July 11, 2009

ಹಕ್ಕಿಗರಿಯಂತೆ ಹಾರಿ ಸೇರಲಿ...

ಸ್ವಲ್ಪ ಇರು , ನಿನ್ನ ಪತ್ರಕ್ಕೆ ನನ್ನ ಉತ್ತರ ಯಾಕಿಲ್ಲ ಅಂತ ನಿನಗೆ ಹೇಳಿಬಿಡುತ್ತೇನೆ. ಆವತ್ತು ಬೆಳಗಾಯಿತಾ... ಬೆಳಗಿನಲ್ಲೇನಿದೆ ವಿಶೇಷ ಅಂತ ಕೇಳುವುದು ಬೇಡ. ಬೆಳಗಾಯಿತು ಅಷ್ಟೇ... ಅಂತ ಹೇಳಿಬಿಡಲಿಕ್ಕಾಗುವುದಿಲ್ಲ. ಸೂರ್ಯ ಬಂದ ಬೆಳಗಾಯಿತು. ಅಷ್ಟೇನಾ ಬೆಳಗು? ಹೋಗಲಿಬಿಡು, ಬೆಳಗಾದರೆ ಬರುತ್ತಾನಲ್ಲ ಈ ಸೂರ್ಯ, ಇವನಿಗಿಂತ ನನಗೆ ಚಂದ್ರ ಇಷ್ಟವಾಗುತ್ತಾನೆ. ಯಾಕೇಂತ ಕೇಳು, ಹೇಳುತ್ತೇನೆ. ಈ ಸೂರ್ಯ ಹಗಲಿಗೆ ಬರುತ್ತಾನೆ. ಕತ್ತಲಾಗುತ್ತಿದ್ದಂತೆ ಕಾಣೆಯಾಗುತ್ತಾನೆ! ಚಂದಿರನಾದರೆ ಹಾಗಲ್ಲ ನೋಡು, ಕತ್ತಲೆಯ ರಾತ್ರಿಗೆ ಬೆಳಕಾಗಿ ಬರುತ್ತಾನೆ. ಅದಕ್ಕೆ ನನಗವನು ಇಷ್ಟ. ತಾರೆಗಳನ್ನ ಹರವಿಕೊಂಡು ಅಂಗಡಿ ಹಾಕಿಕೊಂಡು ಕುಳಿತಿದ್ದ ಚಂದಿರನ ಅರ್ಧ ಭಾಗ ಕಿಟಕಿಯ ಪರದೆಯೊಳಗಿಂದಾಚೆ ಕಾಣುತ್ತಿತ್ತಾ...ನೋಡುತ್ತ ನಿದ್ರೆ ಹೋಗೋಣವೆಂದರೆ ನಿದ್ರೆ ಬಾರದೇ ಇರುವ ಹಾಗಿನಂತದ್ದೇ ಕನಸು.

ಬೆಳಗಾಯಿತು. ಗಳಿಗೆ ಸರಿಯುವುದೇ ಇಲ್ಲ. ಅವರೆಲ್ಲ ಬರುವವರಿದ್ದರು. ಆಕಾಶದಲ್ಲಿ ಹಾರಿಕೊಂಡು ಬರುವವರಿದ್ದರು. ಅವರು ಭೂಮಿಗೆ ಇಳಿಯುವ ಗಳಿಗೆಗಾಗಿ ನಾನು ಕಾಯುತ್ತಿದ್ದೆ. ಭೂಮಿಯಲ್ಲಿದ್ದವರೇ ಆಗಸದಲ್ಲಿ ಹಾರಿಬರುವ ಕ್ಷಣಕ್ಕಾಗಿ ಕಾಯುವ ಗಳಿಗೆಯೇ ಈಷ್ಟುದ್ದವಾಗಿರುವಾಗ ಭೂಮಿಗೆ ಹೊಸತಾಗಿ ಕಾಲಿಡುವ ಚಿಲುಮೆಗೆ ಕಾಯುತ್ತ ಕುಳಿತ ಅಪ್ಪ ಅಮ್ಮಂದಿರು ಕಾಯುತ್ತ ಕಳೆವ ಆ ಗಳಿಗೆ ಇನ್ನೆಷ್ಟುದ್ದವೋ ಅಂತೆಲ್ಲ ಅಸಂಗತ ಯೋಚನೆಗಳ ನಡುವೆ ದಾಲ್ ಮಾಡಲಿಕ್ಕಾಗಿ ತೊಳೆದ ತೊಗರಿಬೇಳೆಗಿಷ್ಟು ಹೆಸರು ಬೇಳೆ ಸೇರಿಸಿ ಕುಕ್ಕರ್ ಇಟ್ಟೆ. ಈವತ್ತು ಕುಕ್ಕರ್ ಸಹ ಕೂಗಲಿಕ್ಕೆ ತಡ ಮಾಡುತ್ತಿದೆ. ಅದಕ್ಕೂ ಗೊತ್ತಾಗಿಬಿಟ್ಟಿದೆ ಯಾರೋ ಬರಲಿದ್ದಾರೆ ಅಂತ. ಹನ್ನೆರಡುಗಂಟೆಯ ಹೊತ್ತಿಗೆ ಅಮ್ಮ ಮಾಡಿದ ಸಕ್ಕರೆ ಒಬ್ಬಟ್ಟಿನ ಘಮ ಆವರಿಸಿಕೊಳ್ಳುವುದಕ್ಕೂ ಕುಕ್ಕರ್ ಕೂಗುವುದಕ್ಕೂ ಸರಿಯಾಯಿತು. ಅಂದರೆ? ಬರುವವರಿದ್ದರಲ್ಲ, ಅವರು ಬಂದೇಬಿಟ್ಟರು ಅಂತಲ್ಲ. ಭೂಮಿಗೆ ಇಳಿದಿರಬೇಕು. ಭೂಮಿಗೆ ಇಳಿದ ಮೇಲೂ ಅವರಿಳಿದ ಜಾಗಕ್ಕೆ ನಲವತ್ತು ಮೈಲಿ ದೂರದಲ್ಲಿ ನಾನು ಕಾಯುತ್ತಿದ್ದೇನೆ. ನಾನಿರುವಲ್ಲಿಗೆ ಅವರು ಬರುವುದಕ್ಕೆ ಸ್ವಲ್ಪ ತಡವಿದೆ. ಬಂದವರು ಅಪ್ಪಾಮ್ಮ ಇರಬೇಕು ಎಂಬ ನಿನ್ನಾಲೋಚನೆ ಬದಿಗೊತ್ತಿ ಕೇಳು, ಬಂದವರು ಅಪ್ಪಾಮ್ಮ ಅಲ್ಲ, ಅತ್ತೆಮಾವ. ನೀನು ತಡಮಾಡಿದ್ದೇಕೆ, ಅವರಿಳಿದ ಜಾಗಕ್ಕೇ ನೀನು ಹೋಗಿ ಅವರನ್ನು ಬರಮಾಡಿಕೊಳ್ಳಬಹುದಿತ್ತಲ್ಲ! ಅಂತ ಕೇಳಿಬಿಡಬೇಡ. ಅವರು ಬರುವ ಹೊತ್ತಿಗೆ ಸ್ಯಾನ್ ಫ್ರಾನ್ಸಿಸ್ಕೋ ಕಡೆಯಿಂದ ಬಂದ ಗಾಳಿಗೆ ನಮ್ಮನೆಯ ದೇವರದೀಪ ಆರಿಹೋಗದ ಹಾಗೆ ನಾನು ಕಾಯ್ದುಕೊಳ್ಳುವುದಕ್ಕಾಗಿ ಮನೆಯಲ್ಲಿದ್ದೆ. ಅಷ್ಟೇ ಅಲ್ಲ. ಬಂದ ತಕ್ಷಣ ಬಾಗಿಲಲ್ಲಿ ನಿಂತು ಸ್ವಾಗತಿಸುವ ಜವಾಬ್ಧಾರಿಯನ್ನು ಸುಮಾರು ವರ್ಷಗಳ ಹಿಂದೆಯೇ ಕಲಿತುಕೊಂಡಿದ್ದೇನೆ.

ಅಲ್ಲಿಂದಿಲ್ಲಿಯ ತನಕ ಪ್ರೀತಿಯ ಹೊತ್ತು ಬಂದವರು ಇಲ್ಲಿಗೆ ಬಂದಾಗ ಸುಸ್ತಾಗಿದ್ದರು. ತಂದ ಪ್ರೀತಿಯೊಳಗೆ ಹಲಸು, ಮಾವು, ಸಾಟೆ, ಚಿಪ್ಸು, ಒಬ್ಬಟ್ಟುಗಳ ಪರಿಮಳವಿಟ್ಟು ತಂದಿದ್ದರು. ಅಮ್ಮ ತಾನು ಕಳಿಸಿದ ಸಾಂಬಾರ ಪುಡಿ, ಚಟ್ನಿಪುಡಿ, ಉಪ್ಪಿನಕಾಯಿ, ಮಾವಿನಕಾಯಿ ಕೆಂಪುಚಟ್ನಿಯ ಘಾಟು ಆರಿಸುವುದಕ್ಕಾಗಿ ಅವೆಲ್ಲವುಗಳ ಮೇಲೆ ಸಿಹಿಸಕ್ಕರೆ ಒಬ್ಬಟ್ಟನ್ನಿಟ್ಟು ಅದರೊಳಗೆ ಬೊಗಸೆ ಪ್ರೀತಿಯ ಸುರುವಿ ಕಳಿಸಿದ್ದರಿರಬೇಕು. ಭಾರವೇ ಆಗಿತ್ತು.
ಅತ್ತೆಮಾವ ತಂದ ಹೊಸಸೀರೆಯ ಮಡಿಕೆ ಬಿಡಿಸಿದರೆ ಅಮ್ಮ ಕಳಿಸಿದ್ದನ್ನು ಉಟ್ಟುಕೊಳ್ಳುವುದಾವಾಗಲೆಂಬ ಚಿಂತೆ. ಅರ್ಧ ಬ್ಯಾಗಿನ ತುಂಬ ಹೊಸಪುಸ್ತಕದ್ದೇ ಘಮ.

ಘಮವಾರುವುದರೊಳಗೆ ಓದಿಬಿಡಬೇಕೆಂಬ ತವಕ. ಈಗಷ್ಟೇ ಕರಿದಿಟ್ಟ ಹಪ್ಪಳದ ಹಾಗೆ ಪ್ರತಿಪುಟವೂ ಗರಿಗರಿ.

ಇದೆಲ್ಲ ಖುಷಿ ನನ್ನದೇ ಅಂದುಕೊಳ್ಳುವಾಗ ಮತ್ತಿಷ್ಟು ಸಂಭ್ರಮ. ಒಂದಿಷ್ಟು ಹೊತ್ತು ನಿನ್ನ ಮರೆತಿದ್ದು ಸುಳ್ಳಲ್ಲ. ನಿನ್ನನ್ನೇನು, ನನ್ನನ್ನೇ ಮರೆತಿದ್ದೆ. ಆ ಹೊತ್ತಿಗೆ ನೀನಿಲ್ಲದ್ದು ಒಳಿತೇ ಆಯಿತು. ಹೊಸಬಟ್ಟೆಗೆ, ಕುರುಕಲು ತಿಂಡಿಗೆಲ್ಲ ಖುಷಿಪಡುವುದನ್ನು ನೀ ಕಲಿತದ್ದು ಯಾವಾಗ ಅಂತ ನೀನು ನೊಂದುಕೊಳ್ಳುತ್ತಿದ್ದೆ. ಇದನ್ನೆಲ್ಲ ಖುಷಿಪಡುವುದು ಕಲಿತಿದ್ದೂ ಆವತ್ತೇ, ಆವತ್ತೆಂದರೆ ಪುಟ್ಟ ಬೆರಳು ಮಡಚಿ ಒಂದು ಎರಡು ಎಣಿಸುವಾಗಲೇ ಕಲಿತಿದ್ದಿದು. ಇನ್ನೂ ಮರೆಯಲಿಕ್ಕಾಗಲೇ ಇಲ್ಲ ನೋಡು. ನನ್ನ ಖುಷಿಕಂಡು ಅವರಿಗೆಷ್ಟು ಖುಷಿಯಾಯಿತು ಗೊತ್ತ! ಇದ್ದ ಸುಸ್ತಿಗೆ ನಿದ್ರಿಸದೇ ನನ್ನನ್ನೇ ನೋಡಿದರು. ಅವೆಲ್ಲವನ್ನೂ ನಾನು ನಿಧಾನಕ್ಕೆ ಒಳಗೆತ್ತಿಡುತ್ತಿದ್ದರೆ ಮನೆಯೊಳಗೆ ಹಬ್ಬ. ಅದರೆದುರು ಯಾವ ಚೌತಿಯೂ ಇರಲಿಲ್ಲ, ದೀಪಾವಳಿಯೂ ಇರಲಿಲ್ಲ.

ಇಷ್ಟೇ ಅಲ್ಲ, ನನ್ನ ಖುಷಿ ಹೇಳಿಮುಗಿವಷ್ಟಿಲ್ಲ. ಆದರೀಗ ಮುಗಿಸುತ್ತೇನೆ. ಮುನ್ನ ನಿನಗೊಂದು ವಿಷಯ ಹೇಳಬೇಕು. ನಿನ್ನ ಆಫೀಸಿಗೆ ಬಂದಿದ್ದೆ. ನಿನ್ನ ಜಾಗದಲ್ಲಿ ನೀನಿರಲಿಲ್ಲ. ಪಕ್ಕದ ಗೋಡೆಗೆ ನಾನು ಆನಿಸಿಟ್ಟು ಹೋಗಿದ್ದ ವಸ್ತು ಕಾಣಿಸದೇ ಸುತ್ತೆಲ್ಲ ತಡಕಾಡಬೇಕಾಯಿತು. ಕೊನೆಯಲ್ಲಿ ಅದು ನೀನು ಕುಳಿತುಕೊಳ್ಳುವ ಜಾಗದಲ್ಲಿದ್ದ ಟೇಬಲ್ಲಿಗಿದ್ದ ಡ್ರಾವರ್ ಎಳೆದಾಗ ಸಿಕ್ಕಿತು. ತೆಗೆದುಕೊಂಡು ಹೊರಡುವಾಗ ನಿನಗೆ ತಿಳಿಸಿ ಹೋಗೋಣವೆಂತಲೇ ನಿನಗಾಗೆ ಕಾದೆ. ತುಂಬ ಹೊತ್ತಾದರೂ ನೀನು ಬರಲೇ ಇಲ್ಲ. ಮತ್ತಷ್ಟು ಕಾಯುವುದಕ್ಕೆ ನನಗೆ ಪುರುಸೊತ್ತಿರಲಿಲ್ಲ. ನಾನು ಬರೆದ ಅಕ್ಷರ ನಿನಗೆ ಅರ್ಥವಾಗದಿರಲಿ ಅಂತಲೇ ನಿನಗೆ ಅರ್ಥವಾಗದ, ಆದರೆ ನನ್ನ ಪ್ರೀತಿಯ ಭಾಷೆಯನ್ನೇ ಬಳಸಿ ನಾಲ್ಕುಸಾಲು ಬರೆದೆ. ಅಲ್ಲಿಯೇ ಟೇಬಲ್ ಮೇಲೆ ನಿದ್ರಿಸಿದ್ದ ನಿನ್ನ ಮೊಬೈಲ್ ಅಡಿಯ ಆಸರೆಯಾಗಿ ನನ್ನ ಪತ್ರ ಇಟ್ಟಿದ್ದೇನೆ. ಹೇಗಾದರೂ ಓದುತ್ತೀಯ, ಅದನ್ನು ಓದಿ ಬ್ಲಾಗಿಗೆ ಬಂದೇ ಬರುತ್ತೀಯ, ಮತ್ತದೇ ಗುಂಡಗಿನ ನಿನಗರ್ಥವಾಗದ ಅಕ್ಷರಕ್ಕೆ ನಿನ್ನ ನಗು ಸಾಥ್ ಕೊಡುತ್ತದೆ. ಹಳೆ ಗೆಳೆಯರನ್ನು ಹುಡುಕು, ಅವರಲ್ಲಿ ನಿನಗಿದನ್ನು ಅರ್ಥಮಾಡಿಸುವವರಿದ್ದಾರೆ. ಅರ್ಥವಾದರೆ ನೀನು ಉತ್ತರ ಬರೆಯುವುದಿಲ್ಲ. ಅರ್ಥವಾಗದ ಪಕ್ಷ ಕುತೂಹಲಕ್ಕಾದರೂ ಅದೇನು ಬರ್ದಿದೀಯ, ಎರೆಡೆರಡು ಸಲ ಓದಿದೆ, ಯಾಕೋ ಏಕಾಗ್ರತೆ ಬರ್ತಿಲ್ಲ, ಇನ್ನೊಮ್ಮೆ ಓದಿ ಬರೀತೀನಿ ಅಂತ ಬರೆದೇ ಬರೆಯುತ್ತೀಯ ಅದೇ ನಿನ್ನ ಭಾಷೆಯೊಳಗೆ.

ಮತ್ತೊಂದು ವಿಷಯ, ನಿನ್ನ ಆಫೀಸಿಗೆ ಬಂದರೆ ನನಗೆ ಒಳಗೆ ಪ್ರವೇಶ ಸಿಗುತ್ತಿಲ್ಲ, ಕೇವಲ ಆಹ್ವಾನಿತರಿಗೆ ಮಾತ್ರ ಪ್ರವೇಶ ಅಂತ ಬೋರ್ಡು ಬೇರೆ. ಹ್ಞಾ...ಇನ್ನೊಂದು ವಿಷಯ, ನಿನ್ನ ಆಫೀಸಿನಿಂದ ನನಗೊಂದು ಚೆಕ್ ಕಳಿಸಿದ್ದಾರೆ. ನನಗೆ ಖುಷಿಯಾಗಿದೆ. ಆ ಚೆಕ್ ಅನ್ನು ಬ್ಯಾಂಕಿಗೆ ಹಾಕಿಬರಲು
ಅಮ್ಮನಿಗೆ ಪತ್ರ ಬರೆದಿದ್ದೇನೆ.

ಮತ್ತೊಂದು ವಿಷಯ ಏನು ಗೊತ್ತ, ಪುಟ್ಟದಾಗಿ ಹೇಳಬೇಕು. ಪಕ್ಕದಮನೆಯಲ್ಲಿನ ಕ್ಯಾಲೆಂಡರಿನಲ್ಲಿ ಕಳೆದ ತಿಂಗಳು ಹದಿನೈದಕ್ಕೇ ನಿಂತಿದ್ದ ಮಾರ್ಕು ಈ ತಿಂಗಳು ಇಪ್ಪತ್ತೈದಾದರೂ ಮಾರ್ಕು ಬಿದ್ದೇ ಇಲ್ಲ. ನಾನು ನಾಳೆ ಹೋಗಿ ಕಂಗ್ರಾಟ್ಸ್ ಹೇಳಿ ಬರಬೇಕೆಂದುಕೊಂಡಿದ್ದೇನೆ.

ಇನ್ನುಳಿದ ವಿಷಯ ದೊಡ್ಡದಾಗಿಯೇ ಓದಿಕೊಂಡರೂ ಪರವಾಗಿಲ್ಲ ಮೇಲಿನ ಒಂದು ಸಾಲನ್ನು ಮಾತ್ರ ಮನಸಿನಲ್ಲಿಯೇ ಓದಿಕೋ.

ಸ್ನೇಹಿತನೊಬ್ಬನಿಗೆ ಫೋನಾಯಿಸಿದ್ದೆ. ಹದಿನೈದು ದಿನದ ಹಿಂದೆ ಮಳೆಯೇ ಇಲ್ಲ ಅಂತ ಗೋಗರೆಯುತ್ತಿದ್ದವನೀಗ ‘ಅತೀವೃಷ್ಟಿ, ಅನಾವೃಷ್ಟಿ ಅಂತ ಅಜ್ಜಿಯ ಬಾಯಲ್ಲಿ ಕೇಳಿದ್ದೆ, ಕಣ್ಣಾರೆ ಕಾಣುತ್ತಿದ್ದೇನೆ ಕಣೇ, ಭತ್ತದ ಗದ್ದೆಯ ಆಸೆ ಬಿಟ್ಟಿದ್ದೇ ಆಯ್ತು, ಅಡಿಕೆ ಬೆಳೆ ಇರದಿದ್ದರೂ ಕೊಳೆಯಂತೂ ನಿಶ್ಚಿತ’ ಅಂದು ನಿಟ್ಟುಸಿರುಟ್ಟು ಫೋನಿಟ್ಟಿದ್ದಾನೆ. ಸಂಕಟವಾಯಿತು. ಸಮಾಧಾನವೂ. ಆವತ್ತು ಅವನು ಪ್ರಪೋಸ್ ಮಾಡಿದ್ದಾಗ ನಾ ಒಪ್ಪಿಕೊಂಡಿದ್ದರೆ ಅಪ್ಪ ‘ಗನಾ ಮಾಣಿ’ ಅಂತಂದು ಅವನಿಗೆ ಧಾರೆಯೆರೆದುಬಿಡುತ್ತಿದ್ದರು. ಮಳೆಯಿಲ್ಲದಾಗ ಕಣ್ಣೊರೆಸಿಕೊಳ್ಳುತ್ತ, ಮಳೆ ಬಂದಾಗ ನೆಲವೊರೆಸುತ್ತ ಕಳೆಯಬೇಕಿದ್ದ ಅವನ ಜೊತೆಯ ಜೀವನ ನನ್ನದಾಗಲಿಲ್ಲವಲ್ಲ ಅನ್ನುವ ಸ್ವಾರ್ಥ ಸಮಾಧಾನದಲ್ಲಿ ಫೋನಿಟ್ಟಿದ್ದೇನೆ. ರಿಸೆಷನ್ನು ಮಣ್ಣು ಎಂಬೆಲ್ಲ ಘನ ವಿಷಯಗಳ ಮುಂದೆ ಮಾದ್ಯನ ಪುಟ್ಟಗದ್ದೆ ಖಾಲಿಬಿದ್ದಿರುವುದು ಮಾದ್ಯನ ಮನೆಯ ಊಟದಅಕ್ಕಿಡಬ್ಬಿಗೆ ಮಾತ್ರ ಗೊತ್ತಿದೆ ಅಂತಲೂ ತಮ್ಮ ಮನೆಯ ಕೆಲಸದಾಳಿನ ಗೋಳು ಬಗೆದಿಟ್ಟಿದ್ದರೆದುರು ಅವನ ಕಷ್ಟ ದೊಡ್ಡದೆನಿಸಲಿಲ್ಲ.


ಬದುಕಿನೊಂದು ಸಾರ್ಥಕ್ಯವಾಗಿ ಎದುರಾಗಿ ನಿಲ್ಲುವ ಪ್ರತಿ ಗಳಿಗೆಯನ್ನೂ ಒಟ್ಟುಮಾಡಿ ಗಂಟು ಕಟ್ಟಿಡುತ್ತಿದ್ದೇನೆ ಮುಂದೆ ಮತ್ಯಾರಿಗಾದರೂ ಆದೀತೆಂಬ ಆಸೆಯಿಂದ.

ಇವತ್ತಿಗಂತೂ ಇದ್ದ ಸುಖ ಸಾಕು.

ಹೇಳಲಿಕ್ಕೆ ಇನ್ನಷ್ಟಿದೆ, ಸಮಯ ಸಿಕ್ಕಾಗ ಬರುತ್ತೇನೆ. ಅಲ್ಲಿಯತನಕ ಒಂದಿಷ್ಟು ವಿಶ್ರಾಂತಿ ನನಗೂ ನಿನಗೂ. ಅಲ್ಲಿ ಅಜ್ಜ ಬೇರುಗೂಡಿಯೇ ನೆಟ್ಟ ಜಾಜಿಹೂವಿನಗಿಡ ಬಾಡಿಹೋಗುತ್ತಿದೆಯಲ್ಲ ಅಂತ ಮರುಗುತ್ತಿದ್ದರೆ ಮೊಮ್ಮಗ ಬೀನ್ಸ್ ಬೀಜ ಬಿತ್ತಿ ಪಾಪ್ ಕಾರ್ನ್ ಬೆಳೆಯುವ ಹುನ್ನಾರದಲ್ಲಿದ್ದಾನೆ. ಇಂಥ ಹೊತ್ತುಗಳೆಲ್ಲ ನನ್ನೊಳಗಿನ ಮುಗುಳ್ನಗೆಯಾಗಿ ಮುಗಿದುಹೋಗುತ್ತಿವೆ.
ಇಲೆಕ್ಟ್ರಿಕ್ ಸ್ಟೋವಿಗೆ ಕೈಕೂತ ತಕ್ಷಣ ಒಂದೆರಡು ಲೋಟದಷ್ಟಾದರೂ ಬೇಳೆ ನೆನೆಸಿ ಹೋಳಿಗೆ ಮಾಡಿಬಿಡಬೇಕೆಂದು ಅತ್ತೆ ತುದಿಗಾಲಲ್ಲಿ ಕಡಲೆಬೇಳೆ ಡಬ್ಬಿಹಿಡಿದು ಒಲೆಮುಂದೆ ನಿಂತಿದ್ದಾರೆ. ಒಬ್ಬೊಬ್ಬರೂ ಒಂದೊಂದು ಪಾತ್ರೆ ತೊಳೆದಿಟ್ಟು ಡಿಶ್ ವಾಷರ್ ಮಾತನಾಡುವುದನ್ನೇ ಬಿಟ್ಟಿದೆ.

ಹೇಳಲಿಕ್ಕೆ ಇನ್ನೇನಿದೆಬಿಡು. ಎಲ್ಲ ಇಂಥದ್ದೇ. ನಾನು ಹೇಳುವ ವಿಷಯ ನೀನು ಬಿಡಿಸಿಟ್ಟ ಚಿತ್ರದಷ್ಟು ಚೆಂದವೇನಲ್ಲ ಅಂತ ಗೊತ್ತಿದ್ದೂ ಅನಿವಾರ್ಯವಾಗಿ ಬರೆದ ಪತ್ರವಿದು. ಅವರೆಲ್ಲ ಸಿಕ್ಕರೆ ಅವರಿಗೆ ಹೇಳಿಬಿಡು. ಅವಳ ಬ್ಲಾಗಲ್ಲಿ ನಿಮ್ಮ ಪ್ರತಿಕ್ರಿಯೆಗೆ ಉತ್ತರಿಸುವುದಕ್ಕಾದರೂ ಅವಳು ಮತ್ತೊಮ್ಮೆ ಬ್ಲಾಗಿಗೆ ಬಂದೇ ಬರುತ್ತಾಳೆ, ನಿಮ್ಮನ್ನೆಲ್ಲ ಅವಳು ಮರೆತಿಲ್ಲ ಅಂತ ದಯವಿಟ್ಟು ತಿಳಿಸಿಬಿಡು. ನಾನು ಬಿಜಿ ಇದ್ದೇನೆ ಅಂತ ಹೇಳಿಬಿಡಬೇಡ ಮತ್ತೆ. ನಾನು ಸೋಮಾರಿಯ ಹಾಗೆ ಸುಮ್ಮನಿದ್ದೇನೆ ಅಂತ ಸುಮಾರು ಜನರಿಗೆ ಸುಳ್ಳು ಹೇಳಿದ್ದೇನೆ. ನೀನೂ ಹಾಗೆಯೇ ಹೇಳಿಬಿಡು. ನನ್ನೆದುರೀಗ ಚೆಂದದ ಹೊತ್ತುಗಳಿವೆ, ಕಳೆಯುವುದಕ್ಕೆ ಸಮಯ ಮಾತ್ರ ಇಲ್ಲ. ಎಲ್ಲಿಂದಾದರೂ ಸರಿ, ಒಂದಿಷ್ಟು ಹೊತ್ತನ್ನು ಕಳಿಸಿಕೊಡು. ಸಿಕ್ಕಾಗ ನಿನ್ನ ಹೊತ್ತನ್ನು ನಿನಗೆ ಮರಳಿಸುವ ಹೊಣೆ ನನ್ನದಾಗಿರಲಿ.

ಹೊತ್ತು ಸರಿದದ್ದೇ ಗೊತ್ತಾಗುವುದಿಲ್ಲ ನಿನಗೆ ಪತ್ರ ಬರೆಯಲು ಕುಳಿತರೆ. ನಾವು ಹೋದಾಗ ಕಂಡ ಗುಡ್ಡದ ಮೇಲೆ ಈಗಲೂ ಸ್ನೋ ಇದ್ದರೆ ಒಂದಿಷ್ಟು ನೋಡು. ಬಿಸಿಲಿಗೆ ಕರಗಿದ್ದರೆ ನಾನೇನು ಮಾಡಲಿಕ್ಕಾದೀತು!

ನನ್ನ ಪರಿಚಯವದವರು ಸಿಕ್ಕರೆ ಒಂದು ಸಾಲಿನ ಹಾಡು, ನೀನು ಹಾಡಿಬಿಡು. ಹೊಸತೇನಲ್ಲ, ಹಳೆಯದೇ. ಹಾಡಿದಷ್ಟೂ ಹೊಳಪು ಬರುವ ಕೆ.ಎಸ್. ನ ಅವರ ಹಾಡು. ಅವರೇ ಬರೆದದ್ದಂತೆ, ನಾನು ಆಗಾಗ ಹಾಡುತ್ತಿರುತ್ತೇನೆ.

‘ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ’

ಚೆಂದಿರನೇತಕೆ ನಿನಗೆ ತುಂಬ ಇಷ್ಟ ಅಂತ ಮತ್ತೆ ಕೇಳಬೇಡ, ಬೆಳದಿಂಗಳಾಗಿ ಬಂದುಬಿಡುತ್ತೇನೆ ನೋಡು. ಇದೊಂದು ಕರ್ರನೆಯ ಬೆಳದಿಂಗಳೆಂದು ನೀನು ನಗುವಾಗೆಲ್ಲ ನಾನು ಕೋಪ ಮಾಡಿಕೊಂಡಿದ್ದೇ ನೆನಪು, ಈಗನಿಸುತ್ತದೆ, ನಕ್ಕು ನಾನೂ ಬೆಳದಿಂಗಳಾಗಬಹುದಿತ್ತು ಅಂತ. ನಾನು ಮಾತನಾಡುವುದೇ ಹಾಗೆ. ಹಿಂದೊಮ್ಮೆ ‘ಹೂವಿನಗಿಡ ನೆಟ್ಟಿದ್ದೇನೆ, ಹೂಬಿಟ್ಟಿದೆ’ ಅಂತ ನಿನ್ನ ಕರೆಸಿ ಮೆಣಸಿನ ಗಿಡದೊಳಗಿನ ಹೂ ತೋರಿಸಿದ್ದಕ್ಕೆ ನೀನು ಕೋಪಿಸಿಕೊಂಡಿದ್ದೇಕೆಂಬುದೇ ನನಗಿನ್ನೂ ಅರ್ಥವಾಗದ ವಿಷಯ. ಮೆಣಸಿನ ಹೂವು ಹೂವಲ್ಲವ ಹಾಗಾದರೆ! ನೀನೆಂದ ಹಾಗೆ ಶತದಡ್ಡಿ ನಾನಲ್ಲ ಕಣೋ, ಅದು ನೀನು.
ಹಳೆಯದೆಲ್ಲ ಆಗಾಗ ನೆನೆಯುತ್ತಿರಬೇಕು ಅಂತ ನೀನು ಹೇಳಿದ್ದಕ್ಕೆ ನೀನು ಬರೆದ ಪತ್ರಗಳನ್ನೆಲ್ಲ ನೀರಲ್ಲಿ ನೆನೆಸಿಟ್ಟಿದ್ದೇನೆ. ಮೊಳಕೆಯೊಡೆದರೆ, ಸಸಿಯಾದರೆ ನಿನಗೂ ಕೊಡುತ್ತೇನೆ. ಇಲ್ಲವಾದರೆ ಹೇಗೂ ನಾಳೆಯ ದೋಸೆಗೆ ಇನ್ನೂ ಅಕ್ಕಿ ನೆನೆಸಿಲ್ಲ, ಅದನ್ನೇ ರುಬ್ಬುತ್ತೇನೆ.


ಮತ್ತೆ ಸಿಗುತ್ತೇನೋ.
ಈ ಕಾಗದವನ್ನು ಬರೆದು ನೀರಿನಲ್ಲಿ ತೇಲಿಬಿಡುತ್ತಿದ್ದೇನೆ. ಅದು ಹಕ್ಕಿಗರಿಯಂತೆ ಹಾರಿ ನಿನ್ನ ಸೇರಲಿ ಅಂತೆಲ್ಲ ಹಳೇ ಸಿನೇಮಾ ಡೈಲಾಗು ಬಿಡಲು ನನ್ನಿಂದಾಗದು. ಒಂದಿಷ್ಟು ಗೀಚಿ ಈ ಪತ್ರವನ್ನು ಗಾಳಿಯಲ್ಲಿ ಹಾರಿಬಿಟ್ಟಿದ್ದೇನೆ, ಹಕ್ಕಿಗರಿಯಂತಾದರೂ ಸರಿ, ಹೆಬ್ಬಾವಿನಂತಾದರೂ ಸರಿ. ಮೊದಲಿಗೆ ಇದು ನಿನ್ನ ಸೇರಲಿ, ಬಾಕಿ ವಿಷಯ ಮೊಕ್ತ.

ಇಂತಿ,
ಬೆಳದಿಂಗಳು.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.