May 29, 2008

ಜೇನಿನ ರವಿ

ಅವನು VIP
ಸಮಯ ಮಿಕ್ಕಿದರೆ ಸಿಗದ ಪೋರ
ಜಾರಿರುತ್ತಾನೆ ಮಾಟಗಾರ
ಎಲ್ಲೆಂದರಲ್ಲಿ ಸಿಕ್ಕದ ತುಂಟ
ಜೇನುಕಲ್ಲು ಗುಡ್ಡದ ನಡು
ದಿನಕೆರಡು ದರ್ಶನ
ಮುಂಜಾವಿನ ಏಳು ನಡುಸಂಜೆಯ ಆರು
ಭೇಟಿ ನೀಡುವ ಸಮಯ
ಸಂಜೆಗೆ ಮೊದಲು ಸುಡುವ
ಅಗ್ನಿಯುಂಡೆಜ್ವಾಲೆ
ಸಂಜೆ ಪರದೆ ಸರಿದಂತೆ
ಲಜ್ಜೆಯಿಂದ ಕೆಂಪುಕೆಂಪಾಗಿ
ಲಗ್ಗೆ ಹಾಕಿ ಕಚಗುಳಿಯಿಟ್ಟು
ಸಂಜೆ ಏರುವಾಗ ಇಳಿದುಬಿಡುತ್ತಾನೆ

ನೋಟದಲ್ಲೇ ಭೇಟಿಯ ತೀರಿಸಿ
ಮಾತಿಲ್ಲದೇ ಮೋಡಿ ಹಾಕಿ
ಕಂಡೂ ಕಾಣದಂತೆ ಜಾರುತ್ತಿದ್ದಾನೆ
ಈಜಿಪ್ತ್ ಸೇರುತ್ತಿದ್ದಾನೆ
ಘಟ್ಟದಿಂದ ಹಾರಿಯಾದರೂ
ಜಾರಿ ಅಡಗುವ ಚೋರನ
ಹಿಡಿದು ಹೀರುವ ತವಕ
ಪುಟ್ಟಹಿಡಿಯಲಿ ಗಬಕ್ಕನೆ ಹಿಡಿದು
ಬೊಗಸೆಯಲಿಟ್ಟು ಸ್ಪರ್ಶಿಸುವ ಬಯಕೆ
ಕೆಂಪುಗುಲಾಬಿಯ ಅರೆದು ಕುಡಿದವನ
ಗುಡಿಕಟ್ಟಿ ಕೂಡಿಬಿಡುವುದು ಕನಸು

ಕೆಂಪಾದರೂ ತಂಪಾಗಿ
ಕಂಡವರಲ್ಲೆಲ್ಲಾ ಝಂಡಾ ಊರಿದವಗೆ
ಮನದ ತುಂಬೆಲ್ಲ ಹರಿದು ಸರಿದವಗೆ
ಮುಚ್ಚಿದ ಒಳಗಣ್ಣ ತುಂಬ
ಕುಣಿವ ಆದಿತ್ಯಂಗೆ ಜಂಭವಿರಬೇಕು
ತಾನು ಯಾರ ಕೈಗೂ ನಿಲುಕದ ಚೆಲುವನೆಂದು

ಜೇನುಕಲ್ಲುಗುಡ್ಡದ ಮೇಲೆ
ಜೇನುಸುರಿದು ಸರಿದವನ
ಮರಳಿ ನೋಡಿದರೆ ಇಂದು ಇನ್ನಿಲ್ಲ
ಬಿಟ್ಟುಹೋದದ್ದು ನನ್ನೊಬ್ಬಳನ್ನಲ್ಲ
ಸುತ್ತ ಕತ್ತಲಲಿ ನನ್ನಂತೆ ರೋಧಿಸುವ
ಹರಿತ್ತಿನ ಸಪ್ತಗುಡ್ಡಗಳಿವೆಯಲ್ಲ!
ಅದೇ ಸಮಾಧಾನ!

(ಪದವಿಯ ಅಂತಿಮ ವರ್ಷ(೨೦೦೦ ಜನವರಿ)ದಲ್ಲಿದ್ದಾಗ ಭೂಗೋಳಶಾಸ್ತ್ರವಿಭಾಗದ ಅಧ್ಯಯನ ಪ್ರವಾಸ ನಿಮಿತ್ತ ಜೇನುಕಲ್ಲುಗುಡ್ಡಕ್ಕೆ ಹೋಗಿಬಂದ ದಿನ ಬರೆದದ್ದು, ಅಂದು ಈ ಸಾಲುಗಳಿಗೆ "ಜೇನಿನ ರವಿ" ಶೀರ್ಷಿಕೆ ಕೊಟ್ಟ ರಾಘವೇಂದ್ರ ಬೆಟ್ಟಕೊಪ್ಪ ಅವರಿಗೆ ಧನ್ಯವಾದಗಳು)

May 16, 2008

ಪುಟ್ಟಿಯ ಕಥೆಗಳು


ಪುಟ್ಟಿ ಪುಟ್ಟನ ಕೈಹಿಡಿದು ನಿದ್ರೆ ಮಾಡ್ತಾ ಇದ್ಲು. ಪುಟ್ಟಿಯ ಮುಖವನ್ನೇ ಕಣ್ಣಲ್ಲಿ ತುಂಬಿಕೊಂಡ ಪುಟ್ಟ ನಿದ್ರೆ ಹೋಗಿದ್ದ. ನಿಧಾನಕ್ಕೆ ಪುಟ್ಟನ ಕೈಯಿಂದ ತನ್ನ ಕೈ ಕಳಚಿಕೊಂಡೆದ್ದ ಪುಟ್ಟಿ ಕಿಟಕಿಯಲ್ಲಿ ನಿಂತಿದ್ದಳು ಮರದಲ್ಲಿನ ಹಳದಿಯ ಹೂವುಗಳಿಂದ ನೆಲವನ್ನು ಮೆದುವಾಗಿ ಪುಟ್ಟನಿಗೆಚ್ಚರವಾಗದಂತೆ ಮುತ್ತಿಡುತ್ತಲಿದ್ದ ಮಳೆಹನಿಗಳನ್ನೇ ನೋಡುತ್ತಾ . ಪುಟ್ಟನ ನಿದ್ರೆಯೊಳಗಿಂದ ಹೊರಬರುತ್ತಿದ್ದ ಉಸಿರು ಪುಟ್ಟಿಯ ಮನದೊಳಕ್ಕಿಳಿದು ಪುಟ್ಟಿಯ ಮೌನಕ್ಕೆ ಜತೆಯಾದವು.


ಆಕ್ಟೋಬರ್ ತಿಂಗಳು ಕಳೆದೇ ಹೋಯ್ತು. ಆವತ್ತು ಪುಟ್ಟಿ ಪುಟ್ಟನ ಹುಟ್ಟು ಹಬ್ಬಕ್ಕೆ ವಿಶ್ ಮಾಡೋದನ್ನೇ ಮರೆತಿದ್ಲು. ದಿನ ಕಳೆದು ಮರಗಳಲ್ಲಿ ಮೇ ಫ್ಲವರ್ ಅರಳಿತ್ತು.
ಆ ದಿನಗಳ ಒಂದು ಸುಂದರ ಮುಂಜಾವಿನಲ್ಲಿ ಪುಟ್ಟಿಯ ಮೊಬೈಲಿಂದ ಎಂದೋ ರೆಕಾರ್ಡ್ ಆಗಿದ್ದ ಪುಟ್ಟನ ಧ್ವನಿ ರಿಂಗಣಿಸಿತು "ಹ್ಯಾಪೀ ಬರ್ಥ್ ಡೇ ಕಣೇ ಪುಟ್ಟೀ....." ಅಂತ.
ಪುಟ್ಟಿಯ ಕಣ್ಣಂಚು ತೇವವಾಗಿ ನಗುವ ಹನಿಯೊಂದು ಪಿಸುಗುಟ್ಟಿತು "ನಿಂಗೆ ನನ್ ಮೇಲೆ ಬೇಜಾರಿಲ್ಲ ತಾನೇ ಪುಟ್ಟಣ್ಣಾ?" ಮೊಬೈಲನ್ನೆ ಮುತ್ತಿಕ್ಕಿದಳು ಪುಟ್ಟನ ಅಪ್ಪಿಕೊಂಡಂತೆ.



ಪುಟ್ಟ ಪುಟ್ಟಿಯನ್ನ ಕೇಳ್ತಾ ಇದ್ದ " ಮೆಸ್ ಬಿಲ್ ಕಟ್ಬೇಕು, ಒಂದು ರೂಪಾಯಿ ಕಡ್ಮೆ ಇದೆ, ಕೊಡ್ತೀಯಾ ಪುಟ್ಟೀ..."
ಪುಟ್ಟಿ ಹೇಳಿದ್ಲು "ಇಲ್ಲ ಕಣೋ...ನನ್ ಹತ್ರ" ಪುಟ್ಟಿ ಕೊಡ್ಲಿಲ್ಲ.
"ಇವತ್ತು ಒಂದು ರೂಪಾಯಿ ಗಳಿಸ್ಕೋ...ನಾಳೆ ಅಂಥ ಲಕ್ಷರೂಪಾಯಿ ಸಂಪಾದಿಸೋ ಮಾರ್ಗ ಸಲೀಸಾಗಿ ಕಾಣಿಸುತ್ತೆ." ಅಂತ ಪುಟ್ಟಿಯ ಕಣ್ಣುಗಳು ಪುಟ್ಟನ್ನ ಹಾರೈಸ್ತಾ ಇದ್ವು. ಪುಟ್ಟಿಯ ಕಣ್ಣುಗಳನ್ನೇ ಅಮಾಯಕನಾಗಿ ನೋಡುತ್ತ ನಿಂತಿದ್ದ ಪುಟ್ಟ "ಸರಿ ಕಣೇ..." ಅಂದವನು ಅವಳ ಕಣ್ಣುಗಳಿಂದಾಚೆ ಮರೆಯಾಗಿಬಿಟ್ಟ. ಪುಟ್ಟಿಯ ಕಣ್ಣುಗಳು ಪುಟ್ಟನ ಬೆನ್ನಟ್ಟಿಹೋದವು ಪುಟ್ಟನ ಕೈಯಲ್ಲಿ ಕಡಿಮೆಯಿರುವ ಒಂದು ರೂಪಾಯಿಯನ್ನು ಹುಡುಕುತ್ತಾ.

May 8, 2008

ಇರುವುದೆಲ್ಲವ ಬಿಟ್ಟು.......

ಯಾರಲ್ಲೋ ಜನನ, ಎಲ್ಲೊ ಇರುವ ಯಾರಿಗಾಗಿಯೋ ಕಾದು, ಎಲ್ಲೋ ಸೇರಬೇಕಾದವರು ಮತ್ತೆಲ್ಲೋ ಸೇರಿ, ಯಾರೋ ತಿಳಿಯದವರೊಬ್ಬರಿಗಾಗಿ ಯಾರೆಂದೂ ಅರಿಯದ ಯಾರ್ಯಾರೋ ನಡುವೆ ಯಾಂತ್ರಿಕ ಉಸಿರಾಟದೊಂದಿಗಿನ ಪ್ರಶ್ನಾರ್ಥಕ ಬದುಕು.

ನಿಂತು ನಿಂತು ಸೋತು ಸೋರಿ ಸೊರಗಿ ಇಂಗಿ ನೆಲವ ತಣಿಸಲಿದ್ದ ನೀರು ಭರಭರನೆ ಎಣೆಯಿಲ್ಲದೆ ಧುಮುಕುವ ಮಳೆಯೊಟ್ಟಿಗೆ ಸಾಗಿ ಸಾಗರ ಸೇರಿ ಬಯಲೊಳಗೆ ನಿರಾಳವಾಗಿ ಹರಿದು ಇಂಗಲಿದ್ದ ನೀರು ಸಾಗರದಾಳದಿ ಉಸಿರುಗಟ್ಟಿ ಕೊನೆಯುಸಿರೆಳೆಯಬಹುದೇ? ಸಾಗರದೊಟ್ಟಿಗೆ ಬೆಸೆದುಹೋಗಿ ಹೊಸಜನ್ಮತಳೆದು ನಿರಂತರ ಅಲೆಯಾಗಬಹುದೇ? ಎಲ್ಲೆಲ್ಲೂ ಪ್ರಶ್ನೆಗಳು, ಪ್ರಶ್ನಾರ್ಥಕ ಬದುಕು.

ಮರುಳುಮನಸು, ಕ್ಷಣಕೊಬ್ಬರ ನೆನಪು, ಕ್ಷಣದಲ್ಲಿ ನೆನೆದವರ ಕಾಣುವ ಹಂಬಲ, ಕಂಡೊಡನೆ ಇನ್ನೊಬ್ಬರ ನೆನಪು, ಕಾಣುವ ಹಂಬಲ. ಎದುರಿದ್ದವರ ಬೆಲೆ ಅರಿಯುವುದು ಇನ್ನಿಲ್ಲವಾದಾಗ. ಎಲ್ಲರೂ ಬೇಕು ಇಲ್ಲವಾದಾಗ. ಯಾರೂ ಬೇಡವಾಗುತ್ತಾರೆ ಎಲ್ಲರೂ ಇರುವಾಗ. ಇನ್ನೊಮ್ಮೆ ಬೇಕಾಗುತ್ತಾರೆ ಏನೂ ಇಲ್ಲವಾದಾಗ, ಯಾರೂ ಬೇಡವಾಗುತ್ತಾರೆ ಎಲ್ಲವೂ ಇರುವಾಗ, ಇನ್ನೊಮ್ಮೆ ಬೇಕಾಗುತ್ತಾರೆ ಏನೂ ಇಲ್ಲವಾದಾಗ! ಬದುಕು ಪ್ರಶ್ನಾರ್ಥಕವಾದಾಗ. ಹುಚ್ಚುಮನಸ್ಸು ಹುಚ್ಚು ಆಸೆಗಳ ಶಿಖರವೇರುತ್ತದೆ. ಯಾಕಾಗಿ? ಪ್ರಶ್ನೆ ಮತ್ತೊಂದು. ಹುಚ್ಚುಮನಸ್ಸು ಹುಚ್ಚಿನ ಶಿಖರ ಕಾಣುತ್ತದೆ, ಅಲ್ಲಿಂದ ನೆಗೆವ ಕನಸು ಕಾಣುತ್ತದೆ, ಕನಸಿನಲ್ಲೆ ಕೊನೆಕಾಣುತ್ತದೆ, ನನಸುಗಳೆಲ್ಲ ಶಿಖರಕ್ಕಿಂತಲೂ ತುತ್ತತುದಿಯಲ್ಲಿ ಕಾಣಿಸುತ್ತಲಿರುತ್ತವೆ. ಮತ್ತೊಮ್ಮೆ ಹತ್ತಿರವಾದಂತೆ ಭಾಸ. ಬೆನ್ನಟ್ಟಿ ಗಾಳಿಯಲ್ಲಿ ಓಡುತ್ತದೆ ನನಸಿನ ಬೆನ್ನು ಹತ್ತುವ ಅತಿರೇಕ ಹುಚ್ಚು.

ಹಿತ್ತಲಿನ ಗಿಡದ ಹಸಿರೆಲೆ ನಗುತ್ತದೆ ಯಾರನ್ನು ನೋಡಿ? ಯಾರನ್ನೂ ನೋಡಿ ನಗುವುದಿಲ್ಲ, ಎಲ್ಲ ಭ್ರಮೆ. ಯಾರಿಗಾಗಿಯೂ ಯಾರೂ ಯಾರೊಂದಿಗೂ ನಗುವುದಿಲ್ಲ. ಅವರಿಗಾಗಿ ಅವರು ನಗುತ್ತಾರೆ, ಉಸಿರಾಡುತ್ತಾರೆ, ಕೊನೆಯಲ್ಲಿ ಯಾರಿಗಾಗಿಯೋ ಯಾರೂ ಸಾಯುವುದಿಲ್ಲ. ಎಲ್ಲ ಅವರವರಿಗಾಗಿ ಹೊರತು ಪರರಿಗಲ್ಲ. ನೋವಿನ ಕಾಳನ್ನೇ ಹೆಕ್ಕಿ ಹೆಕ್ಕಿ ಉಣ್ಣುವ ಹಕ್ಕಿಗೆ ಸಾವಿನಲ್ಲೂ ಇರುವುದಿಲ್ಲವೇನೋ ಸುಖ. ಸಾವು? ಯೋಚನೆ ಇನ್ನಷ್ಟು. ಹೌದು, ಸತ್ತಾಗ ಯಾರ್ಯಾರು ಸಿಗಬಹುದು? ಸಾವಿನೊಳಗೆ ಮತ್ತೊಂದು ಸಾವಿದ್ದರೆ? ಆಗ ಸತ್ತರೂ ಮತ್ತೆ ಬದುಕಿದಂತಲ್ಲವೆ? ಸತ್ತವರಿಗಾಗಿ ಸಾವ ಕಂಡವರು ಸುಖದಲ್ಲಿ ಮೆರೆಯುತ್ತಿರಬಹುದೆ? ಸತ್ತವರಿಗಾಗಿ ಸಾವ ಕಂಡವರು ಸೇರಬೇಕಾದವರನ್ನು ಸೇರಿರಬಹುದೆ? ತಿಳಿಯನ್ನೆಲ್ಲ ಸುರುಳಿ ಸುರುಳಿಯಾಗಿ ಕಲಕಿಕೊಳ್ಳುತ್ತದೆ ಮರುಳು ಮನಸ್ಸು.

ಹುಚ್ಚುಮನಸ್ಸು ಕೈಯಿಂದ ಬರೆಸುತ್ತದೆ. ಕೈ ಬರೆಯುವುದರೊಳಗೆ ಮನಸು ಮತ್ತೇನನ್ನೋ ಯೋಚಿಸಿ ಕೈ ಬರೆಯುತ್ತಲಿರುವುದನ್ನೇ ಮರೆತು ಯೋಚಿಸುತ್ತದೆ. ಆದರೂ ಕೈ ಕಾರ್ಯ ನಿರ್ವಹಿಸುತ್ತಲೇ ಇರುತ್ತದೆ, ಎಲ್ಲವೂ ವಿಪರ್ಯಾಸವೆನಿಸಿ ಬಿಡುತ್ತದೆ. ಓದಿದಾಗ "ಹುಚ್ಚು ಬರಹಗಳು" ಎದ್ದು ಕಂಡಾಗ ನಗುತ್ತದೆ ಮರುಳು ಮನಸ್ಸು. ಒಮ್ಮೆ ಹುಚ್ಚು ಮನಸ್ಸೇ ನೇರ ಹಾಳೆಯ ಮೇಲೆ ಬರೆದಿದ್ದರೆ! ಒಂದು ನಗುವಿನೊಂದಿಗೆ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ನಿನ್ನೆ ಕಂಡವರನ್ನೆ ನಾಳೆ ಕಾಣಬಯಸುವುದು ಮರುಳು ಮನಸ್ಸು. ಬೇರೊಬ್ಬರನ್ನು ಕಾಣಿಸುವುದು ವಿಧಿಯ ವಾಸ್ತವತೆ. ನಿನ್ನೆ ಇದ್ದವರು ಇಂದಿಲ್ಲ. ಇಂದಿದ್ದವರು ನಾಳೆಯಿಲ್ಲ. ನಾಳೆ ಕಾಣುವವರು ಹಿಂದೆ ಕಂಡವರೇ ಆಗಿರುವುದಿಲ್ಲವಲ್ಲ! ಹೋಗಿ ಬರುತ್ತೇನೆ ಎನ್ನುವಾಗ ಅಳುತ್ತದೆ ಹುಚ್ಚು ಮನಸ್ಸು. ನಗುತ್ತಿರುವ ಇಂದಿನ ಮನಸ್ಸು ‘ಅಳುವೆನ್ನುವುದಿದೆ’ಯೆನ್ನುವುದನ್ನೇ ಮರೆತು ನಗುತ್ತದೆ. ನಾಳೆಯನ್ನೆಲ್ಲ ನಿನ್ನೆಯನ್ನಾಗಿಸುವ ಇಂದಿನ ಇಂದು ನಕ್ಕ ಮನಸುಗಳೆಲ್ಲ ನಗುವುದು ದುಗುಡ ಮರೆಯುವುದಕ್ಕಾಗಿಯೇನೋ ಎನಿಸಿಬಿಡುತ್ತದೆ. ನಾಳೆಯ ಗಂಭೀರತೆಗೆ ಕಾಲಿಡುವಾಗಲೂ ನಗುತ್ತ ಒಳಗೊಳಗೆ ಅಳುತ್ತದೆ ಮರುಳು ಮನಸ್ಸು. ತನ್ನ ಗೂಡಿಗೆ ತಾನು ತೆರಳುವಾಗಲೂ ‘ಹೋಗಿ ಬರುತ್ತೇನೆ’ಎನ್ನುವಾಗ ಅಳುತ್ತದೆಯೇಕೆ ಹುಚ್ಚು ಮನಸ್ಸು!
ಬದುಕೆಂದರೆ ಇವಿಷ್ಟೇ ಆಗಿರಬಹುದೆ?

ಪ್ರಶ್ನೆಗಳೇ ಸುರಿಯುವಾಗ ಉತ್ತರಕ್ಕಾಗಿ ಏಕಾಂಗಿತನಕ್ಕೆ ಮೊರೆಹೊಕ್ಕುತ್ತದೆ ಮರುಳುಮನಸ್ಸು. ಅಲ್ಲಿ ಶೂನ್ಯವು ಮನದ ತುಮುಲಗಳಿಗೆ ಸ್ಪಂಧಿಸುತ್ತದೆ. ಜಗತ್ತಿನ ಜನರಲ್ಲಿ ಒಬ್ಬರ ನೆನಪಾದರೂ ಸಾಕು, ಶೂನ್ಯದಿಂದ ಬಯಲಿಗೆ ಬೀಳುತ್ತದೆ ಮರುಳು ಮನಸ್ಸು. ಶೂನ್ಯದಲ್ಲಿ ಕಂಡಿದ್ದೂ ಸಹ ಬಯಲಲ್ಲಿ ಕಾಣದಾದಾಗ ಕೊರಗುವ ಹುಚ್ಚುಮನಸ್ಸುಗಳೇ ಹೆಚ್ಚು.

"ಇರುವುದೆಲ್ಲವ ಬಿಟ್ಟು ಇರದುದರೆಡೆ ತುಡಿಯುವುದೇ ಜೀವನ" ಇರುವುದೆಲ್ಲವ ಬಿಟ್ಟು ಇರದುದರೆಡೆ ತುಡಿಯುವುದು ಮನಸು ಕೂಡ ಎಂದೆನಿಸಿಬಿಡುತ್ತದೆ. ಅಲ್ಲವೆ? ಮತ್ತೆ ಪ್ರಶ್ನೆಯೇ ಪ್ರಶ್ನಾರ್ಥಕವಾದಾಗ ಬದುಕು ಪ್ರಶ್ನಾರ್ಥಕ.

*****************************************************************************

[೧೯೯೭ರಲ್ಲಿ ಬರೆದದ್ದಂತೂ ನೆನಪು. ದಿನಾಂಕ ನೆನಪಿಲ್ಲ. ಮರಳುತ್ತಲಿರುವ ಇಂದಿಗೆ ಸೂಕ್ತವೆನಿಸಿದ್ದರಿಂದ ಹಾಳೆಯ ಧೂಳುಕೊಡವಿ ಅದರಲ್ಲಿದ್ದ ಅಕ್ಷರಗಳನ್ನು ಬ್ಲಾಗಲ್ಲಿ ಚೆಲ್ಲಿದ್ದೇನೆ]
{ನಾ ಬರೆದ ಅಕ್ಷರಗಳಿರುವ ಕಾಗದದ ತುಣುಕುಗಳನ್ನೂ(ಕೈಗೆ ಸಿಕ್ಕಷ್ಟವುಗಳನ್ನು) ಮಮತೆಯಿಂತ ಜೋಪಾನ ಮಾಡಿದ ಅಪ್ಪ-ಅಮ್ಮರಿಗೆ ನಾ ಆಭಾರಿ}