July 17, 2008

ಬತ್ತಿದ ಬೆಳದಿಂಗಳು ಹರವಿಕೊಳದು

ಪ್ರೀತಿಯ ನೀವುಗಳೆ....


ಬರೆಯಲು ಬೇಜಾರಾಗಿದೆ. ಬರೆಯಬೇಕು ಅನಿಸುತ್ತಿಲ್ಲ. ಬ್ಲಾಗ್ ಬರವಣಿಗೆಯಿಂದ ದೂರವಿರಬೇಕು ಎನಿಸುತ್ತಿದೆ.
ಸೋರಿಚೆಲ್ಲುತ್ತಿರುವ ಈ ನೆನಪು ಕನಸುಗಳನ್ನೆಲ್ಲ ನಿಮಗೆಲ್ಲ ಹೇಳದೆಲೆ ಒರೆಸಿಬಿಡಲು ಮನಸಾಗಲಿಲ್ಲ. ಹಿಡಿದಿಡುವ ಮನಸೂ ಇಲ್ಲ.

ತನ್ನಿಷ್ಟದ ಎಲ್ಲ ಬ್ಲಾಗುಗಳಿಗೆ ಭೇಟಿ ನೀಡುವುದನ್ನಿವಳು ಬಿಡಲಾರಳು, ಎಲ್ಲಿಯಾದರೂ ಇವಳದೊಂದು ಹೆಜ್ಜೆಗುರುತು ಕಂಡೀತು ನಿಮಗೆ.

"ನಾಳೆ ಮಂಗಳವಾರ, ಮಾರನೆಯ ದಿನ ನವಮಿ, ಆಮೇಲೆ ನಿಲ್ಲುವೆನೆ ನಾನು ಇಲ್ಲಿ?"

ಶುಕ್ರವಾರ ಬರಲಿರುವ ಹುಣ್ಣಿಮೆಯಿರುಳಿನ ಬೆಳದಿಂಗಳ ಜಾತ್ರೆಯಲಿ ನೆನಪು ಕನಸುಗಳನೆಲ್ಲ ತೂರಿಬಿಡುತ್ತಿದ್ದೇನೆ. ಇನ್ನಿಲ್ಲಿ ಯಾವ ನೆನಪು ಕನಸು, ಬೆಳದಿಂಗಳು, ಹುಣ್ಣಿಮೆಗಳ ಹಿಡಿದು ತಂದು ಹರಿಸುವ ಯೋಚನೆಯಿಲ್ಲ.

ಪ್ರಿಯ ಓದುಗ...

"ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು"



ನನ್ನ ಬರಹಗಳನ್ನ ಬೆನ್ನುತಟ್ಟಿ, ಕಮೆಂಟಿಸಿ, ಓದಿ , ಕೈ ಹಿಡಿದು ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ಒಂದಿಷ್ಟು ಪ್ರೀತಿ.

ಹೋಗಿ ಬರುತ್ತೇನೆನ್ನುವಾಗ ಮತ್ತೆದೇ ಹಾಡು "ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ"


ನಿಮ್ಮೆಲ್ಲರ
-ಶಾಂತಲಾ ಭಂಡಿ.

July 14, 2008

ಮೂಡಲ ಮನೆಯ ಮುತ್ತಿನ ನೀರಿನ ನೆನಪು

ಪದವಿಯ ಮೊದಲವರ್ಷದಲ್ಲಿದ್ದಾಗ ಕಾಲೇಜಿನ ವಾರ್ಷಿಕ ಸಂಚಿಕೆಗಾಗಿ ಬರೆದ ಲೇಖನವೊಂದು ಸಿಕ್ಕಿತು. ಆ ದಿನಗಳ ನೆನಪುಗಳು ಕೊಡುವ ಖುಷಿಯೇ ಬೇರೆ. ಆ ನೆನಪುಗಳೇ ಸಾಕು ದಿನ ಸಂಪೂರ್ಣವಾಗಲು. ಅದರಲ್ಲೂ ಡಾ. ದ ರಾ ಬೇಂದ್ರೆಯಂತವರ ನೆನಪಿನಲ್ಲಿ ತೇಲುತ್ತಿರುವಾಗ ನಿಮ್ಮೆಲ್ಲರ ನೆನಪು. ನೆನಪಿನ ದೋಣಿಯಲ್ಲಿ ನಿಮ್ಮೆಲ್ಲರೊಂದಿಗೆ ವಿಹರಿಸುವ ಖುಷಿಯೇ ಬೇರೆ ಎನಿಸಿತು. ಬೇಂದ್ರೆಯವರ ‘ಸಖಿಗೀತ’ ಓದಿ ಆ ದಿನಗಳಲ್ಲಿ ನನಗನಿಸಿದ ನನ್ನೊಳಗಿನ ಭಾವಗಳ ತುಣುಕುಗಳಿವು ಅಂತ ಮಾತ್ರ ಹೇಳಬಲ್ಲೆ. ವಿಮರ್ಶೆಯಂತೂ ಅಲ್ಲವೇ ಅಲ್ಲ. ಮುದುಡಿ ಮೂಲೆಯಲ್ಲಿದ್ದ ಹಳೆಯ ಹಾಳೆಗಳ ನಿಮಗಾಗಿ ತೆರೆದಿಟ್ಟೆ. ಒಂದಿಷ್ಟು ಧೂಳನ್ನೆಲ್ಲ ಕೊಡವಿ ಹಳೆಯ ಪುಟಗಳಿಗೆ ಹೊಳಪು ಕೊಡುವ ನಿಮ್ಮೆಲ್ಲರಿಗಾಗಿ ಈ ಪುಟಗಳು. ಓದಬೇಕೆನ್ನಿಸಿದರೆ ಪ್ರತಿ ಪುಟದ ಮೇಲೂ ಕ್ಲಿಕ್ಕಿಸುವ ಕಷ್ಟವನ್ನು ನಿಮಗೇ ಬಿಟ್ಟಿದ್ದೇನೆ. ಇನ್ನು ನೀವುಂಟು, ನನ್ನ ಹಳೆಯ ಪುಟವುಂಟು.


‘ಸಖಿಗೀತ’ ಕ್ಕೆ ಸಂಬಂಧಿಸಿದ ನಿಮ್ಮ ಅನಿಸಿಕೆಗಳನ್ನೂ ಇಲ್ಲಿಷ್ಟು ತೇಲಬಿಡಿ, ನಿಮ್ಮೆಲ್ಲರ ಅನಿಸಿಕೆಗಳಿಲ್ಲಿ ಕಲೆತು ಸಿಹಿಹೂರಣವಾಗಲಿ ಈ ಸಮಯ.

ನನ್ನ ಕಾಲೇಜಿನ ವಾರ್ಷಿಕ ಸಂಚಿಕೆಯ ಮುಖಪುಟ (ಹಾಳೆ ಹಳೆಯದಾದರೇನು ನೆನಪು ನವನವೀನ. ಅಲ್ಲವೇ?:)




ಪುಟ ೧


ಪುಟ೨


ಪುಟ೩


ಪ್ರೀತಿಯಿಂದ,
-ಶಾಂತಲಾ ಭಂಡಿ.

**********************************************************************************************


Harish - ಹರೀಶ said...
ಶಾಂತಲಕ್ಕ, ಎಷ್ಟೋ ಜನಕ್ಕೆ (ಅಲ್ಲಿ ಓದಿದವ್ವೆಯ) ಎಂ.ಎಂ. ಅಂದ್ರೆ ಮೋಟಿನಸರ ಮೆಮೋರಿಯಲ್ ಅಂತ ಗೊತ್ತಿಲ್ಲೆ...

ಯಾರ್ನಾದ್ರೂ ಕೇಳಿ ನೋಡು :-)

July 14, 2008 7:59 PM
xx said...
shanatala avare, nimma bhavanegaLu nijakkoo nammannu yavudo lokakke karedoiuttade. nimma kannada jnaana, padhakosha adbhuta! naanoo ille nimma cupertino dalle iddeene. neevu illi elliddeera?

July 14, 2008 10:13 PM
xx said...
kshamisi. Nanna parichaya maadikolluvuda marethe. Naanu saraswathi vattam antha. iththeechige taane bengaloorininda bandiddene. nanage nanna magalaLu nimma blog torisidalu. Odi bahaLa ishta aayithu. nimma innitara lekhanavannooo oduttiddene. specially the blog that you have written about 'mother's feeling' is excellent. Keep up the good job!

July 14, 2008 10:27 PM
ತೇಜಸ್ವಿನಿ ಹೆಗಡೆ- said...
ಶಾಂತಲಾ,

ದಾಂಪತ್ಯದ ಸಾರವನ್ನು.. ಅದರೊಳಗಿನ್ ಸಿಹಿ-ಕಹಿ ಪಿಸುಮಾತುಗಳನ್ನು, ವಿರಸ-ಸರಸಗಳನ್ನು ಓದಬೇಕಾದರೆ ಅದಕ್ಕೆ ಸಖೀಗೀತಕ್ಕಿಂತ ಉತ್ತಮ ಕವನ ಸಿಗಲಾರದೇನೋ. ಅದ್ಭುತ ಕವನ. ಗೂಡಾರ್ಥಗಳನ್ನೊಳಗೊಂಡಿದ್ದರೂ ಸರಳತೆಯನ್ನೇ ಹೊದ್ದು ಅದ್ದಿರುವ ಕವನ ನನ್ನ ಮೆಚ್ಚಿನ ಕವನವೂ ಹೌದು. ಅದನ್ನು ವಿವರಿಸಲು ಯತ್ನಿಸಿದ ನಿನ್ನ ಪ್ರಯತ್ನ ತುಂಬಾ ಶ್ಲಾಘನೀಯ. ತುಂಬಾ ಇಷ್ಟವಾಯಿತು. ಮತ್ತಷ್ಟು ಇಂತಹ ಬರಹಗಳು ಬರಲಿ.

July 15, 2008 8:00 AM
sunaath said...
ಶಾಂತಲಾ,
ಬೇಂದ್ರೆಯವರ ಸಖೀಗೀತದ ಸಾರವನ್ನು ಎಷ್ಟು ಚೆನ್ನಾಗಿ ಬರೆದಿದ್ದೀಯಮ್ಮ. ಅವರ ಇತರ ದಾಂಪತ್ಯಗೀತಗಳ ಭಾವಗಳನ್ನೂ ಸಂಕಲಿಸಿ, ಒಂದು ಲೇಖನವನ್ನು ನೀನು ನೀಡಿದರೆ
ಸ್ವಾರಸ್ಯಕರವಾಗುವದೆಂದು ನನ್ನ ಭಾವನೆ.
-ಸುನಾಥ ಕಾಕಾ

July 24, 2008 2:57 PM
ಸಿಮ್ಮಾ said...
ಶಾಂತಲಾ ಅವರೇ,
ನಂಗೆ ಈ ವಿಮರ್ಶೆ ಇದೆಲ್ಲಾ ಬರೋಲ್ಲ, ಅದೂ ಅಲ್ದೆ ನಾನು ಬೇಂದ್ರೆಯವರನ್ನ ಜಾಸ್ತಿ ಓದಿದವನೂ ಅಲ್ಲ. ಆದರೆ ಅವರ ಕೆಲವು ಕವನಗಳಲ್ಲಿನ ಸಾಲುಗಳು ತುಂಬಾ ಇಷ್ಟ ಅವುಗಳನ್ನಷ್ಟೇ ನಾನಿಲ್ಲಿ ಹಂಚಿ ಕೊಳ್ಳ ಬಲ್ಲೆ.
1. ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೊಯ್ದ
ನುಣ್ಣನ್ನೆರಕಾವ ಹೊಯ್ದ.
ಬಾಗಿಲುನ ತೆರೆದು ಬೆಳಕು ಹರಿದು
ಜಗವೆಲ್ಲಾ ತೊಯ್ದ........

2. ನೀ ಹೀಂಗ ನೋಡ ಬ್ಯಾಡದಲ್ಲಿನ,
ಮುಗಿಲಿನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನ..

3. ಯುಗಾದಿಯ,

ವರುಷಕೊಂದು ಹೊಸತು ಜನ್ಮ
ಹರುಕೊಂದು ಹೊಸತು ನೆಲೆಯು
ಅಖಿಲ ಜೀವ ಜಾಲಕೆ

ಒಂದೇ ಒಂದು ಜನ್ಮದಲ್ಲಿ
ಒಂದೇ ಬಾಲ್ಯ,ಒಂದೇ ಹರೆಯ
ನಮಗದಷ್ಟೇ ಏತಕೆ?

ಇದನ್ನೆಲ್ಲಾ ನೆನಪಿಸಿದ್ದಕ್ಕೆ ಧನ್ಯವಾದಗಳು

July 25, 2008 7:01 AM
ಶಾಂತಲಾ ಭಂಡಿ said...
@ಹರೀಶ
ಧನ್ಯವಾದಗಳು,
ನೀನು ಹೇಳಿದ್ದು ನಿಜ, ಅಲ್ಲೇ ಡಿಗ್ರಿ ತಗಂಡುಹೋದ್ರೂ ಎಂ.ಎಂ. ಅಂದ್ರೇನು ಅನ್ನೋ ಬಗ್ಗೆ ಯೋಚ್ನೆ ಮಾಡದ ಜನ ಇರ್ತ. ಎಂತಕ್ಕೆ ಹೇಳಿ ನಂಗೂ ಗೊತ್ತಿಲ್ಲೆ.

@XX
ನಿಮ್ಮ ಮೆಚ್ಚುಗೆಯ ಪ್ರೋತ್ಸಾಹಕ್ಕೆ ಧನ್ಯವಾದಗಳು.
ನೀವು ನನ್ನ ಬರಹಗಳನ್ನ ಇಷ್ಟು ಪ್ರೀತಿಯಿಂದ ಓದುತ್ತಿರುವುದು ನನ್ನ ಖುಷಿ.

@ತೇಜಸ್ವಿನಿ
ಧನ್ಯವಾದಗಳು,ಕಾಲೇಜಿನ ದಿನಗಳಲ್ಲಿ ಬರೆದದ್ದು, ತಪ್ಪುಗಳೆಷ್ಟಿವೆಯೋ ಗೊತ್ತಿಲ್ಲ, ನೀವು ಮೆಚ್ಚಿದ್ದು ನನ್ನ ಖುಷಿ.

@ಸುನಾಥ ಕಾಕ
ಧನ್ಯವಾದಗಳು, ಬೇಂದ್ರೆಯವರ ಬಾಂದಳದಿಂದ ಸುರಿದ ವರ್ಷಧಾರೆಯನ್ನ ಈ ಪುಟ್ಟ ಬೊಗಸೆಯಲ್ಲಿ ಹಿಡಿವ ಚಿಕ್ಕಯತ್ನವಾಗಿತ್ತು. ಏನೂ ಅರಿವಿರದ ದಿನಗಳಲ್ಲಿ ಬರೆದದ್ದು. ಈಗ ಬೇಂದ್ರಯವರ ಗೀತೆಗಳನ್ನ ಬಿಡಿಸಿಡುವುದು ನನ್ನಿಂದ ಅಸಾಧ್ಯವೇ.
ನೀವು ಆ ಕಾರ್ಯವನ್ನ ಚಂದದಿಂದ ನಿರ್ವಹಿಸುತ್ತಿದ್ದೀರಿ ಕಾಕಾ.
ಆ ಕಾರ್ಯವನ್ನ ನೀವೇ ಮಾಡಿದರೆ ಸೊಗಸು ಕೂಡ.
ನೀವು ಬರೆಯಿರಿ, ನನಗೆ ನಿಮ್ಮ ಬರಹಗಳು ತುಂಬ ಇಷ್ಟ.

@ಸಿಮ್ಮಾ
ನಿಮ್ಮಿಷ್ಟದ ಸಾಲುಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.


ಎಲ್ಲರ ಗಮನಕ್ಕೆ: ಈ ಲೇಖನದ ಪುಟಗಳಲ್ಲಿ ಅನೇಕ ಮುದ್ರಣ ದೋಷಗಳಿವೆ.
‘ಸಖೀಗೀತ’ ‘ಸಖಿಗೀತ’ ಎಂದಾಗಿದೆ.
‘ಸಖಿ ನಮ್ಮ ಸಖ್ಯದ ಆಖ್ಯಾನ ಕಟು ಮಧುರ’ ಎಂಬ ಸಾಲು
‘ಸಖೀ ನಮ್ಮ ಸಖ್ಯದ ಆಖ್ಯಾನ ಬಲು ಮಧುರ’ಎಂಬುದಾಗಿ ಓದಿದ ನೆನಪು.
‘ನನ್ನ ಚಿತ್ತದೊಳಿರುವ ಚಿತ್ರಗಾರನು ಬರೆದ ಚಿತ್ರಕೆ ಬಹದೆಂದೋ ಜೀವಕಳೆ’ ಎಂಬ ಸಾಲು
‘ನನ್ನ ಚಿತ್ತದೊಳಿರುವ ಚಿತ್ರಗಾರನು ಬರೆದ ಚಿತ್ರಕೆ ಬಹುದೆಂದೋ ಜೀವಕಳೆ’ ಎಂದಾಗಬೇಕೇನೋ ಎಂಬ ಗುಮಾನಿ. ಇವನ್ನೆಲ್ಲ ತಿದ್ದಲು ಸಧ್ಯಕ್ಕೆ ‘ಸಖೀಗೀತ’ ನನ್ನಲ್ಲಿ ಲಭ್ಯವಿರದ ಕಾರಣ ಈ ಪುಟಗಳಲ್ಲಿ ಇಂತಹ ದೋಷಗಳು ಗಮನಕ್ಕೆ ಬಂದಲ್ಲಿ ದಯವಿಟ್ಟು ತಿಳಿಸಿರೆಂದು ಕೇಳಿಕೊಳ್ಳುತ್ತೇನೆ.

July 28, 2008 11:15 AM

July 13, 2008

ನೀಲ ಬೆಳದಿಂಗಳು

ಬೊಗಸೆಯಲ್ಲಿ ಬೆಳದಿಂಗಳು
(ಪ್ರೀತಿಯ ಲೇಖಕರಿಗೆ ಹಾಗೂ ಸ್ಪೂರ್ತಿ ತಂದ ಅವರ ಬರಹಕ್ಕಿದೋ ಅರ್ಪಣೆ ಈ ಸಾಲುಗಳು)

ಬೆಳದಿಂಗಳಂಗಳ
ಪ್ರೀತಿ ಚಂದಮಾಮ
ಶ್ರಾವಣಕೆ ಕಾಯುವ ಆಷಾಢ
ಪ್ರೀತಿಮೋಡ ಸುರಿದು
ಮಳೆಯಾಗುವುದು ಎಂದು

ಮಲೆನಾಡ ಮುಂಗಾರು
ಹಾಡಿದರೆ ಅವನು
ಎಲ್ಲ ಹಾಡುಗಾರನ ಹಿಂದೆ
ಅವಳ ಕಣ್ಣೊಳಗೆ ಮಾತ್ರ
ಹಾಡ ಬರೆದವನೆ ಬರೆದದ್ದು
ಮಳೆಯ ಚಿತ್ರ
ಮೊದಮೊದಲಿಗೆ
ಅವನ ಬೊಗಸೆಯಲ್ಲಿ ಅವಳೇ ಮಳೆ

ಅವಳು ಬೆಳದಿಂಗಳು
ಅವನು ಬೆಳ್ಳಿತೆರೆಯಲ್ಲವಳ
ಬೆರಳಿಡಿದು ನಡೆಸುವನು
ಸಂಕವೊಂದರ ಮೇಲೆ ಜಾತ್ರೆಯೂ ನಡೆದು
ಮೋಡಗಳ ಸುತ್ತೆಲ್ಲ ಅವನದೇ ಪರಿಮಳ
ಹಾಲ್ಟಿಂಗ್ ಬಸ್ಸಲ್ಲೂ ದೀಪಗಳುರಿದು
ಅವಳ ಮನವೀಗ ದೀಪಾವಳಿ

ಮೂಡಣದಿಂದ ಪಡುವಣಕೆ
ಓಲೆಯೊಂದು ರವಾನೆಯಾಗಿ
ಬಿಂಬಗಳ ತೋಟದಲಿ ಪುಟ್ಟ ಕನ್ನಡಿಯೊಂದು
ಪುಟ್ಟ ಕನ್ನಡಿಯಲ್ಲೂ ಯಕ್ಷರು
ಗೆಳೆಯನಿಗಾಗಿ ಹೆಣೆದ ಕನಕಾಂಬರ ದಂಡೆ
ಉಳಿದರ್ಧ ಹೂವು ಎಲ್ಲಿದೆ?
ಆ ದೊಡ್ಡದೇವನಿಗೆ ಇವಳೇ ಪುಟ್ಟ ಹೂ

ರಾತ್ರಿಯ ಹೆದ್ದಾರಿಯಲ್ಲಿ ಫುಲ್ ಸ್ಟಾಪು.
ಎರಡೇ ನಿಮಿಷಗಳ ಮೌನದಲ್ಲು
ಬೆಳದಿಂಗಳು ಚುರುಗುಟ್ಟಿ
ಯಾರದೋ ಕನಸಿನಲ್ಲಿ ಯಾರೋ ಊಳಿಗ
ಕತ್ತಲ ಸಮುದ್ರದಲ್ಲೂ ಮೋಂಬತ್ತಿಗಳುರಿದು
ರಾತ್ರಿಯೇ ಹೇಳುವುದು ನಾನೇನು ಕನಸು ಕಂಡೆನೆಂದು

ಒಡಲ ನೂಲಿನ ಜಾಲ
ಹಳೇ ಉಡುಪಿನ ನೃತ್ಯ
ಮೌನ ಕಲಿಸಿದ ಕಾಗುಣಿತ
ಎದೆಯೊಳಗಿನ ಸಸಿಯಾಗಿ
ಅದೇ ದೈನಿಕ ಆದರದೇ ಸುಖ

ಅಗೋ ಪ್ರಾರ್ಥನೆಯ ಕರೆ
ಸುಮ್ಮನಿರು ಗೆಳೆಯ ಸಂಗೀತ ಕೇಳೋಣ
ಮಾತಿರದ ನಲುಮೆಯಲಿ
ಒಂದು ಹಾಡು ಕೊಟ್ಟರೂ ಸಾಕು
ತೀರದಲಿ ತೋಯುವನು ನನ್ನ ಹುಡುಗ
ನೀಲಿಯೊಳಗೂ ಇಹುದು ಹಿತದ ಹಾಡು
ನೀರವದಲ್ಲೂ ಝೇಂಕಾರ
ಅವಶೇಷಗಳ ನಡುವೆಯೂ ಪ್ರತಿಧ್ವನಿ.
ಹಾಡಿದಷ್ಟೂ ರಾತ್ರಿ ಚಿಕ್ಕದೆನ್ನಿಸುವಾಗ
ಹಿಂಬಾಗಿಲನು ಯಾರೋ ತೆರೆದ ಸದ್ದು

ನೆಳಲು ಬೆಳಕಿಗೂ ಆಟ
ಹಳಿಗಳತ್ತ ನೋಡಲ್ಲಿ ಪುಷ್ಪಕ ವಿಮಾನ
ಸಾಗರದಿಯೂ ನೆನೆಯದ ಕಾಗದದ ದೋಣಿ
ನಾವೆಯಲ್ಲೆ ಒರಗಿದ ನಾವಿಕನಿಗೀಗ
ಶಾಪ ವಿಮೋಚನೆಯ ಸ್ಪರ್ಶ


ತೋಟದಂಚಿನ ಮೂಕಮರ ಏನನ್ನು ಹೇಳೀತು?
ದೋಸ್ತಾ ಕಣ್ಣು ತಪ್ಪಿಸಬೇಡ ಅಂತಲೇನು?
ಅಲ್ಲಿಹುದು ನಿಮ್ಮ ಮನೆ
ಅದೇ ಊರಿನ ಕಡೆ ಅಂತಲೂ ಇಹುದಾ?
ಹರಕು ನೋಟಿನಂತೆ ಮರಳಿ ಹೊರಟು ನಿಂತಾಗ
ಅವನ ಮುಖದಲ್ಲೂ ಈಗ ಸಮಯದ ಹರಿವು


ಮುಂಗಾರಿರುಳಿನಲಿ ಬೆಳದಿಂಗಳು
ತರಗೆಲೆ ಹೆಕ್ಕುವಾಗ
ಚಂದಮಾಮ ಹಸಿರೆಲೆ ಹರವುತ್ತಾನೆ
ಬೆಳದಿಂಗಳಲ್ಲಿ ಸುಳುಸುಳುಗಾಳಿ
ಮತ್ತದೇ ಸುಳು ಸುಳು ಗಾಳಿ
ಬೊಗಸೆಯೊಡ್ಡಿ ನಿಲ್ಲುತ್ತಾಳೆ ಅವನ ಮುಂದೆ
ಇದೀಗ ಅವಳ
ಬೊಗಸೆಗಣ್ಣು ಬೆಳದಿಂಗಳು
ಅವಳ ಬೊಗಸೆಯಲ್ಲೂ ಮಳೆ

July 11, 2008

ಕನಸುಗಳಿಗೆ ಕಾಲಿಲ್ಲ, ರೆಕ್ಕೆಯಿದೆ

ಎಳೆಬಿಸಿಲು ಹೂಗೊಂಚಲು
ಹಕ್ಕಿಯಿಂಚರ
ಸೋನೆಹನಿ
ನದಿ ಹರಿವು
ಮಕರಂದ
ಬೆಳದಿಂಗಳು
ನೆನಪು
ಎಲ್ಲೋ ತೇಲುವ ಹಾಡುಗಳು
ಬಳ್ಳಿಯ ಮಲ್ಲಿಗೆ ಹೂವುಗಳೆಲ್ಲ
ಅಂಗಳದಲ್ಲಿ ಅರಳುವ ಬದಲು
ನರಳುತ್ತ
ನಡೆಯಲಾಗದೆ
ಕುಂಟುತ್ತಿವೆಯಾ ಈಗೀಗ ಕನಸುಗಳು?


ಬೊಗಸೆ ಪ್ರೀತಿ
ಮೊದಲಮುತ್ತು
ಬಿಸಿಯಪ್ಪುಗೆಯ ರುಚಿ
ಪ್ರೇಮದ ಪರಿಮಳ
ಮೊಗ್ಗರಳುವ ಪರಿಗಳ
ಕಲಿಸಿದವನೇ
ನೀ ಕಟ್ಟಿದ ಅಡಿಪಾಯದ ಮೇಲಿವಳು
ಗಟ್ಟಿನಿಂತಿದ್ದಾಳೆ
ಹೆಗಲೊಳಗೆ
ಬರಸೆಳೆದು
ಭರವಸೆಯ ಮಳೆಗರೆದವನೇ
ಈ ಹೆಗಲಿಗೆ ಬಾ
ನಿನ್ನೊಂದು
ಹೆಜ್ಜೆಯಾಗುತ್ತಾಳಿವಳು

ನಯನದೊಳಗು
ಮಧುವನಿತ್ತು
ಮನದೊಳಗೆ ಸಿಹಿಯ ಬಿತ್ತಿ
ಬಾಯಿಗಿತ್ತು ಸಕ್ಕರೆ
ಮೈತುಂಬ ಸಿಹಿಮಳೆಗರೆದ ಮೇಲೂ
ನಿನ್ನೊಳಗುಳಿಸಿಕೊಂಡ
ಸಿಹಿಯನ್ನೆಲ್ಲ ತಾ
ಇನ್ನಷ್ಟು ಸಿಹಿಯಾಗುತ್ತಾಳಿವಳು

ಹಾಡು ಕೇಳುವುದಿಲ್ಲ
ಏನನ್ನು ಬರೆಯುವುದಿಲ್ಲ
ಅವರಿಗೆಲ್ಲ ಹೇಳಿದ್ದಾಳೆ
ಮಾತಾಡಿಸಬೇಡಿ ಅಂತ
ನಿನ್ನೊಳಗೆ ಕುಳಿತೇ
ಬದುಕಿಗುಸಿರಿರುವತನಕ
ಮೌನವಾಗಿ
ಹಾಡುತ್ತಾಳವಳು

ಜೋಳವೇ ಬೇಕಿಲ್ಲ
ಮಾಸಾಲೆಪೂರಿ ಸುಮ್ಮನೆ ಹೇಳಿದ್ದು
ಸೌತೆಕಾಯಿ, ಪೇರಲೆ ಹಣ್ಣು
ಏನೋ ಸಂಜೆ ಕಳೆಯುವುದಕ್ಕೆ
ನಿನ್ನೆದುರು ಮುಗ್ಧಮಳೆಗರೆಯುವುದಕ್ಕೆ
ಅವೇ ಬೇಕಂತ ಹಠ ಮಾಡುವುದಿಲ್ಲ
ಊರಿಗೆ ಹೋಗೋಣ
ಚಕ್ಕಡಿ ರೆಡಿಮಾಡು ಅಂತಳುವುದಿಲ್ಲ
ಎಲ್ಲಿಯಾದರೂ ಸರಿ
ಸದಾ ನಿನ್ನೊಡನೆ
ಇದ್ದುಬಿಡುತ್ತಾಳವಳು

ಹಕ್ಕಿಗಳಲ್ಲವ ನಾವಿಬ್ಬರು?
ನಡೆಯಲಾಗದ ಪಕ್ಷ ರೆಕ್ಕೆಬಿಚ್ಚು
ಜೊತೆಯಲ್ಲಿ ಹಾರುತ್ತಿರೋಣ
ಮೊದಲ ಬಾರಿಗೆ ಮಡಿಲೊಡ್ಡಿ
ಕೇಳುತ್ತಿದ್ದೇನೆ ಏನನ್ನೋ
ಅದೇ ಕಣೋ...
ಬೆಳಿಗ್ಗೆ ಕಂಡ ಕನಸಿದು
ಮಧ್ಯಾಹ್ನದೂಟದ ವೇಳೆ
ನೆನಪಾಯ್ತು
ಬದುಕ ಮುಸ್ಸಂಜೆಯಲ್ಲಿ
ಒಟ್ಟಿಗಿಬ್ಬರೂ ಕೂತು
ಹಲಸಿನಹಪ್ಪಳ
ಮೇಲೊಂಚೂರು ತೆಂಗಿನೆಣ್ಣೆ
ಆಲೆಮನೆ ಬೆಲ್ಲ
ಮೆದ್ದಂತೆ ಕನಸು
ನಡೆಸಿಕೊಡುತ್ತೀಯ ಈ ಮಾತನ್ನು?

July 10, 2008

ಸೂರ್ಯನಿಳಿವ ಮೆಟ್ಟಿಲಲ್ಲಿ...

ಇವತ್ಯಾಕೋ ಮನಸು ಸರಿಯಿಲ್ಲ ಅನ್ನುತ್ತೇನಲ್ಲ, ಆಗ ನೀನು ‘ಯಾಕೆ?’ ಅಂತ ಕೇಳಲೇ ಬೇಡ. ಅದು ಹಾಗೆಯೇ. ಅದಕ್ಕುತ್ತರವಿಲ್ಲ. ಇಬ್ಬರಿಗೂ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರಿಸುವುದೂ ಇಲ್ಲ.
ಬೆಳಿಗ್ಗೆ ಕ್ಲಾಸ್ ಮುಗಿದ ತಕ್ಷಣ ನನ್ನೆದುರು ನಿಲ್ಲುವ ನಿನ್ನನ್ನ ‘ಮರೇತೆನೆಂದರೂ ಮರೆಯಲಿ ಹ್ಯಾಂಗ’? ನನ್ನ ಬೇಜಾರು ನನಗಿರಲಿ ಬಿಡು. ನೀನು ನಿನ್ನ ಪಾಡಿಗಿರುವದ ಕಲಿತುಕೋ ಅಷ್ಟೆ. ಕಾಡಬೇಡ. ಎಷ್ಟೋ ದಿನದಿಂದ ಅಂದುಕೊಂಡಿದ್ದೆ ನಿನ್ನನ್ನ ಮಾತಾಡಿಸಬಾರ್ದು ಅಂತ. ಆ ಎಕಾನಾಮಿಕ್ಸ್ ಡಿಪಾರ್ಟ್ ಮೆಂಟ್ ಯಾಕಿದೆಯೋ ನಮ್ಮ ಡಿಪಾರ್ಟ್ಮೆಂಟಿನ ಪಕ್ಕ ಅನಿಸುವ ಮಟ್ಟಿಗೆ ಕಾಡುತ್ತೀಯಲ್ಲ. ಈ ಯುನಿವರ್ಸಿಟಿಯವರಿಗೂ ಗೊತ್ತಿರಬೇಕು, ಸರಿಯಾಗಿ ನಿನಗೆ ಕ್ಲಾಸ್ ಮುಗಿವ ಹೊತ್ತಿಗೆ ನನ್ನ ಕ್ಲಾಸ್ ಗಳು ಶುರುವಾಗೋ ಹಾಗೆ ಟೈಮ್ ಟೇಬಲ್ ಹಾಕಿಟ್ಟಿದ್ದಾರಲ್ಲ.

ಅಲ್ಲ ಕಣೋ...ಹೀಗಂದೆ ಅಂತ ಬೇಜಾರಾಗ್ಬೇಡ. ನಂಗೂ ನೀನಿಷ್ಟವೇ. ನೀನು ಬಂದು ನನ್ನ ಕಾಡಿ ಹೋಗ್ತೀಯಲ್ಲ ಹಿಂದೆಯೇ ಇವರೆಲ್ಲ ನನ್ನ ಕಾಡ್ತಾರೆ ಕಣೋ....ನೀನು ನನಗೇನಾಗಿದೀಯೋ ಅದಕ್ಕಿಂತ ಹೊರತಾಗಿರುತ್ವೆ ಇವರ ಮಾತುಗಳು ಗೊತ್ತಾ? ನನಗೆ ಸಹಿಸೋದು ಕಷ್ಟ. ಈಗೀಗ ಇವರ ಮಾತಿಗೆಲ್ಲ ಬೇಜಾರಾಗಿ ದಿನಪೂರ್ತಿ ನಿನ್ನೊಡನೆಯೇ ಇದ್ದುಬಿಡಬೇಕು ಅನ್ಸಿಬಿಡ್ತಿದೆ. ನಿನ್ನ ಪರಿಸ್ಥಿತಿಯೂ ಅದೇಅಂತ ಗೊತ್ತಿದೆ ಕಣೋ. ನೀನೀಗ ಸಂಜೆಯ ಕಾಫಿಯನ್ನ ನನಗೋಸ್ಕರ ಬಿಟ್ಟುಬಿಟ್ಟಿದೀಯ ಅಂತ ನನ್ನರಿವಿಗೆ ಬಂದಿಲ್ಲ ಅಂದುಕೊಂಡ್ಯಾ? ಹೋಗ್ಲಿಬಿಡು. ಸಂಜೆಯ ಸೂರ್ಯ ಇಳಿಯುತ್ತಾನಲ್ಲ ಅದನ್ನೇ ನೋಡುತ್ತ ತಂಪಾಗಿದ್ದುಬಿಡೋಣ ಬಿಡು. ಆ ರಂಗೇ ಸಂಜೆ ಟೀ ಕಾಫಿ ಎಲ್ಲ ಆಗುತ್ವೆ ನಮ್ಮ ಪಾಲಿಗೆ.

ನೀನು ಹಾಗೆ ಸಂಜೆ ಅರು ಗಂಟೆ ಆಗ್ತಿದ್ದಂಗೆ ನಮ್ಮನೆಯ ಮುಂದಿರುತ್ತೀಯಲ್ಲ, ಒಮ್ಮೊಮ್ಮೆ ನೋವಾಗ್ತಿತ್ತು ನಂಗೆ, ನೀನು ಈ ಊರು ಬಿಟ್ಟರೆ ಸಂಜೆಯ ಸೂರ್ಯ ಇಷ್ಟೇ ಚೆನ್ನಾಗಿ ಕಾಣಿಸ್ತಾನಾ ಅಂತಲೂ ಅನ್ನಿಸಿದ್ದಿದೆ.

ಇಲ್ಕೇಳೋ..ಏನು ಗೊತ್ತಾ? ನಿನ್ನೆ ಅವನು ಕಾಲ್ ಮಾಡಿದ್ದ, ಯಾರು ಹೇಳು, ಹಿಂದೆಬಿದ್ದು ಮಾತಾಡದೇ ಮದುವೆಮಾತನ್ನು ಮನೆತನಕ ತಂದು ಒಪ್ಪಿಸಿದನಲ್ಲ ನನ್ನೊಳಗೆ ಕುಳಿತವನು, ಅವನೇ ಕಾಲ್ ಮಾಡಿದ್ದ. ಏನಂದ ಗೊತ್ತಾ "ನೀನು ಅವನ ಜೊತೆ ದಿನಾ ವಾಕ್ ಹೋಗೋದು ಸರಿಕಾಣ್ತಿಲ್ಲ, ವಿಷಯ ನನ್ನತನಕ ಬಂದಿದೆ, ನನಗೇನೂ ಬೇಜಾರಿಲ್ಲ, ನೋಡಿದವ್ರು ಆಡ್ಕೊಳ್ಳೋದು ಬೇಡ" ಅಂತಂದ. ದಿನಾ ನಮ್ಮನ್ನ ನೋಡೋ ಅಮ್ಮ ಕೂಡ ಇದೇ ಮಾತು ಹೇಳಿದ್ದು ತುಂಬ ನೋವಾಯ್ತು "ಬೇಕಿದ್ರೆ ನಮ್ಮ ಮನೆಯೊಳಗೇಗೇ ಕೂತು ಹತ್ತು ನಿಮಿಷ ಮಾತಾಡಿ, ವಾಕ್ ಹೋಗೋದು ನೋಡಿದವ್ರಿಗೆ ಆಡಿಕೊಳ್ಳೋಕೆ ಸಿಕ್ಕಿದ ಹಾಗಾಗುತ್ತೆ, ಅಷ್ಟೇ ಮತ್ತೇನಿಲ್ಲ" ಅಂತದ್ರು ಅಮ್ಮ. ಅವರೆಲ್ಲರ ಮಾತೂ ಒಪ್ಪುವಂತದ್ದೇ. ಆದ್ರೆ ನೀನೇನು ಅಂತ ನಂಗೆ ಗೊತ್ತಿದೆ, ನಿನ್ನನ್ನ ಬಿಟ್ಟು ಸಂಜೆ ಮುಗಿಯುವ ದಿನಗಳನ್ನು ನಾನು ಊಹಿಸಿಕೊಳ್ಳೋದು ಕಷ್ಟವೇ ಕಣೋ.


ನೀನೇನಂತೀಯ ಇದಕ್ಕೆ? ಸುಮ್ನೆ ಇರ್ಬೇಡ, ಮಾತಾಡು, ನನ್ನ ಬೇಜಾರಿಗೆ ನಿನ್ನ ಮಾತು ಬೇಕು ಕಣೋ, ನಿನ್ನ ನೋವುಗಳೂ ಗೊತ್ತಿದೆ ಅವುಗಳಿಗೆ ನಾನು ಜೊತೆಯಗುತ್ತೀನಲ್ಲ ಹಾಗೇ ನಿನ್ನೊಳಗು ನಾನೇನನ್ನೋ ಹುಡುಕುತ್ತೇನೆ. ಅದಕ್ಕೊಂದು ಅರ್ಥ ಕೊಡದೆ ಅಂಟಿಕೊಳ್ಳುತ್ತೀಯಲ್ಲ, ಅದಕ್ಕೆ ನೀನಿಷ್ಟವಾಗ್ತೀಯ.ಅರ್ಥ ಕೊಟ್ಟರೂ ಅನರ್ಥವಾಗದ ಹಾಗೆ ನನ್ನನ್ನ ನೀನು ಕಾಪಾಡಿಕೊಳ್ಳುವ, ನನ್ನೊಳಗೆ ಭರವಸೆ ತುಂಬುವ ನಿನ್ನೊಳಗೆ ಉಳಿದುಬಿಡುತ್ತೇನೆ. ನಿನ್ನ ನೋವುಗಳಿಂದಲೇ ನನ್ನ ನೋವುಗಳನ್ನಿಷ್ಟು ನೇವರಿಸ್ತೀಯಲ್ಲ, ಆ ಸಾಂತ್ವನ ಇನ್ನೆಲ್ಲೂ ಸಿಗೋಲ್ಲ. ಸಮಾನ ದುಃಖಿಗಳು ಪರಸ್ಪರ ಸ್ನೇಹಿತರಾಗ್ತಾರಂತೆ. ನಮ್ಮನ್ನ ನೋಡಿಯೇ ಈ ಮಾತನ್ನ ಹೆಳಿರ್ಬೇಕು ಅಂತ ಅನಿಸೋಲ್ವ ನಿಂಗೆ?

ಅಲ್ಲ ನೋಡಿದವ್ರು ಆಡ್ಕೊಳ್ಳೋದು ಬೇಡ ಅಂದ್ರೆ ಏನರ್ಥ? ನಿಂಗೇನಾದ್ರೂ ಗೊತ್ತಾ? "ನೋಡಿದವ್ರು ಆಡ್ಕೊಳ್ಲಿಬಿಡು, ನೀನಿದ್ದೀಯಲ್ಲ ಜೊತೆಯಲ್ಲಿ ಅಷ್ಟು ಸಾಕು" ಅಂತವನಿಗಂದು ಫೋನಿಟ್ಟೆ. ಜಾಸ್ತಿ ಮಾತಾಡೋಕೆ ಆಗ್ಲಿಲ್ಲ. ತುಂಬ ಹೊತ್ತು ಕತ್ತಲಲ್ಲಿ ನನ್ನದೇ ಮನಸ್ಸು ಮುಸುಮುಸು ಅಳೋದನ್ನ ನಾನೇ ಕೇಳ್ತಾ ಸುಮ್ಮನೆ ಕೂತಿದ್ದೆ. ಅಮ್ಮ ಬಿಸಿಬಿಸಿ ಟೀ ಕೊಟ್ರು. ಕುಡಿಯೋವಾಗ ಮನ್ಸು ಕುದೀತಾ ಇತ್ತು. ನಿನ್ನ ನೆನಪಾಯ್ತು. ಅಮ್ಮಂಗೆ ಹೇಳ್ದೆ. "ಅಮ್ಮಾ ಅವನು ಈಗೀಗ ಸಂಜೆ ಟೀ ಕುಡಿಯೋದನ್ನ ಬಿಟ್ಬಿಟ್ಟಿದ್ದಾನೆ" ಅಂತ. ಅಮ್ಮ ಯಾಕೇಂತ ಕೇಳಿದ್ರು. "ಅವನ ಫ್ರೆಂಡ್ಸ್ ಅವನನ್ನ ಟೀ ಟೈಮಲ್ಲಿ ಆಚೆ ಹೋಗೋವಾಗ ಕರೆಯೋದಿಲ್ವಂತೆ, ಅವನು ನನ್ ಜೊತೆ ವಾಕ್ ಬರ್ತಾನಲ್ಲ... ಅವರ ಜೊತೆ ಸಂಜೆ ಟೈಮಲ್ಲಿ ಇವನಿರೋಲ್ಲ ಅಂತ ಕೋಪವಿರ್ಬಹುದು. ಅವರೆಲ್ಲ ಅವನು ನನ್ ಜೊತೆ ಟೀಗೆ ಹೊರಗಡೆ ಹೋಗ್ತಾನೆ ಅಂತಂದ್ಕೊಂಡ್ಬಿಟ್ಟಿದ್ದಾರೆ ಅನ್ಸತ್ತೆ, ನಾನಾದ್ರೆ ಮನೆಯಲ್ಲಿ ಟೀ ಕುಡ್ದು ಹೋಗ್ತೀನಲ್ಲ, ಅವನು ಹಾಗೇ ಇರ್ತಾನಲ್ಲ ನನಗೋಸ್ಕರ, ಅದ್ಕೆ ಬೇಜಾರು" ಅಂತಂದೆ . ಅಮ್ಮ "ಅವನನ್ನೂ ಮನೆಗೇ ಕರ್ಕೊಂಡು ಬಾ, ಇಬ್ರೂ ಟೀ ಕುಡೀತಾ ಇಲ್ಲೇ ಮಾತಾಡುವಿರಂತೆ, ಅವನ್ಯಾಕೆ ನಮ್ಮನೆ ಒಳಗೆ ಬರೋಲ್ಲ?" ಅಂತ ಕೇಳಿದ್ರು. ನಾನು ಮಾತಾಡ್ಲಿಲ್ಲ.

ಹೌದು ನೀನ್ಯಾಕೆ ನಮ್ಮನೆ ಒಳಗೆ ಬರೋಲ್ಲ ಒಂದಿನವೂ? ನೀನು ನಮ್ಮನೆ ಒಳಗೆ ಬರಬೇಕು ಅಂದ್ರೆ ವೀಕ್ ಎಂಡ್ ತನಕ ಕಾಯ್ಬೇಕಿತ್ತಲ್ಲ ನಮ್ಮನೆಯವರೆಲ್ಲ? ಹೋಗ್ಲಿಬಿಡು. ಯಾವಾಗಾದ್ರೂ ಬಾ ನಿಂಗಿಷ್ಟವಾದಾಗ ಆಯ್ತಾ, ನನಗಂತೂ ದಿನ ಸಿಗ್ತೀಯಲ್ಲ ಅಷ್ಟು ಸಾಕು.

ಸೂರ್ಯ ಮುಳುಗೋದನ್ನ ನೀನು ನಂಗೆ ಸಿಗೋ ಮೊದಲೂ ನೋಡಿದ್ದೆ, ಆದ್ರೆ ಇಷ್ಟು ಚೆನ್ನಾಗಿರ್ತಿರಲಿಲ್ಲ ಅನಿಸುತ್ತೆ. ನೀನು ನನ್ನ ಕ್ಲಾಸ್ ಮುಗಿದ ತಕ್ಷಣ ನನ್ನೆದುರು ಪ್ರತ್ಯಕ್ಷವಾಗಿ ನಿಂತಿದ್ದೆಯಲ್ಲ! ಆ ದಿನ ಮರೆಯೋಕೆ ಸಾಧ್ಯ ಇಲ್ಲ. "ನಿನ್ನನ್ನ ಇವತ್ತೊಂದು ಒಳ್ಳೆಯ ಜಾಗಕ್ಕೆ ಕರ್ಕೊಂಡು ಹೋಗ್ತೀನಿ, ನೀನು ಬರ್ಲೇಬೇಕು" ಅಂದ್ಯಲ್ಲ ಮಗುವಿನ ಹಾಗೆ. ಅದೇ ಮುಗ್ಧತೆ ನನ್ನನ್ನ ನಿನ್ನ ಜೊತೆ ಕಟ್ಟಿಹಾಕಿಬಿಡ್ತು ಅದಕ್ಕೊಂದು ಸಂಬಂಧದ ಹೆಸರಿನ ಹಂಗಿಲ್ಲದ ಹಾಗೆ.

ನಮ್ಮಿಬ್ಬರ ನಡುವಿನ ಸಂಬಂಧಕ್ಕೆ ನಾವಿಬ್ಬರು ಹೆಸರು ಕೊಡುವ ಯೋಚನೆಯನ್ನೇ ಮಾಡಲಿಲ್ಲ ಅಲ್ಲ? ಅದೇ ಕಣೋ... ನಿಷ್ಕಲ್ಮಶವಾದ ಎಲ್ಲವನ್ನು ಮೀರಿದ ಹೆಸರಿಲ್ಲದ ನಂಟು. ಒಮ್ಮೆಯೂ ನಿನ್ನ ಮುಖದಲ್ಲಿ ಏನನ್ನೋ ಮುಚ್ಚಿಡುತ್ತಿದ್ದೀಯ ಅನ್ನುವ ಭಾವಗಳು ಸಿಗದ ಹಾಗಿದ್ದೆಯಲ್ಲೋ . ಎಲ್ಲವನ್ನೂ ತೆರೆದಿಡುತ್ತಿದ್ದೆಯಲ್ಲ ನನ್ನ ಮುಂದೆ. ಹುಡುಗನೊಬ್ಬ ಹೀಗೆ ಮಾತಾಡಬಹುದು, ಅವನೊಳಗೂ ಇಂಥ ಸೂಕ್ಷ್ಮ ಮನಸಿದೆ ಅನ್ನೋದು ಅರಿವಾಗಿದ್ದು ನಿನ್ನಿಂದಲೆ ಕಣೋ.


ನನಗೆ ಹುಡುಗರೆಂದ್ರೆ ಅಲರ್ಜಿಯಿತ್ತು. ಯಾಕೇಂದ್ರೆ ಸ್ವಲ್ಪ ಚೆನ್ನಾಗಿ ಮಾತಾಡ್ಸಿದ್ರೂ ಅಪಾರ್ಥ ಅನರ್ಥಗಳನ್ನೇ ಮಾಡ್ಕೋತಾರೆ ಹುಡುಗ್ರು ಅಂದ್ಕೊಂಡಿದ್ದೆ. ಹುಡುಗರೆಂದ್ರೆ ಗಟ್ಟಿಬೆಳೆದುನಿಂತ ಒರಟುತೊಗಟೆಯ ಹೂ ಹಣ್ಣುಗಳಿಲ್ಲದ ಕಪ್ಪುಹಸಿರೆಲೆಯ ಹೂಬಳ್ಳಿಗಾಸರೆಯಾಗುವ ಮರಗಳೇ ನನಗೆ ನೆನಪಾಗ್ತಿದ್ದಿದ್ದು. ಹೂ ಬಳ್ಳಿಯಿಲ್ಲದೇ ಅವಕ್ಕೆ ಸೌಂದರ್ಯವಿಲ್ಲ ಅಂದುಕೊಂಡಿದ್ದವಳು ನಾನು. ನೀನು ನನ್ನ ಆ ಅನಿಸಿಕೆಯನ್ನ ಸುಳ್ಳುಮಾಡಿದ್ದೆ. ಒರಟುತೊಗಟೆಯೊಳಗಿನ ಮೃದುತಿರುಳನ್ನೆಲ್ಲ ಸುಳಿಸುಳಿಯಾಗಿತೆರೆದಿಟ್ಟು ಹಗುರಾಗುತ್ತಿದ್ದೆಯಲ್ಲ, ಅವಕ್ಕೆಲ್ಲ ಸ್ಪಂಧಿಸುವಾಗ ನನ್ನೊಳಗೆ ಮೊಳೆಯುತ್ತಿದ್ದ ಖುಷಿಯನ್ನು ನೀನು ಗಮನಿಸಿದ್ದೀಯ ಅಂದುಕೊಂಡಿದ್ದೀನಿ.


ನೀನು ನನಗೆ ಸದಾ ಖುಷಿಯೇ...ಅದಕ್ಕೇ ಅಲ್ಲವ ನಾನು ನಿನ್ನನ್ನ ಮುದ್ದಾಗಿ ‘ಹ್ಯಾಪೀ’ ಅಂತ ಕರೀತಿದ್ದಿದ್ದು. ಆ ಹೆಸರೊಳಗೇ ಸಾಕಷ್ಟು ಖುಷಿಯಿತ್ತು. ನಾನು ಹಾಗೆ ಕರೆಯೋವಾಗ ನಿನ್ನ ಮುಖ ಅರಳೋದನ್ನ ನಾನು ನೋಡಿಲ್ಲ ಅಂದುಕೊಂಡಿದ್ದೀಯ? ಮುಗ್ಧ ನಗುವನ್ನ ಮುಚ್ಚಿಟ್ಟಿದ್ದು ಮುಕ್ತವಾಗಿ ನನಗೆ ಸಿಕ್ಕಿಲ್ಲ ಅಂದುಕೊಂಡಿದ್ದೀಯ? ನಿನ್ನ ಮನದೊಳಗಿನ ಎಲ್ಲವನ್ನೂ ನಾನು ಕಾಣಬಲ್ಲವಳಾಗಿದ್ದೆ. ಹಠ ಮಾಡುವುದನ್ನ ಕಲಿಸಿದವನೇ ನೀನು ಅಂದರೆ ನಿಂಗೆ ಕೋಪ ಇಲ್ಲ ತಾನೆ? ಕೋಪ ಮಾಡ್ಕೊಂಡ್ರೆ ನಂಗೀಗ ಕಾಣೋದು ಇಲ್ಲ ಬಿಡು.

ನೂರೈವತ್ತಕ್ಕೂ ಮಿಗಿಲು ಬಾರಿ ಸೂರ್ಯ ಮುಳುಗಿದ್ದನ್ನ ನೋಡುತ್ತ ಆ ಮೋರಿಯ ಮೇಲೆ ಕೂತಿರ್ತಿದ್ದೆವಲ್ಲ, ಆಗ ನಿಂಗೇನು ಅನಿಸ್ತಿತ್ತು. ನನಗೆ ಏನಾದರೂ ಅನಿಸೋಕೆ ಅವಕಾಶ ಇರ್ಲಿಲ್ಲ. ಆದ್ರೆ ನಿಂಗೆ ಏನಾದ್ರೂ ಅನಿಸ್ತಿದ್ದಿರಬಹುದು ಅಂತ ಈಗ ಅನಿಸ್ತಿದೆ. ಆವತ್ತು ನೀನು ಹೊರಡೋ ಮೊದಲು ಬಿಕ್ಕಿ ಬಿಕ್ಕಿ ಅತ್ತಿದ್ದು ಯಾಕೆ ಗೊತ್ತಾ? ನಾಳೆ ನಾನ್ಯಾರ ಜೊತೆ ವಾಕ್ ಹೋಗಬೇಕು ಅಂತನಿಸಿ.

ನೀ ಸಿಕ್ಕಿದ ದಿನದಿಂದ ನನ್ನ ಡೈರಿ ಧೂಳಿಡಿಸಿಕೊಂಡು ಬಿದ್ದಿತ್ತು ಅನಾಥವಾಗಿ. ಇಬ್ಬರೂ ಒಟ್ಟಿಗಿರುವಾಗ ಸೂರ್ಯ ಇಳಿವ ಬಣ್ಣಗಳಲ್ಲಿ ನಮ್ಮ ದಿನಚರಿಯ ಬಣ್ಣಗಳು ಕಲಬೆರಕೆಯಾಗುತ್ತ ವಿನಿಮಯವಾಗ್ತಿದ್ದವಲ್ಲ! ಡೈರಿಬರೆವುದು ಬೇಕೆನಿಸಿರಲಿಲ್ಲ ನೀನಿದ್ದಷ್ಟು ದಿನ. ನೀನು ಹೋದ್ಮೇಲೆ ಮೂರ್ನಾಲ್ಕು ದಿನ ರೂಮಿನ ಕಿಟಕಿಯಲ್ಲೇ ನಿಂತು ನೋಡ್ತಿದ್ದೆ.

ನೀನಿಲ್ಲದೆ ಸೂರ್ಯ ಮುಳುಗೋಲ್ಲ ಅನ್ನೋ ನನ್ನ ಭಾವನೆ ಸುಳ್ಳಾಯ್ತು. ಸೂರ್ಯ ಮುಳುಗ್ತಿದ್ದ ಕಣೋ. ಕತ್ತಲೂ ಆಗ್ತಿತ್ತು. ಅಮ್ಮ ಬಂದು ಲೈಟ್ ಹಾಕಿ ನನ್ನೆಡೆ ನೋಡಿ ಸುಮ್ಮನೆ ಹೊರಟು ಹೋಗ್ತಿದ್ರು. ಅವರಿಗೆ ಏನಾದ್ರೂ ಅರ್ಥವಾಗಿತ್ತಾ? ನನಗೇ ಅರ್ಥವಾಗದ್ದು ಅವರಿಗೆ ಹೇಗೆ ಅರ್ಥವಾಗ್ಬೇಕು ಅಲ್ವಾ?

ನಾಲ್ಕು ದಿನ ಅದ್ಮೇಲೆ ನಿಧಾನಕ್ಕೆ ಮನೆಯಾಚೆ ಕಾಲಿಟ್ಟೆ. ಹೊರಗಿನ ಬೆಳಕು ವಿಚಿತ್ರ ಅನಿಸ್ತು. ಕಣ್ಣುಗಳಲ್ಲಿ ನೀನಿದ್ದೆ ನಿಧಾನಕ್ಕೆ ಒಂದೊಂದೇ ಹೆಜ್ಜೆ ಹಿಂದೆ ಸರಿಯುತ್ತಾ. ನೀನು ಸರೀತಾ ಇದ್ದೆಯೋ ಅಥವಾ ನಾನೇ ಪ್ರಯತ್ನಪೂರ್ವಕ ನಿನ್ನನ್ನ ದೂರ ತಳ್ತಾ ಇದ್ನೋ...ಒಟ್ನಲ್ಲಿ ಕಣ್ಣುಗಳಲ್ಲಿ ಮಸುಕಂತೂ ಇತ್ತು, ಅತ್ತ ನೀನೂ ಮಸುಕಾಗಿ ಇತ್ತ ಎದುರಿರುವ ಬೆಳಕೂ ಕಾಣದ ಅನುಭವ.

ಅದ್ಯಾವುದೋ ಓದಿದ ಪುಸ್ತಕವನ್ನೆ ಹಿಡಿದು ಒಬ್ಬಳೇ ಹೆಜ್ಜೆ ಹಾಕಿದ್ದು ಎಲ್ಲಿಗೆ ಗೊತ್ತಾ? ದಿನಾ ನಿನ್ನೊಡನೆ ಕುಳಿತು ಸೂರ್ಯ ಮುಳುಗೋದನ್ನ ‘ಹ್ಯಾಪೀ.. ಅಲ್ನೋಡು’ ಅನ್ನುತ್ತಾ ದಿನವೂ ಹೊಸತೇನನೋ ನೋಡುವಂತೆ ನೋಡುತ್ತಿದ್ದೆನಲ್ಲ !ಅದೇ ಜಾಗಕ್ಕೆ ನಿನ್ನ ಹೆಜ್ಜೆಗಳ ಸಾತ್ ಇಲ್ಲದ ನನ್ನ ಹೆಜ್ಜೆಗಳ ಕಿತ್ತಿಡುತ್ತಾ. ಮೋರಿಕಟ್ಟೆ ಇಷ್ಟುದಿನ ನಾವಿಬ್ಬರು ಬಾರದ್ದಕ್ಕೆ ಮುನಿಸಿಕೊಂಡಿತ್ತು. ಅದೇ ಹಳೇ ಹಾಡಿದೆಯಲ್ಲ ‘ಯೆಹ್ ರಾತೇನ್ ಯೆ ಮೌಸಮ್ ನದಿ ಕಾ ಕಿನಾರಾ’ ನೆನಪಿಗೆ ಬಂತು.

ಮೋರಿಕಟ್ಟೆಯಲ್ಲಿ ನಿನ್ನೊಡನೆ ಕೂತು ಹಾಡುಗುನುಗುತ್ತಾ, ಹರಟುತ್ತಾ, ಮೌನವಾಗುತ್ತಾ ಅದೆಷ್ಟೋ ಸೂರ್ಯಾಸ್ತ ನೋಡಿದ್ದೆನಲ್ಲ, ಆಗ ಕಂಡಿರದ ಅನುಭವವೊಂದು ದೂರತೀರದಲಿ ನಿನ್ನ ನೆನಪಿನ ಹಾಡಾಗಿ ತೇಲಿ ಬರುತ್ತಿತ್ತು. ಪಕ್ಕದಲ್ಲಿ ಹರಿಯುತ್ತಿದ್ದ ಹಳ್ಳದ ನೀರು ಕದಡಿ ಹರಿಯುತ್ತಿತ್ತು, ಸೂರ್ಯ ಇಳಿಯುವ ಮೆಟ್ಟಿಲು ಅದರಲ್ಲಿದೆ ಅಂದಿದ್ದೆಯಲ್ಲ, ಹೌದಂದುಕೊಂಡಿದ್ದೆ. ಹಳ್ಳಕ್ಕೆ ಮೆಟ್ಟಿಲಿಲ್ಲ, ಬರೀ ಕಲ್ಪನೆ ಅನ್ನೋದೀಗ ಅರಿವಿಗೆ ಬರ್ತಾ ಇತ್ತು. ಅಣತಿದೂರದಲ್ಲಿ ಜೋಳದಂಗಡಿಯಲ್ಲಿ ಜೋಳ ಸುಡುತ್ತಿದ್ದ ಹುಡುಗಿ ಯಾರೊಡನೆಯೋ ಹರಟುತ್ತ ಉರಿವ ಕೆಂಡಕ್ಕೆ ಇನ್ನಷ್ಟು ಗಾಳಿ ಹಾಕುತ್ತಿದ್ದಳು. ಕೆಂಪನೆಯಕೆಂಡ ಛಟ ಛಟನೆ ಗಾಳಿಯಲ್ಲಿ ಹಾರಿದ್ದು ಬಿಚ್ಚಿಟ್ಟ ಪುಸ್ತಕದ ಹಾಳೆಗಳನ್ನ ಸುಟ್ಟೀತೆಂಬಂತೆ ಪುಸ್ತಕವನ್ನ ಮುಚ್ಚಿಟ್ಟೆ. ಸೂರ್ಯ ಮುಳುಗಿದ್ದ. ನೀರೊಳಗೆ ಅವನ ಬಣ್ಣವಿರಲಿಲ್ಲ. ಮನ ನಿನ್ನನ್ನೇ ಅರಸುತ್ತಿತ್ತು. ಸೂರ್ಯನಿಳಿಯುವ ಮೆಟ್ಟಿಲನ್ನು ನೀನೆ ಬಂದು ಕಿತ್ತುಹೋಗಿರಬೇಕು ಅನಿಸಿತು.

July 9, 2008

ಕಡಗೋಲ ಕಸಿದವನೆ ಯಾರೋ ನೀನು?

ಕರಗುತಿದೆ ಕಡಗೋಲು ಭಾವಗಳ ಕಡೆದು
ಭಾವತೀರದಿ ಯಾರಿಹರು ಕಡಗೋಲ ಹಿಡಿದು
ಭಾವಗಳ ಕೊಡವಿದುವೆ ಕಡಲೂ ಅಹುದು
ಕೊಡದಿ ಕಡೆದಿಹ ಭಾವ ಯಾರದಿಹುದು

ಬೆಳೆದ ಭಾವದ ಮುದ್ದೆ ಬೊಗಸೆಯೊಳಗಿನ ಬೆಣ್ಣೆ
ಬೆರಳಿಗೂ ಮೀರಿಹುದು ಎಟುಕಲಾರದ್ದು
ಕೊಡದಾಳದಿ ಮುಳುಗಿಪ ಸದ್ದಿಲ್ಲದಾ ಭಾವವೇ
ಎದ್ದು ಬಾ ನೀ ಮರುಳೆ ಭಾವನೆಯ ಒಲವೆ

ಯಮುನೆ ತೀರದ ಹಾಗೆ ಭಾವ ತೀರದ ಮುರಳಿ
ಭಾವತೀರದೊಲು ಹರಿವ ಹಾದಿಯಲ್ಲಿ
ಭಾವದುದ್ದಕೂ ಭಾವ ತೀರದುದ್ದಕೂ ಮರಳಿ
ಮರುಳಿನಾಳದ ಮನವೆ ಗಾನ ಮುರಳಿ

ಕಡಗೋಲ ಕಸಿದವನು ಗೋಪಿಯಾ ಮಗನಾ
ಭಾವಗಳ ಅಳೆದವನು ರಾಧೆಯ ಇನಿಯ
ಕೃಷ್ಣೆಯರ ಕದ್ದವನು ಅವ ತಾನು ಕೃಷ್ಣ‍
ಭಾವಗಳ ಒಡೆಯ ಶ್ರೀಕೃಷ್ಣಪರಮಾತ್ಮ.

July 8, 2008

ಸ್ನಾಕ್ ಟೈಂ

ಇವತ್ತಲ್ಲಿ
ಇವನಿಗೆ
ಸನ್ಮಾನ
ಇವನು ಹೋದ ವೇಳೆ
ಅಲ್ಲಿ
ಜನಗಣಮನ

ಅವನ ಮನ
ನಿಂತ ಮರಗಳ
ಕಾನನ
ಮುರಿದುಬಿದ್ದ ಮರವೇ
ಇವಳ
ಗೆಳೆತನ

ಅವಳು ಹೇಳಿದ್ದು
ಇವನಿಗೆ
ಸನ್ಮಾನ
ಅವನು
ಕೇಳಿಸಿಕೊಂಡಿದ್ದು
ಅನುಮಾನ

ಚಿಗುರೆಲೆ ಅರಳಿದ್ದು
ಗೆಳೆತನ
ಭರವಸೆ ಕೊಂಬೆ
ಅಭಿಮಾನ
ಬೇರಾಳ ಇಳಿದಿದ್ದು
ಮುದುಡಿದ ಕವನ

July 7, 2008

ಸಿಂಡ್ರೆಲಾ

ಕಹಿಕಾಫಿಯಾಳದಲೂ ನಗು
ನಗು ಬಿರಿವಾಗ
ಏನೋ ನೋವು
ಕಹಿಕಾಫಿಯಾಳ
ಇನ್ನಷ್ಟು ಆಳ
ಮನದಾಳದಂತೆ

ಬಂದವಳು
ಹೊರಟೇ ಹೋದಳು
ಅದೇ ಸಮಯವಲ್ಲ
ಅದೊಂಥರ ವೇಳೆ
ಚಪ್ಪಲಿಯ ಸುಳಿವ
ಬಿಡಲಿಲ್ಲವೀಗಲೂ

ಫ್ರಿಜ್ಜೊಳಗೆ ತಣ್ಣಗೆ
ಕೂತ ಡಬ್ಬಗಳದು ಮಾತೇ ಇಲ್ಲ
ಸಿಟ್ಟಿಂಗ್ ಹಾಲಿನ ಮಧ್ಯೆ
ಅವಳದೇ ಹೊಲಿಗೆ ಯಂತ್ರ
ಕ್ರಿಸ್ ಮಸ್ ಗೆ ಕಾಯುತ್ತಲಿದೆ
ಕ್ರಿಸ್ ಮಸ್ ಟ್ರೀ
ನಾನವಳ ಬರುವ ಕಾಯುವಂತೆ

ನಿನ್ನದೇ ಕರೆಯಾ
ಬೆಳ್ಳಕ್ಕಿ ಮುಗಿಲೆ, ಸಾರಿ
ಸುಪ್ತವಾಗಿ ಮೊಬೈಲ್
ಮಾತಾಡಿದ್ದು
ಅರಿವಾಗಲಿಲ್ಲ

ಕಿಟಕಿಗಾನಿಸಿ ನಿಂತು
ನೋಡುತ್ತೇನೆ
ಮೇಲೆ ಬೆಳ್ಳಕ್ಕಿ ಹಿಂಡು
ಅದರೊಳಗೆ ಅವಳೂ ಒಬ್ಬಳಾ
ಆ ನನ್ನ ಸಿಂಡರೆಲಾ?

ಸುಮ್ಮನೆ ಸಾಗುವ ಸಾಲುಗಳು

*ಗುರುಬಲ*
ಗುರುವೇ ಬಲವಾಗಿ
ಬಲವೇ ಗುರುವಾಗಿ
ಬಂದಾಗಲೇ
ಬಂದಿದ್ದು
ಗುರುಬಲ

*ಅದೃಷ್ಟ*
ಕವಿತೆಯೊಳಗೆ
ಕಳೆದ
ಅದೇ ಬೀಗದ ಕೈ
ಲೇಖನದೊಳಗೆ
ಕೀಲಿಕೈ ಆಗಿ ಸಿಕ್ಕಿದ್ದು!

*ನೆನಪು*
ಹಾದಿಯುದ್ದಕ್ಕೂ
ಹರಿದು
ತೀರದುದ್ದಕ್ಕೂ
ತೀರದ
ಸಂಗಾತಿ

*ಹುಣ್ಣಿಮೆ*
ಮೋಡಮರಗಳ ರಾಶಿ
ತಾರೆಮರಿಗಳ ದಿಂಡು
ಕಣ್ಣುಗಳದೇ ಜಾತ್ರೆ
ಚಂದ್ರಿಕೆಯ ಪಲ್ಲಕ್ಕಿ
ಚಂದ್ರನಿಲ್ಲ!

July 2, 2008

ಅವಳೊಮ್ಮೆ ಮುನಿದರೆ ಥೇಟ್
ಉರಿವ ಸಿಗರೇಟ್
ಉರಿವವಳ ಸೇದುತ್ತ
ಆವರಿಸಿ ಆರಿಸುವ
ಅವನ ಕಣ್ಣಲ್ಲಿ ಹೊಗೆ

ಸಕ್ಕರೆ ಬೆರೆಸುತ್ತ ಕಾಫಿಗೆ
ಅವಳುಲಿದರೆ ಏನು...
ಅಂದ್ರೆ
ಅಂದರೂ ಸಾಕು
ಅವನ ಕಣ್ಣಲ್ಲಿ ಜೇನು

ಬೆಳಿಗ್ಗೆ ಅವಳು
ನೀಡುವ ಕಾಫಿ
ಕಹಿಯಿದ್ದರೂ ಸರಿಯೆ
ಅದು ಅವನಿಗೆ
ಕಾಫಿಡೇ

ಅವನ ಮೂಡೆಲ್ಲ
ಕಾಫಿಯ ಹಾಗೆಯೇ
ಒಮ್ಮೊಮ್ಮೆ ಕಹಿ
ಇನ್ನೊಮ್ಮೆ ಸಿಹಿ
ಒಮ್ಮೊಮ್ಮೆ ನೊರೆಭರಿತ
ಇನ್ನೊಮ್ಮೆ ರಸರಹಿತ

ಅವಳೊಮ್ಮೆ ಮುನಿದರೆ ಥೇಟ್
ಉರಿವ ಸಿಗರೇಟ್
ಉರಿವವಳ ಸೇದುತ್ತ
ಆವರಿಸಿ ಆರಿಸುವ
ಅವನ ಕಣ್ಣಲ್ಲಿ ಹೊಗೆ

ಸಕ್ಕರೆ ಬೆರೆಸುತ್ತ ಕಾಫಿಗೆ
ಅವಳು ಏನು...
ಅಂದ್ರೆ
ಅಂದರೂ ಸಾಕು
ಅವನ ಕಣ್ಣಲ್ಲಿ ಜೇನು

ಬೆಳಿಗ್ಗೆ ಅವಳು
ನೀಡುವ ಕಾಫಿ
ಕಹಿಯಿದ್ದರೂ ಸರಿಯೆ
ಅದೇ ಅವನ
ಕಾಫಿಡೇ

ಅವನ ಮೂಡೆಲ್ಲ
ಕಾಫಿಯ ಹಾಗೆಯೇ
ಒಮ್ಮೆ ಕಹಿ ಇನ್ನೊಮ್ಮೆ ಸಿಹಿ
ಒಮ್ಮೆ ನೊರೆಭರಿತ
ಒಮ್ಮೊಮ್ಮೆ ರಸರಹಿತ


July 1, 2008

ಕಾಡುಮಲ್ಲಿಗೆಯ ಬಿಂದಿಗೆಯ ಹುಡುಗಿ

ಕಣ್ಣ ಹೂಜೋಡಿ ಅರೆಬಿರಿದು ನಕ್ಕು
ಹೊತ್ತ ಬಿಂದಿಗೆ ನಾಚಿ ಹಗಲು ಬೆಳದಿಂಗಳು
ಕಾಡಮನೆಯೊಳಗೆ ಕೋಗಿಲೆಯ ಕೂಗು
ನಿಂತ ಮನಜಲಕು ಸರಸರನೆ ಹರಿವು

ಹೂವು ಹಾಸಿದೆ ಹದದಿ ಹಾರಿದೆಯ ಜೇನೆ
ಮಕರಂದ ತಳದಲ್ಲಿ ಕಾಣದೇನೆ
ಅಕ್ಕಿ ಹರವಿದೆ ಮರಮನೆಯ ಬುಡದೇನೆ
ಗುಬ್ಬಚ್ಚಿ ಮರಿಯೆ ನೀನಿಲ್ಲವೇನೆ

ನಗುವೆಯಲ್ಲೆ ಮಳ್ಳಿ ಮುಗುಳುಸುಮವೆ
ಭ್ರಮರನಾದವ ಕೇಳೆ ನಿನಗು ಭ್ರಮೆಯೇನೆ
ಕಾಡಮಲ್ಲಿಗೆ ಹೂವೆ ನಿನಗೇನು ಬೇಕೆ
ದಂಡೆಮುಡಿವವಳ ನೀಳಜಡೆ ಸಾಕೆ

ಒಂಟಿ ಮರದಡಿ ಹುಡುಗ ಒಂಟಿಯೇನಲ್ಲ
ಬಿಂದಿಗೆಯ ಹುಡುಗಿ ನದಿಯ ದಾಟಿಲ್ಲ
ಕಾಡುಮಲ್ಲಿಗೆ ಅರಳುವುದು ಸಂಜೆಯಲಿ
ಮಲ್ಲಿಗೆ ಮಾಯೆಗೆ ಬಿಂದಿಗೆಯು ತುಂಬಿಲ್ಲ