March 30, 2010

ಜೋಗಿ ಅವರ ‘ಯಾಮಿನಿ’ಯೊಂದಿಗೆ ಮುಖಾಮುಖಿ

ಕನ್ನಡ ಸಾಹಿತ್ಯ ರಂಗ ಅಮೆರಿಕ ಮತ್ತು ಅಭಿನವ ಪ್ರಕಟಿಸಿದ ಮೈ.ಶ್ರೀ.ನಟರಾಜ ಅವರ ಸಂಪಾದಕತ್ವದಲ್ಲಿ ೨೦೦೯ರಲ್ಲಿ ಬಿಡುಗಡೆಯಾದ "ಕನ್ನಡ ಕಾದಂಬರಿ ಲೋಕದಲ್ಲಿ... ...ಹೀಗೆ ಹಲವು..." ಕೃತಿಯಲ್ಲಿ ಪ್ರಕಟ.

ಜೋಗಿಯವರ ‘ಯಾಮಿನಿ’ಯೊಂದಿಗೆ ಮುಖಾಮುಖಿ

ಶಾಂತಲಾ ಭಂಡಿ
ಕೂಪರ್ಟಿನೋ, ಕ್ಯಾಲಿಫೋರ್ನಿಯಾ, ಯು.ಎಸ್.ಎ.


ಖ್ಯಾತ ಪತ್ರಕರ್ತ ಹಾಗೂ ಸಾಹಿತಿ ಜೋಗಿಯವರ ಈ ಕಾದಂಬರಿಯನ್ನು ಅಂಕಿತ ಪುಸ್ತಕದ ೨೭೩ನೇ ಪ್ರಕಟಣೆಯಾಗಿ ಪ್ರಕಾಶ್ ಕಂಬತ್ತಳ್ಳಿಯವರು ಆಸ್ಥೆಯಿಂದ ೨೦೦೮ರಲ್ಲಿ ಹೊರತಂದಿದ್ದಾರೆ. ಉದಯ ಮರಕಿಣಿಯವರ ಮುನ್ನುಡಿ, ಲೇಖಕರ ಸ್ವಗತ ಹೊಂದಿದ ಈ ಕಿರು ಕಾದಂಬರಿ ಜೋಗಿಯವರ ಬರಹ ಶಕ್ತಿಗೊಂದು ಸಾಕ್ಷಿ.

ಕೃತಿ ಮತ್ತು ಕರ್ತೃ:

‘ಓದುಗನಾಗಲು ಹೊರಟವನು ಕಥೆ ಬರೆದೆ. ಮೆಚ್ಚಿಕೊಂಡರು. ಮತ್ತೊಂದಿಷ್ಟು ಕಥೆಗಳನ್ನು ಬರೆದು ಪ್ರಕಟಿಸಿದೆ. ಮದುವೆಯಾಯಿತು. ಕತೆಯೊಂದು ಸಿನೇಮಾ ಆಯ್ತು. ರಾಜ್ಯಪ್ರಶಸ್ತಿಯೂ ಬಂತು. ಸೀರಿಯಲ್ಲು ಸಿನೆಮಾಗಳಿಗೆ ಸಂಭಾಷಣೆ ಬರೆದೆ. ಮನೆಯಾಯಿತು. ಖುಷಿಕೊಡುವುದು ಕನ್ನಡಪ್ರಭ ಪುರವಣಿ ವಿಭಾಗದ ಹುದ್ದೆ. ‘ಬರೆಯುವುದಿಲ್ಲ’ ಎಂದು ಕುಳಿತಾಗೆಲ್ಲ ಕತೆಗಳು ಹುಡುಕಿಕೊಂಡು ಬಂದು ಕಾಡಿವೆ. ಅಂಥ ಬೇಡಿಕೆಯ ಫಲ: ಜಾನಕಿ ಕಾಲಂ, ಜೋಗಿ ಮನೆಯ ಹಿತ್ತಲಹಾಡು, ರವಿ ಕಾಣದ್ದು, ಜೋಗಿ ಕತೆಗಳು, ಹಿಟ್ ವಿಕೆಟ್, ನದಿಯ ನೆನಪಿನ ಹಂಗು, ಸೀಳು ನಾಲಗೆ.’ ಹೀಗೆ ಕವಿ, ಕಥೆಗಾರ, ಕಾದಂಬರಿಕಾರರಾದ ಜೋಗಿಯವರು ಕಿರುಎಳೆಯಲ್ಲಿ ತಮ್ಮ ಪರಿಚಯ ಮಾಡಿಕೊಡುತ್ತಾರೆ. ‘ನಲವತ್ತು ದಾಟಿದ್ದೇ ಸುಮ್ ಸುಮ್ನೆ ಕಣ್ಣೀರು’ ಎಂಬುದಾಗಿ ಯಾಮಿನಿಯ ಆರಂಭಕ್ಕೆ ಮೊದಲು ಕಣ್ದುಂಬಿ ನುಡಿಯುತ್ತಾರೆ.

ಇವಿಷ್ಟು ಜೋಗಿಯವರ ತೆರೆದಿಟ್ಟ ಮನಸಾದರೆ, ಅವರಿವರಿಂದ ಕೇಳಿ, ಓದಿ ಜೋಗಿಯವರ ಬಗ್ಗೆ ನನಗೆ ತಿಳಿದದ್ದಿನ್ನಷ್ಟು. ‘ಶಿಕಾರಿ’, ‘ಶಕ್ತಿ’, ‘ಜೀವನ’, ‘ಬೆಳ್ಳಿತೆರೆ’ ಮುಂತಾದ ದೂರದರ್ಶನ ಧಾರವಾಹಿಗಳಿಗೆ ಸಂಭಾಷಣೆ ಹಾಗೂ ‘ಶರಪಂಜರ’, ‘ಕಲ್ಯಾಣಿ’, ‘ಗುಪ್ತಗಾಮಿನಿ’, ‘ಪ್ರೀತಿ ಇಲ್ಲದ ಮೇಲೆ’, ‘ಬಂದೇ ಬರತಾವ ಕಾಲ’ ಧಾರವಾಹಿಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಒದಗಿಸಿದ ಗೌರವ ಜೋಗಿಯವರಿಗೆ ಸಲ್ಲುತ್ತದೆ. ಜೋಗಿಯವರಿಂದ ಲಿಖಿತವಾದ ‘ಜೋಗಿ ಕತೆಗಳು’ ಕಥಾಸಂಕಲನವು ‘ವಿಶ್ವೇಶ್ವರಯ್ಯ ಪ್ರಶಸ್ತಿ’, ಮತ್ತು ‘ಜಾನಕಿ ಕಾಲಂ’ ‘ಹಾ. ಮಾ. ನಾಯಕ ಪ್ರಶಸ್ತಿ’ಯನ್ನೂ ಅವರಿಗೆ ಗಳಿಸಿಕೊಟ್ಟಿವೆ. ‘ಕಾಡಬೆಳದಿಂಗಳು’ ಚಲನಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ಜೋಗಿಯವರೇ ನೀಡಿದ್ದು, ಈ ಚಲನಚಿತ್ರವು ‘ಕರ್ನಾಟಕ ರಾಜ್ಯ ಪ್ರಶಸ್ತಿ’ಯನ್ನು ಪಡೆದಿರುತ್ತದೆ. ‘ಮೌನಿ’ ಚಿತ್ರಕ್ಕೆ ಹಾಗೂ ‘ಕೇರ್ ಆಫ್ ಫುಟ್ ಪಾಥ್’ ಚಲನಚಿತ್ರಕ್ಕೆ ಚಿತ್ರಕಥೆ ಒದಗಿಸಿರುವ ಜೋಗಿಯವರಿಂದ ‘ರಾಯಭಾಗದ ರಹಸ್ಯ ರಾತ್ರಿ’ ‘ಯಾಮಿನಿ’ಯ ಜೊತೆಯಾಗಿ ಬಂದ ಹೊಸ ಕಥಾಸಂಕಲನ. ಜೋಗಿಯವರನ್ನು ಕಥೆ, ಕಾದಂಬರಿಕಾರರಾಗಿ ಈ ಪರಿಯಾಗಿ ಪರಿಚಯಿಸಿಕೊಳ್ಳಬಹುದು.

ಆರಂಭದ ಪುಟವನ್ನೋದಿ ಪುಟ ಹೊರಳಿಸಿದರೆ ದಪ್ಪಕ್ಷರಗಳಲ್ಲಿ ಎದುರಾಗಿ ನಿಲ್ಲುತ್ತಾಳೆ ‘ಯಾಮಿನಿ’. ನಂತರದ ಪುಟಪರದೆಯ ಮೇಲೆ ಕಾಣುವ ಉದಯ ಮರಕಿಣಿಯವರ ಮನಃಸ್ಪರ್ಶಿ ಮಾತುಗಳು ‘ಯಾಮಿನಿ’ಯ ಬಗ್ಗೆ. ಜೊತೆ ಜೊತೆಗೆ ಜೋಗಿಯವರ ಬಗ್ಗೆಯೂ. ಜೋಗಿ ಮತ್ತು ‘ಯಾಮಿನಿ’ಯ ಬಗೆಗಿನ ಉದಯ ಮರಕಿಣಿಯವರ ಮಾತುಗಳು ಅಂತ್ಯವಾಗುತ್ತಿದ್ದಂತೆ ಪರದೆಯ ಮೇಲೆದ್ದು ಬಂದಂತೆ ಜೋಗಿ ಕಾಣಿಸಿಕೊಂಡು ಈ ತೆರನಾಗಿ ನುಡಿಯುತ್ತಾರೆ: ‘ಸಿನಿಮಾಕ್ಕೊಂದು ಕಥೆ ಕೊಡಿ ಎಂದು ಗೆಳೆಯ ಲಿಂಗದೇವರು ಕೇಳಿದಾಗ ಹೊಳೆದದ್ದು ಈ ಕಾದಂಬರಿ. ಯಾಮಿನಿ, ಚಿರಾಯು ಇಬ್ಬರೂ ನನಗಿಷ್ಟ; ಅವರು ಕೇಳಿಕೊಳ್ಳುವ ಪ್ರಶ್ನೆಗಳು ಕೂಡ. ಉತ್ತರ ಇನ್ನೂ ಸಿಕ್ಕಿಲ್ಲ ಎನ್ನುವುದಷ್ಟೇ ಖುಷಿ.’ (ಪುಟ-೭) ಎಂಬ ಅವರ ನುಡಿ ಕಾದಂಬರಿ ಓದಲು ನಮ್ಮನ್ನು ಇನ್ನಷ್ಟು ಪ್ರೇರೇಪಿಸುತ್ತದೆ. ಚಿರಾಯು ಹಾಗೂ ಯಾಮಿನಿ ಪರಸ್ಪರ ಕೇಳಿಕೊಳ್ಳುವ ಪ್ರಶ್ನೆಗಳ ದಿಕ್ಕಿನೆಡೆ ಕುತೂಹಲ ಹೆಚ್ಚುತ್ತಿದ್ದಂತೆ ಕೈ ತಾನಾಗಿಯೇ ಸರಕ್ಕನೆ ಆ ಪುಟ ಮಗುಚಿದರೆ ಕಾದಂಬರಿ ಓದಲು ಮನ ಅಣಿಯಾಗುತ್ತದೆ.

ಕಥೆಯ ಪರಿಚಯಾತ್ಮಕ ವಿಶ್ಲೇಷಣೆ:

ಉತ್ಸಾಹದಲ್ಲಿ ಪುಟ ತಿರುವಿದಾಗ ಓದಲು ಸಿಗುವ ಮೊದಲ ವಾಕ್ಯವೇ ಕೊಂಚ ಇರುಸು ಮುರುಸಿನೊಂದಿಗೆ ಸಾಗುತ್ತದೆ. ‘ಈ ವಾಕ್ಯವೇ ಕಾದಂಬರಿಯ ಆದಿಯಾಗುವ ಅನಿವಾರ್ಯತೆಯಾದರೂ ಏನಿತ್ತು?’ ಅಂದುಕೊಳ್ಳುತ್ತ ಓದುತ್ತ ಹೋದಂತೆ ಕಾದಂಬರಿಯ ಕಥಾನಾಯಕ ಒಬ್ಬ ಕಾದಂಬರಿಕಾರನಾಗಿದ್ದು ಜೋಗಿ ಬರೆಯುವ ಯಾಮಿನಿಯ ಆರಂಭದ ಸಾಲುಗಳನ್ನು ಕಥಾನಾಯಕನಾದ ಚಿರಾಯುವೇ ಬರೆಯುತ್ತಾನೆನ್ನುವುದು ಕಾದಂಬರಿಯ ಆರಂಭದ ವಿಶೇಷತೆಗಳಲ್ಲೊಂದಾಗಿ ಕಾಣುತ್ತದೆ. ಹಾಗೆಯೇ ಆರಂಭದ ಈ ಸಾಲುಗಳ ಬಗೆಗೆ ತಮಗಿದ್ದ ಮುಜುಗರವನ್ನು ಸ್ವತಃ ಜೋಗಿಯವರು ‘ಇಷ್ಟು ಶೃಂಗಾರಮಯವಾಗಿಯೋ ಲಜ್ಜೆಗೇಡಿಯಂತೆಯೋ ಬರೆಯುವುದು ನವ್ಯದ ಶೈಲಿಯಾಯಿತಲ್ಲವೇ? ಈಗ ತೀರ ಹೊಸತೆನಿಸುವಂತೆ ಬರೆಯಲು ಹೊರಟವನನ್ನು ನವ್ಯದ ಅದೇ ಹಳೆಯ ಗುಂಗು ಯಾಕೆ ಕಾಡಬೇಕು? ವಿಮರ್ಶಕರು ಇದನ್ನು ಒಪ್ಪುತ್ತಾರಾ? ಓದುಗರಿಗೆ ಅದರಲ್ಲಿ ಆಸಕ್ತಿ ಹುಟ್ಟಲು ಸಾಧ್ಯವಾ?’ (ಪುಟ-೯) ಎಂಬಂತಹ ಮಾತುಗಳನ್ನು ಚಿರಾಯುವಿನ ಮನದ ಪ್ರಶ್ನಾಲಹರಿಗಳನ್ನಾಗಿಸಿ ಬಿಂಬಿಸುತ್ತ ಚಿರಾಯುವಿನ ಪಾತ್ರವನ್ನು ಇನ್ನಷ್ಟು ಒಗಟಾಗಿಸುವಲ್ಲಿ ಜೋಗಿ ಸಫಲರಾಗುತ್ತಾರೆ. ಅಲ್ಲದೆ, ಆರಂಭಿಕ ಸಾಲುಗಳನ್ನು ಚಿರಾಯುವಿನಿಂದ ಬರೆಸಿ ತಾವು ಆ ಸಾಲುಗಳಿಂದ ಜಾರಿಕೊಂಡು ಕಾದಂಬರಿಯ ಆರಂಭದ ಬಗೆಗಿನ ತಮ್ಮ ಮುಜುಗರವನ್ನಿಷ್ಟು ಕಡಿಮೆ ಮಾಡಿಕೊಂಡಂತೆ ಅನಿಸುತ್ತದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ಕಾದಂಬರಿ ಚರ್ಚೆಗೆ ನಿಲ್ಲಬೇಕಾದರೆ ಕಾದಂಬರಿಯೊಂದು ಹೇಗಿರಬೇಕೆಂಬುದರ ಬಗೆಗಿನ ತಮ್ಮ ನಿಲುವನ್ನು ಲೇಖಕರು ಶ್ರದ್ಧಾ ಎಂಬ ಸ್ತ್ರೀ ಪಾತ್ರದ ಮೂಲಕ ಹೊರಗಿಡುತ್ತಾರೆ. ಹಾಗೆಯೇ ಹೆಣ್ಣೊಬ್ಬಳು ಸಮಾಜದಲ್ಲಿ ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ, ಎಷ್ಟೇ ಜಾಣೆಯಾಗಿದ್ದರೂ ಅವಳ ಸಲಹೆಯನ್ನು ಎಲ್ಲ ಸಂದರ್ಭಗಳಲ್ಲಿಯೂ ಒಪ್ಪಿಕೊಳ್ಳಲಾರದಂತಹ ಗಂಡಿನ ಸಹಜ ಈಗೋ ಬಗ್ಗೆಯೂ ಸೂಕ್ಷ್ಮವಾದ ಹೇಳಿಕೆಗಳು ಸೂಕ್ಷ್ಮಸತ್ಯವನ್ನು ಬಯಲಿಗಿಟ್ಟು ಖುಷಿಕೊಡುತ್ತವೆ ಮತ್ತು ಓದಿದಾಗ ಮನಸ್ಸು ಆ ಸತ್ಯವನ್ನು ಒಪ್ಪಿಕೊಳ್ಳುತ್ತದೆ. ಮುಂದೆ ‘ಗಂಡು ತನ್ನ ಅಹಂಕಾರವನ್ನು ಮರೆತು ಒಂದು ಹೆಣ್ಣಿನ ಜೊತೆ ಮಾತ್ರ ಬೆರೆಯಬಲ್ಲ’ (ಪುಟ-೨೯) ಎಂಬ ಹೇಳಿಕೆ ಈ ಹಿಂದಿನ ಚಿರಾಯುವಿನ ಯೋಚನೆಗೆ ತದ್ವಿರುದ್ಧವಾಗಿದ್ದರೂ ಸಂದರ್ಭೋಚಿತವಾಗಿ ಸರಿಯೆನಿಸುತ್ತದೆ.

‘ಸತ್ತ ಶಾನುಬೋಗರ ದಪ್ಪನೆಯ ಹೆಂಡತಿ ಮರಹತ್ತಿ ನೇಣು ಹಾಕಿಕೊಂಡದ್ದಾದರೂ ಹೇಗೆ?’ (ಪುಟ-೯) ಅಂತೆಲ್ಲ ನಮ್ಮಂತೆಯೇ ಸಾಮಾನ್ಯವಾಗಿ ಯೋಚಿಸುವ, ಹಳೆಯ ದಿನಗಳನ್ನ ನೆನಪಿಸಿಕೊಳ್ಳುವ ಚಿರಾಯು ಅತೀ ಸಾಮಾನ್ಯವ್ಯಕ್ತಿಯಾಗಿ ಆರಂಭದಲ್ಲಿಯೇ ಇಷ್ಟವಾಗಿಬಿಡುತ್ತಾನೆ. ಹಾಗೆಯೇ ಅದೇ ಮುಂದಿನ ಸಾಲುಗಳಲ್ಲಿ ಅಂತರಾಷ್ಟ್ರೀಯ ಸಂಸ್ಥೆಯೊಂದರ ಇಪ್ಪತ್ತೆಂಟು ಲಕ್ಷ ರೂಪಾಯಿಗಳಿಗೆ ಒಂದು ಕಾದಂಬರಿ ಬರೆಯುವ ಒಪ್ಪಂದಕ್ಕೆ ಅಂಟಿಕೊಂಡು ಆರುಲಕ್ಷ ರೂಪಾಯಿಗಳಷ್ಟು ಹಣವನ್ನು ಮುಂಗಡ ಪಡೆದುಕೊಂಡ ಚಿರಾಯು ಬೇರೆಯದೇ ವ್ಯಕ್ತಿಯಾಗಿ- ಅಪ್ಪಟ ವ್ಯಾವಹಾರಿಕ ಸಾಹಿತಿಯಂತೆ- ಭಾಸವಾಗುತ್ತಾನಲ್ಲದೆ ಮನಸ್ಸು ಚಿರಾಯುವಿನ ಪಾತ್ರಕ್ಕೆ ಜುಬ್ಬಾ ಧರಿಸಿ ಗಡ್ಡಧಾರಿಯಾದ ಮಹಾನ್ ಸಾಹಿತಿಯೊಬ್ಬನ ಚಿತ್ರವೊಂದನ್ನು ಕಟ್ಟಿಕೊಳ್ಳುತ್ತದೆ.

ತನಗೆ ಬೇಸರವಾದಾಗ, ಬರೆಯುವ ಮನಸ್ಸಿಲ್ಲದೇ ಖಾಲಿ ಕುಳಿತಿದ್ದಾಗ ಚಿರಾಯುವಿಗೆ ಯಾಮಿನಿಯ ನೆನಪು ಕಾಡುತ್ತದೆ. ಅಂತಹ ಸಂದರ್ಭದಲ್ಲಿ ಅವಳನ್ನು ಬರಹೇಳಬೇಕು ಎಂದುಕೊಳ್ಳುವ ಚಿರಾಯು ಸ್ವಾರ್ಥಿಯಾಗಿ ಕಾಣಿಸಿದರೆ ಅದು ಚಿರಾಯುವಿನಂತಹ ಪಾತ್ರದ ತಪ್ಪು. ಹಾಗೆ ಯಾಮಿನಿಯನ್ನು ಬರಹೇಳಿದಾಗ ಯಾಮಿನಿ ‘ಬರುವುದಿಲ್ಲ’ ಎಂದು ಹೇಳಿ ಕರೆ ಮಾಡುವ ಮುನ್ನ ಎಸ್ಸೆಮ್ಮೆಸ್ಸು ಕಳಿಸಿ ಚಿರಾಯುವಿನ ಮನಸ್ಸನ್ನು ಆ ಸುದ್ದಿಗೆ ಸಿದ್ಧಗೊಳಿಸುವಂಥ ಸಣ್ಣ ಎಳೆಗಳು ಪುಟ್ಟ ಕೆಲಸಕ್ಕೂ ಬೇಕಾಗಿರುವ ಪೂರ್ವಸಿದ್ಧತೆಯ ಬಗ್ಗೆ ಹೇಳುತ್ತವೆ.

‘ವ್ಯಕ್ತಿತ್ವ ಇಲ್ಲದೇ ಇರುವವರು ಮಾತ್ರ ನಮ್ಮ ಅಹಂಕಾರಕ್ಕೆ ಹತ್ತಿರವಾಗಬಲ್ಲರು.’ (ಪುಟ-೧೨) ಎಂಬಂತಹ ಸಾಲುಗಳು ಒಮ್ಮೆ ಕಾದಂಬರಿ ಓದುವುದನ್ನು ಬಿಟ್ಟು ನಮಗೆ ಹತ್ತಿರವಾಗಿರುವವರ ಕುರಿತು ಯೋಚಿಸುವಂತೆ ಮಾಡುತ್ತವೆ. ನಮ್ಮ ಹತ್ತಿರದ ವ್ಯಕ್ತಿಗಳಿಗೇ ವ್ಯಕ್ತಿತ್ವವಿಲ್ಲವೋ ಅಥವಾ ನಮಗೇ ಅಹಂಕಾರವಿಲ್ಲವೋ ಅಂತೆಲ್ಲ ಒಮ್ಮೆ ನಾವು ಯೋಚಿಸಿದಾಗ ಆ ಸಾಲು ಇಷ್ಟವಾಗುತ್ತದೆ. ಇದೇ ಯೋಚನೆಯನ್ನು ತಿರುವುಮುರುವಾಗಿಸಿಕೊಂಡು ನಮಗೆ ವ್ಯಕ್ತಿತ್ವವಿಲ್ಲದ್ದಕ್ಕೆ ನಮ್ಮ ಹತ್ತಿರದವರ ಅಹಂಕಾರಕ್ಕೆ ನಾವು ಸಾಥಿಗಳಾಗಿದ್ದೀವೇನೋ ಅನ್ನಿಸಿ ನಗು ಬರುತ್ತದೆ. ಇಷ್ಟೆಲ್ಲ ಯೋಚಿಸಿದ ಮೇಲೂ ಆ ಸಾಲು ಸಾಂದರ್ಭಿಕವಾಗಿ ಕಾದಂಬರಿಗೆ ಉಚಿತವೆನಿಸುತ್ತದೆಯಲ್ಲದೇ ನೆನಪಿನಲ್ಲುಳಿಯಬಹುದಾದ ಸಾಲುಗಳಲ್ಲಿ ಒಂದಾಗಿಬಿಡುತ್ತದೆ.

ಬೆಳದಿಂಗಳನ್ನು ಕಮ್ಯುನಿಸಮ್ಮಿಗೆ ಹೋಲಿಸಿ ಚಿರಾಯು ನಗುವಾಗ ನಮ್ಮೊಳಗೂ ಒಂದು ಪುಟ್ಟ ನಗು ಹಾದುಹೋಗುತ್ತದೆಯಾದರೂ ಎಂತಹ ನವಿರನ್ನೂ ತೀಕ್ಷ್ಣ ವಿಚಾರಕ್ಕೆ ಹೋಲಿಸಿದಾಗ ನವೀನ ರೀತಿಯ ಹೋಲಿಕೆ ಹೊಸಯೋಚನೆಗಳಿಗೆ ನಾಂದಿಹಾಡುತ್ತದೆಯೆಂಬುದೂ ಸಹ ಅಷ್ಟೇ ಸತ್ಯದ ಮಾತಾಗುತ್ತದೆ. ‘ಬದುಕುವ ಮೂಲಕ ಬದುಕಿನಿಂದ ಬಿಡುಗಡೆ ಪಡೆಯುವ ಹಾಗೆ ಓದುವ ಮೂಲಕ ಬರೆದದ್ದರಿಂದ ಮುಕ್ತಿ ಹೊಂದಲು ಸಾಧ್ಯವಾ?’ (ಪುಟ-೧೯) ಎಂಬಂತಹ ಚಿರಾಯುವಿನ ಯೋಚನೆಗಳು, ಪ್ರಶ್ನೆಗಳನ್ನು ಓದುಗನ ಮುಂದಿಡುವ ಮೂಲಕ ಓದುಗನ ಪ್ರಶ್ನೆಗಳಿಗೆ ಉತ್ತರಿಸುತ್ತವೆ. ಮರಳಿ ‘ಚಿರಾಯು’ ಎಂಬ ಪಾತ್ರವನ್ನು ಮರೆಯಾಗದಂತೆ ತಡೆಯುತ್ತವೆ. ‘ನಿಮಿಷಕ್ಕೆ ನಲವತ್ತು ಪದ ಟೈಪ್ ಮಾಡಬಲ್ಲವನು ಗಂಟೆಗೆ ಎರಡು ಸಾವಿರ ಪದ ಟೈಪ್ ಮಾಡುತ್ತಾನೆ. ದಿನಕ್ಕೆ ನಾಲ್ಕು ಗಂಟೆ ಬರೆದರೂ ಸುಮಾರು ಹತ್ತು ಸಾವಿರ ಪದಗಳಾಗುತ್ತವೆ, ಒಂದು ಕಾದಂಬರಿಗೆ ಹೆಚ್ಚೆಂದರೆ ಅರವತ್ತು ಸಾವಿರ ಪದಗಳಿದ್ದರೆ ಸಾಕು, ಯೋಚಿಸಿ ಬರೆದರೂ ಇಪ್ಪತ್ತು ದಿನಗಳಲ್ಲಿ ಕಾದಂಬರಿ ಮುಗಿಯಬೇಕು’ (ಪುಟ-೧೬). ಈ ತೆರನಾಗಿರುವ ಪ್ರೊಫೆಷನಲ್ ವಿಚಾರಧಾರೆಗಳಿಂದಾಗಿ ಒದಗುವಂತಹ ಪಡಿಪಾಟಲುಗಳು, ಪ್ರೊಫೆಷನಲ್ ಬರಹಗಾರನೊಬ್ಬನ ಕಷ್ಟಕಾರ್ಪಣ್ಯಗಳನ್ನು, ತಲ್ಲಣಗಳನ್ನು ಪರೋಕ್ಷವಾಗಿ ಲೆಕ್ಕಾಚಾರಸಹಿತ ನಮ್ಮೆದುರು ತೆರೆದಿಡುತ್ತವೆ.

‘ಕಥೆಗಾರ ಮುಗ್ಧನಾಗಿರಬೇಕು. ಅಜ್ಞಾನಿಯಾಗಿರಬೇಕು. ತರ್ಕಬದ್ಧವಾಗಿ ಯೋಚಿಸಬಲ್ಲ ಸಾಮರ್ಥ್ಯ ಅವನಿಗೆ ಇರಕೂಡದು, ಹುಂಬನೂ ತನಗೆ ಅನಿಸಿದ್ದನ್ನು ಬರೆಯಬಲ್ಲವನೂ ಆಗಿರಬೇಕು’ (ಪುಟ-೨೩). ಈ ಪರಿಯಾಗಿ ತನ್ನ ಯೋಚನೆಗಳನ್ನು ತಿದ್ದುತ್ತಾ ಹೋಗುವ ಚಿರಾಯುವಿನ ಆಲೋಚನೆಗಳು ಒಮ್ಮೆ ಅಲ್ಲವೆನ್ನಿಸಿದರೆ, ಇನ್ನೊಮ್ಮೆ ಹೌದೆನ್ನಿಸುವಂತೆ ಸಾಗುತ್ತವೆ. ಅಂದರೆ ಲೇಖಕ ‘ಲೆಸ್ ಇನ್ಫೋರ್ಮ್‌ಡ್’ ಆಗಿರಬೇಕು ಎನ್ನುವ ನೆಲೆಗೆ ನಿಲ್ಲುವ ಯೋಚನೆಯ ತಿರುಳನ್ನು ಒಂದು ಪಕ್ಷ ಓದುವ ಯಾವುದೋ ಒಂದು ಮನಸ್ಸು ಒಪ್ಪಿಕೊಳ್ಳದಿದ್ದರೂ, ಬರೆಯುವ ಮನಸ್ಸು ಒಪ್ಪಿಕೊಳ್ಳುತ್ತದೆ. ಹಾಗೂ ಸಾಗುವ ಸಾಲುಗಳು ಲೇಖಕನಿಗೆ ಅಹಂಕಾರವಿರಕೂಡದೆಂಬುದನ್ನು ಅರಿತವರಿಗೂ ಸಹ ಲೇಖಕನಲ್ಲಿರುವ ಯಾವ ರೀತಿಯ ಅಹಂಕಾರವು ಲೇಖಕನಿಗೆ ಹೇಗೆ ಸ್ವಭರವಸೆಯಿತ್ತು ಅವನನ್ನು ಮುನ್ನಡೆಸಬಲ್ಲುದು ಎಂಬುದನ್ನು ಹೇಳುತ್ತವೆ.

ಈ ಕಾದಂಬರಿಯ ಪಾತ್ರವಾಗಿರದೆ, ಚಿರಾಯುವಿನ ಯಾವುದೋ ಕಾದಂಬರಿಯ ಪಾತ್ರವಾಗಿ ಈ ಕಾದಂಬರಿಯಲ್ಲಿ ಬರುವ ಸರಸ್ವತಿಯ ಪಾತ್ರ ತಣ್ಣಗೆ ಇಷ್ಟವಾಗುತ್ತದೆ. ತುಂಬ ತೀವ್ರವಾಗಿ ಬದುಕಿರದ, ಯಾವುದನ್ನೂ ಒಪ್ಪಿಕೊಳ್ಳದ, ಯಾವುದಕ್ಕೂ ಪ್ರತಿಕ್ರಿಯಿಸದ, ಯಾರನ್ನೂ ಅಷ್ಟು ಸುಲಭವಾಗಿ ತನ್ನೊಳಗೆ ಕರೆದುಕೊಳ್ಳದ ಹೆಣ್ಣಾಗಿ ಯಾವುದೋ ಕಾದಂಬರಿಯಲ್ಲಿ ಚಿತ್ರಿತವಾಗಿದ್ದ ಸರಸ್ವತಿಯದು ಇಲ್ಲಿ ಚಿರಾಯುವಿನೊಳಗಣ ನೆನಪಾಗಿ ಬರುವ ಪಾತ್ರವಾದರೂ, ಕೇವಲ ಮೂರೇವಾಕ್ಯಗಳಲ್ಲಿ ಆ ಪಾತ್ರ ಮುಗಿದೇ ಹೋದರೂ ಯಾಮಿನಿಗಿಂತಲೂ ಕೊಂಚ ಹೊತ್ತುನಿಲ್ಲುವ ಪಾತ್ರವಾಗಿ ಕಾಡುತ್ತಾಳೆ. ಯಾರೂ ಗಮನಿಸದ ಪಾತ್ರಗಳನ್ನು ಗುರುತಿಸಿದಾಗಲೇ ಪಾತ್ರಕ್ಕೂ ಹಾಗೂ ಪಾತ್ರದ ರಚನೆಕಾರನಿಗೂ ಹೆಚ್ಚು ಮಹತ್ವ ಸಿಗುವುದು ಸುಳ್ಳಲ್ಲವೆಂಬಂಥದೊಂದು ಹೇಳಿಕೆಯನ್ನು ಚಿರಾಯುವಿನ ಮನಸ್ಸಿನೊಳವಾಗಿ ಈ ಕಾದಂಬರಿಯಲ್ಲಿ ಕಾಣಬಹುದು.

ಅತ್ಯಂತ ಚಿಕ್ಕವಯಸ್ಸಿನಲ್ಲಿ ‘ಜ್ಞಾನಪೀಠ’ ಪ್ರಶಸ್ತಿ ಗಳಿಸುವ ಚಿರಾಯು ಸುತ್ತಮುತ್ತ ಹೊಗಳುತ್ತಿದ್ದವರಿಂದಲೇ ಆಕ್ಷೇಪಗಳನ್ನು ಕೇಳಬೇಕಾಗುತ್ತದೆ. ಇಂದಿನ ಸಾಹಿತ್ಯದ ಒಂದು ಭಾಗವಾಗಿರುವ ರಾಜಕೀಯ ನಡೆಯುವ ದಾರಿಯೆಡೆಗಿನ ಎಳೆಗಳನ್ನು ಕಿರಿದಾಗಿ ಈ ಕಾದಂಬರಿಯಲ್ಲಿ ಕಾಣಬಹುದಾಗಿದೆ. ಬರಹಗಳು, ಅವುಗಳ ಗುಣಮಟ್ಟ, ಅವು ತಂದುಕೊಡುವ ಪ್ರಶಸ್ತಿ, ಪುರಸ್ಕಾರಗಳೇ ಕೆಲವೊಮ್ಮೆ ಬರಹಗಾರನ ವೈಯಕ್ತಿಕ ಬದುಕನ್ನ ಬಯಲಿಗಿಡುವ ಹಾದಿಯೂ ಸಹ ಬರಹಗಾರನನ್ನು ವಿರೋಧಿಸುವ ಒಂದು ಮಾರ್ಗವಾಗಿರುವುದರ ಬಗ್ಗೆ ಸೂಕ್ಷ್ಮ ಎಳೆಗಳಿವೆ. ಚಿರಾಯು ಜ್ಞಾನಪೀಠ ಗಳಿಸಿದ ನಂತರ ಹೆಚ್ಚುವ ಪ್ರವಾಸಗಳು, ಭಾಷಣಗಳು ಅವನ ಸಮಯ ಹಾಗೂ ಇಚ್ಛೆಗೆ ಅವಲಂಬಿತವಾಗಿರದೇ ಅನಿವಾರ್ಯವಾಗುತ್ತವೆ. ವ್ಯಕ್ತಿಯು ಉನ್ನತಮಟ್ಟಕ್ಕೆ ಏರಿದಂತೆ ಅವನ ವೈಯಕ್ತಿಕ ಬದುಕಿನ ಇಚ್ಛೆಗಳು ಹಲವು ಬಾರಿ ಅವನವಾಗಿರದೆ ಸಮಾಜದೊಳಗಿನ ಸುತ್ತುಗಳಾಗಿ ಕುತ್ತುಗಳಾಗುತ್ತವೆ ಎಂಬುದು ಹೊಸ ವಿಚಾರವಲ್ಲದೆಯೂ ಸಹ ಪ್ರತಿಯೊಬ್ಬನ ಬದುಕು ಹಾಗೂ ವೃತ್ತಿ ವಿಭಿನ್ನವಾಗಿರುವಂತೆ ಸಮಸ್ಯೆಗಳ ಹುಟ್ಟು ಸಹ ವಿಭಿನ್ನವಾಗಿರುವುದನ್ನಿಲ್ಲಿ ಕಾಣಬಹುದು.

ಉನ್ನತ ಸ್ಥಾನಮಾನಗಳು ವ್ಯಕ್ತಿಯನ್ನು ಸಮಾಜದ ಸುತ್ತೊಳಗೆ ಕಟ್ಟಿಟ್ಟೂ ಸಹ ಸಮಾಜದ ಜನರಿಂದ ವ್ಯಕ್ತಿ ಹೊರತಾಗಲ್ಪಡುತ್ತಾನೆ. ವ್ಯಕ್ತಿ ತನ್ನ ಸ್ಥಾನಮಾನ, ಘನತೆಗಳನ್ನು ಕಳಚಿಟ್ಟಾಗ ಸಾಮಾನ್ಯ ಜನರೊಂದಿಗೆ ಸಾಮಾನ್ಯನಾಗಿರಲು, ಎಲ್ಲರೂ ತನ್ನನ್ನು ಸಹಜವಾಗಿ ನೋಡಲಿ ಎಂಬುದಾಗಿ ಬಯಸಿದರೂ ತಾನೆಣೆಸಿಕೊಂಡಂತಿರಲಾಗದ ಮನಃಸ್ಥಿತಿಯೊಂದು ಕಾದಂಬರಿಯಲ್ಲಿ ನಮಗೆ ಗೋಚರವಾಗುತ್ತದೆ. ‘ವಿರೋಧಿಗಳನ್ನು ಎದುರಿಸುವುದೇನೂ ಕಷ್ಟದ ಕೆಲಸ ಆಗಿರಲಿಲ್ಲ ಚಿರಾಯುವಿಗೆ. ಮೇಲ್ನೋಟಕ್ಕೆ ಅವನು ಹೇಗೇ ಪ್ರತಿಕ್ರಿಯಿಸಿದರೂ ಒಳಗೊಳಗೇ ಅವನಿಗೊಂದು ಆತ್ಮಶಕ್ತಿಯಿತ್ತು; ಯಾವ ಟೀಕೆಯೂ ಯಾವ ಮೆಚ್ಚುಗೆಯೂ ಅವನನ್ನು ಕಂಗಾಲು ಮಾಡುತ್ತಿರಲಿಲ್ಲ. ತನ್ನ ಸಂತೋಷ, ಬೇಸರ, ಕೋಪ, ಸಂಕೋಚ, ವಿನಯ ಎಲ್ಲವೂ ನಟನೆಯೆಂಬುದು ಚಿರಾಯುವಿಗೆ ಗೊತ್ತಿತ್ತು’ (ಪುಟ-೩೬). ಈ ಸಾಲುಗಳಲ್ಲಿ ಎಲ್ಲವನ್ನೂ ಸಮಾನವಾಗಿ ಕಾಣುವ ಚಿರಾಯುವಿನ ಮನಸ್ಸು ಇಷ್ಟವಾಗುತ್ತದೆ. ಈ ಸಾಲುಗಳನ್ನು ಓದುತ್ತಲೇ ಹೊಗಳಿಕೆ ತೆಗಳಿಕೆಗಳನ್ನೆಲ್ಲ ನಿರ್ಲಕ್ಷಿಸಿದರೆ ಮನುಷ್ಯನಿಗೆ ಮನಃಶಾಂತಿ ಕೊಂಚ ಲಭ್ಯವಾಗಬಹುದೇ ಎಂಬೆಲ್ಲ ಯೋಚನೆಗಳು ಹುಟ್ಟಿಕೊಳ್ಳುತ್ತವೆ. ಅಂತೆಯೇ ಸಾಗುವ ಸಾಲುಗಳಲ್ಲಿ ವೈಯಕ್ತಿಕ ಬದುಕಿನಲ್ಲಿ ಮಾಧ್ಯಮಗಳು ತಲೆಹಾಕುವುದನ್ನು ಚಿರಾಯು ವಿರೋಧಿಸುವ ವಿಚಾರವೊಂದು ಮೂಡಿ ಚಿರಾಯುವಿನ ಪಾತ್ರದ ಆತ್ಮಶಕ್ತಿಯನ್ನು ವಿವರಿಸುತ್ತದೆ.

‘ಆವತ್ತು ಹಾಗಿದ್ದೆ, ನನ್ನ ಯೌವನದಲ್ಲಿ ಹುಲಿಬೇಟೆ ಆಡಿದ್ದೆ, ಒಂದು ಕಾಲದಲ್ಲಿ ಹಾಗೆ ಮಾಡುತ್ತಿದ್ದೆ, ಅಂತ ಹೇಳಿಕೊಳ್ಳುವುದು ಸಧ್ಯದ ಅಸಹಾಯಕತೆಯನ್ನು ತೋರಿಸುತ್ತದೆ. ವರ್ತಮಾನದಲ್ಲಿ ನಿರ್ಬಲನೂ, ನಿಷ್ಕ್ರಿಯನೂ ಆದ ಮನುಷ್ಯ, ಭೂತಕಾಲಕ್ಕೆ ಕನ್ನಡಿ ಹಿಡಿಯುವ ಮೂಲಕ ತನ್ನ ಶಕ್ತಿ, ಸೃಜನಶೀಲತೆ ಮತ್ತು ಸಾಮರ್ಥ್ಯವನ್ನು ಊರ್ಜಿತಗೊಳಿಸುವ ರೀತಿ ಅವನನ್ನು ತಲ್ಲಣಗೊಳಿಸುತ್ತಿತ್ತು’ (ಪುಟ-೩೮). ಈ ಸಾಲುಗಳು ಬಹಳವೇ ಇಷ್ಟವಾಗುತ್ತವೆ. ಇಂದು ಮಾಡಲಾಗದೆ ಇದ್ದಪಕ್ಷ ನಾವು ಹಿಂದೆ ಮಾಡಿದ್ದನ್ನು ನೆನೆದು ಕೊರಗುತ್ತೇವೆ, ಇನ್ನೊಬ್ಬರ ಮುಂದೆ ಹೇಳಿಕೊಳ್ಳುವ ಅನಿವಾರ್ಯತೆಯೂ ಆಗಿಬಿಡುತ್ತದೆ; ಸುಳ್ಳಲ್ಲ ಅನ್ನಿಸುತ್ತದೆ.

ಚಿರಾಯು ಬರಹಗಾರನಾಗಿ ಪ್ರಸಿದ್ಧನಾಗುವುದಕ್ಕೂ ಮೊದಲು ಶರತ್ ಕುಮಾರ್ ಎಂಬ ಪ್ರಸಿದ್ಧ ನಟನೊಬ್ಬನನ್ನು ಕಾಣುವ ತವಕ ಹೊಂದಿರುವುದು, ಆ ನಟನನ್ನು ಸಂಧಿಸಿ ಅವನೊಡನೆಯೇ ನಾಲ್ಕು ದಿನ ಕಳೆಯಬೇಕಾಗಿ ಬಂದಾಗ ಅಷ್ಟೆಲ್ಲ ಪ್ರಸಿದ್ಧಿ ಪಡೆದಿದ್ದ ಶರತ್ ಕುಮಾರ್ ಅಂತರಂಗದಲ್ಲಿ ಎಲ್ಲರಂತಿದ್ದ ಎನ್ನುವ ವಿಚಾರ ಚಿರಾಯುವಿಗೆ ಒಪ್ಪಿಕೊಳ್ಳಲಾಗದೇ ಇರುವಂತಹುದು, ನಟನೊಬ್ಬನು ಕಾಣಿಸುವ ನಟನೆ, ಬರಹಗಾರನೊಬ್ಬನು ಬರೆದ ಬರಹಗಳಲ್ಲಿನ ಭಾವಗಳನ್ನು ಇತರರು ಎಲ್ಲ ಸಂದರ್ಭಗಳಲ್ಲಿಯೂ ಬಾಲಿಶವಾಗಿ ಆ ವ್ಯಕ್ತಿಯೊಳಗೆ ಹುಡುಕಿ ನಿರಾಶರಾಗುವ ರೀತಿಯನ್ನಿಲ್ಲಿ ಪರೋಕ್ಷವಾಗಿ ಕಾಣಬಹುದು. ವೃದ್ಧಾಪ್ಯದಲ್ಲಿ ಮಾತಿಗೆ ಹಾತೊರೆಯುತ್ತಲಿದ್ದರೂ, ಏಕಾಕಿಯಾಗಿದ್ದರೂ ತನ್ನ ಸಧ್ಯದ ಸ್ಥಿತಿಯಿಂದ ಹೊಮ್ಮುವ ಅನುಕಂಪ, ಒಂದು ಕಾಲದಲ್ಲಿ ತಾನು ಇಡೀ ನಾಡನ್ನೇ ತನ್ನೆಡೆಗೆ ಸೆಳೆದುಕೊಂಡಿದ್ದೆ ಅನ್ನುವ ಸತ್ಯದಿಂದ ಹೊಮ್ಮುವ ಅಹಂಕಾರ ಎರಡೂ ಬೇಡವೆಂಬಂತೆ ಬದುಕುತ್ತಿರುವ ನಟ ಶರತ್ ಕುಮಾರ್ ಪಾತ್ರ ನಮ್ಮನ್ನು ಒಂದೆಡೆ ಹಿಡಿದಿಡುತ್ತದೆ. ಸಮಾಜದಲ್ಲಿ ಪ್ರಸಿದ್ಧಿ ಪಡೆದವರ ಪಾಡಿಗೆ ಶರತ್ ಕುಮಾರ್ ಪಾತ್ರ ಮತ್ತೊಂದು ಉದಾಹರಣೆಯಾಗುತ್ತದೆ. ‘ದೊಡ್ಡ ಬರಹಗಾರ ಎಂಬ ಹೆಸರಿನಲ್ಲೇ ಲೇಖಕನ ಸಾಮರ್ಥ್ಯ ಸೋರಿ ಹೋಗುತ್ತದೆ. ತನ್ನ ಮುಂದೆ ನಿಂತು ಯುದ್ಧ ಮಾಡುವವನ ಅರ್ಧಶಕ್ತಿಯನ್ನು ಹೀರಿಕೊಳ್ಳುವಂಥ ಹಾರವೊಂದು ವಾಲಿಯ ಬಳಿ ಇತ್ತಂತೆ. ಹೊಗಳುಭಟರೂ ಹಾಗೇ, ಅರ್ಧ ಸೃಜನಶೀಲತೆಯನ್ನು ಕಸಿದುಕೊಂಡು ತನ್ನನ್ನು ಅದೇ ಪಂಜರದೊಳಗೆ ಬಂಧಿಯಾಗಿಸುತ್ತಾರೆ’ (ಪುಟ-೫೩) ಎಂಬಂತಹ ಹೇಳಿಕೆಗಳು ಮೇಲಿನ ಸಂದರ್ಭಕ್ಕೆ ಪೂರಕವಾಗಿ ಮುಂದಿನ ಪುಟಗಳಲ್ಲಿ ಕಾಣಸಿಗುತ್ತವೆ.

ಚಿರಾಯುವಿಗೆ ‘ಜ್ಞಾನಪೀಠ’ ತಂದುಕೊಟ್ಟ ಕಾದಂಬರಿ ಯಾವುದಾಗಿರಬಹುದೆಂಬ ವಿಚಾರ ಕಥೆಯ ಅರ್ಧದತನಕ ನಮ್ಮನ್ನು ಕಾಡಿದರೂ ನಂತರ ಉತ್ತರ ಸಿಗುತ್ತದೆ. ಅದು ‘ಮೇಘ ಮಲ್ಹಾರ’. ‘ಮೇಘ ಮಲ್ಹಾರ’ ಹೆಣ್ಣೊಬ್ಬಳ ವಿಷಾದವನ್ನು ಮಳೆಗೆ ಹೋಲಿಸಿ ಬರೆದ ಕಾದಂಬರಿಯೆನ್ನುವುದರ ಜೊತೆಗೆ ಆ ಕಥೆ ಅಲ್ಲಿಂದ ಬಿಚ್ಚಿಕೊಳ್ಳುತ್ತದೆ. ಒಂದು ಪಾತ್ರಕ್ಕೊಂದು ರೂಪಕವಾಗಲೀ, ಉಪಮೆಯಾಗಲೀ ಸೃಷ್ಟಿಯಾಗುವಾಗ, ಉಪಮೆ ರೂಪಕಗಳೇ ಇನ್ನೊಂದು ಪಾತ್ರವಾಗಿ ಕಥೆ ಕವಲೊಡೆದುಬಿಡುವಂತಹ ಸಮಸ್ಯೆ ಚಿರಾಯುವನ್ನು ಕಾಡುತ್ತದೆ. ಇದು ಓದುವಾಗ ನಮಗೆ ಅಂಥ ಸಮಸ್ಯೆಯಾಗಿ ಕಾಣಬರದಿದ್ದರೂ ಬರಹಗಾರನಿಗಿದು ಸಮಸ್ಯೆಯೇ. ಎಣಿಸಿಕೊಂಡ ರೀತಿಯಲ್ಲಿ ಕಥೆಯನ್ನು ಅಂತ್ಯಗೊಳಿಸಲಾಗದ ಸಂದಿಗ್ಧ ಸ್ಥಿತಿಯಲ್ಲಿ ಕಥೆಗಾರ ಗೆದ್ದರೂ ಸೋಲುತ್ತಾನೆ. ಇನ್ನು ಕೆಲವೊಮ್ಮೆ ಕಥೆ ಕವಲೊಡೆದಾಗ ಅಂತ್ಯ ಹೇಗೋ ಮುಗಿದುಹೋಗಿ ಗೋಜಲಾಗಿ ನಿಜವಾಗಿಯೂ ಕಥೆಗಾರ ಸೋಲುವ ಸಾಧ್ಯತೆಯೂ ಇದೆ ಎಂಬ ವಿಚಾರವನ್ನು ಕಾದಂಬರಿಯೊಳಗೆ ಚಿರಾಯುವೇ ಯೋಚಿಸುವ ಸಮಸ್ಯೆಯಾಗಿ ಕಾಣಬಹುದಾಗಿದೆ.

ಕಾದಂಬರಿಯಲ್ಲಿ ಬರುವ ನಿರ್ಮಲೆಯ ಅನೈತಿಕ ಸಂಬಂಧದ ಬಗ್ಗೆ ಹಿಂದಿನಿಂದ ಆಡಿಕೊಳ್ಳುವವರ ನಡುವೆಯೇ ಇದ್ದೂ ಚಿರಾಯು ಆ ಬಗ್ಗೆ ತಲೆಕೆಡಿಸಿಕೊಳ್ಳದೇ, ಎಲ್ಲರಂತೆ ಏನೇನೋ ಯೋಚಿಸದೆ ಮೌನವಾಗಿದ್ದುಬಿಡುವ ರೀತಿ ಇಷ್ಟವಾಗುತ್ತದೆ. ಅಂದರೆ ಕಂಡವರ ಬಗ್ಗೆ ಅನಾವಶ್ಯಕ ಆಡಿಕೊಳ್ಳದವರನ್ನು ನೋಡಿದಾಗ ಸಹಜ ಖುಷಿಯಾಗುವಂತೆ ಚಿರಾಯುವಿನ ಪಾತ್ರವೂ ಹಿಡಿಸುತ್ತದೆ. ಆದರೆ ಅದೇ ನಿರ್ಮಲೆಯೊಂದಿಗೆ ಮುಂದೆ ಚಿರಾಯು ಸಹ ಸಂಬಂಧ ಬೆಳೆಸುತ್ತಾನೆ. ಚಿರಾಯು ಅನಾರೋಗ್ಯದಲ್ಲಿದ್ದಾಗ ಸೇವೆ ಮಾಡುವ ನಿರ್ಮಲೆಯಲ್ಲಿ ಚಿರಾಯು ಒಂದಾಗುತ್ತಾನೆ.

‘ತನ್ನ ಪಾಲಿಗೆ ಮತ್ತೆ ಚಿಗುರಲಾರದಷ್ಟು ಗೊಡ್ಡಾಗಿರುವ ಮರ, ಹೊರನೋಟಕ್ಕೆ ಹಸಿರು ತುಂಬಿಕೊಂಡಂತೆ ಕಾಣಿಸುತ್ತದೆ. ಆದರೆ ಆ ಮರದಲ್ಲಿ ಗೂಡುಕಟ್ಟಿರುವ ಹಕ್ಕಿಗಳಿಗೆ ಈ ಮರದ ಆಯಸ್ಸು ಮುಗಿಯುತ್ತಾ ಬಂದಿದೆ ಅಂತ ಮೊದಲೇ ಗೊತ್ತಾಗಿಬಿಡುತ್ತದೆ. ಅಂಥ ಮರಗಳಲ್ಲಿ ಹಕ್ಕಿಗಳು ಗೂಡುಕಟ್ಟುವುದಿಲ್ಲ. ಪ್ರತಿವರ್ಷ ಗೂಡು ಕಟ್ಟುತ್ತಿದ್ದ ಗೀಜಗವೋ ಗಿಳಿಯೋ ಗೊರವಂಕವೋ ಅಲ್ಲಿ ಗೂಡುಕಟ್ಟಿಲ್ಲ ಅಂದರೆ ಅದರ ಆಯಸ್ಸು ಮುಗಿಯಿತು ಅಂತಲೇ ಅರ್ಥ’ (ಪುಟ-೫೩) ಎಂಬಂತಹ ಸಾಲುಗಳಲ್ಲಿ ಕಾದಂಬರಿ ಕರ್ತೃ ಜೋಗಿ ಕಾಣಿಸಿಕೊಳ್ಳುತ್ತಾರೆ. ಹಾಗೆಯೇ ಮುಂದುವರೆಯುತ್ತಾ ‘ತಿಳುವಳಿಕೆಗೆ, ಅರಿವಿಗೆ ಕಾಲದ ಮಿತಿಯಿಲ್ಲ. ಆದರೆ, ಮಾಹಿತಿ ಕಾಲಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ’ (ಪುಟ-೫೫) ಎನ್ನುತ್ತಾರೆ ಜೋಗಿ. ಇಂತಹವುಗಳೆಲ್ಲ ಜೋಗಿಯವರಿಂದಲೇ ಉದ್ಭವಿಸಿದ ಹೊಸ ಯೋಚನೆಗಳಲ್ಲವಾದರೂ, ತಮ್ಮೊಳಗಿನ ಇಂತಹ ಅನೇಕ ಸಿದ್ಧಾಂತಗಳನ್ನು ಅಲ್ಲಲ್ಲಿ ಮಂಡಿಸುತ್ತಾ, ಹೀಗೆ ಬರಹದ ರೂಪದಲ್ಲಿ ಅವುಗಳನ್ನು ಉಳಿಸಿಕೊಳ್ಳುತ್ತಾ ಹೋಗುತ್ತಾರೆ ಜೋಗಿಯವರು.

ಬೆಂಗಳೂರಿನಲ್ಲಿ ಕುಳಿತು ಬರೆಯುವುದಕ್ಕೆ ಸಾಧ್ಯವೇ ಇಲ್ಲ ಅನ್ನಿಸಿದಾಗ, ಚಿರಾಯು ಏಕಾಂತ ಅರಸಿ ಜನನಿಬಿಡವಾದ ನೆಟ್ವರ್ಕ್ ಸಿಗದ ತಾಣಕ್ಕೆ ಬಂದಿದ್ದಾಗಲೂ ತನಗೆ ಬರೆಯುವುದು ಸಾಧ್ಯವೇ ಇಲ್ಲವೆನಿಸಿ ‘ಪೆಂಗ್ವಿನ್’ ಸಂಸ್ಥೆಯ ಆರು ಲಕ್ಷ ರೂಪಾಯಿಗಳ ಚೆಕ್ಕನ್ನು ಪೆಂಗ್ವಿನ್ ಸಂಸ್ಥೆಗೇ ಮರಳಿಸಿಬಿಡಬೇಕೆಂದು ಯೋಚಿಸುವ ಚಿರಾಯು, ಹಾಗೆಯೇ ಮಾಡುತ್ತಾನೆ.

ಕಥೆಯೊಳಗೆದುರಾಗುವ ಪಾತ್ರಗಳು:

ಇಲ್ಲಿಯತನಕವೂ ಶೇಷು ಮತ್ತು ಚಿರಾಯು ಇಬ್ಬರೇ ನೇರವಾಗಿ ನಮ್ಮೆದುರು ಕಾಣಿಸಿಕೊಳ್ಳುವ ಪಾತ್ರಗಳಾಗಿರುತ್ತವೆ. ಚಿರಾಯುವಿನ ನೆನಪಾಗಿಯೋ, ಯೋಚನೆಗಳಾಗಿಯೋ ಅಥವಾ ಅವನ ಯಾವುದೋ ಕಥೆಗಳ ಪಾತ್ರಗಳಾಗಿಯೋ ಬರುವ ಜಯದೇವ, ವಿಜಯಲಕ್ಷ್ಮಿ, ಜಾಹ್ನವಿ, ಸತ್ತ ಶಾನುಬೋಗರ ಹೆಂಡತಿ, ಶ್ರದ್ಧಾ, ಮಾಲವಿಕಾ, ಭಾಗೀರಥಿ ಚಿಕ್ಕಮ್ಮ, ಶಶಿಧರ, ಅರ್ಚಕರಾಗಿದ್ದ ಚಿರಾಯುವಿನ ಅಪ್ಪ, ಅಮ್ಮ, ಶಾಮಣ್ಣ ಮೇಷ್ಟ್ರು, ಅಕ್ಕ ಸರಸ್ವತಿ, ಸುಶೀಲ್ ಸಹಾನಿ, ಊರ್ಮಿಳಾ ದೇಸಾಯಿ, ಸರಸ್ವತಿ (ಸುಶೀಲೆ), ಸುಶೀಲೆಯ ಮಾವ, ಸುಶೀಲೆಯ ಗಂಡ ದೇವರಾಯ, ಸಂದರ್ಶಕಿ ವಂದನಾ ರಾವ್, ಸುಪರ್ಣಾ ದಾಸ್ ಗುಪ್ತಾ, ಸುಚಿತ್ರಾ ನಾಯಕ್, ಪತ್ರಕರ್ತ ರಂಜನ್, ಸುರೇಂದ್ರ ಬಸು, ನಳಿನಿ ಹೆಗಡೆ, ಕೊಂಡಜ್ಜಿ ನಾಗರಾಜ, ನಟ ಶರತ್ ಕುಮಾರ್, ಸುಬ್ಬಣ್ಣ, ತುಂಗಮ್ಮ, ಮೊಕ್ತೇಸರ ಶಂಕರನಾರಾಯಣ ನಾವಡ, ಭಾಗ್ಯಲಕ್ಷ್ಮಿ, ಬಾಬಣ್ಣ, ವಿಕ್ಟರ್‌ನ ಅಪ್ಪ ಜರ್ಮಿ, ಅನ್ನಪೂರ್ಣೆ, ನಿರ್ಮಲ, ವಾಸುದೇವ ಕಿಣಿ, ಶಿರೀಷ್, ಶಶಾಂಕ್ ಶರ್ಮ, ಮುಂತಾದ ಮೂವತ್ತೆಂಟಕ್ಕೂ ಹೆಚ್ಚು ಪಾತ್ರಗಳಲ್ಲಿ ಕೆಲ ಪಾತ್ರಗಳು ನೇರವಾಗಿ ಕಾಣಿಸಿಕೊಳ್ಳತೊಡಗಿ ಕಥೆಗೊಂದು ತಿರುವು ಬರುತ್ತದೆ. ಚಾಲನೆ ಸಿಗುತ್ತದೆ.

ಕಥೆಯ ಮಧ್ಯಂತರದಿಂದಾಚೆ ನೇರವಾಗಿಯೋ, ನೇರಪಾತ್ರಗಳ ನೆನಪಾಗಿಯೋ, ಯೋಚನೆಗಳಲ್ಲಿಯೋ ಸಿಗುವ ಪಾತ್ರಗಳಾಗಿ ರೋಹಿಣಿ ಟೀಚರ್, ವಿಕ್ಟರ್ ಡಿಸೋಜ, ಉಂಗುರ ಬೆರಳಿನ ಹೆಡ್ಮಾಸ್ಟರು, ವಿಕ್ಟರನ ಅಪ್ಪ, ರೋಹಿಣಿ ಟೀಚರ್ ಗಂಡ, ಕೃಷ್ಣಪ್ರಸಾದ, ಸಾಂಬ, ಸತ್ಯನಾರಾಯಣ ಮೇಷ್ಟ್ರು, ವಿಮಲಾ ಟೀಚರ್, ಶಾಲಿನಿ, ಸುಚಿತ್ರಾಳ ಗಂಡ ಸದಾಶಿವ ಫಣಿಕ್ಕರ್, ಸ್ಮಿತಾ, ಷಣ್ಮುಖ, ಚಿರಾಯುವಿನ ಮಾವ ನರಸಿಂಹಯ್ಯ, ನಾಗಪ್ಪಯ್ಯ, ಪುಸ್ತಕದಂಗಡಿಯ ಪಡುಕೋಣೆ, ಚೇತನ ತೀರ್ಥ, ವಿನಾಯಕ, ಚಿರಾಯುವಿನ ಅತ್ತೆ ಮಂಗಳಾ, ಮಾವ ವೇದವ್ಯಾಸ, ಮಣಿಯಾಣಿ, ಸ್ವಾಮೀಜಿಗಳು, ಸದಾನಂದಯ್ಯ, ನಾಗೇಶ ಐತಾಳ, ಶ್ರೀಪತಿ, ಸ್ಮಿತಾಳ ಅಮ್ಮ, ನಿತ್ಯಾನಂದ, ಭುವನೇಂದ್ರ, ಸಾಜೀದಾ, ಜಾಯ್ಸ್, ಫ್ರಾನ್ಸಿಸ್, ಪುರಂದರ, ಲಕ್ಷ್ಮಿ, ಸ್ವಾಮಿ, ಮುಂತಾದವರು ಕಂಡುಬರುತ್ತಾರೆ.

ಮಧ್ಯಂತರದಿಂದಾಚೆಯ ಕಥೆಯ ಪರಿಚಯಾತ್ಮಕ ವಿಶ್ಲೇಷಣೆ:

‘ಪೆಂಗ್ವಿನ್’ ಸಂಸ್ಥೆಯ ಚೆಕ್ಕನ್ನು ಮರಳಿಸಿದ ಚಿರಾಯು ಎಲ್ಲಿದ್ದಾನೆ ಎಂಬುದನ್ನು ಹುಡುಕುವುದೇ ಆ ಸಂಸ್ಥೆಯ ಕಾರ್ಯಕರ್ತರಿಗೆ ಸಮಸ್ಯೆಯಾಗುತ್ತದೆ, ದಿಗಿಲು ಹುಟ್ಟಿಸುತ್ತದೆ. ಏಕೆಂದರೆ ಬೆಂಗಳೂರಿನಲ್ಲಿ ಕುಳಿತು ಬರೆಯುವುದಕ್ಕೆ ಸಾಧ್ಯವೇ ಇಲ್ಲವೆಂದುಕೊಂಡ ಚಿರಾಯು ಏಕಾಂತವನ್ನರಸಿ ಹೋದದ್ದೆಲ್ಲಿಗೆ ಎಂಬುದರ ಸುಳಿವು ಯಾರಿಗೂ ಇರುವುದಿಲ್ಲ. ಉಳಿದರ್ಧ ಕಾದಂಬರಿಯ ತುಂಬೆಲ್ಲ ಕಥೆಗಾರ ಚಿರಾಯುವಿನ ಹುಡುಕಾಟವೇ ನಡೆಯುತ್ತದೆ.

ಈ ಮಧ್ಯೆ ಕಥೆ ಬರೆಯುವುದಿಲ್ಲವೆಂದು ನಿರ್ಧರಿಸಿ ಒಂಟಿಯಾಗಿ ಕುಳಿತ ಚಿರಾಯು, ಶೇಷು ತಂದಿಟ್ಟ ತನ್ನ ಹಳೆಯ ಕಾದಂಬರಿಗಳಲ್ಲಿ ಮೊದಲನೆಯದನ್ನು ಓದುವುದಕ್ಕಾಗಿ ಎತ್ತಿಕೊಳ್ಳುತ್ತಾನೆ. ಆ ಕಾದಂಬರಿಯ ಕಥೆಯೊಳಗಿನ ಯೋಚನೆಗಳು ಸುಳಿಯಾಗಿ ಸುಳಿಯಲಾರಂಭಿಸುತ್ತವೆ. ಆ ಸಂದರ್ಭದಲ್ಲಿ ಚಿರಾಯುವಿನ ಯೋಚನೆಯೊಂದು ಹೀಗೆ ಹೇಳಿಕೆಯಾಗಿ ಮೂಡುತ್ತದೆ, ‘ಎಲ್ಲರ ಕಥೆಯೂ ಒಂದೇ. ಎಲ್ಲರ ಬದುಕಿನ ಗತಿಯೂ ಒಂದೇ. ಅದು ಬರೆಯುವವನ ಮನಃಸ್ಥಿತಿಗೆ ತಕ್ಕಂತೆ ಬೇರೆ ಬೇರೆಯಾಗುತ್ತಾ ಹೋಗುತ್ತದೆ. ಹೀಗಾಗಿ ಕಥೆಗಾರನೇ ನಿಜವಾದ ಅರ್ಥದಲ್ಲಿ ಸೃಷ್ಟಿಕರ್ತ. ಅವನು ಭಾವನೆಗಳನ್ನು ರೂಪಿಸುತ್ತಾ ಹೋಗುತ್ತಾನೆ. ಯಾವಾಗ ಅಳಬೇಕು, ಯಾವಾಗ ಸಂತೋಷ ಪಡಬೇಕು, ಯಾವ ಭಾವವನ್ನು ಆರಾಧಿಸಬೇಕು; ಸೌಂದರ್ಯ, ಸಜ್ಜನಿಕೆ, ವಿನಯವಂತಿಕೆ, ಆದರ್ಶ ಎಲ್ಲವೂ ಅವನೇ ಸೃಷ್ಟಿಸಿ ಅದನ್ನು ಮುಂದಿನ ಜನಾಂಗಕ್ಕೆ ದಾಟಿಸುತ್ತಾ ಹೋಗುತ್ತಾನೆ.’ ತಕ್ಷಣದ ಮುಂದಿನ ಸಾಲು ಹೀಗಿದೆ ‘ಕ್ರಮೇಣ ಮನುಷ್ಯ ಹೆಚ್ಚು ಹೆಚ್ಚು ಸಂಕೀರ್ಣವಾಗುತ್ತಾ ಹೋಗುತ್ತಾನೆ. ಅಳುವುದಕ್ಕೆ, ನಗುವುದಕ್ಕೆ, ಸಂಘಜೀವನಕ್ಕೆ, ಕಾಮುಕತೆಗೆ, ವೈರಾಗ್ಯಕ್ಕೆ ಹೊಸ ಹೊಸ ನೆಪಗಳು ಸೃಷ್ಟಿಯಾಗುತ್ತಾ ಹೋಗುತ್ತವೆ’ (ಪುಟ-೭೦).

ಚಿರಾಯುವನ್ನು ಹುಡುಗಿಯರ ಹಿಂದೆ ಬೀಳದಂತೆ ಕಾಯ್ದುಕೊಳ್ಳುವ ಸಲುವಾಗಿ ಚಿರಾಯುವಿನ ಪತ್ನಿ ಸ್ಮಿತಾ ಶೇಷು ಎಂಬ ಹುಡುಗನನ್ನು ನೇಮಕ ಮಾಡುತ್ತಾಳೆ. ಆದರೆ ಶೇಷು ಸ್ಮಿತಾಳಿಗಿಂತ ಹೆಚ್ಚಾಗಿ ಚಿರಾಯುವಿಗೇ ನಿಷ್ಠನಾಗಿರುತ್ತಾನೆ. ಕಾದಂಬರಿಯ ಆದಿಯಿಂದ ಅಂತ್ಯದ ಕ್ಷಣಗಳವರೆಗೂ ಕಾಣಿಸಿಕೊಳ್ಳುವ ಶೇಷುವಿನ ಪಾತ್ರ ಆಪ್ತವಾಗುತ್ತದೆ. ಚಿರಾಯುವಿನ ಜೊತೆಯಲ್ಲಿಯೇ ಇದ್ದು ಅವನ ಬೇಕು ಬೇಡಗಳನ್ನೆಲ್ಲ ನಿಷ್ಠೆಯಿಂದ ಗಮನಿಸಿ ಪೂರೈಸುವ ಶೇಷುವಿನ ಪಾತ್ರಕ್ಕೆ ಮೌನವಾಗಿದ್ದುಕೊಂಡೇ ಎಲ್ಲರ ಮನಗೆಲ್ಲುವ ಸಾಮರ್ಥ್ಯವಿದೆ. ಕಾದಂಬರಿಯಲ್ಲಿ ಯಾಮಿನಿಗಿಂತಲೂ ಶೇಷು ಹೆಚ್ಚು ಇಷ್ಟವಾಗುತ್ತಾನೆ. ಈ ನಡುವೆ ಸ್ಮಿತಾ ಯಾಮಿನಿಯೊಡನಾಡುವ ಮಾತುಗಳು ‘ವಿಮಾನದಲ್ಲಿ ಬರುವಾಗ ನನಗೆ ಇಷ್ಟ ಆಗದೆ ಇರೋರು ಪಕ್ಕದ ಸೀಟಲ್ಲಿ ಕೂತಿದ್ರೆ ನಲವತ್ತು ನಿಮಿಷ ಅಂಥವರನ್ನು ಸಹಿಸೋಕ್ಕಾಗಲ್ಲ ನನ್ನ ಕೈಲಿ. ಇನ್ನು ನಲವತ್ತು ವರ್ಷ ಹೇಗೆ ಸಹಿಸಿಕೊಳ್ಳಲಿ. ನೀವಿಬ್ಬರೂ ಜೊತೆಗಿರಿ, ನನ್ನ ಕಣ್ಣೆದುರು ನಿನ್ನ ಚಿರಾಯು ಇರಬೇಕಾಗಿಲ್ಲ’ (ಪುಟ-೭೯). ಈ ಮಾತುಗಳು ಇಷ್ಟವಾಗದೇ ಇರುವುದಿಲ್ಲ.

ಧರ್ಮಪತ್ನಿಯಿಂದ ಯಾವತ್ತೋ ದೂರಾಗಿದ್ದ ಚಿರಾಯುವನ್ನು ಯಾಮಿನಿಯೂ ಬಿಟ್ಟು ಹೋದಾಗ ಬರುವ ಸಾಲುಗಳು ಇಂತಿವೆ: ‘ಬಾಳೆಯೆಲೆ ಹರಿದಿತ್ತು, ಅದನ್ನಿನ್ನು ಒಣಗಿಸಿದರೂ ಅಷ್ಟೇ, ಬಾಡಿಸಿದರೂ ಅಷ್ಟೇ, ಹಾಗೇ ಬಿಟ್ಟರೂ ಅಷ್ಟೇ’ (ಪುಟ-೭೯). ಕಾದಂಬರಿಯಲ್ಲಿ ಸಿಗುವ ಅವರವರ ಭಾವಕ್ಕೆ ಬಿಡುವ ಇಂತಹ ಸಾಲುಗಳು ಇಷ್ಟವಾಗುತ್ತವೆ. ಬದುಕಿನಲ್ಲಿ ಗಂಡಹೆಂಡಿರ ನಡುವೆ ಬರುವ ಗೆಳತಿಯೊಬ್ಬಳಿಂದ ಬದುಕು ಬೇರೆಯದೇ ತಿರುವು ಕಾಣುತ್ತದೆಯೆಂಬ ಕಥೆ ತೀರಾ ಸಾಮಾನ್ಯವಾದುದಾದರೂ ಬರಹಗಾರನ ಬದುಕಿನಲ್ಲಿ ಅದೊಂದು ಅವಶ್ಯಕತೆಯೆಂಬುದಾಗಿ ಇಲ್ಲಿ ಮೂಡಿರುವ ರೀತಿ ಸ್ವಲ್ಪ ಹೊಸದೆನಿಸುತ್ತದೆ. ಸರಿ ತಪ್ಪುಗಳನ್ನು ಯೋಚಿಸುತ್ತ ಓದುವವರಿಗೆ ಯೋಚನೆಗೊಂದು ಘನವಿಷಯ ಸಿಕ್ಕಂತಾಗುತ್ತದೆ. ಕಥೆಯೊಂದನ್ನು ಬರಿಯ ಕಥೆಯಾಗಿ ಮಾತ್ರ ಓದುವ ನನ್ನಂಥವರಿಗೆ ಕಥೆ ಇಷ್ಟವಾಗಲೂಬಹುದು.

ಗಂಭೀರವಾಗಿ ಸಾಗುವ ಕಥೆಯ ಮಧ್ಯೆ ನಾಗಪ್ಪಯ್ಯನವರ ಪಾತ್ರ ಗಾಂಭೀರ್ಯವನ್ನು ತುಸು ಸಡಿಲಿಸುತ್ತದೆ. ಅಲ್ಲಿ ನವಿರು ಹಾಸ್ಯವನ್ನು ಸಹ ಕಾಣಬಹುದಾಗಿದೆ. ಕಾದಂಬರಿ ಸಿನಿಮಾ ಆದರೆ ಹೇಗಿರುತ್ತದೆ? ಎಂಬುದಾಗಿ ಕಲ್ಪಿಸಿಕೊಳ್ಳುತ್ತಾ ಓದಿದಾಗ ಈ ಸನ್ನಿವೇಶ ಸ್ವಲ್ಪ ಹೆಚ್ಚೇ ನಗುವನ್ನು ತರಿಸುತ್ತದೆ. ಯೇಟ್ಸ್, ಮ್ಯಾಡ್ ಜೇನ್ ಮತ್ತು ವಾನ್ ಗೋ ಬಗ್ಗೆಯೂ ಒಂದು ಸಂಭಾಷಣೆಯಲ್ಲಿ(೯೮-೯೯ನೆಯ ಪುಟಗಳು) ಪ್ರಸ್ತಾಪವಿದ್ದು, ಈ ಪ್ರಸ್ತಾಪಗಳು ಕಥೆಯ ಪಾತ್ರಗಳಿಗೆ ಹೊಳಪು ಕೊಡುತ್ತವೆ. ‘ಭಾವನಾತ್ಮಕ ಸಂಬಂಧವನ್ನು ಮೀರಿದ್ದು ಸೃಷ್ಟಿಸುವ, ಪ್ರದರ್ಶಿಸಿಕೊಳ್ಳುವ, ಮೀರುವ, ಮೆರೆಯುವ ಅಭಿಲಾಷೆ. ಅದು ಪರಸ್ಪರ ಪೂರಕವಾಗಿದ್ದಾಗಷ್ಟೇ ಸಮಬಂಧ ಶಾಶ್ವತವಾಗುತ್ತದೆ. ಪ್ರೀತಿಯಿಂದಾಗಿ ಕ್ರಿಯಾಶೀಲನಾಗುವ ಮನುಷ್ಯ, ದ್ವೇಷದಿಂದಲೂ ಅಷ್ಟೇ ಕ್ರಿಯಾಶೀಲ ಆಗಬಲ್ಲ.’ (ಪುಟ-೧೦೦) ಎಂಬಂತಹ ಸೈದ್ಧಾಂತಿಕ ಸಾಲುಗಳು ‘ಕಾದಂಬರಿ ಚೆನ್ನಾಗಿಲ್ಲ, ಇಷ್ಟವಾಗಲಿಲ್ಲ’ ಎಂದು ಸಲೀಸಾಗಿ ಹೇಳಿಬಿಡಬಲ್ಲವರ ಮಾತುಗಳನ್ನು ಕಟ್ಟಿಹಾಕುತ್ತವೆ.

‘ಎಲ್ಲಿಗೆ ಎಂದು ಹೊರಟಾಗಲೂ ಗೊತ್ತಿರಬಾರದು, ತಲುಪಿದ ಮೇಲೆ ಹೊರಟ ಜಾಗ ನೆನಪಿರಬಾರದು, ಅಂಥ ಸ್ಥಿತಿಯಲ್ಲೇ ನಿಜವಾದ ಸಂತೋಷ ಸಿಗೋದಕ್ಕೆ ಸಾಧ್ಯ.’ (ಪುಟ-೧೧೦) ಅಂದುಕೊಳ್ಳುತ್ತಾ ಚಿರಾಯು ಎಲ್ಲದರಿಂದಲೂ, ಎಲ್ಲವುಗಳಿಂದಲೂ ಮುಕ್ತವಾಗುತ್ತಾ ಯಾಮಿನಿಯೊಂದಿಗೆ ಹೊರಟುಹೋಗುತ್ತಾನೆ. ಕಾದಂಬರಿಯ ಅಂತ್ಯದತನಕವೂ ಕಾಣಿಸಿಕೊಳ್ಳುವವನೆಂದರೆ ಆರಂಭದಿಂದಲೂ ಇರುವ ಶೇಷು. ಚಿರಾಯು ವಹಿಸಿದ ಕೆಲಸವನ್ನು ಮುಗಿಸಿದ ಶೇಷು ಕೊನೆಯ ಪುಟದಲ್ಲಿ ಯಾ ಸಿನೇಮಾ ಪರದೆಯ ನಡುವಿನ ದಟ್ಟ ಕಾಡಿನಲ್ಲಿ ಹರಿದ ಹಾದಿಯಲ್ಲಿ ಡ್ರೈವ್ ಮಾಡಿಕೊಂಡು ಮರೆಯಾಗುತ್ತಾನಾದರೂ ಓದಿದವರ ಮನಸ್ಸಿನಿಂದ ಮರೆಯಾಗುವುದಿಲ್ಲ. ಓದುಗರ ಮನಸ್ಸಿನಲ್ಲಿ ಶೇಷು ಚಿರಾಯುವಾಗಿಬಿಡುತ್ತಾನೆ.

ಮುಗಿಸುತ್ತಾ:

ಸಿನೇಮಾಕ್ಕಾಗಿಯೇ ಬರೆದ ಕಾದಂಬರಿಯೆಂದ ಮೇಲೆ ಸಿನೇಮಾ ಆದಲ್ಲಿ ಒಳ್ಳೆಯ ಸಿನೇಮಾವೇ ಆಗುವಲ್ಲಿ ಸಂದೇಹವಿಲ್ಲ. ಮಧ್ಯಂತರದ ತನಕ ತಣ್ಣಗೆ ಸಾಗುವ ಕಥೆ ಆ ನಂತರ ಭರದಲ್ಲಿ ಸಾಗುವುದರಿಂದ ಚಾಲಾಕು ಜನರಿಗೂ ಇಷ್ಟವಾಗಬಹುದು. ಸಾಹಿತಿಗಳನ್ನಲ್ಲದೇ, ಪತ್ರಿಕೆಯವರನ್ನಲ್ಲದೇ ಎಲ್ಲಾ ರೀತಿಯ ಜನರನ್ನೂ ಆಕರ್ಷಿಸಬಲ್ಲ ಪುಟ್ಟ ಪುಟ್ಟ ಕಥೆಗಳು ಈ ಕಾದಂಬರಿಯಲ್ಲಿವೆ ಎಂಬುದು ಒಂದು ಅಭಿಪ್ರಾಯ. ಕಾದಂಬರಿಗಿಂತಲೂ, ತೆರೆಯ ಮೇಲೆ ಚಿರಾಯುವಿನ ಪಾತ್ರ ಇನ್ನಷ್ಟು ಕಾಡಬಹುದಾದ ಪಾತ್ರವಾಗಬಹುದು ಎನ್ನಿಸುತ್ತದೆ. ಹಾಗೆಯೇ ಅಭಿನಯ ಮತ್ತು ಚಿತ್ರಕಥೆಯೊಳಗಿನಿಂದ ಪೂರ್ಣಗೊಂಡಾಗಲೇ ಪ್ರತೀ ಪಾತ್ರಗಳೂ ಇನ್ನಷ್ಟು ಕಳೆಕಟ್ಟಿಕೊಳ್ಳಬಲ್ಲ ಸಾಮರ್ಥ್ಯ ಹೊಂದಿವೆಯೇನೋ ಅನ್ನಿಸುತ್ತದೆ.


ಕೃತಿ: ಯಾಮಿನಿ
ಕರ್ತೃ: ಗಿರೀಶ್ ರಾವ್ (ಜೋಗಿ)
ಪ್ರಕಾಶಕರು: ಅಂಕಿತಾ ಪುಸ್ತಕ, ಗಾಂಧಿ ಬಜಾರ್, ಬೆಂಗಳೂರು
ಮುದ್ರಣ: ೨೦೦೮
ಪುಟಗಳು: ೧೨೦
ಕ್ರಯ: ರೂ ೮೦/-

March 24, 2010

ಸಮಯವಿರದ ಹೊತ್ತಿಗೆ

ತಂಪು ಗಾಳಿ ಸೆರಗಿಗೆ
ಸುತ್ತಿಕೊಂಡ ತರಗೆಲೆ
ಸರಬರ ಹೊರಳು ಸದ್ದು
ನೀ ಸರಿದು ಹೋದ ಹಾಗೆ

ಮುಚ್ಚಿದ ಕದದಂಚಿನ
ಕೆತ್ತನೆಯ ಮೇಲೆಲ್ಲ
ಕೈಯ್ಯಾಡಿದಂತೆ ನುಣುಪು
ನೀ ಸವರಿ ಹೋದ ಹಾಗೆ

ಮಿಂಚುತೆರೆಮಂಜಿನಲಿ
ಕಡಲು ಕಡೆದಿಹ ಕವನ
ಬೆಳ್ಳನೆ ಹಗಲ ಸುಳಿವು
ನೀ ಕದವ ತೆರೆದ ಹಾಗೆ

ಪಟಪಟನೆ ಬಿರಿದಂಥ
ಪುಸ್ತಕದ ಪುಟಗಳಲಿ
ಪಿಸುಪಿಸು ಮಾತುಕೇಳಿ
ನೀ ನುಡಿದು ಹೋದ ಹಾಗೆ

ಬಯಲ ಮಂದಿರಕಿಲ್ಲಿ
ಗೋಡೆಯೆಂಬುದೆ ಇಲ್ಲ
ಬಯಲ ಬಾನಿನ ಅಂಚು
ನಿನ್ನೊಂದು ಮನದ ಹಾಗೆ

ಕಣಿವೆ ಆಳದಲಲೆದು
ಅಳೆದ ಬೆಟ್ಟದ ಅಡಿಯು
ಬೆಳೆದ ಎತ್ತರದಳತೆ
ನಿನ್ನೊಂದು ನೆನಪ ಹಾಗೆ

ಮೂರು ಕನಸುಗಳಲ್ಲಿ
ಒಂದೆಂದೋ ಸತ್ತಿತು
ಒಂದಕೆ ಇನ್ನೆಂಟು ಗಳಿಗೆ
ಸಿಗದೆಯೂ ಉಳಿದ ಹಾಗೆ

ಮೂರನೆಯ ಕನಸದುವೆ
ತುಂಬ ಚಂದದ ಕನಸು
ಕನಸಾಗಿ ಇರಲಿ ಅದು
ಎಂದೆಂದೂ ಕನಸ ಹಾಗೆ

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

ಖಾಲಿ ಕಣಜ

.