April 23, 2009

ಸಾವಿರದ ಸಾಸಿವೆಯಲಿ ಸಾವಿರದೊಂದು...

ನಾನು ತುಂಬ ಅಂಟಿಕೊಂಡಿದ್ದ ಆ ಕಣ್ಣುಗಳು ಮತ್ತೆ ನನಗೆ ಕಾಣಸಿಗುತ್ತಾವೆಂಬ ಭರವಸೆಯಿರಲಿಲ್ಲ. ಅಲೆಮಾರಿ ಕಣ್ಣು ಅವಿತಿಟ್ಟುಕೊಳ್ಳುವುದೆಂತು. ನನ್ನೆದುರು ಬಂತು.

‘ನೀನ್ಯಾರು?’ ಅಂತ ಕೇಳಿದರೆ...
‘ನಾನ್ಯಾರೆಂಬ ಪ್ರಶ್ನೆಗೆ ಉತ್ತರ ಹುಡುಕ ಹೊರಟ ಅಲೆಮಾರಿ ನಾನು. ನಾನೇ ತಿಳಿಯದ ನಾನು ನಾನು.’ ಗೌತಮ ಉತ್ತರಿಸಿದ್ದಿಷ್ಟು.

‘ ಓ ಅಲೆಮಾರಿ, ನಿನಗೆ ಹಾಡಲು ಬರತ್ತ?’ ಅಂತ ಕೇಳಿದರೆ...
"ನಿನ್ನ ಕಣ್ಣ ಕೊಳದ ಒಳಗೆ
ಕನಸ ಮೀನು ನನದು ಕಣೆ.
ಎದೆಯ ತುಂಬ ಅವಿತು ಕುಳಿತ
ನೂರು ಆಸೆ ನಿನದೆ ಕಣೆ
ಬಾಳ ತುಂಬ ಒಲವು ಸುರಿವ
ನವಿರು ನಂಟು ನಮದು ಕಣೆ"
ಅಂತ ತಾನೇ ಬರೆದಈ ಹಾಡನ್ನು ಹಾಡುವಾಗ ಆ ಕಣ್ಣುಗಳು ಯಾರನ್ನೋ ಅರಸುವಂತೆ ಭಾವಸ್ಫುರಿಸುತ್ತವೆ.

‘ನೀ ಬುದ್ಧನೇನೋ?’ ಅಂತ ಕೇಳಿದರೆ ಸಾವಿರದ ಮನೆಯ ಸಾಸಿವೆ ಕಾಳಿನ ಬಗ್ಗೆಯೂ ಮಾತನಾಡುತ್ತಾನೆ.
‘ಬರೆಯೋಕೆ ಬರತ್ತೇನೋ ಗೌತಮ ಬುದ್ಧ?’ ಅಂತ ಕೇಳಿದರೆ...
"ಬರೆದಿಟ್ಟ ಕವನ ನೂರು
ಕವನಕೆ ಉಸಿರೇ ನೀನು
ಮೌನದ ಪ್ರಶ್ನೆ ಸಾಕಿನ್ನು
ಉತ್ತರಕೆ ಕಾದಿಹ ನಾನು" ಅಂತ ತಾನೇ ಬರೆದ ಈ ಹಾಡನ್ನು ಎಲ್ಲೋ ನೋಡುತ್ತ ಹಾಡುತ್ತಾನೆ.
ಇವ ಬುದ್ಧನಲ್ಲ, ಕಿಂದರಜೋಗಿಯೇನೋ ಅನಿಸಿಬಿಡುತ್ತದೆ.

ಇವ ಯಾರು ಅಂತ ದಯವಿಟ್ಟು ಕೇಳಬೇಡಿ. ಇವ ಯಾರು ಅಂತ ನನಗೂ ಗೊತ್ತಿಲ್ಲ. ನಾನು ಈ ಭುವಿಗೆ ಬಂದಹಾಗೆಯೇ ಇವನೂ ಬಂದಿರಬಹುದು. ವಯಸ್ಸಲ್ಲಿ ನನಗಿಂತ ಸಾಕಷ್ಟು ಚಿಕ್ಕವನಾದರೂ ದೊಡ್ದವನಿರಬೇಕು ಅಂತ ಮನಸು ಸುಮ್ಮ ಸುಮ್ಮನೆ ಹೇಳುತ್ತದೆ. ನಾನು ನಂಬುವುದಿಲ್ಲ.
‘ಖಾಲಿ ಬಿದ್ದ ನನ್ನೆರಡು ಬ್ಲಾಗುಗಳಿವೆ, ಒಂದರಲ್ಲಿ ಏನಾದರೂ ಗೀಚುತ್ತೀಯ?’ ಅಂತ ಕೇಳಿದೆ. ‘ನನಗೇನೂ ತೊಂದರೆ ಇಲ್ಲ, ಓದುವವರಿಗೆ ತೊಂದರೆಯಾಗಬಹುದು ಅಷ್ಟೇ.’ ಎನ್ನುತ್ತ ತಲೆಕೆರೆದುಕೊಳ್ಳುತ್ತಾನೆ. ‘ಇಲ್ಲ ಕಣೋ, ನಾ ಗೀಚಿದ್ದನ್ನೇ ಎಷ್ಟೆಲ್ಲ ಪ್ರೀತಿಯಿಂದ ಓದುತ್ತಾರೆ ಇವರೆಲ್ಲ, ನೀ ಬರೆದದ್ದನ್ನೂ ಸಹ ಹೇಗಿದ್ದರೂ ಒಪ್ಪಿಸಿಕೊಳ್ಳುವಂಥಹ ಹಿರಿಮೆ ಅವರದು’ ಅಂದೆ. ಒಪ್ಪಿಕೊಂಡ.

ನನ್ನ ಪ್ರೀತಿಯ ನೀವುಗಳೇ...
ನಾನು ಪ್ರೀತಿಯಿಂದ ಪ್ರೀತಿಸಿದ ಒಂದುಸಾಲಿಗಾಗಿ ಒಂದು ಬ್ಲಾಗನ್ನೇ ತೆರೆದಿಟ್ಟುಬಿಟ್ಟಿದ್ದೆ. ಅದನ್ನೀಗ ಅಲೆಮಾರಿಯೊಬ್ಬ ಮುಂದುವರೆಸುತ್ತಾನೆ. ‘ಅಲೆಮಾರಿಯ ಬರಹಗಳ ಮಧ್ಯೆ ಮತ್ತಿವಳ ಬರಹಗಳನ್ನು ಅಲ್ಲಿಯೂ ಓದಬೇಕಾ?’ ಅಂತ ದಯಮಾಡಿ ಯೋಚಿಸಬೇಡಿ. ಭರವಸೆ ಕೊಡುತ್ತೇನೆ, ನಾನು ಇನ್ನುಮುಂದಲ್ಲಿ ಬರೆಯುವುದಿಲ್ಲ. ನಾನಾಯಿತು, ನನ್ನ ಪಾಡಾಯಿತು ಅಂತ ನನ್ನ ‘ನೆನಪು ಕನಸುಗಳ ನಡುವೆ’ ಇದ್ದುಬಿಡುತ್ತೇನೆ. ಅಲೆಮಾರಿ ಅಲೆಯುತ್ತ ಅಲ್ಲಿಗೆ ಬರಬಹುದೆಂಬ ಕಾರಣಕ್ಕೇ ನಾನಲ್ಲಿ ಬರೆದದ್ದನ್ನೆಲ್ಲ ಯಾವತ್ತೋ ಗುಡಿಸಿ ಒರೆಸಿಬಿಟ್ಟಿದ್ದೇನೆ. ಇನ್ನಲ್ಲಿ ಅವನು ಬರೆಯುತ್ತಲಿರುತ್ತಾನೆ, ಅಲೆಯುತ್ತ ಎಲ್ಲಿ ನಡೆದರೂ ಮರಳಿ ಅಲ್ಲಿಗೆ ಮರಳುತ್ತಾನೇನೋ ಎಂಬ ಭರವಸೆ ಅವನ ಮೇಲಿದೆ.

‘ಏನಪ್ಪಾ? ಇದೆಂಥ ಕತೆ? ಅಷ್ಟೆಲ್ಲ ಪ್ರೀತಿಸಿದ ಒಂದುಸಾಲಿಗಾಗಿ ತೆರೆದಿಟ್ಟ ಇಡಿಯ ಬ್ಲಾಗನ್ನು ಗೊತ್ತುಗುರಿಯಿಲ್ಲದ ಅಲೆಮಾರಿಗೆ ಕೊಟ್ಟುಬಿಟ್ಟಳಲ್ಲ! ಇವಳ್ಯಾವ ಸೀಮೆಯವಳು?’ ಅಂತ ಯೋಚಿಸ್ತಿದ್ದೀರ? ಅವನ್ಯಾರು ಅಂತ ನಾನು ಹೇಳದೇ ಇರುವ ಕಾರಣವಿಷ್ಟೇ. ಅವನಿನ್ನೂ ಚಿಕ್ಕವನು. ಅವನ್ಯಾರೆಂಬುದು ಇನ್ನೂ ಗೊತ್ತಾಗಬೇಕಿದೆ. ಅಷ್ಟರೊಳಗೆ ಅವನ್ಯಾರು ಅಂತ ನಾನು ನಿಮಗೆ ಹೇಳುವುದಾದರೂ ಏನನ್ನು?

ನಿಮ್ಮೆಲ್ಲರ ಹಾರೈಕೆ, ಒಂದಿಷ್ಟು ಪ್ರೀತಿ, ಒಂದು ಹಿಡಿ ಪ್ರೋತ್ಸಾಹವೇ ಸಾಕಾಗಬಹುದು ಅವನಿನ್ನು ಬರೆಯುವುದಕ್ಕೆ. ಅವನ ಹಾರೈಸುವಿರ?

ಅವನ ಬರಹಗಳನ್ನು ನಾನೂ ಓದಿಲ್ಲ. ಬೇರಿನ ಮೇಲಿಟ್ಟ ಪ್ರೀತಿಯೇ ಮೊಳಕೆಯ ಮೇಲೂ ಇರುವ ಹಾಗೆ. ಪ್ರೀತಿ, ಮಮತೆಯ ಜೊತೆ ಒಂದು ಭರವಸೆ. ಆ ಭರವಸೆ ಹುಸಿಯಾಗದಿರಲಿ. ಬುದ್ಧನಾಗದೆ, ಅಲೆಮಾರಿಯೂ ಅಲ್ಲದೆ ಅವನು ಗೌತಮನಾಗಿಯೇ ಗುರುತಿಸಿಕೊಳ್ಳಲಿ ಎಂಬ ಹಾರೈಕೆಯೊಂದಿಗೆ...

ವಂದನೆಗಳೊಂದಿಗೆ,
ಪ್ರೀತಿಯಿಂದ,
-ಶಾಂತಲಾ ಭಂಡಿ.

April 21, 2009

ಹೊಸ ಕದಿರು ಭಾಗ-3

ಮರೆತಹಾಗೆ ಇದ್ದಿದ್ದೆಲ್ಲವೂ ಮರೆತೇ ಹೋಗಿಬಿಟ್ಟರೆ ಮಾತೇ ಬೇರೆ. ಮರೆತಂತೆ ಇರುವುದಾದರೂ ಹೇಗೆ? ಬೆಳಬೆಳಿಗ್ಗೆ ಆಲಿಕಲ್ಲು ಹಂಚಿನ ಮೇಲೆ ಬೀಳುವ ಸದ್ದಿಗೆ ಮನಸ್ಸು ಒಂದೆಡೆ ನಿಲ್ಲುತ್ತಿಲ್ಲ. ಅವನು ಆಗಲೇ ಸ್ನಾನಕ್ಕೆ ಹೋಗಿಯಾಯ್ತು. ಮೇಲೆ ನೋಡಿದೆ. ಮನಸ್ಸು ವಾಸ್ತವಕ್ಕೆ ಬಂದು ನಿಂತಿತ್ತು. ಮಳೆಗಾಲ ಆರಂಭವಾಗಿ ಇಷ್ಟುದಿನಗಳಾದ ಮೇಲೆ ಆಲಿಕಲ್ಲು ಬೀಳುವುದಿಲ್ಲ ಅನಿಸಿತು. ಹಾಗಾದರೆ ಮನೆಯ ಹೆಂಚಿನ ಮೇಲೆ ಪಟ ಪಟ ಸದ್ದಾದರೂ ಏನಿರಬಹುದು? ನೋಡೋಣ ಎಂದುಕೊಂಡು ಹಿತ್ತಲಬಾಗಿಲಿಗೆ ಬಂದು ನಿಂತೆ. ಮನೆಹಿಂದಿನ ಮಾವಿನ ಮರಕ್ಕೆ ಹಬ್ಬಿಏರಿದ ಮಲ್ಲಿಗೆ ಬಳ್ಳಿಯಲ್ಲಿ ದೂರದೂರದಲ್ಲಿ ಅರಳಿಕೊಂಡಿದ್ದ ಒಂದೊಂದು ಹೂಗಳೂ ಪೂರ್ತಿ ಅರಳಿಕೊಂಡು ನೀರಿನೊಂದಿಗೆ ಸೇರಿ ಸುಮ್ಮನೆ ಪರಿಮಳ ಬೀರುತ್ತಿದ್ದವು. ಚೂಪನೆಯ ಮಾವಿನ ಎಲೆಯಂಚಿನಿಂದ ನೀರ ಹನಿಗಳು ನೇರ ಅಡುಗೆಮನೆಯ ಮಾಡಿನ ಹೆಂಚಿಗೆ ಬಿದ್ದು ಪುಟಪುಟನೆ ಪುಟಿಯುತ್ತಿದ್ದವು. ಒಳಬಂದಾಗ ಚಹದ ಪಾತ್ರೆಯ ನೀರು ಅಗತ್ಯಕ್ಕಿಂತ ಜಾಸ್ತಿಯೇ ಕುದಿದು ಮರಳುತ್ತಿತ್ತು. ಅತ್ತೆಮ್ಮ ಪದೇಪದೇ ನೆನಪಾದರು.

ನಾಗ ಬಂದು ‘ಅಮಾ... ಶಣ್ಣಮ್ಮಾ...’ ಅಂತ ಕರೆದಾಗ ಗ್ಯಾಸೊಲೆ ಆರಿಸಿ ಬಚ್ಚಲುಮನೆಯಿರುವ ಒಳಕ್ಕೆ ಬಂದೆ. ‘ಅಮಾ...ಇವತ್ತು ಕೆಲ್ಸಕ್ಕೆ ಬರಕಾಗದಿಲ್ರಮಾ, ಅದನ್ನೇ ಹೇಳಿಹೋಗವ ಹೇಳಿ ಬಂದೆ’ ಅಂದ. ಏನು ಉತ್ತರಿಸಬೇಕೋ ತೋಚದೇ ನಿಂತೆ. ಆಳುಮಕ್ಕಳು ಬಂದರೆ ‘ತಂಗಿ ಅಮ್ಮನ್ನ ಕರಿತ್ಯ? ಭಟ್ರನ್ನ ಕರಿತ್ಯ ?’ ಅಂತ ಕೇಳಿದರೆ ಮನೆಯೊಳಕ್ಕೆ ಹೋಗಿ ಅಪ್ಪನನ್ನೋ ಅಮ್ಮನನ್ನೋ ಕರೆಯುವುದು ಗೊತ್ತಿತ್ತು. ಒಂದೇಸಲಕ್ಕೆ ನಾನೇ ಉತ್ತರಿಸಬೇಕಾದ ಈ ಸ್ಥಿತಿ ಯಾವತ್ತೂ ಬಂದಿರಲಿಲ್ಲ. ಆಳುಮಕ್ಕಳು ಹೀಗೆ ಹೇಳಿದರೆ ಏನು ಉತ್ತರಿಸಬೇಕೆನ್ನುವುದೂ ಗೊತ್ತಿಲ್ಲ. ಅತ್ತೆಮ್ಮ ಈಗ ಇರಬೇಕಿತ್ತು ಅನ್ನಿಸಿತು.
‘ಹೌದ? ಇರು ಒಂದ್ನಿಮಿಷ, ಭಟ್ರನ್ನೇ ಕರಿತೆ, ಅವ್ರಿಗೆ ಹೇಳಿ ಹೋಗು’ ಅಂದೆ. ದೇವರ ಮುಂದೆ ಪಠಿಸುತ್ತಿದ್ದ ಮಂತ್ರ "ಭಕ್ತಾನುಕಂಪಿನಂ ದೇವಂ ಜಗತ್ಕಾರಣಮಚ್ಯುತಮ್" ಅರ್ಧಪಠಣಮಾಡಿ ಎದ್ದುಬರುವುದಿಲ್ಲ ಅಂತ ಗೊತ್ತಿದೆ. ಮತ್ತೆ ನಾಗನಿಗೆ ಹೇಳಿದೆ ‘ನಾಗ..ಐದು ನಿಮ್ಷ, ಬರ್ತಾರೆ, ಕಾಯ್ತೀಯ?’ ‘ಹ್ಞೂನ್ರಮಾ..ಬರ್ಲಿ ಭಟ್ರು’ ಅಂತ ಹಾಳೆಟೊಪ್ಪಿ ತೆಗೆದು ಅದರೊಳಗಿದ್ದ ನೀರನ್ನು ಕೊಡವಿ ಮತ್ತೆ ತಲೆಗೇರಿಸಿದ.

ಅತ್ತ ಮಂತ್ರ ಮುಂದುವರೆಯುತ್ತಲೇ ಇತ್ತು. ‘ಅನೇನ ಗಣಪತಿಮಭಿಸಿಂಚತಿ ಸ ವಾಗ್ಮೀ ಭವತೀ...’ ಇಂಥಮಳೆಗಾಲದಲ್ಲಿ ಕಂಬಳಿಯನ್ನಾದರೂ ತೆಗೆದುಕೊಂಡುಬರುವುದು ಬಿಟ್ಟು ಈ ನಾಗ ಹಾಳೆಟೊಪ್ಪಿ ಧರಿಸಿ ಓಡಿ ಬಂದಿದ್ದಾನೆಂದರೆ ಏನೋ ಅವಸರದ ಕೆಲಸವೇ ಆಗಿರಬೆಕು ಅನ್ನಿಸಿ ಬಲಗಣ್ಣು ಅದುರಿದಹಾಗೆನಿಸಿತು. ತೊಲೆಯ ಮೇಲೆ ಕುಳಿತಿದ್ದ ಬೆಕ್ಕು ಸಣ್ಣಗೆ ಮಿಸುಕಾಡಿ ಮಿಯಾಂವ್ ಅಂದಾಗಲೇ ಒಲೆಯ ಮೇಲೆ ಕಾಯಿಸಲಿಟ್ಟ ಹಾಲಿನ ಪಾತ್ರೆಯ ನೆನಪಾಗಿದ್ದು. ‘ಹುಶ್..’ ಅಂದೆ. ಬೆಕ್ಕು ತೊಲೆಯ ಸಂದಿನಿಂದ ಮಾಡೊಳಗೆ ತಲೆತೂರಿಸಿಕೊಂಡು ಕಾಣೆಯಾಯ್ತು.

‘ಸ್ವಸ್ತಿ ನಸ್ತಾರ್ಕ್ಷ್ಯೋ ಅರಿಷ್ಟನೇಮಿಃ ಸ್ವಸ್ತಿನೋ ಬೃಹಸ್ಪತಿರ್ದಧಾತು" "ಇತೀ... ........ ಸಮಾಪ್ತಂ" ಎದ್ದು ಬಂದ ಅವನು ‘ಅಲ್ಲಾ...ಚೊಲೋ ಮಳೆಹೊಯ್ದು ಗದ್ದೆಲ್ಲಿ ಅರ್ಲು ತಾನಾಗೇ ಆಗಿತ್ತು. ಹೊಸದಾಗಿ ಅರಲು ಮಾಡ ಕೆಲ್ಸನೇ ಇಲ್ಲಾಗಿತ್ತಲಾ... ಇವತ್ತು ಕೆಳಗಿನ ಭತ್ತದಗದ್ದೆ ನೆಟ್ಟಿ ಶುರುಮಾಡಿದ್ರೆ ಆಗ್ತಿತ್ತು, ಇವತ್ತು ಬರ್ದೇ ಎಲ್ಲಿಗ್ ಹೋಗ್ತೀಯ?’ ನಾಗನೊಂದಿಗೆ ನೇರವಾಗಿ ಮಾತನಾಡುತ್ತ ಬಂದ ರೀತಿ ಜವಾಬ್ಧಾರಿಯದಾಗಿ ಕಾಣಿಸಿತು. ಹೀಗೆ ಮಾತನಾಡುವುದನ್ನು ನಾನೂ ನಾಳೆ ಕಲಿಯಬೇಕಾದೀತು ಇವನೊಡನೆಯೇ ಬದುಕು ಸಾಗಿಸಲಿರುವಾಗ ಅಂದುಕೊಂಡೆ.
‘ಇಲ್ರಾ....ಈವತ್ತೆ ನನ್ ಹೆರಿಮಗಳು ಚೌಡಿ ಮೈನೆರದು ಕುಂತದೆ, ಮೂರನೇ ದಿನದ್ ಸಾಸ್ತ್ರ, ಶೀರೆ ತಕಬಾ ಹೇಳಿ ಮನೆಲ್ಲೆಲ್ಲ ಗಂಟುಬಿದ್ದಾರೆ, ಅದ್ಕೇ ಪ್ಯಾಟಿಬದಿಗಾರೂ ಹೋಗ್ ಬರೂವ ಹತ್ನಿಮ್ಷ ಅಂದ್ಕಂಡೀದೆ.’ ನಾಗ ಉತ್ತರಿಸಿದ. ‘ಹಂಗಾದ್ರೆ ಬೇರೆ ನಾಲ್ಕು ಆಳುಮಕ್ಕಳನ್ನಾದ್ರೂ ಹಾಕಿ ಕಳ್ಸು ನೋಡುವ, ಗಣಪ ಶೇರುಗಾರನ್ ಹತ್ರೆ ಆಳು ಇದ್ದಾರ ಕೇಳ್ಕಬಂದು ನಂಗೆ ವಿಷ್ಯ ತಿಳ್ಸು, ಪ್ಯಾಟಿಗ್ ಹೋಗಿಬಂದ್ಮೇಲಾದ್ರೂ ಅಡ್ಡಿಯಿಲ್ಲ, ನೀನು ಬಾ ಇವತ್ತು’ ಅಂದವನು ಮತ್ತೆ ದೇವರ ಮುಂದೆ ಕುಳಿತು ಮಂತ್ರಾಭಿಷೇಕ ಮುಂದುವರೆಸಿದ.

ನೈವೇದ್ಯದ ಹಾಲನ್ನು ಬೆಕ್ಕು ಕುಡಿದಿದ್ದು ಅವನಿಗೆ ಕೋಪವನ್ನೇ ತರಿಸಲಿಲ್ಲವಾ? ಎಷ್ಟು ತಣ್ಣಗೆ ಬಂದು ಕಾಯಿಸಿಟ್ಟ ಹಾಲನ್ನೇ ಪೂಜೆಯ ತಟ್ಟೆಯಲ್ಲಿ ಎತ್ತಿಕೊಂಡು ಹೋದವ ಒಳ್ಳೆಯವನೆನಿಸಿದ. ಅತ್ತೆಮ್ಮ ತಮ್ಮ ತಣ್ಣನೆಯ ಗುಣವನ್ನೇ ಧಾರೆಯೆರೆದಿದ್ದಾರಿರಬೇಕು ಅನ್ನಿಸಿತು. ಇದ್ದಕ್ಕಿದ್ದಂತೆ ಗಂಟಲುಬಿಗಿದಂತೆನಿಸಿ ಅಳು ಉಮ್ಮಳಿಸಿ ಬಂತು. ಅರೆಕ್ಷಣ ದೇವರ ಮುಂದೆ ಹೋಗಿ ನಿಂತೆ. ತಣ್ಣನೆಯ ದೇವರಮನೆಯಲ್ಲಿ ದೇವರದೀಪದ ಹೊರತಾಗಿ ಬೇರೆಯ ಬೆಳಕೇ ಇಲ್ಲದಿದ್ದರೂ ದೇವರಮುಂದೆಕುಳಿತಿದ್ದ ಅವನು ಭದ್ರತೆಯ ಕುರುಹಾಗಿ ಕಣ್ಣಲ್ಲಿ ಮಿನುಗಿದ. ಇದ್ದಕ್ಕಿದ್ದಂತೆ ಧೈರ್ಯಬಂದಂತಾಗಿ ಮತ್ತೆ ಅಡುಗೆಮನೆಗೆ ಬಂದೆ.

ರಾತ್ರಿ ನಿದ್ರೆಯಲ್ಲಿದ್ದಾಗ ಕಂಡ ಕನಸು ಮತ್ತೆ ಮತ್ತೆ ಭಯ ಹುಟ್ಟಿಸಿತು. ಅಜ್ಜ ದೇವರಪಾದ ಸೇರುವ ಮುನ್ನಾದಿನ ಅಜ್ಜಿ ಕಂಡಕನಸು ಇವತ್ತು ಬೆಳಗಿನಜಾವ ನನ್ನ ಕನಸಾಗಿ ಮೂಡಿಬಂದುದಕ್ಕೆ ಕಾರಣವನ್ನು ಯಾರನ್ನು ಹೋಗಿ ಕೇಳುವುದು? ಆವರಿಸಿದ ಭಯ ಕಣ್ಣೊಳಗೆ ಹನಿಗಟ್ಟಿ ಗಂಟಲನ್ನು ಮತ್ತೆ ಮತ್ತೆ ಕಟ್ಟಲಾರಂಭಿಸಿತು. ಅವನಿಗೆ ಹೇಳುವುದಾದರೂ ಏನನ್ನು? ಯಾವ ಸಲುಗೆಯಿಂದ ಏನೆಂದು ಮಾತನಾಡುವುದು. ಅವರೆಲ್ಲ ಇಟ್ಟ ಮುಹೂರ್ತದಲ್ಲಿ ಅವನು ತಾಳಿಕಟ್ಟಿದನೆಂಬ ಸಲುಗೆಯಲ್ಲಿ ಮಾತನಾಡಲಾ? ಅಥವಾ ನಿನ್ನೆ ಕುಡಿದ ಅಮಲಿನಲ್ಲಿ... ಛಿ! ಹಣೆಬರಹವನ್ನು ನೆನೆದರೂ ಕಣ್ಣು ಮತ್ತು ಕಣ್ಣೀರು ಮಾತ್ರ ಮಾತನಾಡುತ್ತವೆ. ದೇವನು ಈ ಗಂಟಲಿಗೆ ಗಟ್ಟಿತನವನ್ನೇ ಕೊಡಲಿಲ್ಲ ಅನ್ನಿಸಿತು.

ದೇವರಮುಂದಿನಿಂದ ಎದ್ದುಬಂದವನು ಹತ್ತಿರಕ್ಕೆ ಬಂದುನಿಂತ. ‘ದೇವರಿಗೊಂದು ನಮಸ್ಕಾರ ಮಾಡು ಬಾ’ ಅವನು ಕೈಹಿಡಿದು ಕರೆದಾಗ ‘ನನಗಿನ್ನೂ ಸ್ನಾನವಾಗಿಲ್ಲ, ಈಗ ದೇವರ ಮುಂದೆ ಹೇಗೆ ಬರಲಿ?’ ಅಂದಿದ್ದಕ್ಕೆ ಕೈಹಿಡಿದು ಕರೆದುಕೊಂಡುಹೋಗಿ ದೇವರ ಮುಂದಿನ ಕುಂಕುಮವನ್ನು ಹಣೆಗಿಟ್ಟಾಗ ಏನೋ ಧೈರ್ಯ. ಇವತ್ತು ಅಜ್ಜಯ್ಯ ಕನಸಲ್ಲಿ ಬಂದು ‘ಬಂದ್ಯಾ ತಮ್ಮಾ...ಬಾ,’ ಎಂದು ಕರೆದಹಾಗೆ ಎನಿಸಿತು ಎಂದವನು ಹೇಳಿದಾಗ ನಿನ್ನೆ ರಾತ್ರಿ ನಾನು ಕಂಡ ಕನಸಿಗೆ ಅವನ ಕನಸು ಕೊಂಡಿಯಾಗಿ ಅವ್ಯಕ್ತ ಭಯ ಮಿಸುಕಾಡತೊಡತೊಡಗಿತು. ಸಂತೈಸಿಕೊಂಡಷ್ಟೂ ಭಯ ಉಲ್ಬಣಗೊಳ್ಳುತ್ತಲೇ ಇತ್ತು. "ಎರಡೆರಡುಬಾರಿ ಅದೇ ಕನಸು ಬಿತ್ತು" ಮತ್ತೆ ಮಾತನಾಡಿದ ಅವನ ಧ್ವನಿಯಲ್ಲಿ, ಮಾತಿನಲ್ಲಿ ಎಷ್ಟೋ ವರ್ಷ ಒಟ್ಟಿಗೆ ಆಡಿಬೆಳೆದ ಸಲುಗೆಯಿತ್ತು. ಸುಮ್ಮನೆ ಒಳನಡೆದೆ. ಯಾರೋ ನನ್ನನ್ನು ಹಿಂಬಾಲಿಸುತ್ತಿದ್ದಾರೆ ಎನ್ನುವ ಭ್ರಮೆ ಹಿಂಬಾಲಿಸುತ್ತಲೇ ಇತ್ತು.

ಮಧ್ಯಾಹ್ನದ ಹೊತ್ತಿಗೆ ಸ್ನಾನ ಮಾಡಿ ಅನ್ನಕ್ಕೆ ಅಕ್ಕಿ ಅಳೆಯುವಷ್ಟರಲ್ಲಿ ಓಡೋಡಿಬಂದನಾಗ ತಂದ ವಾರ್ತೆ ಕೇಳಲು ನನ್ನ ಹೊರತಾಗಿ ಮನೆಯಲ್ಲಿ ಯಾರೂ ಇರಲಿಲ್ಲ. ‘ಅಮಾ...ಭಟ್ರುನ್ನ ಆಸ್ಪತ್ರೆಗ್ ತಕಹೋದ್ವಿ. ಡಾಕ್ಟ್ರಿಗೂ ಏನೂ ಮಾಡ್ಲಿಕ್ಕಾಗ್ಲಿಲ್ಲ. ಹಾರ್ಟ್ ಫೇಲ್ ಅಂತೆ. ದೊಡ್ಡಮಾರನ್ನ ಕರಸ್ರಿ ಅಮಾ, ಸಮಾಧಾನ ತಕಳಿ" ಅಂದ ಒಂದೇ ಉಸಿರಿಗೆ.

ಯಾರು ಯಾರನ್ನು ಕರೆಸಿದರೋ, ಎಲ್ಲ ಸೇರಿದರು. ಏನೇನು ಮಾಡಿದರೋ..ಎಲ್ಲ ನಡೆದರು. ಇಪ್ಪತ್ತೊಂದನೆಯ ದಿನವೂ ಮುಗಿದಾಗ ಅಪ್ಪ ಅಮ್ಮ ಬಂಧುಬಳಗವೆಲ್ಲವೂ ಖಾಲಿಯಾಯ್ತು. ಮತ್ತೆ ಉಳಿದದ್ದು ಅತ್ತೆಮ್ಮ, ಅತ್ತೆಮ್ಮನ ಒಂಟಿತನಕ್ಕೆ ಅದೇ ಹಳೆಯ ಹಾಡು ಮತ್ತು ನಾನು. ಮಳೆಮಾತ್ರ ತನಗೆ ಏನೂ ಗೊತ್ತಿಲ್ಲ ಅನ್ನುವಂತೆ ಸುರಿದು ಸುಮ್ಮನಾಗುತ್ತ ಮತ್ತೆ ಸುರಿಯುತ್ತ ಸುಮ್ಮನಾಗುತ್ತಲಿತ್ತು. ‘ರಘುಕುಲ ಸೋಮ ಶ್ರೀರಾಮ’ ಅತ್ತೆಮ್ಮನವರ ಹಾಡು ಸಾಗುತ್ತಲೆ ಇತ್ತು. ಹಳೆಯಹಾಡುಗಳ ಮಧ್ಯೆ ಆ ತಿಂಗಳು ಸುಮ್ಮನೆ ಸರಿದು ಹೋಯಿತು. ‘ಇನ್ನು ಬರೀ ಎಂಟು ತಿಂಗಳು ಕಾದರೆ ಅವನೇ ಹುಟ್ಟಿಬರಬಹುದು ಬಿಡು’ ಅತ್ತೆಮ್ಮ ಅಂದಿದ್ದು ಸ್ವಗತವ? ಅಥವ ಸಮಾಧಾನವ? ಯೋಚಿಸುತ್ತಲೇ ಇದ್ದೆ.

ಹೇಡಿಗೆಯಂಚಿಗೆ ಮನೆಮುಂದಿನ ಮೆಟ್ಟಿಲಿನಲ್ಲಿ ಕುಳಿತರೆ ಮೂಲೆಯ ತಿರುವಿನಲ್ಲಿ ನೀರಾಟವಾಡುತ್ತ ಅವನು ಬರಬಹುದೆಂಬ ಹುಸಿಗನಸು. ಸೂರಂಚಿನ ನೀರು ‘ಟಳಕ್ ಟಳಕ್’ ಸದ್ದಿನೊಂದಿಗೆ ನಿಂತ ನೀರೊಳಗೆ ಬಿದ್ದರೆ ಒಡಲೊಳಗಿನ ಜೀವ ಉಸಿರಾಡಿದ ಪುಟ್ಟ ಸದ್ದು ಸದ್ದೇ ಇಲ್ಲದೆ ಹೃದಯಕ್ಕೆ ಕೇಳಿಸುತ್ತಲಿತ್ತು. ದೀಪಾವಳಿಯಾಚೆಗೆ ಬರಲಿರುವ ಹೊಸ ಕದಿರು ಎಳೆಮಳೆಗೆ ಮೊಳಕೆಯೊಡೆದ ಸದ್ದು ಮಾತ್ರ ನನ್ನೊಡಲಿಗೆ ಮತ್ತು ಅತ್ತೆಮ್ಮನ ಹೃದಯಕ್ಕೆ ಮಾತ್ರ ಕೇಳಿಸುತ್ತಲಿತ್ತು. ಅತ್ತೆಮ್ಮ ನಸುನಗುತ್ತಲೇ ಇದ್ದರೂ ಅತ್ತೆಮ್ಮನ ಸೆರಗಂಚು ಆರುವುದೇ ಇಲ್ಲ. ಧೋ ಎಂದು ಸುರಿಯುವ ಈ ಮಳೆಗಿರಬೇಕು ಅತ್ತೆಮ್ಮನ ಸೆರಗು ಸದಾ ಜಿನುಗು.

ಹೊಸ ಕದಿರು ಭಾಗ-1

ಹೊಸ ಕದಿರು ಭಾಗ-2

April 17, 2009

ಅಜ್ಜನಮನೆಗೆ ಹೋಗುವ ಬಸ್ಸು...

ಅರ್ಧಂಬರ್ಧ ಎಚ್ಚರ. ಅತ್ತೆ ಮಗೂನ ತೋರ್ಸಿ ನಿಮ್ಮಿಬ್ರುನ್ನೂ ಹೋಲ್ತಾನೆ ನನ್ನ ಮೊಮ್ಮಗ ಅಂದ್ರು. ಹಾಗೆ ಹೇಳುತ್ತಲೇ ನನ್ನ ಕೆನ್ನೆ ಸವರಿದ್ರು. ಅಮ್ಮ ಹಣೆ ನೇವರಿಸಿದ್ರು. ಸಣ್ಣಗೆ ನಕ್ಕೆ ಅನ್ಸತ್ತೆ, ನಿದ್ರೆ ಬಂತು.

ಇವತ್ತು ನಮ್ಮತ್ತೆಯ ಮೊಮ್ಮಗನ್ನ ಕೇಳಿದೆ ‘ಕನ್ನಡ ಓದೋಕೆ ಬರತ್ತ?’ ಅಂದೆ. ‘ಸಾರೀಮ್ಮಾ.. ಬರೋಲ್ಲ’ ಅಂದ. ಹಾಗಾದ್ರೆ ಆವತ್ತು ಅತ್ತೆ ಹೇಳಿದ್ದು ಸುಳ್ಳ? ಅಂವ ನಮ್ಮಿಬ್ರನ್ನೂ ಹೋಲ್ತಾನೆ ಅಂದ್ರೆ ಅವಗೆ ಕನ್ನಡ ಬರಬೇಕಿತ್ತು, ಯಾಕೇಂದ್ರೆ ನಮ್ಮಿಬ್ಬರಿಗೂ ಕನ್ನಡ ಬರುತ್ತಲ್ಲ! ಯೋಚನೆಗೆ ಬಿದ್ದೆ.

‘ಅಯ್ಯೋ...ಕನ್ನಡ ಓದೋಕೆ ಬರಲ್ಲ ಅಂದ್ರೆ ನಿಂಗೆ ಮುಂದೆ ತುಂಬ ಕಷ್ಟ ಇದೆ’ ಅಂದೆ. ‘ಹೌದಾಮ್ಮ?’ ಅಂದ. ‘ಹ್ಞೂ...ಅಜ್ಜನಮನೆಗೆ ಹೋಪ ಬಸ್ಸಿನ ಬೋರ್ಡು ಕನ್ನಡದಲ್ಲೇ ಇಪ್ಪದು...’ ಅಂದೆ. ಅವನಿಗೆ ತಲೆಬಿಸಿ ಶುರುವಾಯ್ತು. ಇನ್ನೊಂದೆರಡು ಜಾಸ್ತಿನೇ ಹುಳಬಿಡೋಣ ಅನ್ನಿಸಿ ಮತ್ತೆ ಅವನ ಮುಂದೆ ಪಟ್ಟಾಗಿ ಕೂತೆ. ‘ಅಷ್ಟೇ ಅಲ್ಲ..ನೋಡು ಈವಾಗ...ಯಾರಾದ್ರೂ ಬಂದೂ ನಿನ್ನ ಮಾತೃಭಾಷೆ ಯಾವುದು ಅಂತ ಕೇಳಿದ್ರೆ ನೀನೇನು ಹೇಳ್ತೀಯ?’ ಅಂದೆ. ‘ಹಾಗಂದ್ರೇನಮ್ಮಾ..?’ ಬಂತು ಪ್ರಶ್ನೆ. ‘ಹಾಗಂದ್ರೆ....ಮದರ್ ಟಂಗ್’ ಅಂದೆ. ‘ನೀನು ದೊಡ್ಡವನಾದ್ಮೇಲೆ ನಿನಗೇ ಅನ್ನಿಸ್ಬಾರ್ದು ಅಲ್ವ? ಅಪ್ಪ ಅಮ್ಮ, ಅಜ್ಜಿ, ತಾತ ಎಲ್ರೂ ಮಾತಾಡ್ತಿದ್ದ ಭಾಷೆ ನಿಂಗೆ ಓದೋಕೆ ಬರೋಲ್ಲ ಅನ್ನಿಸಿದ್ರೆ ನಿಂಗೆ ಬೇಸರವಾಗೋಲ್ವ? ಅದೂ ಅಲ್ದೇನೆ ಅಮ್ಮ ಬ್ಲಾಗ್ ಬರೀತಾರಲ್ಲ ...ಅದೂ ಕನ್ನಡದಲ್ಲೇ ಇದೆ, ನಿಂಗೆ ಅಮ್ಮ ಬರ್ದಿದ್ದನ್ನ ಓದ್ಬೇಕು ಅನ್ನಿಸೋಲ್ವ? ನಿನ್ನದೇ ಆದ ಸ್ವಂತ ಭಾಷೆಯೇ ಇಲ್ಲ ಅಂತ ಮುಂದೊಂದು ದಿನ ನಿನಗೆ ಅನ್ನಿಸಬಾರದಲ್ವ?’ ಅಂತೆಲ್ಲ ತಲೆಬಿಸಿ ಹುಟ್ಟಿಸಿ ನಿಧಾನಕ್ಕೆ ಅವನ ಮುಂದಿಂದ ಏಳುವ ಯತ್ನ ಮಾಡಿದೆ.

‘ನನಗೆ ಹಾಗನ್ನಿಸಿದಾಗ ನೀ ಕಲಿಸಿಕೊಟ್ಟರಾಯ್ತಲ್ವಾ....?’ಲಾಜಿಕ್ಕು ಶುರುವಾಯ್ತು. ಇಂಥ ಲಾಜಿಕ್ಕಿಗೆ ಸೆಂಟಿ ಡಯಲಾಗ್ಸಿನಂಥ ಮೆಡಿಸಿನ್ ಬೇರೊಂದಿಲ್ಲ.
‘ನೋಡು..ಎಷ್ಟು ವರ್ಷದತನಕ ನಿನ್ನಮ್ಮ ಹೀಗೆ ನಿಂಗೆಲ್ಲ ಕಲಿಸಿಕೊಡುತ್ತ ನಿನ್ನ ಜೊತೆಯೇ ಇರೋಕಾಗತ್ತೆ? ನೀ ಬೆಳೆದು ದೊಡ್ಡವನಾದಾಗ ನಿನ್ನಮ್ಮ ನಿನ್ನ ಜೊತೆಯಿಲ್ಲದ ಒಂದುದಿನ ನಿಂಗೆ ಹಾಗನ್ನಿಸಿಬಿಟ್ರೆ!’ ಮತ್ತೆ ಕೇಳಿದೆ.
‘ಸರೀಮ್ಮ, ಏನಾದ್ರೂ ಕಲಿಸಿಕೊಡು, ಓದ್ತೀನಿ’ ಅಂದ. ಅಲ್ಲಿಗೆ ಏನನ್ನೋ ಸಾಧಿಸಿದ ಖುಷಿಯಲ್ಲಿ ಅವನ ಕೆನ್ನೆತಟ್ಟಿ ತಲೆನೇವರಿಸಿ ‘ಜಾಣ ಮರಿ’ ಅಂದೆ.


ಅಂತೂ ಆವತ್ತು ಅಂವ ಕನ್ನಡ ಓದಿದ. ನಿಜ, ಅಂತೂ ಅವ ಆವತ್ತು ಕನ್ನಡ ಓದಿದ.

video