January 13, 2009

ಆಗಸ ಸೋರಿ ಅಕ್ಷರವಾಗೆ

ನಂಗೆ ಬುದ್ದಿ ಬಂದಾಗಿನಿಂದ ನಾನು ಒಂಟಿಯಾಗೇ ಇದೀನಿ. ಅದಕ್ಕೇ ಇರಬೇಕು ಯಾವತ್ತೂ ನನಗೆ ಯಾರೂ ಇಲ್ಲ ಅಂತ ಅನ್ನಿಸೋದೇ ಇಲ್ಲ. ಆ ದಿನ ಮಾಡೋಕೆ ಕೆಲಸವೂ ಸಿಗದೇ ಅಲೆದಾಡ್ತಾ ಇದ್ದೆ. ಆ ಛತ್ರದಲ್ಲಿ ಯಾರೋ ಇಬ್ರು, ಇನ್ಮೇಲೆ ಒಟ್ಗೇ ಬಾಳ್ತಾರಂತೆ. ಅದಕ್ಕೇ ಅಲ್ಲಿ ಜನರ ಸಂತೆ ಸೇರಿತ್ತು. ಅಲ್ಲಿ ಹೋಗಿ ಒಂದೆಡೆ ಸುಮ್ಮನೆ ನಿಂತಿದ್ದೆ. ಯಾರೋ ಪುಣ್ಯಾತ್ಮ ಬಂದು ‘ಏನ್ ಬೇಕಿತ್ತು’ ಅಂತ ಕೇಳಿದ್ರು. ಹಸಿವೆ ಆಗ್ತಾ ಇತ್ತು. ‘ಊಟ’ ಅಂತ ಹೇಳಿದೆ. ‘ಊಟ ಮಾಡ್ಬೇಕು ಇವತ್ತಾದ್ರೂ, ನಂಗೆ ಮೂರುದಿನಗಟ್ಲೆ ಉಪವಾಸ ಇದ್ದು ಅಭ್ಯಾಸ ಇಲ್ಲ, ಇವತ್ತು ಏನಾದ್ರೂ ತಿನ್ನಬೇಕು ಅಂದ್ಕೊಳ್ತಾ ಇದೀನಿ, ಕೆಲಸ ಕೊಡಿ, ಕೆಲಸ ಮಾಡಿ ಊಟ ತಗೊಂಡು ಹೋಗ್ತೀನಿ’ ಅಂದೆ. ಪಾತ್ರೆ ತೊಳೆಯೋ ಕೆಲ್ಸ ಸಿಕ್ತು. ಆಗಲೇ ಅಲ್ಲಿ ಅಜ್ಜಿಯೊಬ್ರು ಪಾತ್ರೆಗಳನ್ನ ಉಜ್ತಾ ಕುಳಿತಿದ್ರು. ಅವರ ಜೊತೆ ಸೇರ್ಕೊಂಡೆ. ಕೆಲ್ಸ ಮುಗೀತು. ಊಟಾನೂ ಕೊಟ್ರು. ತಿಂದಾಯ್ತು. ಅಜ್ಜಿ ಕೇಳಿದ್ರು, ‘ಈಗ ಮನೆಗೆ ಹೋಗ್ತೀಯ?’ ಅಂತ. ಮನೆಯಲ್ಲೆಲ್ಲ ಉಳಕೊಂಡು ಅಭ್ಯಾಸ ಇಲ್ಲ ನಂಗೆ. ರಸ್ತೆ ಬದಿ ಇಷ್ಟಗಲ ಇರೋವಾಗ ಮನೆ ಯಾಕೆ ಬೇಕು ಅಂದೆ. ‘ಪ್ರಾಯದ್ ಹುಡ್ಗಿ, ನಾಯಿ ನರಿ ಎಳ್ಕಂಡೋದೀತು!’ ಅಂದ್ರು ಬಾಯಿಬಿಟ್ಗೊಂಡು. ‘ಇಷ್ಟು ದಿನ ಹೀಗೆ ಬದಕ್ತಾ ಇದೀನಿ, ನಾಯಿ ನರಿ ಯಾವತ್ತೂ ಬಂದಿಲ್ಲ’ ಅಂದೆ. ನಾನೂ ಬರ್ಲಾ ಅಂದ್ರು ಅಜ್ಜಿ. ನಕ್ಕೆ. ಜೊತೆಯಾದ್ವಿ. ತುಂಬ ಹಸಿವಾದಾಗ ಊಟ ಮಾಡ್ಕೊಂಡು ನೆಮ್ಮದಿಯಾಗಿ ಇರೋವಾಗ್ಲೇ ಅಜ್ಜಿ ಶಿವನ ಪಾದ ಸೇರ್ಕೊಂಡ್ಬಿಟ್ರು. ರಾತ್ರಿ ರಸ್ತೆ ಬದಿಗೆ ಮಲಗಿದ್ದೇ ನೆನಪು, ಬೆಳಗೆದ್ದಾಗ ಅಜ್ಜಿ ಎಷ್ಟು ಏಳಿಸಿದ್ರೂ ಏಳಲೇ ಇಲ್ಲ. ಅವರ ಬಟ್ಟೆ ಗಂಟನ್ನ ಎತ್ಕೊಂಡೆ, ಅವರು ಮೈಮೇಲೆ ಹೊದ್ದುಕೊಂಡಿದ್ದ ಬಟ್ಟೆಯನ್ನೂ ಎಳಕೊಂಡು ನನ್ನ ಗಂಟಿನಲ್ಲಿ ಕಟ್ಕೊಂಡೆ. ಸತ್ತೋರಿಗೆ ಹೊದಿಕೆ ಯಾಕೆ ಅಲ್ವ?


ನಡಕೊಂಡು ಬಂದು ಸುಸ್ತಾಗಿ ಆಲದ ಮರ ಕೆಳಗೆ ಕೂತಿದ್ದೆ. ಹತ್ತಿರದ ಕೆರೆ ಹತ್ರ ಜನ ಎಲ್ಲ ಬರ ಬರ ನಡ್ಕೊಂಡು ಹೋಗ್ತಾ ಇದ್ರು. ಒಬ್ಬ ಹೆಂಗ್ಸು ಇನ್ನೊಬ್ಬ ಹೆಂಗ್ಸಿಗೆ ಹೇಳ್ತಿದ್ರು ‘ಸೂರ್ಯ ಮುಳುಗ್ತಿದಾನೆ ನೋಡು, ಎಷ್ಟು ಚಂದ ಅಲ್ಲ?’ ಅವರು ಕೈತೋರ್ಸಿದ ಕಡೆ ನಾನೂ ನೋಡ್ದೆ. ಅಲ್ಲಿ ಅದೇನ್ ಸುಡುಗಾಡು ಚಂದ ಕಂಡ್ರೋ ಗೊತ್ತಿಲ್ಲ, ನಂಗೆ ಮಾತ್ರ ಸೂರ್ಯ ಮುಳುಗ್ತಾ ಇದಾನೆ, ಇನ್ನೇನ್ ಕತ್ತಲಾಗತ್ತೆ, ಜನ ಜಾಸ್ತಿ ಓಡಾಡೋ ರಸ್ತೆ ಬದಿ ಹುಡ್ಕೊಂಡು ಇನ್ನೆಷ್ಟು ದೂರ ಹೋಗ್ಬೇಕೋ’ ಅಂತ ಯೋಚ್ನೆ ಬರೋಕೆ ಶುರುವಾಯ್ತು. ಅಷ್ಟ್ರಲ್ಲಿ ಅಲ್ಲೊಬ್ಬ ಹಣ್ಣು ಹಣ್ಣು ಮುದುಕ ಬಂದ್ರು. ಮೈ ಕೈ ನೋಡಿದ್ರೆ ನನ್ನಷ್ಟೇ ಸ್ಥಿತಿವಂತರಂಗೆ ಕಾಣಿಸಿದ್ರು. ಹಂಗಾದ್ರೆ ನೆಮ್ಮದಿಯಾಗೇ ಬದುಕ್ತಿದಾರೆ. ‘ಅಜ್ಜಾ... ಇಲ್ಲಿ ಹತ್ರ ಯಾವ ಪಟ್ಣ ಸಿಗ್ತದೆ?’ ಅಂತ ಕೇಳ್ದೆ. ನಡ್ದು ನಡ್ದು ಸುಸ್ತಾಗಿತ್ತು ಅನ್ಸತ್ತೆ, ಪಕ್ಕದಲ್ಲೇ ಕೂತ್ರು. ‘ಮುಂದ್ಕೋದ್ರೆ ಪಟ್ಣ ಗಿಟ್ನ ಬರಲ್ಲ, ಬರೀ ಕಾಡು’ ಅಂದ್ರು. ‘ರಾತ್ರೀಕೆ ಮಲ್ಕಳಕ್ಕೆ ಚೊಲೊ ರಸ್ತೆ ಗಿಸ್ತೆ ಐತಾ?’ ಅಂತ ಕೇಳ್ದೆ. ಸುಮಾರು ಹೊತ್ತು ಸುಮ್ನೇನೇ ಇದ್ದೋರು ‘ತಂದೆ ತಾಯಿ ಎಲ್ಲ ಎಲ್ಲವ್ರೆ?’ ಅಂತ ಕೇಳಿದ್ರು. ‘ಹಂಗದ್ರೆ ಏನು?’ ಅಂತ ಕೇಳ್ದೆ. ಸುಮ್ಮನಾದ್ರು.

‘ಬೆಳದ ಮಗ ಅವ್ನೆ , ಲಗ್ಣ ಆಗ್ತೀಯ?’ ಅಂದ್ರು. ’ನಿಮ್ಮ ಮಗನ್ ಮದ್ವೆ ಆದ್ರೆ ಏನ್ ಸಿಗ್ತದೆ?” ಅಂದೆ. ಆಕಾಶ ನೋಡಿದ್ರು. ‘ಊಟ ಸಿಗ್ತದಾ? ಎರಡ್ ದಿನಕ್ಕೊಂದ್ಸಲ ಊಟ ಸಿಗ್ತದೆ ಅಂದ್ರೆ ಆಗ್ತೀನಿ’ ಅಂದೆ. ‘ಓ... ದಿನಾ ಊಟ ಸಿಗ್ತದೆ..ಬಾ...’ ಅಂದ್ರು. ‘ರಾತ್ರೀಕೆ ನಿದ್ರೆ ಬಂದ್ರೆ ಮಲ್ಕಳಕ್ಕೆ ಜಾಗ ಐತಾ?’ ಅಂದೆ. ‘ಜಾಗ ಏನು, ಗುಡುಸ್ಲೇ ಅದೆ ನಮ್ಮ ತಾವ, ಬಾ’ ಅಂದ್ರು. ಜೊತೆಯಾಗಿ ನಡಕೊಂಡು ಹೋದೆ. ಮಗನ್ನ ತೋರ್ಸಿ ‘ಇವನೇ’ ಅಂದ್ರು. ‘ಈಟ್ ಲಕ್ಸಣವಗವ್ನೆ, ಇಂವ ಈ ಅಜ್ಜನ್ ಮಗನಾ?’ ಅಂದ್ಕೊಂಡೆ. ನಾಳೆನೇ ನಾಲ್ಕಾರು ಜನ ಬಂದು ಅದೇನೇನೋ ಆಚಾರ ವಿಚಾರ ಎಲ್ಲ ನಡೀತು. ‘ಲಗ್ಣ ಆಗೋಯ್ತು' ಅಂದ್ರು. ಅಜ್ಜ ಸ್ವಲ್ಪ ದಿನ ಬಂದುಹೋಗಿ ಮಾಡ್ಕೊಂಡು ನಮ್ಮನ್ನ ಹರಸ್ಕೊಂಡು ಹೋಗ್ತಿದ್ರು, ಸ್ವಲ್ಪ ದಿನ ಆದಮೇಲೆ ಆ ಅಜ್ಜ ಕಣ್ಣಿಗೇ ಕಾಣಿಸ್ಲಿಲ್ಲ. ಸತ್ತೋಗಿರ್ಬೇಕು ಅಂದ್ಕೊಂಡೆ.


ಆವಯ್ಯ ಎಷ್ಟೊತ್ತಿಗೂ ಪೆನ್ನುಪಟ್ಟಿ ಹಿಡ್ಕಂಡು ಗೀಚ್ತಾ ಕುಂತಿರ್ತಿದ್ದ. ಕೆಲ್ಸ ಪಲ್ಸ ಮಾಡಿ ಗೊತ್ತಿರ್ಲಿಲ್ಲ. `ನಾಲ್ಕನೇ ಕ್ಲಾಸ್ ಓದಿವ್ನಿ’ ಅಂದಿದ್ದ ಕೇಳಿದ್ರೆ. ‘ನಾನೇನಾದ್ರೂ ನಾಲ್ಕನೇ ಕಿಲಾಸ್ ಓದಿದ್ರೆ ನಿನ್ನಂಗಿರ್ತಿರ್ಲಿಲ್ಲ ಬುಡು’ ಅಂದೆ. ಕೇಳಿಸ್ಕೊಳ್ಳೋದೇ ಇಲ್ಲ ಗಿರಾಕಿ. ಬರ್ದು ಬರ್ದು ರಾತ್ರಿ ಆಗ್ತಿದ್ದಂಗೆ ಊರಾಚೆ ಪೋಸ್ಟಿನ್ ಡಬ್ಬಿ ಇತ್ತಲ್ಲ, ಅಲ್ಲಿ ಹೋಗಿ ಕೂರ್ತಿದ್ದ. ಒಂದೊಂದ್ಸಲ ಪೋಸ್ಟ್ ಡಬ್ಬಿಯಿಂದನೇ ಕಾಸು ಬರೋದು. ಅಕ್ಕಿ ಬೇಳೆ ತರ್ತಿದ್ದ. ದಿನಾ ಊಟ! ಮೂರೂ ಹೊತ್ತು.


ಮನೆ ಮುಂದೆ ಮೂರೆಜ್ಜೆ ಜಾಗ ಖಾಲಿ ಇತ್ತು. ಧವಸ ಬಿತ್ತಿದ್ದೆ. ಮೊಳಕೆ ಬಂತು, ಗಿಡ ಆಯ್ತು, ಹೂವಾಗಿ ಕಾಳು ಕಟ್ಗೊಂಡು ನಗೋಕೆ ಶುರು ಮಾಡ್ತು. ಈವಯ್ಯ ನನ್ನ ನೋಡಿ ನಕ್ಕ. ಸುಮ್ ಸುಮ್ಕೆ ಸದ್ದೇ ಇಲ್ದೆ ಹಲ್ಲೂ ಕಾಣಿಸ್ದಂಗೆ ನಗ್ತಿದ್ದ. ಮೊದ್ಲು ಮೊದ್ಲು ‘ಇದೇನ್ ಈ ವಯ್ಯ, ಹಿಂಗ್ ನಗ್ತಾವ್ನೆ!’ ಅಂತ ಅನ್ನಿಸಿದ್ರೂ ಅಮೇಲಾಮೇಲೆ ಇಷ್ಟ ಅಯ್ತು. ನಾಲ್ಕು ದಿನ ಆವಯ್ಯ ನಗೋವಾಗ ಅವನ್ನೇ ನೋಡಿ ನೋಡಿ ನಾನು ಹಂಗೇ ನಗೋದು ಕಲ್ತ್ಗೊಂಡೆ. ಧವಸದ್ ಗಿಡದ ಮುಂದೆ ಹೋಗಿ ನಿಂತ್ಗಂಡು ಹಂಗೇ ನಕ್ಕೆ ನಾಲ್ಕಾರು ದಿವ್ಸ, ಆಮೇಲೆ ಅಲ್ಲಿ ಹೋಗಿ ನಿಂತಾಗೆಲ್ಲ ತಾನಾಗೇ ನಗು ಬರೋಕೆ ಶುರು ಆಯ್ತು. ‘ನಾನೂ ಧವಸ ಬಿತ್ಲಾ?’ ಅಂತ ಕೇಳ್ದ. ‘ಬಿತ್ತು ನಂಗೇನು?’ ಅಂದೆ. ಇರೋ ಸ್ವಲ್ಪ ಜಾಗದಲ್ಲೇ ಅವನು ಕಾಳು ಬಿತ್ತಿದ. ನಾಲ್ಕು ದಿನ ಆಯ್ತು. ಉರೂಟುರೂಟ ಮೊಳಕೆ ಬಂದ್ವು. ಗಿಡ ಆದ್ವು. ತೆನೆ ಕಟ್ಗೊಂಡ್ತು, ಹತ್ರ ಹೋಗಿ ನೋಡಿದ್ರೆ ಕಾಳಲ್ಲ, ಗಿಡದ್ ತುಂಬ ಬರೀ ಅಕ್ಷರ. ಈವಯ್ಯ ಮನ್ಷನೇ ಅಲ್ಲ ಅನ್ಸೋಕೆ ಶುರುವಾಯ್ತು. ‘ಹೋಗಿ ಸ್ನಾನ ಮಾಡ್ಕೊಂಡ್ ಬಾ’ ಅಂದೆ. ‘ಯಾಕೆ?’ ಅಂದ. ‘ಸ್ನಾನ ಮಾಡಿದ್ರೆ.. ಪ್ರಮಾಣಿಕತೆ ತೊಳ್ದು ಮನುಷ್ಯ ಆಗೋಗ್ತೀನಿ, ನಾನು ಸ್ನಾನ ಮಾಡೋಲ್ಲ’ ಅಂದ. ಒತ್ತಾಯ ಮಾಡಿ ಸ್ನಾನ ಮಾಡು ಅಂತ ಬಚ್ಚಲಿಗೆ ನೂಕ್ದೆ. ಹಂಗೂ ಎರಡೇ ಎರಡು ಚೊಂಬು ನೀರು ಹುಯ್ಕೊಂಡು ಈಚೆ ಎದ್ಬಂದ ಒದ್ದೆ ಮೈಯಲ್ಲೇ. ಬಚ್ಚಲಿಗೇ ಹೋಗಿ ನೋಡ್ದೆ. ನೀರು ದಾಟೋ ತೂತಲ್ಲಿ ನೀರು ಜಾರ್ಕೊಂಡು ಹೋಗ್ತಾ ಇತ್ತು. ನೀರು ಬೆಳ್ಳಗೆ ಕಾಣಿಸ್ತು. ಹಂಗಾರೆ ಪ್ರಾಮಾಣಿಕತೆ ಸ್ವಲ್ಪ ತೊಳ್ಕೊಂಡೋಯ್ತು, ದಿನಾ ಹಿಂಗೇ ಸ್ನಾನ ಮಾಡಿದ್ರೆ ಪೂರ್ತಿಪ್ರಾಮಾಣಿಕತೇನೂ ತೊಳ್ದು ಹೋಗಿ ಸ್ವಲ್ಪ ದಿನದಲ್ಲಿ ಮನ್ಷ ಆಗ್ತಾನೆ ಅಂತ ಸಮಾಧಾನ ಮಾಡ್ಕೊಂಡೆ.


ಇದ್ದಕ್ಕಿದ್ದಂಗೆ ಆಕಾಶದ ಬೆಳಕೆಲ್ಲ ಗುಡಿಸಲಿನ ಒಳಗೇ ಬರೋಕೆ ಶುರು ಆಯ್ತು. ನಿದ್ರೆ ಬಂದೋಳಿಗೆ ಎಚ್ರನೂ ಆಯ್ತು. ರಾತ್ರಿ ಜೋರಾಗಿ ಮಳೆ ಬರೋಕೆ ಶುರು ಆಯ್ತು. ಗುಡಿಸಲು ಅಲ್ಲಲ್ಲಿ ಸೋರೋಕೆ ಶುರು ಆಯ್ತು. ಸೋರೋ ಜಾಗದಲ್ಲಿ ಅನ್ನ ಮಾಡೋ ಮಡ್ಕೆ ಇಟ್ಟೆ. ಚಿಮಣಿದೀಪ ಹಚ್ಕೊಂಡು ನೋಡ್ತಾ ಕುಂತೆ. ಸೋರಿದ್ ನೀರು ಮಡಿಕೆ ಒಳಗೆ ಬಿದ್ದು ಅಕ್ಷರ ಆಗೋಗ್ತಾ ಇತ್ತು. ಭಯ ಆಗಿ ಆ ವಯ್ಯನ್ನ ಏಳಿಸೋಕೆ ನೋಡಿದ್ರೆ ಆವಯ್ಯ ಎಲ್ಲಿ? ಇಲ್ವೇ ಇಲ್ಲ. ಇತ್ತ ಕಡೆ ರಾತ್ರಿ ಹೆಪ್ಪುಹಾಕಿಟ್ಟ ಹಾಲು ಮೊಸರಾಗ್ತಾ ಇತ್ತು. ಬೆಳಿಗ್ಗೆದ್ದು ನೋಡ್ಕೊಳಾಣ ಅಂತ ಸೋರ್ದೇ ಇರೋ ಜಾಗ ನೋಡಿ ಮಲಕೊಂಡೆ.

ಬೆಳಗ್ಗೆದ್ದಾಗ ಆವಯ್ಯ ಮನೇಲಿಲ್ಲ ಅಂತ ಬೇಜಾರಾಯ್ತು. ಅವನೇ ಇಲ್ಲದ ಅವನ ಮನೇಲಿ ನಾನು ಇರೋದು ನ್ಯಾಯ ಅಲ್ಲ ಅನ್ನಿಸೋಕೆ ಶುರುವಾಯ್ತು. ಹೆಪ್ಪಾಗಿದ್ದ ಹಾಲು ಮೊಸರಾಗಿತ್ತು. ಮಡಿಕೆಗೆ ಕಡಗೋಲು ಇಳಿಸಿ ಕಡೆಯೋಕೆ ಶುರುಮಾಡ್ದೆ. ಸರಬರ ಸರಬರ ಅಂತ ಯೋಚ್ನೆಗಳೂ ಮನಸೊಳಗೆ ಕಡೆಯೋಕೆ ಶುರುಮಾಡಿದ್ವು. ಎಷ್ಟೊತ್ತಾದ್ರೂ ಬೆಣ್ಣೆನೇ ಆಗ್ತಾ ಇಲ್ಲ, ಸ್ವಲ್ಪ ಹೊತ್ಗೆ ನೋಡಿದ್ರೆ ಬೆಣ್ಣೆ ಬದ್ಲು ಅಕ್ಷರಗಳು ಎದ್ದೆದ್ದು ಬರೋಕೆ ಶುರುವಾದ್ವು. ಪಕ್ಕದ್ ಗುಡಿಸ್ಲಿನ್ ಹುಡುಗ ಬಂದು ಹೇಳ್ದ ‘ಯಕ್ಕೋ... ನಿಮ್ ವಯ್ಯ ಊರಾಚೆ ಮರದ್ ಕೆಳಗೆ ಕುಂತವ್ರೆ, ಏನ್ ಮುಟ್ಟಿದ್ರೂ ಅಕ್ಸರನೇ ಬತ್ತಾ ಅದೆ, ಜನ ಎಲ್ಲ ನೋಡಕ್ ಓಯ್ತಾ ಅವ್ರೆ, ಬಾರಕ್ಕೋ...’ ಅಂತ ಹೇಳಿ ಊರ ಹೊರಗಿನ ದಿಕ್ಕಲ್ಲಿ ಓಡಿಹೋದ. ಎಲ್ಲ ಹಂಗಂಗೇ ಬಿಟ್ಟು ನಾನು ಬಟ್ಟೆಗಂಟು ಎತ್ಕೊಂಡು ಗುಡಿಸಲಿನ ತಟ್ಟಿಬಾಗಿಲನ್ನ ಮುಂದೆ ಮಾಡಿಟ್ಟು ಅಲ್ಲಿಂದ ಹೊರಟೆ. ಅಜ್ಜ ಹೇಳಿದ್ದು ಸರಿಯಾಗಿ ನೆನಪಾಗದೇ ಅರೆಕ್ಷಣ ಗುಡಿಸಲಿನ ಮುಂದೆ ನಿಂತು ಯೋಚಿಸ್ದೆ. ಈ ದಿಕ್ಕಲ್ಲಿ ಹೋದ್ರೆ ‘ಬರೀ ಕಾಡು’ ಅಂದಿದ್ರು ಅಜ್ಜ. ಅದ್ಕೇ ಆ ದಿಕ್ಕು ಬಿಟ್ಟು ಇನ್ನೊಂದು ದಿಕ್ಕಿನಲ್ಲೆ ಹೊರಟೆ. ಇಷ್ಟು ದೊಡ್ಡ ಪ್ರಪಂಚದಾಗೆ ಇಷ್ಟಗಲ ರಸ್ತೆ ಸಿಗಾಕಿಲ್ವ? ಈ ವಯ್ಯನ ಗುಡಿಸಲಲ್ಲಿ ಇವನೇ ಇಲ್ಲದ್ ಮ್ಯಾಗೆ ನಾನಿರೋದು ಸಂದಾಕಿರಲ್ಲ, ಅಲ್ವ? ನಾನೊಬ್ಳೇ ಇಲ್ಲಿ ಉಳಕೊಂಡ್ರೆ ಈವಯ್ಯನ ಹಂಗಿಗೆ ಬಿದ್ದಂಗಾಗ್ತಿತ್ತು, ಗುಡಿಸಲು ಬಿಟ್ಟು ಬಂದು ಒಳ್ಳೆ ಕೆಲಸಾನೆ ಮಾಡ್ದೆ ಅನ್ನಿಸ್ತು. ದೂರದಲ್ಲಿ ವಾಹನ ಓಡಾಡೋದು ಕಾಣ್ಸಿ ನೆಮ್ಮದಿಯಾಯ್ತು. ಮುಂದಕ್ಕೋದ್ರೆ ಅಗಲ ರಸ್ತೆನೇ ಸಿಗ್ಬಹುದು ಅಂದ್ಕೊಂಡು ನಡೀತಾ ನಡೀತಾ ಬಂದ್ಬುಟ್ಟೆ.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.