December 20, 2010

ನನ್ನ ಅಂಗಳದಲ್ಲಿ ‘ಮೌನಿ’ಯ ಜೊತೆಗೆ ‘ಆಕಾಶ ಮತ್ತು ಬೆಕ್ಕು’ಭಾವಿಕೆರೆ ಕುಪ್ಪಣ್ಣಭಟ್ಟರ ಹಾಗೂ ಸೀಬಿನಕೆರೆ ಅಪ್ಪಣ್ಣಭಟ್ಟರ ನಡುವಿನ ಅಗಮ್ಯ ಹಗೆಯ ಹೊಗೆಯಾಟದ ಕತೆಯಾಗಿ ‘ಮೌನಿ’ ಸಾಗುತ್ತದೆ. ಕೇವಲ ಒಂದು ಬೇಲಿಯ ಆಚೀಚಿನ ಮೌನ ಮಾತುಗಳ ನಡುವಿನ ಹೋರಾಟವಾಗಿ ಈ ಕತೆ ಕೊನೆಯಲ್ಲಿ ಮಾತಿನ ಸಂಧಾನವಾಗಿ, ಮೌನಕ್ಕೆ ಸಿಕ್ಕ ಜಯವಾಗಿ ಅಂತ್ಯವಾಗುತ್ತದೆ.

ಮೌನಿ ಕಥೆಯೊಳಗೆ ಇಬ್ಬರು ವ್ಯಕ್ತಿಗಳ ನಡುವಿನ ಹಗೆಯೇ ಮುಖ್ಯ ನಾಯಕನಂತೆ ವಿಜೃಂಭಿಸುತ್ತದೆ. ಶ್ರೀ ಅನಂತಮೂರ್ತಿಯವರೇ ಬರೆದ ‘ಆಕಾಶ ಮತ್ತು ಬೆಕ್ಕು’ ಇದಕ್ಕಿಂತ ತೀರ ಭಿನ್ನವಾಗಿರುವುದು ಆರಂಭದಲ್ಲಿಯೇ ಅರಿವಾಗುತ್ತದೆ. ಇಲ್ಲಿ ಪ್ರತಿಪಾತ್ರ ಹಾಗೂ ಆ ಪಾತ್ರವು ಹೊತ್ತ ಭಾವನೆಗಳು ಲೌಕಿಕ ಭಾವನೆಗಳಾಗಿ ತೋರಿದರೂ ಸಹ ಅದೇ ಕಾರಣಕ್ಕೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ.

‘ಮೌನಿ’ ಕಥೆಯಲ್ಲಿನ ‘ಇಬ್ಬರೂ ಕೈಲಿ ಬರಿಯ ತೀರ್ಥದ ಬಟ್ಟಲು ಹಿಡಿದು ಘಟ್ಟದ ಕೆಳಗಿನಿಂದ ದುಗ್ಗಾಣಿಯಿಲ್ಲದೆ ಅಡಿಕೆ ತೋಟ ಮಾಡಲು ಬಂದವರು.’ ಎಂಬ ವಾಕ್ಯವು ಘಟ್ಟದ ಕೆಳಗಿನಿಂದ ಬಂದ ಅಪ್ಪಣ್ಣಭಟ್ಟರು ಹಾಗೂ ಕುಪ್ಪಣ್ಣಭಟ್ಟರು ಬರಿಗೈಲಿ ಘಟ್ಟದ ಮೇಲೆ ಬಂದವರೆಂಬುದನ್ನು ಸೂಚ್ಯವಾಗಿ ಹೇಳುತ್ತದೆ. ಘಟ್ಟದ ಮೇಲೆ ಬಂದು ಶ್ರೀ ಮಠದ ನರಸಿಂಹ ದೇವರುಗಳ ಒಕ್ಕಲಾಗಿ ಜೀವನ ಸಾಗಿಸುತ್ತಾರೆ. ಕಥೆಯು ಬರಿಯ ಕಥೆಯಾಗಿರದೇ ಅಲ್ಲೆಲ್ಲೋ ಸುತ್ತೂರುಗಳಲ್ಲೊಂದೂರಲ್ಲಿ ನಡೆದೇ ಇರಬೇಕು ಎನ್ನಿಸುವಷ್ಟರ ಮಟ್ಟಿಗೆ ನೈಜವಾಗಿ ಕಣ್ಮುಂದೆ ಬರುತ್ತದೆ.

ಪುಟ್ಟ ಊರೊಂದರಲ್ಲಿನ ಪರಸ್ಪರ ವಿರುದ್ಧ ವ್ಯಕ್ತಿತ್ವದ ಇಬ್ಬರು ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ಕಥೆ ಚಲಿಸುತ್ತದೆ. ಯಾವುದೇ ಚಾಣಾಕ್ಷತನವಿಲ್ಲದೆ ತೀರ ಆಸಕ್ತಿಯೂ ಇರದೆಯೋ, ಕಳಕೊಂಡವರಾಗಿಯೋ ಇದ್ದಂತಹ ಕುಪ್ಪಣ್ಣಭಟ್ಟರ ಜೀವನ ಸಾಗುತ್ತಲಿರುತ್ತದೆ. ಆದರೆ ಅಪ್ಪಣ್ಣ ಭಟ್ಟರು ಜೀವನವನ್ನು ಸಾಗಿಸುತ್ತಲಿರುವಂಥ ವ್ಯಕ್ತಿಯಾಗಿ ತೋರಿಬರುತ್ತಾರೆ. ತಮ್ಮಲ್ಲಿರುವ ಚಾಣಾಕ್ಷತನವನ್ನು ಉಪಯೋಗಿಸಿಕೊಳ್ಳುವುದನ್ನೂ ಅರಿತ ವ್ಯಕ್ತಿ ಅಪ್ಪಣ್ಣಭಟ್ಟರು. ಅಲ್ಲದೇ ಪರರಲ್ಲಿನ ಕೊರತೆಯನ್ನೂ, ದೌರ್ಬಲ್ಯವನ್ನೂ ಉಪಯೋಗಿಸಿಕೊಂಡು ತಮ್ಮ ಶಕ್ತಿಯನ್ನು ಇಮ್ಮಡಿಯಾಗಿಸಿಕೊಳ್ಳುವುದನ್ನೂ ಬಲ್ಲವರು. ಹೀಗಿರುವಂಥ ಅಪ್ಪಣ್ಣ ಭಟ್ಟರು ಹಾಗೂ ಕುಪ್ಪಣ್ಣಭಟ್ಟರುಗಳ ಕಥೆಯೇ ‘ಮೌನಿ’.

‘ಕುಪ್ಪಣ್ಣಭಟ್ಟರು ವಯಸ್ಸಿನಲ್ಲಿ ಹಿರಿಯರು. ಅವರು ಕಳೆದ ಐವತ್ತು ಸಂವತ್ಸರ ಒಣಗಿದ ಹುಳಿ ಮಾವಿನ ಹಣ್ಣಿನಂತಹ ಅವರ ಮುಖದಲ್ಲಿ ಎದ್ದು ಕಾಣುತ್ತದೆ.’- ಅನಂತಮೂರ್ತಿಯವರು ಕುಪ್ಪಣ್ಣಭಟ್ಟರ ಮುಖವನ್ನು ವರ್ಣಿಸುವಾಗ ಒಬ್ಬ ವ್ಯಕ್ತಿಯ ಮುಖವು ಆತನ ಭೂತಕಾಲವನ್ನೂ ಸಾರುತ್ತದೆ ಎಂದೆನ್ನಿಸುವ ಜೊತೆಗೆ ‘ಮುಖವೇ ಮನಸಿನ ಕನ್ನಡಿ’ ಎಂಬ ಮಾತು ಸಹ ನೆನಪಿಗೆ ಬಾರದೇ ಇರಲಾರದು.

ಒಂದುಕಾಲದಲ್ಲಿ ಮಿತಭಾಷಿಯಾದರೂ ಅತೀ ನೇರ ಮಾತುಗಳನ್ನಾಡುತ್ತಿದ್ದ ಕುಪ್ಪಣ್ಣಭಟ್ಟರು ಕೊನೆಕೊನೆಯಲ್ಲಿ ಮೌನಿಯೇ ಆಗಿಬಿಡುತ್ತಾರೆ, ಬದುಕಿನ ಪರಿಸ್ಥಿತಿ ತಂದುಕೊಡುವ ಅನಿವಾರ್ಯ ಮೌನವೋ ಎನ್ನುವಂತೆ. ‘ಕಪ್ಪಗೆ ಕುಳ್ಳಗೆ ಕೃಶವಾದ ಅವರ ಶರೀರ ಮಾತ್ರ ದಿನಗಳೆದಂತೆ ಸೊರಗುತ್ತಿದೆ. ಉಳಿದ ಮರ್ಜಿಯಲ್ಲೇನು ಬದಲಿಲ್ಲ. ಅದೇ ಹೊಳೆಯುವ ಬೋಳುತಲೆ, ಒಂದು ಕಾಲದಲ್ಲಿ ಸದಾಸಿಡುಕಿನ, ಈಗ ಮಂಕಾಗಿ ಉರಿಯುವ ಸಣ್ಣ ಕಣ್ಣುಗಳು. ಗುಜ್ಜ ಮೂಗು. ದಿಂಡು ಮಾವಿನ ಮೂತಿಯ ಗದ್ದ. ಉಟ್ಟ ಪಂಚೆ ಹೊದ್ದ ದೋತ್ರಗಳ ಮೇಲೆ ಅವರ ಸಾಲದಂತೆಯೇ ವರ್ಷಾಂತರದಿಂದ ಉಳಿದು ಬಂದ ಬಾಳೆ ಕರೆ. ಅಡಿಕೆ ಕರೆ. ಬಾಯಿಯ ಒಂದು ಪಾರ್ಶ್ವದಲ್ಲಿ ಸದಾ ಒಂದು ಹೊಗೆಸೊಪ್ಪಿನ ಉಂಡೆ ಇದ್ದೇ ಇರಬೇಕು.’ - ಹೀಗೆ ಕಥೆಗಾರ ತನ್ನ ಕತೆಯ ಒಂದು ಪಾತ್ರವಾದ ಕುಪ್ಪಣ್ಣಭಟ್ಟರ ವ್ಯಕ್ತಿತ್ವನ್ನು ನಮಗೆ ಕಟ್ಟಿಕೊಡುತ್ತಾನೆ. ಈ ಕಥೆಯಲ್ಲಿ ಪ್ರತಿಯೊಂದು ಪಾತ್ರದ ಕಥೆಯನ್ನು ಕಥೆಗಾರನೇ ನಮ್ಮ ಮುಂದೆ ಇಡುತ್ತಾ ನಡೆಯುತ್ತಾನೆ. ಪ್ರತಿಯೊಂದು ಪಾತ್ರವೂ ಕಥೆಗಾರನ ಕಾಲ್ನಡಿಗೆಯ ಜೊತೆ ಸಾಗುತ್ತದೆ.ಅಪ್ಪಣ್ಣ ಭಟ್ಟರ ಪಾತ್ರವು ಕಥೆಯ ಅಂತ್ಯದತನಕ ಹಿನ್ನೆಲೆಯಲ್ಲೇ ಇದ್ದು ಅಂತ್ಯದಭಾಗದಲ್ಲಿ ಕುಪ್ಪಣ್ಣಭಟ್ಟರನ್ನು ಸಂಧಿಸುತ್ತಾ ನಮ್ಮೆದುರಾಗುತ್ತದೆ.

ಅಪ್ಪಣ್ಣಭಟ್ಟರು ಜಮೀನನ್ನು ತುಂಬ ಚೆಂದವಾಗಿ ನೋಡಿಕೊಳ್ಳುವುದಲ್ಲದೆ ಮಠಕ್ಕೆ ಒಪ್ಪಿಸಬೇಕಾದ ವರ್ಷದ ಕಂತನ್ನು ಒಪ್ಪಿಸಿಬಿಡುತ್ತಾರೆ. ಕುಪ್ಪಣ್ಣಭಟ್ಟರು ವರ್ಷದ ಕಂತನ್ನು ಸರಿಯಾಗಿ ಮಠಕ್ಕೆ ಕಟ್ಟಲಾರದೇ ಮೈಮೇಲೆ ಒಂದಿಷ್ಟು ಸಾಲ ಹೊತ್ತು ಕೂತವರಾಗಿರುತ್ತಾರೆ. ಉಬ್ಬಸವಿರುವ ಹೆಂಡತಿ ಗೌರಮ್ಮನಂಥವರು ಪತಿಯ ಸರಾಗವಾದ ಉಸಿರಾದಾರು ಹೇಗೆ? ಸದಾ ಗೂರಲು ಹಿಡಿದ ಅವರು ಮೂಲೆಯಲ್ಲಿ ಕುಳಿತಿರುತ್ತಾರೆ. ವಯಸ್ಸಿಗೆ ಬಂದ ಮಗಳು ಭಾಗೀರತಿಯ ಮದುವೆಯ ಬಗೆಗಿನ ಚಿಂತೆ ಇವರ ಸಾಲದ ಭಾರಕ್ಕೆ ಇನ್ನಷ್ಟು ಭಾರಕೊಡಲು ಕಾಯುತ್ತಿರುತ್ತದೆ. ಜೊತೆಗೆ ಜ್ವರದಗಡ್ಡೆಯನ್ನು ಹೊಟ್ಟೆಯಳಗಿಟ್ಟುಕೊಂಡ ಐದು ವರ್ಷದ ಮಗ ಗಣಪನ ಹಸಿವು ಕುಪ್ಪಣ್ಣಭಟ್ಟರನ್ನು ಸದಾ ತಿನ್ನುತ್ತದೆ.

ಇಂತಹ ಎಲ್ಲ ಒತ್ತಡಗಳ ಮಧ್ಯೆ ಕುಪ್ಪಣ್ಣಭಟ್ಟರು ತಮ್ಮೊಳಗೆ ದಟ್ಟೈಸಿರುವ ಸಿಟ್ಟು, ಛಲ, ದಿಟ್ಟತನದಂತಹ ವ್ಯಕ್ತಿ ವೈಲಕ್ಷಣ್ಯಗಳನ್ನು ಬಿಟ್ಟುಕೊಡದೆ ಕೊನೆಯಲ್ಲಿ ಜಮೀನು, ಸಂಬಂಧಗಳು, ಸಂಸಾರ ಸಕಲವನ್ನೂ ಕಳೆದುಕೊಂಡವರಾಗಿ ತಮ್ಮ ಛಲಕ್ಕೆ ತಾವೇ ಸೋಲಲಾರದೇ ಮೌನವಾಗುತ್ತಾರೆ. ಒಬ್ಬ ವ್ಯಕ್ತಿಯ ಗೆಲುವು ಆ ವ್ಯಕ್ತಿಯು ಸಮಾಜಕ್ಕೆ ತನ್ನನ್ನು ಹೇಗೆ ಒಗ್ಗಿಸಿಕೊಂಡಿರುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆಯೆಂಬ ಅಂಶ ಈ ಕಥೆಯಲ್ಲಿ ಕಾಣುತ್ತದೆ. ಏಕೆಂದರೆ ಈ ಕಥೆಯಲ್ಲಿ ಕುಪ್ಪಣ್ಣಭಟ್ಟರ ಮೌನವು ಕೊನೆಯಲ್ಲಿ ನಾಯಕನಂತೆ ಭಾಸವಾದರೂ ಕಥೆಯೊಳಗೆ ಕಥೆಯೊಳಗಿನ ಸಾಮಾಜಿಕ ಸಂಬಂಧಗಳ ನಡುವಿನ ಏರುಪೇರು, ಈ ಸಂಬಂಧಗಳನ್ನೇರ್ಪಡಿಸಲು ಬೇಕಾದ ಸಮಾಜದ ಪ್ರತಿಯೊಬ್ಬನ ಆಂತರಿಕ ವ್ಯತಿರಿಕ್ತತೆ ಕಥೆಗೆ ಆಧಾರವಾದದ್ದು ಕಾಣುತ್ತದೆ.

ಕಥೆಯೊಳಗಿನ ಪ್ರತಿಪಾತ್ರವೂ ನಾವಾಗಿ ಚಿಂತಿಸುವಂತೆ ಮಾಡುತ್ತದೆ. ಅಪ್ಪಣ್ಣಭಟ್ಟರ ಪಾತ್ರದೊಳಗೆ ಬದುಕುವ ಹುಮ್ಮಸ್ಸು ಬೆಳಕಿನಂತೆ ಬೆಳಗಿದರೆ ಕುಪ್ಪಣ್ಣಭಟ್ಟರ ಪಾತ್ರದೊಳಗೆ ಪ್ರತಿ ಹೆಜ್ಜೆ ಸಾಗುವ ಮಾರ್ಗವೂ ಮಸಿಯಂಟಿಸಿಕೊಂಡ ಲಾಟೀನು ಹಿಡಿದು ಕತ್ತಲಲ್ಲಿ ಪಯಣಿಸುವ ಪಯಣಿಗನ ಪಯಣದ ಹಾಗೆ. ಬೆಳಕಿದ್ದೂ ಸುತ್ತ ಬೆಳಕರಿಯದ ಹಾಗೆ ಮಾಡುವಂಥ ಶಕ್ತಿಯಾಗಿ ಪರಿಣಮಿಸುತ್ತದೆ.

ಬರಿಯೊಂದು ಬೇಲಿಯಾಚೆಗಿನ ಇಬ್ಬರ ತೋಟದ ಭೂಮಿ ಕೊಡುವ ಪ್ರತಿಫಲವೂ ಬೇರೆಯೇ. ಜೀವನ ಪೀತಿಯೆಂದರೆ ಬರಿ ತನ್ನನ್ನು ತಾನು ಪ್ರೀತಿಸಿಕೊಳ್ಳುವುದು ಮಾತ್ರವಲ್ಲ, ಸುತ್ತಲಿನ ಎಲ್ಲವನ್ನೂ ಪ್ರೀತಿಸುತ್ತ ಸಾಗಿದಾಗ ಸಿಗುವ ಪ್ರತಿಫಲದ ಪರಿಣಾಮ ಉಣಬಡಿಸಿದ ಪ್ರೀತಿಯ ತೂಕದಷ್ಟನ್ನೇ ಹಲವು ಬಾರಿ ತೂಗುತ್ತಲಿರುತ್ತದೆ. ಇದಕ್ಕೆ ಭೂಮಿತಾಯಿಯೂ ಹೊರತಲ್ಲ. ಜಮೀನನ್ನು ಸದಾ ಕಾಳಜಿಯಿಂದ ನೋಡಿಕೊಳ್ಳುವ ತೆಗೆದುಕೊಳ್ಳುವ ಅಪ್ಪಣ್ಣಭಟ್ಟರ ತೋಟವು ಒಳ್ಳೆಯ ಫಸಲುಭರಿತವಾಗಿದ್ದರೆ, ಆರೈಕೆಯನ್ನೇ ಕಾಣದ ಕುಪ್ಪಣ್ಣಭಟ್ಟರ ಜಮೀನು ಫಸಲು ಬರುವುದಿರಲಿ, ಕೊಳೆರೋಗ ಹಿಡಿದು ನೆಲದ ಪಾಲಾಗಿರುತ್ತದೆ.

‘ಭಾಗೀರತಿ ಅಡಿಗೆ ಮನೆಯಲ್ಲಿ ಹಸಿ ಸೌದೆಗೆ ಅಗ್ನಿ ಆವೇಶಿತನಾಗುವಂತೆ ಮಾಡಲು ಊದುಗೊಳವೆಯಲ್ಲಿ ಊದಿ ಊದಿ ಕೆಮ್ಮಿದಳು. ನೀರು ಹರಿದು ಹರಿದು ಒಣಗಿದ ಕಣ್ಣುಗಳನ್ನು ಸೆರಗಿನಿಂದ ಒರೆಸಿಕೊಂಡಳು. ಕೆದರಿದ ತಲೆಗೂದಲನ್ನು ನೇವರಿಸಿಕೊಂಡಿದ್ದಳು. ಬತ್ತಿದ ಕೆನ್ನೆಗಳ ಪೆಚ್ಚು ಮೋರೆಯನ್ನೆತ್ತಿ ನಡುಮನೆಗೆ ಬಂದು “ಅಮ್ಮ ಹುಳಿ ಮಾಡಲು ತೊಗರಿಬೇಳೆಯಿಲ್ಲ”ವೆಂದಳು. “ಸೌತೆ ಬೀಜದ ಸಾರು ಮಾಡು”ಎಂದರು, ಗೌರಮ್ಮ.’ - ಕಥೆಯೊಳಗಿನ ಇಂಥ ಸಾಲುಗಳು ಕುಪ್ಪಣ್ಣಭಟ್ಟರ ಸಂಸಾರದೊಳಗಿನ ಕೊರತೆಯ ಜಾಡನ್ನು ಹಿಡಿದೆತ್ತಿ ತೋರುವಲ್ಲಿ ಸಫಲವಾಗುತ್ತವೆ. ಅಲ್ಲದೇ ಹಸಿಯ ಸೌದೆಗೆ ಅಗ್ನಿ ಆವೇಶಿತನಾಗುವಂತೆ ಊದುತ್ತ ಕುಳಿತುಕೊಳ್ಳುವ ಪರಿಸ್ಥಿತಿಯಿದೆಯೆಂದರೆ ಮನೆಯೊಳಗೆ ಒಣಕಟ್ಟಿಗೆಯ ಸಂಗ್ರಹ ಇಲ್ಲವೆಂಬುದೇ ಅರ್ಥ. ಭವಿಷ್ಯದ ಬಗ್ಗೆ ಜಾಗ್ರತೆಯಿಲ್ಲದೆ ಬದುಕು ಸಾಗಿದರೆ ಬದುಕಿನ ಉದ್ದಕ್ಕೂ ಹಸಿಕಟ್ಟಿಗೆ ಊದಿ ಅದು ಉಗುಳುವ ಹೊಗೆಯನ್ನೇ ಉಣಬೇಕಾದೀತೆನ್ನುವ ಸಾರ ಕಥೆಯೊಳಗೆ ಸೂಚ್ಯವಾಗಿ ಕಂಡರೆ ಅದು ಕಥೆಗಾರನ ಸೂಕ್ಷ್ಮ ಹೆಣಿಗೆಯ ಜಾಣ್ಮೆ.

ಜೀವನದ ಮಧ್ಯಂತರದವರೆವಿಗೂ ಒಣಪ್ರತಿಷ್ಠೆ, ಅತೀಸ್ವಾಭಿಮಾನ, ನಿಷ್ಠುರ ಸ್ವಭಾವಗಳಿಂದಲೇ ಗೆಲುವು ಗಳಿಸಿಯೇನೆಂಬಂತೆ ನಡೆದು, ಏನೂ ಗಳಿಸಲಾಗದ ಮಧ್ಯಂತರದಲ್ಲಿ ಕಳೆದದ್ದನ್ನೆಲ್ಲ ಕೂಡುವ ಹಂಬಲ, ಪ್ರಯತ್ನಗಳ ಪ್ರತಿಫಲವು ಅಡಿಪಾಯವಿಲ್ಲದೇ ಮಧ್ಯಂತರದಿಂದಲೇ ಆರಂಭವಾಗುತ್ತದೆ. ಭದ್ರ ಬುನಾದಿಯಿಲ್ಲದ ತೂರಾಡುವ ಪ್ರಯತ್ನಕ್ಕೆ ತೂಗಾಡುವ ಫಲವೇ ಸಿಗುತ್ತದೆ. ಅಂತೆಯೇ ಒಣಪ್ರತಿಷ್ಠೆಯಿಂದ ಏನನ್ನೂ ಗಳಿಸಲಾಗದವರಾಗಿ ಕಳೆದುಕೊಂಡಿದ್ದೇ ಜಾಸ್ತಿಯೆನ್ನುವುದನ್ನು ಅರಿತ ಕುಪ್ಪಣ್ಣಭಟ್ಟರ ಆ ನಂತರದ ಪ್ರಯತ್ನಗಳೆಲ್ಲ ಸೋತು ಮೌನವಾಗುವ ಕಥೆಯೇ ಮೌನಿ.

‘ಗೊಬ್ಬರದ ಗುಂಡಿಯಿಂದೆದ್ದು ಬಂದ ನೊಣ ಮೂಗಿನ ಮೇಲೆ ಏರಿಕೂತು ಉರಿಯಿತು. ಅಟ್ಟಿದರೂ ಕಣ್ಣಿಗೆ ಕಟ್ಟುವ ನುಸಿ. ಉಶ್, ಎಂದರು. ಕಿವಿಯಲ್ಲಿ ಕರ್ಣಪಿಶಾಚಿಯಂತೆ ಕಾಡುವ ಸೊಳ್ಳೆ. ಅಂಗಳದ ಮೂಲೆಯಲ್ಲೊಂದು ಹಲಸಿನ ಸೇಡೆ ಒಣಗುತ್ತಿತ್ತು. ಗಾಳಿ ಬೀಸಿದರೆ ಕೊಟ್ಟಿಗೆಯ ನಾತ. ಜ್ವರಗಡ್ಡೆಯಿಂದ ಹೊಟ್ಟೆ ಡೊಳ್ಳಾದ ಐದು ವರ್ಷದ ಮಗ ಅಂಗಳದೊಂದು ಮೂಲೆಯಲ್ಲಿ ಬೆತ್ತಲೆ ಮೈಯಲ್ಲಿ ಕುಕ್ಕುರು ಕೂತಿದ್ದ. ಅಂಗಳದಲ್ಲಿದ್ದೊಂದು ಬೂದು ನಾಯಿ, ಬೂದಿ ಗುಡ್ಡೆಯ ಮೇಲೊರಗಿದ್ದೊಂದು ಕರಿ ನಾಯಿ ಕುಳಿತ ಹುಡುಗನಲ್ಲೆ ತದೇಕ ಮಗ್ನರಾಗಿದ್ದವು.’- ದಾರಿದ್ರ್ಯಕ್ಕೂ ಅಶುಭ್ರ ವಾತಾವರಣಕ್ಕೂ ಇರುವ ಒಂದು ಅಂಟಿನ ನಂಟನ್ನು ಕುಪ್ಪಣ್ಣಭಟ್ಟರ ಮನೆಯ ಸುತ್ತಮುತ್ತಲಿನ ವಾತಾವರಣದ ಚಿತ್ರವಾಗಿ ಕಾಣಬಹುದು. ಆರ್ಥಿಕತೆಗೆ ಒದಗಿದ ಕೆಳಮಟ್ಟದ ಸ್ಥಿತಿ ಬಡತನ. ದಾರಿದ್ರ್ಯವೆನ್ನುವುದು ಮನಸ್ಸಿಗೂ ಅಂಟಿಕೊಳ್ಳುವ ಸ್ಥಿತಿ. ಅದು ಅಶುಭ್ರ ವಾತಾವರಣವನ್ನು ಸೃಷ್ಟಿಸಬಲ್ಲುದು. ಅಂಥದೊಂದು ವಾತಾವರಣದ ಚಿತ್ರಣವು ಕಥೆಯನ್ನೋದುತ್ತಿದ್ದಂತೆ ಯಥಾವತ್ತಾಗಿ ಕಣ್ಮುಂದೆ ಕಟ್ಟಿಕೊಳ್ಳುತ್ತದೆ.

ಹೆಂಡತಿ ಮಕ್ಕಳ ವ್ಯಾಧಿ, ಬಡತನ, ಮದುವೆಗೆ ನಿಂತ ಮಗಳು, ಹಸಿದ ಮಕ್ಕಳು-ಇಂಥ ಪಾತ್ರಗಳ ನಡುವೆ ಸುತ್ತೆಲ್ಲ ನಿಷ್ಠುರ ಕಟ್ಟಿಕೊಂಡ ಕುಪ್ಪಣ್ಣಭಟ್ಟರ ಪ್ರಯತ್ನ ಸೋಲುತ್ತ ಹೋಗುವಾಗ ಸಮಾಜದಲ್ಲಿ ಮುನ್ನುಗ್ಗಬೇಕಾದಾಗ ಹೇಗಿರಬೇಕು, ಹೇಗಿರಬಾರದೆಂಬ ಸಂದೇಶ ಇಡಿಯ ಕಥೆಯೊಳಗೆಲ್ಲ ಹರಿಯುತ್ತಿದೆಯೆಂಬುದು ಭಾಸವಾಗುತ್ತದೆ.

ಆಪದ್ಬಾಂಧವಳಂತೆ ಕೊನೆಯಲ್ಲಿ ಕಾಣಿಸಿಕೊಳ್ಳುವ ಸೀತಕ್ಕ ಎಂಬ ಒಂಟಿ ಹೆಂಗಸಿನ ಪಾತ್ರವು ಆದಿಯಿಂದ ಅಂತ್ಯದತನಕವೂ ಇರುವ ಕುಪ್ಪಣ್ಣಭಟ್ಟರ ಪಾತ್ರದಷ್ಟೇ ನಾಜೂಕಾಗಿ ಕಾಡುತ್ತದೆ. ಕಥೆಯ ಅಂತ್ಯದಲ್ಲಿ ಅಪ್ಪಣ್ಣಭಟ್ಟರು ಕುಪ್ಪಣ್ಣಭಟ್ಟರನ್ನು ಖುದ್ದಾಗಿ ತಾವೇ ನೋಡಿಹೋಗಲು ಬಂದಾಗಿನ ಕುಪ್ಪಣ್ಣಭಟ್ಟರ ಅಯೋಮಯ ಸ್ಥಿತಿ ಸೋತು ಬಿದ್ದವನಿಗೂ ಸತ್ತುಬಿದ್ದವನಿಗೂ ಇರುವ ಸಾಮ್ಯತೆಯನ್ನು ಹೇಳುತ್ತದೆ. ಕಥೆಯ ಪಾತ್ರಗಳಷ್ಟೇ ಮುಖ್ಯವಾಗಿ ಕತೆಯಲ್ಲಿ ವರ್ಣಿಸಲಾದ ಸುತ್ತಮುತ್ತಲಿನ ವಾತಾವರಣವೂ ಸಹ ಅಷ್ಟೇ ಪ್ರಾಮುಖ್ಯವಹಿಸಿ ಕಥೆಯ ಆಳವನ್ನು ಇನ್ನಷ್ಟು ತೀವ್ರವಾಗಿಸುತ್ತದೆ.

ಕತೆಯೊಳಗಿನ ಪಾತ್ರಗಳು:
ಭಾವಿಕೆರೆ ಕುಪ್ಪಣ್ಣಭಟ್ಟರು, ಸೀಬಿನಕೆರೆ ಅಪ್ಪಣ್ಣಭಟ್ಟರು, ಶ್ರೀ ಮಠ, ವಸೂಲಿಸಾಬ, ಶಾನುಭೋಗರು, ಏಜೆಂಟರು, ಕುಪ್ಪಣ್ಣಭಟ್ಟರ ಮೈದುನ ಸುಬ್ರಹ್ಮಣ್ಯ, ಕುಪ್ಪಣ್ಣಭಟ್ಟರ ಹೆಂಡತಿ ಗೌರಮ್ಮ, ಕುಪ್ಪಣ್ಣಭಟ್ಟರ ಮಗಳು ಭಾಗೀರತಿ, ಗಿಂಡಿಮಾಣಿ, ಗುರುಗಳು, ಮಠದ ಉಗ್ರಾಣಿ, ಜ್ವರಗಡ್ಡೆಯಿಂದ ಹೊಟ್ಟೆಡೊಳ್ಳಾದ ಐದು ವರ್ಷದ ಮಗ ಗಣಪ, ಕುಪ್ಪಣ್ಣಭಟ್ಟರ ಅಂಗಳದ ಬೂದುನಾಯಿ ಮತ್ತು ಕರಿನಾಯಿ, ಮಂಜ, ಊರಜನ(ಕುಪ್ಪಣ್ಣಭಟ್ಟರಿಗೆ ಅಡಿಕೆ ಮಾರಿದವರು), ಕಾಂಪೌಂಡರ್, ಗೋಪಾಲಕಮ್ತಿಯ ಶಡ್ಡಗ, ಅಪ್ಪಣ್ಣಭಟ್ಟರ ಆಳು, ಅಮೀನ, ಬಾಲವಿಧವೆಯಾದ ಸೀತಕ್ಕ ಎಂಬ ಅಜ್ಜಿ.

ಕಥೆಯೊಳಗೆ ಶ್ರೀ ಮಠ ಮತ್ತು ಕಥೆಗಾರ ಇಬ್ಬರೂ ಕಥೆಯ ಎದಿರು ಬಾರದೆಯೇ ಕಥೆಯ ಮುಖ್ಯ ಪಾತ್ರವೆನಿಸುತ್ತಾರೆ. ಕಥೆಯನ್ನು ನಮ್ಮೆದುರು ಯಾರೋ ಕುಳಿತು ಹೇಳುತ್ತಿರುವಂಥ ಆಪ್ತಭಾವಗಳು ಕಾಡುವಾಗ ಕಥೆಗಾರ ಇಲ್ಲೆಲ್ಲೋ ಕುಳಿತು ಕಥೆ ಹೇಳುತ್ತಿರುವಂತೆ ಕೆಲವೊಮ್ಮೆ ಅನ್ನಿಸದೇ ಇರಲಾರದು. ಇದು ಈ ಕಥೆಯ ಇನ್ನೊಂದು ವೈಶಿಷ್ಟ್ಯವೆನಿಸುತ್ತದೆ.
***


ಯು. ಆರ್. ಅನಂತಮೂರ್ತಿಯವರು ಬರೆದ ‘ಆಕಾಶ ಮತ್ತು ಬೆಕ್ಕು’ ‘ಮೌನಿ’ ಕಥೆಗಿಂತ ತೀರ ಭಿನ್ನವಾಗಿರುವುದು. ‘ಮೌನಿ’ ಕಥೆಯನ್ನು ಕಥೆಗಾರ ನಮ್ಮೆದುರು ಬಣ್ಣಿಸುತ್ತ ಹೋಗುವುದು ಭಾಸವಾದರೆ ‘ಆಕಾಶ ಮತ್ತು ಬೆಕ್ಕು’ ತನ್ನೊಳಗಿನ ಪಾತ್ರಗಳಿಂದಲೇ ತಾನು ಹೆಣೆಹೆಣೆದುಕೊಳ್ಳುತ್ತ ಬಿಚ್ಚಿಕೊಳ್ಳುವುದು ವಿಶೇಷ. ನಿರೂಪಕನಿಂದಲೇ ಕಥೆಯ ನಿರೂಪಣೆಯಾದರೂ ತದನಂತರದಲ್ಲಿ ಮುಖ್ಯ ಪಾತ್ರವಾದ ಜಯತೀರ್ಥ ಆಚಾರ್ಯರ ವ್ಯಕ್ತಿತ್ವ ಮತ್ತು ಜೀವನ ಚರಿತ್ರೆ ಮಗ ಕೃಷ್ಣಮೂರ್ತಿಯ ವ್ಯಥೆಯಾಗಿ ಶುರುವಿಟ್ಟುಕೊಳ್ಳುತ್ತದೆ.

ಇಪ್ಪತ್ತು ವರ್ಷಗಳ ಪ್ರಿಯತಮ ಜಯತೀರ್ಥ ಆಚಾರ್ಯರು ಮರಣಶಯ್ಯೆಯಲ್ಲಿ ಇರುವಾಗಲೂ ಮೌನವಾಗಿದ್ದುಕೊಂಡು ಅವರ ಶುಶ್ರೂಷೆ ಮಾಡುವ ಗಂಗೂಬಾಯಿ ಮೆಲುವಾಗಿ ನಮ್ಮನ್ನೆಳೆದುಕೊಳ್ಳುತ್ತಾಳೆ. ಮತ್ತೆಲ್ಲೋ ಇಷ್ಟವಾಗುತ್ತಾಳೆ ಕೂಡ.

ಸಾವಿನ ಅಂಚಿನಲ್ಲಿರುವ ಮನುಷ್ಯ ಕೊನೆಗಾಲದಲ್ಲಿ ಹೆಂಡತಿ, ಮಕ್ಕಳು, ಮೊಮ್ಮಕ್ಕಳು ಹೀಗೆ ಸಂಬಂಧಗಳಿಗೆ ಹೇಗೆ ಹೆಚ್ಚು ಒತ್ತುಕೊಡುತ್ತಾನೆ ಎಂಬುದು ಕಥೆಯನ್ನೋದುವಾಗ ಮನದಟ್ಟಾಗುತ್ತದೆ. ಸಮಾಜಕ್ಕೆ ವಿರುದ್ಧವಾದ ಕಾರ್ಯಗಳನ್ನೆಸಗುತ್ತಲಿರುವ ನಲವತ್ತು ವರ್ಷಗಳಷ್ಟು ಹಳೆಯ ಸ್ನೇಹಿತನಿಗೂ, ಹೆಂಡತಿ ಹಾಗೂ ಬೆಳೆದು ಸಂಸಾರೊಂದಿಗರಾಗಿರುವ ಮಕ್ಕಳೆಲ್ಲ ಇದ್ದೂ ಸಹ ಇಪ್ಪತ್ತು ವರ್ಷಗಳ ಪ್ರೇಯಸಿಗೂ ಪ್ರಾಶಸ್ತ್ಯ ಕೊಡುವುದನ್ನು ಕಂಡಾಗ ಸಾವು ಹಾಗೂ ಅದರ ಸಾಮೀಪ್ಯದ ಗಡುವು ತಂದುಕೊಡುವ ನಿರ್ಲಿಪ್ತ ಧೈರ್ಯದ ಬಗ್ಗೆ ಕಥೆ ಸೂಚ್ಯವಾಗಿ ಹೇಳುತ್ತದೆ.

ಜಯತೀರ್ಥಾಚಾರ್ಯರ ಮರಣಾನಂತರ ಮಗ ಕೃಷ್ಣಮೂರ್ತಿಯ ಯೋಚನೆಗಳಾಗಿ ಸಾಲಾಗಿ ಸರಗಟ್ಟುವ ಆಚಾರ್ಯರ ಬದುಕಿನ ಒಂದರ ಹಿಂದೊಂದು ಹಂತಗಳು ಅವನನ್ನು ಕಾಡತೊಡಗುತ್ತವೆ. ತೀರ ವಾಸ್ತವದ ಬದುಕಿಗೆ ಹೊಂದಿಕೊಂಡು ಅತೀಸಾಮಾನ್ಯ ಜೀವನ ನಡೆಸುತ್ತಿರುವ ಕೃಷ್ಣಮೂರ್ತಿಗೆ ತನ್ನ ತಂದೆ ಜಯತೀರ್ಥಾಚಾರ್ಯರು ಹಾಗೂ ನಾಯರ್ ನಡುವಿನ ಮಾತುಕತೆಗಳು ಒಗಟಾಗಿ ಕಾಣಿಸತೊಡಗುತ್ತವೆ. ಬಾಂಧವ್ಯಕ್ಕೆ ಒತ್ತುಕೊಡುವವನಂತೆ ಕಾಣುವ ನಾಯರ್ ಆಡುವ ಒರಟು ಮಾತುಗಳೂ ಕೃಷ್ಣಮೂರ್ತಿಗೆ ಒಗಟುಗಳೇ. ಇಬ್ಬರು ವ್ಯಕ್ತಿಗಳ ನಡುವಿನ ಭಾವನೆಗಳು ಮತ್ತು ವಾಸ್ತವಗಳ ತೀವ್ರ ಸಮ್ಮಿಶ್ರ ಮೂರನೆಯ ವ್ಯಕ್ತಿಗೆ ಅರ್ಥವಾಗದ ಒಗಟಾಗಿ ಪರಿಣಮಿಸುವ ಪರಿಗೆ ಕೃಷ್ಣಮೂರ್ತಿ ಉದಾಹರಣೆಯೆನಿಸುತ್ತಾನೆ.

ಒಬ್ಬ ವ್ಯಕ್ತಿಯ ಸಾವಿಗಿಂತಲೂ ಸಾಯುತ್ತಲಿರುವ ವ್ಯಕ್ತಿಯ ಸುಪರ್ದಿನಲ್ಲಿರುವ, ತಮಗೆ ಸಂದಬೇಕಾದ ವಸ್ತುಗಳು ಹೆಚ್ಚು ಬೆಲೆ ಪಡೆದುಕೊಳ್ಳುವಂಥ ಸೂಕ್ಷ್ಮ ಎಳೆಗಳು ವಿಷ್ಣುಮೂರ್ತಿಯಂಥ ಪಾತ್ರದೊಳಗೆ ಸಿಗುತ್ತವೆ.

ಒಬ್ಬ ಸಂಪ್ರದಾಯಸ್ಥ ಬ್ರಾಹ್ಮಣ ಹೆಂಗಸು ಭಾವನೆಗಳಿಗೆ ಕೊಟ್ಟಷ್ಟೇ ಪ್ರಾಮುಖ್ಯವನ್ನು ಸಂಪ್ರದಾಯದ ಕಟ್ಟಳೆಗಳಿಗೂ ಕೊಡುತ್ತಾಳೆ ಎಂಬಂತಹ ಆಳದ ಎಳೆಗಳು ಜಯತೀರ್ಥಾಚಾರ್ಯರ ಸಾವಿನ ಎದುರು ಹೆಂಡತಿ ರುಕ್ಮಿಣಿಯಮ್ಮನ ತಳಮಳಗಳಲ್ಲಿ ಕಾಣಬಹುದು. ಅನ್ಯಜಾತಿಯವಳನ್ನು ವಿವಾಹವಾದ ಮಗನ ಕೊರಳಲ್ಲಿ ಅಪ್ಪನ ಸಾವಿನ ಈ ಸಂದರ್ಭದಲ್ಲಿ ಜನಿವಾರ ಇದೆಯೋ ಇಲ್ಲವೋ ಎಂದೆಲ್ಲ ಕಳವಳಗೊಳ್ಳುವ ರುಕ್ಮಿಣಿಯಮ್ಮ ಎಲ್ಲ ಸಂಪ್ರದಾಯಸ್ಥ ಹೆಂಗಳೆಯರಿಗೆ ಸಾಕ್ಷ್ಯರೂಪವಾಗಿ ಭಾಸವಾಗುತ್ತಾರೆ. ಜಯತೀರ್ಥಾಚಾರ್ಯರ ಪ್ರೇಯಸಿ ಈ ಸಮಯದಲ್ಲಿ ತಮ್ಮ ಮನೆಯಲ್ಲಿಯೇ ಇರುವುದು ರುಕ್ಮಿಣಿಯಮ್ಮನಂಥ ಮರ್ಯಾದೆಗೆ ಅಂಜುವ ಹೆಣ್ಣಿಗೆ ಗಂಡನ ಸಾವಿಗಿಂತಲೂ ಬದುಕಿನ ನೀತಿಯೆದುರು ಮುಜುಗರವಾಗಿ ಬಿಂಬಿತವಾಗುತ್ತದೆ.

ಎಲ್ಲವುಗಳ ನಡುವೆ ಗಂಗೂಬಾಯಿ ಇಡಿಯ ಕಥೆಯೊಳಗಿನ ಸಾರವನ್ನೆಲ್ಲ ಅರಿತ ವ್ಯಕ್ತಿಪಾತ್ರವಾಗಿ ಒಮ್ಮೊಮ್ಮೆ ಕಾಣುತ್ತಾಳೆ. ಎಲ್ಲರೂ ಕಂಡಂತಿರುವ ಆಚಾರ್ಯರ ಬದುಕಿನ ಒಂದು ಪಾರ್ಶ್ವದ ಕಥೆಯನ್ನು ಮಗ ಕೃಷ್ಣಮೂರ್ತಿಯ ಯೋಚನೆಗಳು, ಎಡಬಿಡದೆ ಆತನನ್ನು ಕಾಡುವ ತಂದೆಯ ನೆನಪುಗಳು ಸಾರುತ್ತವೆ. ಯಾರೂ ನೇರವಾಗಿ ಕಂಡಿರದ ಆಚಾರ್ಯರರ ಬದುಕಿನ ಇನ್ನೊಂದು ಮಗ್ಗುಲಿನ ಕಥೆ ಪ್ರೇಯಸಿ ಗಂಗೂಬಾಯಿಯ ನೆನಪುಗಳಾಗಿ ಹೊರಳುತ್ತದೆ.

ದೇವಸ್ಥಾನದ ಪೂಜಾರಿಯ ಮಗನಾಗಿ ಹುಟ್ಟಿದ ಆಚಾರ್ಯರು ಸದಾ ಜ್ಞಾನದಾಹವುಳ್ಳವರು. ಅನೇಕ ವಿಚಾರಗಳಲ್ಲಿ ಆಸಕ್ತಿ ಇರುವ ವ್ಯಕ್ತಿಯ ಜೀವನವು ಏಕಮುಖವಾಗಿ ನಡೆಯದೇ ಕವಲು ಕವಲಾಗಿ ಹಂಬಿಕೊಳ್ಳುವ ರೀತಿಯನ್ನು ಈ ಕಥೆಯಲ್ಲಿ ಕಾಣಬಹುದು. ಆಚಾರ್ಯರ ಹರೆಯದ ಪ್ರೇಯಸಿ ಅಲಕಾದೇವಿಯ ಸಾವು ಕುವೆಂಪುರವರ ‘ಕಾನೂರು ಹೆಗ್ಗಡತಿ’ಯ ಸಾವನ್ನು ನೆನಪಿಸಿದರೆ, ಕೆಲಕಾಲ ಪೋಸ್ಟ್ ಮಾಸ್ಟರ್ ವೃತ್ತಿಯಲ್ಲಿರುವಾಗ ಅಲಕಾದೇವಿಯ ಎಸ್ಟೇಟಿನಲ್ಲಿ ರೈಟರ್ ಆಗಿಯೂ ಕೆಲಸ ಮಾಡುವ ಆಚಾರ್ಯರು ಅಬಚೂರಿನ ಪೋಸ್ಟ್ ಮಾಸ್ಟರ್ ಪಾತ್ರವನ್ನೂ ನೆನಪಿಸುತ್ತಾರೆ.

ಕಥೆಯ ಪಾತ್ರಗಳು:
ಜಯತೀರ್ಥ ಆಚಾರ್ಯರು, ಗೆಳೆಯ ಗೋವಿಂದನ್ ನಾಯರ್ (ಕೇರಳದ ಕಮ್ಯುನಿಸ್ಟ್), ಮಗ ಕೃಷ್ಣಮೂರ್ತಿ, ವಿಧವೆ ಮಗಳು ಸಾವಿತ್ರಿ, ಅವಳ ಹನ್ನೆರಡು ವರ್ಷದ ಮಗ ಹರಿಕುಮಾರ, ಸೊಸೆ ಮೀರಾ, ಮೊಮ್ಮಗ, ಇಪ್ಪತ್ತು ವರ್ಷಗಳ ಪ್ರೇಯಸಿ ಗಂಗೂಬಾಯಿ, ಹರೆಯದ ಪ್ರೇಯಸಿ ಅಲಕಾದೇವಿ, ಹೆಂಡತಿ ರುಕ್ಮಿಣಿಯಮ್ಮ, ಜಮೀನ್ದಾರ್ ವಿಷ್ಣುಮೂರ್ತಿ, ಎಂ. ವಿ. ವಾರಿಯರ್, ವೆಂಕಪ್ಪ ನಾಯಕ, ವಿಷ್ಣುಮೂರ್ತಿಯನ್ನು ದತ್ತು ತಂದೆ ನರಸಿಂಹಭಟ್ಟರು, ನರಸಿಂಹ ಭಟ್ಟರ ಹೆಂಡತಿ (ವಿಷ್ಣುಮೂರ್ತಿಯ ಸಾಕುತಾಯಿ), ವಿಷ್ಣುಮೂರ್ತಿಯ ಹೆಂಡತಿಯ ವಿಧವೆ ತಂಗಿ.

ಎರಡೂ ಕಥೆಗಳ ಕುರಿತು:

‘ಮೌನಿ’ ಕಥೆಯಲ್ಲಿ ಸುತ್ತಲಿನ ವಾತಾವರಣದ ಬಗೆಗಿನ ನಿರೂಪಣೆಯು ಕಥೆಯ ಜೀವಂತಪಾತ್ರಗಳ ಸಂವಹನಕ್ಕೆ ಸಂವಾದಿಯಾಗಿ ನಿಲ್ಲುತ್ತದೆ. ಸುತ್ತಲಿನ ವಾತಾವರಣವೂ ಪಾತ್ರಗಳಷ್ಟೇ ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ಭಾವಾಭಿವ್ಯಕ್ತಿಯನ್ನು ಪಾತ್ರಗಳ ಮೂಲಕ ಮಾತ್ರವಲ್ಲದೇ ಸುತ್ತಲಿನ ವಾತಾವರಣ ವರ್ಣನೆಯಲ್ಲೂ ಕಾಣಬಹುದು. ‘ಆಕಾಶ ಮತ್ತು ಬೆಕ್ಕು’ ಕಥೆಯಲ್ಲಿ ಮಾನವೀಯ ಸಂಬಂಧಗಳ ಮೌಲ್ಯ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿರುವುದನ್ನು ಕಾಣಬಹುದು. ಸಾಮಾಜವು ಈ ಕಥೆಯ ಪ್ರಮುಖ ಮುಖ.

ಕಥೆಗಳ ಸಾಮ್ಯ:

ಮಾತಿನೊಳಗಿನ ನಯ, ನಿಷ್ಠುರ ಗುಣಗಳು ಜೀವನದ ಹಾದಿಯಲ್ಲಿ ಎಷ್ಟರ ಮಟ್ಟಿಗಿನ ಪರಿಣಾಮ ಬೀರುತ್ತವೆಂಬುದು ‘ಮೌನಿ’ ಕಥೆಯೊಳಗಿನ ಅಪ್ಪಣ್ಣಭಟ್ಟರು ಹಾಗೂ ಕುಪ್ಪಣ್ಣಭಟ್ಟರುಗಳ ಪಾತ್ರರೂಪಗಳಾಗಿ ಕಾಣಸಿಗುತ್ತವೆ. ಒಬ್ಬ ವ್ಯಕ್ತಿಯ ಸ್ವಭಾವವೂ ಸಹ ಸಮಾಜದಲ್ಲಿ ಸಮಬೆರೆಯುವ ಸಾಮರ್ಥ್ಯವನ್ನು ತಂದುಕೊಡುತ್ತದೆ, ನಡುವಳಿಕೆಯ ರೀತಿಯು ಜೀವನಶೈಲಿಯನ್ನು ಕೊಡುತ್ತದೆ ಎಂಬ ಸತ್ಯದ ಅರಿವು ‘ಮೌನಿ’ ಕಥೆಯನ್ನೋದುತ್ತ ಅರಳುತ್ತ ಹೋಗುತ್ತದೆ.

ಹಾಗೆಯೇ ‘ಆಕಾಶ ಮತ್ತು ಬೆಕ್ಕು’ ಕಥೆಯಲ್ಲಿ ಕಾಣಸಿಗುವ ಸಮಕಾಲೀನ ವ್ಯಕ್ತಿಗಳಾದ ಆಚಾರ್ಯರು ಮತ್ತು ನಾಯರ್ ಇವರ ಸ್ವಭಾವಗಳಲ್ಲಿನ ಭಿನ್ನತೆ ಅವರ ಜೀವನ ರೀತಿಯಲ್ಲೂ ವ್ಯತ್ಯಾಸ ಮೂಡಿಸಿರುತ್ತದೆ. ಅಂದರೆ ಬದುಕಿರುವಾಗಿನ ಪ್ರತಿಕ್ಷಣದ ಪರಿಣಾಮ ಸಮುದಾಯದ ಮೇಲೆ ಏನಾಗುತ್ತದೆಯೆಂಬುದು ಮುಖ್ಯವೆಂದು ಭಾವಿಸುವ ನಾಯರ್ ಹಾಗೂ ಜಯತೀರ್ಥಾಚಾರ್ಯರು ಇಬ್ಬರೂ ಜೀವನದುದ್ದಕ್ಕೂ ಬಯಸಿದ್ದು, ಎಸಗಿದ್ದು ಜನೋಪಕಾರವನ್ನೇ ಆದರೂ ಅದರ ರೀತಿ ಹಾಗೂ ಜೀವನಶೈಲಿಯೊಳಗಿನ ವ್ಯತ್ಯಾಸ ಗಮನಾರ್ಹವಾಗಿದೆ.‘ಮೌನಿ’ಯು ಮೌನವಾಗಿಯೇ ಮನತಟ್ಟಿದರೆ ‘ಆಕಾಶ ಮತ್ತು ಬೆಕ್ಕು’ ಆಗಸದಷ್ಟೇ ಒಗಟಾಗಿ ಕಾಡುವ ಕಥೆಯೆನಿಸುತ್ತದೆ. ಸರಳವಾಗಿ ಅರ್ಥೈಸಿಕೊಳ್ಳುವಂತೆ ಹೆಣೆದ ಈ ಎರಡು ಕಥೆಗಳು ಓದುತ್ತಿರುವಾಗಲೂ, ಓದಿಮುಗಿದಬಳಿಕವೂ ಸುತ್ತ ಸುಳಿಯುತ್ತಿದ್ದರೆ ಕಾರಣ ಮಾತ್ರ ಕಥೆಗಳೊಳಗಿನ ರಸ ಮತ್ತು ಸ್ವಾರಸ್ಯ.

-ಶಾಂತಲಾ ಭಂಡಿ

(‘ಅನಂತಮುಖದಮೂರ್ತಿ’ ಗ್ರಂಥದಲ್ಲಿ ಪ್ರಕಟವಾದ ಬರಹ.)

‘ಅನಂತಮುಖದಮೂರ್ತಿ’ ಯು.ಆರ್.ಅನಂತಮೂರ್ತಿಯವರ ಸಾಹಿತ್ಯ ಸಮೀಕ್ಷೆ
೨೦೦೯ ಡಿಸೆಂಬರಿನಲ್ಲಿ ಬೆಂಗಳೂರಿನಲ್ಲಿ ಬಿಡುಗಡೆ
ಸಂಪಾದಕರು: ಅಹಿತಾನಲ(ನಾಗ ಐತಾಳ)
ಪ್ರಕಾಶಕರು : ಸಾಹಿತ್ಯಾಂಜಲಿ, ಕ್ಯಾಲಿಫೋರ್ನಿಯಾ ಮತ್ತು ಅಭಿನವ ಬೆಂಗಳೂರು

ಡಾ ಅನಂತಮೂರ್ತಿಯವರಿಗೆ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳ್ತಾ ಈ ಲೇಖನವನ್ನ ಇಲ್ಲಿ ನನ್ನ ಬ್ಲಾಗಲ್ಲಿ ಇಟ್ಕೋತಾ ಇದೀನಿ.

November 18, 2010

ತಾರೆ ಅರಳುವ ಹೊತ್ತು

ಅಲ್ಲಿ ನೋಡೋ ಗೆಳೆಯ ತಾರೆ ಅರಳುವ ಹೊತ್ತು
ಆ ಹಾದಿಯಲಿ ಹಗಲು ಸರಿದು ಹೋಗುವ ಹೊತ್ತು
ಮುಡಿವ ಮಲ್ಲಿಗೆ ಮೊಗ್ಗು ಅರೆಬಿರಿವ ಹೊತ್ತು
ಚಂದಿರನ ಆಗಸದಿ ಅರಸಿ ಅರಸುವ ಹೊತ್ತು
ಅಲ್ಲಿ ನೋಡೋ ಗೆಳೆಯ ತಾರೆ ಅರಳುವ ಹೊತ್ತು

ಮೊರೆವ ಅಲೆ ದಡನ ತೋಯಿಸುವ ಹೊತ್ತು
ತೆರೆದ ಅಲೆ ದಡನ ತೆಕ್ಕೆ ಸೇರುವ ಹೊತ್ತು
ನೀರ್ಚುಕ್ಕಿ ನೂಪುರನ ಚುಂಬಿಸಿದ ಹೊತ್ತು
ಬೇಸರದಿ ಭಾನು ಬಾನಿಂದಿಳಿವ ಹೊತ್ತು
ಅಲ್ಲಿ ನೋಡೋ ಗೆಳೆಯ ತಾರೆ ಅರಳುವ ಹೊತ್ತು

ನಗುವ ನೇಸರನು ನೇಪಥ್ಯ ಸೇರಿದ ಹೊತ್ತು
ಚಕೋರ ಚಂದಿರಗೆ ಕಾಯುತಿಹ ಆ ಹೊತ್ತು
ಚಂದ್ರವೀದಿಯಲೀಗ ಚಂದ್ರಕಿ ನಲಿವ ಹೊತ್ತು
ತುಂಬುದಿಂಗಳು ಶಶಿಗೆ ಜನ್ಮವೀಯುವ ಹೊತ್ತು
ಅಲ್ಲಿ ನೋಡೋ ಗೆಳೆಯ ತಾರೆ ಅರಳುವ ಹೊತ್ತು

ನಗುವ ತಾರೆ ನಲಿವ ತಾರೆ ಮಿಂಚುಮಿಂಚಿನ ತಾರೆ
ಉದ್ದ ತೊಟ್ಟಿನ ತಾರೆ ಪುಟ್ಟ ತೊಟ್ಟಿನ ತಾರೆ
ಹೊನ್ನ ತೊಟ್ಟಿನ ತಾರೆ ಬೆಳ್ಳಿ ತೊಟ್ಟಿನ ತಾರೆ
ಹೊನ್ನ ನೂಲನು ತಾರೆ ನೇಯ್ವ ಬೆರಳನು ತೋರೆ
ಅಲ್ಲಿ ನೋಡೋ ಗೆಳೆಯ ನಾ ತಾರೆ ಮುಡಿಯುವ ಹೊತ್ತು

November 3, 2010

ದೀಪವೆಂದರೆ ಅಲ್ಲಿ...

ಜಗವೆಂಬ ದೇಗುಲದಿ ಮಿನುಗುತಿದೆ ದೀಪ
ಬತ್ತಿ ಹೊಸೆದವರಾರು ಹಣತೆ ಇಟ್ಟವರಾರು
ತೈಲ ಎರೆದವರಾರು ಬೆಳಕ ಹನಿಸಿದರ್ಯಾರು
ನೀನಲ್ಲ ನಾನಲ್ಲ ದೀಪ ಹಚ್ಚಿದವರು ಯಾರು?

ದೀಪವೆಂದರೆ ಅರಿವು ದೀಪವೆಂದರೆ ಬೆಳಗು
ದೀಪವೆಂದರೆ ಜನನ ದೀಪವೆಂದರೆ ಮರಣ
ಜನನ ಮರಣದ ನಡುವೆ ಮಿನುಗುತಿದೆ ದೀಪ
ನೀನಲ್ಲ ನಾನಲ್ಲ ದೀಪ ಹಚ್ಚಿದವರು ಯಾರು?

ಮನದೊಳವ ಮಿನುಗಿ ಮಂದಹಾಸದ ದೀಪ
ನಯನದೊಳ ಮಿನುಗಿ ಸುಜ್ಞಾನ ದೀಪ್ತಿ
ಅರಿವೆಂಬ ಅರಮನೆಯ ಸುತ್ತ ದೀವಳಿಗೆ
ನೀನಲ್ಲ ನಾನಲ್ಲ ದೀಪ ಹಚ್ಚಿದವರು ಯಾರು?

ಕತ್ತಲೆಯ ಕನ್ನಡಿಗೆ ಇಂಬಾಗಿ ದೀಪ
ಬೆತ್ತಲೆಯ ಬದುಕಿಗೆ ಉಡುಪಾಗಿ ದೀಪ
ಹಗಲು ರಾತ್ರಿಯ ನಡುವೆ ಉರಿಯುತಿದೆ ದೀಪ
ನೀನಲ್ಲ ನಾನಲ್ಲ ದೀಪ ಹಚ್ಚಿದವರು ಯಾರು?

ಜಗದ ಗರ್ಭದ ನೆಲದಿ ನಗುತಲಿಹ ಬೆಳಕು
ಜನಮನ ಜಗದಿ ಝಗಝಗ ಝಳಪು
ದೇವನೊಬ್ಬ ನಾಮ ಹಲವು ದೀಪ ಹಚ್ಚಿದವನ ಹೆಸರು
ನೀನಲ್ಲ ನಾನಲ್ಲ ದೀಪ ಹಚ್ಚಿದವರು ಯಾರು?

ಹಣತೆ ಮಡಿಲ ತೈಲ ಹಾಸಲಿ ಅರಳು ಬತ್ತಿ ಬೆಳಕ ಹಾದಿ
ಮಿನುಗು ದೀಪ ಉರಿವ ದೀಪ ಬೆಳಕು ದೀಪ ಝಳಪು ದೀಪ
ದೀಪವೆಂದರೆ ಅಲ್ಲಿ ನಾವು ನೀವು.
ನೀನಲ್ಲ ನಾನಲ್ಲ ದೀಪಹಚ್ಚಿಟ್ಟವರು ಯಾರು?

ಜಗವೆಂಬ ದೇಗುಲದಿ ಮಿನುಗುತಿದೆ ದೀಪ
ಬತ್ತಿ ಹೊಸೆದವರಾರು ಹಣತೆ ಇಟ್ಟವರಾರು
ತೈಲ ಎರೆದವರಾರು ಬೆಳಕ ಹನಿಸಿದರ್ಯಾರು
ನೀನಲ್ಲ ನಾನಲ್ಲ ದೀಪ ಹಚ್ಚಿದವರು ಯಾರು?
ಹಣತೆ, ಬತ್ತಿ, ತೈಲ, ಎಲ್ಲವೂ ನಾವೇ. ಹಣತೆ,ತೈಲ, ಬತ್ತಿ, ಎಲ್ಲವೂ ಒಟ್ಟಿಗಿದ್ದಾಗ ಮೇಲಿದ್ದಾನಲ್ಲ ಅವನು ದೀಪ ಹಚ್ಚುತ್ತಾನೆ. ಆಗ ಒಬ್ಬರಿಗೊಬ್ಬರು ಬೆಳಕಾಗುತ್ತೇವೆ. ಬೆಳಕೆಂದರೆ ನಾವೇ ಆಗಬಲ್ಲೆವು. ಒಂದೊಂದೇ ದೀಪ ಹಚ್ಚಿದ ಮೇಲಾದ ದೀವಳಿಗೆಯೇ ದೀಪಾವಳಿ. ಎಲ್ಲ ಮನೆ ಬಾಗಿಲುಗಳ ರಂಗೋಲೆಯೂ ಬೆಳಕಲ್ಲಿ ಅರಳಲಿ. ಹಚ್ಚಿಟ್ಟ ಹಣತೆಯಲ್ಲಿ ಹೊಳೆಯುತ್ತಿರಲಿ ದೀಪ. ದೀಪಾವಳಿ ಎಲ್ಲರಿಗೂ ಇನ್ನಷ್ಟು ಬೆಳಕು ತರಲಿ.
ಎಲ್ಲರಿಗೂ ಇನ್ನಷ್ಟು ಒಳಿತಾಗಲಿ.
ಎಲ್ಲರಿಗೂ ದೀಪಾವಳಿಯ ಶುಭಾಶಯ.

ವಂದನೆಗಳೊಂದಿಗೆ,
ಪ್ರೀತಿಯಿಂದ,
-ಶಾಂತಲಾ ಭಂಡಿ

September 30, 2010

ಬರೆದೆ ಭಾರದ್ದು ಬರದೆ

ಮೊನ್ನೆಯಷ್ಟೇ ದೊಡ್ಡಕಲ್ಲು ನೆಟ್ಟ ಹೂಗಿಡ ಸಣ್ಣಕಲ್ಲು
ಹಳೆಯೆಲೆಯುದುರಿ ದೊಡ್ಡಕಲ್ಲು ಹೊಸ ಎಲೆಬಂದು ಸಣ್ಣಕಲ್ಲು
ಬೀಗುತ್ತ ಸಣ್ಣಕಲ್ಲು ಭಾರಾವಾಗಿ ದೊಡ್ಡಕಲ್ಲು
ಬಗ್ಗಿದ್ದು ಸಣ್ಣಕಲ್ಲು ಗೊತ್ತಿತ್ತು ದೊಡ್ಡಕಲ್ಲು
ಹೂಬಿಟ್ಟಿದ್ದೇ ದೊಡ್ಡಕಲ್ಲು ಎಡವಾಗಿದ್ದು ಸಣ್ಣಕಲ್ಲು
ಮೊಗ್ಗು ಸಣ್ಣಕಲ್ಲು ಮೊದಲೇ ದೊಡ್ಡಕಲ್ಲು ಕಂಡಿರಲಿಲ್ಲ ಸಣ್ಣಕಲ್ಲು

ಹೂವು ಸಣ್ಣಕಲ್ಲು ದೊಡ್ಡದು ದೊಡ್ಡಕಲ್ಲು
ಮೊಗ್ಗು ದೊಡ್ಡಕಲ್ಲು ಚಿಕ್ಕದು ಸಣ್ಣಕಲ್ಲು
ಮಗು ಸಣ್ಣಕಲ್ಲು ಬಂದು ದೊಡ್ಡಕಲ್ಲು ಎಲೆ ಎಲೆಸಣ್ಣಕಲ್ಲು ಮೊಗ್ಗು ದೊಡ್ಡಕಲ್ಲು
ಹೂ ಸಣ್ಣಕಲ್ಲು ಕಿತ್ತಪರಿ ದೋಡ್ಡಕಲ್ಲು
ಹುಡುಗ ದೊಡ್ಡಕಲ್ಲು ನಗುತ್ತಲೇ ಸಣ್ಣಕಲ್ಲು ಹೇಳಿದ್ದು ದೊಡ್ಡಕಲ್ಲು
ಬರೆ ದೊಡ್ಡಕಲ್ಲು ಬರೆ ಸಣ್ಣಕಲ್ಲು ಒಂದು ಸಣ್ಣಕಲ್ಲು ಕವನ ದೊಡ್ಡಕಲ್ಲು
ಭಾರವಾಗಿರಬೇಕು ಸಣ್ಣಕಲ್ಲು ಕಟ್ಟಿದ್ದು ದೊಡ್ಡಕಲ್ಲು
ಹಗುವಾಗಿರಬಾರದು ಸಣ್ಣಕಲ್ಲು ಹೂಮಾಲೆ ದೊಡ್ಡಕಲ್ಲು
ಭಾರವಾಗಿರಬೇಕು ದೊಡ್ಡಕಲ್ಲೂ
ಹುಡುಗ ಸಣ್ಣಕಲ್ಲು ನಗುತ್ತಲೇ ದೊಡ್ಡಕಲ್ಲು ಹೇಳಿದ ಸಣ್ಣಕಲ್ಲು
ನಗುತ್ತಲೇ ದೊಡ್ಡಕಲ್ಲು ಇದ್ದ ಸಣ್ಣಕಲ್ಲು

ಭಾರವಾದದ್ದೇನಾದರೂ ಬರಿ ಅಂತ ಪೀಡಿಸಿದ ಹುಡುಗನೇ
ಬರೆದಿದ್ದೇನೆ ಭಾರವಾದದ್ದ ಬರೆಯಲು ಬಾರದೇ
ಸಣ್ಣಕಲ್ಲು ದೊಡ್ಡಕಲ್ಲುಗಳ ಬದಿಗಿಟ್ಟು
ಓದಿಕೋ ದಯವಿಟ್ಟು :-)

August 20, 2010

ಮಧ್ಯಾಹ್ನದ ಸಾರು

ಮುಗಿಲುಬಿದ್ದು ಮಳೆಯಾದ ದಿನಗಳಲ್ಲೋ, ಮಾಗಿಯ ಚಳಿಯಲ್ಲೋ, ಜಿಮುರು ಹನಿಯಲ್ಲೋ, ಬೆಳಗಿನ ಇಬ್ಬನಿಯಲ್ಲೋ ನಿನ್ನ ಪರಿಚಯವಾಗಿದ್ದರೆ ಖಂಡಿತ ಅದು ಪರಿಚಯವಾಗಿರದೇ ಪ್ರೀತಿಯಾಗೇ ಹೋಗುತ್ತಿತ್ತು. ಸುಡು ಬೇಸಿಗೆ ಮಧ್ಯಾಹ್ನ ನೀನು ಸಿಕ್ಕ ಗಳಿಗೆ ನಾನು ಒಗ್ಗರಣೆಗೆ ಕಬ್ಬಿಣದ ಹುಟ್ಟೊಳಗೆ ಎಣ್ಣೆ ಕಾಯಿಸಿಟ್ಟ ಹೊತ್ತು. ನೀನು ಯಾರು ಅಂತ ನನಗೆ ಗೊತ್ತಾದದ್ದು. ಅಲ್ಲಿಯತನಕವೂ ಅವರೆಲ್ಲರಿಗೆ ಏನು ಗೊತ್ತಿತ್ತೋ ಅದನ್ನೇ ನನಗೆ ಹೇಳಿದ್ದು, ನನಗೂ ಗೊತ್ತಾದದ್ದು. ಎಣ್ಣೆ ಆರಲುಬಿಟ್ಟು ನಿನ್ನ ಗುರುತು ಹಿಡಿದೆ ಅಂದರೆ ನೀನು ನನಗೆ ಬೇಕಾದ ವ್ಯಕ್ತಿ ಅನ್ನುವಷ್ಟು ಗೊತ್ತಿತ್ತು.

ದಿನಕಳೆದ ಹಾಗೆ ಗೊತ್ತಾದ್ದೆಂದರೆ ನನಗೂ ನಿನಗೂ ಸೂರ್ಯ ಚಂದ್ರರಿಗಿರುವಷ್ಟು ಅಂತರವಿದೆಯೆಂಬುದು. ನಿನ್ನ ರಾತ್ರಿಗಳನ್ನೆಲ್ಲ ಬಗೆದು ನನ್ನ ಹಗಲಾಗಿಸಿಕೊಂಡೆ ಅಂದುಕೊಂಡೆ. ಬರಬರುತ್ತ ನೀನು ಹಗಲಿಗೂ ಬಿಜಿಯಾಗತೊಡಗಿ ರಾತ್ರಿಪಾಳಿಯ ಕೆಲಸಗಳೆಲ್ಲ ನನಗೇ ಬಿದ್ದವು. ನಾನು ಯಾವತ್ತೂ ನಿಶಾಚರಿಯೇ ಆದರೂ ನಿನ್ನ ಹಾಗೆ ಹಗಲುರಾತ್ರಿಗಳಲ್ಲಿ ಸಿಕ್ಕ ಹೊತ್ತನ್ನೆಲ್ಲ ಬದುಕಿಗೆ ಚಕ್ರವಾಗಿಸಿಕೊಂಡು ಬದುಕನ್ನೆಳೆಯುವುದು ಗೊತ್ತಿರಲಿಲ್ಲ. ಸಿಕ್ಕಹೊತ್ತನ್ನೆಲ್ಲ ಸುಮ್ಮನೇ ಹೇರಿಕೊಂಡು ಭಾರವಾಗಿಸಿಕೊಂಡು ಬಾಗಿಹೋಗಿದ್ದೆ. ಅದಕ್ಕೇ ಇರಬೇಕು ತೂಕವನ್ನಿಷ್ಟು ಇಳಿಸಿಕೊಂಡು ಸ್ವಲ್ಪ ದಿನ ಹಗುರಾದೆ ಅಂದುಕೊಂಡೆ. ನೀನು ಬೆಳೆಯುತ್ತ ಹೋದೆ.

ನೀನು ಮಾತ್ರ ಅರ್ಥವಾಗಲೇ ಇಲ್ಲ. ಅರ್ಥವಾದಷ್ಟೂ ನಿಗೂಢವಾದೆ. ಈಗಷ್ಟೇ ಕುದಿಯುತ್ತಲಿದ್ದ ನೀರು ಆ ಕ್ಷಣಕ್ಕೆ ತಣ್ಣಗೆ ಆರಿದ ಹಾಗೆ, ನೀನು ತಣ್ಣಗೋ, ಬಿಸಿಯೋ ಗೊತ್ತುಪಡಿಸಲೇ ಇಲ್ಲ. ಒಮ್ಮೆ ಅಮ್ಮನಂಥ ಮಮತೆಯಾದರೆ, ಇನ್ನೊಮ್ಮೆ ಅಪ್ಪನಂತೆ ಬೆಚ್ಚಗೆ. ಒಮ್ಮೆ ನೀನ್ಯಾರೂ ಅಲ್ಲದ ಹಾಗೆ. ನೀನೆಂದರೆ ಬಲು ಸೋಮಾರಿ ಅಂತ ನಾನು ಬಯ್ಯುವ ಹೊತ್ತಿಗೆ ನೀನು ಬಿಜಿಯಾಗಿರುತ್ತಿದ್ದೆ. ನೀನು ನಿದ್ರಿಸುವುದೇ ಇಲ್ಲ ಅಂತ ದೂರುವ ಹೊತ್ತಿಗೆ ನೀನು ಕಣ್ಮುಚ್ಚಿದ ಸದ್ದು. ನೀನು ನಿಶಾಚರಿ ಅಂದರೆ ನೀನು ಹಗಲೂ ನಿದ್ರಿಸುವುದಿಲ್ಲ ಅಂತ ನನಗೆ ಗೊತ್ತಿರಬೇಕು. ಅಂತೂ ನೀನು ಅರ್ಥವಾಗಲೇ ಇಲ್ಲ.

ಸಾರು ಮಾಡಿಟ್ಟು ‘ಪ್ಲೀಸ್ ಒಂದು ಒಗ್ಗರಣೆ’ ಅಂದರೆ ನೀನು ಆ ಕ್ಷಣಕ್ಕೆ ರೆಡಿ. ಒಗ್ಗರಣೆಯ ಘಮಕ್ಕೆ ಸುಮಾರು ಮಂದಿ ಅಡುಗೆ ಚೆನ್ನಾಗಿದೆ ಅಂತ ಹೇಳಿದ ದಿನಗಳನ್ನು ನೀನು ಮರೆತರೂ ನಾನು ಕೃತಜ್ಞಳು. ಎಷ್ಟೋ ದಿನ ನೀನು ಇವತ್ತೊಂದು ಸಾರು ಮಾಡು ಅಂತ ನಾನು ಪೀಡಿಸಿದ್ದೇನೆ. ಅದಕ್ಕಾಗಿ ಕ್ಷಮಿಸು. ಆದರೂ ನೀನು ಮಾಡಿದ ಸಾರು ಇವತ್ತಿಗೂ ನನಗೆ ಪ್ರೀತಿ. ಎಷ್ಟೋ ಸರ್ತಿ ಕೆಟ್ಟದಾಗಿ ಒಗ್ಗರಣೆ ಕೊಟ್ಟ ಭಾಗ್ಯ ನನ್ನದು. ಸಲ್ಲಿಸಿಕೊಂಡ ಮಮತೆ ನಿನ್ನದು. ನೀನು ಅರ್ಥವಾಗದೇ ಹೋದರೂ, ಅರ್ಥವಾಗದೇ ಇದ್ದರೂ.

ಅಂಗಳದಲ್ಲಿಳಿಯಬೇಕು, ಕೆಸರು ಬೇಕು ಅಂದಾಗ ಸಿಗದ ಕೆಸರು ಕಾಡು ಹಾದಿಯಲ್ಲಿ ನಡೆಯುವಾಗಲಾದರೂ ಮುಂದೊಮ್ಮೆ ಸಿಕ್ಕಿತು. ಸಾಕು ಬಿಡು. ಅಂಗಳದ ಬೆಳದಿಂಗಳು ಕಾಡುತ್ತಿದೆ, ಬೆಳದಿಂಗಳು ಸರಿದುಹೋಗದ ಹಾಗೆ ಚಪ್ಪರ ಹಾಕಿಸಯ್ಯ, ನನಗೆ ಬೆಳದಿಂಗಳು ಬೇಕು, ಬೆಳದಿಂಗಳಾಗಬೇಕು ಅಂತ ಅಂಗಲಾಚಿದರೆ ಊರಿದ್ದೂರೇ ಬೆಳದಿಂಗಳ ಕಾಣುವ ಹಾಗೆ ಮಾಡಿದೆಯಲ್ಲ, ಅಷ್ಟು ಸಾಕು. ನೀನು ಅರ್ಥವಾದಂತೆ.

ನಾನು ನಿನಗೇನಾಗಬೇಕು ಅಂತ ನೀನು ಕೇಳಿದ ದಿನಗಳಲ್ಲಿ ನನಗೆ ಅನ್ನಿಸಿದ್ದು ಮಾತ್ರ ಇಷ್ಟೇ. ಏನೂ ಆಗದ, ಏನೂ ಆಗದೇ ಇರುವ ಸಂಬಂಧವಿದ್ದರೆ ಅದು ನಮ್ಮದು. ಇದಕ್ಕೂ ಮಿಕ್ಕಿ ಸಂಬಂಧವಿಲ್ಲದೇ ಇರುವ ಇಬ್ಬರನ್ನು ಬೇರೆಬೇರೆಯೇ ಗುರುತಿಸಿ ಇರದ ಸಂಬಂಧಕ್ಕೆ ಸಿಗದ ಬೆಲೆ ಅರ್ಥವಾದ ಹೊತ್ತಿಗೆ ನಾನು ನಿನಗೆ ಮಗಳಾಗಿರಬೇಕು ಅನ್ನಿಸಿದ್ದು ಸುಲಭದ್ದಲ್ಲ. ಆ ಹೊತ್ತಿಗೆ ನೀನು ಎಲ್ಲ ಸಂಬಂಧಗಳನ್ನು ಮೀರಿ ಬೆಳೆದಿರುತ್ತೀಯ, ಮಗಳೆ ಅನ್ನುವ ಹೊತ್ತಿಗೆ ನಾನು ಇನ್ನೊಂದು ತೀರದಲ್ಲಿರಬೇಕು ತಿರುಗಿ ನೋಡಲಾಗದಿರುವಷ್ಟು ಅನ್ನುವುದಿಷ್ಟೇ ಆಸೆ.

July 20, 2010

ಎಳ ನೀರು ಪಾಕ...

ಬರೆಯದೇ ಬಂದ ಬೇಸರದ ಮೇಲೆ ಧೂಳುಹಿಡಿದ ಹಳೇ ಕಡತವನ್ನೆಲ್ಲ ಸುರುವಿ ಕುಳಿತರೆ ನೋಟ್ಸಿನ ಕೊನೇ ಪುಟದಲ್ಲಿ ನಿನಗೆ ಹೇಳಬೇಕಿದ್ದ ಮಾತುಗಳೆಲ್ಲ ಸಿಕ್ಕವು. ಎಲ್ಲವನ್ನೂ ಒಂದು ಇಂಡಾಲಿಯಮ್ ಬೋಗುಣಿಯಲ್ಲಿ ನವಿರಾಗಿ ಸುರುವಿ ಒಂದಿಷ್ಟು ಬೆಲ್ಲ ಚೂರು ಉಪ್ಪು ಹಾಕಿ ಒಲೆಮೇಲಿಟ್ಟು ಕುದುಯುತ್ತದ ಅಥವಾ ಪಾಕ ಬರ್ತದಾ ಅಂತ ಕಾಯುತ್ತಲಿದ್ದರೆ ಅಂವ ಕಾಪಿ ಕುಡಿಯೋಣವಾ ಅಂದ. ಬೇಡ, ಹಿತ್ತಲ ಗಿಡದಲ್ಲಿ ಎಳೇ ತೆಂಗಿನಕಾಯಿದ್ದರೆ ಇಳಿಸು, ಎಳೆನೀರೇ ಸಾಕು ಅಂದೆ.

ಎಳೆನೀರನ್ನ ಕುಡಿದಂವ ಯಾಕೇ ಇತ್ತೀಚೆಗೇನೂ ಬರೀತಿಲ್ಲ ಅಂತ ಕೇಳಿದ. ಎಳೆನೀರಿಗೆ ಶಕ್ತಿಯಿರ್ತದೆ ಅಂತ ಗೊತ್ತಿತ್ತು. ಇಷ್ಟು ಪ್ರಭಾವ ಬೀರ್ತದೆ ಅಂತ ಗೊತ್ತಿರಲಿಲ್ಲ.

ಕಾಯೊಳಗಿಂದ ನೀರನ್ನ ಎಳಕೊಂಡು ಕುಡೀತೀವಲ್ಲ ಅದಕ್ಕಾಗಿ ಈ ನೀರಿಗೆ ಎಳನೀರು ಅಂತಾರ ಅಥವಾ ಎಳೇ ತೆಂಗಿನಕಾಯೊಳಗಿನ ನೀರಾದ್ದಕ್ಕೆ ಎಳೇನೀರು ಅಂತಾರ ಅಂತ ಕೇಳೋಣ ಅಂದುಕೊಂಡೆ. ಅಷ್ಟರೊಳಗೆ ಅಂವ ಕಾಫಿಮೇಕರ್ ವಿಷ್ಯ ಹೇಳಿದ. ಇನ್ಸ್ಟಂಟ್ ಕಾಪಿ ಅಷ್ಟು ಚೆನ್ನಾಗಿರಲ್ಲ ಅಂತಲೂ ಹೇಳಿದ. ನನಗೆ ಗ್ರೀನ್ ಟೀಯನ್ನ ಲೆಮನ್ ಗ್ರಾಸ್ ಇಂದ ಮಾಡ್ತಾರೆ ಅಂತ ಗೊತ್ತಿರಲಿಲ್ಲ ಅಂದೆ. ಅಷ್ಟ್ರಲ್ಲಿ ನೀರು ಖಾಲಿಯಾಗಿ ಸ್ಟ್ರಾ ಸೊರ್ ಅಂತು. ಅಂವ ಕೆಲಸಕ್ಕೆ ಹೋದ. ನಾನು ನಿಂತೇ ಇದ್ದೆ.

ಇಂಡಾಲಿಯಮ್ ಬೋಗುಣಿಯ ಸುತ್ತ ಗೋಡೆಗೆಲ್ಲ ಪಾಕ ಚಟ ಚಟ ಅಂಟಿಕೊಳ್ಳುತ್ತಿತ್ತು. ಪಾಕ ಬಂದಿದ್ದು ಹೇಳದೇ ಉಳಿದಿದ್ದ ಮಾತುಗಳದ್ದಾ ಅಥವಾ ಬೆಲ್ಲದ್ದ ಗೊತ್ತಾಗಲೇ ಇಲ್ಲ.

May 24, 2010

ಓದಿದ ಮೇಲೆ ಮತ್ತು ಬರೆಯುವುದರೊಳಗೆ

ಓದಿ ಮುಗಿದ ಮೇಲೆ ಏನನ್ನಿಸಿತು ಅಂತ ಹೇಳು ಅಂದಿದ್ದೆಯಲ್ಲ, ಹೇಳಲೇಬೇಕು ಅನ್ನುವಂಥದ್ದೇನೂ ಅನ್ನಿಸಲಿಲ್ಲ. ನನ್ನೊಳಗೇ ಇಟ್ಟುಕೊಳ್ಳುವಂಥದ್ದಾಗಿ ಒಂದಿಷ್ಟು ಅನ್ನಿಸಿತು. ಏನು ಗೊತ್ತಾ? ಮುಕುಂದ ಬಿಟ್ಟುಹೋಗಿ ಬದುಕು ಖಾಲಿಯಾದರೂ ಸರಿಯೇ ಶಿವರಾಮ ನೀನೇ ಆಗಿದ್ದ ಪಕ್ಷ ಶರ್ವಾಣಿ ನಾನೇ ಆಗಬೇಕು ಅನ್ನಿಸಿತು. ಹೆಂಡತಿ ಬಾವಿಗೆ ಬೀಳುವುದನ್ನು ಕಂಡೂ ಸುಮ್ಮನಿದ್ದ ಶಿವರಾಮ ನೀನೇ ಆಗಿದ್ದಲ್ಲಿ ತಾಯಿಯನ್ನು ಕಳಕೊಂಡರೂ ಸರಿ ಶರ್ವಾಣಿ ನಾನೇ ಆಗಬೇಕು ಅನ್ನಿಸಿತು.
ಒಟ್ಟಿನಲ್ಲಿ ನನಗೆ ಅನ್ನಿಸುವುದೆಂದರೆ ನಿನ್ನ ಮಗಳ ಸ್ಥಾನದಲ್ಲಿ ಯಾರೇ ಇದ್ದಿರಲಿ, ಅದು ಸದಾ ನಾನೇ ಆಗಬೇಕು ಅನ್ನಿಸಿತು.

April 22, 2010

ಮರೆತಿಹಳು ಎನ್ನದಿರಿ ಕಣ್ಮರೆಯ ತೋಟದೊಳು...

ಅಕ್ಕಿ ಆರಿಸುತ್ತ ಆರಿಸುತ್ತ
ಆರಲಿದ್ದ ದೀಪಕ್ಕೆ ಬತ್ತಿ ಹೊಸೆಯುತ್ತ
ದೀಪಕ್ಕೆಣ್ಣೆ ಹನಿಸುತ್ತ
ಬೆಳಗುವಾಗ ಬೆಳಕಾಗುವಾಗ
ಗೊತ್ತಿರಲಿಲ್ಲ
ಕಣ್ಣಿದ್ದದ್ದು ಎರಡು ಕಂಡಿದ್ದು ಮಾತ್ರ ಒಂದು ಎಂಬುದು
ನೆನಪನ್ನು ಒಂದರಲ್ಲಿ ತುಂಬಿಟ್ಟು
ಕನಸನ್ನು ಇನ್ನೊಂದರಲ್ಲಿಟ್ಟು
ಖುಷಿಪಟ್ಟಾಗ ಗೊತ್ತಿರಲಿಲ್ಲ
ಕನಸು ಕಾಣದೇ ಹೋದದ್ದು

ನಿನ್ನೆ ನಿನ್ನ ಮರೆಯುವದಕ್ಕೆ ಅಂತ
ಡಾಕ್ಟರ ಬಳಿ ಹೋದರೆ
ಕಣ್ಣುಗಳೊಳಗಿಣುಕಿ
ಒಂದರಲ್ಲಿ ಬರೀ ನೆನಪಿದೆ
ಇನ್ನೊಂದು ಖಾಲಿ ಅಂದಾಗಲೇ ಗೊತ್ತಾದ್ದು
ಕನಸುಗಣ್ಣು ಖಾಲಿಯಾಗಿಯೇ ಇದ್ದದ್ದು
ನೆನಪುಗಳನ್ನು ಅಳಿಸಿಕೊಡಿ ಅಂತ ಹೋದರೆ
ಕನಸುಗಳನ್ನು ತುಂಬಿಕೊಡುತ್ತೇನೆ ಅಂದವರಿಗೆ
ನಮಸ್ಕಾರ
ನಿನ್ನ ನೆನಪೇನಾದರೂ ಅಳಿಸಿಹೋದರೆ
ಧನ್ಯವಾದ

ಬಲಕ್ಕೆ ಹೊಸಕಣ್ಣು ಬರುವಾಗ
ನಿನ್ನ ನೆನಪುಗಳು ಎಡವಾಗದಿರಲಿ
ಮತ್ತೆ ಮರಳಿದರೂ ಹೇಳುವುದಿಷ್ಟೇ
ನನಗೆ ನಿನ್ನ ನೆನಪೇ ಇಲ್ಲ
ಆದರೆ ನಾನು ನಿನ್ನನ್ನೆಲ್ಲೋ ನೋಡಿದ್ದೇನೆ
ಆದರೂ ನೆನಪಿನ ಹಂಗು ನನ್ನದಲ್ಲ

April 14, 2010

ಹೈಸ್ಕೂಲಜ್ಜ

ನಂಬಲೇ ಆಗುತ್ತಿಲ್ಲ, ಆದರೂ ವಾಸ್ತವ. ನೆನೆದರೆ ಅಳು ಉಕ್ಕಿ ಬಂದೀತೆಂಬ ಕಾರಣಕ್ಕೆ ನೆನಯದೇ ಒಣಕಣ್ಣುಗಳನ್ನು ಬಿಚ್ಚಿಟ್ಟುಕೊಳ್ಳುವ ಯತ್ನ ಈ ಮೂರುದಿನದಿಂದ.

ಹೈಸ್ಕೂಲಜ್ಜ ಎಂದರೆ ಬೇರಾರೂ ಅಲ್ಲ. ನನ್ನಜ್ಜನ ತಮ್ಮ.
ಗಾಡಿನಿಲ್ಲಿಸುತ್ತಿದ್ದ ಮನೆಯಲ್ಲಿ ಚಿಕ್ಕಂದಿನಿಂದ ನಾವೆಲ್ಲ ಹತ್ತಿ ಕೂತು ನಮ್ಮಗಳ ಬಾಯಲ್ಲಿಯೇ ಸ್ಟಾರ್ಟ್ ಆಗಿ ಸವಾರಿಯೂ ಆಗಿ ಹೈಸ್ಕೂಲಜ್ಜನ ರಾಜದೂತ್ ಮೋಟ್ರುಸೈಕಲ್ಲು ಹಳತಾದ್ದೇನೋ ಅನ್ನಿಸುತ್ತದೆ.
ಮನೆಯ ಮೊಮ್ಮಕ್ಕಳಾದ ನಮಗೆ ಮಾತ್ರವಲ್ಲದೇ ಊರಮಕ್ಕಳಿಗೆಲ್ಲ ಇವರು ಜೆಮ್ಸು ಮತ್ತು ಚಾಕಲೇಟಿನ ಪೊಟ್ಟಣ. ಇವರು ಯಾರಿಗೂ ಒಂದು ಮಾತು ಅಂದದ್ದು ಕಂಡೂ ಇಲ್ಲ, ಕೇಳಿದ್ದೂ ಇಲ್ಲ.
ಜಾತಕವೆಂಬುದು ನಿಜವಾಗುತ್ತದೆಯಾದರೆ ಅದು ಹೈಸ್ಕೂಲಜ್ಜ ನೋಡಿ ಹೇಳಿದ್ದು ಮಾತ್ರ ಅಂತ ದೇವರನ್ನೂ ಮರೆತ ಕ್ಷಣದಲ್ಲೂ ಈ ಮನಸ್ಸು ನಂಬುತ್ತದೆ.
ಮುಂದಕ್ಕೆ ಹೈಸ್ಕೂಲಜ್ಜ ಇಟ್ಟುಕೊಟ್ಟ ಮುಹೂರ್ತಕ್ಕೆ ಮಗನ ಉಪನಯನ ಮಾಡಬೇಕಿತ್ತು. ಹೈಸ್ಕೂಲಜ್ಜ ಇನ್ನಿಲ್ಲ. ಜಾತಕ ನೋಡುವುದನ್ನು ಹೈಸ್ಕೂಲಜ್ಜ ಬಿಟ್ಟ ದಿನದಿಂದ ಜಾತಕವನ್ನೇ ತೋರಿಸುವುದನ್ನು ಬಿಟ್ಟುಬಿಡಬೇಕೆಂದು ತೀರ್ಮಾನವಿತ್ತು. ಗೊತ್ತಿಲ್ಲ.

ನಂಬಲಾಗದಂಥ ವಾಸ್ತವ. ಸುಳ್ಳೇನೋ ಎಂಬ ಭ್ರಮೆ. ಫೋನಲ್ಲಿ ಅಮ್ಮ ಕೂಡ ಹೇಳಿದ್ದು ‘ಮಗಾ... ಹೈಸ್ಕೂಲಜ್ಜ ’ ಅಮ್ಮ ಹೇಳಿದ್ದೆಂದರೇ ನಂಬಲೇ ಬೇಕು. ಇಂಥ ಹೊತ್ತಿನಲ್ಲಿ ಪದೇ ಪದೇ ಅನ್ನಿಸುತ್ತಿದೆ, ಒಂದು ಹೊಳೆಯಾಚೆಯ ಅಂತರದಲ್ಲಿ ತವರೂರು ಇರಬೇಕು ಅಂತ. ಆದರೆ ಹೊಳೆಗೂ ಸಮುದ್ರಕ್ಕೂ ತುಂಬ ಅಂತರ ಅಂತ ಮನಸ್ಸು ಅಳುತ್ತದೆ.

ನಂಬುವುದಾ ಬಿಡುವುದಾ? ವಾಸ್ತವವಾ ಭ್ರಮೆಯಾ? ಕಣ್ಣು ಒಣ ಒಣ, ಕಣ್ಣುರಿ. ನಿನ್ನೆಯಿಂದ ಭರ್ರನೆ ಬೀಸುತ್ತಿರುವ ಗಾಳಿಗೇ ಇರಬೇಕು.

ಎಲ್ಲವೂ ಸುಳ್ಳಾಗಿ ಈ ಬಾರಿಗೆ ಊರಿಗೆ ಹೋದರೆ ಹೈಸ್ಕೂಲಜ್ಜ ಇರಬೇಕು. ಶನಿವಾರ ಹೊರಟುನಿಂತರೆ ‘ಶನಿವಾರ ಪ್ರಯಾಣ ಒಳ್ಳೆಯದಲ್ಲ’ ಅಂದುಬಿಡಬೇಕು ಹೈಸ್ಕೂಲಜ್ಜ. ಸೋಮವಾರ ಕಾಲೇಜಿಗೆ ಹೊರಡುವುದಕ್ಕೆ ಬೆಳಗಿನ ರಾಹುಕಾಲವನ್ನು ಹೈಸ್ಕೂಲಜ್ಜ ನೆನಪಿಸಿ ಏಳಕ್ಕೆ ಮುಂಚೆಯೇ ಮನೆಯ ಹೊರಕ್ಕೆ ಬಂದುಬಿಡಬೇಕು. ಇಲ್ಲವೇ ಬೇಗ ಒಂಬತ್ತುಗಂಟೆಯಾಗಲಿ ಅಂತ ಕಾಯುತ್ತ ಮನೆಯ ತುದಿಕಟ್ಟೆಯಂಚಿಗೆ ಕೂತಿರಬೇಕು. ಮೇ ರಜೆ ಮುಗಿದು ಶಾಲೆ ಯಾವತ್ತಾದರೂ ತೆರಕೊಳ್ಳಲಿ, ನಮಗೆ ಮಾತ್ರ ಗುರುವಾರವೇ ಮೊದಲಾಗಿ ಶಾಲೆ ತೆರಕೊಳ್ಳಬೇಕು. ಊರಿಗೆಲ್ಲ ಕಕ್ಕಯ್ಯ, ಜಯದೇವ ಮಾಸ್ತರು. ನಮಗೆ ಮಾತ್ರ ಯಾವತ್ತೂ ಮಾಸ್ತರೆನಿಸಲೇ ಇಲ್ಲ. ಪ್ರೀತಿ ತುಂಬಿದ ಕಣ್ಣುಗಳ, ಬೆಚ್ಚನೆ ಬೊಗಸೆಯ ಹೈಸ್ಕೂಲಜ್ಜ. ಚಾಕಲೇಟು ಮತ್ತು ಜೆಮ್ಸು. ಕೊಂಡು ತಿಂದರೆ ಆ ರುಚಿ ಬರಲಾರದು. ಅಂಥ ಚಾಕಲೇಟು ಇನ್ನು ಸಿಕ್ಕಲಾರದು.March 2, 2010

ನಮ್ಮೂರಲ್ಲಿ ಜಾತ್ರೆಯಂತೆ

ಸಿರ್ಸಿಯಲ್ಲಿ ಜಾತ್ರೆಯಂತೆ 
ಸಿಕ್ಕಾಪಟ್ಟೆ ಜನರ ಸಂತೆ 
ಜನರದ್ದೇ ನೆರೆಯಂತೆ 
ಹೋಗಿಬಂದವರು ಹೇಳಿದ್ದಿಷ್ಟು 

ಬಳೆಪೇಟೆ ಒಳಗೆ ಬಳೆಯೂ ಇದೆಯಂತೆ 
ಬಳೆತೊಟ್ಟ ಹುಡುಗಿಯರೂ ರಾಶೀ ಇದ್ದರಂತೆ 
ಹಿಂಡು ಹಿಂಡು ಹುಡುಗರೂ ಅಂತೆ 
ಹೋಗಿಬಂದವರು ಹೇಳಿದ್ದಿಷ್ಟು 

ಸಣ್ಣತೊಟ್ಲು ದೊಡ್ ತೊಟ್ಲು ಎಲ್ಲ ಬಂದಿದೆಯಂತೆ 
ಬಾವಿ ಒಳಗೆ ಕಾರು ಸೈಕಲ್ಲು ಎಲ್ಲ ಬಿಡುತ್ತಾರಂತೆ 
ಹೋಗಿ ಬಂದವರು ಹೇಳಿದ್ದಿಷ್ಟು 

ತೊಟ್ಟಿಲ ತೂಗುವ ಅಮ್ಮಂದಿರೂ ಬಂದಿದ್ದಾರಂತೆ 
ಅಮ್ಮ ಮತ್ತು ಅಮ್ಮ ಇಬ್ಬರೂ ಇದ್ದಾರಂತೆ 
ಹೋಗಿ ಬಂದವರು ಹೇಳಿದ್ದಿಷ್ಟು 

ಸಿಕ್ಕಾಪಟ್ಟೆ ಕಳ್ಳರಸಂತೆ 
ಡಬ್ಬಲ್ಲು ಪೋಲೀಸರಂತೆ 
ಎಲ್ಲರನ್ನೂ ಎಲ್ಲರೂ ಹುಡುಕುವವರೇ ಅಂತೆ 
ಹೋಗಿ ಬಂದವರು ಹೇಳಿದ್ದಿಷ್ಟು 

ಹೋಗುವ ಮುನ್ನ ಕೇಳಿದ್ದಿಷ್ಟು 
ಮುಂದಿನ್ ವಾರ ಜಾತ್ರೆ ನಿಂಗೆಂತ ತರವ್ವು? ಬೆಂಡು ಬತ್ತಾಸು? 
‘ಬ್ಯಾಡ’ 
ಹಂಗಾದ್ರೆ... ಬಳೆ? 
‘ಬಳೆ ಬ್ಯಾಡ ಹೇಳಲ್ಲಾಗ, ಅದ್ಕೆ ಬ್ಯಾಡ ಹೇಳದಿಲ್ಲೆ’ 
ಹಂಗಾದ್ರೆ... ಎಂತ ತರದಪಾ? ಹ್ಮ್..... ಗೊಂಬೆ???!!! 
‘ಹ್ಞೂ... ಗೊಂಬೆ ಅಡ್ಡಿಲ್ಲೆ'
ಹಂಗಾದ್ರೆ ಗೊಂಬೆನೇ ತಗಬರ್ತಿ ನಿಂಗೆ. 
ಹೋಗುವ ಮುನ್ನ ಆಡಿದ್ದಿಷ್ಟು 

ಬಳೆಪೇಟೆಯಲಿ 
ಹೇರ್ ಕ್ಲಿಪ್ಪು, ಬಳೆ, ಬಂಬಾಯ್ ಮಿಠಾಯಿ, ಗೊಂಬೆಯೂ ಇದೆಯಂತೆ 
ಆದರೆ ನೆನಪೇ ಇರಲಿಲ್ಲವಂತೆ
ಇಡಿಯ ಜಾತ್ರೆ ಹುಡುಕಿದರೂ 
ಈ ಪೆದ್ದುಸ್ನೇಹಿತೆಯ ನೆನಪೇ ಇರಲಿಲ್ಲವಂತೆ 
 
ಹೋಗಿ ಬಂದವರೊಬ್ಬರು ಹೇಳಿದ್ದಿಷ್ಟು ‘ಹೋಪಕಾದ್ರೆ ನೆನಪಿತ್ತು.... ಅಲ್ಲಿಗ್ ಹೋದ್ಮೇಲೆ...`

February 13, 2010

ನಸುಕಿನೊಳಗಿನ ಮುಸುಕು...

ಏನೂ ಬರೆಯಬಾರದು ಎಂದುಕೊಂಡ ಹಾಗೆಯೇ
ಒಳ್ಳೆಯ ನಿದ್ರೆಯಲ್ಲೇ
ಜಾಗರಣೆಯಿರದ ಶಿವರಾತ್ರಿ
ಕಳೆದು
ಕಳೆದುಹೋಗಲಿ ಬೇಗ
ಇನ್ನೆರಡು ದಿನ
ನೆನಪಿಸಿಕೊಳ್ಳುವುದಕ್ಕೆ
ಹದಿನಾಲ್ಕನೆಯ ದಿನವೇ ಬೇಕೆ?
ಪಟ್ಟು ನಿರ್ಧಾರ ಮಾಡಿದ್ದಷ್ಟೇ ನಿನ್ನೆಯವರೆಗೆ

ಈಗ ಇಷ್ಟು ಹೇಳಲೇಬೇಕೆನಿಸಿದೆ
ಇದು
ಈ ಕ್ಷಣದ ನಿರ್ಧಾರ
ಇವತ್ತಿಗಾಗಿ ಏನಾದರೂ ಹೇಳಲೇಬೇಕು
ನೀನು ಇವಿಷ್ಟನ್ನೂ ಓದುವ ಮೊದಲೇ
ಪಬ್ಲಿಶ್ ಮಾಡುತ್ತಿದ್ದೇನೆ
ಹೇಳಲಾ...
ಹೇಳಿಬಿಡಲಾ...
ವೀಕೆಂಡುಗಳಲ್ಲಿ ಬೆಳಗಿನಜಾವ
ನನ್ನೊಬ್ಬಳನ್ನೇ ಬಿಟ್ಟು
ನೀನು ಹೈಕಿಂಗ್ ಹೋದಾಗ
ಮನೆಯಲ್ಲಿ
ಬೆಳಗಿನಜಾವದ ನಿದ್ರೆ
ನಿದ್ರೆಯಾಗಿರದೇ
ಬೆಳಗಿನ ಜಾವದ ಎಚ್ಚರ ಎನ್ನಿಸುತ್ತದೆ ಕಣೋ...

ನಸುಕಿನಲ್ಲಿ
ಆ ರೂಮಿನಲ್ಲಿರುವ
ಆ ನಿನ್ನ ಮಗನಿಗೆ
ಎಚ್ಚರಾಗದ ಹಾಗೆ
ನನ್ನ ಕಿವಿಯೊಳಗೆ
‘ಬಾಯ್’ ಎಂದು
ಪಿಸುಗುಟ್ಟಿ
ನಸುಕಿನಲ್ಲಿ ನೀ ಮಸುಕಾಗಿ ಮರೆಯಾದರೆ
ಸುಮ್ಮನೆ ಮುಸುಕಿನೊಳಗೆ
ಮೂಗು ಮಾತ್ರ ಹೊರಗೆ
ಕಣ್ಣು
ನಿನ್ನಹಿಂದೆಯೇ ಅರಸಿ ಹೊರಟಿರುತ್ತದೆ

ನೀ ಮರಳಿದಾಗ
ನಾನು ನಿದ್ರಿಸುತ್ತಿರುತ್ತೇನೆ
ಅಂತ ನೀ ಅಂದುಕೊಂಡಿದ್ದು
ನಿಜದ ನಟನೆ
ಸ್ವತಃ ನಾನೇ ನಟಿಸುವ ನಟನೆ
ನೀ ಬಂದು ನಿದ್ದೆಯಿಂದೇಳಿಸುವ
ಸೀನು ನನಗಿಷ್ಟ
ಎಂಬೊಂದೇ ಕಾರಣಕ್ಕೆ

ಯಾವತ್ತೋ ಹೇಳಬೇಕಿದ್ದ ಮಾತು
ಹೇಳಲಾ...
ಹೇಳಿಬಿಡಲಾ...
ಪ್ಲೀಸ್...
ಇನ್ನುಮುಂದೆ ನಿನ್ನ ಜತೆ
ನಾನೂ ಬರಲಾ?

January 19, 2010

ಹಾಗಾದರೆ... ಏನಿರಬಹುದು?

ಪ್ರೀತಿ ಎಂದರೆ
ಮಾತಲ್ಲ
ಮೌನವೂ ಅಲ್ಲ
ಏಕೆಂದರೆ ಪ್ರೀತಿ ಎಂದರೆ
ಅರ್ಥವೂ ಅಲ್ಲ
ಸಮ್ಮತಿಯೂ ಅಲ್ಲ

ಪ್ರೀತಿ ಎಂದರೆ
ತನ್ನೊಳಗಿನ ಪಿಸುಪಿಸು
ಮತ್ತೊಬ್ಬರ ಗುಸುಗುಸು
ಪ್ರೀತಿ ಎಂದರೆ
ನಂಬಿಕೆ
ಆದರೆ ವಿಶ್ವಾಸವಲ್ಲ

ಪ್ರೀತಿ ಎಂದರೆ
ಮೋಸ
ಆದರೆ ವ್ಯಭಿಚಾರವಲ್ಲ
ಪ್ರೀತಿ ಎಂದರೆ
ಕಲ್ಪನೆ
ಆದರೆ ಭ್ರಮೆಯಲ್ಲ

ಪ್ರೀತಿ ಎಂದರೆ
ಇಬ್ಬರ ಸ್ವಂತದ
ಒಂದೇ ವಾಹನ
ಪ್ರೀತಿ ಎಂದರೆ
ಸರಾಗ ಪಯಣದ
ಜೊತೆಜೊತೆ ಕಾಲ್ನಡಿಗೆ

ಪ್ರೀತಿ ಎಂದರೆ
ಯಾರೋ ಬರೆದಿಟ್ಟ
ಸಂಭಾಷಣೆಯಲ್ಲ
ಪ್ರೀತಿ ಎಂದರೆ
ಬ್ರೆಕೆಟ್’ನಲ್ಲಿ ಬರೆದಿಡಬೇಕಾದ
ಇಬ್ಬರ ಸ್ವಗತ

ಪ್ರೀತಿ ಎಂದರೆ
ಬರಿಯ
ವ್ಯಾಕರಣದ ನಾಮಪದವಲ್ಲ
ಪ್ರೀತಿ ಎಂದರೆ
ಸಕ್ರಿಯ
ಕ್ರಿಯಾಪದ

ಪ್ರೀತಿ ಎಂದರೆ
ಆಗಮ ಸಂಧಿ
ಲೋಪಸಂಧಿ
ಆದರೆ ಪ್ರೀತಿ ಎಂದರೆ
ಆದೇಶಸಂಧಿ
ಅಲ್ಲವೇ ಅಲ್ಲ

ಪ್ರೀತಿ ಎಂದರೆ
ಸದಾ
ಜೋಗುಳವಲ್ಲ
ಪ್ರೀತಿ ಎಂದರೆ
ಎಗ್ಸಾಮ್ ದಿನದ
ನಸುಕಿನ ಅಲಾರ್ಮ್

ಪ್ರೀತಿ ಎಂದರೆ
ಅಮ್ಮ ಐರನ್ ಮಾಡಿದ
ನಮ್ಮ ಸೆಲ್ವಾರ್ ಅಲ್ಲ
ನಾವೇ ಇಸ್ತ್ರಿ
ಮಾಡಬೇಕಾದ
ಅಪ್ಪನ ಶರ್ಟು

January 13, 2010

ಬೆಳದಿಂಗಳ ಬೇರು

ಅಂದೆಂದೋ ಸುತ್ತ ತಿರುಗುತ್ತ ತನ್ನದಲ್ಲದ ಕಥೆಗಳನ್ನು ತನ್ನದೇ ಶೈಲಿಯಲ್ಲಿ ಹೇಳುತ್ತ ‘ಮುಂದೆ ಕೇಳು ಅಜ್ಜಾ ಸುದ್ದಿ’ ಎನ್ನುವಾಗಲೆಲ್ಲ ಎನ್ನುತ್ತ ಏನೂ ಹೇಳದೇ ಬರೀ ಪ್ರಶ್ನೆಗಳನ್ನೇ ಕೇಳುವ ಆ ವೈಖರಿಗೆ ವಕೀಲವೃತ್ತಿಯೇ ಸರಿ ಎನ್ನುವ ನಿರ್ಧಾರಕ್ಕೆ ಬರುವಷ್ಟರಲ್ಲಿ ಅಡಕತ್ತರಿಗೆ ಅಡುವಾಗಿ ಕುಳಿತ ಅಡಿಕೆ ಚೂರು ಚೂರಾಗಿತ್ತು. ಯೋಚನೆಗೆ ಹಚ್ಚುವ ಅದೇ ಪ್ರಶ್ನೆಗಳು ಬೆಳೆಯುತ್ತ ಬೆಳೆಯುತ್ತ ತಮ್ಮೊಳಗಿನ ದಿಟ್ಟತನವನ್ನೆಲ್ಲ ಒಂದೆಡೆ ಜೋಡಿಸಿಟ್ಟು ನವಿರಾದ ಬೆಳದಿಂಗಳೇ ತಾನು ಎನ್ನುವ ನವಿರು ಧೈರ್ಯವನ್ನು ಸುತ್ತ ಇಬ್ಬನಿಯಂತೆ ಚಿಮುಕಿಸಬಲ್ಲವು ಎಂಬ ವಿಷಯ ಎಳೆಯ ವೀಳ್ಯದೆಲೆ ಮಾತ್ರ ಅಗಿಯುವ ಮಟ್ಟಿನ ವಯಸ್ಸಾದಾಗಲೇ ಅರಿವಾದ್ದು.

ಹೊಸತಾಗಿ ಮೊನ್ನೆಯಷ್ಟೇ ತಂದುಕೊಟ್ಟ ಕೆಂಪಿಕಾರನ್ನು ಅವ ಮಂಚದ ಕಾಲಿಗೆ ಕಟ್ಟಿ ‘ಎಮ್ಮೆ ಕಟ್ಟಿದ್ದೇನೆ, ಹತ್ತಿರ ಬರಬೇಡಿ, ಹೊರುತ್ತದೆ’ ಅಂದಾಗ ಇವಗಿನ್ನೂ ಎರಡೇ ವರ್ಷ ಅಂತ ಸುಮ್ಮನಾದದ್ದೇ ಎಡವಾಗಿದ್ದು. ಹಸು ಎಮ್ಮೆಗಳನ್ನು ಪ್ರೀತಿಸುವ ಮನುಷ್ಯ ನಾಳೆ ದೊಡ್ಡ ಕೊಟ್ಟಿಗೆಯನ್ನೇ ಕಟ್ಟಿಯಾನು, ಅದಾದರೂ ಸರಿ, ಯಾವತ್ತೂ ಒಳಿತಾಗಿದ್ದರೆ ಸಾಕು ಎಂದುಕೊಳ್ಳುತ್ತ ಗಲ್ಲಾ ಏರಿ ಕೂತು ಕಾಸು ಎಣಿಸುತ್ತ ಇದೀಗ ಇಪ್ಪತ್ತು ವರ್ಷದ ಮೇಲೂ ಅಂಥದೇ ಕಲ್ಪನೆಗಳು.

ಅವಳೂ ಬೆಳದಿಂಗಳಂತೆ, ಅವಳಿಗಿನ್ಯಾರೊ ಚಂದ್ರಮ. ಸಾಗರದಾಚೆ ಸಾಗುವಷ್ಟರಲ್ಲಿ ಪ್ರಶ್ನೆಗಳನ್ನೆ ಉತ್ತರವಾಗಿಸಿಕೊಂಡು ಸುಮ್ಮನಾದವಳು, ‘ನಾಳೆ ಬರ್ರುತ್ತೇನೆ ಅಜ್ಜಾ’ ಎಂದು ಸುಮ್ಮನೆ ಸಾರಿ ಸಾಗಿ ಹೋದವಳು.
ಇತ್ತ ತಿರುಗಿದರೆ ಇವ ತಾನೂ ಚಂದ್ರನೇ ಎನ್ನುತ್ತಾನೆ, ತನ್ನ ಸುತ್ತೆಲ್ಲ ಇರುವುದು ಬೇರೆಯದೇ ಬೆಳದಿಂಗಳು, ‘ಗುಡ್ ನೈಟ್’ ಹೇಳುವಾಗೆಲ್ಲ ಸುತ್ತ ಆವರಿಸುತ್ತಾಳೆ ಎನ್ನುವ ಕನವರಿಕೆ ಸದಾ ಅವನದು.

ಮುಂದಿನದೆರಡು ಹಲ್ಲುಮುರಕೊಂಡ ಹೊತ್ತಿನಲ್ಲೆ ಅವನನ್ನೆತ್ತಿಕೊಂಡು ಫೋಟೋ ತೆಗೆಸಿಕೊಳ್ಳಬೇಕಾದೀತು ಅಂತ ಅವಳಿಗೂ ಗೊತ್ತಿರಲಿಲ್ಲ. ಅವಳ ತೊಡೆಯ ಮೇಲೆ ಕೂತು ಹಲ್ಲಿಲ್ಲದ ಬಾಯಲ್ಲಿ ನಕ್ಕವನು ತಾನೇ ಎನ್ನುವುದು ಅವನಿಗೂ ಗೊತ್ತಿರಲಿಕ್ಕಿಲ್ಲ. ಅವಳಾವುದೋ ಊರಿನ ಬೆಳದಿಂಗಳಾಗಿ, ಇವನ್ಯಾವುದೋ ಸೀಮೆಯ ಚಂದ್ರನಾಗಿದ್ದಕ್ಕೆ ಅಜ್ಜನಾಗಿ ಯೋಚಿಸುವಾಗ ಖುಷಿಯಾಗುತ್ತದೆ ಅಂತ ಯಾರಮುಂದೆಯೂ ಹೇಳಲಾಗದೇ ಕಾಣದ ಎರಡೂ ಕಣ್ಣುಗಳು ಹನಿಯಾಗುತ್ತಿವೆ. ಮಳೆನೀರು ಮನೆಯೊಳಗೇ ಪರದೆಯಾದಂತ ಮಸುಕು.

ಸಮುದ್ರದಾಚೆಯಿಂದ ‘ಹುಣ್ಣಿಮೆಯ ಕರೆಯೋಲೆ ಬೆಳದಿಂಗಳಿರುವಿನಲಿ ನನ್ನಿನಿಯ ಚಂದ್ರಮಗೆ ಮದುವೆಯಂತೆ’ ಅಂತ ಅವಳು ಗೀಚಿಟ್ಟ ಸಾಲಿಗೆ ಎಂಟುವರ್ಷ ಚಿಕ್ಕದಾದ ಮತ್ತೊಂದು ಮನಸ್ಸು ಟ್ಯೂನ್ ಹಾಕುತ್ತದೆ. ಯಾವುದು ಎಂತಾದರೂ ಸರಿ, ಫೋನಲ್ಲಿ ಕೇಳಿದ್ದು ಮಾತ್ರ ಗಂಧರ್ವ ಗಾನವೆನಿಸುತ್ತಿದೆ ಮುದಿಯ ಮನಸ್ಸಿಗೆ. ದೂರದ ಧ್ವನಿ ‘ಹೆಂಗಿದ್ದು ಅಜ್ಜಾ, ನಾ...ನಿನ್ನ ಮೊಮ್ಮಗಳು ಬರದ್ದಿ, ನಿನ್ನ ಮೊಮ್ಮಗ ಟ್ಯೂನ್ ಹಾಕಿದ್ದ’ ಅಂದರೆ ಗಂಟಲು ಕತ್ತರಿಸಿಹೋದ ಖುಷಿ ಒಂದು ನಿಟ್ಟುಸಿರಿನಲ್ಲಿ. ಆಚೆಯ ಮನಸ್ಸುಗಳಿಗೆ ಈ ನೆಮ್ಮದಿ ಸ್ವಲ್ಪವೇ ತಿಳಿದರೂ ಸಾಕು, ಅಜ್ಜನಾದ್ದಕ್ಕೆ, ಮೊಮ್ಮಕ್ಕಳನ್ನು ತಲೆಮೇಲೆ ಕೂರಿಸಿಕೊಂಡು ಆವತ್ತು ಮೆರೆದದ್ದಕ್ಕೆ, ಅವರಾಡಿದ್ದಕ್ಕೆಲ್ಲ ಸೊಪ್ಪುಹಾಕುತ್ತ ಅವರ ಬಲಕ್ಕೆ ನಿಂತ ಸಲುವಾಗಿ ಮಕ್ಕಳಿಂದ ಮಾತುಕೇಳಿದ್ದಕ್ಕೂ ಸಾರ್ಥಕ.
ಹಣ್ಣುಬಿಡಲಿ ಅಂತ ನೆಟ್ಟ ಹಿತ್ತಲಿನ ದಾಳಿಂಬೆಯ ಗಿಡ ಹೂಬಿಡುತ್ತಿದೆ. ಹಣ್ಣಿಲ್ಲದಿದ್ದರೂ ಬೆಳಗ್ಗೆದ್ದರೆ ದೇವರಿಗೆ ಹೂ ಆಯಿತೆಂಬ ಸಮಾಧಾನ ನಮ್ಮೊಳಗಿರಬೇಕಷ್ಟೇ. ಬೆಣ್ಣೆ ಗಿಡಹಾಕಿ ಹಣ್ಣುಬಿಡದೇ ನೋಯುವುದಾಗಲಿಲ್ಲ ಎನ್ನುವ ಸಮಾಧಾನ ಮುದಿಯ ವಯಸ್ಸಿಗೆ ಮತ್ತು ಮನಸ್ಸಿಗೆ ಸಿಕ್ಕರೆ ಇವತ್ತಿನ ತನಕ ಬದುಕಿದ್ದಕ್ಕೂ ಸಾರ್ಥಕ.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

ಖಾಲಿ ಕಣಜ

.