ್ಷ ಒಂದೇ ಕಾಲಜಲ್ಲಿದ್ರೂ ಫ್ರೆಂಡು ಮಾತ್ರ ಒಬ್ಬಳೇ. ಅಂಥೋಳಿಗೆ ಇನ್ನು ಒಂದಿನಕ್ಕೆಲ್ಲ ಯಾರನ್ನ ಫ್ರೆಂಡು ಮಾಡ್ಕೊಳೋಕೆ ಸಾಧ್ಯ. ಸಂಜೆತನಕ ಕಾದು ಮತ್ತೆ ನೆನಪಾಗಿದ್ದು ವಾರ್ಡನ್ ಮೇಡಮ್ಮು ಕೊಟ್ಟ ಅದೇ ನಂಬರ್ರು. ಕಾಲ್ ಮಾಡಿ ಹದಿನೈದು ನಿಮಿಷದಲ್ಲಿ ಸ್ಕೂಟಿಯಲ್ಲಿ ಬಂದೇ ಬಿಟ್ಟರು.
ಕೋಟಪ್ಪ, ಆ ನೂರನೇ ನಂಬರ್ ರೂಮಿದೆ ಅಲ್ಲ, ಅದನ್ನ ಓಪನ್ ಮಾಡಿ ಸ್ವಲ್ಪ ಕ್ಲೀನ್ ಮಾಡಿ ಈ ಹುಡುಗಿಗೆ ಕೊಡಿ, ಅಂದವರು ನಾನು ರೂಮಿನ ಒಳಗೆ ಹೋಗಿ ಗಟ್ಟಿ ಉಸಿರುಬಿಡೋತನಕ ನನ್ನ ಜೊತೇನೇ ಇದ್ರು. ಆಮೇಲೆ ಹೋದ್ರು. ಮತ್ತೆ ವಾಪಸ್ ಬಂದು ಏನೇ ತೊಂದ್ರೆ ಆದ್ರೂ ಒಂದು ಕಾಲ್ ಮಾಡು ಅಂದೇ ಹೋದದ್ದು.
ಎಲ್ಲೇ ಹೋಗ್ಲಿ, ಇಂಥವರು ಒಬ್ಬರನ್ನ ಜೊತೆಗೆ ಕಳಿಸ್ತಾನೆ ದೇವ್ರು, ಇಂಥವರ ಪ್ರೀತಿ ಸದ್ಯುಪಯೋಗವಾಗ್ಲೀ ಅಂತಾನೇ ನನ್ನಂಥ ಪೆದ್ದುಗಳನ್ನೂ ಸೃಷ್ಟಿ ಮಾಡಿರ್ತಾನೆ ಅಂದುಕೊಂಡೆ. ಕೈಕಾಲು ತೊಳ್ಕೊಂಡು ಬಂದು ಬ್ಯಾಗು ಓಪನ್ ಮಾಡಿದ್ರೆ ಅದರಲ್ಲಿ ಮೇಲೆಯೇ ಸಿಕ್ಕಿದ್ದು ದಿನಾ ನಾ ಊಟ ಮಾಡುವ ತಟ್ಟೆ. ಅಮ್ಮ ಕೊನೇಲಿ ಮರೀದೆಲೆ ತುಂಬಿದ್ದರು ಅನ್ಸತ್ತೆ. ತಟ್ಟೆ ತೊಳೆಯೋಕೆ ಎರಡು ಹನಿ ಉದುರೇ ಹೋಯ್ತು. ಟವೆಲ್ಲು ಸಿಕ್ಕದೇ ಇಡೀ ಬ್ಯಾಗೆಲ್ಲ ತಡಕಾಡಿದೆ. ಅಮ್ಮ ಚಕ್ಕುಲಿಯನ್ನ ಕವರಲ್ಲಿ ಹಾಕಿ ಮೇಲಿಂದ ನ್ಯೂಸ್ ಪೇಪರಿನ ಒಂದು ಹಾಳೆಯನ್ನ ಸುತ್ತಿದ್ದರು. ಚೌತಿ ಹಬ್ಬಕ್ಕೆ ಮತ್ತೆ ಓಡಿ ಬರದೇನು ಬೇಡ, ಸರೀಗೆ ಅಭ್ಯಾಸ ಮಾಡು, ಸುಮ್ಮನೆ ಅಲ್ಲಿಂದಿಲ್ಲಿಗೆ ಒಂದಿನ ರಜಕ್ಕೆ, ಬರೀತೆ ಬಸ್ ಖರ್ಚು, ಅಂದ ಅಮ್ಮ ಚಕ್ಕುಲೀನ ಮರಿದೇ ಕಳಿಸಿದ್ದರಿರಬೇಕು.
ಅಮ್ಮ ಸುತ್ತಿಕಳಿಸಿದ ಹಾಳೇನ ಬಿಸಾಕೋಕೆ ಮನಸಾಗದೇ ಎರಡಕ್ಷರ ಓದಿದ್ರೆ ಇಂಥದೇ ವಾಕ್ಯಗಳನ್ನ ಮತ್ತೆಲ್ಲೋ ಓದಿದೀನಿ ಅನ್ನಿಸಿ ಸರಿಯಾಗಿ ಓದಿದೆ. ಕೊನೇಲಿ ನನ್ನ ಹೆಸರೂ ಇತ್ತು. ನಾನೇ ಬರ್ದಿದ್ದು, ಅಲ್ಲೆಲ್ಲೋ ಪಬ್ಲಿಷ್ ಆಗಿದ್ದನ್ನ ಅಮ್ಮ ಬೇಕಂತಲೆ ಸುತ್ತಿ ಕಳಿಸಿರ್ತಾರೆ, ಅಮ್ಮ ಕಳಿಸಿದ ಏನನ್ನೂ ಮಗಳು ಬಿಸಾಕೋಲ್ಲ ಅನ್ನೋ ನಂಬಿಕೆಗೆ ಅಮ್ಮ ಹೇಳದೆಯೇ ಕಳಿಸಿದ ಇಂಥ ಅದೆಷ್ಟೋ ಹಾಳೆಗಳೇ ಸಾಕ್ಷಿ. ಹಾಳೆ ಮಡಚಿ ಬ್ಯಾಗಿನಲ್ಲಿಟ್ಟು ಊಟಕ್ಕೆ ನಡೆದರೆ ಮೆಸ್ ಅಲ್ಲಿ ಎಲ್ಲ ಟೇಬಲ್ಲೂ ತುಂಬಿ ಹೋದಂಗೆ. ಒಂದೆರಡು ಚೇರ್ಸ್ ಖಾಲಿ ಇದ್ದ ಟೇಬಲ್ಲಿಗೆ ಕೂತು ಬಡಿಸಿಕೊಂಡ ಚಪಾತಿಯನ್ನ ಚೂರುಮಾಡೋದು ಸ್ವಲ್ಪ ಬಿಗಿಯೇ ಅನ್ನಿಸಿತು. ಹಾಂಗಾದ್ರೆ ನಮ್ಮ ಕಾಲೇಜಿನ ಸರ್ರು ಹೇಳಿದಂಗೆ ಇದು ಎಂ ಆರ್ ಎಫ್ ಟೈರೇ ಸೈ ಅಂತ ನೆನೆಸಿಕೊಂಡು ಒಬ್ಬಳಿಗೇ ನಗುಬಂತು.
ಎಷ್ಟೊಂದು ಜನಕ್ಕೆ ಯುನಿವರ್ಸಿಟಿಯಲ್ಲಿ ಸೀಟು ಸಿಕ್ಕರೂ ಹಾಸ್ಟೆಲಲ್ಲಿ ಸೀಟು ಸಿಕ್ಕಿಲ್ಲಂತೆ. ಎಲ್ಲ ರೂಮೂ ತುಂಬಿ ನೂರನೇ ನಂಬರ್ ರೂಮನ್ನ ಯಾರಿಗೋ ಕೊಟ್ರಂತೆ, ಒಬ್ಬಳೇ ಹುಡ್ಗಿ ಇದಾಳಂತೆ ಆ ರೂಮಲ್ಲಿ.
ರೂಮು ಕೊಟ್ರೂ ಅಲ್ಲಿ ರೂಮಿನ ಕಪಾಟು ಸಿಗಾಂಗೇ ಇಲ್ಲ, ಸೀತೀದು ಬಟ್ಟೆ ಬರೆ ಎಲ್ಲ ಅದ್ರಲ್ಲೇ ಇದೆ. ರೂಮು ಮಾತ್ರ ಎಮರ್ಜೆನ್ಸಿ ಕೊಟ್ಟಿರ್ತಾರೆ, ಅಷ್ಟೇ.
ಯಾಕೆ, ಅವರ ಕಡ್ಯೋರು ಹೆಣ ತಗೋಂಡು ಹೋಗೋಕೆ ಬಂದೋರು ಅವಳ ಲಗ್ಗೇಜು ತಗಂಡು ಹೋಗ್ಲಿಲ್ವ?
ಎಲ್ಲಿ ಹೆಣಕ್ಕೂ ಉನಿವರ್ಸಿಟಿಯವ್ರೇ ಗತಿ ಕಾಣ್ಸಿದ್ದಂತೆ, ಅವರ ಮನ್ಯೋರು ಮಗಳು ಮರ್ಯಾದೆ ತೆಗ್ದುಹೋದ್ಲು ಅನ್ನೋ ಕಾರಣಕ್ಕೆ ಯಾರೂ ಬರ್ಲೇ ಇಲ್ಲಂತೆ.
ಮೂರುವರ್ಷ ಆಗಿತ್ತಂತೆ ಆ ರೂಮನ್ನ ಯಾರೂ ಉಪಯೋಗಿಸ್ದೆ, ಈ ವರ್ಷಾನೇ ಓಪನ್ ಆಗಿದ್ದು.
ಆ ರೂಮಿನ್ ಬಾಗ್ಲು ತೆಗೀದೆ ಇದ್ರೂ ಕಿಟಕಿ ಬಾಗ್ಲು ಮಾತ್ರ ಆವಾಗಾವಗ ತೆಗ್ದೇ ಇರ್ತಿತ್ತು. ಕಿಟಕಿ ಬಾಗ್ಲು ತೆಗ್ದಿದ್ದಂಗೆ ಅನ್ಸಿದ್ರೆ ನಾ ಅಂತೂ ಆ ಕಡೆ ನೋಡದೇನೆ ಈ ಕಡೆ ಬಂದುಬಿಡ್ತೀನಪ್ಪ.
ಅದಕ್ಕೆ ನಂಗೆ ಹಾಸ್ಟೆಲಿನ್ ನೂರನೇ ನಂಬರ್ ರೂಮಿರೋ ಜಿ ವಿಂಗ್ ಅಂದ್ರೆ ಒಂಥರಾ ಮೈ ಜುಂ.
ಆ ರೂಮಲ್ಲಿರೋ ಹುಡ್ಗಿ ನಾನೇ ಅಂತ ಗೊತ್ತಿರದ ಹುಡ್ಗೀರು ಮಾತಾಡ್ತಲೇ ಇದ್ರು. ಈಗ ಕೈ ತೊಳೆದಾದ್ಮೇಲೆ ರೂಮಿಗೆ ವಾಪಸ್ಸಾಗೋದು ಹೆಂಗೆ? ಅಪ್ಪ ಹೇಳಿದಂಗೆ ಕೇಳಬೇಕಿತ್ತು. ಮಾಸ್ಟರ್ ಡಿಗ್ರೀ ಅದೂ ಇದೂಂತ ಊರು ಬಿಟ್ಟು ಬರ್ಲೇಬಾರದಿತ್ತು. ಅಪ್ಪನ ಬೇಜಾರು ಆರಿದಮೇಲೆ ಹೊರಟಿದ್ರೂ ಅಪ್ಪ ಜೊತೇಲೇ ಬಂದು ಎಲ್ಲ ವ್ಯವಸ್ಥೆ ಮಾಡಿಕೊಟ್ಟಾದ್ರೂ ಹೋಗ್ತಿದ್ರಾ? ವಾಪಸ್ಸು ಈಗಲೆ ಹೊರಟುಬಿಡೋಣಂದ್ರೆ ಊರಾದ್ರೂ ಹತ್ತಿರವಾ? ಮೂರು ತಾಸು, ಮೂರುತಾಸು ಬಸ್ ಪ್ರಯಾಣ ಮಾಡ್ಬೇಕು. ಈ ರಾತ್ರೀಲಿ ಹುಡ್ಗೀರನ್ನ ಹಾಸ್ಟೆಲಿಂದ ಹೊರಗೆ ಬಿಡೋದೂ ಇಲ್ಲ. ಸುಭದ್ರ ಕೋಟೆಯೊಳಗೆ ಅಭದ್ರ ನಡುಕ. ಅನಾಥ ಭಾವ.
ಮುಂದುವರೀತದೆ, ಮತ್ತೆ ಬರೀತೇನೆ.
ನೆನಪನ್ನೆಲ್ಲಾ ಉಳಿಸಿಕೊಳ್ಳುತ್ತಾ,
ಕನಸಲೂ ನೆನಪನೇ ಗಳಿಸುತ್ತಲಿಹ
ಆಂತರ್ಯದ ನಡುವಣ ವಾಸ್ತವಸೇತುವೆಗೆ
ಹೆಸರಿಡಲಾಗದೇ ಹೆಸರು
"ನೆನಪು ಕನಸುಗಳ ನಡುವೆ"
August 26, 2010
August 20, 2010
ಮಧ್ಯಾಹ್ನದ ಸಾರು
ಮುಗಿಲುಬಿದ್ದು ಮಳೆಯಾದ ದಿನಗಳಲ್ಲೋ, ಮಾಗಿಯ ಚಳಿಯಲ್ಲೋ, ಜಿಮುರು ಹನಿಯಲ್ಲೋ, ಬೆಳಗಿನ ಇಬ್ಬನಿಯಲ್ಲೋ ನಿನ್ನ ಪರಿಚಯವಾಗಿದ್ದರೆ ಖಂಡಿತ ಅದು ಪರಿಚಯವಾಗಿರದೇ ಪ್ರೀತಿಯಾಗೇ ಹೋಗುತ್ತಿತ್ತು. ಸುಡು ಬೇಸಿಗೆ ಮಧ್ಯಾಹ್ನ ನೀನು ಸಿಕ್ಕ ಗಳಿಗೆ ನಾನು ಒಗ್ಗರಣೆಗೆ ಕಬ್ಬಿಣದ ಹುಟ್ಟೊಳಗೆ ಎಣ್ಣೆ ಕಾಯಿಸಿಟ್ಟ ಹೊತ್ತು. ನೀನು ಯಾರು ಅಂತ ನನಗೆ ಗೊತ್ತಾದದ್ದು. ಅಲ್ಲಿಯತನಕವೂ ಅವರೆಲ್ಲರಿಗೆ ಏನು ಗೊತ್ತಿತ್ತೋ ಅದನ್ನೇ ನನಗೆ ಹೇಳಿದ್ದು, ನನಗೂ ಗೊತ್ತಾದದ್ದು. ಎಣ್ಣೆ ಆರಲುಬಿಟ್ಟು ನಿನ್ನ ಗುರುತು ಹಿಡಿದೆ ಅಂದರೆ ನೀನು ನನಗೆ ಬೇಕಾದ ವ್ಯಕ್ತಿ ಅನ್ನುವಷ್ಟು ಗೊತ್ತಿತ್ತು.
ದಿನಕಳೆದ ಹಾಗೆ ಗೊತ್ತಾದ್ದೆಂದರೆ ನನಗೂ ನಿನಗೂ ಸೂರ್ಯ ಚಂದ್ರರಿಗಿರುವಷ್ಟು ಅಂತರವಿದೆಯೆಂಬುದು. ನಿನ್ನ ರಾತ್ರಿಗಳನ್ನೆಲ್ಲ ಬಗೆದು ನನ್ನ ಹಗಲಾಗಿಸಿಕೊಂಡೆ ಅಂದುಕೊಂಡೆ. ಬರಬರುತ್ತ ನೀನು ಹಗಲಿಗೂ ಬಿಜಿಯಾಗತೊಡಗಿ ರಾತ್ರಿಪಾಳಿಯ ಕೆಲಸಗಳೆಲ್ಲ ನನಗೇ ಬಿದ್ದವು. ನಾನು ಯಾವತ್ತೂ ನಿಶಾಚರಿಯೇ ಆದರೂ ನಿನ್ನ ಹಾಗೆ ಹಗಲುರಾತ್ರಿಗಳಲ್ಲಿ ಸಿಕ್ಕ ಹೊತ್ತನ್ನೆಲ್ಲ ಬದುಕಿಗೆ ಚಕ್ರವಾಗಿಸಿಕೊಂಡು ಬದುಕನ್ನೆಳೆಯುವುದು ಗೊತ್ತಿರಲಿಲ್ಲ. ಸಿಕ್ಕಹೊತ್ತನ್ನೆಲ್ಲ ಸುಮ್ಮನೇ ಹೇರಿಕೊಂಡು ಭಾರವಾಗಿಸಿಕೊಂಡು ಬಾಗಿಹೋಗಿದ್ದೆ. ಅದಕ್ಕೇ ಇರಬೇಕು ತೂಕವನ್ನಿಷ್ಟು ಇಳಿಸಿಕೊಂಡು ಸ್ವಲ್ಪ ದಿನ ಹಗುರಾದೆ ಅಂದುಕೊಂಡೆ. ನೀನು ಬೆಳೆಯುತ್ತ ಹೋದೆ.
ನೀನು ಮಾತ್ರ ಅರ್ಥವಾಗಲೇ ಇಲ್ಲ. ಅರ್ಥವಾದಷ್ಟೂ ನಿಗೂಢವಾದೆ. ಈಗಷ್ಟೇ ಕುದಿಯುತ್ತಲಿದ್ದ ನೀರು ಆ ಕ್ಷಣಕ್ಕೆ ತಣ್ಣಗೆ ಆರಿದ ಹಾಗೆ, ನೀನು ತಣ್ಣಗೋ, ಬಿಸಿಯೋ ಗೊತ್ತುಪಡಿಸಲೇ ಇಲ್ಲ. ಒಮ್ಮೆ ಅಮ್ಮನಂಥ ಮಮತೆಯಾದರೆ, ಇನ್ನೊಮ್ಮೆ ಅಪ್ಪನಂತೆ ಬೆಚ್ಚಗೆ. ಒಮ್ಮೆ ನೀನ್ಯಾರೂ ಅಲ್ಲದ ಹಾಗೆ. ನೀನೆಂದರೆ ಬಲು ಸೋಮಾರಿ ಅಂತ ನಾನು ಬಯ್ಯುವ ಹೊತ್ತಿಗೆ ನೀನು ಬಿಜಿಯಾಗಿರುತ್ತಿದ್ದೆ. ನೀನು ನಿದ್ರಿಸುವುದೇ ಇಲ್ಲ ಅಂತ ದೂರುವ ಹೊತ್ತಿಗೆ ನೀನು ಕಣ್ಮುಚ್ಚಿದ ಸದ್ದು. ನೀನು ನಿಶಾಚರಿ ಅಂದರೆ ನೀನು ಹಗಲೂ ನಿದ್ರಿಸುವುದಿಲ್ಲ ಅಂತ ನನಗೆ ಗೊತ್ತಿರಬೇಕು. ಅಂತೂ ನೀನು ಅರ್ಥವಾಗಲೇ ಇಲ್ಲ.
ಸಾರು ಮಾಡಿಟ್ಟು ‘ಪ್ಲೀಸ್ ಒಂದು ಒಗ್ಗರಣೆ’ ಅಂದರೆ ನೀನು ಆ ಕ್ಷಣಕ್ಕೆ ರೆಡಿ. ಒಗ್ಗರಣೆಯ ಘಮಕ್ಕೆ ಸುಮಾರು ಮಂದಿ ಅಡುಗೆ ಚೆನ್ನಾಗಿದೆ ಅಂತ ಹೇಳಿದ ದಿನಗಳನ್ನು ನೀನು ಮರೆತರೂ ನಾನು ಕೃತಜ್ಞಳು. ಎಷ್ಟೋ ದಿನ ನೀನು ಇವತ್ತೊಂದು ಸಾರು ಮಾಡು ಅಂತ ನಾನು ಪೀಡಿಸಿದ್ದೇನೆ. ಅದಕ್ಕಾಗಿ ಕ್ಷಮಿಸು. ಆದರೂ ನೀನು ಮಾಡಿದ ಸಾರು ಇವತ್ತಿಗೂ ನನಗೆ ಪ್ರೀತಿ. ಎಷ್ಟೋ ಸರ್ತಿ ಕೆಟ್ಟದಾಗಿ ಒಗ್ಗರಣೆ ಕೊಟ್ಟ ಭಾಗ್ಯ ನನ್ನದು. ಸಲ್ಲಿಸಿಕೊಂಡ ಮಮತೆ ನಿನ್ನದು. ನೀನು ಅರ್ಥವಾಗದೇ ಹೋದರೂ, ಅರ್ಥವಾಗದೇ ಇದ್ದರೂ.
ಅಂಗಳದಲ್ಲಿಳಿಯಬೇಕು, ಕೆಸರು ಬೇಕು ಅಂದಾಗ ಸಿಗದ ಕೆಸರು ಕಾಡು ಹಾದಿಯಲ್ಲಿ ನಡೆಯುವಾಗಲಾದರೂ ಮುಂದೊಮ್ಮೆ ಸಿಕ್ಕಿತು. ಸಾಕು ಬಿಡು. ಅಂಗಳದ ಬೆಳದಿಂಗಳು ಕಾಡುತ್ತಿದೆ, ಬೆಳದಿಂಗಳು ಸರಿದುಹೋಗದ ಹಾಗೆ ಚಪ್ಪರ ಹಾಕಿಸಯ್ಯ, ನನಗೆ ಬೆಳದಿಂಗಳು ಬೇಕು, ಬೆಳದಿಂಗಳಾಗಬೇಕು ಅಂತ ಅಂಗಲಾಚಿದರೆ ಊರಿದ್ದೂರೇ ಬೆಳದಿಂಗಳ ಕಾಣುವ ಹಾಗೆ ಮಾಡಿದೆಯಲ್ಲ, ಅಷ್ಟು ಸಾಕು. ನೀನು ಅರ್ಥವಾದಂತೆ.
ನಾನು ನಿನಗೇನಾಗಬೇಕು ಅಂತ ನೀನು ಕೇಳಿದ ದಿನಗಳಲ್ಲಿ ನನಗೆ ಅನ್ನಿಸಿದ್ದು ಮಾತ್ರ ಇಷ್ಟೇ. ಏನೂ ಆಗದ, ಏನೂ ಆಗದೇ ಇರುವ ಸಂಬಂಧವಿದ್ದರೆ ಅದು ನಮ್ಮದು. ಇದಕ್ಕೂ ಮಿಕ್ಕಿ ಸಂಬಂಧವಿಲ್ಲದೇ ಇರುವ ಇಬ್ಬರನ್ನು ಬೇರೆಬೇರೆಯೇ ಗುರುತಿಸಿ ಇರದ ಸಂಬಂಧಕ್ಕೆ ಸಿಗದ ಬೆಲೆ ಅರ್ಥವಾದ ಹೊತ್ತಿಗೆ ನಾನು ನಿನಗೆ ಮಗಳಾಗಿರಬೇಕು ಅನ್ನಿಸಿದ್ದು ಸುಲಭದ್ದಲ್ಲ. ಆ ಹೊತ್ತಿಗೆ ನೀನು ಎಲ್ಲ ಸಂಬಂಧಗಳನ್ನು ಮೀರಿ ಬೆಳೆದಿರುತ್ತೀಯ, ಮಗಳೆ ಅನ್ನುವ ಹೊತ್ತಿಗೆ ನಾನು ಇನ್ನೊಂದು ತೀರದಲ್ಲಿರಬೇಕು ತಿರುಗಿ ನೋಡಲಾಗದಿರುವಷ್ಟು ಅನ್ನುವುದಿಷ್ಟೇ ಆಸೆ.

Subscribe to:
Posts (Atom)
ನಿನ್ನ ಪ್ರೀತಿಗೆ ಅದರ ರೀತಿಗೆ...
ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.
ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...