November 20, 2008

ಒಡಂಬಡಿಕೆ

ಅದೊಂದು ಚಂದದ ಗಳಿಗೆ. ಆ ಸುಸಂದರ್ಭವೆಂದರೆ ಶ್ರೀ ಜಿ. ಜಿ.ಹೆಗಡೆ, ಕೋಡಗದ್ದೆ ಇವರ ಪರಿಚಯವಾಯ್ತು. ಮಾತಿನ ಮಧ್ಯೆ ಜಿ.ಜಿ.ಹೆಗಡೆಯವರು ಹೇಳಿದರು ‘ಆನೂ ಒಂದು ಪುಸ್ತಕ ಬರಕಂಜಿ’ (ನಾನೊಂದು ಪುಸ್ತಕ ಬರೆದಿಟ್ಟುಕೊಂಡಿದ್ದೇನೆ) . ಆ ಸರಳತೆಯೊಳಗೆ ಕಳೆದುಹೋದೆ.

‘ಇಲ್ಲಿ ಟೈಂ ಪಾಸ್ ಆಗುವುದು ಕಷ್ಟ’ ಎಂದರು. ‘ನನ್ನಲ್ಲಿ ಕೆಲವು ಪುಸ್ತಕಗಳಿವೆ, ಅವೆಲ್ಲ ಬಹುಷಃ ನೀವು ಓದಿದವುಗಳೇ ಆಗಿರಲಿಕ್ಕೆ ಸಾಕು’ ಅಂದೆ. ಇಲ್ಲ, ನಾಲ್ಕಾರು ವರ್ಷಗಳಿಂದೀಚೆಗೆ ಬಂದ ಪುಸ್ತಕಗಳನ್ನ ಓದಲಾಗಿರಲಿಲ್ಲ’ ಎಂದರು. ಮಾತು ಹೀಗೆಯೇ ಅರಳಿಕೊಳ್ಳುತ್ತ ವಸುಧೇಂದ್ರರ ತನಕ ಬಂದು ನಿಂತಿತು.

ಈ ಸಲ ಭಾರತಕ್ಕೆ ಬಂದಾಗ ಸಂದೀಪ ಗಿಫ್ಟಿಸಿದ್ದ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ವಸುಧೇಂದ್ರರ ಲಲಿತ ಪ್ರಬಂಧಗಳ ನೆನಪಾಯ್ತು. ಆ ಪುಸ್ತಕವನ್ನ ಉಡುಗೊರೆ ಕೊಡುವ ಮುನ್ನ ಸಂದೀಪ ಕೇಳಿದ್ದ ‘ನೀ ವಸುಧೇಂದ್ರ ಅವರನ್ನ ಓದಿದ್ಯಾ?’

‘ಇಲ್ಲೆ, ಹಂಗಂದ್ರೆ ಯಾರು?’ ಅಂತ ಕೇಳಿದ್ದೆ ಯಾವತ್ತಿನದೇ ಪೆದ್ದುತನದಲ್ಲಿ.

‘ಇದನ್ನ ಓದು, ಚೊಲೊ ಇದ್ದು’ ಅಂತ ಕೊಟ್ಟ। ಮುಖಪುಟ ಎಲ್ಲೋ ನೋಡಿದೀನಿ ಅನ್ನಿಸ್ತು। ತಕ್ಷಣ ನೆನಪಿಗೆ ಬಂತು ‘ನನ್ನ ಬ್ಲಾಗ್ ಪ್ರೊಫೈಲ್ ಫೋಟೋ ಇದೇ ಥರಹವೇ ಇದೆ’ ಅಂತ। ಆ ಪುಸ್ತಕದ ಮುಖಪುಟದಲ್ಲಿ ಅಮ್ಮನ ಕೈ ಮತ್ತು ಪಾಪುನ ಕಾಲು ಇತ್ತು। ನನ್ನ ಬ್ಲಾಗ್ ಪ್ರೊಫೈಲ್ ಅಲ್ಲಿರೋ ಫೊಟೋ ಅಲ್ಲಿ ಪಾಪುನ ಕಾಲು ಮಾತ್ರ ಇದೆ। ಕಣ್ಣಗಲಿಸಿ, ಹಲ್ಕಿರಿದು ‘ಎಷ್ಟ್ ಚೊಲೋ ಇದ್ದಲಾ....’ ಅಂದೆ। ಅದ್ಕೇ ಕೊಟ್ಟಿದ್ದು ಅಂದ। ಸಂದೀಪನಿಗೆ ಥ್ಯಾಂಕ್ಸ್ ಹೇಳಿದ್ನೋ ಬಿಟ್ನೋ ಮರ್ತಿದೀನಿ। ಆ ಪುಸ್ತಕವನ್ನ ಓದಿಯಾದ್ಮೇಲೆ ಸಂದೀಪನಿಗೆ ಥ್ಯಾಂಕ್ಸ್ ಹೇಳಲೇಬೇಕು ಎನ್ನಿಸಿತ್ತು.

ಆವತ್ತು ಸಂಜೆ ಗಾಂಧೀಬಾಜಾರ್ ಅಲ್ಲಿ ‘ಅಂಕಿತ’ ಹೊಕ್ಕಿದ್ದಾಗ ‘ಯುಗಾದಿ’ ‘ಚೇಳು’ ಎಲ್ಲ ತಗೊಂಡು ಮರುದಿನ ಯುಗಾದಿ ಹಬ್ಬ ಇದೆ ಅಂತ ಊರಿಗೆ ಬಂದಿದ್ದೆಲ್ಲ ನೆನಪಾಗಿ ‘ಮಾವಾ...ನನ್ ಹತ್ರ ಯುಗಾದಿ, ಚೇಳು ಎಲ್ಲ ಇದ್ದು, ನಿಮಗೆ ಕೊಡ್ತಿ ನಾನು’ ಅಂದೆ. ‘ನಮ್ಮಮ್ಮ ಅಂದ್ರೆ ನಂಗಿಷ್ಟ ನಂಗೂ ತುಂಬಾ ಇಷ್ಟ, ನೀವು ಓದಿ ನೋಡಿ ನಿಮಗೂ ಇಷ್ಟ ಆಗ್ತು’ ಅಂದಿದ್ದೆ.

ಇವತ್ತು ಮತ್ತೆ ಅವರನ್ನ ಭೇಟಿಯಾಗಿದ್ದೆ। ‘ವಿಚಿತ್ರಾನ್ನ’ ಪುಸ್ತಕದ ಹಾಳೆ ತಿರುವುತ್ತ ‘ವಿಜಯ ಕರ್ನಾಟಕದಲ್ಲಿ ಜೋಶಿಯವರ ಅಂಕಣ ಓದ್ತಿ ನಾನು’ ಅಂದ್ರು. ‘ಇವತ್ತು ಸಾಹಿತ್ಯದ ಬಗ್ಗೆ ಮಾತಾಡುತ್ತಿದ್ದರೆ ಕೇಳಲು ಪುರುಸೊತ್ತು ಸಿಗದಿರುವಂಥಹ ವೃತ್ತಿಯಲ್ಲಿದ್ದೂ ಇವರೆಲ್ಲ ಪುಸ್ತಕ ಬರೆದು ಸಾಧಿಸಿದ್ದಾರಲ್ಲ’ ಅಂತ ಖುಷಿಪಟ್ಟರು ಜಿ.ಜಿ.ಹೆಗಡೆಯವರು. ನಿಜ, ಆಸಕ್ತಿಯಿರುವಲ್ಲಿ ಸಮಯ ತಾನಾಗೇ ಹೊಂದಿಕೊಳ್ಳುತ್ತದೆ ಎನ್ನಿಸಿತು. ‘ಯಾವುದೇ ವಿಷಯದ ಬಗ್ಗೆ ಒಲವು, ಆಸಕ್ತಿ ಇದ್ರಷ್ಟೇ ಇವೆಲ್ಲ ಸಾಧ್ಯ’ ಅಂತ ಹೇಳಿದ ಜಿ.ಜಿ.ಹೆಗಡೆಯವರ ಮಾತು ಅದೆಷ್ಟು ಸತ್ಯ ಎನ್ನಿಸಿತು.

‘ಮಂಕುತಿಂಮನ ಕಗ್ಗ’ ಗಳಲ್ಲೊಂದಿಷ್ಟನ್ನು ತಮ್ಮ ಕೈಯ್ಯಾರೆ ಟೈಪಿಸಿ, ಪ್ರಿಂಟ್ ಔಟ್ ತೆಗೆದುಕೊಟ್ಟರು. ಅತ್ತೆ(ಜಿ।ಜಿ।ಹೆಗಡೆಯವರ ಪತ್ನಿ) ಯವರು ಕೊಟ್ಟ ರುಚಿಯಾದ ಖೀರನ್ನು ನಾನು ಸವಿಯುತ್ತಲಿದ್ದರೆ ಮಾವ(ಜಿ.ಜಿ.ಹೆಗಡೆಯವರು) ರಾಗವಾಗಿ ಕಗ್ಗವನ್ನು ಹೇಗೆ ಹಾಡಿಕೊಂಡರೆ ನಾಲಿಗೆಯಲ್ಲಿಯೇ ಉಳಿದೀತು ಅಂತ ತೋರಿಸುತ್ತಿದ್ದರೆ ನನ್ನ ನಾಲಿಗೆಯಲ್ಲಿದ್ದ ರುಚಿ ಖೀರಿನದೋ ಅಥವಾ ಕಗ್ಗದ್ದೋ ಗೊತ್ತಾಗಲಿಲ್ಲ.

ಬರುವಾಗ ಜಿ.ಜಿ.ಹೆಗಡೆಯವರು ತಮ್ಮ ಕವನ ಸಂಕಲನದ ಪ್ರತಿಯೊಂದನ್ನು ಕೈಗಿತ್ತರು. ಮತ್ತೆ ಯಾವತ್ತಿನಂಗೆ ಕಣ್ಣಗಲಿಸಿ ಹಲ್ಕಿರಿದು ‘ಥ್ಯಾಂಕ್ ಯೂ’ ಅಂದೆ. ‘ಆವರಣ’ ಹಾಗೂ ‘ಜಯಂತ ಕಾಯ್ಕಿಣಿ ಕಥೆಗಳು’ ಇವೆರಡನ್ನು ಅವರಿಗೆ ಓದುವುದಕ್ಕೋಸಕರ ಕೊಟ್ಟು, ಎಲ್ಲರಿಗೂ ಟಾಟಾ ಹೇಳಿ ಅವರ ಮನೆಯಿಂದ ಹೊರಟಿದ್ದೆ. ದಾರಿಯಲ್ಲಿಯೇ ಅವರ ಕವನ ಸಂಕಲನ ತೆರೆದು ಓದಲಾರಂಭಿಸಿದ್ದೆ. ಸ್ಟ್ರೀಟ್ ಲೈಟ್ ಎದುರುಬಂದಾಗೆಲ್ಲ ಸರಸರನೆ ಓದಿಕೊಂಡು ಕತ್ತಲು ಬೆಳಕಿನಾಟದಲ್ಲಿ ಎರಡು ಕವನ ಓದುವಷ್ಟರಲ್ಲಿ ಮನೆ ತಲುಪಿದ್ದೆವು. ನನ್ನವನು ‘ಮನೆ ಬಂತು, ಇಳಿ ’ ಅಂದ. ‘ಇವತ್ತು ಈ ಕವನ ಪುಸ್ತಕ ನಂಗೆ ಕೊಡು, ನಾನು ಬೇಗ ಓದಿ ಮುಗ್ಸಿ ನಾಳೆ ನಿಂಗೆ ಕೊಡ್ತಿ’ ಅಂದವನ ಮಾತಿಗೆ ದುರುಗುಟ್ಟಿ ಅವನ ನೋಡಿದ್ದೇ ಉತ್ತರ. ‘ನೀನಿವತ್ತು ಇದನ್ನ ಓದು’ ಅಂತ ಬೇರೊಂದು ಚಂದದ ಪುಸ್ತಕವನ್ನ ಅವನಿಗೆ ಹಿಡಿಸಿ ಇಲ್ಲಿ ಬಂದು ಒಬ್ಬಳೇ ಕುಳಿತು ಜಿ.ಜಿ.ಹೆಗಡೆಯವರ ಚಂದದ ಕವನಗಳನ್ನ ಓದ್ತಾ ಇದ್ರೆ ಯಾಕೋ ಅವುಗಳನ್ನ ನಾನೊಬ್ಬಳೆ ಓದೋಕೆ ಮನಸಾಗ್ಲಿಲ್ಲ. ಒಂದು ಕವನವನ್ನು ನೀವುಗಳೂ ನನ್ನೊಡನೆ ಓದಿ ಸವಿಯಲಿ ಎನ್ನಿಸಿತು. ಕವನ ಸಂಕಲನದ ಶೀರ್ಷಿಕೆ ಏನಂತ ಕೇಳಿದ್ರಾ? ಒಡಂಬಡಿಕೆ . ಅದರೊಳಿಗಿಂದ ಈ ಒಂದು ಕವನ ನಿಮ್ಮೆಲ್ಲರಿಗಾಗಿ.

ಸಮರಸ

ಎಲ್ಲರಂತೆಯೆ ನೀನಿರು ಎಲ್ಲರೊಳಗೊಂದಾಗಿರು

ಬಲ್ಲೆನೆಲ್ಲವನೆಂಬ ಗರ್ವದ ಗುಲ್ಲುಸಲ್ಲದು ನಿಷ್ಠುರ

ನಿನ್ನ ಭಿನ್ನತೆ ಇನ್ನು ಅಧಿಕತೆ

ಭೇದ ಮೆರೆಸುವುದೇತಕೆ?

ಸುಖದ ಆಶಯ ಕೀರ್ತಿ ಹಂಬಲ

ಸಿರಿಪದದ ಪಟ್ಟಕೆ ಕಾತರ

ಪ್ರೀತಿಯಪ್ಪುಗೆ ಪ್ರೇಮ ವರ್ಷಕೆ

ಮಮತೆ ಹೃದಯದ ವಿಕಸನ

ಒಲವು ಹಲಬಗೆ ಚಲವು ತಿಳಿದೊಡೆ

ಗೆಲವು ಲೋಕಕೆ ಸಂಭ್ರಮ

ಮುಗಿಲಗಣ್ಣಿನ ಧಾರೆ ಧುಮುಕದೆ

ನೆಲದ ಎದೆಗುದಿ ಸ್ಪಂದನ

ಹರಿವ ನದಿ ತೊರೆ ತೆರದಿ ಬದುಕಿನ

ಜೀವವಾಹಿನಿ ಧಾವನ

ಹುಟ್ಟುಸಾವಿನ ಸತ್ಯ ಶೋಧನೆ

ಮುಟ್ಟು ಕೊನೆ ಪರ್ಯಂತರ

ಉಗಮಕೆಡೆಯದೊ ಪೂರ್ವದಾರ್ಜಿತ

ಜಗವೆ ಚೇತನ ನಿಗಮವು

*****************************

ಓದುತ್ತ ಕುವೆಂಪು ನೆನಪಾಗುತ್ತಿದ್ದಾರೆ। ನಿಜ, ಕೋಡಗದ್ದೆ ಶಿವಮೊಗ್ಗೆಯಿಂದೇನೂ ದೂರವೇನಿಲ್ಲ.

November 13, 2008

ಮುರುಕು ಮಂಟಪದೊಳಗಿನ ಹರುಕುಬುಟ್ಟಿಯೊಳಗೆ...

*ಪುಟ್ಟಪುಟ್ಟಸಾಲುಗಳು ಕಟ್ಟಿಕೊಳ್ಳುತ್ತ ಕಟ್ಟಿಹಾಕುತ್ತವೆ, ಕಟ್ಟನ್ನು ಬಿಡಿಸಿಕೊಳ್ಳುವ ಯತ್ನದಲ್ಲಿ ಬರೆಸಿಕೊಳ್ಳುತ್ತವೆ, ಒರೆಸಿಬಿಡುತ್ತವೆ ।

**********


*ಅಕ್ಷರಗಳನ್ನೇ ಬಿತ್ತಿ ಅಕ್ಷರಗಳನ್ನೆ ಬೆಳೆಯುವ ಕನಸು। ಅಂತದ್ದೊಂದು ದೃಶ್ಯ ಅವನು ಕೆತ್ತಿದ ಯಾವ ಚಿತ್ರದಲ್ಲಿಯೂ ಇರುವುದಿಲ್ಲ, ಅವಳು ಬಿಡಿಸಿದ ಚಿತ್ರಗಳಲ್ಲಿಯೂ।

**********

*‘ಹೀಗೆ ಶುರುವಾದದ್ದು ಇಲ್ಲೀತನಕ ಬಂದು ಮುಟ್ಟುತ್ತದೆ ಅಂತ ಅವಳಿಗೆ ಕಿಂಚಿತ್ ಕಲ್ಪನೆಯೂ ಇರಲಿಲ್ಲ’ ಅವನು ಬರೆದಿಟ್ಟು ಹೋದ ಸಾಲನ್ನ ನಾನು ಕಥೆಯಾಗಿಸ್ತೀನಿ ಅಂತ ನಂಗೂ ನಂಬಿಕೆ ಇರಲಿಲ್ಲ।

**********


*ಕಲ್ಪನೆಗಳ ಕೆತ್ತು, ಕನಸಾಗುವುದಿಲ್ಲ। ಕನಸುಗಳನ್ನು ಹುಗಿ, ಸತ್ತು ಶವವಾಗುತ್ತವೆ, ನಿನ್ನದೇ ನೆನಪುಗಳಾಗಿ ಬೆರೆತುಹೋಗುತ್ತವೆ। ಕನಸುಗಳ ಬಿತ್ತು, ನನಸಾಗುತ್ತವೆ, ನಿನ್ನ ಜೊತೆಯಾಗಿರುತ್ತವೆ।

**********

*ಇವಳು ಶಕುಂತಲೆಯೋ ಅಥವಾ ಶಾಂತಲೆಯೋ ಎಂಬ ಪ್ರಶ್ನೆಗೆ ಉತ್ತರ ಹುಡುವಾಗ ಯೋಚಿಸುತ್ತಿದ್ದ। ಕೊನೆಗೂ ತಾನು ದುಶ್ಶಂತನೋ, ವಿಷ್ಣುವರ್ಧನನೋ ಅರಿವಾಗಲೇ ಇಲ್ಲ।

**********

*‘ಆಹಾ॥ಏನ್ ಮಹಾ...ಪಾನಿ ಪೂರಿ, ಅದನ್ ತಿನ್ನೋಕೆ ಜಯನಗರ ಫೋರ್ಥ್ ಬ್ಲಾಕ್ ಗೇ ಹೋಗ್ಬೇಕಾ? ಹನುಮಂತನಗರ ಕಗ್ಗೀಸ್ ಬೇಕರಿ ಎದ್ರುಗಡೆ ಸಿಗೋ ಮಸಾಲೆಪೂರಿ ತಿಂದ್ರೆ ಆಮೇಲೆ ಅಲ್ಲಿಂದ ನೀವ್ ಕದಲೋಲ್ಲ॥ಗೊತ್ತಾ?’

**********


*ದಿನಾ ಅವನನ್ನ ಕೊರೀತಿದ್ದೆ ಸಿಗರೇಟ್ ಸೇದ್ಬೇಡ, ಬಿಟ್ಬಿಡು ಅಂತ। ಹ್ಞೂ...’ಅಂತಿದ್ದೋನು ಕೊನೆಯಲ್ಲಿ ಬಿಟ್ಟಿದ್ದು ಸಿಗರೇಟನ್ನಲ್ಲ, ನನ್ನ ಜೊತೆ ಮಾತು। ಸಿಗರೇಟಿಗಿಂತ ನನ್ನ ಮಾತು ಅವನನ್ನ ಹೆಚ್ಚು ಸುಟ್ಟಿತ ಅಂತ ಯೋಚನೆ. ನೀತಿಗಳು ಗಳಿಸಿಕೊಟ್ಟಷ್ಟನ್ನೇ ಕಳೆದುಹಾಕಬಲ್ಲವು.

**********


*ಒಳ್ಳೇ ಕಾಫಿ ಬೇಕಾದ್ರೆ ಬನಶಂಕರಿ ಕಾಂಪ್ಲೆಕ್ಸ್ ಹತ್ರ ಸುಳಿದಾಡ್ತಿದ್ರೆ ಕಾಫಿ ಡೇ ಕಾಫಿಯ ಪರಿಮಳ ಅಲ್ಲೇ ಸುಳಿದಾಡ್ತಿರತ್ತೆ। ಸುಗಂಧ ದೂರದವರೆಗೆ ಪಸರಿಸಿಕೊಳ್ಳಬಲ್ಲುದು, ಘಮದ ನೆನಪು ಹೊಸ ಘಮವನ್ನಿತ್ತು ಖುಷಿಕೊಡಬಲ್ಲುದು।

**********


*ಬನಶಂಕರಿ ಕಾಂಪ್ಲೆಕ್ಸ್ ಹತ್ರ ಇರೋ ಕಾಫಿ ಡೇ ಗೆ ಹೋದ್ರೆ ಕಾಫಿ ಸಿಗತ್ತೆ, ಕಾಫಿಯ ಘಮ ಮೆಡಿಕಲ್ ಕಾಲೇಜಿನ ಹುಡುಗ ಹುಡುಗಿಯರ ಸಿಗರೇಟಿನ ಹೊಗೆಯೊಳಗೆ ಹುಗಿದುಹೋಗಿರತ್ತೆ। ತಾಣಗಳ ಘಮದ ತ್ರಾಣವನ್ನು ಸುತ್ತಲಿನ ಗಾಳಿ ನುಂಗಬಲ್ಲುದು।

**********

*ಕಲ್ಲಾಗಿದ್ದೆ। ಅವನು ಕೊಟ್ಟ ರೂಪಕ್ಕೆ ಶಿಲಾಬಾಲಿಕೆಯಾದೆ। ಶಾಂತಲೆ ಅಂದ। ಅವನು ಕೊಟ್ಟ ಉಂಗುರ ಕಳಕೊಂಡು ಶಕುಂತಲೆಯಾದೆ।

****************************************************************************************

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.