November 6, 2009

ಹಕ್ಕಿಹಾಡ ಹಂಚಿಕೊಳ್ಳಲೋಸುಗ...

ದೂರದ ಮನೆಯ ಹಿಂದಿನ ಮರದ ಸುತ್ತ ಯಾವುದೋ ಪುಟ್ಟ ಹಕ್ಕಿಗಳು ಗಿರಿಗುಟ್ಟಿ ತಿರುಗುತ್ತಿವೆ. ನೋಡುತ್ತ ಕುಳಿತರೆ ಯಾವ ಕಥೆಗೂ ಸಾಟಿಯಿಲ್ಲದ ಚಿತ್ರವೊಂದು ಸುತ್ತ ತಿರುಗುತ್ತಿದೆ. ವಾತಾವರಣ ಒಮ್ಮೆ ಶುಭ್ರ, ಇನ್ನೊಮ್ಮೆ ನಿರಭ್ರ. ಸೂರ್ಯನಿಗೂ ಮರುಳು. ಒಮ್ಮೆ ಮನೆಯೆದುರು ಬಂದು ಇನ್ನೊಮ್ಮೆ ಮನೆಯಾಚೆ ಮರೆಯಾಗುವ ಮರುಳ. ಬಿಸಿಲು, ಮೋಡ ಎಲ್ಲವೂ ಜೊತೆಯಾಗಿವೆ. ಸುತ್ತೆಲ್ಲ ಬೆಳ್ಳನೆಯ ತಂಪು. ಚೆಂದದ ಕವಿತೆ ಹುಟ್ಟಬಹುದಿತ್ತು, ಈಗಿಲ್ಲೊಬ್ಬ ಒಳ್ಳೆಯ ಕವಿಯೂ ಇರಬೇಕಿತ್ತು. ದೂರದ ಮರದ ಹಕ್ಕಿ ಚಿಲಿಗುಟ್ಟುತ್ತಿದೆ, ಬರೆಯುವುದೇನು ಬಂತು ಹಾಡಿಯೇನು ಕೇಳು ಎನ್ನುವಂತೆ. ಹಕ್ಕಿಹಾಡ ಹಂಚಿಕೊಳ್ಳಲೋಸುಗ ಈ ಪತ್ರ. ಇವಿಷ್ಟು ಬರೆಯದೇ ಇರಲಾಗಲಿಲ್ಲ.

October 17, 2009

ಭೂಹಣತೆಯೊಳಗೆ ಕುಡಿದೀಪ ಮಿನುಗಿ...

ಭೂಹಣತೆಯೊಳಗೆ ಕುಡಿದೀಪಗಳು ಮಿನುಗಿ
ಬೆಳಕಾಗಿ ಭೂರಮೆಯ ತನುಮನದ ಒಳಹೊರಗೆ
ನಾವು ಬೆಳಗೋಣ ತೈಲವೇ ನಾವಾಗಿ,
ಬತ್ತಿಯೇ ನಾವಾಗಿ, ದೀಪವೇ ನಾವಾಗಿ,
ಕೊನೆಯಲ್ಲಿ ಬೆಳಕೂ ನಾವಾಗಿ
ಬೆಳಗೋಣ ಬನ್ನಿ ಭೂರಮೆಯನೆಲ್ಲ

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
ಎಲ್ಲರಿಗೂ ದೀಪಾವಳಿಯು ಇನ್ನಷ್ಟು ಬೆಳಕು ಕೊಡಲಿ.

ವಂದನೆಗಳೊಂದಿಗೆ,
ಪ್ರೀತಿಯಿಂದ,
-ಶಾಂತಲಾ ಭಂಡಿ.

October 2, 2009

ಹ್ಯಾಪಿ ಬರ್ಥ್ ಡೇ ಟು ಬ್ಲಾಗ್ ಮರಿ

ಗರಿಬಿಚ್ಚಿ, ಗರಿಗೆದರಿ, ಗರಿಮುರಿದು, ಗರಿಮುದುರಿ ಅಲ್ಲಲ್ಲಿ ಬಿದ್ದಿದ್ದ ಆ ಅಕ್ಷರಗಳಿಗೊಂದು ಗೂಡು ಬೇಕೆನಿಸಿದ್ದು ಈ ಬ್ಲಾಗಿನಿಂದ. ಗೂಡಾಗುವ ಬದಲು ಗರಿಬಿಚ್ಚಿದ ಬ್ಲಾಗು ಹಕ್ಕಿಯೇ ತಾನಾಯಿತು. ಅಕ್ಷರದ ಅಕ್ಕಿಯನ್ನೆಲ್ಲ ಹೆಕ್ಕಿ ಹೆಕ್ಕಿ ತಿಂದು ಹೊಟ್ಟೆತುಂಬಿಸಿಕೊಂಡು ಒಮ್ಮೆ ಹಾರಿತು, ಮತ್ತೊಮ್ಮೆ ಮುದುಡಿ ಕುಳಿತಿತು. ಮೊಟ್ಟೆಯಿಡುವ ಬದಲು ತಾನೇ ಮರಿಯಾಯಿತು. ಬ್ಲಾಗ್ ಮರಿಯಾಯಿತು. ಹಾರುವುದನ್ನೇ ಮರೆತು ಹಾಡಿತು. ಹಾಡುವುದನ್ನೇ ಮರೆತು ನಲಿಯಿತು. ನಲಿಯುವುದನ್ನೇ ಮರೆತು ಸುಮ್ಮನಾಯಿತು. ಮತ್ತೆ ನಕ್ಕಿತು, ಅಳುವನ್ನೇ ಮರೆತಂತೆ. ಅತ್ತಿತು ನಕ್ಕೇ ಇಲ್ಲವೆಂಬಂತೆ. ಹೋಯಿತಾ ಹಾರಿ ಅಂತ ನೋಡುತ್ತಿರುವಂತೆ ಮತ್ತಿಲ್ಲೇ ಬಂದಿಳಿಯಿತು. ದೂರದೂರದಲ್ಲಿ
ಚಿಲಿಪಿಲಿಗುಡುತ್ತಿರುವವರನ್ನೇ ಕೂಗಿಕೂಗಿ ಕರೆಯುತ್ತಲಿತ್ತು. ಆ ದೂರದ ಚಿಲಿಪಿಲಿಗಳು ಸನಿಹವಾದವು. ಚೆಂದಚೆಂದದ ಸುಮಾರಷ್ಟು ಬೆಳಗನ್ನು ಕಾಣುತ್ತಿರುವಂತೆಯೇ ಸುತ್ತೆಲ್ಲ
ಚಿಲಿಪಿಲಿಯ ಗಾನ. ತನ್ನ ಕೂಗನ್ನೇ ತಾ ಮರೆತು ಚಿಲಿಪಿಲಿಯನಾಲಿಸುತ್ತ ಅತ್ತಿತ್ತ ನೋಡುತ್ತಿರುವಷ್ಟರಲ್ಲಿ ವರ್ಷಗಳೆರಡು ಕಳೆದುಹೋದವು ಬ್ಲಾಗ್ ಮರಿಗೆ. ನಿಮ್ಮಗಳ ಅಂಗಳದಲ್ಲಿ, ಅಂಗಳದ ಗಿಡದಲ್ಲಿ, ಗಿಡದ ಗೂಡಲ್ಲಿ, ಮನದಮಡಿಲಲ್ಲಿ ಬ್ಲಾಗ್ ಮರಿ ಆಡುತ್ತ ಕಳೆದ ಎರಡುವರ್ಷ ತೀರ ಚಂದದ್ದು. ಹೇಳಲಾಗದ್ದು. ಬ್ಲಾಗ್ ಮರಿಯೊಡನೆ ಸುತ್ತುತ್ತಲಿರುವಾಗ ಸಿಕ್ಕಿದ ಎಲ್ಲ ಬಾಂಧವರಿಗೂ ಬೊಗಸೆಯೊಳಗಿಷ್ಟು ಪ್ರೀತಿ, ಮುಷ್ಠಿ ಮುಷ್ಠಿ ಮೊಗೆದಷ್ಟೂ ಮುಗಿಯದಷ್ಟು ನಿಮ್ಮಿಂದ ದಕ್ಕಿದ್ದು.


ಅಕ್ಟೋಬರ್ ಎರಡು ಗಾಂಧಿಜಯಂತಿ, ಲಾಲ್ ಬಹದ್ದೂರ್ ಜಯಂತಿಗಳ ಜೊತೆಗೆ ನನ್ನೀ ಬ್ಲಾಗ್ ಮರಿಗೂ ಹುಟ್ಟಿದದಿನ. (ಅಕ್ಟೋಬರ್-2) ಇಂದಿಗೆ ಈ ಬ್ಲಾಗ್ ಮರಿಗೆ ಎರಡುವರ್ಷ. ಮರಿಗೆ ಹೊಸಬಟ್ಟೆ ತೊಡಿಸಬೇಕಿತ್ತು, ತೊಡಿಸಿಯಾಯಿತು. ಕೇಕ್ ಕತ್ತರಿಸಬೇಕಿತ್ತು, ಕತ್ತರಿಸಬೇಕು. ಸುತ್ತೆಲ್ಲ ನೀವಿರಬೇಕು ಹರಸುತ್ತ ಹಾರೈಸುತ್ತ, ಹಾಡುತ್ತ. ನಿಮ್ಮೆಲ್ಲರ ಬರುವ ಕಾಯುತ್ತ ನಿಮ್ಮೆಲ್ಲರ ಬ್ಲಾಗ್ ಮರಿ ಬಾಗಿಲಲ್ಲೇ ಕುಳಿತಿದೆ. ಜೊತೆಯಲ್ಲಿ ನಾನೂ.


September 15, 2009

ಚೆಲುವೆಂಬ ಬಾಗಿಲ ಹಿಂದೆ...

ಬಾಗಿಲು ಬಡಿದ ಸದ್ದಿಗೆ ತೆರೆದ ಬಾಗಿಲನ್ನು ಹಿಂದೆತಳ್ಳಿ ಬಾಗಿಲ ಮುಂದೆ ನಿಂತಿದ್ದೇನೆ.
ಸಂಕೋಚ ಹೊತ್ತು ನಿಂತವಳು ಕೇಳುತ್ತಾಳೆ ‘ನಿನ್ನ ಮಗ ಯಾವ ಶಾಲೆಗೆ ಹೋಗ್ತಾನೆ?’ ಅವಳ ಪ್ರಶ್ನೆಗೆ ಒಂದು ಪದದ ಉತ್ತರವಿತ್ತು ಕಣ್ಣನ್ನೇ ಪ್ರಶ್ನೆಯಾಗಿಸಿಕೊಂಡು ನಿಂತಿದ್ದೇನೆ. ಒಳಕ್ಕೆ ಬಾ ಎನ್ನುವುದಕ್ಕೆ ನನಗವಳ ಪರಿಚಯವಿಲ್ಲ.
ಪರಿಚಯವಿರದೆಯೇ ಮನೆಯೆದುರು ಬಂದ ಅತಿಥಿಗಳ ಕರೆದು ಒಳಕೂರಿಸಿ ಆದರಿಸಿ ಆಮೇಲೆ ಪರಿಚಯಿಸಿಕೊಳ್ಳಲು ಇದು ಕದಂಬರಾಳಿದ ಊರಲ್ಲ.
ನಿಂತಿದ್ದೇನೆ ಕಣ್ಣಾಳದಲ್ಲಿ ‘ನೀನ್ಯಾರು?’ ಎಂಬ ಪ್ರಶ್ನೆಯ ಹೊತ್ತು. ‘ನಾನು ಜಾಹ್ನವಿಯ ಅಮ್ಮ’ ಎನ್ನುತ್ತಾಳೆ ತಾನೇ.

ಜಾಹ್ನವಿ! ಜಾಹ್ನವಿ! ಇದು ನನಗೆ ಚಿರಪರಿಚಿತ ಹೆಸರು. ನನ್ನ ಬದುಕಿಗೊಂದು ಅರ್ಥಕೊಟ್ಟವನ ಅಮ್ಮನ ಹೆಸರು.
ಆ ಅಮ್ಮ ಅಲ್ಲಿಯೇ ಸೋಫಾದಲ್ಲಿ ‘ಮಿಥುನ’ ಪುಸ್ತಕದಲ್ಲಿನ ಬುಚ್ಚಿಲಕ್ಷ್ಮಿ ಮತ್ತು ಅಪ್ಪಾದಾಸುವಿನ ಕತೆ ಓದುತ್ತಿದ್ದವಳೀಗ ಎದ್ದು ಬಾಗಿಲಿಗೆ ಬಂದಿದ್ದಾಳೆ, ತನ್ನ ಹೆಸರಿನ ಹುಡುಗಿಯ ಅಮ್ಮನನ್ನು ನೋಡಲು.

ಯಾಕೋ ಇದೀಗ ಅಪರಿಚಿತಳು ಆತ್ಮೀಯಳಂತೆ ಕಾಣುತ್ತಿದ್ದಾಳೆ, ನನ್ನತ್ತೆಯ ಹೆಸರನ್ನೇ ಮಗಳಿಗಿಟ್ಟವಳಾಗಿದ್ದಕ್ಕಿರಬೇಕು. ಬಾ ಒಳಗೆ ಕುಳಿತುಕೋ ಎಂದರೆ ಬಾಗಿಲಾಚೆ ನಿಂತೇ ಇದ್ದಾಳೆ. ಮತ್ತೆ ಕೇಳುತ್ತಾಳೆ ‘ಕೆಲದಿನಗಳ ಹಿಂದೆ ಭಾರತದಿಂದ ಬಂದೆವು, ನಿನ್ನ ಮಗ ಹೋಗುವ ಶಾಲೆಗೇ ನನ್ನ ಮಗಳನ್ನೂ ಸೇರಿಸಿದ್ದೇವೆ. ನನಗೆ ಡ್ರೈವಿಂಗ್ ಗೊತ್ತಿಲ್ಲ. ಬೆಳಿಗ್ಗೆ ನನ್ನ ಗಂಡ ನಮ್ಮ ಮಗಳನ್ನು ಶಾಲೆಗೆ ಬಿಟ್ಟುಬರುತ್ತಾನೆ. ದೂರದ ಆಫೀಸು ಅವನಿಗೆ. ಮಧ್ಯಾಹ್ನ ಮಗಳನ್ನು ಶಾಲೆಯಿಂದ ಕರೆತರುವುದು ಕಷ್ಟವಾಗ್ತಿದೆ.
ನೀನು ಹೇಗಿದ್ದರೂ ನಿನ್ನ ಮಗನ ಕರೆತರುವುದಕ್ಕೆ ಹೋಗ್ತೀಯಲ್ಲ, ದಿನಾ ಮಧ್ಯಾಹ್ನ ಶಾಲೆಬಿಟ್ಟ ತಕ್ಷಣ ನನ್ನ ಮಗಳನ್ನೂ ಮನೆಗೆ ಕರಕೊಂಡು ಬರ್ತೀಯ ಪ್ಲೀಸ್?’ ಎನ್ನುತ್ತಿದ್ದಾಳೆ.

ನನ್ನ ಒಂದುಪದದ ಮಾತನ್ನೀಗ ಉದ್ದವಾಗಿಸಲೇಬೇಕಿದೆ, ಎರಡು ಪದಗಳ ಪ್ರಶ್ನೆ ಕೇಳಲೇಬೇಕಾದ ಅನಿವಾರ್ಯತೆ ಕೂಡ. ‘ಎಲ್ಲಿದೆ ನಿಮ್ಮನೆ?’
‘ಇಲ್ಲಿಯೇ, ಪಕ್ಕದ್ದು, ನಿಮ್ಮನೆಯಿಂದ ಮೂರನೆಯ ಮನೆ.’ ನನ್ನಿಂದಾಗದು ಅಂತ ಹೇಳುವುದಾದರೂ ಹೇಗೆ? ‘ಸರಿ’ ಎಂದಿದ್ದೇನೆ. ಅವಳು ಥ್ಯಾಂಕ್ಸ್ ಹೇಳುತ್ತ ಮನೆಯೆದುರಿಂದ ಮರೆಯಾಗುತ್ತಿದ್ದಾಳೆ.
ಅಗೋ.. ಅಲ್ಲೇ ತಿರುವಿನಲ್ಲಿನ್ನು ಅವಳು ಮರೆಯಾಗುತ್ತಾಳೆ. ಏನೋ ಜ್ಞಾಪಕ ಬಂದಂತಾಗಿ ‘ಜಾಹ್ನವಿಯ ಕ್ಲಾಸ್ ರೂಮ್ ನಂಬರ್!’ ಎನ್ನುತ್ತೇನೆ . ‘ರೂ ನಂಬರ್ 66’ ಎಂದವಳೀಗ ನಿಜವಾಗಿಯೂ ಮರೆಯಾಗುತ್ತಾಳೆ. ಬಾಗಿಲನ್ನು ಮುಂದಕ್ಕೆ ತಳ್ಳಿ ನಾನೀಗ ಬಾಗಿಲಿಗೆ ಬೆನ್ನು ಹಾಕುತ್ತೇನೆ.
ನಾನು ಒಳಕ್ಕೆ ಬರುವುದನ್ನೇ ಕಾಯುತ್ತಿದ್ದವರಂತೆ ಕುಳಿತ ಅತ್ತೆ ಹೇಳುತ್ತಾರೆ ‘ಇಲ್ಲೂ ಒಬ್ಬಳು ನನ್ನ ಹೆಸರವಳೇ ಇದ್ದಾಳೆಂದರೆ ಖುಷಿಯಾಯಿತು’ ಎನ್ನುತ್ತಾರೆ. ‘ನನಗೂ’ ಎಂಬಂತೆ ಅವರ ಮುಖ ನೋಡುತ್ತೇನೆ. ಕಣ್ಣಿನ ಭಾಷೆ, ಮುಖದ ಭಾವದೊಳಗೇ ಉತ್ತರ ಕಂಡುಕೊಳ್ಳುವುದೀಗ ಅತ್ತೆಗೂ ಅಭ್ಯಾಸವಾಗಿದೆ. ಮುಗುಳ್ನಕ್ಕು ಪುಸ್ತಕದೊಳಗೆ ಕಣ್ಣಿಡುತ್ತಾರೆ.

****************

ಮಗನನ್ನು ಕ್ಲಾಸ್ ಬಿಟ್ಟ ತಕ್ಷಣ ಕರೆದುಕೊಂಡು ಇದೀಗ ಕ್ಲಾಸ್ ರೂಮ್ ನಂಬರ್ 66 ಎದುರು ನಿಂತಿದ್ದೇನೆ.
ಮಗ ಹೇಳುತ್ತಿದ್ದಾನೆ ‘ಅವಳೇಮ್ಮಾ ಜಾಹ್ನವಿ, ಪಿಂಕ್ ಶರ್ಟ್ ಹಾಕಿದ್ದಾಳಲ್ಲ, ಅವಳೇ’ ಅಂತ. ಪುಟ್ಟ ಹುಡುಗಿಯರು ತೊಡುವ ಬಣ್ಣಗಳಲ್ಲಿ ಪಿಂಕೇ ಹೆಚ್ಚು ಈ ದೇಶದಲ್ಲಿ. ನೀಲಿ ನೀಲಿಯವರೆಲ್ಲ ಪುಟ್ಟ ಹುಡುಗರು. ಅಲ್ಲಿರುವ ಎಂಟು ಹುಡುಗಿಯರಲ್ಲಿ ಪಿಂಕ್ ಶರ್ಟ್ ತೊಟ್ಟವಳನ್ನು ಹುಡುಕಬೇಕೀಗ. ಹೆಚ್ಚಿನವರೆಲ್ಲ ಪಿಂಕ್ ಶರ್ಟಿನವರೇ.

ಅಮ್ಮ ಕನ್ನಡಕ ಹಾಕಿದ್ದಾಳಲ್ಲ ಅವಳು ಜಾಹ್ನವಿ ಎನ್ನುತ್ತಾನೆ ಮಗ.
‘ಹಾಯ್ ಜಾಹ್ನವಿ...’ ಎನ್ನುತ್ತೇನೆ. ‘ಹಾಯ್’ ಎನ್ನುತ್ತಾಳೆ ಚುಟುಕಾಗಿ. ನನಗೊಬ್ಬಳು ಒಳ್ಳೆಯ ಜೊತೆಗಾತಿ ಎನ್ನಿಸುತ್ತದೆ. ಕೇಳಿದ್ದಕ್ಕಷ್ಟೇ ಸ್ಪಷ್ಟ ಚುಟುಕು ಉತ್ತರ ಕೊಡುವ ಮಿತಭಾಷೆಯ ಅವಳು ಇಷ್ಟವಾಗುತ್ತಾಳೆ. ಮಕ್ಕಳಿಬ್ಬರನ್ನೂ ಹಿಂದಿನ ಸೀಟಿಗೆ ಕೂರಿಸಿ ಮುಂದಕ್ಕೆ ಬಂದು ಕುಳಿತು ಸೀಟ್ ಬೆಲ್ಟ್ ಹಾಕಿ ಕಾರ್ ಸ್ಟಾರ್ಟ್ ಮಾಡುತ್ತೇನೆ. ಮೊದಲ ದಿನ ಅವಳು ನನ್ನನ್ನು ನೋಡುತ್ತಿದ್ದಾಳೆ, ಇನ್ನೊಂದೆರಡು ಮಾತನಾಡಿದರೆ ನಾಳೆಯಿಂದ ನನ್ನಷ್ಟಕ್ಕೆ ಡ್ರೈವ್ ಮಾಡಿಕೊಂಡಿದ್ದರೂ ಆದೀತು, ಇವತ್ತು ಅವಳನ್ನು ಇನ್ನೊಂದೆರಡು ವಾಕ್ಯ ಮಾತನಾಡಿಸುವ ಅನಿವಾರ್ಯತೆಯಿದೆ ಅನ್ನಿಸುತ್ತದೆ.

ಡ್ರೈವ್ ಮಾಡುತ್ತ ಹಿಂದಿರುಗಲಾರದೇ ಮುಂದೆ ನೋಡುತ್ತಲೆ ಹಿಂದಿನ ಸೀಟಲ್ಲಿದ್ದವಳನ್ನು ಮಾತನಾಡಿಸುತ್ತೇನೆ. ‘ಹಾಯ್ ಜಾಹ್ನವಿ....ನಿನ್ನ ಕ್ಲಾಸ್ ಟೀಚರ್ ಯಾರು?’ ಎನ್ನುತ್ತೇನೆ. ಸರಿಯಾಗಿ ನನ್ನ ಹಿಂದೆ ಕುಳಿತ ಆ ಪುಟ್ಟ ಹುಡುಗಿ ಮಾತನಾಡುವುದಿಲ್ಲ. ಮತ್ತೆ ಕೇಳುತ್ತೇನೆ.

‘ಹಾಯ್ ಜಾಹ್ನವಿ....ನಿನ್ನ ಕ್ಲಾಸ್ ಟೀಚರ್ ಯಾರು?’

ಅವಳು ಉತ್ತರಿಸುತ್ತಿಲ್ಲ.

ಮತ್ತೆ ಕೇಳುತ್ತೇನೆ ನಿಧಾನಕ್ಕೆ ‘ಹಾಯ್ ಜಾಹ್ನವಿ....ನಿನ್ನ ಕ್ಲಾಸ್ ಟೀಚರ್ ಯಾರು?’
ಸುಮಾರು ನಾಲ್ಕೈದು ಬಾರಿ ಕೇಳುತ್ತೇನೆ. ಆದರೂ ಅವಳ್ಯಾಕೋ ಉತ್ತರಿಸುತ್ತಲೇ ಇಲ್ಲ.

ಸ್ವಲ್ಪವೇ ಕತ್ತನ್ನು ಹಿಂದಕ್ಕೆ ತಿರುಗಿಸಿ ನೋಡಿದರೆ ಮಗನ ಮುಖ ಕಾಣಿಸುತ್ತದೆ. ಸರಿಯಾಗಿ ನನ್ನ ಹಿಂದಕ್ಕೆ ಕುಳಿತವಳ ಮುಖ ನನಗೆ ಕಾಣಿಸುತ್ತಿಲ್ಲ. ಮಗನನ್ನು ಕೇಳುತ್ತೇನೆ ‘ಪುಟ್ಟಾ..ಜಾಹ್ನವಿ ಏನು ಮಾಡ್ತಿದ್ದಾಳೆ?’ ಅಂತ. ‘ಅಮ್ಮ ಅವಳು ನನ್ನ ಮುಖ ನೋಡುತ್ತ ನಗುತ್ತ ಸುಮ್ಮನೆ ಇದ್ದಾಳೆ. ಅವಳಿಗೆ ನೀನು ಹೇಳಿದ್ದು ಕೇಳಿಸುತ್ತಿಲ್ಲಾಮ್ಮ, ಅವಳಿಗೆ ಕಿವಿ ಕೇಳಿಸುವುದಿಲ್ಲ. ಅವಳೊಡನೆ ಮಾತಾಡುವಾಗ ಅವಳೆದುರು ನಿಂತು ಮಾತನಾಡುತ್ತೀಯ ಪ್ಲೀಸ್, ಆಗ ಅವಳಿಗೆ ನೀನು ಹೇಳಿದ್ದು ಅರ್ಥವಾಗುತ್ತದೆ ಅಂತ ಅವರಮ್ಮ ನಿನ್ನೆ ನನಗೆ ಹೇಳಿದ್ದಾರೆ, ನಾನು ಹಾಗೆಯೇ ಮಾಡುತ್ತಿದ್ದೇನೆ, ನೀನೂ ಹಾಗೆಯೇ ಮಾಡ್ತೀಯಾಮ್ಮಾ?’ ಅಂತ ಮಗ ಹೇಳಿದಾಗ ಒಮ್ಮೆಲೇ ಕಣ್ಣೊಳಗೆ ಒರತೆಯೆದ್ದು ಬಂದಂತೆ ಗಂಟಲಾಳದಿಂದ. ಎದುರಿಗೆ ಗ್ರೀನ್ ಸಿಗ್ನಲ್ ,
ಕಣ್ಣೊಳಗೆ ಮುನ್ನಡೆಸಲಾಗದಷ್ಟು ತೇವಮುಸುಕು.

ಮನೆ ತಲುಪಿದಾಗ ಅವರಮ್ಮ ಅಲ್ಲೇ ಬಾಗಿಲಲ್ಲಿ ನಿಂತಿದ್ದಾರೆ. ಈ ತಾಯಿಯ ಎದುರು ಯಾವತ್ತೂ ಯಾರ ಕಿವಿಯ ಬಗ್ಗೆಯೂ ಮಾತನಾಡಲೇಬಾರದೂಂತ ನಾನು ನಿಶ್ಚಯಿಸಿದ ಹಾಗಿದೆ. ‘ನಿನ್ನ ಮಗಳಿನ ಕಣ್ಣು ತುಂಬ ಸುಂದರವಾಗಿದೆ, ಆ ರೆಪ್ಪೆಗಳನ್ನು ನೋಡು, ಊದ್ದಕ್ಕೆ’ ಅಂತ ಮಾತು ಮುಗಿಸಿದೆ. ‘ತುಂಬ ದೂರ ನಿಂತಿದ್ದೀಯ, ಇನ್ನೂ ಹತ್ತಿರಕ್ಕೆ ಬಂದು ಹೇಳು, ನೀನು ಮಾತನಾಡುವಾಗ ನಿನ್ನ ತುಟಿಗಳ ಚಲನೆ ನನ್ನ ಮಗಳಿಗೂ ಕಾಣಿಸಿದರೆ ಅವಳೇ ನಿನಗೆ ಥ್ಯಾಂಕ್ಸ್ ಹೇಳುತ್ತಾಳೆ’ ಎನ್ನುತ್ತಾಳೆ ಜಾಹ್ನವಿಯ ಅಮ್ಮ.


ಹಾಗಾದರೆ ಇನ್ನು ಮುಂದೆ ನಾನು ಕಣ್ಣುಗಳ ಬಗ್ಗೆಯೂ ಮಾತನಾಡುವ ಹಾಗಿಲ್ಲ ಆ ತಾಯಿಯ ಮುಂದೆ. ನಿರ್ಧರಿಸಿಬಿಟ್ಟಿದ್ದೇನೆ.

August 31, 2009

ಕನ್ನಡಿಯೊಳಗಿನ ಗಂಟು ಕದ್ದವರಿಗೆ...

ಗುಂಪಿನಲ್ಲೂ ಏಕಾಂತವಾಗಿರುವವರನ್ನು
ಕಂಡು ಕದ್ದುನುಡಿವ
ತತ್ವಜ್ಣಾನಿಗಳನ್ನು
ಯಾವತ್ತೋ ಕ್ಷಮಿಸಿಯಾಗಿದೆ
ಕ್ಷಮೆಯ ಬಣ್ಣವೇ ತಂಪು
ಸುತ್ತಲೂ ತಂಪೇ
ತಣ್ಣಗೆ
ಅದೇ ಸದಾ ಒಳಿತು

ಒಂದಿಷ್ಟು ಕದ್ದದ್ದು ಕದ್ದ ಹಾಗೇ
ಹಸಿಹಸಿಯೇ
ಸಹಿ ಮಾತ್ರ ಸ್ವಂತದ್ದು
ಯಾರದ್ದೋ ಮಾರ್ಕ್ಸ್ ಕಾರ್ಡಿಗೆ
ಸ್ವಂತ ಹೆಸರು
ಯಾರೋ ಬಿಡಿಸಿದ ಚಿತ್ರಕ್ಕೆ
ಪೌಡರು ಬಳಿಯುವ ಕೆಲಸ
ಸುಮಾರೇ ಅನುಭವ ಬೇಕು
ಮೇಲಿಂದ ಬಳಿದ ಪೌಡರು
ತಣ್ಣನೆಯ ಗಾಳಿಸಾಕು

ಹಳೇ ಹವ್ಯಾಸ
ನಾಳೆಬಿಟ್ಟರೂ
ಇವತ್ತು ಸಿಕ್ಕ ಬಿರುದು
ಖಾಯಮ್

ಕದ್ದಿದ್ದು ಅಕ್ಷಯ ಪಾತ್ರೆಯೊಳಗಿಂದ
ಕದ್ದಷ್ಟೂ ಒಳಿತೇ
ಖಾಲಿಯಾಗದ್ದು
ಆದರೂ ಒಂದು ತಣ್ಣನೆಯ ಹಾರೈಕೆ
ಕದಿಯುವಾಗ ಮಾತ್ರ
ದಯವಿಟ್ಟು ಜೋಪಾನ
ಗೊತ್ತಿರಬೇಕಲ್ಲ
ಅಡಿಕೆ ಕದ್ದ ಮಾನ...

June 4, 2009

ತುಳಸೀವನ

ಬರೆಯಬೇಕು. ಬರೆಯುವುದಕ್ಕೆ ತುಂಬ ಇದೆ. ಈ ವಾರದಲ್ಲಿ ಧನ್ಯವಾದ ಅರ್ಪಿಸಲಿಕ್ಕೇಂತಲೇ ಸುಮಾರು ಏಳೆಂಟು ಪತ್ರಗಳನ್ನಾದರೂ ಬರೆಯಬೇಕಿದೆ. ಏನಂತ ಬರೆಯುವುದು, ಎಲ್ಲಿಂದ ಶುರುಮಾಡುವುದು, ಯಾರಿಗೆ ಮೊದಲು ಪತ್ರ ಬರೆಯುವುದು, ಗೊತ್ತಾಗುವುದೇ ಇಲ್ಲ. ಸುಮ್ಮನೆ ಪ್ಯಾಟಿಯೋದ ಗಾಜಿನ ಬಾಗಿಲ ಬಳಿ ನಿಂತಿದ್ದೇನೆ. ಗಿಡಗಳೇ ಇಲ್ಲದ ಅಂಗಳದ ಮಣ್ಣಿನ ವಾಸನೆಯೂ ಬರಿತೇ ಬೋಳು. ಮೇಲಿನ ಅಡ್ಡಕಂಬದ ಮೂಲೆಗೆ ಪಾರಿವಾಳ ಜಾತಿಯ ಹಕ್ಕಿ ಗೂಡು ಕಟ್ಟಿ ಎರಡು ಮೊಟ್ಟೆಗಳ ಮೇಲೆ ತಾನೇ ಕೂತಿದೆ. ಮೂರ್ನಾಲ್ಕು ತಾಸುಗಳಿಗೊಮ್ಮೆ ಬೇರೆ ಬೇರೆ ಕೋನದಲ್ಲಿ ಕೂತು ಕಾವು ಕೊಡುತ್ತಿದೆಯಿರಬೇಕು. ಅದನ್ನೇ ನೋಡುತ್ತ ಸುಮ್ಮನೆ ನಿಂತ ಮನಸ್ಸು ಮಾತ್ರ ವಸಂತೋತ್ಸವದಲ್ಲೇ ಇದೆ. ಗೆಳೆಯ ‘ಇತ್ತ ಬಾ ಸಾಕು’ ಅಂತ ಕರೆಯುತ್ತಾನೆ. ‘ಶ್... ಸುಮ್ಮನಿರು, ಪಾರಿವಾಳ ಗೂಡು ಕಟ್ಟಿದೆ’ ಅನ್ನುತ್ತೇನೆ. ‘ಈವತ್ತು ಗೂಡು ಕಟ್ಟಿದೆ, ಅದರೊಳಗೆ ಮೊಟ್ಟೆಯಿದೆ, ನಾಳೆ ಮರಿಯಾಗುತ್ತವೆ, ಚಿಲಿಪಿಲಿಗುಡುತ್ತವೆ, ನೀನು ಅದನ್ನೇ ನೋಡುತ್ತ ಆ ಹಕ್ಕಿಗೂಡನ್ನೇ ತುಂಬ ಹಚ್ಚಿಕೊಂಡು ಕೂರುತ್ತೀಯ. ನಾಳೆ ಅವು ಹಾರಿಹೋದ ಮೇಲೆ ನಿನ್ನ ಸಮಾಧಾನಿಸಲು ಯಾವ ಹಕ್ಕಿಯ ತರಬೇಕು ನಾನು?, ಸುಮ್ಮನೆ ಇತ್ತ ಬಾ’ ಅನ್ನುತ್ತಾನೆ. ಖಾಲಿಯ ಅಂಗಳತುಂಬಲು `ತುಳಸೀವನ' ಅರ್ಧ ಹಾದಿಯತನಕ ಬಂದಿದೆ. ನಾಳೆಯಾದರೂ ಸರಿ, ನಮ್ಮನೆಯ ಅಂಗಳಕ್ಕೆ ತಂದಿಡಬೇಕು ಅಂದುಕೊಳ್ಳುತ್ತ ಒಳಗೆ ಬಂದಿದ್ದೇನೆ.
ಅಮ್ಮನೂರಿಂದ ಬಂದಾಗಲೂ ಹೀಗೆಯೇ ಆಗಿತ್ತು. ಸ್ವಲ್ಪ ದಿನ ಬೇಕು ಸುಧಾರಿಸಿಕೊಳ್ಳಲು. ಯಾವುದಕ್ಕೂ ದೇಹಕ್ಕೂ ಮನಸಿಗೂ ಹಿಡಿದ ಜ್ವರದ ಸುಸ್ತು ಇಳಿಯಲಿ...

April 23, 2009

ಸಾವಿರದ ಸಾಸಿವೆಯಲಿ ಸಾವಿರದೊಂದು...

ನಾನು ತುಂಬ ಅಂಟಿಕೊಂಡಿದ್ದ ಆ ಕಣ್ಣುಗಳು ಮತ್ತೆ ನನಗೆ ಕಾಣಸಿಗುತ್ತಾವೆಂಬ ಭರವಸೆಯಿರಲಿಲ್ಲ. ಅಲೆಮಾರಿ ಕಣ್ಣು ಅವಿತಿಟ್ಟುಕೊಳ್ಳುವುದೆಂತು. ನನ್ನೆದುರು ಬಂತು.

‘ನೀನ್ಯಾರು?’ ಅಂತ ಕೇಳಿದರೆ...
‘ನಾನ್ಯಾರೆಂಬ ಪ್ರಶ್ನೆಗೆ ಉತ್ತರ ಹುಡುಕ ಹೊರಟ ಅಲೆಮಾರಿ ನಾನು. ನಾನೇ ತಿಳಿಯದ ನಾನು ನಾನು.’ ಗೌತಮ ಉತ್ತರಿಸಿದ್ದಿಷ್ಟು.

‘ ಓ ಅಲೆಮಾರಿ, ನಿನಗೆ ಹಾಡಲು ಬರತ್ತ?’ ಅಂತ ಕೇಳಿದರೆ...
"ನಿನ್ನ ಕಣ್ಣ ಕೊಳದ ಒಳಗೆ
ಕನಸ ಮೀನು ನನದು ಕಣೆ.
ಎದೆಯ ತುಂಬ ಅವಿತು ಕುಳಿತ
ನೂರು ಆಸೆ ನಿನದೆ ಕಣೆ
ಬಾಳ ತುಂಬ ಒಲವು ಸುರಿವ
ನವಿರು ನಂಟು ನಮದು ಕಣೆ"
ಅಂತ ತಾನೇ ಬರೆದಈ ಹಾಡನ್ನು ಹಾಡುವಾಗ ಆ ಕಣ್ಣುಗಳು ಯಾರನ್ನೋ ಅರಸುವಂತೆ ಭಾವಸ್ಫುರಿಸುತ್ತವೆ.

‘ನೀ ಬುದ್ಧನೇನೋ?’ ಅಂತ ಕೇಳಿದರೆ ಸಾವಿರದ ಮನೆಯ ಸಾಸಿವೆ ಕಾಳಿನ ಬಗ್ಗೆಯೂ ಮಾತನಾಡುತ್ತಾನೆ.
‘ಬರೆಯೋಕೆ ಬರತ್ತೇನೋ ಗೌತಮ ಬುದ್ಧ?’ ಅಂತ ಕೇಳಿದರೆ...
"ಬರೆದಿಟ್ಟ ಕವನ ನೂರು
ಕವನಕೆ ಉಸಿರೇ ನೀನು
ಮೌನದ ಪ್ರಶ್ನೆ ಸಾಕಿನ್ನು
ಉತ್ತರಕೆ ಕಾದಿಹ ನಾನು" ಅಂತ ತಾನೇ ಬರೆದ ಈ ಹಾಡನ್ನು ಎಲ್ಲೋ ನೋಡುತ್ತ ಹಾಡುತ್ತಾನೆ.
ಇವ ಬುದ್ಧನಲ್ಲ, ಕಿಂದರಜೋಗಿಯೇನೋ ಅನಿಸಿಬಿಡುತ್ತದೆ.

ಇವ ಯಾರು ಅಂತ ದಯವಿಟ್ಟು ಕೇಳಬೇಡಿ. ಇವ ಯಾರು ಅಂತ ನನಗೂ ಗೊತ್ತಿಲ್ಲ. ನಾನು ಈ ಭುವಿಗೆ ಬಂದಹಾಗೆಯೇ ಇವನೂ ಬಂದಿರಬಹುದು. ವಯಸ್ಸಲ್ಲಿ ನನಗಿಂತ ಸಾಕಷ್ಟು ಚಿಕ್ಕವನಾದರೂ ದೊಡ್ದವನಿರಬೇಕು ಅಂತ ಮನಸು ಸುಮ್ಮ ಸುಮ್ಮನೆ ಹೇಳುತ್ತದೆ. ನಾನು ನಂಬುವುದಿಲ್ಲ.
‘ಖಾಲಿ ಬಿದ್ದ ನನ್ನೆರಡು ಬ್ಲಾಗುಗಳಿವೆ, ಒಂದರಲ್ಲಿ ಏನಾದರೂ ಗೀಚುತ್ತೀಯ?’ ಅಂತ ಕೇಳಿದೆ. ‘ನನಗೇನೂ ತೊಂದರೆ ಇಲ್ಲ, ಓದುವವರಿಗೆ ತೊಂದರೆಯಾಗಬಹುದು ಅಷ್ಟೇ.’ ಎನ್ನುತ್ತ ತಲೆಕೆರೆದುಕೊಳ್ಳುತ್ತಾನೆ. ‘ಇಲ್ಲ ಕಣೋ, ನಾ ಗೀಚಿದ್ದನ್ನೇ ಎಷ್ಟೆಲ್ಲ ಪ್ರೀತಿಯಿಂದ ಓದುತ್ತಾರೆ ಇವರೆಲ್ಲ, ನೀ ಬರೆದದ್ದನ್ನೂ ಸಹ ಹೇಗಿದ್ದರೂ ಒಪ್ಪಿಸಿಕೊಳ್ಳುವಂಥಹ ಹಿರಿಮೆ ಅವರದು’ ಅಂದೆ. ಒಪ್ಪಿಕೊಂಡ.

ನನ್ನ ಪ್ರೀತಿಯ ನೀವುಗಳೇ...
ನಾನು ಪ್ರೀತಿಯಿಂದ ಪ್ರೀತಿಸಿದ ಒಂದುಸಾಲಿಗಾಗಿ ಒಂದು ಬ್ಲಾಗನ್ನೇ ತೆರೆದಿಟ್ಟುಬಿಟ್ಟಿದ್ದೆ. ಅದನ್ನೀಗ ಅಲೆಮಾರಿಯೊಬ್ಬ ಮುಂದುವರೆಸುತ್ತಾನೆ. ‘ಅಲೆಮಾರಿಯ ಬರಹಗಳ ಮಧ್ಯೆ ಮತ್ತಿವಳ ಬರಹಗಳನ್ನು ಅಲ್ಲಿಯೂ ಓದಬೇಕಾ?’ ಅಂತ ದಯಮಾಡಿ ಯೋಚಿಸಬೇಡಿ. ಭರವಸೆ ಕೊಡುತ್ತೇನೆ, ನಾನು ಇನ್ನುಮುಂದಲ್ಲಿ ಬರೆಯುವುದಿಲ್ಲ. ನಾನಾಯಿತು, ನನ್ನ ಪಾಡಾಯಿತು ಅಂತ ನನ್ನ ‘ನೆನಪು ಕನಸುಗಳ ನಡುವೆ’ ಇದ್ದುಬಿಡುತ್ತೇನೆ. ಅಲೆಮಾರಿ ಅಲೆಯುತ್ತ ಅಲ್ಲಿಗೆ ಬರಬಹುದೆಂಬ ಕಾರಣಕ್ಕೇ ನಾನಲ್ಲಿ ಬರೆದದ್ದನ್ನೆಲ್ಲ ಯಾವತ್ತೋ ಗುಡಿಸಿ ಒರೆಸಿಬಿಟ್ಟಿದ್ದೇನೆ. ಇನ್ನಲ್ಲಿ ಅವನು ಬರೆಯುತ್ತಲಿರುತ್ತಾನೆ, ಅಲೆಯುತ್ತ ಎಲ್ಲಿ ನಡೆದರೂ ಮರಳಿ ಅಲ್ಲಿಗೆ ಮರಳುತ್ತಾನೇನೋ ಎಂಬ ಭರವಸೆ ಅವನ ಮೇಲಿದೆ.

‘ಏನಪ್ಪಾ? ಇದೆಂಥ ಕತೆ? ಅಷ್ಟೆಲ್ಲ ಪ್ರೀತಿಸಿದ ಒಂದುಸಾಲಿಗಾಗಿ ತೆರೆದಿಟ್ಟ ಇಡಿಯ ಬ್ಲಾಗನ್ನು ಗೊತ್ತುಗುರಿಯಿಲ್ಲದ ಅಲೆಮಾರಿಗೆ ಕೊಟ್ಟುಬಿಟ್ಟಳಲ್ಲ! ಇವಳ್ಯಾವ ಸೀಮೆಯವಳು?’ ಅಂತ ಯೋಚಿಸ್ತಿದ್ದೀರ? ಅವನ್ಯಾರು ಅಂತ ನಾನು ಹೇಳದೇ ಇರುವ ಕಾರಣವಿಷ್ಟೇ. ಅವನಿನ್ನೂ ಚಿಕ್ಕವನು. ಅವನ್ಯಾರೆಂಬುದು ಇನ್ನೂ ಗೊತ್ತಾಗಬೇಕಿದೆ. ಅಷ್ಟರೊಳಗೆ ಅವನ್ಯಾರು ಅಂತ ನಾನು ನಿಮಗೆ ಹೇಳುವುದಾದರೂ ಏನನ್ನು?

ನಿಮ್ಮೆಲ್ಲರ ಹಾರೈಕೆ, ಒಂದಿಷ್ಟು ಪ್ರೀತಿ, ಒಂದು ಹಿಡಿ ಪ್ರೋತ್ಸಾಹವೇ ಸಾಕಾಗಬಹುದು ಅವನಿನ್ನು ಬರೆಯುವುದಕ್ಕೆ. ಅವನ ಹಾರೈಸುವಿರ?

ಅವನ ಬರಹಗಳನ್ನು ನಾನೂ ಓದಿಲ್ಲ. ಬೇರಿನ ಮೇಲಿಟ್ಟ ಪ್ರೀತಿಯೇ ಮೊಳಕೆಯ ಮೇಲೂ ಇರುವ ಹಾಗೆ. ಪ್ರೀತಿ, ಮಮತೆಯ ಜೊತೆ ಒಂದು ಭರವಸೆ. ಆ ಭರವಸೆ ಹುಸಿಯಾಗದಿರಲಿ. ಬುದ್ಧನಾಗದೆ, ಅಲೆಮಾರಿಯೂ ಅಲ್ಲದೆ ಅವನು ಗೌತಮನಾಗಿಯೇ ಗುರುತಿಸಿಕೊಳ್ಳಲಿ ಎಂಬ ಹಾರೈಕೆಯೊಂದಿಗೆ...

ವಂದನೆಗಳೊಂದಿಗೆ,
ಪ್ರೀತಿಯಿಂದ,
-ಶಾಂತಲಾ ಭಂಡಿ.

April 17, 2009

ಅಜ್ಜನಮನೆಗೆ ಹೋಗುವ ಬಸ್ಸು...

ಅರ್ಧಂಬರ್ಧ ಎಚ್ಚರ. ಅತ್ತೆ ಮಗೂನ ತೋರ್ಸಿ ನಿಮ್ಮಿಬ್ರುನ್ನೂ ಹೋಲ್ತಾನೆ ನನ್ನ ಮೊಮ್ಮಗ ಅಂದ್ರು. ಹಾಗೆ ಹೇಳುತ್ತಲೇ ನನ್ನ ಕೆನ್ನೆ ಸವರಿದ್ರು. ಅಮ್ಮ ಹಣೆ ನೇವರಿಸಿದ್ರು. ಸಣ್ಣಗೆ ನಕ್ಕೆ ಅನ್ಸತ್ತೆ, ನಿದ್ರೆ ಬಂತು.

ಇವತ್ತು ನಮ್ಮತ್ತೆಯ ಮೊಮ್ಮಗನ್ನ ಕೇಳಿದೆ ‘ಕನ್ನಡ ಓದೋಕೆ ಬರತ್ತ?’ ಅಂದೆ. ‘ಸಾರೀಮ್ಮಾ.. ಬರೋಲ್ಲ’ ಅಂದ. ಹಾಗಾದ್ರೆ ಆವತ್ತು ಅತ್ತೆ ಹೇಳಿದ್ದು ಸುಳ್ಳ? ಅಂವ ನಮ್ಮಿಬ್ರನ್ನೂ ಹೋಲ್ತಾನೆ ಅಂದ್ರೆ ಅವಗೆ ಕನ್ನಡ ಬರಬೇಕಿತ್ತು, ಯಾಕೇಂದ್ರೆ ನಮ್ಮಿಬ್ಬರಿಗೂ ಕನ್ನಡ ಬರುತ್ತಲ್ಲ! ಯೋಚನೆಗೆ ಬಿದ್ದೆ.

‘ಅಯ್ಯೋ...ಕನ್ನಡ ಓದೋಕೆ ಬರಲ್ಲ ಅಂದ್ರೆ ನಿಂಗೆ ಮುಂದೆ ತುಂಬ ಕಷ್ಟ ಇದೆ’ ಅಂದೆ. ‘ಹೌದಾಮ್ಮ?’ ಅಂದ. ‘ಹ್ಞೂ...ಅಜ್ಜನಮನೆಗೆ ಹೋಪ ಬಸ್ಸಿನ ಬೋರ್ಡು ಕನ್ನಡದಲ್ಲೇ ಇಪ್ಪದು...’ ಅಂದೆ. ಅವನಿಗೆ ತಲೆಬಿಸಿ ಶುರುವಾಯ್ತು. ಇನ್ನೊಂದೆರಡು ಜಾಸ್ತಿನೇ ಹುಳಬಿಡೋಣ ಅನ್ನಿಸಿ ಮತ್ತೆ ಅವನ ಮುಂದೆ ಪಟ್ಟಾಗಿ ಕೂತೆ. ‘ಅಷ್ಟೇ ಅಲ್ಲ..ನೋಡು ಈವಾಗ...ಯಾರಾದ್ರೂ ಬಂದೂ ನಿನ್ನ ಮಾತೃಭಾಷೆ ಯಾವುದು ಅಂತ ಕೇಳಿದ್ರೆ ನೀನೇನು ಹೇಳ್ತೀಯ?’ ಅಂದೆ. ‘ಹಾಗಂದ್ರೇನಮ್ಮಾ..?’ ಬಂತು ಪ್ರಶ್ನೆ. ‘ಹಾಗಂದ್ರೆ....ಮದರ್ ಟಂಗ್’ ಅಂದೆ. ‘ನೀನು ದೊಡ್ಡವನಾದ್ಮೇಲೆ ನಿನಗೇ ಅನ್ನಿಸ್ಬಾರ್ದು ಅಲ್ವ? ಅಪ್ಪ ಅಮ್ಮ, ಅಜ್ಜಿ, ತಾತ ಎಲ್ರೂ ಮಾತಾಡ್ತಿದ್ದ ಭಾಷೆ ನಿಂಗೆ ಓದೋಕೆ ಬರೋಲ್ಲ ಅನ್ನಿಸಿದ್ರೆ ನಿಂಗೆ ಬೇಸರವಾಗೋಲ್ವ? ಅದೂ ಅಲ್ದೇನೆ ಅಮ್ಮ ಬ್ಲಾಗ್ ಬರೀತಾರಲ್ಲ ...ಅದೂ ಕನ್ನಡದಲ್ಲೇ ಇದೆ, ನಿಂಗೆ ಅಮ್ಮ ಬರ್ದಿದ್ದನ್ನ ಓದ್ಬೇಕು ಅನ್ನಿಸೋಲ್ವ? ನಿನ್ನದೇ ಆದ ಸ್ವಂತ ಭಾಷೆಯೇ ಇಲ್ಲ ಅಂತ ಮುಂದೊಂದು ದಿನ ನಿನಗೆ ಅನ್ನಿಸಬಾರದಲ್ವ?’ ಅಂತೆಲ್ಲ ತಲೆಬಿಸಿ ಹುಟ್ಟಿಸಿ ನಿಧಾನಕ್ಕೆ ಅವನ ಮುಂದಿಂದ ಏಳುವ ಯತ್ನ ಮಾಡಿದೆ.

‘ನನಗೆ ಹಾಗನ್ನಿಸಿದಾಗ ನೀ ಕಲಿಸಿಕೊಟ್ಟರಾಯ್ತಲ್ವಾ....?’ಲಾಜಿಕ್ಕು ಶುರುವಾಯ್ತು. ಇಂಥ ಲಾಜಿಕ್ಕಿಗೆ ಸೆಂಟಿ ಡಯಲಾಗ್ಸಿನಂಥ ಮೆಡಿಸಿನ್ ಬೇರೊಂದಿಲ್ಲ.
‘ನೋಡು..ಎಷ್ಟು ವರ್ಷದತನಕ ನಿನ್ನಮ್ಮ ಹೀಗೆ ನಿಂಗೆಲ್ಲ ಕಲಿಸಿಕೊಡುತ್ತ ನಿನ್ನ ಜೊತೆಯೇ ಇರೋಕಾಗತ್ತೆ? ನೀ ಬೆಳೆದು ದೊಡ್ಡವನಾದಾಗ ನಿನ್ನಮ್ಮ ನಿನ್ನ ಜೊತೆಯಿಲ್ಲದ ಒಂದುದಿನ ನಿಂಗೆ ಹಾಗನ್ನಿಸಿಬಿಟ್ರೆ!’ ಮತ್ತೆ ಕೇಳಿದೆ.
‘ಸರೀಮ್ಮ, ಏನಾದ್ರೂ ಕಲಿಸಿಕೊಡು, ಓದ್ತೀನಿ’ ಅಂದ. ಅಲ್ಲಿಗೆ ಏನನ್ನೋ ಸಾಧಿಸಿದ ಖುಷಿಯಲ್ಲಿ ಅವನ ಕೆನ್ನೆತಟ್ಟಿ ತಲೆನೇವರಿಸಿ ‘ಜಾಣ ಮರಿ’ ಅಂದೆ.


ಅಂತೂ ಆವತ್ತು ಅಂವ ಕನ್ನಡ ಓದಿದ. ನಿಜ, ಅಂತೂ ಅವ ಆವತ್ತು ಕನ್ನಡ ಓದಿದ.

March 10, 2009

ಜಾಲದ ಜಾಲದಲಿ ಮಗದೊಂದು ಮರಿಚುಕ್ಕಿ...

ನಿನ್ನೆಯತನಕ ಮನೆಯ ಹಿಂದಿನ ಹಸಿರುರೆಂಬೆಗಳು ಪರಸ್ಪರ ಗಾಳಿಹಾಕಿಕೊಳ್ಳುತ್ತಲೇ ಇದ್ದವು. ಇವತ್ತು ಬೆಳಗಾಗುವುದರೊಳಗೆ ಇಡಿಯಮರವೇ ತುಂಡುತುಂಡು.ಯೋಚಿಸುತ್ತಲೇ ನೆಟ್ಟದೃಷ್ಟಿಯನ್ನೇ ಹಿಂಬಾಲಿಸಿ ಬಾಗಿಲಿಂದಾಚೆಗೆ ಮನೆಹೊರಬಂದು ನಿಂತೆ. ಹೊರಗೋಡೆಯ ಮೇಲಿನ ಬಿಸಿಲಜವನಿಕೆಯನ್ನು ಯಾರೋ ಚೂರೇಚೂರು ಸರಿಸುತ್ತಿರುವಂತೆ ಬಿಸಿಲತೆರೆ ಇಷ್ಟಿಷ್ಟೇ ಇಂಚಿಂಚಾಗಿ ಇಳಿದುಬರುತ್ತಲಿತ್ತು. ಇನ್ನೊಂಚೂರು ಈ ಎಳೆಬಿಸಿಲಿಳಿದು ಬಂದಿದ್ದರೆ ಬೆಚ್ಚನೆಯ ಬಿಸಿಲಲ್ಲಿ ನೆನೆಯುತ್ತ, ಬೆಳಗಿನ ಈ ಚಳಿಗೊಂದು ಹದ ಬರುತ್ತಿತ್ತು ಅಂದುಕೊಳ್ಳುತ್ತ ಟೀ ಹೀರುತ್ತ ನಿಂತಿದ್ದೇನೆ. ಮೇಲೆ ನೋಡಿದರೆ ಸೂರ್ಯ ಪದತ್ಯಾಗ ಮಾಡಿದ ಅಧಿಕಾರಿಯ ಹಾಗೆ ಗುಮ್ಮಗಿದ್ದಾನೆ.


ಪಕ್ಕದಮನೆಯ ಅಮ್ಮನಿಗೆ ಇವತ್ತು ಕೋಪ. ಮೂರುವರ್ಷದ ಮಗಳು ‘ಅಮ್ಮಾ’ ಅಂತ ಮೂರುಬಾರಿ ಕರೆದರೂ ಮಾತನಾಡುತ್ತಿಲ್ಲ. ಆ ಮುದ್ದುಕರೆಗೆ ‘ಓ’ಗೊಟ್ಟುಬಿಡಲಾ ಅಂದುಕೊಳ್ಳುತ್ತೇನೆ. ಅತ್ತ ತಿರುಗಿದರೆ ಆ ಮುಂಜಾವಿಗೆ ಅರಳಿದ ಎಳೆಪಕಳೆಯೊಳಗೂ ಅಂಥದೇ ಜಿನುಗು, ಕರೆದೂ
ಕರೆದೂ ಅತ್ತು ಸುಮ್ಮನಾದ ಮಗುವಿನ ಎಳೆಯಕಣ್ಣುಗಳ ಹಾಗೆ. ಈಗ ಆ ಅಮ್ಮನಿಗೂ ‘ಓ’ಗೊಡದೇ ಇರಲಾಗದೇ ಅಗೋ ‘ಹ್ಞೂ... ಬಂದೇ...’ಅಂದೇಬಿಟ್ಟಿದ್ದಾಳೆ. ಖುಷಿಯಲ್ಲಿ ಎರಡುಗುಟುಕಿನಷ್ಟೂ ಚಹ ಒಮ್ಮೆಲೇ ಹೀರುತ್ತೇನೆ. ಯೋಚನೆಗಳೆಲ್ಲೋ ಹಾರುತ್ತವೆ.ಚಹವನ್ನು ಪೂರ್ತಿ ಹೀರುವಷ್ಟರಲ್ಲಿ ಗೋಡೆಯ ಮೇಲಿನ ಬಿಸಿಲು ಗೋಡೆಯಿಂದ ಹರಿದಿಳಿದು ನೆಲದ ಮೇಲೆ ಆವಾರವಾಗುತ್ತಿದೆ.

ಮನಸ್ಸು ಹಿಂದೆಹರಿಯಲಾರಂಭಿಸುತ್ತಿದೆ. ಆವತ್ತೂ ಅಷ್ಟೇ....ಹೀಗೆ ಮನಸ್ಸನ್ನು ಸುಮ್ಮನೆ ತಿರುಗಾಡಲುಬಿಟ್ಟು ಕುಳಿತಿದ್ದೆ. ರಾಜೇಂದ್ರ ಫೋನಾಯಿಸಿ ಇಲ್ಲೊಂದು ಬ್ಲಾಗ್ ಇದೆ, ಅದರ ಲಿಂಕ್ ನಿಂಗೆ ಮೇಲ್ ಮಾಡಿರ್ತೀನಿ, ಆ ಬ್ಲಾಗ್ ನ ಬಲಭಾಗದಲ್ಲಿ ಒಂದೆರಡು ಬ್ಲಾಗ್ ಗಳಿವೆ. ಚೆನ್ನಾಗಿವೆ,
ನೀನು ಓದು’ ಅಂತಂದು ಮೇಲ್ ಕಳಿಸಿದ. ಆ ಬ್ಲಾಗಿನ ಬಲಭಾಗದಲ್ಲಿ ಮೊದಲಿಗೆ ಸಿಕ್ಕಿದ್ದು ಸುಶ್ರುತನ ಬ್ಲಾಗ್. ಓದಿದೆ. ಅದೆಷ್ಟು ಚೆಂದದ ಬ್ಲಾಗ್.
ಊರ ನೆನಪಾಗಿ ಕಣ್ಣೀರು ತುಂಬಿಕೊಂಡು ನನ್ನದೇ ತಮ್ಮನ ಬರಹಗಳಿಗೆ ಪ್ರತಿಕ್ರಿಯಿಸುವ ಹಾಗೆ ಕಣ್ದುಂಬಿಕೊಂಡು ಪ್ರತಿಕ್ರಿಯಿಸಿದೆ.ನಾಗರಪಂಚಮಿಯ ಸಲುವಾಗಿ ಸುಶ್ರುತ ಬರೆದ ಬರಹವನ್ನೋದಿದಾಗ ತಮ್ಮನ ನೆನಪಾಗಿ, ರಾಖಿಹಬ್ಬದಂದು ತಮ್ಮನಿಗೆ ಖುದ್ದಾಗಿ ರಾಖಿ ಕಟ್ಟಲಾಗಲಿಲ್ಲವಲ್ಲ ಅನ್ನುವ ಬೇಸರ ಕಣ್ಣಹನಿಯಾಗಿ ಹರಿದಿಳಿದುಬಂತು. ಕಣ್ಣೊರೆಸಿಕೊಳ್ಳುತ್ತಲೇ ಸುಶ್ರುತನ ಬ್ಲಾಗಿಗೆ ಪ್ರತಿಕ್ರಿಯಿಸಿದೆ. ಹಾಗೆಯೇ ಹರ್ಷ ಭಟ್, ಶ್ರೀನಿಧಿ, ಸಂದೀಪ ನಡಹಳ್ಳಿ ಯವರುಗಳ ಚೆಂದದ ಬ್ಲಾಗುಗಳೂ ಓದಲು ಸಿಕ್ಕಿದ್ದು ಖುಷಿಯಾಗಿತ್ತು.

ಸುಶ್ರುತನ ಬ್ಲಾಗಿನಲ್ಲಿ ಸಿಕ್ಕ ಸಿಂಧಕ್ಕನ ಬ್ಲಾಗ್ ನೋಡಿದಾಗಲಂತೂ ಆದ ಖುಷಿ ಅಷ್ಟಿಷ್ಟಲ್ಲ. ತುಂಬ ದಿನಗಳ ಬಳಿಕ ಚೆಂದದ ಅಕ್ಕಳೊಬ್ಬಳು ದಿಢೀರ್ ಅಂತ ಸಿಕ್ಕಿಬಿಟ್ಟರೆ ಆಗುವಂಥದ್ದೇ ಅನಿರ್ವಚನೀಯ ಭಾವ. ಆ ಅನುಪಮ ಬರಹಗಳು, ಅದರೊಳಗಿನ ಪ್ರತಿಸಾಲುಗಳು ಸೆಳೆವರೀತಿಯ ಝಳಪೆಷ್ಟೆಂದರೆ, ಸಿಂಧು ಅಕ್ಕ ಬರೆದ ಪ್ರತಿಸಾಲುಗಳೂ ‘ನೀನೂ ಬರೆ, ಯತ್ನಿಸು’ ಎಂಬುದಾಗಿ ಓದಿದವರನ್ನು ಹುರಿದುಂಬಿಸುವ ಹಾಗೆ ಅವಳ ಬರಹಬಿಂಬದೊಳಗಿನ ಚುಂಬಕ ಶಕ್ತಿ. ಕೂಗಳತೆಯ ದೂರದಲ್ಲಿ ಎಲ್ಲವೂ ಸಿಕ್ಕಹಾಗೆ ಅವಳ ಬರಹಗಳನೋದುತ್ತಿದ್ದರೆ. ಅದು ಬರಿಯ ಬ್ಲಾಗ್ ಬರಹವಲ್ಲ, ಪುಸ್ತಕ ರೂಪಕೊಟ್ಟರೆ ಅನುಪಮ ಸಾಹಿತ್ಯ.

‘ಸಿಂಧು ಬ್ಲಾಗ್ ನೋಡಿದರೆ ನಂಗೂ ಬರೀಬೇಕು ಅನ್ಸತ್ತೆ’ ಅಂತ ನನ್ನಷ್ಟಕ್ಕೆ ಆಡಿಕೊಳ್ಳುತ್ತ ಕಂಪ್ಯೂಟರ್ ಮುಂದಿಂದ ಎದ್ದಾಗ, ನಾನಾಡಿದ ಮಾತು ಪಕ್ಕದಲ್ಲಿದ್ದ ರಾಜೇಂದ್ರ ಅವರ ಕಿವಿಗೂ ಕೇಳಿಸಿತಿರಬೇಕು. ತಕ್ಷಣವೇ ಅದೇ ದಿನ ಅಂದರೆ, ಅಕ್ಟೋಬರ್ ಎರಡು, ಎರಡುಸಾವಿರದ ಏಳರ ಸಂಜೆ ಬ್ಲಾಗ್ ತೆರೆಯಲಾಯಿತು. ಪಲ್ಯಕ್ಕೆ ಒಗ್ಗರಣೆ ಹಾಕುತ್ತಿದ್ದವಳಿಗೆ ಕೇಳಿದ, ‘ಏನಾದರೂ... ಟೈಟಲ್ ಹೇಳು’ ಅಂತ. ಒಗ್ಗರಣೆ ಹಾಕುತ್ತ ಹೆಚ್ಚಿಗೇನೂ ಯೋಚಿಸದೇ ‘ನೆನಪು ಕನಸುಗಳ ನಡುವೆ’ ಅಂದೆ. ‘ಹ್ಮ್.....’ ಅಂದವನು ಟೈಪಿಸಿದ. ಮರುದಿನ ಹಳೆಕಡತ ಬಿಚ್ಚಿಟ್ಟುಕೊಂಡು ಸಾಲಾಗಿ ಹಳೆಕಡತವನ್ನೆಲ್ಲ ಬ್ಲಾಗಿನಲ್ಲಿ ಸುರುವುತ್ತ ಬಂದೆ. ಆ ದಿನವೇ ಹರ್ಷಭಟ್ಟರಿಗೆ ರಾಜೇಂದ್ರ ಭಂಡಿಯವರಿಂದ ಒಂದು ಇ-ಮೇಲ್ ರವಾನೆಯಾಯಿತು ಬ್ಲಾಗಿನ ಲಿಂಕ್ ಸಹಿತ. ನನ್ನ ಬ್ಲಾಗಿನ ಪ್ರಥಮ ಓದುಗರೆಂದರೆ (ರಾಜೆಂದ್ರ ಮತ್ತು ನಾನು, ಇಬ್ಬರ ಹೊರತಾಗಿ) ಹರ್ಷ ಭಟ್ಟರು. ಪ್ರಪ್ರಥಮ ಪ್ರತಿಕ್ರಿಯೆ ಕೂಡ ಹರ್ಷಭಟ್ಟರದೇ.

ಹಾಗೆಯೇ ರಾಜೇಂದ್ರ ಭಂಡಿ, ರವಿ ಭಂಡಿ, ಆಶುಮರಿ, ಪೂರ್ಣಿಮಾ ಭಟ್ಟ ಸಣ್ಣಕೇರಿ, ಪ್ರೋಟೋನ್,ತೇಜಸ್ವಿ, ಸುಶ್ರುತ, ಪ್ರಕಾಶ ಹೇಮಾದ್ರಿ, ಮಂಜುನಾಥ್ ಭಟ್ ಮುಂತಾದವರೆಲ್ಲರ ಪ್ರೋತ್ಸಾಹದಿಂದ ಅಷ್ಟಿಷ್ಟು ಗೀಚುತ್ತ, ಚೆಂದ ಚೆಂದದ ಬ್ಲಾಗ್ ಬರಹಗಳನ್ನೆಲ್ಲ ಓದುತ್ತಿರುವಾಗಲೇ ಜ್ಯೋತಿ ಅಕ್ಕ, ಜಗಲಿಭಾಗವತರು, A Paradise of Dreamers, ತ್ರಿವೇಣಿ ಅಕ್ಕ, ವಿಕ್ರಮ ಹತ್ವಾರ್,ಸೀಮಕ್ಕ, Sree ಮತ್ತು ಶ್ರೀ ಮತ್ತು ಶ್ರೀನಿಧಿ, ಸಂದೀಪ ನಡಹಳ್ಳಿ, ಶ್ಯಾಮಾ, ಮನಸ್ವಿನಿ,ಮಾಲಾ, ವಿಕಾಸ, ಹರೀಶ,ಅನ್ನಪೂರ್ಣ ದೈತೋಟ, ಸುನಾಥ ಅಂಕಲ್, ಚೇತನಾ, ಟೀನಾ, ಮೃಗನಯಿನಿ, ಪರಿಸರ ಪ್ರೇಮಿ, ಅಮರ, ಚೆಂಡೆಮದ್ದಳೆ, ಅಲೆಮಾರಿಯ ಅನುಭವ, ಮಂಜುಮುಸುಕಿದ ದಾರಿ, ಮಳೆಹನಿ,ಶಿವ್, ಜೋಗಿಮನೆ, ಮಧು, ತೇಜಸ್ವಿನಿ, ಚಿತ್ರಾ...ಹೀಗೆ ಬ್ಲಾಗಿಂದ ಬ್ಲಾಗುಗಳ ಬೆನ್ನುಹತ್ತಿ ಓದಿದ ದಿನಗಳು ಚೆಂದವೇ ಇದ್ದವು. ಚೆಂದ ಚೆಂದ ಬರಹ ಕೊಟ್ಟು ಓದಲನುವುಮಾಡಿಕೊಡುತ್ತ, ಬರೆದವರನ್ನು ಪ್ರೋತ್ಸಾಹಿಸುತ್ತಲಿದ್ದ ಎಲ್ಲ ಉತ್ಸಾಹಿಬರಹಗಾರ/ಗಾರ್ತಿಯರ ಭರ್ಜರಿಯ ದಿನಗಳವು. ಮತ್ತೆ ಹೊಸ ಹೊಸ ಚೆಂದದ ಬ್ಲಾಗುಗಳ ಸುರಿಮಳೆಯಾಗಿ ನಾವೆಲ್ಲ ಅಂಥ ಚೆಂದದೊಂದು ಕನ್ನಡದ ಬ್ಲಾಗುಗಳ ಮಳೆಯಲ್ಲಿ ತೋಯುತ್ತ ನಲಿಯುತ್ತ, ಆನಂದಿಸುತ್ತಲಿರುವುದೊಂದು ಕನ್ನಡದ ಹೆಮ್ಮೆಯೇ ಸರಿ. ಇಂದೀಗ ಮತ್ತೊಮ್ಮೆ ಎಲ್ಲರಿಗೂ ವಂದನೆಗಳು.


ಇದೀಗ ನನ್ನ ಬ್ಲಾಗ್ ಮರಿಯ ವಿಳಾಸ ಬದಲಾಗುತ್ತಲಿದೆ. shantalabhandi.blogspot.com ಇದ್ದಿದ್ದೀಗ shantalabhandi.com ಎಂದಾಗಿದೆ. ಸಧ್ಯಕ್ಕೆ shantalabhandi.blogspot.com ವಿಳಾಸವನ್ನು ಅಷ್ಟು ಸುಲುಭವಾಗಿ ನನ್ನಿಂದ ಬಿಡಲಾಗುತ್ತಿಲ್ಲವಾದ ಕಾರಣ ನಾನೂ ಸಹ ಇದೇ ವಿಳಾಸವನ್ನು ಬಳಸುತ್ತಿದ್ದೇನೆ. ‘ಜೊತೆಯಾಗಿ... ಹಿತವಾಗಿ...’ ನನ್ನನ್ನು ಪ್ರೀತಿಯಿಂದ ಪ್ರೋತ್ಸಾಹಿಸುತ್ತಿರುವವರನೆಲ್ಲ ತೊರೆದು ಬ್ಲಾಗ್ ಮರಿಯನ್ನೆತ್ತಿಕೊಂಡು ಒಂದೇಸಲಕ್ಕೆ ಮನೆಬದಲಾಯಿಸುವ ಕೆಲಸಕ್ಕೆ ಮನವೊಪ್ಪುತ್ತಿಲ್ಲ. ಆದರೆ ತಿಂಗಳೊಪ್ಪತ್ತಿನಲ್ಲಿ ಕೇವಲ shantalabhandi.com ಮಾತ್ರ ಉಳಿಯಬಹುದು. ವಿಳಾಸ ಬದಲಾದ ಮಾತ್ರಕ್ಕೆ ವಿಶೇಷತೆ, ವಿಭಿನ್ನತೆಯ ನಿರೀಕ್ಷೆಯನ್ನು ಖಂಡಿತವಾಗಿ ಇಟ್ಟುಕೊಳ್ಳಬೇಡಿ ಎಂಬುದು ಪ್ರೀತಿಯ ಎಲ್ಲರಲ್ಲಿ ನನ್ನ ಪುಟ್ಟಮನವಿ. shantalabhandi.blogspot.com ನಲ್ಲಿದ್ದಂತೆ ನಾನು ಮತ್ತೆ ನನ್ನ ಸಪ್ಪೆಬರಹಗಳೊಂದಿಗೆ ಖಂಡಿತ ನಿಮ್ಮೆಲ್ಲರನ್ನು ಕಾದಿರುತ್ತೇನೆ. ಅಲ್ಲಿಗೂ ಬನ್ನಿ. ಎಲ್ಲರನ್ನೂ ಮತ್ತೊಮ್ಮೆ ನೆನೆಯುತ್ತ... ಅನಂತ ಧನ್ಯವಾದಗಳನರ್ಪಿಸುತ್ತ...ವಂದನೆಗಳೊಂದಿಗೆ,
ಪ್ರೀತಿಯಿಂದ,
-ಶಾಂತಲಾ ಭಂಡಿ.

February 10, 2009

ಶ್ರಾವಣ ಸಂಜೆಯಲಿ ನೀನಿರದ ಹೊತ್ತು...


ಶ್ರಾವಣದ ಸಂಜೆ ಮಳೆಗಾಲದೊಂದು ದಿನ

ಗೆಳೆಯ ನೀನಂದು ಮನೆಯೊಳಗಿರದ ಹೊತ್ತು

ಚೆಲುವ ಚೆನ್ನಿಗನು ಮಳೆರಾಯ ಬಂದಾಗ

ಸೂರಂಚು ಸೊಗಸಾಗಿ ಸೋರುತ್ತಲಿತ್ತುನೆನಪಿಗಾಸರೆಯಾಗಿ ಸೂರಂಚ ಕಂಬ

ಸೂರಂಚ ನೀರಲಿ ನಿನ್ನ ಬರುವಿನ ಬಿಂಬ

ಆಗಸದಿ ಕವಿದಿರಲು ಹನಿಹೊತ್ತ ಮೋಡ

ಮನದೊಳಗೆ ಕವಿದಿಹ ನೀ ಕವಿಯೇ ಗೆಳೆಯ


ನುಲಿವ ಬೆರಳಂಚಲ್ಲಿ ಕಣ್ಣಂಚು ಕುಳಿತು

ಹನಿಹನಿಗಳೊಳಗೆಲ್ಲ ಮಿಂದೆದ್ದ ಕನಸು

ಸೂರಂಚ ಹನಿಯಲ್ಲಿ ಸೆರಗಂಚು ನೆನೆದು

ಹಸಿಹೆಜ್ಜೆಗಳಲೆಲ್ಲ ನಿನ್ನದೇ ಹೆಸರು


ನೆನಪು ನವಿರಾಗಿ ಹನಿಯಾಗಿ ಇಳಿದಿರಲು

ಬಲಗೆನ್ನೆ ರಂಗಾದ್ದು ಕನ್ನಡಿಗೆ ಗೊತ್ತು

ಹಾದಿತಿರುವಿನಲಿ ಕೈಹಿಡಿದು ಎಳೆದದ್ದು

ಕೊರಳತಿರುವಿನಲ್ಲಿಹ ಕರಿಮಣಿಯ ಸೊತ್ತು


ಅಂಗಳದ ನೀರಿನಲಿ ನೀನಿರದ ದೋಣಿ

ತೇಲುತಿದೆ ನೆನಪು ಹುಟ್ಟಿರದ ನಾವೆಯಲಿ

ಜಡೆಯೆಳೆದು ನಕ್ಕು ಕಿರುಬೆರಳ ಕಚ್ಚಿದ್ದು

ನೆನಪಲ್ಲ ಗೆಳೆಯ ಅದು ಹಳೆಯ ಕನಸು


ಉದುರುವ ಹನಿಗಳಲೇ ಹೊತ್ತುಗಳ ಅಳೆದು

ಬೊಗಸೆಯ ತುಂಬೆಲ್ಲ ತಾಸುಗಳೇ ಸುರಿದು

ನೀ ಬರುವ ಹಾದಿಗೆ ಕಂಗಳ ಕಳಿಸಿದ್ದೆ

ಹಾದಿಯ ಬದಿಯಲ್ಲಿ ನಿನ್ನೆದುರಾದವೇನು?ನೀ ಬಂದ ಹೊತ್ತಲ್ಲಿ ಹೊರದೆಯೇ ಹೆರಿಗೆ

ನಿನ್ನಿಂದ ಹುಟ್ಟಿಹವು ಈ ಎಲ್ಲ ಸಾಲು

ನೀನೇ ಸಾಲುಗಳ ‘ತಂದೆ’, ತಾಯಿ ನಾನು

ಮತ್ತೆ ಹನಿಗಳಲ್ಲಿ ತೇಲಿ ನೆನಪನೌಕೆ


ಶ್ರಾವಣದ ಸಂಜೆ ಮಳೆಗಾಲದೊಂದು ದಿನ

ಗೆಳೆಯ ನೀನಂದು ಮನೆಯೊಳಗಿರದ ಹೊತ್ತು

ಚೆಲುವ ಚೆನ್ನಿಗನು ಮಳೆರಾಯ ಬಂದಾಗ

ಸೂರಂಚು ಸೊಗಸಾಗಿ ಸೋರುತ್ತಲಿತ್ತು**************************************************************************************************

*

*

*

*

*

*

*

*

*

*

*

*

*

*

*

*

*

*

*

*

*

*

*

*

*

*

*
ಅನುದೀಪ ಒಂದು ಉಂಗುರ(ಚಿನ್ನದ್ದಲ್ಲ, ಪ್ರೀತಿದು) ತೊಡಿಸಿ ‘ಆಯ್ ಲವ್ ಯು ಅಮ್ಮಾ’ ಅಂದಾಗ ಈ ದಿನದ ಅರ್ಥವನ್ನ ಹುಡುಕ್ತಾ ಹೋದ್ರೆ ಅರ್ಥ ತುಂಬ ವಿಶಾಲವಾಗಿದೆ ಅನ್ನಿಸಿಬಿಡ್ತು. ನಾನು ಯಾವತ್ತೂ ಮಗನಿಗಿಂತಲೂ ಚಿಕ್ಕವಳೇ ಅಂತ ಯಾವತ್ತೋ ಗೊತ್ತಾದ ವಿಷಯಕ್ಕೆ ಇವತ್ತೂ ಮುಗುಳ್ನಕ್ಕು ಸುಮ್ಮನಾಗುತ್ತೇನೆ.ಹೊಸದಿನದಲ್ಲೊಂದು ಹೊಸ ಅರ್ಥ ಕಂಡು ಬದುಕ ಹಸನಾಗಿಸಿಕೊಳ್ಳುವುದು ಅವರವರ ಅರ್ಥಕ್ಕೆ ಬಿಟ್ಟಿದ್ದು. ಅರ್ಥವೆಂದರೆ ಇಷ್ಟೆಯೇ. ಮತ್ತು.................ಅರ್ಥವೆಂದರೆ ಇದೇ ಅರ್ಥವಲ್ಲ.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

ಖಾಲಿ ಕಣಜ

.