December 22, 2008

ನಕ್ಕು ಬಿಡು ಒಮ್ಮೆ...

‘ನೀ ತಮ್ಮನ್ ಸಂತಿಗೆ ಬಾರೇ...’ ಅಂದವರು ಪೇಟೆಗೆ ಹೋಗಿದ್ದಾಯ್ತು. ‘ಒಂದ್ನಿಮಿಷ...’ ಅಂತ ಕರೆಯುತ್ತಿದ್ದರೆ ಅಲ್ಲಿ ಸ್ಕೂಟಿ ಹೊರಟೇ ಹೋಯ್ತು. ರೆಡಿಯಾಗಿ ಅಡುಗೆ ಮನೆಗೆ ಬಂದೆ. ಅತ್ತೆ ‘ಅಯ್ಯ..ಪ್ಯಾಟಿಗೆ ಹೋಗ್ತಿ, ಖರೀದಿ ಎಲ್ಲ ಮುಗದ್ದಿಲ್ಲೆ ಹೇಳಿದ್ಯಲೇ... ರಾಜು ಪ್ಯಾಟಿಗೆ ನಡದ್ನಲೆ...ರವಿ ಹೋಗ್ತ್ನನ ತಗ , ಅವನ್ನ ಸಂತಿಗೆ ಹೋಗ್ಲಕ್ಕಡ್ಡ’ ಅಂದ್ರು ರವಿಯತ್ತ ನೋಡುತ್ತ.

ರವಿಯೋ ಅಪರೂಪಕ್ಕೆ ಮನೆಗೆ ಬಂದಿದ್ದ ಗೆಳೆಯರ ಜೊತೆ ‘ನಿಂಗ ಬಂದವ್ವೆಯ ಪಿ.ಆರ್ ಗೆ ಅಪ್ಲೈ ಮಾಡ್ಬಿಡಿ. ಡಿಲೇ ಮಾಡ್ಕ್ಯಳಡಿ, ಆನು ಹಂಗೆ ಮಾಡ್ಕ್ಯಂಡು ಕಡಿಗ್ ಮಳ್ ಹರಿಯಂಗೆ ಆತು’ ಅಂತೇನೋ ಹೇಳ್ತಾ ಇದ್ದ. ಗಹನವಾದ ವಿಚಾರ ನಡೆಯುತ್ತಿತ್ತಾದ್ದರಿಂದ ಅವನು ನನ್ನ ಮುಖವನ್ನ ನೋಡುವುದನ್ನೇ ಕಾಯುತ್ತಿದ್ದವಳು ಮಾತಿನ ಮಧ್ಯೆ ನನ್ನ ಮುಖ ನೋಡಿದ್ದೇ ‘‘ಐದು ಗಂಟಿಗ್ ಹೋಪದ ಪ್ಯಾಟಿಗೆ?" ಅಂತ ಕೇಳಿಯೇ ಬಿಟ್ಟೆ. ಅವನು ‘ಹ್ಞ...ಹೋಪ, ಇನ್ನು ಹತ್ತೇ ನಿಮ್ಷ’ ಅಂದು ಮತ್ತೆ ಗೆಳೆಯರ ಮುಖ ನೋಡಿ ಮಾತು ಮುಂದುವರೆಸಿದ.

ಐದು ನಿಮ್ಷ..ಹತ್ತು ನಿಮ್ಷ...ಇಲ್ಲಾ...ಹದಿನೈದು ನಿಮ್ಷವಾಯ್ತು....ಅರೆರೆ ಅರ್ಧ ಗಂಟೆ ಕಳ್ದೇ ಹೋಯ್ತು. ಐದೂ ಇಪ್ಪತ್ತು ಗಡಿಯಾರದಲ್ಲಿ. ಸುಮ್ಮನೆ ಅತ್ತೆಯವರ ಮುಖವನ್ನೊಮ್ಮೆ ನೋಡಿದೆ. ಇವತ್ತೇ ಮುಗಿಸಿಕೊಳ್ಳಬೇಕಾದ ಕೆಲಸಗಳು, ಪ್ಯಾಕಿಂಗ್ , ಜೊತೆಯಲ್ಲಿ ನಾನಿನ್ನೂ ಪೇಟೆಗೆ ಹೊರಟಿಲ್ಲವೆಂಬ ಕಳಕಳಿ ಅತ್ತೆಯವರ ಮುಖದಲ್ಲಿಯೇ ಜಾಸ್ತಿ ಇದ್ದಂತಿತ್ತು.

ಸುಮ್ಮನೆ ತನ್ನ ಪಾಡಿಗೆ ತಾನು ಯಾವುದೋ ಚಾನೆಲ್ ಊದುತ್ತಿದ್ದ ಟಿ.ವಿ ಮುಂದೆ ಕುಳಿತೆ. ಯಾವತ್ತೂ ಟಿ.ವಿ ನೋಡದವಳು ಟಿ.ವಿ ಮುಂದೆ ಕೂತಾಗಲೇ ಅತ್ತೆಯವರಿಗೆ ಡೌಟು ಬಂದಿರಬೇಕು. ನಾ ಕುಳಿತಲ್ಲಿಗೇ ಬಂದು ‘ನೀ ಅವನ್ನ ಸಂತಿಗೆ ಹೋದ್ರಾಗ್ತಿತ್ತು, ಈಗ ಇಂವ ಎಷ್ಟೊತ್ತಿಗ್ ಹೊಂಡ್ತ್ನ ಏನ’ ಅಂದರು. ನನ್ನ ಬೇಜಾರಕ್ಕಿಷ್ಟು ಪ್ರೋತ್ಸಾಹ ಸಿಕ್ಕಂತಾಗಿ ‘ತಮ್ಮನ್ ಸಂತಿಗ್ ಬಾ ಹೇಳಿಕ್ಕೆ ನಡದ್ರು..’ ಇನ್ನೂ ಅಳುಮುಖ ಮಾಡಿ ಕೂತೆ. ‘ ಈ ಹುಡುಗ್ರೂವ ಸಧ್ಯದಲ್ಲೆ ಆಷ್ಟ್ರೇಲಿಯಾಕ್ಕೆ ಹೋಪ ಹುಡುಗ್ರು ಕಾಣ್ತು, ಇಂವ ಅವ್ಕೆ ಎಂತೆಂತೋ ಸಲಹೆ ಕೊಟ್ಗೋತಿದ್ದ, ನೀ ಒಂದ್ಸಲ ಅವಂಗೆ ಪ್ಯಾಟಿಗ್ ಹೋಪ್ದಿದ್ದು ಹೇಳಿ ನೆನಪಾರೂ ಮಾಡು, ಅಪ್ರೂಪಕ್ಕೆ ಸಿಕ್ಕಿದ್ವಲೇ ದೋಸ್ತ್ರು... ಅವ್ಕೂ ಗಡಬಿಡಿ ಆಗ್ತು ಈಗ ಪಾಪ... ’ ಅನ್ನುತ್ತ ಒಳನಡೆದರು.

ನಾನಾ...ಒಂದು ಸಲ ಏನನ್ನಾದ್ರೂ ಹೇಳಿಬಿಟ್ರೆ ಮುಗೀತು, ಇನ್ನೊಂದು ಸಲ ಹೇಳೋದೂ ಇಲ್ಲ, ಕೇಳೋದೂ ಇಲ್ಲ. ಒಣಜಂಭ ಅಂದುಕೊಂಡ್ರೂ ಪರವಾಗಿಲ್ಲ. ಒಂದೇ ಸಲಕ್ಕೆ ನನ್ ಈ ಹಾಳುಬುದ್ಧಿ ಬದಲಾಗೋದಾದ್ರೂ ಹ್ಯಾಗೆ? ನಾನೇನೂ ಕೇಳ್ಲಿಲ್ಲ.

ಮತ್ತೂ ಹದಿನೈದು ನಿಮಿಷಗಳು ಸರಿದಾಗ ‘ರವಿ ಲೇಟಾತೋ...’ ಅಂತ ಹೇಳೋಣ ಅಂದುಕೊಂಡವಳು ಅವನ ಮುಂದೆ ಕುಳಿತ ಅತಿಥಿಗಳ ನೆನಪಾಗಿ ಸುಮ್ಮನೆ ಮತ್ತೆ ವಾಪಸ್ ಬಂದು ಮತ್ತೆ ಟಿ.ವಿ ಮುಂದೆ ಕುಳಿತೆ. ಹೊರಗಡೆಯಿಂದ ಒಳಬಂದ ಮಾವನವರು ಟಿ.ವಿ ಮುಂದಿದ್ದ ನನ್ನ ನೋಡಿ ‘ಎಂತ ಆತೇ ಕೂಸೆ..’ ಅಂದ್ರು. ಅಂದರೆ ನನ್ನ ಈ ಜನಗಳಿಗೆ ಚೆನ್ನಾಗಿ ಗೊತ್ತಾಗ್ಬಿಟ್ಟಿದೆ ನನ್ನ ಬಗ್ಗೆ. ನನಗೆ ಬೇಜಾರಾಗಿದ್ರೆ ಮಾತ್ರ ಟಿ.ವಿ ಮುಂದೆ ಕೂತಿರುತ್ತೇನೆ ಅನ್ನುವದನ್ನೂ ಅರ್ಥೈಸಿಕೊಂಡಿದ್ದಾರೆ ಇವರು. ಸ್ವಲ್ಪ ಗಂಭೀರವಾಗಿಯೇ ‘ಎಂತ ಆಜಿಲ್ಲೆ’ ಅಂದೆ, ರವಿಯ ಮೇಲಿನ ಕೋಪವನ್ನು ಮಾವನವರ ಮೇಲೆ ಬಿಟ್ಟೆ.

ಮಾವನವರು ನಂಗೆ ಹೀಗೆ ಫ್ರೆಂಡು. ಏನನ್ನಾದ್ರೂ ಎಲ್ಲಾದ್ರೂ ಇಟ್ಕೊಂಡು ಹುಡುಕೋವಾಗ( ಹೆಚ್ಚಾಗಿ ಸ್ವಿಚ್ ಆಫ್ ಆಗಿರೋ ಮೊಬೈಲೋ ಅಥವಾ ಹೇರ್ ಕ್ಲಿಪ್ಪೋ ಹೀಗೆ...) ಸಹ ಅವರು ನನ್ನ ಸಾಹಾಯಕ್ಕೆ ಬರಬೇಕಾಗುತ್ತದೆ. ಸಣ್ಣಪುಟ್ಟದಕ್ಕೆ ಕಾಲೆಳೆಯುವ ಅವರೊಡನೆ ಸುಳ್ಳೆಪುಳ್ಳೆ ಕಾದಾಟ ನಂಗಿಷ್ಟ. ಸಂಜೆ ಅವರ ಜೊತೆ ಪೇಟೆಗೆ ಹೋಗಿ ಮಿರ್ಚಿಬಜೆ, ಅರ್ಧರ್ಧ ಮಸಾಲೆ ದೋಸೆ ತಿಂದು ವಾಪಸು ಬರೋವಾಗ ಅಲ್ಲಿ ಮಾವನವರ ಪರಿಚಯದವರ್ಯಾರಾದರೂ ಸಿಕ್ಕು ‘ಭಂಡಿ ಹೆಗಡೆಯವ್ರು.. ಮಗಳ ಜೊತೆ ಪೇಟೆಗ್ ಬಂದಿದ್ದಾ?’ ಅಂತ ಕೇಳಿದರೆ ಅವರು ಖುಷಿಖುಷಿಯಿಂದ ‘ಹ್ಞ...ಹೌದು ’ ಅಂದರೆಂದರೆ ಅಲ್ಲಿಗೆ ಎಲ್ಲ ಸರಿಯಾಗುತ್ತದೆ. ಪೇಟೆಯಲ್ಲಿ ಹೊಟ್ಟೆ ತುಂಬ ತಿಂದು ಮನೆಗೆ ಹೋಗಿ ಸರಿಯಾಗಿ ಊಟ ಮಾಡದೇ ಇದ್ದಾಗ ‘ಮೊದ್ಲೇ ಹೇಳಿದ್ರೆ ಅನ್ನಕ್ಕೇ ಇಡ್ತಿದ್ನಿಲ್ಲೆ’ ಅಂತ ಅತ್ತೆಯವರು ಹೇಳಿದರೆ ಅವರ ಮುಖ ನೋಡಿ ನಕ್ಕು ಬಿಡುತ್ತೇನೆ. ಈಗ ಅವರು ನಕ್ಕೇ ನಗುತ್ತಾರೆ.

ಅದನ್ನೆಲ್ಲ ಹೇಳ್ತಾಇದ್ರೆ ಇವತ್ತು ಮುಗಿಯೋಲ್ಲ ಬಿಡಿ. ವಿಷ್ಯ ಏನಂದ್ರೆ ನಾಳೆ ಸಂಜೆಯಾದ್ರೆ ಬೆಂಗಳೂರು ಬಸ್ ಹತ್ತಬೇಕು. ನಾಡಿದ್ದು ಸಂಜೆ ಫ್ಲೈಟ್ ಹತ್ಬೇಕು. ವಿಷಯ ಹೀಗಿಲ್ಲವಾಗಿದ್ದಲ್ಲಿ ಈ ಮೈದುನ ಎಷ್ಟು ಹೊತ್ತು ಯಾರ ಹತ್ರ ಮಾತಾಡಿದ್ರೂ ನಂಗೇನೂ ತೊಂದ್ರೆ ಇರ್ಲಿಲ್ಲ. ಒಂದಿಷ್ಟು ಆವತ್ತೇ ಮುಗಿಸಬೇಕಾಗಿದ್ದ ಖರೀದಿ ಕೆಲಸ ಹಾಗೇ ಉಳಿದಿತ್ತು. ಆದರೆ ಅವನ ಗೆಳೆಯರೂ ಅಪರೂಪಕ್ಕೆ ಸಿಕ್ಕಿದ್ದಾರೆ. ಅವರೂ ಅವನಿರುವ ದೇಶಕ್ಕೆ ಕಾರ್ಯ ನಿಮಿತ್ತ ಹೊರಟವರು. ಸಲಹೆ-ಚರ್ಚೆ ನಡೀತಾ ಇತ್ತು. ಅವನೂ ನಾಳೆಯೇ ಬೆಂಗಳೂರಿಗೆ ಹೊರಟು, ನಾಡಿದ್ದು ಆಷ್ಟ್ರೇಲಿಯಾಕ್ಕೆ ತೆರಳುವವನಾದ್ದರಿಂದಲೂ, ಅವರು ಅಪರೂಪಕ್ಕೆ ನಮ್ಮ ಮನೆಗೆ ಬಂದ ಅತಿಥಿಗಳಾಗಿದ್ದರಿಂದಲೂ ಮಾತುಕತೆ ನಡೆಯುತ್ತಲೇ ಇತ್ತು. (ಮಾತಿಗೆ ಜನ ಸಿಕ್ಕಿಬಿಟ್ಟರೆ ಅಣ್ಣ ತಮ್ಮ ಇಬ್ಬರೂ ಒಂದೇ)

ನಾನು ಅಡುಗೆ ಮನೆಯಲ್ಲಿ ಅವನನ್ನು ನೋಡಿದಾಗ ಕೈಯಲ್ಲಿ ಮುಗಿದು ಹೋದ ಒಂದೆರಡು ಬ್ಯಾಟರಿಗಳನ್ನು ಆ ಕೈಯಿಂದ ಈ ಕೈಗೆ, ಈ ಕೈಯಿಂದ ಆ ಕೈಗೆ ಬದಲಿಸುತ್ತ ಮಾತನಾಡ್ತಿದ್ದ. ಮಾತೆಲ್ಲ ಮುಗಿದು ಅಡುಗೆ ಮನೆಯಿಂದ ಹೊರಬಿದ್ದು ಟಿ.ವಿ ಇದ್ದ ಜಾಗಕ್ಕೆ ಬಂದವರು ‘ಅತ್ಗೆ, ಬಾರೆ ಯಮ್ಮನಿಗೆ, ಬತ್ಯ ಯಂಗ’ ಅಂತ ಹೊರಟಾಗ ಮನೆಗೆ ಬಂದ ಅತಿಥಿಗಳು ಬೇಗ ಹೊರಟರಲ್ಲ ಅನ್ನುವ ಬೇಸರ ಹಾಗೂ ಈಗ ರವಿ ಪೇಟೆಗೆ ಹೊರಡುತ್ತಾನೆ ಅನ್ನುವ ಖುಷಿ ಎಲ್ಲ ಒಟ್ಟಿಗೇ. ನನ್ನ ಬುದ್ಧಿ ಅರಿತಿದ್ದ ಈ ರವಿ ಮಹಾಷಯ ಅವರನ್ನು ಬೀಳ್ಕೊಡಲು ಅವರ ಹಿಂದೆಯೇ ಹೊರಡುತ್ತ ಅವರೊಡನೆ ಮಾತನಾಡುತ್ತಲೇ ತನ್ನ ಕೈಯ್ಯಲ್ಲಿದ್ದ ಬ್ಯಾಟರಿಗಳನ್ನ ನನ್ನ ಕೈಗೆ ವರ್ಗಾಯಿಸಿ ರಾಜೀ ಮಾಡಿಕೊಂಡು ಅವರ ಹಿಂದೆ ಹೊರನಡೆದ.

ಎಲ್ಲರಿಗೂ ಟಾಟಾ ಹೇಳಿ ಮನೆಯಿಂದ ಹೊರಟ ಗಾಡಿ ಸೀದ ಗಜಾನನ ಸ್ಟೋರ್ಸ್ ಎದುರು ನಿಂತಿತ್ತು. ಅಲ್ಲಿ ಹೋಗಿದ್ದೇಕೆಂದರೆ ಹಿಂದಿನ ದಿನ ಒಂದಿಷ್ಟು ಬಟ್ಟೆ ಖರೀದಿಸಿ ಬಿಲ್ ನೋಡುತ್ತ ಆಚೆ ಬಂದಾಗ ಹೇಳಿದ್ದ ರವಿ ‘ಭಾರೀ ಕಡ್ಮೆ ಹಾಕಿದ್ನಲೇ ಬಿಲ್ ಅಲ್ಲಿ’ ಅಂದಿದ್ದ. ಮನೆಗೆ ಬಂದು ನೋಡಿದ್ರೆ ನಾನು ಆರಿಸಿಟ್ಟ ಒಂದು ಇಳಕಲ್ ಸೀರೆ ಅಂಗಡಿಯಲ್ಲೇ ಬಿಟ್ಟು ಹೋಗಿತ್ತು. ಹಾಗಾಗಿ ಅದರ ಬೆಲೆಯನ್ನೂ ಬಿಲ್ ಅಲ್ಲಿ ಸೇರಿಸಿರಲಿಲ್ಲ.

ಗಜಾನನ ಸ್ಟೋರ್ಸ್ ಕೆಲಸ ಮುಗಿಸಿ ಹೊರಬಿದ್ದು ‘ಇನ್ನೆಂಥ ಕೆಲ್ಸ? ಲಿಸ್ಟ್ ನೋಡು’ ಅಂದಾಗ ನಾನು ನಿಧಾನಕ್ಕೆ ‘ಸ್ಟಫ್ಸ್ ಟು ಬಿ ಡನ್’ ಲಿಸ್ಟ್ ತೆಗೆದು ಅವನ ಕೈಗೇ ಕೊಟ್ಟೆ. ಲಿಸ್ಟ್ ಅಲ್ಲಿನ ಕೊನೆಯ ಸಾಲು ಓದಿ ಕಣ್ಣರಳಿಸಿ ಮುಖ ನೋಡಿದ. ನನಗೆ ಅರ್ಥವಾಯಿತು. ಏಕೆಂದರೆ ಆ ಲಿಸ್ಟ್ ಬರೆದದ್ದು ನಾನೇ. ಇಷ್ಟೆಲ್ಲ ಕೆಲಸಕ್ಕೇ ಸಮಯ ಸಾಕಾಗದಷ್ಟು ಗಡಿಬಿಡಿಯಿರುವಾಗ ‘ಮಸಾಲೆ ಪೂರಿ ಕೊಡಿಸು’ ಅಂತ ಕೇಳುವುದಾದರೂ ಹೇಗೆ? ಆಗಲೇಬೇಕಾಗಿದ್ದ ಕೆಲಸಗಳ ಪಟ್ಟಿಯಲ್ಲಿ ‘ಮಾಸಾಲೆ ಪೂರಿ’ ಅಂತಲೂ ಸೇರಿಸಿದ್ದೆ. ಭಾರತಕ್ಕೆ ಬಂದು ಮೂರುವಾರವಿದ್ದೂ ಮಸಾಲೆ ಪೂರಿ ತಿಂದಿದ್ದು ಮಾತ್ರ ಒಂದೇ ದಿನ. ಆವತ್ತು ಬೆಂಗಳೂರಿನ ಬಿಗ್ ಬಾಝಾರಿನಲ್ಲಿ, ಬಿಟ್ಟರೆ ಇವತ್ತು ಚೀಟಿಯಲ್ಲಿ ಬರೆದಿಡಬೇಕಾದ ಹೊತ್ತು ಬಂದಿತ್ತು.

ಎರಡನೆಯದಾಗಿ ಚಪ್ಪಲಿ ಅಂಗಡಿ ಹೊಕ್ಕು ಚಪ್ಪಲಿ ನೋಡತೊಡಗಿದರೆ ಅಂಗಡಿಯವರು ನಮ್ಮ ಕಾಲಿಗೆ ಚಪ್ಪಲಿಯನ್ನು ತೊಡಿಸಲು ಸಹಾಯ ಮಾಡಿದಾಗ ಯಾಕೋ ಇರಿಸು ಮುರಿಸು. ಮೊದಲೆಲ್ಲ ಚಪ್ಪಲಿ ತಗೊಳುವಾಗ ಅಂಗಡಿಯವರು ತೊಡಿಸಿ, ನಮಗೆ ಇಷ್ಟವಾದ ಮೇಲೆಯೇ ಚಪ್ಪಲಿ ತರುತ್ತಿದ್ದುದೆಲ್ಲ ಈಗಷ್ಟು ಸೊಗಸುತ್ತಿಲ್ಲ. ಮತ್ತೇನಿಲ್ಲ, ನಮ್ಮ ಕಾಲಿಗೆ ಹೊಂದುವ ಚಪ್ಪಲಿಯನ್ನು ನಾವೇ ಧರಿಸಿ ನೋಡಲಾಗದಷ್ಟು ಪರಾವಲಂಬಿತನ ಈಗೀಗ ಇಷ್ಟವಾಗುತ್ತಿಲ್ಲ. ಚಪ್ಪಲಿಯೊಂದನ್ನು ತೊಡಿಸಿ ‘ಅವರಿಗೆ ತೋರ್ಸಿ ಮೇಡಂ’ ಅಂತ ಅಂಗಡಿಯ ಯಜಮಾನರು ನಕ್ಕು ಹೇಳಿದಾಗ ನಾನು ನಗಲಿಲ್ಲ. ಆ ಅಂಗಡಿಯವರು ಶೋಕೇಸ್ ಇಂದ ಚಪ್ಪಲಿಯನ್ನು ತೆಗೆದು ನನ್ನ ಕಾಲಿನಲ್ಲಿನ ಹಳೆ ಚಪ್ಪಲಿ ತೆಗೆಸಿ, ಹೊಸ ಚಪ್ಪಲಿ ತೊಡಿಸುವವರೆಗೂ ಪ್ರತಿಯೊಂದನ್ನೂ ಅಲ್ಲಿಯೇ ಕುಳಿತು ರವಿ ನೋಡುತ್ತಿದ್ದಾನೆ. ಇನ್ನು ನಾನು ಆ ಚಪ್ಪಲಿಯಲ್ಲಿ ಮತ್ತೆ ತೋರಿಸುವುದದರೂ ಏನನ್ನು? ಯಾಕೋ ರವಿಯ ಮುಖ ನೋಡಬೇಕೆನ್ನಿಸಿ ನೋಡಿದೆ. ಅವನು ನನ್ನ ಹಾಗೆಯೇ ಸುಮ್ಮನಿದ್ದ.

ಚಪ್ಪಲಿ ಇಷ್ಟವಾಯ್ತು. ಚಪ್ಪಲಿ ಆಯ್ಕೆ ನನಗೆ ಮೀರಿದ್ದು ಅಂತ ಅಂಗಡಿಯವರು ನಿರ್ಧರಿಸಿದಂತಿತ್ತು. ಅಂಗಡಿಯವರು ಬಿಡುತ್ತಲೇ ಇಲ್ಲ ‘ಬೇಕಿದ್ರೆ ಅವರಿಗೆ ತೋರ್ಸಿ ಮೇಡಂ, ಚೊಲೋ ಉಂಟು ಚಪ್ಪಲಿ, ಹೇಳಿ ಕೇಳಿ ಬಾಟಾ ಅಲ್ವ?’ ಅಂದ್ರು. ಇನ್ನು ಆಗದ ಕೆಲಸವೆಂದು ನಿಧಾನಕ್ಕೆ ಎದ್ದು ನಿಂತು ರವಿಯ ಮುಖ ನೋಡಿ ‘ಹ್ಯಾಂಗಿದ್ದಾ?’ ಅಂತ ಕೇಳಿದೆ. ಅಂವ ನನ್ನಮುಖ ನೋಡಿದ ‘ನಿನ್ನ ಮುಖಕ್ಕೆ ಚೆನ್ನಾಗಿ ಒಪ್ಪುತ್ತದೆ’ ಎನ್ನುವವನಂತೆ. ‘ಹೀಲ್ಡ್ ಇದ್ದಿದ್ ಬ್ಯಾಡ್ದನ, ಅಣ್ಣಯ್ಯನ್ ಕಿಂತ ಎತ್ತರಕ್ಕೆ ಕಾಣ್ತ್ಯನ ನೀನು’ ಅಂದ. ಮದುವೆಯಾದಾಗಿಂದ ಬೇಸರದ ಏಕೈಕ ವಿಚಾರವೇ ಇದು! ಒಂದಿಚು ಹೀಲ್ಡ್ ಇರುವ ಚಪ್ಪಲಿ ತಗೊಂಡರೂ ಸೀರೆ ಉಟ್ಟಾಗ ನಾನು ಇವರಿಗಿಂತ ಎತ್ತರಕ್ಕೆ ಕಾಣಿಸುತ್ತೇನೆ ಅನ್ನುವುದು ಅನೇಕರ ಅಂಬೋಣ. ನನಗೋ ಅಶ್ಚರ್ಯ, ನನಗಿಂತ ೪ ಇಂಚು ಎತ್ತರ ಜಾಸ್ತಿಯಿರುವ ಇವರಿಗಿಂತ ನಾನು ಎತ್ತರ ಕಾಣಿಸುವುದಾದರೂ ಹೇಗೆ ಅನ್ನುವುದು. ಆದರೂ ರವಿ ಈ ಮಾತನ್ನು ಯಾವತ್ತೂ ಹೇಳಿರಲಿಲ್ಲ. ಇವತ್ತು ಅವನೂ ಹೇಳಿದ ಮೇಲೆ ನನ್ನ ಮನಸ್ಸಿಗೆ ಒಪ್ಪಿಗೆಯಾದ ಚಂದದ ಯಾವತ್ತಿನಂತದೇ ಫ್ಲ್ಯಾಟ್ ಚಪ್ಪಲಿಜೊತೆಯನ್ನ ನನಗಾಗಿ ಖರೀದಿಸಿ, ನನ್ನವರಿಗೂ ಹಾಗೂ ರವಿಗೂ ಇಬ್ಬರಿಗೂ ಚಪ್ಪಲಿಗಳನ್ನ ತಗೊಂಡು ಬಂದದ್ದಾಯ್ತು.

ಇನ್ನು ಹೇರ್ ಕ್ಲಿಪ್ ತಗೋಬೇಕು. ಸರಿ, ರಸ್ತೆ ಪಕ್ಕದ ಅಂಗಡಿಯೊಂದಕ್ಕೆ ನುಗ್ಗಿದ್ದಾಯ್ತು. ಹೇರ್ ಕ್ಲಿಪ್, ಹೇರ್ ಬ್ಯಾಂಡ್,
ಬ್ರೇಸ್ ಲೆಟ್’ಗಳ ವಿಚಾರಕ್ಕೆ ರವಿಯೇ ಸರಿ. ‘ಬಾರಾ.. ’ ಅಂತ ರವಿಯನ್ನ ಕರೆದೆ. ಅಂವ ಅಲ್ಲಿಯೇ ಇದ್ದ ಲೆಡೀಸ್ ಬ್ರೇಸ್ ಲೆಟ್ ಒಂದನ್ನು ನೋಡುತ್ತ ‘ಪಲ್ಲವಿಗೆ ಇಂತದೆಲ್ಲ ಒಂದಿಷ್ಟು ತಗಂಡೋಗ್ತಿ’ ಅನ್ನುತ್ತ ಬ್ರೇಸ್ ಲೆಟ್ ಒಂದನ್ನ ಕೈಗೆ ತೊಟ್ಟು ಟೆಸ್ಟ್ ಮಾಡಬೇಕೆನ್ನುವಷ್ಟರಲ್ಲಿ ಅದು ಹರಿದು ಚೆಲ್ಲಾಪಿಲ್ಲಿಯಾಗಿ ಚಂದಕ್ಕೆ ಹರಡಿಕೊಂಡಿತು. ‘ಅದೂ ಲೇಡೀಸ್ ಬ್ರೇಸ್ ಲೆಟ್ ರವೀ...’ ಅಂದೆ.
ಇದಕ್ಕಿಂತ ಮೊದಲು ನಾನು ಹೇರ್ ಕ್ಲಿಪ್ಪೊಂದನ್ನು ಎತ್ತಿಕೊಂಡು ಕೈಯಲ್ಲಿ ಹಿಡಿದು ನೋಡುತ್ತಿರುವಂತೆಯೇ ಅದು ಮುರಿದುಬಿದ್ದಾಗ ಕಣ್ಣುಬಿಟ್ಟು ನನ್ನ ಮುಖ ನೋಡಿ ಆಮೆಲೆ ಸಣ್ಣಕ್ಕೆ ನಕ್ಕಿದ್ದ ರವಿ ಈಗ ಬ್ರೇಸ್ ಲೆಟ್ ಹರಿದು ಹೋದಾಗ ಕಣ್ಮುಚ್ಚಿಕೊಂಡ. (ಒಂದೆರಡು ಸೆಕೆಂಡುಗಳಲ್ಲಿ ಕಣ್ಬಿಟ್ಟ) ಅಂಗಡಿಯ ಓನರ್ ನಮ್ಮನ್ನು ನೋಡುತ್ತ ಕಣ್ ಕಣ್ ಬಿಡುತ್ತ ನಿಂತುಬಿಟ್ಟಿದ್ದರು. ನಾನು ಬಗ್ಗಿ ಕುಳಿತು ಒಂದೊಂದಾಗಿ ಆ ಮಣಿಗಳನ್ನ ಆರಿಸತೊಡಗಿದರೆ ರವಿಯೂ ಸಹಾಯಕ್ಕೆ ಬಂದ. ಓನರು ‘ಇರ್ಲಿ ಬಿಡಿ’ ಅಂತ ನಕ್ಕು ತಮ್ಮ ಸದ್ಗುಣವನ್ನು ಸಾರಿಯೇಬಿಟ್ಟರು. ‘ಅದ್ಕಲ್ಲ, ನಂಗೆ ಬೇಕು ಇದು, ಅದಕ್ಕೇ ಆರಿಸ್ಕೊಳ್ತಾ ಇದೇನೆ’ ಅಂತ ಹೇಳಿದಾಗ ‘ಯಾವುದಕ್ಕಲ್ಲ?’ ಅಂತ ಅವರು ಕೇಳದೇ ಅವರೂ ಸಹಾಯಕ್ಕೆ ಬಂದರು. ಮುರಿದು ಹೋದ ಕ್ಲಿಪ್ ಜೊತೆ ಹರಿದುಬಿದ್ದ ಮಣಿಗಳನ್ನೆಲ್ಲ ಪ್ಯಾಕ್ ಮಾಡಿಸ್ಕೊಂಡು, ಮಾಡಿದ ತಪ್ಪಿಗೆ ಒಂದಿಷ್ಟು ಸ್ಟಿಕರ್ಸ್ (ಬಿಂದಿ), ಹೇರ್ ಕ್ಲಿಪ್ಸ್ ಎಲ್ಲ ತಗೊಂಡು ದುಡ್ಡು ಕೊಟ್ಟು ಹೊರಬಿದ್ದಾಗ ನಮಗಿನ್ನು ಹೆಚ್ಚು ಸಮಯ ಇರಲಿಲ್ಲ.

ಮಧ್ಯೆ ಮಧ್ಯೆ ಅಣ್ಣ ತಮ್ಮ ಒಬ್ಬರಿಗೊಬ್ಬರು ಕೆಲಸ ಕಾರ್ಯಗಳು ಮುಗಿದದ್ದೆಷ್ಟು, ಮಾಡಬೇಕಾದ್ದೆಷ್ಟು ಎನ್ನುವುದನ್ನ ಫೋನಿಸಿ ವಿನಿಮಯ ಮಾಡಿಕೊಳ್ಳುತ್ತ, ಅಂತೂ ಕೆಲಸಗಳನೆಲ್ಲ ಮುಗಿಸಿದೆವು. ಮುಗಿಸಿ ನಟರಾಜ್ ರೋಡಿನಲ್ಲಿ ವಾಪಸ್ ಬರುವಾಗ ಸಿಕ್ಕಾಪಟ್ಟೆ ವಾಹನ ದಟ್ಟಣೆ. ನಮ್ಮ ಹಿಂದಿನ ಗಾಡಿಯ ಮಾಣಿಯೊಬ್ಬ ‘ಬಾವಯ್ಯ...ಹಾರನ್ ಮಾಡ್ಕ್ಯೋತ ಹೋಗ್ದೇ ಇದ್ರೆ ಬೆಳಗಾದ್ರೂ ಮನೆ ಮುಟ್ತ್ವಿಲ್ಲೆ ನಾವು, ಇಲ್ಲಿ ಹಾರನ್ ಮಾಡ್ದೇ ಇದ್ರೆ ಕಳಿತಿಲ್ಲೆ...’ ಅಂತ ಸಲಹಿಸಿದ್ದಲ್ಲದೆ ಹಾರನ್ ಮಾಡುತ್ತ ಮಾಡುತ್ತ ನಮ್ಮ ಮುಂದೆಯೇ ರ್ರುಂಯ್ ಅಂತ ಹೊರಟೇ ಹೋದ. ರವಿಗೆ ಅವರು ಹೇಳಿದ್ದು ಕೇಳಿಸಿರಲಿಲ್ಲವಾದ್ದರಿಂದ ನಾನು ಅವನ ಹೆಲ್ಮೆಟ್ ಹತ್ತಿರ ಹೋಗಿ ಹೆಲ್ಮೆಟ್ ಒಳಗಿದ್ದ ಅವನ ಕಿವಿಗೂ ಕೇಳಿಸುವ ಹಾಗೆ ಸ್ವಲ್ಪ ದೊಡ್ಡ ಧ್ವನಿಯಲ್ಲಿ “ಹಾರನ್ ಮಾಡವಡೋ..’ ಅಂದೆ. ಪಕ್ಕದಲ್ಲಿದ್ದ ಕೆಲವರು ಆ ಕಡೆ ಈ ಕಡೆ ನೋಡಿದರಿರಬೇಕು ಕೂಗಿದವರು ಯಾರಿರಬಹುದು ಅಂತ. ನಾನು ಮಾತ್ರ ಆ ಕಡೆ ಈಕಡೆ ನೋಡದೇ ಕುಳಿತಿದ್ದೆ.

ಹೊಸ ಹೊಸ ಧ್ವನಿಯ ಹಾರನ್ ಗಳನ್ನೆಲ್ಲ ಅಂದರೆ ಹಕ್ಕಿ ಕೂಗಿದಂಗೆ, ನಾಯಿ ಬೊಗಳಿದಂಗೆ ಇರೋಥರದ ಹಾರನ್ ಗಳನ್ನೆಲ್ಲ ಬಳಸುತ್ತ ಮೆಣ್ಸಿಕೇರಿಯಿಂದ ಭಂಡಿ ಎಲೆಕ್ಟ್ರಾನಿಕ್ಸ್ ತನಕವೂ ಒಂದೇ ವೇಗದಲ್ಲಿ ರ್ರುಂಯ್ ಅಂತ ಹೋಗುತ್ತಿದ್ದ ರವಿ, ಉಳಿದಂತೆ ಒಂದಿನಿತೂ ಬದಲಾಗದ ಈ ರವಿಯಲ್ಲಿ ಇವತ್ತು ಕಾಣಿಸಲಿಲ್ಲ. ಒಂದು ಗತಿಯಲ್ಲಿ ಗಾಡಿ ಓಡಿಸುತ್ತಿದ್ದ ರವಿಯಲ್ಲಿ ಪ್ರೌಢತೆ ಇನ್ನಷ್ಟು ಕಾಣಿಸಿತು. ಒಮ್ಮೆಯೂ ‘ನಿಧಾನಕ್ಕೆ ಹೋಗು ರವೀ..’ ಅಂತ ನಾನು ಅವನಿಗೆ ಹೇಳುವ ಪ್ರಸಂಗವೂ ಬರದೇ ನಮ್ಮಿಬ್ಬರ ನಡುವೆ ಜಗಳವೂ ಆಗಲಿಲ್ಲ.

ಕೊನೆಯಲ್ಲಿ ನೀಲೇಕಣಿಯಲ್ಲಿ ಶುಂಠಿ ಸೋಡಾ ಕುಡಿವಾಗ ನನಗೂ ಕೊಡಿಸಿದ. ‘ನಿಂಗೆ ಮತ್ತೆಂತೋ ಕೊಡಸ್ತಿಕಾ...’ ಅನ್ನುತ್ತ ಖರ್ಜೂರದ ಪಾನ್ ಕೊಡಿಸಿದ. ತಿನ್ನುವಾಗ ನನ್ನ ಕೈ ಅಂಟಾಯಿತು. ಕೈತೊಳೆಯಲು ನೀರು ಬೇಕು ಅಂದೆ. ಕಣ್ಬಿಟ್ಟು ಗಾಡಿ ಹತ್ತಿ ಗಾಡಿ ಸ್ಟಾರ್ಟ್ ಮಾಡಿದ. ಅಂಟಾದ ಕೈಯ್ಯಲ್ಲಿ ಖರೀದಿಸಿದ ವಸ್ತುಗಳ ಬ್ಯಾಗ್ ಹಿಡ್ಕೊಂಡು ಗಾಡಿಯಲ್ಲಿ ಕೂತ್ಕೋಳೋಲ್ಲ ಅಂತ ಹೇಳಿದ್ದಕ್ಕೆ ‘ನೀನೇನ್ ತಲೆ ಮ್ಯಾಲ್ ಹೊತ್ಗಂಡ್ ಕುತ್ಗತ್ಯ, ಬ್ಯಾಡ್ದೇ ಹೋದ್ರೆ ಬಿಸಾಕ್ ಅತ್ಲಗೆ’ ಅಂದ. ನಾನು ಗಾಡಿಯಲ್ಲಿ ಕುಳಿತೇ ಅವನ್ನೆಲ್ಲ ಕೆಳಕ್ಕೆ ಬಿಸಾಕಿ ನನ್ನ ಮುಗ್ಧತೆಯನ್ನ ಪ್ರದರ್ಶಿಸಿದೆ. ಎಲ್ಲವನ್ನೂ ಎತ್ತಿಕೊಟ್ಟ, ಇಟ್ಕೊಂಡು ಕುಳಿತೆ.

ಕೆಲಸಗಳನ್ನೆಲ್ಲ ಮುಗಿಸಿಕೊಂಡು ಮೂವರೂ ಒಟ್ಟಾಗಿ ಮನೆಗೆ ಬಂದೆವು. ಊಟ ಮುಗಿಸಿ ಒಂದೆರಡು ತಾಸು ಎಲ್ಲರೂ ಒಟ್ಟಿಗೆ ಅಪ್ಪಯ್ಯ -ಆಯಿ(ಅತ್ತೆ-ಮಾವ)ಯವರ ರೂಮಿನಲ್ಲಿ ಕುಳಿತು ಹರಟಿದೆವು. ನನ್ನ ಅಮ್ಮ, ತಮ್ಮ ಎಲ್ಲರೂ ಆವತ್ತು ನಮ್ಮ ಮನೆಯಲ್ಲಿ ಸೇರಿದ್ದುದು ಖುಷಿಯನ್ನಿಷ್ಟು ಹೆಚ್ಚಿಸಿತ್ತು.

ಆ ವತ್ತು ರಾತ್ರಿ ನಿದ್ರೆ ಬರುವುದು ತಡವಾಯ್ತಿರಬೇಕು. ಆದರೂ ಬೆಳಗಾಯ್ತು. ಮಧ್ಯಾಹ್ನವೂ ಆಗಿ ಊಟವಾದ ತಕ್ಷಣ ಅಮ್ಮ ‘ಹೊರಟುಬಿಡ್ತೀನಿ, ರಾತ್ರಿ ನೀವೆಲ್ಲ ಹೊರಡುವ ಸಮಯದಲ್ಲಿ... ಬೇಡ ಈಗ್ಲೇ ಹೊರಟುಬಿಡ್ತೀನಿ’ ಅಂತ ಹೇಳಿ ಮೊಮ್ಮಗನನ್ನ ಮುದ್ದಿಸಿ, ನನ್ನ ಹಣೆಗೂ ಒಂದು ಮುತ್ತಿಟ್ಟು ಆಟೋ ಹತ್ತಿ ಮುಂದೆ ಹೋದ್ಮೇಲೆ ಕಣ್ಣೊರಿಸಿಕೊಂಡರಿರಬೇಕು. ಅಮ್ಮನ ಕಣ್ಣೀರು ಆಚೆ ಬಂದಿದ್ದೇ ಅದರೆ ಖಂಡಿತ ತಮ್ಮ ಒರೆಸಿರುತ್ತಾನೆ ಎಂಬ ಸಮಾಧಾನದಿಂದ ಮನೆಯವರೆಲ್ಲರ ಜೊತೆ ಒಳಬಂದೆ.

ಸಂಜೆಯಾಗ್ತಿದ್ದ ಹಾಗೆ ಗೆಳೆಯ ಗೆಳತಿಯರು ಒಬ್ಬೊಬ್ಬರಾಗಿ ಸೇರುತ್ತಿದ್ದರೆ ಮನೆಯೊಳಗೆ ಬರೀ ನಗು ಅಪ್ಪುಗೆ. ಮಾತೆಲ್ಲ ಖರ್ಚಾಗಿ ಹೋದಂತೆನಿಸ್ತು ನಮಗೆ ಗೆಳತಿಯರಿಗೆ. ಗೆಳೆಯರೆಲ್ಲ ಸುಮ್ಮ ಸುಮ್ಮನೆ ನಗುತ್ತಲಿದ್ದರು. ‘ಬೇಗ್ನೆ ಊಟ ಮಾಡಿ ರೆಡಿಯಾಗ್ರೋ...’ ಅನ್ನುವಂಥಹ ಮಾತಿಗೂ ನಗುತ್ತಲಿದ್ದರು. ನಕ್ಕು ವಾತಾವರಣವನ್ನು ತಿಳಿಯಾಗಿಸೋದಕ್ಕೋ, ಅಥವಾ ಒಳಗೆ ನಡೆಯುತ್ತಲಿದ್ದ ಅಗಲಿಕೆಯ ನೋವನ್ನ ಕರಗಿಸಲಿಕ್ಕೋ... ಒಟ್ಟಿನಲ್ಲಿ ಹೀಗೆಲ್ಲ ಮಾಡುತ್ತಲಿದ್ದರು. ಅಂತೂ ನಮ್ಮ ನಾಲ್ವರ ಹತ್ತು ಬ್ಯಾಗುಗಳು ಮನೆಯಿಂದಾಚೆ ಬಂದಾಗ ಮನೆಯೆಲ್ಲ ಖಾಲಿಯಾಯಿತು. ನಾವೂ ಹೊರಬಂದಾಗ.....


ಪೇಟೆಯೊಳಗೆ ಬಂದಾಗ ಬೆಂಗಳೂರಿಗೆ ಹೊರಟುನಿಂತಿದ್ದ ವಿ ಆರ್ ಎಲ್ ನಮಗೇ ಕಾಯುತ್ತಲಿತ್ತು. ನಾವು ನಾಲ್ವರು ಬಸ್ ಹತ್ತಿದೆವು. ನಮ್ಮನ್ನು ಬೀಳ್ಕೊಡಲು ಬಂದಿದ್ದ ಇಪ್ಪತ್ತೈದು ಮೂವತ್ತು ಜನರೆಲ್ಲ ಬಸ್ಸಿನ ಹೊರಗೆ ನಿಂತಿದ್ದರು. ಕಿಟಕಿಯಲ್ಲಿ ಬಗ್ಗಿ ಸೀಟಿನಲ್ಲಿ ಕುಳಿತುಕೊಳ್ಳುತ್ತ ಟಾಟಾ ಟಾಟಾ ಎನ್ನುವಾಗ ಜೀನ್ಸ್ ಕಿಸೆಯಲ್ಲಿದ್ದ ಪಾನ್ ನೆನಪಾಗಿ ತೆಗೆದೆ. ಗೆಳೆಯನೊಬ್ಬ ನಮಗಿಷ್ಟವಾಗುವ ಸ್ವೀಟ್ ಪಾನ್ ಕಟ್ಟಿಸಿ ತಂದು ಡೈನಿಂಗ್ ಟೇಬಲ್ ಮೇಲಿಟ್ಟಿದ್ದನ್ನ ಬರುವಾಗ ಅತ್ತೆ ನನ್ನ ಕೈಲಿಟ್ಟಿದ್ದರು, ಕಿಸೆಯಲ್ಲಿ ತುಂಬಿಕೊಂಡಿದ್ದೆ. ತೆಗೆದು ರವಿಯ ಪಾಲನ್ನು ಅವನ ಕೈಲಿಟ್ಟೆ. ತೆಗೆದುಕೊಂಡು ಕಿಸಿಯಲ್ಲಿಟ್ಟುಕೊಂಡ.

ನಮ್ಮನ್ನು ಕಳಿಸಲು ಬಂದಿದ್ದ ಗೆಳೆಯ ಗೆಳತಿಯರು, ಮನೆಯವರು ಕೆಳಗೆ ನಿಂತಿದ್ದರು. ಅರ್ರೆ..ಅಪ್ಪಯ್ಯ ಕಾಣ್ತಾ ಇಲ್ಲೆ.... ಬಸ್ಸಿನಲ್ಲಿ ಬೇಕಾಗದಿರಬಹುದು ಅಂತ ಹಣ್ಣನ್ನು ಮನೆಯಿಂದ ತಂದಿರಲಿಲ್ಲ. ನನಗೇಂತ ಹಣ್ಣು ಕೊಳ್ಳಲು ಅಪ್ಪಯ್ಯ(ಮಾವ) ಹಣ್ಣಿನಂಗಡಿಗೆ ಹೋಗಿದ್ದರಿರಬೇಕು. ಬಸ್ಸು ಇನ್ನೇನು ಬಿಡಬೇಕು ಅನ್ನುವಷ್ಟರಲ್ಲಿ ಬಂದೇ ಬಿಟ್ಟರು. ಕಿಟಕಿಯಲ್ಲಿ ಹಣ್ಣು ಕೊಟ್ಟರು. ತಗೊಂಡೆ. ಇನ್ನೊಂದು ಬಾರಿ ಅವರನ್ನಪ್ಪಿ ಅಳಬೇಕೆನ್ನಿಸಿದರೂ ಬಸ್ಸು ಹೊರಟೇ ಬಿಟ್ಟಿತು. ಟಾ...ಟಾ...

ಏರ್ ಪೋರ್ಟ್ ಹೊಕ್ಕಾಗ ಮಗ ಕೆಳಿದ ‘ಅಮ್ಮಾ...... ಅಪ್ಪಚ್ಚಿ ನಮ್ ಸಂತಿಗೆ ಬರ್ತ್ನಿಲ್ಯ?’ ಅಂತ. ಅಳುತ್ತಿದ್ದ ಮಗನನ್ನ ನಾನು ರಮಿಸಿದೆ ‘ಅಂವ ನಮ್ ಸಂತಿಗೆ ಬರ್ತ್ನಿಲ್ಲೆ ಮಗ, ಅಲ್ಲಿ ಪಲ್ಲವಿ ಚಿಕ್ಕಮ್ಮ ಒಬ್ಳೇ ಆಗೋಗ್ತಲ, ಅದ್ಕೇ ಅಂವ ಮತ್ತೆ ಆಷ್ಟ್ರೇಲಿಯಾಕ್ಕೆ ಹೋಗ್ತ, ಅವಂಗೆ ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಫ್ಲೈಟ್,
ದೇ...ಅಲ್ನೋಡು..
ಇನ್ನೂ ಅಪ್ಪಚ್ಚಿ ಅಲ್ಲಿ ನಿತ್ಗಂಡಿದ್ದ....
ಟಾಟಾ ಮಾಡು...
ದೇ... ಅಲ್ಲಿ....
ಗ್ಲಾಸಿನ್ ಹೊರಗೆ...’


‘ಹಲೋ ಅಪ್ಪಯ್ಯ...ಯಂಗ ಫ್ಲೈಟ್ ಅಲ್ಲಿದ್ಯ, ಹೋಗಿ ಮುಟ್ಟಿದ್ಕುಳೆ ಕಾಲ್ ಮಾಡ್ತ್ಯ, ಟಾಟಾ....’

December 20, 2008

ಕೊನೆಯ ಕನಸಿಗೊಂದು ನಮನ

ಕನಸಿನಂಗಡಿಯೊಡತಿ ನಾನು
ನನಗೆ ಲಾಭ ನಷ್ಟವಿಲ್ಲ
ಬಿದ್ದರೆ ಒಡೆಯುವವು
ಬೆಳೆಸಿದರೆ ಬೆಳೆವವು
ಬಿದ್ದು- ಬೆಳೆಯುವ ನಡುವೆ ಲಾಭನಷ್ಟವೆಲ್ಲ


ಕೊಳುವಾಗ ಕನಸುಗಳ
ಬೆಲೆಯ ಕೇಳುವುದಿಲ್ಲ
ಮಾರಿಬಂದ ಲಾಭಕ್ಕೆ
ಮಾರುಹೋಗುವುದಿಲ್ಲ
ಕೊಡು-ಕೊಳುಗಳ ನಡುವೆ ಲಾಭನಷ್ಟವೆಲ್ಲ

ಸತ್ತರೀ ಕನಸುಗಳು
ನೆನಪಾಗಿ ಬರುವವು
ಬೆಳೆಯುತಲಿ ಬದುಕಿದರೆ
ನನಸಾಗಿ ನಲಿಯುವವು
ನೆನಪು-ನನಸುಗಳ ನಡುವೆ ಲಾಭನಷ್ಟವೆಲ್ಲ

ನೆನಪು ಕನಸುಗಳ ನಡುವೆ ಲಾಭ ನಷ್ಟವಿಲ್ಲ

ಕನಸುಗಳ ಹುಗಿಯೆ
ಘೋರಿಯಾಯ್ತದುವೆ
ಸುಟ್ಟರೆ ಕಟ್ಟಿಗೆಯಡಿ
ಸುಡುಬೂದಿಯಾಯ್ತು
ಸುಟ್ಟು-ಹುಗಿಯುವ ನಡುವೆ ಲಾಭನಷ್ಟವೆಲ್ಲ

ನಾನು ಅಂಗಡಿಯ ಒಡತಿ
ಕನಸ ಕಾಣುವುದನಿವಾರ್ಯ
ಅಂಗಡಿಯಿದಿರು ನನ್ನಂತ ನೂರುಜನ
ಇಕೋ ಕೊಳ್ಳಿ ಕನಸುಗಳ
ಕನಸ ಕಾಣುವರಿಗೆಂದೂ ಲಾಭನಷ್ಟವಿಲ್ಲ

December 5, 2008

ಒಗ್ಗಟ್ಟಿಗೆ ಬಲವಿದೆಯೇ?

ಪ್ರಿಯ ಸಹ ಬ್ಲಾಗಿಗರೇ...
‘ನೀಲಾಂಜಲ’ ಕರೆಗೆ ಓಗೊಟ್ಟು ನೀವೂ ನಿಮ್ಮ ಬ್ಲಾಗಿನ ಹಣೆಪಟ್ಟಿಯನ್ನು ಕಪ್ಪುಬಣ್ಣಕ್ಕೆ ಬದಲಾಯಿಸಿದ್ದೀರ? ಹಾಗಾದರೆ ನಮ್ಮ ಈ ಆಂದೋಲನದ ಒಗ್ಗಟ್ಟಿನ ಬಲದ ಸಾಕ್ಷಿಗಾಗಿ ನೀಲಾಂಜಲದಲ್ಲೊಂದು ‘ನಾನೂ ಬ್ಲಾಗಿನ ಹಣೆಪಟ್ಟಿಯನ್ನು ಕಪ್ಪಾಗಿಸಿದ್ದೇನೆ’ ಎಂಬೊಂದು ಮಾತಿನ ಪ್ರತಿಕ್ರಿಯೆ ನೀಡಿ ಒಗ್ಗಟ್ಟಿನ ಬಲವನ್ನು ಹೆಚ್ಚಿಸಿ. ನಮ್ಮ ಒಗ್ಗಟ್ಟಿಗೆ ನಾವೇ ಸಾಕ್ಷಿಯಾಗೋಣ.

ಎಲ್ಲರಿಗೂ ವಂದನೆ.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.