January 12, 2008

ಇಂದು ಬೆಳಗಿನಲಿ

"ಸಂಕ್ರಾಂತಿಯ ಸಿಹಿ ಬದುಕಿನ ಸವಿಗಳಿಗೆಯ ನಾಳೆಗೆ ನಾಂದಿಯಾಗಲಿ" ತಮ್ಮೆಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳನ್ನು ಕೋರುತ್ತಾ...

ಮೂಡಲ ಮನೆಯ ಮುತ್ತಿನ ನೀರಿನೊಂದಿಗೆ ಎಂದಿನಂತೆ ಬೆಳಕಾಗುತ್ತದೆ, ಆದರೂ ಹೊಸ ದಿನಕೊಂದು ಹೊಸ ರೀತಿ, ಹೊಸ ವೈಶಿಷ್ಟ್ಯ ಇರುವಂತೆ...ಒಂದು ಬೆಳಗಿಗೆ ಮಳೆ ಮುತ್ತಾದರೆ ಇನ್ನೊಂದು ಬೆಳಗು ಇಬ್ಬನಿಯ ಮತ್ತೇ ಇದು ಎನುವಂತೆ. ಮಗದೊಂದು ಕತ್ತಲು ಕಳೆವ ಬಿಸಿಲ ಹೊಳಪಿನ ವಜ್ರದ ಹಾಗೆ. ಹೀಗೆ ಅವರವರ ಭಾವಕ್ಕೆ ಬದುಕಿಗೆ ತಕ್ಕ ಬೆಳಗು ಬೆಳಕ ಮೂಡಿಸುವ ಕಾಯಕ ಮರೆಯದು. ಭಾವಗಳು ಬೇರೆಯಾದರೂ ಬೆಳಗು ಮಾತ್ರ ಅದೇ ಆಗಿರುತ್ತದೆ.

ನಿಮ್ಮೆಲ್ಲರ ನೆನೆಯುತ್ತಾ ನನ್ನೀ ಬೆಳಗನ್ನು ಆರಂಭಿಸುತ್ತೇನೆ. ಎಲ್ಲೋ ಇದ್ದು, ಮತ್ತೆಲ್ಲೋ ಇದ್ದು, ಇಲ್ಲೇ ಇದ್ದು ಸ್ಪಂಧಿಸುವ ನಿಮ್ಮೆಲ್ಲರೊಂದಿಗೆ ಆರಂಭವಾಗುವ ಬೆಳಗು ಸುಂದರವೆನಿಸುತ್ತದೆ, ಆಹ್ಲಾದವೆನಿಸುತ್ತದೆ, ಕಂಬನಿ ತರುತ್ತದೆ. ಪ್ರೀತಿ ಉಕ್ಕಿಸುತ್ತದೆ, ಮತ್ತೆ ನಿಮ್ಮೆಲ್ಲರ ಬಗ್ಗೆ ಮತ್ತದೇ ಅಭಿಮಾನ ಮೂಡಿಸಿಬಿಡುತ್ತದೆ. ಮನ ತುಂಬಿ ಬಂದಾಗ ನಿಮ್ಮ ಮುಂದಿಟ್ಟು ಖಾಲಿ ಮಾಡಿಕೊಳಲೇ ಎನಿಸಿಬಿಡುತ್ತದೆ. ಕಂಡ, ಕಂಡಿರದ, ಅರಿಯದ, ಅರಿತ, ಪರಿಚಿತ, ಅಪರಿಚಿತ ಮುಖಗಳ ಚಿತ್ರಣ ಮುಂದೆ ಬರುತ್ತದೆ. ನನ್ನ ಭಾವನೆಗಳಿಗಿಷ್ಟು ತಿಳಿ ಹೇಳುವ ನೀವುಗಳು, ಅದೇ ಭಾವಗಳ ಜೊತೆ ಮಾತಾಡುವ ನೀವುಗಳು, ಮಾತನಾಡದೆಯೇ ಮನತುಂಬಿಕೊಳ್ಳುವ ನೀವುಗಳು, ಮೌನವಾಗಿ ಬಂದು ನನ್ನ ಮಾತುಗಳ ಕೇಳಿ ಮೌನವಾಗಿಯೇ ಹೊರಡುವ ನೀವುಗಳು ಒಬ್ಬೊಬ್ಬರಾಗಿ ಮನದ ಕಣ್ಣೊಳಗೆ ಹಾದು ಹೋಗುತ್ತಿರಿ. ಒಬ್ಬರು ನಿಧಾನಕ್ಕೆ ನಡೆದರೆ, ಇನ್ನೊಬ್ಬರು ಹಿತವಾದ ವೇಗದಿ, ಮಗದೊಬ್ಬರು ಭರ್ರನೆ ನಡೆದು ಮನ ಕಾಣಿಸದೇ ಬ್ಲರ್ ಆಗಿಬಿಡುತ್ತಾರೆ. ಮಗ ಬಂದು "ಇಲ್ಲೊಂಚೂರು ಟೇಪ್ ಹಾಕು" ಎನ್ನುತ್ತಾನೆ. ಟೇಪ್ ಹಾಕಿ ಹರಿದು ಹೋದವುಗಳ, ಒಡೆದು ಹೋದವುಗಳ ಕೂಡಿಸಿ ಬರುವಷ್ಟರಲ್ಲಿ ಯಾರೋ ಬಂದು ನಡೆದು ಬಿಟ್ಟಿರುತ್ತಾರೆ. ಆದರೂ ದುಗುಡದ ಕೊಡ ಹೊತ್ತವರ, ನಗೆ ಹೊನಲ ಕೆತ್ತಿದವರ, ಮಾತುಗಳ ಮುಚ್ಚಿಟ್ಟು ಮೌನವಾದವರ, ಮಾತುಗಳ ಬೆಳೆ ಬೆಳೆದವರ, ಮಾತುಗಳ ಧಾನ್ಯವನೊಂದಿಷ್ಟು ದಾನ ಮಾಡಿದವರ ಮುಖಗಳು ಹಾದು ಹೋಗುವ ಸರಣಿಯಲಿ ಸಾಲುಗಳ ಹಾಗೆ. ಇನ್ನೇನ ಹೇಳಲಿ ನಿಮ್ಮಗಳ ಬಗ್ಗೆ! ನನ್ನೀ ಓದುಗ ದೊರೆಗಳ ಬಗ್ಗೆ. ಸಂಕ್ರಾಂತಿಯ ಸಿಹಿಯಲ್ಲಿ, ಯುಗಾದಿಯ ಸಿಹಿ-ಬೇವಿನಲಿ, ಹುಣ್ಣಿಮೆಯ ಬೆಳದಿಂಗಳಿನೊಲು, ಅಮವಾಸ್ಯೆಯ ಕತ್ತಲೆಯಲಿ, ಮೇಣದ ಬತ್ತಿಯ ಮಂದದಲಿ, ಟಾರ್ಚ್ ನ ಶಾರ್ಪಿನಲಿ, ಹೀಗೆ...ಎಲ್ಲೆಲ್ಲೂ ಮುನ್ನಡೆಯಲು ಹಾದಿ ಮಾಡುವ ನಿಮ್ಮಗಳ ನಾ ಮರೆಯಲಿ ಹೇಗೆ?

ಆದರೂ ಒಂದಿಷ್ಟು ಹೇಳಬೇಕೆನ್ನುತ್ತಿದೆ ಮನ.

ನನ್ನೆಲ್ಲ ಓದುಗ ದೊರೆಗಳಿಗೂ, ನೀವೆಲ್ಲ ತೋರಿದ ಪ್ರೋತ್ಸಾಹಕ್ಕೂ, ಸಲಹೆಗಳಿಗೂ ನಾ ಆಭಾರಿ. "ಎಷ್ಟೆಲ್ಲ ಬರಿತ್ಯೆ ಮಾರಾಯ್ತಿ, ತಿಂಗಳಿಗೊಂದು ಪೋಸ್ಟ್ ಕೊಡು, ಓದಲು ಟೈಮ್ ಸಾಕಾಗ್ತಾ ಇಲ್ಲೆ" ಅಂತ ಸಲಹೆಯಿತ್ತು ನನ್ನ ಆಳಸಿತನಕ್ಕೆ ಸೊಪ್ಪು ಹಾಕಿದ ಪುಟ್ಟ ತಮ್ಮ ಸುಶ್ರುತನಿಗೂ, "ಎಲ್ಲ ಧರ್ಮಗಳ ಹಬ್ಬಕ್ಕೂ ಲೇಖನ ಕೊಟ್ಟು, ನಮಗೆಲ್ಲ ಅಜೀರ್ಣವಾಗುತ್ತಿದೆ"ಯೆಂದು ನೇರವಾಗಿ ನುಡಿದ mdಯವರಿಗೂ, "ಅನವಶ್ಯಕ ದೀರ್ಘ"ಗಳ ಬಗ್ಗೆ ನಗಿಸುತ್ತ ಸಲಹೆಯಿತ್ತ ಭಾಗವತರಿಗೂ, "ಎನ್ನೊಳಗ ದೀಪ" ಕವನದಲ್ಲಿ ತಪ್ಪಿದ ಕಾಗುಣಿತ ತಿದ್ದಿಸಿದ ಜ್ಯೋತಿ ಅಕ್ಕನಿಗೂ, "ಬೊಗಸೆಯೊಳಗಣ ಭಾವ" ಕವನದ ಸಾಲುಗಳ ತಿದ್ದಲು ಸಲಹೆಯಿತ್ತ proton ಅವರಿಗೂ, ಹೀಗೆಯೇ ಅದೆಷ್ಟೋ ಸಲಹೆಯಿತ್ತ ತಮ್ಮೆಲ್ಲರಿಗೂ ಇಂತದೇ ಇನ್ನಷ್ಟು ನೇರ ಸಲಹೆಗಳನ್ನು ಕೊಡಬೇಕಾಗಿ ಕೇಳಿಕೊಳ್ಳುವ ಜೊತೆ ಧನ್ಯವಾದಗಳನ್ನು ಹೇಳುತ್ತೇನೆ. "ನನ್ನ ಲೇಖನವೊಂದಕ್ಕೆ ನಿನ್ನ ಪಾತ್ರ ಬೇಕಾಗಿದೆ, ತೊಗೊಳ್ಲಾ?" ಎಂದಾಗ "no probs" ಎಂದು "ನಕ್ಕು ಬಿಡು ಒಮ್ಮೆ" ಕಥಾನಕಕೆ ಪಾತ್ರವಾದ ರವಿಗೂ ನನ್ನ ವಂದನೆಗಳು. ಇಷ್ಟೇ ಅಲ್ಲದೆ ಅದೆಷ್ಟೋ ಅನಿಸಿಕೆಗಳನ್ನು ತೆರೆದಿಟ್ಟು ಮನವನ್ನು ಇಲ್ಲೇ ಬಿಟ್ಟು ಹೋದ ನಿಮ್ಮೆಲ್ಲರ ಅಭಿಮಾನಕ್ಕೆ ನನ್ನ ಅನಂತ ವಂದನೆಗಳು. ಅದೆಷ್ಟೋ ಓದುಗ ಮಿತ್ರರು ಅನಿಸಿಕೆ ಹೇಳದಿದ್ದರೂ ನಿಮ್ಮಗಳ ಮನ ಇಲ್ಲಿ ಓಡಾಡಿ ಅಳಿಸದೇ ಇರುವ ಭಾವದ ಛಾಪುಗಳನ್ನು ಹಿಟ್ ಕೌನ್ಟರ್ ಹಿಡಿದಿಟ್ಟುಕೊಂಡಿದೆ. ನಿಮಗೆಲ್ಲರಿಗೂ ನನ್ನ ಧನ್ಯವಾದಗಳು.

ನೀವುಗಳೆಲ್ಲ ನನ್ನ ಬ್ಲಾಗ್ ಗಳಲ್ಲಿ ಬರೆದಂತೆಯೇ ನನ್ನ ಬರವಣಿಗೆಗೆ ಸಂಬಂಧಿಸಿದ ಪತ್ರವೊಂದರ ಖುಷಿ ನಿಮ್ಮೆಲ್ಲರನು ಪುನಃ ಪುನಃ ನೆನಪಿಸುವುದಲ್ಲದೇ ಇದನ್ನು ತಮ್ಮೆಲ್ಲರೊಂದಿಗೆ ಈ ಸಂದರ್ಭದಲ್ಲಿ ಹಂಚಿಕೊಳ್ಳಬೇಕೆನಿಸಿದೆ. ತೇಜಸ್ವಿನಿ ಅವರ ಆ ಮೇಲ್ ಅನ್ನು ನೇರವಾಗಿ ಈ ಲೇಖನದ ನನ್ನೆಲ್ಲ ಓದುಗ ದೊರೆಗಳ ಮುಂದಿಡುತ್ತಿದ್ದೇನೆ.ಅಂತೆಯೇ ಪತ್ರ ಬರೆದ ತೇಜಸ್ವಿನಿಯವರಿಗೆ ನನ್ನ ಧನ್ಯವಾದಗಳು. ಹೊಸವರ್ಷದ ಈ ಹೊಸ ಪತ್ರ ಓದಿ ಯಾಕೋ ಕಣ್ಣಂಚು ಒದ್ದೆ. ಸಾವಿರ ಮೈಲುಗಳಾಚೆಯ ಸ್ನೇಹಕ್ಕೆ ಸೇತುವೆಯಾಗಬಲ್ಲವು ಈ ನನ್ನ ಸಾಲುಗಳು ಎಂಬುದಾಗಿ ಬರೆವಾಗ ನಾ ಯೋಚಿಸಿರಲಿಲ್ಲ.
ಈ ಮುಂದಿನ ಸಾಲುಗಳು ಲೇಖಕಿ ತೇಜಸ್ವಿನಿಯವರು ಬರೆದ ಸಾಲುಗಳು.
ನಿಮ್ಮೆಲ್ಲರ ಹೇಳಿಕೆಗಳಿಗೆ ನಾ ಎಷ್ಟು ಪಾತ್ರಳೋ ಗೊತ್ತಿಲ್ಲ. ಮನಕೆ ತೋಚಿದ್ದನ್ನ ಗೀಚಿಬಿಡುವ ನನ್ನ ಬರವಣಿಗೆಗಳಲ್ಲಿ ತಿರುಳೆಷ್ಟಿದೆಯೋ ಕಾಣೆ. ಇಲ್ಲಿನ ತಪ್ಪುಗಳ ಎಣಿಸಿ ಲೆಕ್ಕವಿಡುವ ಕರಣಿಕನು ಯಾರೋ! ಇಂತಿದ್ದರೂ ಪ್ರೋತ್ಸಾಹಿಸುವ ನಿಮಗೆಲ್ಲ ನಾ ಚಿರಋಣಿ.ಸಿಂಧು ಅವರಿಗೆ, ನನ್ನಮ್ಮನಿಗೆ, ನನಗೆ ಹಾಗೂ ನಿಮ್ಮಲ್ಲರಿಗೆ ಇಷ್ಟವಾದ ಈ ಸಾಲುಗಳನ್ನು ಮಾತ್ರ ನಿಮ್ಮೆಲ್ಲರಿಗಾಗಿ ಹೇಳಬಲ್ಲೆ, ಅದೆಂದರೆ ಕೆ.ಎಸ್.ಎನ್ ಅವರು ಬರೆದ
"ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ"

"ಸಂಕ್ರಾಂತಿಯ ಸಿಹಿ ಬದುಕಿನ ಸವಿಗಳಿಗೆಯ ನಾಳೆಗೆ ನಾಂದಿಯಾಗಲಿ" ಮತ್ತೊಮ್ಮೆ ತಮ್ಮೆಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳನ್ನು ಕೋರುತ್ತಾ,

ಈ ಹಿಂದಿನ ಪ್ರೋತ್ಸಾಹವ ಮುಂದೆಯೂ ತಮ್ಮೆಲ್ಲರಲಿ ಕೇಳಿಕೊಳ್ಳುತ್ತಾ, ತಮ್ಮೆಲ್ಲರಿಗೂ ಮತ್ತೊಮ್ಮೆ ಧನ್ಯವಾದ ಹೇಳುತ್ತಾ, ಬ್ಲಾಗೆಂಬ ಬೊಗಸೆಯೊಳಗೆ ನೀವಿತ್ತ ಪ್ರೋತ್ಸಾಹ-ಪ್ರೀತಿಗಳ ಮನದಲ್ಲಿ ತುಂಬಿಟ್ಟುಕೊಳ್ಳುತ್ತಾ, ತಮ್ಮೆಲ್ಲರ ಪ್ರೋತ್ಸಾಹದ ಭಿಕ್ಷೆಗಾಗಿ ಸದಾ "ಭಿಕ್ಷಾಂದೇಹಿ" ಎನ್ನುವ ನಿಮ್ಮೆಲ್ಲರ
-ಶಾಂತಲಾ ಭಂಡಿ.

January 9, 2008

ನಕ್ಕು ಬಿಡು ಒಮ್ಮೆ (Try to Laugh) ಭಾಗ- 3

ಇವತ್ತೇನೂ ಅಂತ ವಿಷೇಶವಿಲ್ಲ. ಎಂದಿನಂತೆಯೇ ಬೆಳಗು. ಆದರೆ ಇವನಿಲ್ಲದ ಬೆಳಗು. ಹಾಗೆಯೇ ಮಧ್ಯಾಹ್ನವೂ ಮುದುಡಿ ಮರೆಯಾಗುವುದರಲ್ಲಿತ್ತಷ್ಟೆ. ಸದಾ ಚಳಿಗಾಲ ಹೊಂದಿರುವ ಪೋಲ್ಯಾಂಡ್’ನಲ್ಲಿ ಚಳಿ ಕಳೆದು ಇವನು ಬೆಂಗಳೂರಿಗೆ ನಿನ್ನೆ ವಾಪಸ್ಸಾಗಿದ್ದಾನೆ. ನಾಳೆ ಇಲ್ಲಿಗೂ ಬರಲಿದ್ದಾನೆ. ಅಂಥ ಖುಷಿಯಲ್ಲೂ ಒಂದು ತಿಂಗಳಿನಿಂದ ಮುಂಬರುವ ಪರೀಕ್ಷೆಗೆ ಓದುತ್ತಿರುವ ನನಗೆ ಸರಿಯಾಗಿ ನಿದ್ರೆಯಿಲ್ಲದ್ದಕ್ಕೋ, ಮೂರು ದಿನದಿಂದ ಜಾತ್ರೆ ತಿರುಗಿದ್ದಕ್ಕೋ ಅಥವಾ ಸಿರ್ಸಿಯ ಬಿಸಿಲಿಗೋ ಗೊತ್ತಿಲ್ಲ...ಮಧ್ಯಾಹ್ನ ವಿಶ್ರಾಂತಿಗಾಗಿ ಮಲಗಿದವಳಿಗೆ ಏಳಲಾರದ ಜ್ವರ. ಗೊತ್ತಾಗಿದ್ದೇ ಮನೆಮಂದಿಯೆಲ್ಲ ನನ್ನ ಉಪಚಾರದಲ್ಲಿ ತೊಡಗಿದರು. ಇವನು ಊರಲ್ಲಿಲ್ಲದಾಗ ಜ್ವರ ಬಂದಿದ್ದು ಎಲ್ಲರಿಗೆ ನನ್ನ ಮೇಲಿನ ಅನುಕಂಪ ಸ್ವಲ್ಪ ಜಾಸ್ತಿಯೇ ತಂದಿತ್ತಲ್ಲದೇ ಅವರೆಲ್ಲ ಗಾಬರಿಗೊಂಡಿದ್ದರು. ಅಲ್ಲದೇ ನಾಳೆ ಬೆಳಿಗ್ಗೆ ಸಿರ್ಸಿಗೆ ಬರುತ್ತಿರುವ ಇವನೊಡನೆ ನಾಳೆ ಬೆಂಗಳೂರಿಗೆ ಹೊರಡುತ್ತಿದ್ದೇನೆ. "ಈ ಜ್ವರದಲ್ಲಿ ಅದೊಂದು ಸಣ್ ಮಾಣಿನೂ ಕರೆಕೊಂಡು ಹ್ಯಾಂಗೆ ಹೋಗ್ತಾ ಏನ? ನಾಲ್ಕು ದಿನ ಜಾಸ್ತಿ ಇಲ್ಲಿದ್ದು, ಹುಷಾರಾದ್ಮೇಲೆ ಹೋದ್ರೆ ಆಗ್ತಿತ್ತು" ಅತ್ತೆಯ ಕಳಕಳಿ.

"ರವೀ..ಅತ್ಗೆನ ಆಸ್ಪತ್ರೆಗೆ ಕರ್ಕಂಡು ಹೋಗ್ಬತ್ಯನಾ ತಮಾ.." ರವಿಗೆ ಫೋನಾಯಿಸಿದರು ಮಾವ.

ಅರ್ಧ ಗಂಟೆಯಲ್ಲಿ ಮನೆಮುಂದೆ ಬಂದು, ಅತ್ತಿಗೆಯನ್ನು ಕುಳ್ಳಿರಿಸಿಕೊಂಡ ಮೈದುನನ ರಥ ಆಸ್ಪತ್ರೆಗೆ ಹೊರಡಲು ರೆಡಿಯಾಯ್ತು.

ನನಗೋ ಜ್ವರ ನೂರಮೂರು ಡಿಗ್ರೀ ಇರಲಿಕ್ಕೆ ಸಾಕು. ಮೈಯೆಲ್ಲ ಜ್ವರದ ಬಿಸಿಯಿಂದ ಸುಡುವುದು ನನಗೇ ಅರಿವಾಗುತ್ತಲಿತ್ತು. ಅಂತೂ ಇಂತೂ ಒಂದು ಸ್ವೆಟರ್ ಹಾಕಿ ಎದುರಿದ್ದ ಬೆಂಚಿನ ಮೇಲೆ ಕುಳಿತುಕೊಂಡೇ ಕಷ್ಟಪಟ್ಟು ಚಪ್ಪಲಿಯೊಂದನ್ನು ಮೆಟ್ಟಿಕೊಂಡು ರವಿಯ ರಥವನ್ನೇರಿದೆ.

ಮಗನನ್ನು ಚೆನ್ನಾಗಿ ಅರ್ಥೈಸಿಕೊಂಡ ನಮ್ಮತ್ತೆ ಹೇಳಿದರು "ರವಿ..ಸಾವ್ಕಾಶ್ ಗಾಡಿ ಹೊಡಿಯೋ..ಅತ್ಗಿಗೆ ಹುಷಾರ್ ಬೇರೆ ಇಲ್ಲೆ. ತಲೆ ಗಿಲೆ ಸುತ್ತಿ ಬಂದೋಕು...ನಿನ್ಮನೆ ಗಾಡಿ ಹೊಡ್ಯಾಣಕ್ಕೆ...."

ಆ ಗಾಡಿಯೋ ಹೊಸದೇ ಆದರೂ ರವಿಯ ಕೈ ಸೇರಿದ ಮೇಲೆ ಆದ ಅಭ್ಯಾಸ ಬಲದಿಂದ ಸ್ಟಾರ್ಟ್ ಆಗುವಾಗ "ರೊಂಯ್" ಎಂದು ಸ್ಟಾರ್ಟ್ ಆಗಿ, " ರೊಂಯ್...ರೊಂಯ್...ರೊಂಯ್..." ಎಂದು ನಮ್ಮನೆಯ ಮುಂದೆ ಮೂರು ಸಲ ಕೂಗಿಕೊಂಡು ಮುಂದೆ ಹೊರಟಿತು.

ಒಂದುಮಾರು ದೂರವನ್ನು ಕ್ರಮಿಸಿದ್ದೆವು ವಿಮಾನದ ವೇಗದಲ್ಲಿ, ನನಗ್ಯಾಕೋ ತಲೆ ಸುತ್ತಿದಂತಾಗಿ "ರವಿ ಗಾಡಿ ನಿಲ್ಸೂ... ಅಷ್ಟೆಲ್ಲ ಜೋರು ಹೋಗಡ ,ನಂಗೆ ತಲೆ ಸುತ್ತತಾ ಇದ್ದು.." ಅಂತ ರಿಕ್ವೆಸ್ಟ್ ಮಾಡ್ಕೊಂಡೆ ರವಿ ಹತ್ರ. ಅವನು "ಮೀಟ್ರು ನೋಡು ಬೇಕರೆ..ಎಷ್ಟು ಸಾವ್ಕಾಶ ಹೋಗ್ತಾ ಇದ್ದಿ." ಅಂದ. ನನಗೋ ತಲೆಯಲ್ಲಿ ಮೀಟರ್ ತಿರುಗುತ್ತಿರುವಂಥ ಅನುಭವ, ಗಾಡಿಯ ಮೀಟರ್ ನೋಡುವುದು ಆ ಮೇಲಿನ ಕಥೆ.

"ನಂಗೆ ತಲೆ ತಿರಗ್ತಾ ಇದ್ದು, ನೀ ಈಗ ಗಾಡಿ ನಿಲ್ಸ್ದೇ ಇದ್ರೆ ನಾ ಖಂಡಿತ ಈಗ ಗಾಡಿಯಿಂದ ಬೀಳ್ತಿ" ಅಂದೆ ಇದ್ದ ಧ್ವನಿಯನ್ನೆಲ್ಲಾ ಒಟ್ಟುಗೂಡಿಸಿ.
ಅವನು ಗಾಡಿ ನಿಲ್ಸಿ "ಈ ಹೆಣ್ಣುಡ್ರಿಗೆ...ಎಂತರೂ ಒಂಚೂರು ಹುಷಾರಿಲ್ದಿದ್ರೆ ಸಾಕಪಾ...ತಲೆ ತಿರಗಲ್ಲೆ ಶುರುವಾಗೋಗ್ತು...." ಎನ್ನುತ್ತ ಇಡೀ ನಾರೀ ಸಮುದಾಯವನ್ನೆಲ್ಲಾ ಸೇರಿಸಿಕೊಂಡು ಬಯ್ದನಾದರೂ ಗಾಡಿ ನಿಲ್ಲಿಸಿದ.

ಅರೆಕ್ಷಣ ಬಿಟ್ಟು "ಈಗ ಹುಷಾರಾತಾ? ಹೊರಡನ ಈಗ, ನೀನು ಇನ್ನೊಂದ್ಸಲ ತಲೆಸುತ್ತು ಬಂದ್ರೆ ಕಣ್ಣು ಮುಚ್ಗ್ಯಳಡ..ಕಣ್ಣು ಮುಚ್ಗ್ಯಂಡ್ರೆ ಇನ್ನೂ ಜಾಸ್ತಿ ಆಗ್ತು..ಕಣ್ಣು ಬಿಟ್ಗಂಡೇ ಇರು...ಸರಿಯಾ? " ಅಂತ ನಿಧಾನಕ್ಕೆ ಹೇಳಿದನಾದ್ರೂ "ರಾಶೀ ಹೊತ್ತು ಇಲ್ಲೇ ನಿತ್ಗಂಡ್ರೆ ಡಾಕ್ಟ್ರು ಮನಿಗ್ ನಡಿತ್ರು ಕಡಿಗೆ" ಅಂತ ಹೇಳಿ ಜ್ವರ ಬಂದ ನನ್ನ ಹೆದರಿಸಿಬಿಟ್ಟ. ನನಗೂ ಹೌದೆನಿಸಿ "ಸರಿ, ಸಾವ್ಕಾಶ ಹೋಗು ಪ್ಲೀಸ್" ಅಂದೆ.

ಇದೀಗ ಸಿರ್ಸಿಯ ಜಾತ್ರೆ ಜರುಗುತ್ತಿದೆ. ನಿನ್ನೆಯೂ ಸಹ ನಮ್ಮದೊಂದು ದೊಡ್ಡ ಗುಂಪು ಜಾತ್ರೆ ಸುತ್ತಾಡಿದ್ದೆವು. ಎಲ್ಲರೂ ದೊಡ್ದತೊಟ್ಟಿಲು ಹತ್ತಿದ್ರೂ ನಾ ಭಯವಾಗತ್ತೆ ಅಂತ ಹತ್ತಿರ್ಲಿಲ್ಲ. ಕೆಳಗೆ ನಿಂತು ಎಲ್ಲರೂ ಅಲ್ಲಿ ಎಂಜಾಯ್ ಮಾಡಿದ್ದು ನೋಡಿದ್ದೆ ಅಷ್ಟೆ. ಆದ್ರೆ ರವಿ ಅದ್ರಲ್ಲಿ ಕಣ್ಣು ಬಿಟ್ಗೊಂಡು ಒಂದೇ ಕಡೆ ನೋಡ್ತಾ ಯಾಕೆ ಕೂತಿದ್ದ ಅನ್ನೋದು ಈಗ ಅವನು ನನಗೆ ಕೊಟ್ಟ ಸಲಹೆಯಿಂದ ಚೆನ್ನಾಗಿ ಅರ್ಥ ಹೊಳೆದು ಆ ಜ್ವರದಲ್ಲೂ ನಗು ಬಂದ್ಬಿಡ್ತು.

ಸರಿ, ಮತ್ತೊಂದು ಮಾರು ಹೋದವಷ್ಟೆ, ಮತ್ತದೇ ಕತೆ..."ನಿಲ್ಸು " ಅಂದೆ.

"ಸಿಟಿ ಬಸ್ಸಿನ್ ಡ್ರೈವರನ್ ಕತೆ ಆತಲಾ ಯಂದು" ಎಂದನಾದರೂ ಅತ್ತಿಗೆಯ ಮೇಲಿನ ಕಳಕಳಿಗೆ ಗಾಡಿ ನಿಂತಿತು.

ನಂತರ ಮತ್ತೆಲ್ಲೂ ನಿಲ್ಲದೇ ಮುಂದೆ ಸಾಗಿದ ರಥ, ವೇಗದಲ್ಲಿ ಯಾವುದೇ ಮಿತಿಯನ್ನ ಕಾಣದೆ ಸಿ ಪಿ ಬಝಾರ್ ತಲುಪಿತಾದರೂ... ಅಲ್ಲಿ ವೇಗದ ಮಿತಿಯನ್ನು ತಗ್ಗಿಸಲೇ ಬೇಕಾದ ಅನಿವಾರ್ಯತೆಯನ್ನು ಜಾತ್ರೆಯ ಜನ ತಂದೊಡ್ಡಿದ್ದರು. "ಹೋ...ಥತ್...ಥೋ...... ಅದ್ಯಾನಮ್ನಿ ಜ್ಜನ... ಜ್ಜನಾ, ಎಲ್ಲಿಂದ ಬತ್ವಾ ಈ ನಮ್ನಿ ಜನಾ.. ಥೋ." ಎನ್ನುವ ರವಿಯ ಉದ್ಘಾರಗಳ ಜೊತೆ ನಮ್ಮ ದೇಹಸಮತೋಲನದಿಂದಲೇ ಬೀಳದ ಗಾಡಿ ಜನರಿಂದೆಲ್ಲ ತಪ್ಪಿಸಿಕೊಂಡು ದೊಡ್ಡೂರು ಡಾಕ್ಟರ್ ಕ್ಲಿನಿಕ್ ಮುಂದೆ ನಿಂತು ಸಾವರಿಸಿಕೊಂಡಿತು. ಕ್ಲಿನಿಕ್ ಒಳಹೊಕ್ಕ ನಾನು ಸುಸ್ತಾಗಿ ಎರಡು ಗೋಡೆಗಳ ಮೂಲೆಯೊಂದರ ಆಸನವೊಂದನ್ನು ಮೊದಲಾಗಿ ಹಿಡಿದು ಕುಳಿತೆನಾದರೂ ಇನ್ನೂ ರಥದಲ್ಲಿಯೇ ಕುಳಿತವಳಂತೆ ಆ ಕಡೆ ಈ ಕಡೆ ಓಲಾಡುತ್ತಿದ್ದೆ. ಅಷ್ಟರಲ್ಲಿ ನನ್ನ ಮುಖನೋಡಿಯೇ ನನ್ನ ಸ್ಥಿತಿಯನ್ನು ಅರ್ಥೈಸಿಕೊಂಡ ರೆಜಿಸ್ಟ್ರೇಶನ್ ಕೌಂಟರ್ ಅಲ್ಲಿ ಕುಳಿತಾಕೆ ರವಿಯ ಹತ್ತಿರ "ಅಪಾಯಿಂಟ್ ಮೆಂಟ್ ತಗಂಡವ್ರ ನೀವು?" ಅಂತ ಕೇಳಿದರು. ರವಿ "ಇಲ್ಲ" ಅಂದ.

"ಸರಿ ಹಂಗಾದ್ರೆ ಪೇಶಂಟ್ ಹೆಸ್ರೇಳಿ" ಅಂದರು.

"ಸಕುಂತಲಾ" ಅಂತ ಅವನು ಅಭ್ಯಾಸಬಲದಿಂದ ಹೇಳ್ಬಿಟ್ರೆ ಕಷ್ಟ ಅಂತ ಪಟಕ್ಕಂತ ನಾನೇ ನನ್ನ ಹೆಸ್ರು ಹೇಳ್ಬಿಟ್ಟೆ ಅನ್ಸುತ್ತೆ. (ಮೊದಲಿನಿಂದಲೂ ಪರಿಚಯವಿದ್ದುದರಿಂದಲೂ, ನನಗಿಂತಲೂ ದೊಡ್ಡವನಾದ್ದರಿಂದಲೂ , ಅತ್ತಿಗೆಯಾದ ನನ್ನನ್ನು ಹೆಸರಿಡಿದೂ ಕರೆಯಲಾರದೇ "ಅತ್ತಿಗೆ" ಅಂತಲೂ ಕರೆಯಲಾರದೇ ಇರುವ ರವಿಯ ಸಂದಿಗ್ಧತೆ ನನಗಿತ್ತ ಹೊಸ ನಾಮಕರಣವೇ ಈ "ಸಕುಂತಲಾ".)

ವಿಳಾಸ ಮಾತ್ರ ರವೀನೆ ಹೇಳಿದ್ನಾದ್ರೂ ಈ ಕಡೆ ಬಂದ ರವಿ ಅಲವತ್ತುಕೊಂಡ "ನಮ್ಮ ತಲೆಬಿಸಿ ನಮಗೆ..ಇವ್ಕೆ ಹೆಸ್ರು ಬೇರೆ ಹೇಳ್ಕ್ಯೋತ ಕುತ್ಗಳವ್ವು...ಹೆಸ್ರು ನೋಡ್ಕ್ಯಂಡು ಔಷಧಿ ಕೊಡವ್ರಂಗೆ ಮಾಡ್ತ್ವಪ, ಇವ್ಕೇನು ಜ್ವರಗಿರ ಬತ್ತೇ ಇಲ್ಲೆ, ನಮಗೊಂದೆ ಬಪ್ಪವ್ರಂಗೆ ಮಾಡ್ತ್ವಪ " ಅಂತ ಬಯ್ದುದು ಕೇಳಿಸಿತಾದ್ರೂ ನಗೋ ಸ್ಥಿತಿಯಲ್ಲಿ ನಾನು ಇರ್ಲಿಲ್ಲ.

ಸ್ವಲ್ಪ ಹೊತ್ತಾದ್ ಮೇಲೆ ನನ್ನ ಹೆಸರನ್ನ ಕೂಗಿದ್ರು. ಎರಡೇ ನಿಮಿಷದಲ್ಲಿ "ನಮಸ್ಕಾರ"ಎನ್ನುತ್ತ ನಾವು ಡಾಕ್ಟರ್ ಮುಂದೆ ಇದ್ವಿ. ನಮ್ಮನ್ನು ನೋಡಿದವರೇ ವೈದ್ಯರು "ಓ..ಭಂಡಿಮನೆಯನಾ..ಯಾರ ಮಗ ನೀನು?" ಅಂದ್ರು.

ರವಿ ಉತ್ತರಿಸಿದ. "ಅಪ್ಪಯ್ಯ ಎಂತ ಮಾಡ್ತಾ?" ಅಂತ ಡಾಕ್ಟ್ರು ಕೇಳಿದ್ರು.

ನನಗೋ ಭಯ! ರವಿ ಅಭ್ಯಾಸಬಲದಂತೆ ಬಾಯಿತಪ್ಪಿ "ಎಂತ ಬೇಕಾದ್ರೂ ಮಾಡ್ತಾ." ಅಂದುಬಿಟ್ಟರೆ ಅಂತ!

ಅದ್ರೆ ಹಾಗಾಗಲಿಲ್ಲ. ಎಲ್ಲ ಸರಿಯಾದ ನಯನಾಜೂಕಿನ, ಎಳ್ಳಿನಷ್ಟೂ ತಮಾಷೆಯಿರದ ಉತ್ತರಗಳನ್ನು ರವಿ ಕೊಟ್ಟಿದ್ದರಿಂದ ಹೊಸ ವ್ಯಕ್ತಿಯಂತೆ ಭಾಸವಾಗುತ್ತಿದ್ದ.

ಡಾಕ್ಟ್ರೂ ನನ್ನ ಕೇಳಿದ್ರು "ಏನು ಸಮಸ್ಯೆ?" ಅಂತ.

ನಾನು "ಜ್ವರ" ಅಂದೆ.

"ಮತ್ತೇನೇನಾಗ್ತಿದೆ" ಅಂತ ಕೇಳಿದ್ರು.

"ಕಣ್ಣು ನೋವು, ತಲೆ ಭಾರ, ತಲೆಚಕ್ರ, ಇತ್ಯಾದಿ.. ಇತ್ಯಾದಿ.."

ನಾನು ಹೇಳುತ್ತಿರುವಂತೆಯೇ ರವಿ ಡಾಕ್ಟ್ರಿಗೆ ಹೇಳಿದ "ಡಾಕ್ಟ್ರೇ..ನಾಳೆ ಅಣ್ಣಯ್ಯ ಊರಿಗೆ ಬತ್ತಾ ಇದ್ದ, ನಾಳೆ ಸಂಜೆನೇ ಇವೆಲ್ಲ ಬೆಂಗಳೂರಿಗೆ ಹೊರಡವಿದ್ದ, ಸೋ ನಾಳೆ ಹೇಳತನಕ ಹೋಗಿರವ್ವು..ಇರಲ್ಲಾಗ, ಅಂತ ಔಷಧಿ ಕೊಡಿ" ಅಂತ ರವಿ ಗಂಭೀರವಾಗಿ ಹೇಳಿದನಾದರೂ ಆ ಮಾತಿಗೆ ದ್ವಂದ್ವಾರ್ಥವಿದೆಯೆನಿಸಿ ಡಾಕ್ಟ್ರ ಮುಂದೆ ನಗಲಾರದೇ, ಸುಮ್ಮನಿರಲೂ ಆಗದೇ ತುಂಬ ಕಷ್ಟವಾಯಿತು ಆ ಕ್ಷಣ. ಏನೆಂದರೆ ನಾಳೆ ಎನ್ನುವಷ್ಟರಲ್ಲಿ ಹೋಗಬೇಕಾದ್ದು ನಾನೋ ಅಥವ ಜ್ವರವೋ ಒಂದೂ ಅರ್ಥವಾಗಿರಲಿಲ್ಲ!

ಔಷಧ ತೆಗೆದುಕೊಂಡು ಮನೆ ಸೇರುವಾಗ ಸಂಜೆಯ ಸುಗಂಧ ಹರಡಿ ಬಿಸಿಲಿಳಿದಂತೆ ಜಾತ್ರೆಯ ಮೆರುಗು ಏರುತ್ತಲಿತ್ತು. ವಾಪಸ್ಸಾಗುವಾಗಲೂ ನಮ್ಮ ಸಿಟಿ ಬಸ್ಸು ಅಲ್ಲಲ್ಲಿ ನಿಂತಿದ್ದರ ಕಾರಣ ನನ್ನ ತಲೆಸುತ್ತಾಗಿರಲಿಲ್ಲ. ರವಿಯ ದೋಸ್ತರಾಗಲೇ ಪೇಟೆಯ ರಸ್ತೆ ಅಂಚಿನ ಅಂಗಡಿಗಳ ಸಾಲಲ್ಲಿ ಪ್ರತ್ಯಕ್ಷ್ಯರಾಗಿ ನಿಂತಿದ್ದು ರವಿಗೆ ಹಸ್ತಬೀಸುತ್ತಿದ್ದರು. ಕೈ ಮಾಡಿದ ಗೆಳೆಯರೆಲ್ಲರಿಗೂ "ಅತ್ತಿಗೆ ಮನಿಗ್ ಬಿಟ್ಟಿಕ್ ಬತ್ತಿ, ಅತ್ಗೆ ಮನಿಗ್ ಬಿಟ್ಟಿಕ್ ಬತ್ತಿ" ಎನ್ನುತ್ತಾ ಕೈ ಮಾಡುತ್ತಾ ತಲೆಯಾಡಿಸುತ್ತಾ ಹೊರಟ ಸಿಳ್ಳೆಯೊಳಗೆ ಅಭ್ಯಾಸಬಲದಂತೆ ಗುಲಾಮ್ ಅಲಿಯ ಹಾಡುಗಳು ಕೇಳಿ ಬಂದವಾದರೂ ಜವಾಬ್ದಾರಿ ಮುಗಿಸಿ ಜಾತ್ರೆಗೆ ಹೊರಡಲನುವಾಗಿದ್ದ ರವಿ ಖುಷಿಯಲ್ಲಿದ್ದಂತೆ ತೋರಿತು.

ಮನೆಗೆ ಬಂದವಳೇ ಮತ್ತೆ ಮಲಗಿಬಿಟ್ಟೆ. ಅತ್ತೆ ರವಿಗೆ ಹೇಳುತ್ತಿದ್ದರು "ರವೀ..ಅತ್ತಿಗೆಯ ಬೆಂಗಳೂರಿಗೆ ಹೋಪ ಟಿಕೆಟ್ ಕ್ಯಾನ್ಸಲ್ ಮಾಡ್ಸಿಬಿಡ್ತ್ಯನ ತಮಾ... ಈಗ ಪ್ಯಾಟಿಗೆ ಹೋದವ್ನೆಯ. ಇನ್ನು ನಾಲ್ಕು ದಿನ ಬಿಟ್ಟು ಹುಷಾರಾದ್ಮೇಲೆ ನೋಡ." ಅಂತ ಹೇಳುತ್ತಿದ್ದುದ್ದು ಕೇಳಿತ್ತು ಮಾತ್ರ .ಜ್ವರದ ಸುಸ್ತಿಗೋ ಅಥವ ಔಷಧಿಯ ಪ್ರಭಾವವೋ ನಿದ್ರೆ ಆವರಿಸಿತು.

ಬೆಳಗಾಗಿ ಇವತ್ತು ಕಳೆದು ನಾಳೆಯಾಗಿದ್ದೂ ಆಯ್ತು. ಬೆಳಿಗ್ಗೆ ಕಂಡ ಇವನ ಮುಖ ಹಾಗೂ ದೊಡ್ಡೂರು ಡಾಕ್ಟರರ ಕೈಗುಣಗಳೆರಡರ ಪ್ರಭಾವದಿಂದ ಜ್ವರ ಪೂರ್ತಿ ವಾಸಿಯಾಗಿತ್ತು. ಎದ್ದು ಬಂದಾಗ ತಿಂಡಿ ಮೆಲ್ಲುತ್ತ ಇವನು ಕೇಳಿದ "ಇವತ್ತು ಯನ್ನ ಸಂತಿಗೆ ಜಾತ್ರಿಗ್ ಯಾರ್ ಬತ್ತಿ?" ನಾ ಕೈ ಮೇಲೆ ಮಾಡಿಯೇ ಬಿಟ್ಟೆ. ಇವನ ಪಕ್ಕ ಕುಳಿತ ರವಿ ಅಣ್ಣಂಗೆ ಬಯ್ದೇಬಿಟ್ಟ "ಹಂ...ನೀನು ಇವತ್ತು ಸಂಜೆ ತನಕ ಜಾತ್ರೆ ತಿರಗ್ಸಿಕ್ಕೆ ನೀ ಬೆಂಗಳೂರು ಬಸ್ ಹತ್ಬುಡು .. ನಾಳಗಿಂದ ಕೆಲ್ಸನೂ ಬಿಟ್ಬುಡ್ತಿ. ಮನೆಲ್ಲಿ ಇರ್ತಿ ಹ್ಯಂಗಿದ್ರುವ..ಆಸ್ಪತ್ರಿಗೆ ಕರ್ಕಂಢೋಗ್ಬತ್ತಿ..ದೊಡ್ಡೂರು ಡಾಕ್ಟ್ರು ಜಾತ್ರಿಗೆಲ್ಲ ರಜೆ ಹಾಕ್ತ್ರಿಲ್ಲೆ ಹ್ಯಂಗಿದ್ರೂವ." ಎನ್ನುತ್ತ ಕೈ ತೊಳೆಯಲು ಬಚ್ಚಲಮನೆಗೆ ಹೊರಟ ರವಿ ಹೇಳುತ್ತಿದ್ದ. "ನಿನ್ನೆ ನೋಡಿರೆ ಈಗ್ಲಾ ಆಗ್ಲಾ ಕಾಣ್ತಿತ್ತು..ಎಲ್ಲರಿಗೂ ರಾತ್ರೆನೇ ಫೋನ್ ಮಾಡವ್ವನ ಮಾಡ್ಕ್ಯಂಡಿದ್ದಿ .ಇವತ್ತು ಜಾತ್ರಿಗ್ ಹೋಪಂಗೆ ಆಗೋತಲಿ. ಆಗ್ಲಿ ಡಾಕ್ಟ್ರ ಕೈಗುಣ ಭಾರೀ ಚೊಲೋ ಇದ್ದು ಕಾಣ್ತು." ಮನೆಯವರೆಲ್ಲ ಅಡುಗೆ ಮನೆಯಲ್ಲಿ ನಗುತ್ತಿದ್ದರೆ ನನಗೆ ಮಾತ್ರ ಜ್ವರದಿಂದಾಗಿ ತಪ್ಪಿ ಹೋದ ಜಾತ್ರೆ ನೆನೆ ನೆನೆದು ಬೇಜಾರಾಗ್ತಾ ಇತ್ತು. ಇವರು ರವಿಯನ್ನು ಹೀಯಾಳಿಸುತ್ತಿದ್ದರು, "ಅತ್ಗೆನ ಆಸ್ಪತ್ರಿಗೆ ಕರ್ಕಂಡು ಹೋಗ್ಬಂದಿದ್ದಕ್ಕೇ ಹಿಂಗಾಡ್ತೆ. ನಿಂಗೊಂದು ಹೆಂಡ್ತಿ ಬಂದ್ಮೇಲೆ ನೋಡು...ಎಷ್ಟು ಖುಶಿಯಾಗ್ತು ಹೇಳಿ" ಅಂತ. "ಆನು ಡಾಕ್ಟ್ರ ಆಗಿರ ಕೂಸಿನ್ನೇ ಮದ್ವೆಯಾಗ್ಬಿಡ್ತಿ" ಅಂತ ರವಿ ಬಚ್ಚಲು ಮನೆಯಿಂದ ಹೇಳಿದರೆ ಇದೀಗ ಎಲ್ಲರೊಡನೆ ನಗುವ ಪಾಳಿ ನಂದೂ ಆಗಿತ್ತು.

ಆಮೇಲೆ ಜಾತ್ರೆಗೆ ನಾ ಹೋಗಿಬಂದಿದ್ದು ಆ ನಂತರದ ವಿಷಯ. ಆದರೂ ಆಸ್ಪತ್ರೆಗೆ ಬೇರೆಯವರನ್ನು ಕರೆದೊಯ್ದ ಅಭ್ಯಾಸವೇ ಇಲ್ಲದಿದ್ದರೂ ಅತೀ ಕಾಳಜಿಯಿಂದ ಕರೆದೊಯ್ದು, ಇವತ್ತು ಜಾತ್ರೆ ಸುತ್ತಾಡುವಷ್ಟು ಆರೋಗ್ಯ ಹೊಂದಲು ಕಾರಣನಾದ ರವಿಗಾಗಿ ಸಂಜೆ ಬರುವಾಗ ನಾನೂ ಮತ್ತು ನನ್ನವನೂ ಪ್ರೀತಿಯಿಂದ ಒಂದು ಆಟಿಗೆಯನ್ನು ತಂದಿಟ್ಟೆವು. ರವಿ ಜಾತ್ರೆಯಲ್ಲಿ ಸುತ್ತಾಡ ಹೊರಟಾಗೆಲ್ಲ ಅದನ್ನು ಕೊಂಡುಯ್ಯುತ್ತಿದ್ದುದು ನಮಗೆ ತುಂಬ ಖುಷಿ ಕೊಟ್ಟಿತು. ಅದಾವ ಆಟಿಗೆ ಅಂತ ಕೇಳ್ತೀರ..."ಊದಿದ ತಕ್ಷಣ ತಲೆಯೆತ್ತಿ , ಊದಿದ ಹಾಗೆಲ್ಲಾ ಉದ್ದವಾಗುತ್ತ ಹೋಗುವ ಅದ್ಯಾವುದೋ ಹೊಸ ಜಾತಿಯ ಪೀಪಳಿಯಂತೆ".

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.