September 29, 2008

ತೀರದ ತೀರವಿದು, ಮುಗಿಸದಿರು ಯಾನ...

ಗೆಳೆಯ/ಗೆಳತಿಯರೇ...
ನಮ್ಮೆಲ್ಲರ ಪ್ರೀತಿಯ, ಮುದ್ದಿನ, ಚಂದದ ದೋಣಿಯೊಂದು ದೂರತೀರಯಾನ ಹೊರಟಿದೆ. ಹಿಡಿದು ನಿಲ್ಲಿಸುವ ಬನ್ನಿ. ಸಣ್ಣಗೆ ನಗುವ ತಣ್ಣಗಿನ ಮೌನದಲಿ, ಮುದ್ದಿಸುವ ಮಾತಿನಲಿ, ತಂಪುಗಾಳಿಯಲಿ, ಇಂಪು ಮುಸ್ಸಂಜೆಯಲಿ, ಚುಮುಚುಮು ನಸುಕಿನಲಿ, ಅರೆಬಿರಿದ ಬೆಳಗಿನಲಿ, ಬೆಳಕರೆವ ಹಾದಿಯಲಿ, ಎಳೆಬೆಳದಿಂಗಳಲಿ, ದಿನಬೆಳೆದ ಚಂದ್ರನಡಿ ಸದ್ದಿರದ ತಂಗಾಳಿಯೊಲರಳಿ ಘಮ ಸೂಸಿದ ಮೊಗ್ಗಿನಲಿ, ಗರಿಗರಿಯ ಮಂಜಿನಲಿ, ಬಿಳಿಬೆರೆತ ಇಬ್ಬನಿಯಲಿ, ಭಾವ ಬಿರಿದರಳಿದ ಹೂವಿನಲಿ, ಬಳ್ಳಿಯಂಚಲರಳಿದ ಗೊಂಚಗೊಂಚಲು ಮಲ್ಲಿಗೆಯಲಿ, ನೀರಪರದೆಯಲಿ ಬೆರಳಂಚು ಬೆರೆತಾದ ಆ ಸಣ್ಣ ಅಲೆಯಲ್ಲಿ ನಮ್ಮನೆಲ್ಲ ನವಿರಾಗಿ ಹೊತ್ತೊಯ್ದು ತೀರದಲೆಗಳಲಿ ತೇಲಿಸಿ ನಲಿನಲಿಸಿದ ದೋಣಿಯೊಂದು ಯಾನ ಹೊರಟಿದೆ, ಹಿಡಿದು ನಿಲ್ಲಿಸುವ ಬನ್ನಿ.

ಯಾನವಿರಾಮದಲಿ ಪಯಣಿಸಿದ ಹಾಡು ಇಲ್ಲಿ ಕೆಳಗಿದೆ ನೋಡಿ, ದಯಮಾಡಿ ಹಿಡಿದು ನಿಲ್ಲಿಸಿ ದೋಣಿ...

-ಶಾಂತಲಾ ಭಂಡಿ.


ಆಶೆಯೆಂಬ ತಳವೊಡೆದ ದೋಣಿಯಲಿ ದೂರತೀರಯಾನ..

ಕಣ್ಣಿಗೆ ಕಂಡದ್ದೆಲ್ಲವನ್ನೂ
ಮನದ ಭಿತ್ತಿಯೊಳಗೆ ಮೂಡಿಸಲಾಗುವುದಿಲ್ಲ;
ಒಳಗೆ ಮೂಡಿದ್ದೆಲ್ಲವನ್ನೂ
ಹೊರಗೆ ಹಂಚಿಕೊಳ್ಳಲೂ ಆಗುವುದಿಲ್ಲ.
ಕಂಬನಿಯ ಬದುಕಿಗೆ
ಕವಿತೆಯ ಕರವಸ್ತ್ರ ಕೊಟ್ಟವರು
ಮಾತಿನ ಹಾದಿಯುದ್ದಕ್ಕೆ
ಮೌನದ ಹೆಜ್ಜೆ ಇಟ್ಟು ಹೋಗಿದ್ದಾರೆ.

ಇಷ್ಟಕ್ಕೂ ಭಾವವೊಂದು
ನನ್ನದೇ ಮಾತಾಗಿ ದಾಖಲಾಗಲೇಬೇಕೆ!
ಗುಳ್ಳೆ-
ಒಳಿತು,ಚೆಲುವು,ಭಾವ,ಸಹಯಾನ,ಬದುಕು,ಬದಲಾವಣೆ,ನಾನುಇತ್ಯಾದಿ..
- ಎಲ್ಲ ಗುಳ್ಳೆಗಳೂಒಡೆದಿವೆ,
ಈ ದಾರಿ ಕೊನೆಗೊಂಡಿದೆ.

ಎಲ್ಲರ ಪ್ರೀತಿಯ ಸ್ಪಂದನೆಗೆ ತಲೆಬಾಗಿ ನಮಿಸುತ್ತಾ
ನೇಪಥ್ಯ ಸಿಂಧುವಿನೊಳಗಿನ್ನೊಂದು ಬಿಂದುವಾಗಿ..

-ಪ್ರೀತಿಯಿಂದ
ಸಿಂಧು

September 19, 2008

ನಕ್ಕು ಬಿಡು ಒಮ್ಮೆ...

‘ಈ ವರ್ಷ ನಿಮ್ಮೆಜಮಾನ್ರ ಬರ್ಥಡೇಗೆ ಏನ್ ಸ್ಪೆಷಲ್, ಏನಾದ್ರೂ ಸರ್ಪ್ರೈಸ್!!’ ಅಂತ ಗೆಳತಿ ಕೇಳಿದ್ಲು. ನಾನ್ ಹೇಳ್ದೆ ‘ಹ್ಮ್...ಸುರ್ಪ್ರೈಸ್ ಮಾಡೋಕೆ ಹೋಗಿ ಅವರ ಬರ್ಥ್ ಡೇನೆ ಮರತ್ಬಿಟ್ಟಿದ್ದೆ...’ ಅಂದೆ. ‘ಆರು ವರ್ಷ ಆಯ್ತಾ ಮದ್ವೆ ಆಗಿ?’ ಅಂತ ಕೇಳಿದ್ಲು. ‘ಎಂಟು ವರ್ಷ ಆಗ್ತಾ ಬಂತು’ ಅಂದೆ. ‘ ಮದ್ವೆ ಆಗಿ ಐದು ವರ್ಷದ್ ತನಕ ಜ್ಞಾಪಕ ಇಟ್ಕೊಂಡ್ರೆ ಸಾಕಾಗತ್ತೆ, ಏಳು ವರ್ಷ ಮರಿದೇನೆ ವಿಶ್ ಮಾಡಿದ್ಯಲ್ಲ ಸಾಕು ಬಿಡು’ ಅಂದ್ಲು.
ಆವತ್ತು ಗೆಳತಿ ಹೇಳ್ತಾ ಇದ್ಲು. ‘ನಿನ್ನೆ ರಾತ್ರಿ ನಿದ್ರೆ ಮಾಡೋದು ತುಂಬ ಲೇಟ್ ಆಯ್ತು ಕಣೇ...’ ಅಂತ. ‘ಯಾಕೇ?’ ಅಂದೆ ಕಕ್ಕುಲತೆಯಿಂದ. ‘ಮಕ್ಕಳು ಮಲ್ಗೋದೆ ಲೇಟು, ಅದಾದ್ಮೇಲೆ ಇವನು ಕೈಕಾಲೆಲ್ಲ ನೋವು’ ಅಂದ. ‘ಕೈಕಾಲನ್ನೆಲ್ಲ ಮಸಾಜ್ ಮಾಡ್ಕೊಟ್ಬಿಟ್ಟು ನಾನು ಮಲ್ಕೊಳೋದೇ ಲೇಟ್ ಆಗೋಯ್ತು’ ಅಂದ್ಲು. ಮಧ್ಯೆ ಅದ್ಯಾರೋ ಕೇಳಿದ್ರು ‘ಅಲ್ಲಾ, ಕಂಪ್ಯೂಟರ್ ಮುಂದೆ ಕೂತು ಕೆಲ್ಸ ಮಾಡಿದ್ದಕ್ಕೆ ದಿನಾ ಮಸಾಜ್ ಮಾಡೋಷ್ಟು ಗ್ರಹಚಾರದ್ ನೋವಾ...ಏನ್ ದೋಡ್ ಕಲ್ಲ್ ಕಡಿಯೋಕೆ ಹೋಗೋರ ಥರ. ಬೆಳಗ್ಗೆದ್ದು ಪಾದಕ್ಕೆ ನಮಸ್ಕಾರ ಮಾಡೋ ಪರಿಪಾಠನೂ ಇದ್ಯಾ ಮತ್ತೆ?’ ಅಂತೆಲ್ಲ ಪ್ರಶ್ನಿಸಿ ವಿಷ್ಯ ಬೆಳಗ್ಗೆದ್ದು ಯಾರ್‍ಯಾರು ಅವರ ಪತಿಯ ಪಾದಕಮಲಗಳಿಗೆ ಎರಗಿ(ಎಡವಿ)ಬೀಳ್ತಾರೆ ಅನ್ನುವಲ್ಲಿಗೆ ಮುಟ್ಟಿದ್ದಾಯ್ತು. ನಾನಂತು ಸುಮ್ನಾಗ್ಬಿಟ್ಟೆ. ನಾನು ಬೆಳಿಗ್ಗೆದ್ದು ಇವನ ಪಾದ ಹುಡುಕ್ಕೊಂಡು ಕೂತ್ರೆ ಬೆಳಗಿನ ಕೆಲ್ಸ ಎಲ್ಲ ಮುಗಿದಂಗೆ. ಇವನು ಒಂದೊಂದು ಪಾದ ಒಂದೊಂದ್ ದಿಕ್ಕಿಗೆ ಎಸೆದು ಮಲ್ಕೊಂಡಿರ್ತಾನೆ, ಅವುಗಳನ್ನ ಎಲ್ಲಿಲ್ಲಿವೆ ಅಂತ ಹುಡುಕಿ, ಜೋಡ್ಸಿ ನಮಸ್ಕಾರ ಮಾಡೋಷ್ಟ್ರಲ್ಲಿ ಅವನಿಗೇ ಆಫೀಸಿಗೆ ಲೇಟ್ ಆಗ್ಬಿಡತ್ತೆ . ಇಲ್ಲಾ ಅಂದ್ರೆ ಪಾದಕ್ಕೆರ್ಗಕ್ಕೆ ನಂದೇನೂ ಆಬ್ಜಕ್ಷನ್ ಇರ್ಲಿಲ್ಲ.


ಹೀಗೆ ಒಂದಿನ ಸುಮ್ನೆ ಕೂತಿದ್ದೆ. ನಾನು ಸುಮ್ನೆ ಕೂತಿದ್ರೂ ನೋಡೋಕಾಗಲ್ಲ ಆಸಾಮಿಗೆ. ‘ಏನು....ಇವತ್ಯಾವ್ದ್ರ ಬಗ್ಗೆ ಆಲೋಚನಾ ಸಂಶೋಧನೆ? ಎಷ್ಟುವರ್ಷದ್ ಹಿಂದೆ ನಾನೇನ್ ಮಾಡಿದ್ದೆ ಅಂತ ನಿಂಗಿವತ್ತು ಕೋಪ?’ ಅಂದ್ಕೊಂಡು ಬರ್ತಾನೆ. ‘ಅದ್ಯಾವ ಜನ್ಮದಲ್ಲಿ ಪಾಪ ಮಾಡಿದ್ನೋ ಅಂತಾರೆ ನೋಡು, ಅ ಮಾತನ್ನ ಯಾವತ್ತೋ ಏನೋ ಮಾಡಿದ್ದನ್ನ ಇವತ್ತು ನೆನಪಿಸ್ಕೊಂಡು ಬೇಸರ ಮಾಡ್ಕೊತೀರ ನೀವು ಹೆಂಗಸ್ರು, ಅದ್ಕೆ ಗಂಡಸರು ಮಾತ್ರ ಆಡ್ಬೇಕಾಗಿರೋ ಮಾತುಗಳು ಅವು, ನೀವು ಹೆಂಗಸ್ರು ಹಾಗೆ ಹೇಳ್ಲೇ ಬಾರದು’ ಅಂತೆಲ್ಲ ಭಾಷಣ ಶುರು ಮಾಡಿದ. ನಾನ್ಯಾವತ್ತೂ ಆಡ್ದೇ ಇರೋ ಮಾತಿಗೂ ಇವತ್ತೊಂದು ಕೊಂಕು. ಇವತ್ತಿವಳು ಸುಮ್ನೆ ಇರ್ತಾಳೆ ಅಂತ ಗೊತ್ತಾದ್ರೆ ಇವರುಗಳು ಜೋರಾಗೇಬಿಡ್ತಾರೆ. ನಾನೇನಾದ್ರೂ ಧಬಾಯಿಸಿ ಉತ್ರ ಕೊಟ್ರೆ ಮತ್ತೆ ಒಂಥರಾ ನಗೋದು ನನ್ನ ಕಡೆ ನೋಡಿ. ಇವೇ ಆಗೋಲ್ಲ. ಒಂದ್ಸಲ ಅವನ ಕಡೆ ನೋಡಿ ‘ಸಾಕು, ಸುಮ್ನೆ ಇದ್ಬಿಡೋಣ’ ಅಂದ್ಕೊಂಡು ಸುಮ್ನಾದೆ. ಅವನಷ್ಟಕ್ಕೆ ಅವನು ಹೇಳ್ತಾ ಇದ್ದ. ‘ನೀನು ಸುಮ್ನೆ ಏನೇನೋ ಹೇಳ್ಬೇಡ, ಈಗ ಸುಮಾರು ಮೂರುವರ್ಷದಿಂದ ಜವಾಬ್ಧಾರಿನೆಲ್ಲ ಸ್ವಲ್ಪ ನಾನೂ ವಹಿಸ್ಕೋತಾ ಇದೀನಿ’ ಅಂದ. ನಾನೇನು ಹೇಳ್ದೇನೆ ಇವನ್ಯಾಕೆ ಇದನ್ನೆಲ್ಲ ಹೇಳ್ತಿದಾನೆ ಅನ್ನಿಸ್ತು. ಮದುವೆ ಆದಾಗಿಂದ ಒಂದುಕಾಸು ಸಂಪಾದನೆ ಇಲ್ದೇ ಮನೇಲಿ ಕೂತಿರೋಳು ನಾನು. ಆದ್ರೂ ಅವನ ತಲೇಲಿ ಈ ಸಂಸಾರಕ್ಕೆ ತಾನೇನೂ ಮಾಡ್ತಿಲ್ಲ ಅಂತ ಅನ್ನಿಸೋ ಅಷ್ಟು ಕೊರೆದು ಮನೇಲಿ ಕುಳಿತು ನಾ ಮಾಡೋ ಅಡುಗೆ ಕೆಲಸವೇ ಸಂಸಾರ ನಡೆಯೋಕೆ ಆಧಾರ ಅನ್ನಿಸೋ ಹಾಗೆ ತಲೆಕೊರ್ದಿದೀನಾ ಅನ್ನಿಸ್ತು. ಈ ಕುಡುಕ್ರು ಪಡಕ್ರು , ಮನೆ ಹಾಳು ಮಾಡ್ಕೊಂಡೋವ್ರು ಎಲ್ಲ ಹೇಳೋ ಹಾಗೆ ಇನ್ನೊಂದ್ಸಲ ಹೇಳ್ದ. ‘ನಿಜವಾಗ್ಲೂ ಈಗ ಸುಮಾರು ಮೂರುವರ್ಷದಿಂದ ಜವಾಬ್ಧಾರಿನೆಲ್ಲ ಸ್ವಲ್ಪ ನಾನು ವಹಿಸ್ಕೋತಾ ಇದೀನಿ, ಪುಟ್ಟುಗೆ ಸ್ನಾನಗೀನ ಮಾಡಿಸ್ತೀನಲ್ಲ’ಅಂದ. ‘ಪಾಪ, ಎಷ್ಟೆಲ್ಲ ಜವಾಬ್ಧಾರಿವಹಿಸ್ಕೊಂಡಿದಾನೆ ಮನೆದು’
ಅನ್ನಿಸ್ತು. ‘ನಮ್ಮದೇ ಮಗು ತಾನೆ, ನೀನ್ ಸ್ನಾನ್ ಮಾಡ್ಸೋದ್ ಪಕ್ಕದ್ ಮನೆ ಮಗೂಗೇನೂ ಅಲ್ವಲ್ಲಾ?’ ಅಂತ ಕೇಳಿ ದಂಗುಮಾಡಿಬಿಡೋಣ ಅನ್ನಿಸ್ತು.
ಆದ್ರೂ ಯಾವಾಗ್ಲೂ ಮನೆ ಜವಾಬ್ಧಾರಿ ವಹಿಸ್ಕೊಂಡಿದ್ದು ಅವನೇ ಅನ್ನೋ ರಹಸ್ಯ ಅವನಿಗೇ ಗೊತಾಗೋಕೆ ನಾನು ಬಿಡದೇ ಇರೋ ನನ್ನ ಸಾಮರ್ಥ್ಯಕ್ಕೆ ನಾನೇ ಭುಜ ತಟ್ಕೊಂಡೆ. ‘ಏನದು? ಭುಜ ತಟ್ಕೋತಾ ಇದೀಯ?’ ಅಂದ. ‘ಇಲ್ಲ, ಇವತ್ಯಾಕೋ ಬೆನ್ನು ನೋವು’ ಅಂದೆ.ಪಾಪ, ಆವತ್ತು ಅವನು ಮನೆ ಜವಾಬ್ಧಾರಿ ನಿಭಾಯಿಸ್ತಾ ಇದ್ದ (ಅದೇ ಮಗನಿಗೆ ಸ್ನಾನ ಮಾಡಿಸೋದು). ತುಂಬ ಹೊತ್ತಿಂದ ಸ್ನಾನ ಮಾಡ್ತಿಲ್ಲ ಬೇರೇನೋ ಮಾಡ್ತಿರಬೇಕು, ಹೋಗಿ ನೋಡೋಣ ಅಂದ್ಕೊಂಡು ಬಾಥ್ ರೂಂಗೆ ಹೋಗಿ ನೋಡಿದ್ರೆ ಮಗನಿಗೆ ಹಲ್ಲುಜ್ಜಿಸ್ತಾ ಇದ್ರು ಅವರಪ್ಪ. ಮಗನ ಬಾಯಿತುಂಬಾ ನೊರೆನೊರೆ. ಮಗ ದೋಡ್ ದಾಗಿ ಬಾಯಿ ತೆರಕೊಂಡು ನಾಲಿಗೇನ ಊದ್ದಕ್ಕೆ ಹೊರಗೆ ಚಾಚ್ಕೊಂಡು ಟೂಥ್ ಬ್ರಶ್ ನಿಂದ ಗಸ ಗಸ ನಾಲಿಗೇನ ಉಜ್ಜತಾ ಇದ್ದ ಬಾಥ್ ರೂಂ ತೊಳೆದಂಗೆ. ಅವರಪ್ಪ ‘ಹೂಂ....ಉಜ್ಜು ಉಜ್ಜು, ಇನ್ನು ಗಟ್ಟಿ’ ಅಂತಾ ಇದ್ರು. ‘ಏನ್ ಮಾಡ್ತಿದೀರಾ ಇಬ್ರೂ?’ ಅಂತ ಕೇಳಿದ್ದಕ್ಕೆ ‘ನಾಲಿಗೆ ಉಜ್ತಿದಾನೆ’ ಅಂತ ನನ್ ಕಡೆ ತಿರುಗ್ದೆನೇ ಉತ್ತರ ಬಂತು. ಬಾಯಿ ತುಂಬ ನೊರೆ ತುಂಬ್ಕೊಂಡಿದ್ರಿಂದ ತಾವಿಬ್ರೂ ಮಾಡ್ತಿರೋ ಸಾಹಸಾನ ವರ್ಣಿಸೋಕಾಗದೆ ಮಗ ಬಾಯಿ ತೆರಕೊಂಡೇ ಕೋರೆಗಣ್ಣಲ್ಲಿ ನನ್ನ ನೋಡಿ ಮತ್ತೆ ತನ್ನ ಕೆಲಸ ಮುಂದ್ವರಿಸಿದ. ‘ಏನಷ್ಟೊಂದು ನೊರೆ?’ ಅಂದಿದ್ದಕ್ಕೆ ‘ಟೂಥ್ ಪೇಸ್ಟ್ ಹಾಕಿ ಉಜ್ಜತಿದಾನೆ’ ಅಂತ ಉತ್ರ ಬಂತು. ಸಧ್ಯ ಶಾಂಪೂ ಹಾಕಿ ಉಜ್ಜಲಿಲ್ವಲ್ಲ! ಅಂದ್ಕೊಂಡು ಸುಮ್ನೆ ಈ ಕಡೆ ಬಂದು ಸ್ವಲ್ಪ ಹೊತ್ತು ಕೂತ್ಕೊಂಡು ನನಗೆ ನಾನೆ ಸಮಾಧಾನ ಹೇಳ್ಕೊಂಡು ಎದ್ದೆ.

ದೀತ್ಯಾ ದೊಡ್ಡಬಾಯಿ ತೆರೆದು, ಮುದ್ದಾದ ಎರಡೇ ಹಲ್ಲು ತೋರ್ಸಿ ಆಹ್ಹ ಆಹ್ಹ ಆಹ್ಹ ಅಂತ ನಗುವಾಗ ನನ್ ಮಗ ‘ಎಂತದೇ ಮುಗಳ್ನಗಾಡ್ತೆ’ ಅಂದಾಗ ಸುಮ್ನೇ ನೋಡ್ತಾ ಇದ್ದೆ. ಆಗ ನಗು ಬರಲಿಲ್ಲ. ಮರುದಿನ ಒಬ್ಬಳೇ ಕುಳಿತಿದ್ದಾಗ ದೀತ್ಯಾ ಅಷ್ಟು ದೋಡ್ ದಾಗಿ ನಗ್ತಿದ್ರೆ ನನ್ ಮಗ ‘ಯಾಕೆ ಮುಗುಳ್ನಗ್ತೀಯಾ?' ಅಂತ ಕೇಳಿದ್ದು ನೆನಪಾಗಿ ನಗು ಬಂತು. ಪರವಾಗಿಲ್ಲ, ಅರ್ಥ ಗೊತ್ತಾಗ್ದಿದ್ರೂ ನಿಧಾನಕ್ಕೆ ಶಬ್ದಸಂಗ್ರಹಿಸ್ತಿದಾನೆ ಅನ್ಕೊಂಡು ಸುಮ್ನಾದೆ. ಇವನೇನೋ ಚಿಕ್ಕವನು, ಇವರಪ್ಪ ಯಾಕೆ ಹಾಗೆ ಅಂತ ಯೋಚ್ಸಿದಾಗ ನಾನೂ ಒಂದ್ಸಲ ಒಬ್ಬಳೇ ದೋಡ್ಡದಾಗಿ ಹೆ ಹ್ಹೆ ಹ್ಹೆ ಅಂತ ನಕ್ಕೆ. ಮತ್ತೆ ಇವನು ‘ಅದ್ಯಾಕೆ ಹಾಗೆ ಮುಗುಳ್ನಗ್ತೀಯಾ’ ಅನ್ನೋಥರ ನನ್ನೇ ನೋಡ್ತಾ ಇದ್ದ. ಆ ಜಾತಿನೆ ಹಾಗೆ ಅನಿಸಿಬಿಡ್ತು...

ಆವತ್ತು ಮಧ್ಯಾಹ್ನ ನನ್ ಕೊರೆತ ತಪ್ಪಿಸ್ಕೊಂಡು ಆಫೀಸಿಗೆ ಹೊರಟ ಖುಷಿಯಲ್ಲಿ ಲ್ಯಾಪ್ ಟಾಪ್ ಮನೆಲ್ಲೇ ಬಿಟ್ಟು ಓಡಿ ಹೊರಟಿದ್ದ. ಮತ್ತೆ `ಲ್ಯಾಪ್ ಟಾಪ್ ತಗೊಂಡುಹೋಗೋಕೆ ಬಂದೆ’ ಅಂತ ವಾಪಸ್ ಬರ್ತಾನೆ ಅಂತ ನಾನು ಬೇಗ ಬೇಗ ಅದನ್ನ ತಗೊಂಡು ಹೋಗಿ ಅವನ ಹೆಗಲಿಗೇರಿಸಿ ಕಳ್ಸಿದ್ದೆ. ಹೋಗೋವಾಗ ‘ಎಷ್ಟೊತ್ತಿಗ್ ಬರ್ತೀಯ?’ ಅಂದ್ರೆ ‘ಐದು ಗಂಟೆ’ ಅಂದ. ನಾನೂ ಬಿಡ್ಲಿಲ್ಲ ‘ನಾಲ್ಕು ಗಂಟೆಗೇ ಬಾ’ ಅಂದೆ. ‘ಹೆ ಹ್ಹೆ ಹ್ಹೆ’ ಅಂದ. ‘ಮೂರು ಗಂಟೆಗೆ ಬರ್ತೀನಿ’ ಅಂದ್ರೂ ‘ಎರಡ್ ಗಂಟೆಗೇ ಬಾ’ ಅನ್ನೋದೊಂಥರಾ ಅಭ್ಯಾಸ ನಂಗೆ. ಆದ್ರೂ ಇವನು ಹೀಗೆ ನಗೋದು ಸರಿಯಲ್ಲ ಅಲ್ವಾ? ನಾನೂ ಅವನನ್ನ ನೋಡಿ ಹೀಗೇ ನಗ್ತಾ ಇದ್ರೆ? ಒಂಥರಾ ಚೆನ್ನಾಗಿರಬಹುದು ಬಿಡಿ, ಬೆಳಿಗ್ಗೆಯಿಂದ ಸಂಜೆತನಕ ಮನೆಯೊಳಗೆ ಮಾತಿಲ್ಲ ಕಥೆಯಿಲ್ಲ, ಎಲ್ಲದಕ್ಕೂ ನಗು.

September 11, 2008

ಹೇಳಲೊಂಥರಾ ಥರಾ...ನೋಡಲೊಂಥರಾಥರಾ....

ಇಲ್ಲೊಂದೆರಡು ವಿಡಿಯೋತುಣುಕುಗಳನ್ನ ನಿಮ್ಮ ಮುಂದಿಟ್ಟಿದೀನಿ. ಬ್ಲಾಗ್ ಅಲ್ಲಿ ಹಾಕೋಕೆ ತುಂಬ ಮುಜುಗರವಾಗಿದ್ರಿಂದ ಇಷ್ಟು ದಿನ ಇದನ್ನ ಬ್ಲಾಗಲ್ಲಿ ಹಾಕಿರ್ಲಿಲ್ಲ. ಮೊನ್ನೆ ಒಬ್ಬರು ತುಂಬ ಒತ್ತಾಯ ಮಾಡಿದ್ರು ‘ಬ್ಲಾಗಲ್ಲಿ ಹಾಕು ಆ ವಿಡಿಯೋನ’ ಅಂತ. ಬ್ಲಾಗ್ ಬರೆಯೋಕೆ ಆರಂಭಿಸಿದಾಗ ಮೊದಲೆಲ್ಲ ಸಲಹೆಗಳನ್ನ ಕೊಟ್ಟು ಸಲಹಿದ ಹಿತೈಷಿ ಅವರು. ಅಂಥವರ ಮಾತನ್ನ ಮೀರೋಕಾಗ್ದೇ ತುಂಬ ಮುಜುಗರದಿಂದ ಈ ವಿಡಿಯೋನ ನಿಮ್ಮಗಳ ಮುಂದೆ ಇಡ್ತಿದೀನಿ. ಅಷ್ಟೊಂದು ಚೆನಾಗಿ ಅಡುಗೆ ಮಾಡೋಕೆ ಬರೋಲ್ಲ, ಆದ್ರೂ ಒಂದ್ಸಲ ಟ್ರೈ ಮಾಡಿದ್ದೆ, ಅದೇ ಇದು.

ETV Kannada - ಸವಿರುಚಿಯ 2006/ May- ಚಿತ್ರೀಕರಣ
June/ 9/ 2006 ಪ್ರಸಾರ
ನಿಶಿತಾ ಗೌಡರ ಕಾರ್ಯಕ್ರಮ ನಿರ್ವಹಣೆ
ಮಿಸ್ ಪಂಕಜ ನಿರ್ದೇಶನ
ಶ್ರೀ ರಾಮು ಅವರ ಸಲಹೆ ಸಹಕಾರಗಳು
ಮರೆಯಲಾಗದ ಒಂದು ಸಂತಸದ ಅನುಭವ.

ಶೂಟಿಂಗ್ ಮುಗ್ಸಿ ಅಮ್ಮಂಗೆ ಫೋನ್ ಮಾಡಿದ್ದೆ. ‘ಹೇಗಾಯ್ತು?’ ಅಂತ ಅಮ್ಮ ಕೇಳಿದ್ರು. ‘ಪರವಾಗಿಲ್ಲ’ ಅಂತ ಹೇಳ್ದೆ. ಮನೆಗೆ ಬರೋಷ್ಟ್ರಲ್ಲಿ ಸುಸ್ತಾಗಿತ್ತು,(ಇಷ್ಟೆಲ್ಲ ಅಡುಗೆ ಮಾಡಿದ್ರೆ ಸುಸ್ತಾಗದೇ ಇರತ್ತ,?) ಮಲ್ಕೊಂಬಿಟ್ಟೆ.
ಈ ಟಿವಿಲಿ ಪ್ರಸಾರ ಆದ ದಿನ ಅಮ್ಮ ನೋಡ್ಬಿಟ್ಟು ‘ಇದೆಂತೆ ಪುಟ್ಟಾ....!!!ಬೆಳ್ಳುಳ್ಳಿ ತಂಬುಳಿ ಮಾಡೋದನ್ನ ಅಷ್ಟು ನೀಟಾಗಿ ಕಲ್ಸಿ ಕಳ್ಸಿದ್ದಿ, ನೀನೆಂತೋ ಹೊಸರುಚಿ ಮಾಡಿಟ್ಟಿದ್ದೆ...ಈರುಳ್ಳಿ ಉದ್ದಿನ್ ಬೇಳೆ ತಂಬುಳಿ!!!’ ಅಂತ ಅಮ್ಮ ಹುಬ್ಬೇರಿಸಿದ್ರು. ಅಜ್ಜಿ ಹೇಳ್ತಾ ಇದ್ರು ‘ಎಂತ ಆಗದಿಲ್ಲೆ ತಗ...ಇದೂ ಒಂದ್ ನಮೂನಿ ಚೊಲೊನೆ ಆಗ್ತು’ ಅಂತ ನಾ ಮಾಡಿದ ತಂಬುಳಿ ಉಂಡಷ್ಟೇ ಖುಷಿಪಟ್ಟರಲ್ಲದೇ ನನ್ನ ಮುದ್ದು ಮಾಡಿದ್ರು. (ನಂಗೆ ನಿಜವಾಗ್ಲೂ ಅಮ್ಮ ಹಿಂದಿನ್ ದಿನ ಕಲಿಸಿದ್ದ ರೆಸಿಪಿ ಮರ್ತೋಗಿತ್ತು ಅನ್ಸತ್ತೆ, ಬೆಳ್ಳುಳ್ಳಿ ಬದಲು ಈರುಳ್ಳಿ ಹಾಕಿದೀನಿ ತಂಬುಳಿಗೆ. ಆದ್ರೂ ನೀವೂ ಟ್ರೈ ಮಾಡ್ಬಹುದು ಅನ್ಸತ್ತೆ )

ನಾನು ಮಾತ್ರ ಈ ವಿಡಿಯೋ ನೋಡೋಕೇ ಹೋಗೋಲ್ಲ, ಏನೋ ಒಂಥರಾ ಆಗತ್ತೆ ನಂಗೆ ಇದನ್ನ ನೋಡಿದ್ರೆ. ಈ ವಿಡಿಯೋ ತುಣುಕುಗಳನ್ನ ನಿಮ್ಮ ಮುಂದೆ ಇಟ್ಬಿಟ್ಟು ನಾನಂತೂ ಓಡಿಹೋಗ್ತಿದೀನಿ. ನೋಡಿಯಾದ್ಮೇಲೆ ನೀವು ಹೇಳಿ ‘ನೋಡಿಯಾಯ್ತು, ಬಾ ಶಾಂತಲಾ...’ ಅಂತ. ಅಲ್ಲಿತನಕ ಬಬಾ.....ಯ್.ಮತ್ತೊಮ್ಮೆ ಈಟಿವಿ ಬಳಗದವರನ್ನ ನೆನೆಯುತ್ತ,
-ಶಾಂತಲಾ ಭಂಡಿ.

September 6, 2008

ನೀಲುವಿನ ಅಂಗಳದ ಆ ಬೆಳದಿಂಗಳು

ಬೆಳಕು ಅರೆಬಿರಿದು ಕಣ್ಣುಮಿಟುಕಿಸುತ್ತಿದೆ ಚುಮು ಚುಮು ತುಂತುರಿನಲ್ಲಿ. ಅಂಗಳದ ಮಣ್ಣು ತುಂತುರ ನೆನೆದು ನಗುತ್ತಿದೆ. ಕೊಂಚವೇ ಹಸಿಯಾಗುತ್ತ ನಾಚುತ್ತಲಿದೆ.ಘಮ ಘಮವೆನಿಸುತ್ತದೆ. ಸೀರೆಯಂಚನ್ನ ಚೂರು ಮೇಲಕ್ಕೆತ್ತಿ ಪಾದಗಳನ್ನ ಅಂಗಳದ ಹಸಿಯೊಳಗಿಡುತ್ತಿದ್ದೇನೆ.ತಂಪು, ತಂಪೇ ಇದು. ಆಹ್ಲಾದ. ಮಳೆಯಲ್ಲಿ ಮನೆಯೊಳಗೆ ಕುಳಿತು ಹೀರುವ ಬಿಸಿಕಾಫಿಗಿಂತ ಆಹ್ಲಾದ. ನಿನ್ನ ನೆನಪಾಗುತ್ತದೆ. ನೀನಿದ್ದರೆ ಇನ್ನೂ ಖುಷಿ ಪಡುತ್ತಿದ್ದೆಯೆನಿಸಿ ನಗು. ಮೊನ್ನೆಯಷ್ಟೇ ನೀ ತಂದ ಹೊಸ ಕಾಲ್ಗೆಜ್ಜೆ ಕೆಸರೊಂದಿಗೆ ಆಟವಾಡ್ತಿದೆ. ಎಲ್ಲವೂ ಹೊಸತು, ಹೊಸತನದ ಗುಂಗಿನಲ್ಲಿ ಅಂಗಳದಲ್ಲಿ ಸಾಲು ಚುಕ್ಕಿಗಳಿಳಿದು ಮೂಡುತ್ತವೆ. ಒಂದೊಂದು ಚುಕ್ಕಿಯನ್ನೂ ಸೇರಿಸುತ್ತ ಸೇರಿಸುತ್ತ ಮನಸಿಗೆ ಬಂದಂತೆ ನನ್ನಿಷ್ಟದ ಹಾಗೆ ಗೆರೆ ಎಳೆಯುತ್ತ ಸುತ್ತದಿಕ್ಕುಗಳಿಂದೆಲ್ಲ ಕತ್ತು ಹೊರಳಿಸಿ ಬಗ್ಗಿಸಿ ತಿರುವುತ್ತ ಆಹ್! ಎಂದುಕೊಳ್ಳುತ್ತೇನೆ.ರಂಗೋಲೆ! ನಾನು ಬಿಡಿಸಿದ ನನ್ನೊಳಗಿನ ಚಿತ್ರ ಅಂಗಳದ ಬಾಗಿಲಿಗಿಂದು ರಂಗೋಲೆ. ನೀನಿರಬೇಕಿತ್ತು ಎನ್ನಿಸುತ್ತಿದೆ.ಸುತ್ತೆಲ್ಲ ನೋಡುತ್ತೇನೆ. ಹಸಿರೆಲೆಗಳೇ ಹೂಬಿಟ್ಟಂತೆ! ಒಂದೊಂದು ಎಲೆಗೂ ಬೆಳ್ಳನೆಯ ಹೂಗುಚ್ಚ. ಆಗಸವೂ ಮಂದ ಬಿಳುಪು. ತುಂತುರು. ಎಳೆಬಿಸಿಲು ಯಾರನ್ನೋ ಚುಂಬಿಸಲೆಂದೇ ಬಂದಿರುವಂತೆ, ಹಸಿರೆಲೆಗಳ ನಡುವೆ ಬಿಳಿ ಹೂಗಳಲಿ ನೆಲೆಯಾಗುವಂತೆ ಹರಡಿಕೊಳ್ಳುತ್ತಿದೆ. ಹೂಗಳು ನನ್ನ ನೋಡಿ ಮಂದಹಾಸ ಬೀರುತ್ತಿವೆ. ನಾನೂ ನಗುತ್ತೇನೆ.
ನನ್ನದೇ ಗುಂಗಿನಲ್ಲಿ ಕತ್ತೆತ್ತಿದರೆ ಸೂರ್ಯನ ಬಣ್ಣ ಬೆಳಕಾಗುವುಷ್ಟರಲ್ಲಿ ಬೇರೆಯದೇ! ಆ ಬಣ್ಣವೂ ಇಷ್ಟವೇ ಎನಿಸಿಬಿಡುತ್ತದೆ. ಅವನು ಯಾವ ಬಣ್ಣದಲ್ಲಿದ್ದರೂ ನನಗಿಷ್ಟವೇ, ಅವನೇ ಹಾಗೆ. ಬೆಳಿಗ್ಗೆ, ಮಧ್ಯಾಹ್ನ ಸಂಜೆಯೊಳಗೆ ಬಣ್ಣಬದಲಾಯಿಸಿಕೊಳ್ಳುತ್ತಲೇ ಸಂಜೆಯಾರಿದ ಮೇಲೆ ಅವನು ಅವನಾಗಿಯೇ ಇರುವ ಅವನ ನೆನೆದು ಮುದ್ದು ಬರತ್ತೆ. ಮುಗುಳ್ನಕ್ಕು ಕಣ್ಣುಮಿಟುಕಿಸಿ ಮಗುವಾಗುತ್ತೇನೆ. ತುಂತುರುವೊಂದು ಆಗಸದಿಂದ ಕಣ್ಣಂಚಿಗೆ ಬಂದು ‘ನನಗಿಂತ ನಿನ್ನ ಮನ ತಣ್ಣಗಿದೆಯಲ್ಲೆ,ಮನಸನ್ನೊಂಚೂರು ಬಿಸಿಲಿಗೆ ಹರವು, ಸರಿಹೋಗಬಹುದು’ ಅಂತ ಪಿಸುನುಡಿದು ಕೆನ್ನೆಗುಂಟ ಬಳಸಿ ಹರಿದ ಹಾದಿಯನ್ನ ಹಿಡಿದು ನನ್ನೆದೆಗಿಳಿದು ಆರಿ ಹೋದಹಾಗೆ ಅನ್ನಿಸುತ್ತದೆ. ಕತ್ತೆತ್ತಿ ಸುತ್ತ ದಿಟ್ಟಿಸಿದರೆ ಸುತ್ತಲಿನ ಪ್ರಕೃತಿ ನನ್ನೆಡೆಗೆ ಮುತ್ತಿಕೊಂಡು ಕಳೆದುಹೋಗುತ್ತೇನೆ. ಅಂಗಳವನ್ನು ಇನ್ನಷ್ಟು ಚಂದ ಮಾಡುವ ಹುಮ್ಮಸ್ಸು ಯಾವತ್ತೂ ಇದೆ. ತುಂತುರುವಿನ ಸಾನ್ನಿಧ್ಯದಲ್ಲೂ ಇಬ್ಬನಿಯ ನೆನಪು.ಇಬ್ಬನಿಗೂ ತುಂತುರುವಿಗೂ ಹೊಂದಿಕೆಯಾಗುವ ಹೂಗಿಡವೊಂದನ್ನು ನೆಡಬೇಕೆನ್ನಿಸುತ್ತದೆ. ಹಾಡೊಂದನ್ನ ಗುನುಗುತ್ತೇನೆ.
"ಮೂಡಲ ಮನೆಯ ಮುತ್ತಿನ ನೀರಿನ
ಎರಕಾವ ಹೊಯ್ದ, ನುಣ್ಣನೆ ಎರಕಾವ ಹೊಯ್ದ"
ಹಾಡುಮುಗಿವಂತೆ ಅಂಗಳ ಮಂಗಳದ ಮನೆಯಾಗುತ್ತದೆ.ಸುತ್ತೆಲ್ಲ ಕಣ್ಣು ಹಾಯಿಸಿ ನನ್ನೊಳಗೇ ಹಿಗ್ಗುತ್ತೇನೆ. ಅಂಗಳದ ತುಂಬೆಲ್ಲ ಸಂತಸದ ಹರಿವು. ನೀ ತಂದ ಬಿಳಿಸೀರೆಯ ನಿರಿಗೆಗಳನ್ನ ಉದ್ದಕ್ಕೆ ಅಲೆಸುತ್ತ ಅಂಗಳದಲ್ಲೆಲ್ಲ ನಡೆದಾಡುತ್ತೇನೆ. ನಾಲ್ಕು ಹೆಜ್ಜಯಿಡುವಷ್ಟರಲ್ಲಿ ನನ್ನದೇ ಹೆಜ್ಜೆಗುರುತುಗಳ ಅಲ್ಲಿ ಕಂಡು ನಾಚುತ್ತೇನೆ. ಅಲ್ಲೆಲ್ಲೋ ನೀನು ಅವಿತು ಕುಳಿತಿರಬಹುದೆನಿಸುತ್ತದೆ ಇದನ್ನೆಲ್ಲ ನೋಡುತ್ತ, ಭಯ ಆವರಿಸಿ ಕೈಯೊಳಗಿನ ಹೂವಿನ ಪಾತ್ರೆ, ರಂಗೋಲೆ ಬಟ್ಟಲುಗಳನ್ನ ಸರಕ್ಕನೆ ಎತ್ತಿಕೊಂಡು ಅಂಗಳದಿಂದ ಮಾಯವಾಗುತ್ತೇನೆ.
ಬಿಸಿಯಕಾಫಿ ಬಟ್ಟಲ ಹಿಡಿದು ಬರುವಷ್ಟರಲ್ಲಿ ನೀನಲ್ಲಿ ಕುಳಿತು ತಂಬೂರ ನುಡಿಸುತ್ತಿರುತ್ತೀಯ. ನಾನದನು ನಿಧಾನಕ್ಕೆ ಪಕ್ಕಕ್ಕಿಟ್ಟು ಕಾಫಿಬಟ್ಟಲನ್ನು ಕೈಯೊಳಗಿತ್ತು ಪಕ್ಕ ನಿಲ್ಲುತ್ತೇನೆ. ನೀನ್ಯಾವತ್ತಿನಂತೆ ‘ನೀಲಾ’ ಅಂತ ಕರೆಯೋದಿಲ್ಲ. ನೀಲಿಯಂಗಳದ ತುಂಬೆಲ್ಲ ನೀಹಾರ! ಸುತ್ತಲಿನ ನೀಹಾರ ಕೂಡ ನೀರಸವೆನಿಸುತ್ತದೆ. ಬಿಸಿಲಿಗೂ ಬೇರೆಯದೇ ಬಣ್ಣ. ನೂಪುರದ ಸದ್ದಡಗಿ ನೀರವ. ‘ಅಂಗಳ ಹೇಗಿದೆ’ ಕೇಳುತ್ತೇನೆ. ‘ಆತ್ಮರತಿ ಅನಿಸುತ್ತಿಲ್ಲವಾ’ ನಿನ್ನ ಧ್ವನಿಯೊಳಗಿನ ಭಾವ ಕೇಳಿಸುವುದಿಲ್ಲ, ಮಾತು ಮಾತ್ರ. ನಿಲ್ಲದೆ ಹೊರಟುಹೋಗುತ್ತೀಯ. ‘ನಿನ್ನಮನೆ ಬೀಗದಕೈ,ನನಗಿದು ಭಾರ,ನೀನಿಟ್ಟುಕೋ’ ಅಂತ ಅಂಗಲಾಚಿದ್ದು ಕೇಳದಷ್ಟು ಆಳಕ್ಕಿಳಿದ ಯೋಚನೆ ನಿನ್ನಾಳವನ್ನು ಅಲುಗಿಸಗೊಡುವುದಿಲ್ಲ,ನಾನೂ ಮೌನಿಯಾಗಿ ಮನೆಯೊಳಗಡಿಯಿಡುತ್ತೇನೆ.
ಮತ್ತೆ ವಾಪಸಾಗುವಷ್ಟರಲ್ಲಿ ಅಂಗಳದ ಅಲಂಕಾರವೇ ಹೊಸತೆನಿಸುತ್ತದೆ. ಹಸಿರುಗಿಡದ ನೀಲಿಹೂಗಳ ಬಿಟ್ಟು ನಾನಿತ್ತ ರಂಗೋಲೆಯ ಹರಿವಿಲ್ಲ, ಬೆಳ್ಳಿಚುಕ್ಕೆಗಳ ಬೆಳದಿಂಗಳಿಲ್ಲ, ಸುತ್ತ ಬಳ್ಳಿಗಿಡದ ನಿಲುವಿಲ್ಲ. ಬಿಳಿ ಬಣ್ಣದ ಹೂಗಳ ನಡುವೆ ನೀಲ ನಕ್ಷತ್ರಗಳು, ಸುತ್ತ ನೀಲಬೆಳದಿಂಗಳು ಮಾತ್ರ ನೆಲೆಯಾಗಿರುತ್ತವೆ. ಹೊಸತೆನಿಸುತ್ತದೆ. ಅಲ್ಲಿ ನನ್ನ ಹೆಜ್ಜೆಯ ಗುರುತನ್ನೆಲ್ಲ ಯಾರೋ ಅಳಿಸಿದ ನೋವು. ಅದು ನೀನೆಂಬ ಅನುಮಾನಕ್ಕೆ ಸಾಕ್ಷಿಯನ್ನು ಅಂಗಳದ ಗಿಡಗಳ ನಡುವೆ ಹುಡುಕುತ್ತೇನೆ.ಕೋಪದಿಂದ ನಿನ್ನ ಕಣ್ಣುಗಳ ದಿಟ್ಟಿಸುತ್ತೇನೆ, ಅಲ್ಲಿಯೂ ಮಂದ ಹೊಳಪು. ಕೇಳುತ್ತೇನೆ ‘ನಾನು ಬಡವ ಅನ್ನುತ್ತಿದ್ದೆಯಲ್ಲ,ಒಲವೇ ನಮ್ಮ ಬದುಕಾಗಿರುವಾಗ ಇಷ್ಟು ದುಬಾರಿಯ ಹೊಳಪು ನಿನ್ನ ಕಣ್ಣುಗಳಿಗೆ ಹೇಗೆ ಬಂತು? ಅಂಗಳದಲ್ಲಿ ಬೆಲೆಬಾಳುವ ಈ ನಕ್ಷತ್ರಗಳ ತಂದಿಟ್ಟವರಾರು?’ ಅಂತ. ಮಾತು ಕಳೆದವನಂತೆ ಬಿಳಿಹೂ ಗಿಡಗಳ ನೆಡುವುದರಲ್ಲಿ ನೀನು ಮಗ್ನನಾಗಿದ್ದು ಅಳು ಬರಿಸುತ್ತದೆ. ಮುಖಕ್ಕೆ ಸೆರಗು ಮುಚ್ಚಿಕೊಂಡು ಹೊರಟುಬಿಡುತ್ತೇನೆ. ಮನಸ್ಸು ತಡೆಯದೇ ಮತ್ತೆ ವಾಪಸ್ಸಾದರೆ ಅಲ್ಲಿ ನೀನಿರುವುದಿಲ್ಲ. ಅಂಗಳದ ತುಂಬ ಬಿಳಿಬಣ್ಣದ ಹೂ, ನಕ್ಷತ್ರ, ಬೆಳಕು ಮತ್ತು ಬೆಳ್ಳ ಬೆಳದಿಂಗಳು ಹಗಲಿನಲ್ಲೂ, ದೂರದಲ್ಲೊಂದು ನನ್ನದೇ ಹೆಜ್ಜೆಗುರುತು.
ಏನಾಗುತ್ತಿದೆ ಅಂತ ಅರಿವುದರೊಳಗೆ ಒಪ್ಪ‌ಓರಣಗಳನೆಲ್ಲ ಕಿತ್ತುಬಿಸಾಕುತ್ತೇನೆ. ಮೌನಿ ನೀನು, ನೀನಿದ್ದರೂ ಮಾತು ಸಿಗುತ್ತಿರಲಿಲ್ಲ ಈ ಹೊತ್ತಿಗೆ ಅನ್ನುವದನರಿತೂ ಅಂಗಳದ ತುಂಬೆಲ್ಲ ಹರಿದಾಡುತ್ತೇನೆ "ಯಾರು ಹೇಳ್ತಾರೆ ಬೆಳಗಿಗೆ ಬೆಳಕಿದೆ ಅಂತ.ನೋಡು ಬೆಳಗಿಗೆ ಬಣ್ಣವೂ ಇಲ್ಲ, ಬೆಡಗೂ ಇಲ್ಲ. ಬೆಳಗು ಬಂಧನ. ನೀನು ಮಾತಾಡ್ಬೇಡ, ನಂಗಿಷ್ಟವಾಗೋಲ್ಲ.ನಿನ್ನ ಧ್ವನಿ ನನಗೆ ಹಿಡಿಸೋಲ್ಲ. ಇನ್ನು ಮೇಲೆ ಹಾಡಬೇಡ. ಆ ತಂಬೂರವಿದೆಯಲ್ಲ! ಅದರ ತಂತಿಗಳನ್ನ ಕಿತ್ತು ಬಿಸಾಕಿದ್ದೇನೆ. ಅದು ಹೇಗೆ ನುಡಿಸುತ್ತೀಯೋ ನಾನೂ ನೋಡುತ್ತೇನೆ. ಹಾರ್ಮೋನಿಯಂ ಇದೆಯಲ್ಲ, ಅದರ ಮನೆಗಳೆಲ್ಲ ನೋಡು ಚೂರಾಗಿ ಬಿದ್ದಿವೆ ನನ್ನೆದೆ ಗೂಡಿನ ಹಾಗೆ. ಯಾವುದೋ ಹಾಡು ಕೇಳಿಸಿದೆಯಲ್ಲ..ನೋಡು ಅದಕ್ಕೆ ಧ್ವನಿಯೇ ಇಲ್ಲ.ಅಥವಾ ನನ್ನ ಕಿವಿ ಸತ್ತು ಹೋಗಿರಬೇಕು ನಿನ್ನ ಮಾತುಗಳ ಹಾಗೆ. ಹಾಡು ಅಲ್ಲಿ ಬಿದ್ದಿದೆ ನೋಡು ಕಾಗದ ಚೂರೊಳಗಿನ ದೋಣಿಯಾಗಿ! ತೇಲುವಷ್ಟು ನೀರಿಲ್ಲದೆ ತುಂತುರಲ್ಲಿ ನೆನೆದು ನೀಲಿ ನೀಲಿಮಸಿಯನೆಲ್ಲ ಹೀರಿಕೊಂದು ನೀಲಿಯಾಗಿ ಬಿದ್ದಿದೆ.
ನಾನು ನಿನ್ನ ಹಾಗಲ್ಲ ನೋಡು, ನಿನಗೊಂದು ಬದುಕಿದೆ, ಆ ಬದುಕಿಗೆ ಬೆಳ್ಳಗಿನ ಬಣ್ಣವಿದೆ. ‘ನೀನೋ ಬೆಳದಿಂಗಳು’ ಎನ್ನುತ್ತಿದ್ದೆಯಲ್ಲ! ಹೌದಲ್ಲವಾ?ನಗು ಬೆಳದಿಂಗಳಲ್ಲ ಸದಾ ಅಂತ ನಾನು ಹೇಳಿರಲಿಲ್ಲವ ನಿನಗೆ? ನೀನಾಗಲೇ ಅರಿತುಕೊಳ್ಳಬೇಕಿತ್ತು. ನನ್ನ ಕೋಪವೆಂದರೆ ಅಳು ಮಾತ್ರ. ಅಳುವನ್ನ ನೀನು ನೋಡಿಲ್ಲ. ಅದಕ್ಕೇ ಕೋಪವೂ ಚಂದವೇ ಅಂದ್ಯಲ್ಲ. ಇನ್ನೊಂದಿಷ್ಟು ಸಾಲುಗಳು ಬೇಕಿದ್ದವು ನಿನಗೆ, ಅದಕ್ಕೆ ಕೋಪದಲ್ಲೂ ಚೆಲುವನರಸಿದ್ದು. ಬಿಸಿ ಕಾಫಿ ಆರುವ ತನಕವೂ ನಿಂತಲ್ಲೇ ನಿಂತಿದ್ದೆನಲ್ಲ. ನಿನ್ನ ಕಣ್ಣುಗಳು ಅಲ್ಲಿ ಏನನ್ನೋ ಅರಸುತ್ತಿದ್ದವು, ನನಗಾಗಿ ಅಲ್ಲ, ಕಳೆದುಕೊಂಡಿದ್ದನ್ನೇನೋ,ಇನ್ನೇನೋ ಪಡೆಯಲಿಕ್ಕಾಗಿ.
ನೀನು ಏನು ಅಂತ ಚೆನ್ನಾಗಿ ಗೊತ್ತಿತ್ತು,ಗೊತ್ತಿದೆ, ನಿನ್ನಂಥವರೇ ಇಷ್ಟವಾಗೋದು, ಯಾಕೆ ಹೇಳು. ದುರ್ಜನರ ಸಂಗಕ್ಕಿಂತ ಸಜ್ಜನರೊಡನೆ ಜಗಳ ಲೇಸು."ನೆನಪುಗಳ ಸರಿಸುತ್ತಿರುವಂತೆ ಮಧ್ಯಾಹ್ನ ಅಂಗಳವನ್ನಾವರಿಸುತ್ತಿದೆ. ನಿಂತಲ್ಲೆ ನಿಧಾನಕ್ಕೆ ಕುಳಿತುಕೊಳ್ಳುತ್ತೇನೆ,ನಿನ್ನ ಬರುವಿಕೆಯ ಹಾದಿಯಲ್ಲಿ.
. ಬೆಳ್ಳನೆಯ ಪರದೆಯೊಳಗೆ ಬಿಳಿ ಮಂಚದ ಬಿಳಿ ಹಾಸಿಗೆಯಲ್ಲಿ ನಾನು ಬೆಳ್ಳನ ಬೆಳದಿಂಗಳಾಗಿ ಮಲಗಿರುವಂತೆ ಭಾಸವಾಗುತ್ತದೆ. ಎಚ್ಚರವಾಗುತ್ತದೆ.ಏಳುತ್ತಿರುವಂತೆಯೇ ನೀ ತಂದ ನೀಲಿ ಪೀತಾಂಬರ ನೆನಪಿಗೆ ಬಂದು ‘ನೀಲಿ ಪೀತಾಂಬರ ’ ಬೇಕು ಅಂತ ಹಠಮಾಡುತ್ತೇನೆ. ನಾಲ್ಕೈದು ದಾದಿಯರು ನನ್ನ ಗಟ್ಟಿಯಾಗಿ ಹಿಡಿದು ಮತ್ತೆ ಹಾಸಿಗೆಯಲ್ಲಿಟ್ಟು ರಮಿಸುತ್ತಾರೆ. ನೀನು ನನ್ನ ನೀಲಿ ಪೀತಾಂಬರ ಹಿಡಿದು ಬರುತ್ತೀಯ. ನೀನು ಮೌನಿ. ನಾನೂ ಶಾಂತವಾಗುತ್ತೇನೆ.
ದಿನವೂ ನೀ ಬರುವ ಹೊತ್ತು ‘ನೀಲ ಮನೋಚೇತನ’ ಆಸ್ಪತ್ರೆಯಲ್ಲಿ ನನ್ನ ಕೋಣೆ ಶಾಂತವಾಗಿರುತ್ತದೆ. ಸುತ್ತಲೂ ಮೌನ ಕವಿದುಕೊಳ್ಳುತ್ತದೆ.ತಿಂಗಳು ಕಳೆಯುತ್ತಿದ್ದಂತೆಯೇ ಅಂಥದೇ ಒಂದುಸಂಜೆ ನೀ ಬಂದಾಗ ನಿನ್ನ ಕೈಯೊಳಗೊಂದು ಹೊತ್ತಿಗೆಯಿರುತ್ತದೆ,ನೀನೇ ಬರೆದದ್ದು. ನಿನ್ನ "ಬೆಳ್ಳನ ಬೆಳದಿಂಗಳು" ನಿನ್ನ ಈ ಹೊತ್ತಿಗೆಯ ಮೂವತ್ಮೂರು ಕತೆಗಳೂ ಹೊತ್ತ ನಾಯಕಿ ನಾನೇ ಆಗಿರುತ್ತೇನೆ.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.