April 23, 2009

ಸಾವಿರದ ಸಾಸಿವೆಯಲಿ ಸಾವಿರದೊಂದು...

ನಾನು ತುಂಬ ಅಂಟಿಕೊಂಡಿದ್ದ ಆ ಕಣ್ಣುಗಳು ಮತ್ತೆ ನನಗೆ ಕಾಣಸಿಗುತ್ತಾವೆಂಬ ಭರವಸೆಯಿರಲಿಲ್ಲ. ಅಲೆಮಾರಿ ಕಣ್ಣು ಅವಿತಿಟ್ಟುಕೊಳ್ಳುವುದೆಂತು. ನನ್ನೆದುರು ಬಂತು.

‘ನೀನ್ಯಾರು?’ ಅಂತ ಕೇಳಿದರೆ...
‘ನಾನ್ಯಾರೆಂಬ ಪ್ರಶ್ನೆಗೆ ಉತ್ತರ ಹುಡುಕ ಹೊರಟ ಅಲೆಮಾರಿ ನಾನು. ನಾನೇ ತಿಳಿಯದ ನಾನು ನಾನು.’ ಗೌತಮ ಉತ್ತರಿಸಿದ್ದಿಷ್ಟು.

‘ ಓ ಅಲೆಮಾರಿ, ನಿನಗೆ ಹಾಡಲು ಬರತ್ತ?’ ಅಂತ ಕೇಳಿದರೆ...
"ನಿನ್ನ ಕಣ್ಣ ಕೊಳದ ಒಳಗೆ
ಕನಸ ಮೀನು ನನದು ಕಣೆ.
ಎದೆಯ ತುಂಬ ಅವಿತು ಕುಳಿತ
ನೂರು ಆಸೆ ನಿನದೆ ಕಣೆ
ಬಾಳ ತುಂಬ ಒಲವು ಸುರಿವ
ನವಿರು ನಂಟು ನಮದು ಕಣೆ"
ಅಂತ ತಾನೇ ಬರೆದಈ ಹಾಡನ್ನು ಹಾಡುವಾಗ ಆ ಕಣ್ಣುಗಳು ಯಾರನ್ನೋ ಅರಸುವಂತೆ ಭಾವಸ್ಫುರಿಸುತ್ತವೆ.

‘ನೀ ಬುದ್ಧನೇನೋ?’ ಅಂತ ಕೇಳಿದರೆ ಸಾವಿರದ ಮನೆಯ ಸಾಸಿವೆ ಕಾಳಿನ ಬಗ್ಗೆಯೂ ಮಾತನಾಡುತ್ತಾನೆ.
‘ಬರೆಯೋಕೆ ಬರತ್ತೇನೋ ಗೌತಮ ಬುದ್ಧ?’ ಅಂತ ಕೇಳಿದರೆ...
"ಬರೆದಿಟ್ಟ ಕವನ ನೂರು
ಕವನಕೆ ಉಸಿರೇ ನೀನು
ಮೌನದ ಪ್ರಶ್ನೆ ಸಾಕಿನ್ನು
ಉತ್ತರಕೆ ಕಾದಿಹ ನಾನು" ಅಂತ ತಾನೇ ಬರೆದ ಈ ಹಾಡನ್ನು ಎಲ್ಲೋ ನೋಡುತ್ತ ಹಾಡುತ್ತಾನೆ.
ಇವ ಬುದ್ಧನಲ್ಲ, ಕಿಂದರಜೋಗಿಯೇನೋ ಅನಿಸಿಬಿಡುತ್ತದೆ.

ಇವ ಯಾರು ಅಂತ ದಯವಿಟ್ಟು ಕೇಳಬೇಡಿ. ಇವ ಯಾರು ಅಂತ ನನಗೂ ಗೊತ್ತಿಲ್ಲ. ನಾನು ಈ ಭುವಿಗೆ ಬಂದಹಾಗೆಯೇ ಇವನೂ ಬಂದಿರಬಹುದು. ವಯಸ್ಸಲ್ಲಿ ನನಗಿಂತ ಸಾಕಷ್ಟು ಚಿಕ್ಕವನಾದರೂ ದೊಡ್ದವನಿರಬೇಕು ಅಂತ ಮನಸು ಸುಮ್ಮ ಸುಮ್ಮನೆ ಹೇಳುತ್ತದೆ. ನಾನು ನಂಬುವುದಿಲ್ಲ.
‘ಖಾಲಿ ಬಿದ್ದ ನನ್ನೆರಡು ಬ್ಲಾಗುಗಳಿವೆ, ಒಂದರಲ್ಲಿ ಏನಾದರೂ ಗೀಚುತ್ತೀಯ?’ ಅಂತ ಕೇಳಿದೆ. ‘ನನಗೇನೂ ತೊಂದರೆ ಇಲ್ಲ, ಓದುವವರಿಗೆ ತೊಂದರೆಯಾಗಬಹುದು ಅಷ್ಟೇ.’ ಎನ್ನುತ್ತ ತಲೆಕೆರೆದುಕೊಳ್ಳುತ್ತಾನೆ. ‘ಇಲ್ಲ ಕಣೋ, ನಾ ಗೀಚಿದ್ದನ್ನೇ ಎಷ್ಟೆಲ್ಲ ಪ್ರೀತಿಯಿಂದ ಓದುತ್ತಾರೆ ಇವರೆಲ್ಲ, ನೀ ಬರೆದದ್ದನ್ನೂ ಸಹ ಹೇಗಿದ್ದರೂ ಒಪ್ಪಿಸಿಕೊಳ್ಳುವಂಥಹ ಹಿರಿಮೆ ಅವರದು’ ಅಂದೆ. ಒಪ್ಪಿಕೊಂಡ.

ನನ್ನ ಪ್ರೀತಿಯ ನೀವುಗಳೇ...
ನಾನು ಪ್ರೀತಿಯಿಂದ ಪ್ರೀತಿಸಿದ ಒಂದುಸಾಲಿಗಾಗಿ ಒಂದು ಬ್ಲಾಗನ್ನೇ ತೆರೆದಿಟ್ಟುಬಿಟ್ಟಿದ್ದೆ. ಅದನ್ನೀಗ ಅಲೆಮಾರಿಯೊಬ್ಬ ಮುಂದುವರೆಸುತ್ತಾನೆ. ‘ಅಲೆಮಾರಿಯ ಬರಹಗಳ ಮಧ್ಯೆ ಮತ್ತಿವಳ ಬರಹಗಳನ್ನು ಅಲ್ಲಿಯೂ ಓದಬೇಕಾ?’ ಅಂತ ದಯಮಾಡಿ ಯೋಚಿಸಬೇಡಿ. ಭರವಸೆ ಕೊಡುತ್ತೇನೆ, ನಾನು ಇನ್ನುಮುಂದಲ್ಲಿ ಬರೆಯುವುದಿಲ್ಲ. ನಾನಾಯಿತು, ನನ್ನ ಪಾಡಾಯಿತು ಅಂತ ನನ್ನ ‘ನೆನಪು ಕನಸುಗಳ ನಡುವೆ’ ಇದ್ದುಬಿಡುತ್ತೇನೆ. ಅಲೆಮಾರಿ ಅಲೆಯುತ್ತ ಅಲ್ಲಿಗೆ ಬರಬಹುದೆಂಬ ಕಾರಣಕ್ಕೇ ನಾನಲ್ಲಿ ಬರೆದದ್ದನ್ನೆಲ್ಲ ಯಾವತ್ತೋ ಗುಡಿಸಿ ಒರೆಸಿಬಿಟ್ಟಿದ್ದೇನೆ. ಇನ್ನಲ್ಲಿ ಅವನು ಬರೆಯುತ್ತಲಿರುತ್ತಾನೆ, ಅಲೆಯುತ್ತ ಎಲ್ಲಿ ನಡೆದರೂ ಮರಳಿ ಅಲ್ಲಿಗೆ ಮರಳುತ್ತಾನೇನೋ ಎಂಬ ಭರವಸೆ ಅವನ ಮೇಲಿದೆ.

‘ಏನಪ್ಪಾ? ಇದೆಂಥ ಕತೆ? ಅಷ್ಟೆಲ್ಲ ಪ್ರೀತಿಸಿದ ಒಂದುಸಾಲಿಗಾಗಿ ತೆರೆದಿಟ್ಟ ಇಡಿಯ ಬ್ಲಾಗನ್ನು ಗೊತ್ತುಗುರಿಯಿಲ್ಲದ ಅಲೆಮಾರಿಗೆ ಕೊಟ್ಟುಬಿಟ್ಟಳಲ್ಲ! ಇವಳ್ಯಾವ ಸೀಮೆಯವಳು?’ ಅಂತ ಯೋಚಿಸ್ತಿದ್ದೀರ? ಅವನ್ಯಾರು ಅಂತ ನಾನು ಹೇಳದೇ ಇರುವ ಕಾರಣವಿಷ್ಟೇ. ಅವನಿನ್ನೂ ಚಿಕ್ಕವನು. ಅವನ್ಯಾರೆಂಬುದು ಇನ್ನೂ ಗೊತ್ತಾಗಬೇಕಿದೆ. ಅಷ್ಟರೊಳಗೆ ಅವನ್ಯಾರು ಅಂತ ನಾನು ನಿಮಗೆ ಹೇಳುವುದಾದರೂ ಏನನ್ನು?

ನಿಮ್ಮೆಲ್ಲರ ಹಾರೈಕೆ, ಒಂದಿಷ್ಟು ಪ್ರೀತಿ, ಒಂದು ಹಿಡಿ ಪ್ರೋತ್ಸಾಹವೇ ಸಾಕಾಗಬಹುದು ಅವನಿನ್ನು ಬರೆಯುವುದಕ್ಕೆ. ಅವನ ಹಾರೈಸುವಿರ?

ಅವನ ಬರಹಗಳನ್ನು ನಾನೂ ಓದಿಲ್ಲ. ಬೇರಿನ ಮೇಲಿಟ್ಟ ಪ್ರೀತಿಯೇ ಮೊಳಕೆಯ ಮೇಲೂ ಇರುವ ಹಾಗೆ. ಪ್ರೀತಿ, ಮಮತೆಯ ಜೊತೆ ಒಂದು ಭರವಸೆ. ಆ ಭರವಸೆ ಹುಸಿಯಾಗದಿರಲಿ. ಬುದ್ಧನಾಗದೆ, ಅಲೆಮಾರಿಯೂ ಅಲ್ಲದೆ ಅವನು ಗೌತಮನಾಗಿಯೇ ಗುರುತಿಸಿಕೊಳ್ಳಲಿ ಎಂಬ ಹಾರೈಕೆಯೊಂದಿಗೆ...

ವಂದನೆಗಳೊಂದಿಗೆ,
ಪ್ರೀತಿಯಿಂದ,
-ಶಾಂತಲಾ ಭಂಡಿ.

April 17, 2009

ಅಜ್ಜನಮನೆಗೆ ಹೋಗುವ ಬಸ್ಸು...

ಅರ್ಧಂಬರ್ಧ ಎಚ್ಚರ. ಅತ್ತೆ ಮಗೂನ ತೋರ್ಸಿ ನಿಮ್ಮಿಬ್ರುನ್ನೂ ಹೋಲ್ತಾನೆ ನನ್ನ ಮೊಮ್ಮಗ ಅಂದ್ರು. ಹಾಗೆ ಹೇಳುತ್ತಲೇ ನನ್ನ ಕೆನ್ನೆ ಸವರಿದ್ರು. ಅಮ್ಮ ಹಣೆ ನೇವರಿಸಿದ್ರು. ಸಣ್ಣಗೆ ನಕ್ಕೆ ಅನ್ಸತ್ತೆ, ನಿದ್ರೆ ಬಂತು.

ಇವತ್ತು ನಮ್ಮತ್ತೆಯ ಮೊಮ್ಮಗನ್ನ ಕೇಳಿದೆ ‘ಕನ್ನಡ ಓದೋಕೆ ಬರತ್ತ?’ ಅಂದೆ. ‘ಸಾರೀಮ್ಮಾ.. ಬರೋಲ್ಲ’ ಅಂದ. ಹಾಗಾದ್ರೆ ಆವತ್ತು ಅತ್ತೆ ಹೇಳಿದ್ದು ಸುಳ್ಳ? ಅಂವ ನಮ್ಮಿಬ್ರನ್ನೂ ಹೋಲ್ತಾನೆ ಅಂದ್ರೆ ಅವಗೆ ಕನ್ನಡ ಬರಬೇಕಿತ್ತು, ಯಾಕೇಂದ್ರೆ ನಮ್ಮಿಬ್ಬರಿಗೂ ಕನ್ನಡ ಬರುತ್ತಲ್ಲ! ಯೋಚನೆಗೆ ಬಿದ್ದೆ.

‘ಅಯ್ಯೋ...ಕನ್ನಡ ಓದೋಕೆ ಬರಲ್ಲ ಅಂದ್ರೆ ನಿಂಗೆ ಮುಂದೆ ತುಂಬ ಕಷ್ಟ ಇದೆ’ ಅಂದೆ. ‘ಹೌದಾಮ್ಮ?’ ಅಂದ. ‘ಹ್ಞೂ...ಅಜ್ಜನಮನೆಗೆ ಹೋಪ ಬಸ್ಸಿನ ಬೋರ್ಡು ಕನ್ನಡದಲ್ಲೇ ಇಪ್ಪದು...’ ಅಂದೆ. ಅವನಿಗೆ ತಲೆಬಿಸಿ ಶುರುವಾಯ್ತು. ಇನ್ನೊಂದೆರಡು ಜಾಸ್ತಿನೇ ಹುಳಬಿಡೋಣ ಅನ್ನಿಸಿ ಮತ್ತೆ ಅವನ ಮುಂದೆ ಪಟ್ಟಾಗಿ ಕೂತೆ. ‘ಅಷ್ಟೇ ಅಲ್ಲ..ನೋಡು ಈವಾಗ...ಯಾರಾದ್ರೂ ಬಂದೂ ನಿನ್ನ ಮಾತೃಭಾಷೆ ಯಾವುದು ಅಂತ ಕೇಳಿದ್ರೆ ನೀನೇನು ಹೇಳ್ತೀಯ?’ ಅಂದೆ. ‘ಹಾಗಂದ್ರೇನಮ್ಮಾ..?’ ಬಂತು ಪ್ರಶ್ನೆ. ‘ಹಾಗಂದ್ರೆ....ಮದರ್ ಟಂಗ್’ ಅಂದೆ. ‘ನೀನು ದೊಡ್ಡವನಾದ್ಮೇಲೆ ನಿನಗೇ ಅನ್ನಿಸ್ಬಾರ್ದು ಅಲ್ವ? ಅಪ್ಪ ಅಮ್ಮ, ಅಜ್ಜಿ, ತಾತ ಎಲ್ರೂ ಮಾತಾಡ್ತಿದ್ದ ಭಾಷೆ ನಿಂಗೆ ಓದೋಕೆ ಬರೋಲ್ಲ ಅನ್ನಿಸಿದ್ರೆ ನಿಂಗೆ ಬೇಸರವಾಗೋಲ್ವ? ಅದೂ ಅಲ್ದೇನೆ ಅಮ್ಮ ಬ್ಲಾಗ್ ಬರೀತಾರಲ್ಲ ...ಅದೂ ಕನ್ನಡದಲ್ಲೇ ಇದೆ, ನಿಂಗೆ ಅಮ್ಮ ಬರ್ದಿದ್ದನ್ನ ಓದ್ಬೇಕು ಅನ್ನಿಸೋಲ್ವ? ನಿನ್ನದೇ ಆದ ಸ್ವಂತ ಭಾಷೆಯೇ ಇಲ್ಲ ಅಂತ ಮುಂದೊಂದು ದಿನ ನಿನಗೆ ಅನ್ನಿಸಬಾರದಲ್ವ?’ ಅಂತೆಲ್ಲ ತಲೆಬಿಸಿ ಹುಟ್ಟಿಸಿ ನಿಧಾನಕ್ಕೆ ಅವನ ಮುಂದಿಂದ ಏಳುವ ಯತ್ನ ಮಾಡಿದೆ.

‘ನನಗೆ ಹಾಗನ್ನಿಸಿದಾಗ ನೀ ಕಲಿಸಿಕೊಟ್ಟರಾಯ್ತಲ್ವಾ....?’ಲಾಜಿಕ್ಕು ಶುರುವಾಯ್ತು. ಇಂಥ ಲಾಜಿಕ್ಕಿಗೆ ಸೆಂಟಿ ಡಯಲಾಗ್ಸಿನಂಥ ಮೆಡಿಸಿನ್ ಬೇರೊಂದಿಲ್ಲ.
‘ನೋಡು..ಎಷ್ಟು ವರ್ಷದತನಕ ನಿನ್ನಮ್ಮ ಹೀಗೆ ನಿಂಗೆಲ್ಲ ಕಲಿಸಿಕೊಡುತ್ತ ನಿನ್ನ ಜೊತೆಯೇ ಇರೋಕಾಗತ್ತೆ? ನೀ ಬೆಳೆದು ದೊಡ್ಡವನಾದಾಗ ನಿನ್ನಮ್ಮ ನಿನ್ನ ಜೊತೆಯಿಲ್ಲದ ಒಂದುದಿನ ನಿಂಗೆ ಹಾಗನ್ನಿಸಿಬಿಟ್ರೆ!’ ಮತ್ತೆ ಕೇಳಿದೆ.
‘ಸರೀಮ್ಮ, ಏನಾದ್ರೂ ಕಲಿಸಿಕೊಡು, ಓದ್ತೀನಿ’ ಅಂದ. ಅಲ್ಲಿಗೆ ಏನನ್ನೋ ಸಾಧಿಸಿದ ಖುಷಿಯಲ್ಲಿ ಅವನ ಕೆನ್ನೆತಟ್ಟಿ ತಲೆನೇವರಿಸಿ ‘ಜಾಣ ಮರಿ’ ಅಂದೆ.


ಅಂತೂ ಆವತ್ತು ಅಂವ ಕನ್ನಡ ಓದಿದ. ನಿಜ, ಅಂತೂ ಅವ ಆವತ್ತು ಕನ್ನಡ ಓದಿದ.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.