ಶ್ರಾವಣದ ಸಂಜೆ ಮಳೆಗಾಲದೊಂದು ದಿನ
ಗೆಳೆಯ ನೀನಂದು ಮನೆಯೊಳಗಿರದ ಹೊತ್ತು
ಚೆಲುವ ಚೆನ್ನಿಗನು ಮಳೆರಾಯ ಬಂದಾಗ
ಸೂರಂಚು ಸೊಗಸಾಗಿ ಸೋರುತ್ತಲಿತ್ತು
ನೆನಪಿಗಾಸರೆಯಾಗಿ ಸೂರಂಚ ಕಂಬ
ಸೂರಂಚ ನೀರಲಿ ನಿನ್ನ ಬರುವಿನ ಬಿಂಬ
ಆಗಸದಿ ಕವಿದಿರಲು ಹನಿಹೊತ್ತ ಮೋಡ
ಮನದೊಳಗೆ ಕವಿದಿಹ ನೀ ಕವಿಯೇ ಗೆಳೆಯ
ನುಲಿವ ಬೆರಳಂಚಲ್ಲಿ ಕಣ್ಣಂಚು ಕುಳಿತು
ಹನಿಹನಿಗಳೊಳಗೆಲ್ಲ ಮಿಂದೆದ್ದ ಕನಸು
ಸೂರಂಚ ಹನಿಯಲ್ಲಿ ಸೆರಗಂಚು ನೆನೆದು
ಹಸಿಹೆಜ್ಜೆಗಳಲೆಲ್ಲ ನಿನ್ನದೇ ಹೆಸರು
ನೆನಪು ನವಿರಾಗಿ ಹನಿಯಾಗಿ ಇಳಿದಿರಲು
ಬಲಗೆನ್ನೆ ರಂಗಾದ್ದು ಕನ್ನಡಿಗೆ ಗೊತ್ತು
ಹಾದಿತಿರುವಿನಲಿ ಕೈಹಿಡಿದು ಎಳೆದದ್ದು
ಕೊರಳತಿರುವಿನಲ್ಲಿಹ ಕರಿಮಣಿಯ ಸೊತ್ತು
ಅಂಗಳದ ನೀರಿನಲಿ ನೀನಿರದ ದೋಣಿ
ತೇಲುತಿದೆ ನೆನಪು ಹುಟ್ಟಿರದ ನಾವೆಯಲಿ
ಜಡೆಯೆಳೆದು ನಕ್ಕು ಕಿರುಬೆರಳ ಕಚ್ಚಿದ್ದು
ನೆನಪಲ್ಲ ಗೆಳೆಯ ಅದು ಹಳೆಯ ಕನಸು
ಉದುರುವ ಹನಿಗಳಲೇ ಹೊತ್ತುಗಳ ಅಳೆದು
ಬೊಗಸೆಯ ತುಂಬೆಲ್ಲ ತಾಸುಗಳೇ ಸುರಿದು
ನೀ ಬರುವ ಹಾದಿಗೆ ಕಂಗಳ ಕಳಿಸಿದ್ದೆ
ಹಾದಿಯ ಬದಿಯಲ್ಲಿ ನಿನ್ನೆದುರಾದವೇನು?
ನೀ ಬಂದ ಹೊತ್ತಲ್ಲಿ ಹೊರದೆಯೇ ಹೆರಿಗೆ
ನಿನ್ನಿಂದ ಹುಟ್ಟಿಹವು ಈ ಎಲ್ಲ ಸಾಲು
ನೀನೇ ಸಾಲುಗಳ ‘ತಂದೆ’, ತಾಯಿ ನಾನು
ಮತ್ತೆ ಹನಿಗಳಲ್ಲಿ ತೇಲಿ ನೆನಪನೌಕೆ
ಶ್ರಾವಣದ ಸಂಜೆ ಮಳೆಗಾಲದೊಂದು ದಿನ
ಗೆಳೆಯ ನೀನಂದು ಮನೆಯೊಳಗಿರದ ಹೊತ್ತು
ಚೆಲುವ ಚೆನ್ನಿಗನು ಮಳೆರಾಯ ಬಂದಾಗ
ಸೂರಂಚು ಸೊಗಸಾಗಿ ಸೋರುತ್ತಲಿತ್ತು
**************************************************************************************************

*
*
*
*
*
*
*
*
*
*
*
*
*
*
*
*
*
*
*
*
*
*
*
*
*
*
ಅನುದೀಪ ಒಂದು ಉಂಗುರ(ಚಿನ್ನದ್ದಲ್ಲ, ಪ್ರೀತಿದು) ತೊಡಿಸಿ ‘ಆಯ್ ಲವ್ ಯು ಅಮ್ಮಾ’ ಅಂದಾಗ ಈ ದಿನದ ಅರ್ಥವನ್ನ ಹುಡುಕ್ತಾ ಹೋದ್ರೆ ಅರ್ಥ ತುಂಬ ವಿಶಾಲವಾಗಿದೆ ಅನ್ನಿಸಿಬಿಡ್ತು. ನಾನು ಯಾವತ್ತೂ ಮಗನಿಗಿಂತಲೂ ಚಿಕ್ಕವಳೇ ಅಂತ ಯಾವತ್ತೋ ಗೊತ್ತಾದ ವಿಷಯಕ್ಕೆ ಇವತ್ತೂ ಮುಗುಳ್ನಕ್ಕು ಸುಮ್ಮನಾಗುತ್ತೇನೆ.
ಹೊಸದಿನದಲ್ಲೊಂದು ಹೊಸ ಅರ್ಥ ಕಂಡು ಬದುಕ ಹಸನಾಗಿಸಿಕೊಳ್ಳುವುದು ಅವರವರ ಅರ್ಥಕ್ಕೆ ಬಿಟ್ಟಿದ್ದು. ಅರ್ಥವೆಂದರೆ ಇಷ್ಟೆಯೇ. ಮತ್ತು.................