June 29, 2008

ಭಾವ ಬನ

*ಹೊಂದಾಣಿಕೆ*
ಅವನ ಹೊಸ ಮನೆ
ನನಗದು ಹಳೆಯ ಅಂಗಳ
ಅವನ ಹಳೆಮನ
ಹೊಸ ಕಿನ್ನರಿಯರ ಕಿನ್ನರಿ
ಇದು ಅವನದೇ ಹೊಸಬಿಂಬ
ನಾನು ಹಳೆಯ ಕನ್ನಡಿ

*ವಿಪರ್ಯಾಸ*
ಅವನ ಕಾಫಿತಳದಿಳಿದು
ಕರಗಿದ ಸಕ್ಕರೆ
ಇವನ ಟೀಯುಗುಳಿದ
ಹಬೆಯಿಂದೆದ್ದು ಬಂದದ್ದು!*ಸಂಬಂಧ*
ಕಳಚಿಕೊಂಡಷ್ಟೂ ಕೂಡಿ
ಕೂಡಿದ್ದೆಲ್ಲ ಕಳಚಿ
ಕಳೆದುಕೂಡಿ
ಕೂಡಿಕಳೆದು
ಕಳೆದದ್ದನ್ನೇ ಕಳೆದು
ಕೂಡಿಸಿದ್ದನ್ನೇ ಕೂಡಿಸಿ
ಕಾಯುತ್ತ ಕೊಲ್ಲುವ
ಕಾಗುಣಿತಗಣಿತ ಕೊಂಡಿ

*ನನ್ನ ಸಾಲು*
ಹೊಸಸಾಲಿಗೂ ಬೇಕು
ಓಬಿರಾಯನ ಉಪಮಾ
ಹಳೆಯರೂಪಕಕ್ಕೆ
ಹೊಸತನದ ಟೀಕೆ
ಓಬಿರಾಯಗೆ ತೃಪ್ತಿ
ಕವಿಗಳಿಗೊಂದಷ್ಟು ಸಾಲು ದಕ್ಕಿದ್ದಕ್ಕೆ

June 12, 2008

ಬೆಳದಿಂಗಳ ಕರೆಯೋಲೆ...

ಅವನು ಯಾವಾಗಲೂ ಹಾಗೆಯೇ... ಮುಸ್ಸಂಜೆಯ ಚಾದರಹೊದ್ದು ಮಲಗಿಬಿಡುತ್ತಾನೆ. ಅವನಿಲ್ಲ ಅಂದರೆ ನಮಗೇನು ಬೆಳಕೇ ದಕ್ಕದೋ..? ಇವನಿದ್ದಾನಲ್ಲಾ .....ಒಂಟಿಜೀವದ ನಿಟ್ಟುಸಿರೊಂದು ಮನೆಯಂಗಳದಲ್ಲಿ ಲೀನವಾಗುತ್ತದೆ.
ಮುಸ್ಸಂಜೆಯ ಮನೆಯೊಳಗೆ ದೀಪವನ್ನಿಟ್ಟು
"ಬಿದಿಗೆ ಚಂದ್ರ ಬಂದ ನೋಡು....ದೀಪ ಹಚ್ಚಿದಂತೆ ಜೋಡು...ಯಾರ ಮನೆಯು ಅಲ್ಲಿ ಇಹುದೋ ಯಾರು ಬಲ್ಲರು..."
ಗುನುಗುಡುತ್ತ ಕಿಟಕಿಯಾಚೆಗಿನ ಆಗಸ ನೋಡಿದರೆ....
"ಶಶಿಬಿಂದುಧರ...ನಸುನಗೆಯ ಮಧುರ ಮಂದಾರ ಗಂಧ ಚೆಲ್ಲಿ..."
ಹತ್ತು ವರ್ಷಗಳ ಹಿಂದೆ ಅವನೊಡನೆ ಆ ಬೆಟ್ಟದ ಮೇಲಿನ ಬಿಳಲು ಮರದಾಚೆಯ ಕಲ್ಲಿನಆಲಯವೊಂದಕ್ಕೆ ಹೋಗಿ ಬಂದ ನೆನಪು ಪ್ರತಿಹುಣ್ಣಿಮೆಯಲ್ಲೂ ಕಾಡುತ್ತದೆ. ಪ್ರತಿ ಪೌರ್ಣಿಮೆಗೂ ಒಂದೊಂದು ಹೊಸಹಾಡು ಆ ದಿಕ್ಕಿನಿಂದ ಹರಿದುಬರುತ್ತೆದೆ. ಹಾಗಾದರೆ ಅವಳಿನ್ನೂ ಇದ್ದಾಳೆ. ಇರಲೇಬೇಕು, ಹಾಡು ಕೇಳಿಸುತ್ತಿದೆಯಲ್ಲಾ!
ಹುಣ್ಣಿಮೆಯ ಚಂದ್ರನ ಸುತ್ತ ಹಾಡೊಂದು ಹಸನಾಗಿ ಹರಿದಾಡುತ್ತದೆ. ದೂರದ ಗುಡ್ಡದ ಮೇಲಿನ ಆಗಸದಜೋಪಡಿಯೊಂದರಲ್ಲಿ ಲಾಟೀನು ತೂಗಾಡುತ್ತಿದೆ. ಹೌದು..ಅವಳೇ...ಅವಳೇ ಸರಿ...ಹಾಡುತ್ತಿದ್ದಾಳೆ, ಲಾಟಿನಿನ ಬೆಳಕು ಅವಳನ್ನೆಲ್ಲ ಮುತ್ತಿಕೊಂಡಿದೆ . ಹೌದು..ಅವಳೇ..ತುಟಿಬಿರಿಯದೆಯೇನಗುತ್ತಿದ್ದಾಳೆ. ತುಸುಬೆಳಕಿನಲ್ಲಿ ನಸುನಗುವೊಂದು ಹಾಸಿ ಹಾಯ್ದುಹೋಗುತ್ತದೆ.
ಹುಣ್ಣಿಮೆಯೊಂದು ಬಂದು ಮನೆಯಂಗಳದಲ್ಲಿ ಚೆಲ್ಲಪಿಲ್ಲಿಯಾಗಿ ಮನಸುಬಂದಲೆಲ್ಲ ಹುಚ್ಚಾಗಿ ಹರವಿಕೊಂಡಿದೆ. ಇವತ್ತು ಬೆಳದಿಂಗಳು! ಬಂದು ನಮ್ಮನೆಲ್ಲ ಕರೆಯುತ್ತಿದೆ. ಬೆಳದಿಂಗಳಿಗೇಕೋ ಬೇಸರವಂತೆ ಬರೀ ನೆನಪು ಕನಸುಗಳ ನಡುವಿದ್ದು. ಬೆಳದಿಂಗಳು ಕಾಡುತ್ತದೆ "ಶ್ರಾವಣದ ಮಳೆಯಲ್ಲಿ ನೆನೆದಾಡಬೇಕು. ಬಂದು ಬೆಚ್ಚಗೆ ಅಮ್ಮನ ಮಡಿಲಲ್ಲಿ ಮಲಗಿ ಮಗುವಾಗಬೇಕು" ಅಂತ.
ನಸುಗತ್ತಲ ಹಾದಿಯಲ್ಲೇ ಅವಳನ್ನು ಶ್ರಾವಣದ ಮಳೆಯತ್ತ ಕರೆದೊಯ್ಯುತ್ತಿದ್ದೇನೆ. ಅಮ್ಮನ ಮಡಿಲು ಕೈಬೀಸಿ ಕರೆಯುತ್ತಿದೆ. ನಸುಬೆಳಕಿನ ಹಾದಿ. ಕೈಯ್ಯಲ್ಲೊಂದು ಬೆಳಗುವ ಹಣತೆಯಿದೆ. ಜೊತೆ ಅವಳೂ ಬೀರಿದ ಬೆಳಕು. ತಡವುತ್ತ ಎಡವುತ್ತ ಹಾದಿ ಹುಡುಕುತ್ತಿದ್ದೇನೆ. ಅಲ್ಲಿ ತುಸು ಮುಂದೆ ನನ್ನವರೆಂಬ ನೀವೆಲ್ಲ ಇದ್ದೀರಿ .ಪ್ರತಿ ಕೈಯ್ಯೊಳಗೂ ಒಂದೊಂದು ಹಣತೆ, ಇನ್ನಷ್ಟು ಬೆಳಕು. ಧೈರ್ಯ ಉಮ್ಮಳಿಸಿಬಂದು ನಿಮ್ಮೆಡೆಗೆ ಧಾವಿಸುತ್ತೇನೆ.ಮುಂದೆ ಕಾಡು, ಬೆಳದಿಂಗಳು ಹಿಂದೆ ಹಿಂದೆ. ಈಗ ನಿಮ್ಮೆಲ್ಲರೊಟ್ಟಿಗೆ ಶ್ರಾವಣದ ಮಳೆಯಲ್ಲಿ ತೋಯ್ದು ಅಮ್ಮನ ಮಡಿಲಿಗೆ ಧಾವಿಸುತ್ತೇನೆ. ಅಮ್ಮನ ಕೈ ಮಗುವಿನ ಮನವನ್ನು ಮೃದುವಾಗಿ ನೇವರಿಸುತ್ತದೆ. ಬೆಳದಿಂಗಳು ಮುಗ್ಢವಾಗಿ ಅಮ್ಮನನ್ನೇ ನೋಡುತ್ತದೆ. ಮನಸ್ಸು ಹಗುರಾಗಿ ನಿಟ್ಟುಸಿರೊಂದು ಬೆಳದಿಂಗಳೊಳಗೆ ಕರಗುತ್ತದೆ. ಶ್ರಾವಣದ ಮಳೆಯಂಗಳದೆದುರು ನಾವೆಲ್ಲ! ಅಮ್ಮ ಅಲ್ಲಿಯೇ ನಿಂತು ನಮಗಾಗಿ ಕಾಯುತ್ತಿದ್ದಾಳೆ...
ಈಗ ಎಲ್ಲರ ಮೊಗದಲ್ಲೂ ನಗು. ಬೆಳದಿಂಗಳು ಮುಂದಕ್ಕೆ ಧಾವಿಸಿ ನಮ್ಮನೆಲ್ಲ ಕರೆಯುತ್ತದೆ "ಬನ್ನಿ, ಬನ್ನಿ..." ಎನ್ನುತ್ತ ಸುತ್ತಲಿನ ಶ್ರಾವಣದಲ್ಲಿ ಹರವಿಕೊಂಡು ಮಳೆಯಮಡಿಲಲ್ಲಿ ನೆನಪು ಕನಸುಗಳ ನಡುವೆ ಬೆರೆತುಹೋಗುತ್ತದೆ.

June 7, 2008

ಭಾವ ಬನ

*ಆಕಸ್ಮಿಕ*

ನಾ ಹೋದಲ್ಲೆಲ್ಲ
ನೀ ನೆರಳಾಗಿ
ನಿಲ್ಲುವುದು!

ಬಿಸಿಲು ಬೆನ್ನುಬಿಡದೇ
ನನ್ನ ಸುತ್ತ
ನಿನ್ನಾಡಿಸುವುದು!

ತಂಪನ್ನರಸಿ ನೀ
ನನ್ನೆಡೆಗೆ
ವಾಲುವುದು!
________________


*ಆಘಾತ*


ನನ್ನದೇ ನೆನಪಲ್ಲಿ
ನೀ ನನ್ನ ಮರೆತಿದ್ದು!
ನಿನ್ನ ಮರೆತಾದ
ಮೇಲೆ
ನೀನೆದುರು ಕಂಡಿದ್ದು!
_______________


*ಅಸೂಯೆ*


ಅಂದು ನೀ ತೋರಿಸಿದ
ಅಸ್ತವಾಗುತಲಿದ್ದ
ಅದೇ ಸೂರ್ಯ
ಉದಯವಾಗುವುದ ಕಂಡು
ನಾನಿಂದು ನಕ್ಕಾಗ!
_______________


*ಏಕಾಂತ*

ಗುಂಪೊಳಗೆ ನಾ
ಹಾಯಾಗಿರುವ
ನೀ ಕಾಡದ ಹೊತ್ತು
_______________

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.