August 23, 2008

ಸರಿದುಹೋದನೇ "ಸ್ವರಭಾಂಧವ"...?

ಪ್ರತಿವರ್ಷದಂತೆ ಕಾಲೇಜು ಆರಂಭವಾಗಿದೆ ಅಂದಷ್ಟೇ. ಕ್ಲಾಸಲ್ಲಿ ಕುಳಿತು ಪಾಠ ಕೇಳುವಾಗಿನ ಮಳೆ ಹೊರಬಂದಾಗ ಇರಲಿಲ್ಲ. ಗೆಳತಿ ಮ್ಯೂಸಿಕ್ ಕ್ಲಾಸಿಗೆ ಹೋದರೆ ಅವಳು ಜಿಮುರುವ ಮಳೆಗೆ ತಂಪಾಗುತ್ತ ಲೈಬ್ರರಿಯ ಕಡೆ ಕಾಲು ಹಾಕುತ್ತಿದ್ದಾಗಲೇ ಒಬ್ಬರು ಎದುರಾಗಿ ಅವಳನ್ನ ನಿಲ್ಲಿಸುತ್ತಾರೆ. "ನನ್ನ ಹೆಸರು ...., ನಾನು ಸಂಗೀತ ವಿಧ್ಯಾರ್ಥಿ. ಸಂಗೀತ ವಿಭಾಗದ ವತಿಯಿಂದ ಮೂರು ವರ್ಷಗಳಿಂದ ಪಾಕ್ಷಿಕ ಪತ್ರಿಕೆಯೊಂದನ್ನ ನಡೆಸಿಕೊಂಡು ಬಂದಿದ್ದೆ. ಪದವಿ ಮುಗಿಸಿ ಇದೀಗ ತೆರಳುತ್ತಿದ್ದೇನೆ, ಆ ಪತ್ರಿಕೆಯನ್ನ ನೀನು ಮುಂದುವರೆಸುತ್ತೀಯ ದಯವಿಟ್ಟು? ಇಲ್ಲವಾದರೆ ಆ ಪತ್ರಿಕೆ ನನ್ನ ಬೆನ್ನಿಗೇ ಹೇಳುವ ಹೆಸರಿಲ್ಲದೆ ಹೋಗುತ್ತದೆ, ಕೊನೆಯ ಪಕ್ಷ ನೀನು ಈ ಕಾಲೇಜಲ್ಲಿರುವ ತನಕವಾದರೂ ನಮ್ಮ ಈ ಪತ್ರಿಕೆಯ ಜವಾಬ್ಧಾರಿ ಹೊತ್ತುಕೊಳ್ಳುವೆ ಎಂಬ ಭರವಸೆಯಿಂದ ಕೇಳುತ್ತಿದ್ದೇನೆ" ಎನ್ನುವಾಗ ಧ್ವನಿಯಲ್ಲಿ "ಸ್ವರಭಾಂಧವ"ದ ಬಗ್ಗೆ ಗೌರವ ತುಂಬಿ ಬರುತ್ತಿದೆ, ಆ ಪತ್ರಿಕೆ ನಿಲ್ಲಬಾರದು ಎಂಬ ನೋವಿದೆ. ಪರಿಚಯವೇ ಇಲ್ಲದ ಧ್ವನಿ. ಆದರೂ ಆಪ್ತತೆ. "ನಂಗೆ ಸಂಗೀತ ಅಂದ್ರೆ ಏನು ಅಂತಾನೂ ಗೊತ್ತಿಲ್ಲ, ನಾನು ಹೇಗೆ ಈ ಪತ್ರಿಕೆಯ ಜವಾಭ್ಧಾರಿ ಹೊರಲಿ, ಅದಕ್ಕೆ ಸರಕನ್ನ ಎಲ್ಲಿಂದ ತರಲಿ?" ಅಂದವಳ ಪ್ರಶ್ನೆಗೆ ಸಿಕ್ಕ ಉತ್ತರ "ಸಂಗೀತದ ಸರಕುಗಳೇ ಬೇಕಂತಿಲ್ಲ, ಅದರೊಳಗಿನ ಸಾಹಿತ್ಯವನ್ನ ಉಳಿಸಿಕೊಂಡು ಹೋಗು ತಕ್ಕಮಟ್ಟಿಗೆ, ನಿನ್ನ ಕೈಲಾದ ಮಟ್ಟಿಗೆ" ಈಗವಳಿಗೆ "ಆಗೋಲ್ಲ" ಅನ್ನುವುದಾಗುತ್ತಿಲ್ಲ. "ಸರಿ" ಅಂತ ಗೋಣಲ್ಲಾಡಿಸುತ್ತಾಳೆ.

ಹೋಗಿ ಗೆಳತಿಯರನ್ನೆಲ್ಲ ಕೇಳುತ್ತಾಳೆ "ಈ ಪತ್ರಿಕೆಯನ್ನ ನಮ್ಮ ಕೈಲಾದ ಮಟ್ಟಿಗೆ ಉಳಿಸಿಕೊಂಡು ಹೋಗೋಣವಾ?" ಯಾರೂ‘ಇಲ್ಲ’ ಅನ್ನುವುದಿಲ್ಲ. ಕುಳಿತು ಹೀಗೆ ಬರೆಯುತ್ತಾಳೆ:-

"ಸಹೃದಯರೇ...

ವರ್ಷಕ್ಕೆ ಹರುಷಗೊಂಡ ಮಯೂರ ಗರಿಬಿಚ್ಚಿ ನಲಿವಂತೆ, ವಸಂತಕ್ಕೆ ಕೋಗಿಲೆ ತನ್ನಿರುವ ಸೂಚ್ಯ ಕೊಡುವ ಪರಿಯಲ್ಲಿ ಹಾಡುವಂತೆ, ಮಾಸದ ಆರಂಭದಲ್ಲೊಮ್ಮೆ ನಮ್ಮ "ಸ್ವರ ಭಾಂಧವ"ನ ಆಗಮನವಾಗಲಿದೆ.
ಉದಯೋನ್ಮುಖ ಕವಿ-ಕವಿಯಿತ್ರಿ-ಲೇಖಕ-ಲೇಖಕಿ ಬರಹಗಾರರಿಂದ ಉದಯಿಸಿದ ಬರಹಗಳಿಗೆ "ಸ್ವರಭಾಂಧವ"ನ ಸ್ವಾಗತ.

ಇಂದಿನಿಂದ ಆಗಮಿಸುತ್ತಲಿರುವ "ಸ್ವರ ಭಾಂಧವ"ನ ಸ್ವರವು ಸುಶ್ರಾವ್ಯವಾಗಿ ತೇಲಬೇಕಾದಲ್ಲಿ ಬರಹಗಾರ ಭಾಂಧವರೇ ನಿಮ್ಮೆಲ್ಲರ ಸಹಕಾರ ಸದಾ "ಸ್ವರ ಭಾಂಧವ"ನ ಸಂಪಾದಕೀಯ ವರ್ಗಕ್ಕಿದೆಯೆಂಬ ಅಚಲ ವಿಶ್ವಾಸದೊಂದಿಗೆ...

ಸೂರ್ಯನ ಕಿರಣಗಳ ಹೊಮ್ಮುವಿಕೆಗೇ ಅವಕಾಶ ಕೊಡದೇ ಎಡೆಬಿಡದ ವರ್ಷನ ಆರ್ಭಟವನ್ನು ನೋಡುತ್ತಿದ್ದೀರಲ್ಲಾ? ಹಠ ಹಿಡಿದು ಪಕ್ಷ ದಿನಗಳ ಕಾಲ ಇಳೆಯನ್ನ ತೋಯಿಸುತ್ತಿದ್ದಾನೆ.
ಕ್ಲಾಸುಗಳಲ್ಲಿ ಮುಂದಿನ ಡೆಸ್ಕುಗಳಲ್ಲಿ ಆಸೀನರಾದವರಿಗೆ ವರ್ಷನ ದರ್ಶನವಾದರೆ ಹಿಂದೆ ಕುಳಿತವರ ಕಿವಿಗಳಲ್ಲೆಲ್ಲ ಮಳೆರಾಯನ ಹರ್ಷದ ಸುಶ್ರಾವ್ಯ ಗಾಯನ.
ಅಬ್ಬಬ್ಬಾ! ಗಾಳಿ!! ಮಳೆ!!! ಚಳಿಯಲ್ಲವೇ!!!! ಅದಕ್ಕೇ ಇರಬೇಕು ನಮ್ಮ "ಸ್ವರಭಾಂಧವ" ಹೊದ್ದು ಬೆಚ್ಚಗೆ ಮಲಗಿದ್ದನಿರಬೇಕು. ಹಿಂದೆಲ್ಲ ಸದಾ ಕಾರ್ಯನಿರತನಾಗಿದ್ದು ಹದಿನೈದು ದಿನಗಳಿಗೊಮ್ಮೆ ತನ್ನ ಕಾರ್ಯಫಲವನ್ನು ವರದಿ ಮಾಡುತ್ತಿದ್ದ "ಸ್ವರ ಭಾಂಧವ"ನಿಗೆ ವಿಶ್ರಾಂತಿ ನೀಡಿದ್ದಾಗಿದೆ, ಇನ್ನಾದರೂ ಅವನನ್ನು ನಿದ್ರೆಯಿಂದೆಬ್ಬಿಸಬೇಕಲ್ಲವೇ?
ಪುನಃ ಎಚ್ಚೆತ್ತುಕೊಂಡು ಓದುಗರ ಇದಿರು ದರ್ಶನ ನೀಡಲಿದ್ದಾನೆ "ಸ್ವರಭಾಂಧವ"

ನಿಮ್ಮೆಲ್ಲರ ಸಹಕಾರ ಕೋರುತ್ತ,
-ಸಂಪಾದಕಿ.

"ಸ್ವರಭಾಂಧವ" ಪತ್ರಿಕೆಯ ಸಂಪಾದಕೀಯ ಬಳಗದಲ್ಲಿ

ಉಪಸಂಪಾದಕಿ:- ಶ್ಯಾಮಲಾ ಹೆಗಡೆ ಜಾನ್ಮನೆ.
ಲತಾ ಹೆಗಡೆ.
ಶಾಂತಲಾ ಡಿ ಹೆಗಡೆ
ಉಪಸಂಪಾದಕ:- ರಾಘವೇಂದ್ರ ಬೆಟ್ಟಕೊಪ್ಪ
ಕಲೆ ಮತ್ತು ಬರಹ:- ಅಂಜಲಿ ಹೆಗಡೆ
ಸಂಪಾದಕಿ:-??????
****************************************************************************

ಹೀಗೆ ಸಂಪಾದಕೀಯ ಬರೆದ ನಾಲ್ಕೆಂಟು ದಿನಗಳಲ್ಲಿ ಎಚ್ಚೆತ್ತು ಬರುತ್ತಾನೆ ಸ್ವರಭಾಂಧವ.

ಭಾಂಧವರೇ...
ಅಭಿನಂದನೆಗಳು
ಹಲವಾರು ಶ್ರೋತೃಗಳು "ಸ್ವರಭಾಂಧವ"ನ ಕರೆಗೆ ಓಗೊಟ್ಟಿದ್ದಾರೆನ್ನಲು ಸಂತಸ. ವಾಸ್ತವದಲ್ಲಿ ಹಿಂದೆಲ್ಲ "ಸ್ವರಭಾಂಧವ"ನ ಹಿನ್ನೆಲೆಯಲ್ಲಿ ಸಂಗೀತದ ವಿದ್ಯಾರ್ಥಿಗಳೇ ಇದ್ದು, ಸಂಗೀತಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿ "ಸ್ವರಭಾಂಧ"ವ ಸಂಗೀತಗಾರನೂ ಆಗಿದ್ದ. ತಮ್ಮೆಲ್ಲ ಸಮ್ಮಿಶ್ರ ಸಹಕಾರದಿಂದ "ಸ್ವರಭಾಂಧವ"ನ ಸಾಹಿತ್ಯವನ್ನಾದರೂ ಉಳಿಸಿಕೊಳ್ಳುವ ಪುಟಾಣಿ ಪ್ರಯತ್ನವೊಂದನ್ನು ಮಾಡುತ್ತಿದ್ದೇನೆ. ಅಲ್ಪ ಮಟ್ಟಿನ ಯಶನ್ನನ್ನು ಪಡೆವಲ್ಲಿ ಬೃಹತ್ ಸಹಕಾರ ನೀಡಿದ ನಿಮ್ಮೆಲ್ಲರಿಗೂ ಅನಂತ ವಂದನೆಗಳು.

ವಿಷ್ಣುನಾಯ್ಕರ ಪರಿಚಯ ನೀಡುವ ಜೊತೆಯಲ್ಲಿ ಪರಿಚಯವಾಗುತ್ತಿರುವ ಪಲ್ಲವಿ ಆಲ್ಮನೆ,ಸ್ವರಭಾಂಧವ ಬಳಗವನ್ನು ನಿರಾಸೆಗೊಳಿಸದೆ ಸಹಕಾರ ನೀಡಿರುವ ಪ್ರಭಾ ಹೆಗಡೆ, ಸದಾ ಜಟಿಪಿಟಿಯಾಗಿ, ಉತ್ಸಾಹದ ಚಿಲ್ಮೆಗಳಂತಿರುವ ಪತ್ರಿಕೋದ್ಯಮದ ವಿಧ್ಯಾರ್ಥಿಗಳಾದ ರಷ್ಮಿ ಹೆಗಡೆ, ಪೂರ್ಣಿಮಾ ಭಟ್, ಬೀನಾ ಹೆಗಡೆ ಇವರೆಲ್ಲರ ಸಹಕಾರಕ್ಕೆ ಋಣಿಯಾಗಿದ್ದೇನೆ.
ಸರ್ವರ ಲೇಖನಿಗಳಿಂದ ಜಾರಿದ ಭಾವನೆಗಳಿಗೆ ಸ್ವಾಗತ ಕೋರುವ ಸ್ವರಭಾಂಧವನ ಸಂಪಾದಕ ಬಳಗಕ್ಕೆ ತಮ್ಮೆಲ್ಲರ ಸಹಕಾರ ಬಯಸುತ್ತ...
-ಸಂಪಾದಕಿ.

ಅಂತೆಲ್ಲ ಬರೆದು ಪತ್ರಿಕೆಯನ್ನ ಮುನ್ನಡೆಸಿದವಳು, ಸಂಪಾದಕಿ(?) ಎಂಬ ಹೊಣೆಹೊತ್ತವಳು ವರ್ಷ್ಯಾಂತ್ಯದಲ್ಲಿ ಕಳೆದು ಹೋಗುತ್ತಾಳೆ ಅಷ್ಟುದಿನತನಕ ಆ ಪತ್ರಿಕೆಯ ನಡೆಸಲು ಸಹಕರಿಸಿದ ಎಲ್ಲರನ್ನೂ ನೆನೆಯುತ್ತ. ಸರಿದು ಹೋದ "ಸ್ವರಭಾಂಧವ"ನಲ್ಲಿ ಸದಾ ಕ್ಷಮೆಯಾಚಿಸುತ್ತಾ...
ಕೊನೆಯ ಸಂಪಾದಕೀಯ ಬರೆದ ನೆನಪವಳಿಗೆ ಬರುವುದೇ ಇಲ್ಲ, ಬಹುಷಃ ಕೊನೆಯ ಸಂಪಾದಕೀಯ ಕಾಣದೆಲೇ "ಸ್ವರಭಾಂಧವ" ಕಣ್ಮರೆಯಾದನಾ! ಅಂತ ಯೋಚಿಸುತ್ತಾಳೆ ಆಗಾಗ. ಕ್ರಮೇಣ "ಸ್ವರ ಭಾಂಧವ" ಮುಂದೇನಾದ ಎನ್ನುವುದನ್ನು ಸಂಪೂರ್ಣ ಮರೆತುಹೋದವಳಿಗೆ ಈಗೀಗ ಸ್ವರಭಾಂಧವನ ನೆನಪು ಪದೇ ಪದೇ ಕಾಡುತ್ತದೆ. "ಸ್ವರಭಾಂಧವ"ನ ಸುಳಿವೇ ಸಿಗುವುದಿಲ್ಲ. ಕಳೆದು ಹೋಗಿದ್ದು "ಸ್ವರ ಭಾಂಧವ"ನಾ ಅಥವಾ ಅದರ ಹೊಣೆ ಹೊತ್ತ ಸಂಪಾದಕಿಯಾ? ಹುಡುಕುತ್ತ ಹೋದಂತೆ ಎಲ್ಲವೂ ಕಳೆದೇ ಹೋಗುತ್ತವೆ. ಹಾಗೆ ಹುಡುಕಲೇಬಾರದು, ಅವಳೂ ಕಳೆದುಹೋಗಿದ್ದಾಳೆ, ಹುಡುಕಿದಷ್ಟೂ ಕಳೆದು ಹೋಗುತ್ತಾಳೆ.

August 18, 2008

ನೆನಪುಗಳ್ಯಾಕೆ ಮರೆಯುವುದಿಲ್ಲ?

ರಸ್ತೆಯ ಪಕ್ಕದಲ್ಲಿ ಮನೆಯೆದುರಿನ ತೆಂಗಿನ ಗಿಡಕೆ ಒರಗಿ ನಿಂತು ಮಗಳು ಬರುವುದನ್ನೇ ಕಾದು ನಿಂತು ಅಗೋ ರಸ್ತೆಯ ಆ ತುದಿಯಲ್ಲಿ ಮಗಳ ಮುಖ ಕಂಡ ಕ್ಷಣದಲ್ಲಿ ಅದೆಷ್ಟು ಖುಷಿಯಿರುತ್ತಿತ್ತು ಅಮ್ಮನ ಮೊಗದಲ್ಲಿ. ಅಮ್ಮ ಮಗಳನ್ನೆತ್ತಿ ಮುದ್ದಿಡುತ್ತಿದ್ದರಲ್ಲ! ಆಗೆಲ್ಲ ಅಮ್ಮನಿಗೆ ಏನು ಸಿಗುತ್ತಿತ್ತು? ಆ ಸಂತಸದ ಪ್ರೀತಿಯ ನಾನ್ಯಾಕೆ ಹಿಡಿದಿಟ್ಟುಕೊಳ್ಳಲಿಲ್ಲ?


ಶಾಲೆಯಿಂದ ನಡೆದು ಬರುತ್ತ ಓಣಿಯೊಳಗೆ ಹರಿಯುತ್ತಿದ್ದ ನೀರ ದಾಟುವಾಗ ಅಚಾನಕ್ ಜಿಗಣೆಯೊಂದು ಕಾಲಿಗೆ ಅಂಟಿಕೊಂಡು ಅದೇನಂತ ಗೊತ್ತಾಗದೇ ಅತ್ತರೆ ಅದೇ ರಸ್ತೆಯಲ್ಲಿ ಅಲ್ಲೆಲ್ಲೋ ನಡೆದು ಹೋಗುತ್ತಿದ್ದ ಮಂಜಿ ಅವಳ ಬಾಯೊಳಗಿನ ತಂಬಾಕಿನ ತಾಂಬೂಲದ ರಸ ಉಗುಳಿ ಪುಟ್ಟ ಕಾಲಿಂದ ಜಿಗಣೆ ಬಿಡಿಸಿ ‘ಶಣ್ಣಮ್ಮ, ಜಿಗಣೆ ಅದೂ..ರಕ್ತ ಹೀರ್ಬುಡ್ತಿತ್ತು ನಾ ಬರ್ದಿದ್ರೆ....’ ಅನ್ನುತ್ತ ಮುದ್ದಿಸಿದ ಮಂಜಿಯ ಪ್ರೀತಿಯ ನಾನ್ಯಾಕೆ ಹಿಡಿದಿಟ್ಟುಕೊಳ್ಳಲಿಲ್ಲ?

ನೋಡೋಕೆ ಪಾಟಿಕಡ್ಡಿ ಹಾಗಿದ್ದರೂ ಅಕ್ಷರ ಮಾತ್ರ ಗುಂಡಗೆ ಬರೆದಾಗೆಲ್ಲ ಹಣೆಗೊಂದು ಮುತ್ತಿತ್ತು ‘ಚಂದ ಬರೇತ್ಯಲೇ ಕೂಸೆ, ಇನ್ನೂ ಚಂದ ಬರೆಯೂಲೆ ಟ್ರೈ ಮಾಡೋ’ ಅಂದ ಮಾಸ್ತರರ ಪ್ರೀತಿಯ ನಾನ್ಯಾಕೆ ಹಿಡಿದಿಟ್ಟುಕೊಳ್ಳಲಿಲ್ಲ?

ಮನೆಗೆಲಸಕ್ಕೆ ಬರುತ್ತಿದ್ದ ಮಾತಾಡಲೇ ಬಾರದ ‘ಹಾದಿ’ ಎಂಬ ಪ್ರೀತಿಯ ಹೆಣ್ಣಿನ ಮುಂದೆ ಒಂದಿಷ್ಟು ಪ್ರಶ್ನೆ ಕೇಳುವಾಗೆಲ್ಲ ನನಗ್ಯಾಕೆ ಗೊತ್ತಿರಲಿಲ್ಲ ಅವಳು ಮೂಗಿ ಎಂದು? ನಾ ಚೆಲ್ಲಿದ ಪ್ರಶ್ನೆಗೆಲ್ಲ ‘ಅ ಆ’ ಕಾರದಲ್ಲೇ ಉತ್ತರವಿಟ್ಟು ಮುಗ್ಧವಾಗಿ ಅವಳು ನಕ್ಕು ಈ ಪುಟ್ಟ ತಲೆಯ ನೇವರಿಸಿದ ಪ್ರೀತಿಯ ನಾನ್ಯಾಕೆ ಹಿಡಿದಿಟ್ಟುಕೊಳ್ಳಲಿಲ್ಲ? ಅವಳ ಭಾಷೆಯ ನಾನ್ಯಾಕೆ ಕಲಿತುಕೊಳ್ಳಲೇ ಇಲ್ಲ?

ಬೆಳೆದಂತೆ ಬೆಳೆದಂತೆ ಅಪ್ಪನಿಗೆ ಗೆಳತಿಯಾಗಿ, ಸಲಹೆ ಕೇಳುತ್ತ-ಸಲಹಿಸುತ್ತ, ಕವಿತೆ ಬರೆದು ಅಪ್ಪನ ಮುಂದೆ ಓದಿ ಆ ಕವಿತೆಗೆ ಹೀಗೆ ಸ್ಟೆಪ್ಸ್ ಹಾಕಬಹುದು ಅಂತೆಲ್ಲ ನಲಿದು ತಮಾಷೆ ಮಾಡುವಾಗ ನಕ್ಕಾಗಿನ ಅಪ್ಪನ ಖುಷಿಯ ನಾನ್ಯಾಕೆ ಹಿಡಿಟ್ಟುಕೊಳ್ಳಲಿಲ್ಲ?

ಒಂದು ತುತ್ತನ್ನ ಮೂವತ್ತೆರಡುಸಲ ಅಗಿದು ನುಂಗೆನ್ನುವ ಅಪ್ಪನ ಮಾತನ್ನ ಶಿರಸಾವಹಿಸಿ ಪಾಲಿಸಿದ ಮಗಳನ್ನ ‘ನೀನು ಇಷ್ಟು ನಿಧಾನಕ್ಕೆ ಊಟ ಮಾಡಿದ್ರೆ, ನಾಳೆ ಗಂಡನಮನೆಗೆ ಹೋದ್ರೆ ಅಲ್ಲಿ ಉಳಿದೆಲ್ಲ ಕೆಲಸ ಮಾಡಿದಂಗೆ, ದೇವ್ರೇ ಗತಿ!!’ ಅಂತಂದ ಅಮ್ಮನ ಹುಸಿಗೋಪದ ಪ್ರೀತಿಯ ನಾನ್ಯಾಕೆ ಹಿಡಿದಿಟ್ಟುಕೊಳ್ಳಲಿಲ್ಲ?

ನಾಲ್ಕು ಗಾಲಿಯ ಮುಚ್ಚಿದ ಗೂಡೊಳಗಿವನು ಕೂತು ನಾನು ಕೈಯ್ಯಾಡಿಸಿ ಬಾಯ್ ಅಂದಾಗ ಅವನು ‘ಬಾಯ್’ ಅಂದದ್ದು ಅವನ ವಾಹನದ ಕಪ್ಪು ಗಾಜಿನಾಚೆಗೆ ಕಾಣದೇ ಹೋದಾಗೆಲ್ಲ ಅಂದುಕೊಳ್ಳುತ್ತೇನೆ, ಆವತ್ತು ಟೂವ್ಹೀಲರ್ ಅಲ್ಲಿ ಕೂತು ಮನೆ ಬಾಗಿಲಿಂದ ಬಾಯ್ ಹೇಳುತ್ತ ಅರ್ಧ ಕಿಲೋಮೀಟರ್ ದೂರ ನಡೆದು ರಸ್ತೆ ತಿರುವು ಕಂಡ ಮೇಲೂ ಮೂಲೆಯಂಗಡಿಯ ಎರಡು ಕಟ್ಟಡಗಳ ನಡುವಿನ ಇಷ್ಟೇ ಇಷ್ಟು ಗ್ಯಾಪ್ ಮುಂದೆ ಗಾಡಿ ನಿಲ್ಲಿಸಿ ನನ್ನತ್ತ ಕೈಮಾಡಿ ಮುಂದೆ ನಡೆಯುತ್ತಿದ್ದ ಇದೇಗೆಳೆಯನ ಪ್ರೀತಿಯ ಅಂದು ನಾನ್ಯಾಕೆ ಹಿದಿದಿಟ್ಟುಕೊಳ್ಳಲಿಲ್ಲ? ಈಗೀಗ ಅವನು ತಿರುವು ದಾಟುವವರೆಗೆ ಅವಗೆ ಕಾಯುತ್ತ ಅಲ್ಲಿ ನಾನ್ಯಾಕೆ ನಿಲ್ಲುವುದಿಲ್ಲ?

ಎಲ್ಲವೂ ಬದಲಾಗುತ್ತದೆ ಕಾಲದೊಂದಿಗೆ, ಇಂದಿನ ಪ್ರೀತಿಯ ರೀತಿ ನಾಳೆ ಬದಲಾಗುತ್ತದೆ. ಕೊನೆಯಲ್ಲಿ ಯಾರ ಪ್ರೀತಿಯೂ ದಕ್ಕುವುದೇ ಇಲ್ಲ,ಮೊದಲೇ ಎಲ್ಲವನ್ನೂ ಬಾಚಿ ಹಿಡಿದಿಟ್ಟುಕೊಂಡುಬಿಡಬೇಕು.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.