January 10, 2009

ಜಯ ಜಯರಾಮಾ...ಜಯ ಘನಶ್ಯಾಮಾ...

ಹಳೆಯ ಬಾವಿಯಲ್ಲಿ ಹೊಸನೀರು ಬಂದರೆ ನೀರು ಮಾತ್ರ ಹೊಸದು, ಬಾವಿ ಹಳೆಯದೇ. ಹೊಸವರ್ಷ ಬಂದಿದೆ, ನಾನು ಹಳತಾಗಿಯೇ ಇದ್ದೇನೆ. ಹೊಸ ಹೊಸ ಕನಸುಗಳ ಹಂಚುವ ಮೊದಲಿಷ್ಟು ಹಳೆಯ ನೆನಪನ್ನೇ ಬಿಚ್ಚಿಡುವ ಯತ್ನದಲ್ಲಿಯೇ ಇದ್ದೇನೆ.

ಆಗ ನನಗೆ ಮೂರುವರೆ ನಾಲ್ಕು ವರ್ಷವಿದ್ದಿರಬಹುದು. ದೂರದೂರಿನಿಂದ ನಮ್ಮೂರ ಕನ್ನಡಶಾಲೆಗೆ ಬರುತ್ತಿದ್ದ ಜಯರಾಮ ಎಂಬ ಹುಡುಗನೊಬ್ಬ ದೊಡ್ಡಜ್ಜನ ಮನೆಗೆ ಮಧ್ಯಾಹ್ನ ಊಟಕ್ಕೆ ಬರುತ್ತಿದ್ದ. ಅವನು ಆಗ ಐದನೇ ಕ್ಲಾಸು ಅನ್ನುವುದು ನನಗೆ ಚೆನ್ನಾಗಿ ನೆನಪಿರುವುದಕ್ಕೆ ಕಾರಣ ಅವನು ಯಾರೆಂಬುದಾಗಿ ನಾನೊಮ್ಮೆ ಅಮ್ಮನಲ್ಲಿ ವಿಚಾರಿಸಿದಾಗ ಅಮ್ಮ ನನಗೆ ಹೇಳಿದ್ದಿಷ್ಟು. ‘ಅವನು ಜಯರಾಮ, ಅವನ ಊರಿನ ಶಾಲೆಯಲ್ಲಿ ಬರಿಯ ನಾಲ್ಕನೆಯ ತರಗತಿಯತನಕ ಮಾತ್ರ ಇರುವುದರಿಂದ ದಿನಾಲೂ ಅಷ್ಟು ದೂರದಿಂದ ನಮ್ಮೂರ ಶಾಲೆಗೆ ಬರುತ್ತಾನೆ, ಮಧ್ಯಾಹ್ನ ಇಲ್ಲಿಗೆ ಊಟಕ್ಕೆ ಬರುತ್ತಾನೆ.’ ಎಂಬುದಾಗಿ ಅಮ್ಮ ಹೇಳಿದ್ದರು.

ಶಾಲೆಗೆ ಹೋಗುವ ಮಕ್ಕಳ ಬಗ್ಗೆ ನನಗೆ ಆಗ ಎಲ್ಲಿಲ್ಲದ ಕುತೂಹಲ. ‘ಅವನು ಶಾಲೆಯಲ್ಲಿ ಎಷ್ಟನೇ ನಂಬರ್(ರ್ಯಾಂಕ್) ಬರುತ್ತಾನೆ?’ ಅಂತ ನಾನು ಕೇಳಿದ್ದಕ್ಕೆ ಅಮ್ಮ ಹೇಳಿದ್ದರು ‘ಅವನು ನಾಲ್ಕನೆಯ ಕ್ಲಾಸಲ್ಲಿ ಫೇಲ್ ಆಗಿದ್ದನಂತೆ, ಆದರೂ ಅವರ ಕ್ಲಾಸಿನಲ್ಲಿ ಮೂರೇ ಜನರಿದ್ದ ಕಾರಣ ಅವನಿಗೇ ಮಾಸ್ತರು ಮೂರನೇ ನಂಬರ್ ಕೊಟ್ಟಿದ್ದಾರಂತೆ’ ಅಂತ ಜಯರಾಮನೇ ಅಮ್ಮನಿಗೆ ಹೇಳಿದ ವಿಚಾರವನ್ನು ಹೇಳುವಾಗ ಅಮ್ಮ ಬಾಯಿಗೆ ಕೈಯಿಟ್ಟುಕೊಂಡಿದ್ದರಿಂದ ಅವರು ನಕ್ಕಿದ್ದರೋ ಇಲ್ಲವೋ ಗೊತ್ತಿಲ್ಲ.

ನನಗೆ ಮಾತ್ರ ಜಯರಾಮ ದೇವರ ಹಾಗೆ ಆಗಾಗ ನೆನಪಾಗುವುದು ಸುಳ್ಳಲ್ಲ. ಜಯರಾಮ ಖಂಡಿತವಾಗಿಯೂ ಈಗೊಬ್ಬ ಸದ್ ಗೃಹಸ್ಥನಾಗಿರುತ್ತಾನೆ ಎನ್ನುವ ನನ್ನ ಭಾವನೆ ಖಂಡಿತ ಸುಳ್ಳಾಗದಿರಲಿ ಅಂತ ದೇವರಲ್ಲಿ ನನ್ನ ಪ್ರಾರ್ಥನೆ.

ಚಿಕ್ಕವಳಿರುವಾಗ ದೇವರಿಗೆ ಪೂಜಿಸಲು(ಲೇಪಿಸಲು) ತೇಯ್ದಿಟ್ಟ ಗಂಧವನ್ನು ಮೈತುಂಬ ಬಳಿದುಕೊಂಡು ಅಮ್ಮನ ಹತ್ತಿರ ಬೈಸಿಕೊಳ್ಳುವುದೆಂದರೆ ನನಗೆ ತುಂಬ ಪ್ರಿಯವಾದ ಕೆಲಸವಾಗಿತ್ತು ಮತ್ತು ಅಮ್ಮ ‘ಹಣೆಗೆ ಮಾತ್ರ ಹಚ್ಚಿಕೋ’ ಅಂತ ಎಷ್ಟೇ ಬೈದರೂ ಗಂಧಬಟ್ಟಲಿನಲ್ಲಿ ಅಜ್ಜ ತೇಯ್ದಿಟ್ಟ ಗಂಧ ಖಾಲಿಯಾಗುವ ತನಕ ಮೈ ತುಂಬ ಬಳಿದುಕೊಳ್ಳುವುದನ್ನು ಬಿಡುತ್ತಿರಲಿಲ್ಲ. ಅದಕ್ಕಾಗಿಯೇ ಇರಬೇಕು ಅಜ್ಜ ಬೆಳಿಗ್ಗೆ ದೇವರ ಪೂಜೆ ಮಾಡುವಾಗ ನಸುನಗುತ್ತ ಒಂದಿಷ್ಟು ಗಂಧವನ್ನು ಜಾಸ್ತಿಯೇ ತೇಯ್ದಿಡುತ್ತಿದ್ದರು.

ನಾನು ಮೈಗೆಲ್ಲ ಗಂಧ ಬಳಿದುಕೊಂಡು ಉಳಿದ ಗಂಧವನ್ನು ಮನೆಯಲ್ಲಿರುವವರಿಗೆಲ್ಲ ‘ಸ್ವಲ್ಪ ಹಚ್ಚಲಾ, ಸ್ವಲ್ಪ ಹಚ್ಚಲಾ’ ಅಂತ ಒತ್ತಾಯ ಮಾಡಿ ಕಡೇ ಪಕ್ಷ ಮನೆಯವರೆಲ್ಲರ ಹಣೆಗಾದರೂ ಬಳಿದಾಗಲೂ ಬಟ್ಟಲಲ್ಲಿ ಹೆಚ್ಚುಳಿದ ಗಂಧ ನೋಡಿ ಯಾರಿಗಾದರೂ ಹಚ್ಚಬೇಕು ಎನ್ನಿಸಿ ‘ಯಾರಿಗೆ ಬಳಿಯಲಿ ಇದಿಷ್ಟು ಗಂಧವನ್ನು..’ ಎನ್ನುವ ಪ್ರಶ್ನೆ ಹೊತ್ತು ಯೋಚಿಸುತ್ತ ಗಂಧಬಟ್ಟಲನ್ನು ಹಿಡಿದೇ ಮನೆತುಂಬ ಓಡಾಡುತ್ತಿದ್ದೆ. ಹಾಗಂತ ಮನೆಮಂದಿಗೆಲ್ಲ ಮೈಗೆ ಬಳಿಯಲು ಹೋದರೆ ಬೈಸಿಕೊಂಡೇನು ಎನ್ನುವ ಭಯವೂ ಕಾಡಿ ಗಂಧಬಟ್ಟಲನ್ನು ಹಿಡಿದು ಮನೆಒಳಹೊರಗೆಲ್ಲ ಅಲೆದಾಡುತ್ತಲಿರುವ ದಿನಗಳಲ್ಲಿ ದೇವರ ಹಾಗೆ ಸಿಕ್ಕವನೇ ಈ ಜಯರಾಮ.

ಜಯರಾಮ ದಿನಾಲೂ ಮಧ್ಯಾಹ್ನ ಊಟವಾದ ನಂತರ ಶಾಲೆಗೆ ಹೊರಡುವ ಸಮಯದತನಕ ನಮ್ಮ ಮನೆಯ ಎದುರುಬಾಗಿಲಿಗೆ ಅಂಟಿಕೊಂಡಿರುವ ಮೆಟ್ಟಿಲಿನ ಮೇಲೆ ಕುಳಿತಿರುತ್ತಿದ್ದ. ಅವನು ಶಾಲೆಯ ಸಮವಸ್ತ್ರ ಅಂದರೆ ಬಿಳಿ ಅಂಗಿ ಹಾಗೂ ನೀಲಿಯ ಚಡ್ಡಿ ಧರಿಸಿರುತ್ತಿದ್ದ. ಮೊದಲು ಗಂಧವನ್ನು ಜಯರಾಮನ ಮುಖಕ್ಕೆ ಬಳಿಯುತ್ತಿದ್ದೆ. ನಗುತ್ತಲೇ ಬಳಿಸಿಕೊಳ್ಳುತ್ತಿದ್ದ. ಆನಂತರ ಅವನು ತೊಟ್ಟಿದ್ದ ಬಿಳಿಅಂಗಿಯ ಅರ್ಧ ತೋಳಿನ ನಂತರ ಖಾಲಿ ಇರುತ್ತಿದ್ದ ಅವನ ತೋಳಿಗೆ, ಅವನ ಪಾದದಿಂದ ಮೊಣಕಾಲಿನತನಕವೂ ಗಂಧ ಬಳಿಯುತ್ತಿದ್ದೆ.

ಆ ಸಂಧರ್ಭದಲ್ಲಿ ನನ್ನ ಅಮ್ಮ ಏನಾದರೂ ನಾನು ಹೀಗೆ ಜಯರಾಮನ ಕೈ ಕಾಲ್ಗಳಿಗೆಲ್ಲ ಗಂಧ ಬಳಿಯುತ್ತಿದ್ದುದನ್ನು ನೋಡಿದರೆ ಜಯರಾಮನಿಗೂ ‘ಜಯರಾಮ..ನೀನು ಸುಮ್ಮನೆ ಕುಳಿತಿರ್ಬೇಡ, ಮೈಗೆಲ್ಲ ಹಚ್ಚಬೇಡ ಅಂತ ನೀನವಳಿಗೆ ಹೇಳದಿದ್ರೆ ಅವಳಿಗೆ ಗೊತ್ತಾಗೋಲ್ಲ, ನಿನ್ನ ಮೈ ಪೂರ್ತಿ ಗಂಧಮಯ ಮಾಡಿಬಿಡ್ತಾಳೆ’ ಅಂತ ಅವನಿಗೂ ಹೇಳಿಕೊಡುತ್ತಿದ್ದರು. ನನಗೆ ಅಮ್ಮನ ಮೇಲೆ ಕೋಪ ಬರುತ್ತಿತ್ತು, ಅಮ್ಮ ಹೀಗೆಲ್ಲ ಜಯರಾಮನಿಗೆ ಹೇಳಿಕೊಟ್ಟು ನಾಳೆಯಿಂದ ಜಯರಾಮನೂ ಗಂಧ ಬಳಿಸಿಕೊಳ್ಳದೇ ಹೋದರೆ...ಅಂತ ತುಂಬ ಬೇಸರವಾಗಿ ಅಳು ಬರುತ್ತಿತ್ತು. ಜಯರಾಮ ಮಾತ್ರ ಮಾತನಾಡದೇ ಗಂಧ ಬಳಿಸಿಕೊಳ್ಳುತ್ತಿದ್ದ. ಅವನು ಶಾಲೆಗೆ ಹೊರಡುವಷ್ಟರಲ್ಲಿ ಗಂಧ ಆರಿ ಬಿಳಿ ಬಿಳಿಯಾಗಿರುತ್ತಿತ್ತು. ಅವನು ಒಂದಿಷ್ಟೂ ಬೇಸರಿಸಿಕೊಳ್ಳದೇ ನಗುತ್ತಲೇ ಅದನ್ನಿಟ್ಟುಕೊಂಡು ನನಗೆ ಟಾಟಾ ಹೇಳಿ ಶಾಲೆಗೆ ಹೋಗುತ್ತಿದ್ದ. ಅವನು ಶಾಲೆಗೆ ಹೊರಡುವಾಗ ನನ್ನ ಅಮ್ಮ ‘ಜಯರಾಮ, ಆ ಗಂಧವನ್ನ ತೊಳೆದುಕೊಂಡಾದರೂ ಹೋಗೋ ಪುಟ್ಟಾ’ ಅಂತ ಹೇಳಿದರೂ ‘ಬೇಡ, ಹಿಂಗೇ ಇರ್ಲಿ’ ಅನ್ನುತ್ತ ನಡೆಯುತ್ತಿದ್ದ. ಹಾಗೆಯೇ ಎರಡು ವರ್ಷ ಇದೇ ದಿನಚರಿ ನಡೆದು ಅವನು ಏಳನೆಯ ತರಗತಿ ಮುಗಿಸಿಹೋದವನು ಈಗೆಲ್ಲಿದ್ದಾನೋ ಗೊತ್ತಿಲ್ಲ.

ತಮಾಷೆಗೆ ಹೇಳುತ್ತಿಲ್ಲ. ನನಗೆ ಈಗಲೂ ಗಂಧವನ್ನು ನೋಡಿದಾಗ ಜಯರಾಮನದೇ ನೆನಪಾಗುತ್ತದೆ. ನಾನು ಬಳಿದ ಗಂಧವನ್ನು ಹಾಗೆಯೇ ಆರಲು ಬಿಟ್ಟು ಒಂದಿನಿತೂ ಬೇಸರಿಸದೇ ಶಾಲೆಗೆ ಹೋದಾಗ ಮೈತುಂಬ ಗಂಧ ಬಳಿದುಕೊಂಡು ಬಂದದ್ದಕ್ಕಾಗಿ ಜಯರಾಮನಿಗೆ ಮಾಸ್ತರು ಬೈದಿರಲಿಲ್ಲವಾ, ಅವನ ತರಗತಿಯ ಹುಡುಗ ಹುಡುಗಿಯರು ಅವನನ್ನು ನೋಡಿ ನಕ್ಕಿರಲಿಲ್ಲವ, ಆ ಬಗ್ಗೆ ಪ್ರಶ್ನಿಸಿರಲಿಲ್ಲವ, ಅವನು ಎಲ್ಲಿರಬಹುದು, ಈಗ ಏನು ಮಾಡುತ್ತಿರಬಹುದು, ಚೆಂದದ ಸಂಸಾರಸ್ಥನಾಗಿ ಬಾಳ್ವೆ ಮಾಡುತ್ತಿರಬಹುದು, ಅವನಿಗೂ ಗಂಧ ನೋಡಿದಾಗ ನನ್ನ ನೆನಪಾಗಬಹುದಾ, ಅವನು ನಮ್ಮನೆಯಲ್ಲಿ ಊಟಮಾಡುತ್ತಿದ್ದನೆಂಬ ಸಂಕೋಚಕ್ಕೆ ಗಂಧವನ್ನು ಬಳಿಸಿಕೊಳ್ಳುತ್ತಿದ್ದನಾ, ಅಂತೆಲ್ಲ ಅನ್ನಿಸಿ ಅವನು ಸಿಕ್ಕರೆ ಕ್ಷಮೆಕೇಳಬೇಕು ಅಂತೆಲ್ಲ ಅಂದುಕೊಳ್ಳುತ್ತೇನೆ. ಹಿಂದೆಯೇ ಗಂಧವನ್ನು ಕೈಕಾಲುಗಳಿಗೆಲ್ಲ ಬಳಿಸಿಕೊಳ್ಳುವಾಗ ಇಲ್ಲಿ ಹಚ್ಚು ಇಲ್ಲಿ ಹಚ್ಚು ಅಂತ ಗಂಧ ಹಚ್ಚಲು ಅನುಕೂಲವಾಗುವಂತೆ ಅವನು ತನ್ನ ಮೊಣಕಾಲು ಹಾಗೂ ಮೊಣಕೈಗಳನ್ನು ತಿರುವಿಟ್ಟುಕೊಂಡು ಮೆಟ್ಟಿಲಿನ ಮೇಲೆ ಕೂರುತ್ತಿದ್ದುದು ನೆನಪಾಗಿ ಯಾವುದೇ ಸಂಕೋಚಕ್ಕಾಗಿ ಅವನು ಗಂಧ ಬಳಿಸಿಕೊಳ್ಳುತ್ತಿರಲಿಲ್ಲ, ಪ್ರೀತಿಯಿಂದಲೇ ಬಳಿಸಿಕೊಳ್ಳುತ್ತಿದ್ದನೇನೋ ಅನ್ನಿಸಿ ಸಮಾಧಾನವಾಗುತ್ತದೆ.

ದೇವರಂಥ ಮೌನಿ, ಸದ್ಗುಣಿ ಜಯರಾಮನಿಗೆ ದಿನಾಲೂ ಗಂಧಾರ್ಚನೆ ಮಾಡಿದ್ದೆನಲ್ಲ, ಅವನು ದಿನವೂ ನನ್ನನ್ನು ಹರಸಿದುದೂ ಸಹ ಕಾರಣವಾಗಿರಬೇಕು ಇವತ್ತು ನಾನು ಖುಷಿಯಲ್ಲಿ ಆರಾಮವಾಗಿರುವುದಕ್ಕೆ.

ಹಾಗೆಯೇ ಜಯರಾಮನೂ ಖುಷಿಯಲ್ಲಿ ಸದ್ಗೃಹಸ್ಥನಾಗಿ ಬಾಳ್ವೆ ನಡೆಸುತ್ತಿರಲಿ ಅಂತ ಆವತ್ತು ಗಂಧ ಬಳಿಸಿಕೊಂಡ ದೇವರಂಥ ಜಯರಾಮನಲ್ಲೇ ಕೇಳಿಕೊಳ್ಳುತ್ತೇನೆ.

ಎಲ್ಲವೂ ಒಳಿತಾಗಲಿ, ವಂದನೆಗಳು.

January 3, 2009

ಹೊಸ ವರ್ಷದಿ ಹಳೆಯ ನೆನಪು

ಹೊಸವರ್ಷ ಆರಂಭವಾಗುವ ಮುನ್ನಾದಿನ ಅಂದರೆ ಡಿಸೆಂಬರ್ ಮೂವತ್ತೊಂದರ ರಾತ್ರಿ ಈ ಸಲ ತುಂಬ ವಿಶೇಷವಾಗಿ ಕಳೆಯಿತು. ಏನೆಂದರೆ ನಾವು ನಾಲ್ಕೈದು ಜನ ಕುಳಿತು ಹಳೆಯ ಸುಂದರ ನೆನಪಿನ ಹಂದರವನ್ನು ಹರವುತ್ತ ಕುಳಿತೆವು. ಮಧ್ಯೆ ಕೇಕ್, ಮಂಡಕ್ಕಿ, ಚಹ ಸಂತರ್ಪಣೆಯೂ ಆಯಿತು. ಸವಿ ಸವಿ ನೆನಪಿನೊಂದಿಗೆ ಖಾರದ ಮಂಡಕ್ಕಿ ಮೆಲ್ಲುತ್ತ, ಬಿಸಿ ಬಿಸಿ ಟೀ ಹೀರುವಾಗ ಆ ಖುಷಿ ಹೇಳಲಸಾಧ್ಯ.

ನಿದ್ರೆಗೆ ಒಂದೆರಡು ತಾಸು ಅವಕಾಶ ಕೊಡಬೇಕು ಅಂತ ನೆನಪುಗಳನ್ನ ಸವಿಮಡಿಕೆಯೊಳಗೆ ಮತ್ತೆ ಮಡಚಿಟ್ಟು ಹೊರಟೆವು. ಮನೆಗೆ ಬಂದಾಗ ಬೆಳಗಿನ ಜಾವ ಮೂರು ಗಂಟೆ ಮೂವತ್ತು ನಿಮಿಷ. ಮತ್ತೆ ನಾವಿಬ್ಬರೇ ಕುಳಿತು ಎರಡು ತಾಸು ಕೆಲವು ನಮ್ಮ ನಡುವಿನ ನವಿರು ನೆನಪುಗಳನೆಲ್ಲ ನೇವರಿಸುತ್ತ ಕುಳಿತೆವು.

ಮರೆತುಹೋದಂತಿದ್ದ, ಆದರೆ ಮರೆಯಲಾಗದ ಹದಿಮೂರು ವರ್ಷಗಳ ಹಿಂದಿನ ದಿನಗಳನ್ನೇ ನೆನಪಿಸಿಕೊಡೆವು.

* ಆಗಷ್ಟೇ ನಾನು ಕಾಲೇಜಿಗೆ ಸೇರಿದ ದಿನಗಳವು. ಫೈನಲ್ ಈಯರ್ ಹುಡುಗರು ಪಿ.ಯು ಕ್ಲಾಸ್ ಗಳು ಮುಗುಯುತ್ತಿದ್ದಂತೆ ಕ್ಲಾಸ್ ರೂಮಿನ ಬಾಗಿಲಿಗೆ ಸುತ್ತುಗಟ್ಟಿಬಿಡುತ್ತಿದ್ದರು. ಹೇಗೋ ಕಷ್ಟಪಟ್ಟು ಹೊರಗೆ ಬಂದಾಗ ಹಣೆಯಲ್ಲೆಲ್ಲ ಬೆವರು ಹನಿಗಟ್ಟಿರುತ್ತಿತ್ತು. ಕಾಲೇಜಿನ ರೂಮ್ ನಂಬರ್ ಎಂಟರಲ್ಲಿ ಎಕಾನಾಮಿಕ್ಸ್ ಕ್ಲಾಸ್ ಮುಗಿಸಿ ಹೊರಗೆ ಬರುವ ಯತ್ನದಲ್ಲಿದ್ದೆವು. ಗೆಳತಿಯೊಬ್ಬಳ ಹಣೆಯಲ್ಲಿ ಬಿಂದಿಯಿರಲಿಲ್ಲ, ಹುಡುಗರ ಗುಂಪಿನಿಂದೊಬ್ಬ ಹೀಗೆ ಕೇಳಿದ ‘ಅಯ್ಯೋ...ಇಷ್ಟ್ ಲಗು ಆನು ಸತೋಜಿ ಮಾಡ್ಕ್ಯಂಡ್ಯನೆ?’ (ಇಷ್ಟು ಬೇಗ ನಾನು ಸತ್ತು ಹೋದೆ ಅಂದುಕೊಂಡೆಯ?)

* ಗೆಳತಿಯರೆಲ್ಲ ಪ್ರಾಕ್ಟಿಕಲ್ ಮುಗಿಸಿ ಲ್ಯಾಬ್ ಇಂದ ಹೊರಬಂದಾಗ ಸಂಜೆ ಸುಮಾರು ಐದುಗಂಟೆಯಾಗಿರುತ್ತಿತ್ತು. ಆ ಸಮಯದಲ್ಲಿ ಹೆಚ್ಚಿನ ವಿಧ್ಯಾರ್ಥಿಗಳು ಕ್ಲಾಸ್ ಮುಗಿಸಿ ಮನೆಗೆ ಹೋಗಿರುತ್ತಿದ್ದರಾದ್ದರಿಂದ ಕಾಲೇಜು ಶಾಂತವಾಗಿರುತ್ತಿತ್ತು. ಹೀಗೆಯೇ ಲ್ಯಾಬ್ ಇಂದ ಹೊರಬಿದ್ದಾಗ ಅಲ್ಲಿ ಕೆಲವು ಫೈನಲ್ ಈಯರ್ ನ ಹುಡುಗರು ಭಿಕ್ಷುಕರ ಸೋಗು ಹಾಕಿ ‘ಐದು ಪೈಸೆ ಹಾಕಿ’ ಅಂತಲೋ ಏನೋ ಹೇಳುತ್ತ ಹುಡುಗಿಯರನ್ನು ಚುಡಾಯಿಸುತ್ತ ಕುಳಿತಿದ್ದರಂತೆ (ಸಂಭಾಷಣೆ ಸರಿಯಾಗಿ ನೆನಪಿಲ್ಲ) . ಆ ಮೇಲಿನಿಂದ ಫೈನಲ್ ಈಯರ್ ನ ಆ ಗುಂಪಿನಲ್ಲಿದ್ದ ಒಬ್ಬ ಹುಡುಗನಿಗೆ ‘ಐದು ಪೈಸೆಯವನು’ ಅನ್ನುವ ಬಿರುದು ಕೊಟ್ಟುಬಿಟ್ಟೆವು. ನಾವೇ ಕೆಲವು (ಪಿ ಯು)ಹುಡುಗಿಯರು ಮಾತಾಡಿಕೊಳ್ಳುವಾಗ ಅವನು ಯಾವತ್ತೂ ‘ಐದು ಪೈಸೆಯವನು’ ಆಗಿದ್ದ. ಬಿ ಎಸ್ ಸಿ ಡಿಗ್ರಿ ಪಡೆದು ಹೋದ ‘ಐದು ಪೈಸೆಯವನು’ ಆಮೇಲೆ ಕಾಣಲು ಸಿಗಲಿಲ್ಲ. ಬೇರೆ ಊರಿನಲ್ಲಿ ಓದು ಮುಂದುವರೆಸುತ್ತಿದ್ದಾನೆ ಎಂಬ ಯಾರೋ ಹೇಳಿದ ಸುದ್ದಿಯನ್ನು ನಾನು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳಲಿಲ್ಲ.

* ನಾವು ರೂಮ್ ಮಾಡಿಕೊಂಡಿದ್ದ ಬಿಲ್ಡಿಂಗ್ ಎದುರಗಡೆ ಅದೇ ಮಾಲೀಕರದ್ದು ಒಂದು ಶಾಪಿಂಗ್ ಕಾಂಪ್ಲೆಕ್ಸ್ ಇತ್ತು. ನಮ್ಮ ಬಿಲ್ಡಿಂಗ್ ಅಲ್ಲಿ ಬರಿಯ ಹುಡುಗಿಯರು ಮಾತ್ರ ಇರುತ್ತಿದ್ದ ಕಾರಣಕ್ಕೆ, ನಮ್ಮ ಭದ್ರತೆಗಾಗಿ ಆ ಶಾಪಿಂಗ್ ಕಾಂಪ್ಲೆಕ್ಸ್ ಅನ್ನು ಸಭ್ಯ ಜನಗಳಿಗೆ ಮಾತ್ರ ಬಾಡಿಗೆ ಕೊಟ್ಟಿದ್ದರು. ಅಲ್ಲಿದ್ದ ಕಿರಾಣಿ ಅಂಗಡಿಯಲ್ಲಿ ನಮಗೆ ಬೇಕಾದ ದಿನಸೀ ಪದಾರ್ಥಗಳನ್ನು ಕೊಳ್ಳುತ್ತಿದ್ದೆವು. ಹೀಗೆ ಒಂದು ದಿನ ಏನೋ ಕೊಳ್ಳಲು ಹೋದಾಗ ಅಂಗಡಿಯವರು ಒಂದು ಕಾಫಿ ಬೈಟ್ ಚಾಕಲೇಟ್ ಕೊಟ್ಟು ಇದನ್ನು ಇಂಥವರು ನಿಮಗೆ ಕೊಡಲು ಹೇಳಿದ್ದಾರೆ ಅಂತ ಕೊಟ್ಟರು. ಏನು ಮಾತನಾಡುವುದಂತ ಅರಿಯದೆ ಸುಮ್ಮನೆ ಚಾಕಲೇಟ್ ತಗೊಂಡು ಬಂದೆ. ರೂಮಿಗೆ ಬಂದವಳು ಗೆಳತಿಯರಿಗೆ ಹೇಳಿದೆ “ಆ ಐದು ಪೈಸೆಯವನು... ಅದೇ ಹೋದ್ವರ್ಷ ಕಾಲೇಜಿಗೆ ಬರ್ತಿದ್ನಲ್ಲ, ಅವನು ನಂಗೆ ಚಾಕಲೇಟ್ ಕೊಡಲಿಕ್ಕೆ ಹೇಳಿದ್ದಾನಂತೆ, ಅಂಗಡಿಯವರು ಕೊಟ್ರು, ಅಲ್ಲೆಲ್ಲ ಜನ ಇದ್ರು, ಏನು ಮಾಡ್ಬೇಕು ಗೊತ್ತಾಗ್ದೇ ತಗೊಂಡು ಬಂದೆ’ ಅಂತ ಹೇಳಿದೆ. ಗೆಳತಿಯರಿಗೆ ನನ್ನನ್ನು ಹಾಸ್ಯ ಮಡುವುದಕ್ಕೆ ಹೊಸ ಥರಹದ ವಿಷಯ ಸಿಕ್ಕಿತು, ತುಂಬ ಕಾಡಿಸಿದರು.
ಅದೇನೋ ಗಾದೆ ಇದೆಯಲ್ಲ, ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣಸಂಕಟ ಅನ್ನುವ ಹಾಗಾಯಿತು. ಆದರೂ ಗೆಳತಿಯರು ನನ್ನನ್ನು ಕಾಪಾಡುತ್ತಾರೆ ಎನ್ನುವ ಭರವಸೆ ಇದ್ದೇ ಇತ್ತು.
‘ ಅಲ್ಲಾ..ಅವನಿಗೆ ಚಾಕಲೇಟ್ ಕೊಡೋಕೆ ಬೇರೆ ಯಾರೂ ಸಿಕ್ಲಿಲ್ವ? ನಿನ್ ಹತ್ರ ಅವನು ಒಂದು ಸಲ ಮಾತಾಡಿದ್ರೆ ಕೊಟ್ಟಿರೋ ಚಾಕಲೇಟನ್ನೂ ವಾಪಸ್ ತಗೊಂಡು ಹೋಗ್ತಿದ್ದ. ನೀನು ನಿಧಾನಕ್ಕೆ ಮಾತಾಡುವಷ್ಟರಲ್ಲೇ ಅವನಿಗೆ ಬೇಸರ ಬಂದು ಬಿಡ್ತಾ ಇತ್ತು’ ಅಂತೆಲ್ಲ ನಕ್ಕಾಗ ಹೌದೆನಿಸಿತು. ಯಾಕೆಂದರೆ ನಾನಾಗ ತುಂಬ ಕಡಿಮೆ ಮಾತನಾಡುತ್ತಿದ್ದೆ. ಆಡಿದರೂ ಅದು ತುಂಬ ನಿಧಾನಕ್ಕೆ. ತುಂಬ ಅವಸರದಲ್ಲಿರುವವರು ನನ್ನನ್ನ ಮಾತನಾಡಿಸುತ್ತಲೇ ಇರಲಿಲ್ಲ.

*ಮತ್ತೆ ಮರುದಿನವೂ ಚಾಕಲೇಟ್ ಸಿಕ್ಕಿತು. ಆ ಮರುದಿನವೂ. ನನಗೆ ಕೋಪ ಬಂದರೂ ಚಾಕಲೇಟ್ ವಿಷಯವಾದ್ದರಿಂದ ತೋರಿಸಿಕೊಳ್ಳುವ ಹಾಗಿರಲಿಲ್ಲ. ಯಾಕೆಂದರೆ ಪುಕ್ಕಟೆ ಸಿಗುತ್ತಿರುವ ನನ್ನಿಷ್ಟದ ಚಾಕಲೇಟ್ ಬಿಡಲು ನಿಜವಾಗಿಯೂ ನನಗೆ ಮನಸಿರಲಿಲ್ಲ. ಕೋಪವನ್ನಾಗಲೀ ಅಥವಾ ಚಾಕಲೇಟ್ ಮೇಲಿನ ಪ್ರೀತಿಯನ್ನಾಗಲೀ ತೋರಿಸಿಕೊಳ್ಳದೆ ಅಂಗಡಿಯವರಿಗೆ ಹೇಳಿದೆ ‘ಅವರು ಎಷ್ಟು ಚಾಕಲೇಟ್ ಕೊಡಲಿಕ್ಕೆ ಹೇಳಿದ್ದಾರೋ..ಅಷ್ಟೂ ಚಾಕಲೇಟ್ ಅನ್ನು ಇವತ್ತೇ ಕೊಟ್ಟು ಬಿಡಿ’ ಅಂದೆ. ಹೀಗೆ ಹೇಳುವಾಗ ನನ್ನ ಮೂವರು ಗೆಳತಿಯರೂ ಜೊತೆಯಲ್ಲಿಯೇ ಇದ್ದರಾದ್ದರಿಂದ ಹೆಚ್ಚು ಧೈರ್ಯ ಬಂದಿತ್ತು. ಅಂಗಡಿಯವರು ‘ದಿನಾ ಒಂದೊಂದೇ ಚಾಕಲೇಟ್ ಕೊಡಕ್ಕೆ ಹೇಳಿದಾರೆ’ ಅಂದರು. ಸುಮ್ಮನೆ ಒಂದು ಚಾಕಲೆಟ್ ತಗೊಂಡು ಬ್ಯಾಗಲ್ಲಿ ಇಟ್ಟುಕೊಂಡೆ. ನಾಲ್ಕುದಿನವಾದ ಬಳಿಕ ಗೆಳತಿಯರಿಗೂ ಒಂದೊಂದು ಚಾಕಲೇಟ್ ಕೊಟ್ಟು ತಿನ್ನುವುದು ನನ್ನ ಹುನ್ನಾರವಾಗಿತ್ತು. ಈ ಕಡೆ ಬಂದಾಗ ಗೆಳತಿಯರು ‘ಈ ಚಾಕಲೇಟನ್ನ ಐದು ಪೈಸೆಯವನೇ ಕೊಡ್ತಿದಾನ, ಅಥ್ವ ಅಂಗಡಿಯವರೇ ಕೊಡ್ತಿದಾರ, ಸ್ವಲ್ಪ ವಿಚಾರಿಸ್ಬೇಕು ’ ಅಂದರು. ನನಗಾಗಲೇ ದಿನಾ ಒಂದು ಕಾಫಿ ಬೈಟ್ ಚಾಕಲೇಟ್ ತಿಂದು ಅಭ್ಯಾಸವಾಗಿದ್ದ ಕಾರಣ ‘ಯಾರು ಕೊಟ್ರೆ ನಮಗೇನು, ಚಾಕಲೇಟ್ ಮುಖ್ಯ ಬಿಡ್ರೆ’ ಅಂದುಬಿಟ್ಟೆ. ನನ್ನಂಥ ನಾನೂ ಹೀಗೆ ಹೇಳಿದಾಗ ಗೆಳತಿಯರು ತಲೆದೂಗಲೇ ಬೇಕಾಯಿತು. ಗೆಳತಿಯರಿಗೂ ನಾನೇನು ಮಾಡಿದರೂ ಸಭ್ಯ ಕೆಲಸವನ್ನಷ್ಟೇ ಮಾಡುತ್ತೇನೆಂಬ ನಂಬಿಕೆ ಮೊದಲೇ ಬೇರೂರಿತ್ತಾದ್ದರಿಂದ ಇಲ್ಲಿಯೂ ಸಭ್ಯತೆಯೇ ಕಾಣಿಸಿತೇನೋ, ಸುಮ್ಮನಾಗಿಬಿಟ್ಟರು. ನಾಲ್ಕು ದಿನವಾದ ಮೇಲೆ ಚಾಕಲೇಟ್ ಹಂಚಿ ತಿಂದೆವು. ವಿಷ ಗಿಷ ಹಾಕಿದ್ದಾರಾ ಅಂತ ಚೆಕ್ ಮಾಡಿ ಹಾಗೆ ಮಾಡಿರಲಿಕ್ಕಿಲ್ಲ ಅನ್ನಿಸಿ ತಿಂದುಬಿಟ್ಟೆವು. ಅಲ್ಲದೆ ಆವತ್ತು ಐದು ಪೈಸೆಯವವನಿಗೆ ಪ್ರಮೋಶನ್ ಕೊಟ್ಟು ‘ಕಾಫಿ ಬೈಟ್’ ಎಂಬುದಾಗಿ ಮರುನಾಮಕರಣಮಾಡಿದೆವು. ಆಗಾಗ ಅವನ ಹೆಸರಲ್ಲಿ ಸಿಗುತ್ತಿದ್ದ ಕಾಫಿ ಬೈಟ್ ಮಾತ್ರ ಖುಷಿಯಲ್ಲಿ ತಿನ್ನುತ್ತಿದ್ದೆ. ಅವನು ಯಾವ ಊರಲ್ಲಿದ್ದಾನೆ ಅಂತ ವಿಚಾರಿಸುವ ಗೋಜಿಗೂ ಹೋಗಲಿಲ್ಲ.
************




ಐದು ವರ್ಷಗಳ ನಂತರ ನನ್ನ ವಿವಾಹ ನಿಶ್ಚಯವಾಗಿ ಮದುವೆ ಮಂಟಪದಲ್ಲಿ ಅದೇ ಕಾಫಿ ಬೈಟ್ ಹುಡುಗನ ಮುಂದೆ ತಲೆ ಬಾಗಿ, ಕತ್ತು ಬಗ್ಗಿಸಿ, ಕುತ್ತಿಗೆಯೊಡ್ಡಿ ನಿಂತಿದ್ದೆ. ಆಗಲೂ ಬೇಸರವಾಗಲಿಲ್ಲ. ಕಾಫಿ ಬೈಟ್ ತಿಂದ ಋಣ ನನ್ನ ಮೇಲಿತ್ತಲ್ಲ. ಮತ್ತೆ ಖುಷಿಯಾಯಿತು.

ಎಲ್ಲರಿಗೂ ಹೊಸ ವರ್ಷ ಇನ್ನಷ್ಟು ಶುಭ ತರಲಿ. ವಂದನೆಗಳು.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

ಖಾಲಿ ಕಣಜ

.