December 22, 2008

ನಕ್ಕು ಬಿಡು ಒಮ್ಮೆ...

‘ನೀ ತಮ್ಮನ್ ಸಂತಿಗೆ ಬಾರೇ...’ ಅಂದವರು ಪೇಟೆಗೆ ಹೋಗಿದ್ದಾಯ್ತು. ‘ಒಂದ್ನಿಮಿಷ...’ ಅಂತ ಕರೆಯುತ್ತಿದ್ದರೆ ಅಲ್ಲಿ ಸ್ಕೂಟಿ ಹೊರಟೇ ಹೋಯ್ತು. ರೆಡಿಯಾಗಿ ಅಡುಗೆ ಮನೆಗೆ ಬಂದೆ. ಅತ್ತೆ ‘ಅಯ್ಯ..ಪ್ಯಾಟಿಗೆ ಹೋಗ್ತಿ, ಖರೀದಿ ಎಲ್ಲ ಮುಗದ್ದಿಲ್ಲೆ ಹೇಳಿದ್ಯಲೇ... ರಾಜು ಪ್ಯಾಟಿಗೆ ನಡದ್ನಲೆ...ರವಿ ಹೋಗ್ತ್ನನ ತಗ , ಅವನ್ನ ಸಂತಿಗೆ ಹೋಗ್ಲಕ್ಕಡ್ಡ’ ಅಂದ್ರು ರವಿಯತ್ತ ನೋಡುತ್ತ.

ರವಿಯೋ ಅಪರೂಪಕ್ಕೆ ಮನೆಗೆ ಬಂದಿದ್ದ ಗೆಳೆಯರ ಜೊತೆ ‘ನಿಂಗ ಬಂದವ್ವೆಯ ಪಿ.ಆರ್ ಗೆ ಅಪ್ಲೈ ಮಾಡ್ಬಿಡಿ. ಡಿಲೇ ಮಾಡ್ಕ್ಯಳಡಿ, ಆನು ಹಂಗೆ ಮಾಡ್ಕ್ಯಂಡು ಕಡಿಗ್ ಮಳ್ ಹರಿಯಂಗೆ ಆತು’ ಅಂತೇನೋ ಹೇಳ್ತಾ ಇದ್ದ. ಗಹನವಾದ ವಿಚಾರ ನಡೆಯುತ್ತಿತ್ತಾದ್ದರಿಂದ ಅವನು ನನ್ನ ಮುಖವನ್ನ ನೋಡುವುದನ್ನೇ ಕಾಯುತ್ತಿದ್ದವಳು ಮಾತಿನ ಮಧ್ಯೆ ನನ್ನ ಮುಖ ನೋಡಿದ್ದೇ ‘‘ಐದು ಗಂಟಿಗ್ ಹೋಪದ ಪ್ಯಾಟಿಗೆ?" ಅಂತ ಕೇಳಿಯೇ ಬಿಟ್ಟೆ. ಅವನು ‘ಹ್ಞ...ಹೋಪ, ಇನ್ನು ಹತ್ತೇ ನಿಮ್ಷ’ ಅಂದು ಮತ್ತೆ ಗೆಳೆಯರ ಮುಖ ನೋಡಿ ಮಾತು ಮುಂದುವರೆಸಿದ.

ಐದು ನಿಮ್ಷ..ಹತ್ತು ನಿಮ್ಷ...ಇಲ್ಲಾ...ಹದಿನೈದು ನಿಮ್ಷವಾಯ್ತು....ಅರೆರೆ ಅರ್ಧ ಗಂಟೆ ಕಳ್ದೇ ಹೋಯ್ತು. ಐದೂ ಇಪ್ಪತ್ತು ಗಡಿಯಾರದಲ್ಲಿ. ಸುಮ್ಮನೆ ಅತ್ತೆಯವರ ಮುಖವನ್ನೊಮ್ಮೆ ನೋಡಿದೆ. ಇವತ್ತೇ ಮುಗಿಸಿಕೊಳ್ಳಬೇಕಾದ ಕೆಲಸಗಳು, ಪ್ಯಾಕಿಂಗ್ , ಜೊತೆಯಲ್ಲಿ ನಾನಿನ್ನೂ ಪೇಟೆಗೆ ಹೊರಟಿಲ್ಲವೆಂಬ ಕಳಕಳಿ ಅತ್ತೆಯವರ ಮುಖದಲ್ಲಿಯೇ ಜಾಸ್ತಿ ಇದ್ದಂತಿತ್ತು.

ಸುಮ್ಮನೆ ತನ್ನ ಪಾಡಿಗೆ ತಾನು ಯಾವುದೋ ಚಾನೆಲ್ ಊದುತ್ತಿದ್ದ ಟಿ.ವಿ ಮುಂದೆ ಕುಳಿತೆ. ಯಾವತ್ತೂ ಟಿ.ವಿ ನೋಡದವಳು ಟಿ.ವಿ ಮುಂದೆ ಕೂತಾಗಲೇ ಅತ್ತೆಯವರಿಗೆ ಡೌಟು ಬಂದಿರಬೇಕು. ನಾ ಕುಳಿತಲ್ಲಿಗೇ ಬಂದು ‘ನೀ ಅವನ್ನ ಸಂತಿಗೆ ಹೋದ್ರಾಗ್ತಿತ್ತು, ಈಗ ಇಂವ ಎಷ್ಟೊತ್ತಿಗ್ ಹೊಂಡ್ತ್ನ ಏನ’ ಅಂದರು. ನನ್ನ ಬೇಜಾರಕ್ಕಿಷ್ಟು ಪ್ರೋತ್ಸಾಹ ಸಿಕ್ಕಂತಾಗಿ ‘ತಮ್ಮನ್ ಸಂತಿಗ್ ಬಾ ಹೇಳಿಕ್ಕೆ ನಡದ್ರು..’ ಇನ್ನೂ ಅಳುಮುಖ ಮಾಡಿ ಕೂತೆ. ‘ ಈ ಹುಡುಗ್ರೂವ ಸಧ್ಯದಲ್ಲೆ ಆಷ್ಟ್ರೇಲಿಯಾಕ್ಕೆ ಹೋಪ ಹುಡುಗ್ರು ಕಾಣ್ತು, ಇಂವ ಅವ್ಕೆ ಎಂತೆಂತೋ ಸಲಹೆ ಕೊಟ್ಗೋತಿದ್ದ, ನೀ ಒಂದ್ಸಲ ಅವಂಗೆ ಪ್ಯಾಟಿಗ್ ಹೋಪ್ದಿದ್ದು ಹೇಳಿ ನೆನಪಾರೂ ಮಾಡು, ಅಪ್ರೂಪಕ್ಕೆ ಸಿಕ್ಕಿದ್ವಲೇ ದೋಸ್ತ್ರು... ಅವ್ಕೂ ಗಡಬಿಡಿ ಆಗ್ತು ಈಗ ಪಾಪ... ’ ಅನ್ನುತ್ತ ಒಳನಡೆದರು.

ನಾನಾ...ಒಂದು ಸಲ ಏನನ್ನಾದ್ರೂ ಹೇಳಿಬಿಟ್ರೆ ಮುಗೀತು, ಇನ್ನೊಂದು ಸಲ ಹೇಳೋದೂ ಇಲ್ಲ, ಕೇಳೋದೂ ಇಲ್ಲ. ಒಣಜಂಭ ಅಂದುಕೊಂಡ್ರೂ ಪರವಾಗಿಲ್ಲ. ಒಂದೇ ಸಲಕ್ಕೆ ನನ್ ಈ ಹಾಳುಬುದ್ಧಿ ಬದಲಾಗೋದಾದ್ರೂ ಹ್ಯಾಗೆ? ನಾನೇನೂ ಕೇಳ್ಲಿಲ್ಲ.

ಮತ್ತೂ ಹದಿನೈದು ನಿಮಿಷಗಳು ಸರಿದಾಗ ‘ರವಿ ಲೇಟಾತೋ...’ ಅಂತ ಹೇಳೋಣ ಅಂದುಕೊಂಡವಳು ಅವನ ಮುಂದೆ ಕುಳಿತ ಅತಿಥಿಗಳ ನೆನಪಾಗಿ ಸುಮ್ಮನೆ ಮತ್ತೆ ವಾಪಸ್ ಬಂದು ಮತ್ತೆ ಟಿ.ವಿ ಮುಂದೆ ಕುಳಿತೆ. ಹೊರಗಡೆಯಿಂದ ಒಳಬಂದ ಮಾವನವರು ಟಿ.ವಿ ಮುಂದಿದ್ದ ನನ್ನ ನೋಡಿ ‘ಎಂತ ಆತೇ ಕೂಸೆ..’ ಅಂದ್ರು. ಅಂದರೆ ನನ್ನ ಈ ಜನಗಳಿಗೆ ಚೆನ್ನಾಗಿ ಗೊತ್ತಾಗ್ಬಿಟ್ಟಿದೆ ನನ್ನ ಬಗ್ಗೆ. ನನಗೆ ಬೇಜಾರಾಗಿದ್ರೆ ಮಾತ್ರ ಟಿ.ವಿ ಮುಂದೆ ಕೂತಿರುತ್ತೇನೆ ಅನ್ನುವದನ್ನೂ ಅರ್ಥೈಸಿಕೊಂಡಿದ್ದಾರೆ ಇವರು. ಸ್ವಲ್ಪ ಗಂಭೀರವಾಗಿಯೇ ‘ಎಂತ ಆಜಿಲ್ಲೆ’ ಅಂದೆ, ರವಿಯ ಮೇಲಿನ ಕೋಪವನ್ನು ಮಾವನವರ ಮೇಲೆ ಬಿಟ್ಟೆ.

ಮಾವನವರು ನಂಗೆ ಹೀಗೆ ಫ್ರೆಂಡು. ಏನನ್ನಾದ್ರೂ ಎಲ್ಲಾದ್ರೂ ಇಟ್ಕೊಂಡು ಹುಡುಕೋವಾಗ( ಹೆಚ್ಚಾಗಿ ಸ್ವಿಚ್ ಆಫ್ ಆಗಿರೋ ಮೊಬೈಲೋ ಅಥವಾ ಹೇರ್ ಕ್ಲಿಪ್ಪೋ ಹೀಗೆ...) ಸಹ ಅವರು ನನ್ನ ಸಾಹಾಯಕ್ಕೆ ಬರಬೇಕಾಗುತ್ತದೆ. ಸಣ್ಣಪುಟ್ಟದಕ್ಕೆ ಕಾಲೆಳೆಯುವ ಅವರೊಡನೆ ಸುಳ್ಳೆಪುಳ್ಳೆ ಕಾದಾಟ ನಂಗಿಷ್ಟ. ಸಂಜೆ ಅವರ ಜೊತೆ ಪೇಟೆಗೆ ಹೋಗಿ ಮಿರ್ಚಿಬಜೆ, ಅರ್ಧರ್ಧ ಮಸಾಲೆ ದೋಸೆ ತಿಂದು ವಾಪಸು ಬರೋವಾಗ ಅಲ್ಲಿ ಮಾವನವರ ಪರಿಚಯದವರ್ಯಾರಾದರೂ ಸಿಕ್ಕು ‘ಭಂಡಿ ಹೆಗಡೆಯವ್ರು.. ಮಗಳ ಜೊತೆ ಪೇಟೆಗ್ ಬಂದಿದ್ದಾ?’ ಅಂತ ಕೇಳಿದರೆ ಅವರು ಖುಷಿಖುಷಿಯಿಂದ ‘ಹ್ಞ...ಹೌದು ’ ಅಂದರೆಂದರೆ ಅಲ್ಲಿಗೆ ಎಲ್ಲ ಸರಿಯಾಗುತ್ತದೆ. ಪೇಟೆಯಲ್ಲಿ ಹೊಟ್ಟೆ ತುಂಬ ತಿಂದು ಮನೆಗೆ ಹೋಗಿ ಸರಿಯಾಗಿ ಊಟ ಮಾಡದೇ ಇದ್ದಾಗ ‘ಮೊದ್ಲೇ ಹೇಳಿದ್ರೆ ಅನ್ನಕ್ಕೇ ಇಡ್ತಿದ್ನಿಲ್ಲೆ’ ಅಂತ ಅತ್ತೆಯವರು ಹೇಳಿದರೆ ಅವರ ಮುಖ ನೋಡಿ ನಕ್ಕು ಬಿಡುತ್ತೇನೆ. ಈಗ ಅವರು ನಕ್ಕೇ ನಗುತ್ತಾರೆ.

ಅದನ್ನೆಲ್ಲ ಹೇಳ್ತಾಇದ್ರೆ ಇವತ್ತು ಮುಗಿಯೋಲ್ಲ ಬಿಡಿ. ವಿಷ್ಯ ಏನಂದ್ರೆ ನಾಳೆ ಸಂಜೆಯಾದ್ರೆ ಬೆಂಗಳೂರು ಬಸ್ ಹತ್ತಬೇಕು. ನಾಡಿದ್ದು ಸಂಜೆ ಫ್ಲೈಟ್ ಹತ್ಬೇಕು. ವಿಷಯ ಹೀಗಿಲ್ಲವಾಗಿದ್ದಲ್ಲಿ ಈ ಮೈದುನ ಎಷ್ಟು ಹೊತ್ತು ಯಾರ ಹತ್ರ ಮಾತಾಡಿದ್ರೂ ನಂಗೇನೂ ತೊಂದ್ರೆ ಇರ್ಲಿಲ್ಲ. ಒಂದಿಷ್ಟು ಆವತ್ತೇ ಮುಗಿಸಬೇಕಾಗಿದ್ದ ಖರೀದಿ ಕೆಲಸ ಹಾಗೇ ಉಳಿದಿತ್ತು. ಆದರೆ ಅವನ ಗೆಳೆಯರೂ ಅಪರೂಪಕ್ಕೆ ಸಿಕ್ಕಿದ್ದಾರೆ. ಅವರೂ ಅವನಿರುವ ದೇಶಕ್ಕೆ ಕಾರ್ಯ ನಿಮಿತ್ತ ಹೊರಟವರು. ಸಲಹೆ-ಚರ್ಚೆ ನಡೀತಾ ಇತ್ತು. ಅವನೂ ನಾಳೆಯೇ ಬೆಂಗಳೂರಿಗೆ ಹೊರಟು, ನಾಡಿದ್ದು ಆಷ್ಟ್ರೇಲಿಯಾಕ್ಕೆ ತೆರಳುವವನಾದ್ದರಿಂದಲೂ, ಅವರು ಅಪರೂಪಕ್ಕೆ ನಮ್ಮ ಮನೆಗೆ ಬಂದ ಅತಿಥಿಗಳಾಗಿದ್ದರಿಂದಲೂ ಮಾತುಕತೆ ನಡೆಯುತ್ತಲೇ ಇತ್ತು. (ಮಾತಿಗೆ ಜನ ಸಿಕ್ಕಿಬಿಟ್ಟರೆ ಅಣ್ಣ ತಮ್ಮ ಇಬ್ಬರೂ ಒಂದೇ)

ನಾನು ಅಡುಗೆ ಮನೆಯಲ್ಲಿ ಅವನನ್ನು ನೋಡಿದಾಗ ಕೈಯಲ್ಲಿ ಮುಗಿದು ಹೋದ ಒಂದೆರಡು ಬ್ಯಾಟರಿಗಳನ್ನು ಆ ಕೈಯಿಂದ ಈ ಕೈಗೆ, ಈ ಕೈಯಿಂದ ಆ ಕೈಗೆ ಬದಲಿಸುತ್ತ ಮಾತನಾಡ್ತಿದ್ದ. ಮಾತೆಲ್ಲ ಮುಗಿದು ಅಡುಗೆ ಮನೆಯಿಂದ ಹೊರಬಿದ್ದು ಟಿ.ವಿ ಇದ್ದ ಜಾಗಕ್ಕೆ ಬಂದವರು ‘ಅತ್ಗೆ, ಬಾರೆ ಯಮ್ಮನಿಗೆ, ಬತ್ಯ ಯಂಗ’ ಅಂತ ಹೊರಟಾಗ ಮನೆಗೆ ಬಂದ ಅತಿಥಿಗಳು ಬೇಗ ಹೊರಟರಲ್ಲ ಅನ್ನುವ ಬೇಸರ ಹಾಗೂ ಈಗ ರವಿ ಪೇಟೆಗೆ ಹೊರಡುತ್ತಾನೆ ಅನ್ನುವ ಖುಷಿ ಎಲ್ಲ ಒಟ್ಟಿಗೇ. ನನ್ನ ಬುದ್ಧಿ ಅರಿತಿದ್ದ ಈ ರವಿ ಮಹಾಷಯ ಅವರನ್ನು ಬೀಳ್ಕೊಡಲು ಅವರ ಹಿಂದೆಯೇ ಹೊರಡುತ್ತ ಅವರೊಡನೆ ಮಾತನಾಡುತ್ತಲೇ ತನ್ನ ಕೈಯ್ಯಲ್ಲಿದ್ದ ಬ್ಯಾಟರಿಗಳನ್ನ ನನ್ನ ಕೈಗೆ ವರ್ಗಾಯಿಸಿ ರಾಜೀ ಮಾಡಿಕೊಂಡು ಅವರ ಹಿಂದೆ ಹೊರನಡೆದ.

ಎಲ್ಲರಿಗೂ ಟಾಟಾ ಹೇಳಿ ಮನೆಯಿಂದ ಹೊರಟ ಗಾಡಿ ಸೀದ ಗಜಾನನ ಸ್ಟೋರ್ಸ್ ಎದುರು ನಿಂತಿತ್ತು. ಅಲ್ಲಿ ಹೋಗಿದ್ದೇಕೆಂದರೆ ಹಿಂದಿನ ದಿನ ಒಂದಿಷ್ಟು ಬಟ್ಟೆ ಖರೀದಿಸಿ ಬಿಲ್ ನೋಡುತ್ತ ಆಚೆ ಬಂದಾಗ ಹೇಳಿದ್ದ ರವಿ ‘ಭಾರೀ ಕಡ್ಮೆ ಹಾಕಿದ್ನಲೇ ಬಿಲ್ ಅಲ್ಲಿ’ ಅಂದಿದ್ದ. ಮನೆಗೆ ಬಂದು ನೋಡಿದ್ರೆ ನಾನು ಆರಿಸಿಟ್ಟ ಒಂದು ಇಳಕಲ್ ಸೀರೆ ಅಂಗಡಿಯಲ್ಲೇ ಬಿಟ್ಟು ಹೋಗಿತ್ತು. ಹಾಗಾಗಿ ಅದರ ಬೆಲೆಯನ್ನೂ ಬಿಲ್ ಅಲ್ಲಿ ಸೇರಿಸಿರಲಿಲ್ಲ.

ಗಜಾನನ ಸ್ಟೋರ್ಸ್ ಕೆಲಸ ಮುಗಿಸಿ ಹೊರಬಿದ್ದು ‘ಇನ್ನೆಂಥ ಕೆಲ್ಸ? ಲಿಸ್ಟ್ ನೋಡು’ ಅಂದಾಗ ನಾನು ನಿಧಾನಕ್ಕೆ ‘ಸ್ಟಫ್ಸ್ ಟು ಬಿ ಡನ್’ ಲಿಸ್ಟ್ ತೆಗೆದು ಅವನ ಕೈಗೇ ಕೊಟ್ಟೆ. ಲಿಸ್ಟ್ ಅಲ್ಲಿನ ಕೊನೆಯ ಸಾಲು ಓದಿ ಕಣ್ಣರಳಿಸಿ ಮುಖ ನೋಡಿದ. ನನಗೆ ಅರ್ಥವಾಯಿತು. ಏಕೆಂದರೆ ಆ ಲಿಸ್ಟ್ ಬರೆದದ್ದು ನಾನೇ. ಇಷ್ಟೆಲ್ಲ ಕೆಲಸಕ್ಕೇ ಸಮಯ ಸಾಕಾಗದಷ್ಟು ಗಡಿಬಿಡಿಯಿರುವಾಗ ‘ಮಸಾಲೆ ಪೂರಿ ಕೊಡಿಸು’ ಅಂತ ಕೇಳುವುದಾದರೂ ಹೇಗೆ? ಆಗಲೇಬೇಕಾಗಿದ್ದ ಕೆಲಸಗಳ ಪಟ್ಟಿಯಲ್ಲಿ ‘ಮಾಸಾಲೆ ಪೂರಿ’ ಅಂತಲೂ ಸೇರಿಸಿದ್ದೆ. ಭಾರತಕ್ಕೆ ಬಂದು ಮೂರುವಾರವಿದ್ದೂ ಮಸಾಲೆ ಪೂರಿ ತಿಂದಿದ್ದು ಮಾತ್ರ ಒಂದೇ ದಿನ. ಆವತ್ತು ಬೆಂಗಳೂರಿನ ಬಿಗ್ ಬಾಝಾರಿನಲ್ಲಿ, ಬಿಟ್ಟರೆ ಇವತ್ತು ಚೀಟಿಯಲ್ಲಿ ಬರೆದಿಡಬೇಕಾದ ಹೊತ್ತು ಬಂದಿತ್ತು.

ಎರಡನೆಯದಾಗಿ ಚಪ್ಪಲಿ ಅಂಗಡಿ ಹೊಕ್ಕು ಚಪ್ಪಲಿ ನೋಡತೊಡಗಿದರೆ ಅಂಗಡಿಯವರು ನಮ್ಮ ಕಾಲಿಗೆ ಚಪ್ಪಲಿಯನ್ನು ತೊಡಿಸಲು ಸಹಾಯ ಮಾಡಿದಾಗ ಯಾಕೋ ಇರಿಸು ಮುರಿಸು. ಮೊದಲೆಲ್ಲ ಚಪ್ಪಲಿ ತಗೊಳುವಾಗ ಅಂಗಡಿಯವರು ತೊಡಿಸಿ, ನಮಗೆ ಇಷ್ಟವಾದ ಮೇಲೆಯೇ ಚಪ್ಪಲಿ ತರುತ್ತಿದ್ದುದೆಲ್ಲ ಈಗಷ್ಟು ಸೊಗಸುತ್ತಿಲ್ಲ. ಮತ್ತೇನಿಲ್ಲ, ನಮ್ಮ ಕಾಲಿಗೆ ಹೊಂದುವ ಚಪ್ಪಲಿಯನ್ನು ನಾವೇ ಧರಿಸಿ ನೋಡಲಾಗದಷ್ಟು ಪರಾವಲಂಬಿತನ ಈಗೀಗ ಇಷ್ಟವಾಗುತ್ತಿಲ್ಲ. ಚಪ್ಪಲಿಯೊಂದನ್ನು ತೊಡಿಸಿ ‘ಅವರಿಗೆ ತೋರ್ಸಿ ಮೇಡಂ’ ಅಂತ ಅಂಗಡಿಯ ಯಜಮಾನರು ನಕ್ಕು ಹೇಳಿದಾಗ ನಾನು ನಗಲಿಲ್ಲ. ಆ ಅಂಗಡಿಯವರು ಶೋಕೇಸ್ ಇಂದ ಚಪ್ಪಲಿಯನ್ನು ತೆಗೆದು ನನ್ನ ಕಾಲಿನಲ್ಲಿನ ಹಳೆ ಚಪ್ಪಲಿ ತೆಗೆಸಿ, ಹೊಸ ಚಪ್ಪಲಿ ತೊಡಿಸುವವರೆಗೂ ಪ್ರತಿಯೊಂದನ್ನೂ ಅಲ್ಲಿಯೇ ಕುಳಿತು ರವಿ ನೋಡುತ್ತಿದ್ದಾನೆ. ಇನ್ನು ನಾನು ಆ ಚಪ್ಪಲಿಯಲ್ಲಿ ಮತ್ತೆ ತೋರಿಸುವುದದರೂ ಏನನ್ನು? ಯಾಕೋ ರವಿಯ ಮುಖ ನೋಡಬೇಕೆನ್ನಿಸಿ ನೋಡಿದೆ. ಅವನು ನನ್ನ ಹಾಗೆಯೇ ಸುಮ್ಮನಿದ್ದ.

ಚಪ್ಪಲಿ ಇಷ್ಟವಾಯ್ತು. ಚಪ್ಪಲಿ ಆಯ್ಕೆ ನನಗೆ ಮೀರಿದ್ದು ಅಂತ ಅಂಗಡಿಯವರು ನಿರ್ಧರಿಸಿದಂತಿತ್ತು. ಅಂಗಡಿಯವರು ಬಿಡುತ್ತಲೇ ಇಲ್ಲ ‘ಬೇಕಿದ್ರೆ ಅವರಿಗೆ ತೋರ್ಸಿ ಮೇಡಂ, ಚೊಲೋ ಉಂಟು ಚಪ್ಪಲಿ, ಹೇಳಿ ಕೇಳಿ ಬಾಟಾ ಅಲ್ವ?’ ಅಂದ್ರು. ಇನ್ನು ಆಗದ ಕೆಲಸವೆಂದು ನಿಧಾನಕ್ಕೆ ಎದ್ದು ನಿಂತು ರವಿಯ ಮುಖ ನೋಡಿ ‘ಹ್ಯಾಂಗಿದ್ದಾ?’ ಅಂತ ಕೇಳಿದೆ. ಅಂವ ನನ್ನಮುಖ ನೋಡಿದ ‘ನಿನ್ನ ಮುಖಕ್ಕೆ ಚೆನ್ನಾಗಿ ಒಪ್ಪುತ್ತದೆ’ ಎನ್ನುವವನಂತೆ. ‘ಹೀಲ್ಡ್ ಇದ್ದಿದ್ ಬ್ಯಾಡ್ದನ, ಅಣ್ಣಯ್ಯನ್ ಕಿಂತ ಎತ್ತರಕ್ಕೆ ಕಾಣ್ತ್ಯನ ನೀನು’ ಅಂದ. ಮದುವೆಯಾದಾಗಿಂದ ಬೇಸರದ ಏಕೈಕ ವಿಚಾರವೇ ಇದು! ಒಂದಿಚು ಹೀಲ್ಡ್ ಇರುವ ಚಪ್ಪಲಿ ತಗೊಂಡರೂ ಸೀರೆ ಉಟ್ಟಾಗ ನಾನು ಇವರಿಗಿಂತ ಎತ್ತರಕ್ಕೆ ಕಾಣಿಸುತ್ತೇನೆ ಅನ್ನುವುದು ಅನೇಕರ ಅಂಬೋಣ. ನನಗೋ ಅಶ್ಚರ್ಯ, ನನಗಿಂತ ೪ ಇಂಚು ಎತ್ತರ ಜಾಸ್ತಿಯಿರುವ ಇವರಿಗಿಂತ ನಾನು ಎತ್ತರ ಕಾಣಿಸುವುದಾದರೂ ಹೇಗೆ ಅನ್ನುವುದು. ಆದರೂ ರವಿ ಈ ಮಾತನ್ನು ಯಾವತ್ತೂ ಹೇಳಿರಲಿಲ್ಲ. ಇವತ್ತು ಅವನೂ ಹೇಳಿದ ಮೇಲೆ ನನ್ನ ಮನಸ್ಸಿಗೆ ಒಪ್ಪಿಗೆಯಾದ ಚಂದದ ಯಾವತ್ತಿನಂತದೇ ಫ್ಲ್ಯಾಟ್ ಚಪ್ಪಲಿಜೊತೆಯನ್ನ ನನಗಾಗಿ ಖರೀದಿಸಿ, ನನ್ನವರಿಗೂ ಹಾಗೂ ರವಿಗೂ ಇಬ್ಬರಿಗೂ ಚಪ್ಪಲಿಗಳನ್ನ ತಗೊಂಡು ಬಂದದ್ದಾಯ್ತು.

ಇನ್ನು ಹೇರ್ ಕ್ಲಿಪ್ ತಗೋಬೇಕು. ಸರಿ, ರಸ್ತೆ ಪಕ್ಕದ ಅಂಗಡಿಯೊಂದಕ್ಕೆ ನುಗ್ಗಿದ್ದಾಯ್ತು. ಹೇರ್ ಕ್ಲಿಪ್, ಹೇರ್ ಬ್ಯಾಂಡ್,
ಬ್ರೇಸ್ ಲೆಟ್’ಗಳ ವಿಚಾರಕ್ಕೆ ರವಿಯೇ ಸರಿ. ‘ಬಾರಾ.. ’ ಅಂತ ರವಿಯನ್ನ ಕರೆದೆ. ಅಂವ ಅಲ್ಲಿಯೇ ಇದ್ದ ಲೆಡೀಸ್ ಬ್ರೇಸ್ ಲೆಟ್ ಒಂದನ್ನು ನೋಡುತ್ತ ‘ಪಲ್ಲವಿಗೆ ಇಂತದೆಲ್ಲ ಒಂದಿಷ್ಟು ತಗಂಡೋಗ್ತಿ’ ಅನ್ನುತ್ತ ಬ್ರೇಸ್ ಲೆಟ್ ಒಂದನ್ನ ಕೈಗೆ ತೊಟ್ಟು ಟೆಸ್ಟ್ ಮಾಡಬೇಕೆನ್ನುವಷ್ಟರಲ್ಲಿ ಅದು ಹರಿದು ಚೆಲ್ಲಾಪಿಲ್ಲಿಯಾಗಿ ಚಂದಕ್ಕೆ ಹರಡಿಕೊಂಡಿತು. ‘ಅದೂ ಲೇಡೀಸ್ ಬ್ರೇಸ್ ಲೆಟ್ ರವೀ...’ ಅಂದೆ.
ಇದಕ್ಕಿಂತ ಮೊದಲು ನಾನು ಹೇರ್ ಕ್ಲಿಪ್ಪೊಂದನ್ನು ಎತ್ತಿಕೊಂಡು ಕೈಯಲ್ಲಿ ಹಿಡಿದು ನೋಡುತ್ತಿರುವಂತೆಯೇ ಅದು ಮುರಿದುಬಿದ್ದಾಗ ಕಣ್ಣುಬಿಟ್ಟು ನನ್ನ ಮುಖ ನೋಡಿ ಆಮೆಲೆ ಸಣ್ಣಕ್ಕೆ ನಕ್ಕಿದ್ದ ರವಿ ಈಗ ಬ್ರೇಸ್ ಲೆಟ್ ಹರಿದು ಹೋದಾಗ ಕಣ್ಮುಚ್ಚಿಕೊಂಡ. (ಒಂದೆರಡು ಸೆಕೆಂಡುಗಳಲ್ಲಿ ಕಣ್ಬಿಟ್ಟ) ಅಂಗಡಿಯ ಓನರ್ ನಮ್ಮನ್ನು ನೋಡುತ್ತ ಕಣ್ ಕಣ್ ಬಿಡುತ್ತ ನಿಂತುಬಿಟ್ಟಿದ್ದರು. ನಾನು ಬಗ್ಗಿ ಕುಳಿತು ಒಂದೊಂದಾಗಿ ಆ ಮಣಿಗಳನ್ನ ಆರಿಸತೊಡಗಿದರೆ ರವಿಯೂ ಸಹಾಯಕ್ಕೆ ಬಂದ. ಓನರು ‘ಇರ್ಲಿ ಬಿಡಿ’ ಅಂತ ನಕ್ಕು ತಮ್ಮ ಸದ್ಗುಣವನ್ನು ಸಾರಿಯೇಬಿಟ್ಟರು. ‘ಅದ್ಕಲ್ಲ, ನಂಗೆ ಬೇಕು ಇದು, ಅದಕ್ಕೇ ಆರಿಸ್ಕೊಳ್ತಾ ಇದೇನೆ’ ಅಂತ ಹೇಳಿದಾಗ ‘ಯಾವುದಕ್ಕಲ್ಲ?’ ಅಂತ ಅವರು ಕೇಳದೇ ಅವರೂ ಸಹಾಯಕ್ಕೆ ಬಂದರು. ಮುರಿದು ಹೋದ ಕ್ಲಿಪ್ ಜೊತೆ ಹರಿದುಬಿದ್ದ ಮಣಿಗಳನ್ನೆಲ್ಲ ಪ್ಯಾಕ್ ಮಾಡಿಸ್ಕೊಂಡು, ಮಾಡಿದ ತಪ್ಪಿಗೆ ಒಂದಿಷ್ಟು ಸ್ಟಿಕರ್ಸ್ (ಬಿಂದಿ), ಹೇರ್ ಕ್ಲಿಪ್ಸ್ ಎಲ್ಲ ತಗೊಂಡು ದುಡ್ಡು ಕೊಟ್ಟು ಹೊರಬಿದ್ದಾಗ ನಮಗಿನ್ನು ಹೆಚ್ಚು ಸಮಯ ಇರಲಿಲ್ಲ.

ಮಧ್ಯೆ ಮಧ್ಯೆ ಅಣ್ಣ ತಮ್ಮ ಒಬ್ಬರಿಗೊಬ್ಬರು ಕೆಲಸ ಕಾರ್ಯಗಳು ಮುಗಿದದ್ದೆಷ್ಟು, ಮಾಡಬೇಕಾದ್ದೆಷ್ಟು ಎನ್ನುವುದನ್ನ ಫೋನಿಸಿ ವಿನಿಮಯ ಮಾಡಿಕೊಳ್ಳುತ್ತ, ಅಂತೂ ಕೆಲಸಗಳನೆಲ್ಲ ಮುಗಿಸಿದೆವು. ಮುಗಿಸಿ ನಟರಾಜ್ ರೋಡಿನಲ್ಲಿ ವಾಪಸ್ ಬರುವಾಗ ಸಿಕ್ಕಾಪಟ್ಟೆ ವಾಹನ ದಟ್ಟಣೆ. ನಮ್ಮ ಹಿಂದಿನ ಗಾಡಿಯ ಮಾಣಿಯೊಬ್ಬ ‘ಬಾವಯ್ಯ...ಹಾರನ್ ಮಾಡ್ಕ್ಯೋತ ಹೋಗ್ದೇ ಇದ್ರೆ ಬೆಳಗಾದ್ರೂ ಮನೆ ಮುಟ್ತ್ವಿಲ್ಲೆ ನಾವು, ಇಲ್ಲಿ ಹಾರನ್ ಮಾಡ್ದೇ ಇದ್ರೆ ಕಳಿತಿಲ್ಲೆ...’ ಅಂತ ಸಲಹಿಸಿದ್ದಲ್ಲದೆ ಹಾರನ್ ಮಾಡುತ್ತ ಮಾಡುತ್ತ ನಮ್ಮ ಮುಂದೆಯೇ ರ್ರುಂಯ್ ಅಂತ ಹೊರಟೇ ಹೋದ. ರವಿಗೆ ಅವರು ಹೇಳಿದ್ದು ಕೇಳಿಸಿರಲಿಲ್ಲವಾದ್ದರಿಂದ ನಾನು ಅವನ ಹೆಲ್ಮೆಟ್ ಹತ್ತಿರ ಹೋಗಿ ಹೆಲ್ಮೆಟ್ ಒಳಗಿದ್ದ ಅವನ ಕಿವಿಗೂ ಕೇಳಿಸುವ ಹಾಗೆ ಸ್ವಲ್ಪ ದೊಡ್ಡ ಧ್ವನಿಯಲ್ಲಿ “ಹಾರನ್ ಮಾಡವಡೋ..’ ಅಂದೆ. ಪಕ್ಕದಲ್ಲಿದ್ದ ಕೆಲವರು ಆ ಕಡೆ ಈ ಕಡೆ ನೋಡಿದರಿರಬೇಕು ಕೂಗಿದವರು ಯಾರಿರಬಹುದು ಅಂತ. ನಾನು ಮಾತ್ರ ಆ ಕಡೆ ಈಕಡೆ ನೋಡದೇ ಕುಳಿತಿದ್ದೆ.

ಹೊಸ ಹೊಸ ಧ್ವನಿಯ ಹಾರನ್ ಗಳನ್ನೆಲ್ಲ ಅಂದರೆ ಹಕ್ಕಿ ಕೂಗಿದಂಗೆ, ನಾಯಿ ಬೊಗಳಿದಂಗೆ ಇರೋಥರದ ಹಾರನ್ ಗಳನ್ನೆಲ್ಲ ಬಳಸುತ್ತ ಮೆಣ್ಸಿಕೇರಿಯಿಂದ ಭಂಡಿ ಎಲೆಕ್ಟ್ರಾನಿಕ್ಸ್ ತನಕವೂ ಒಂದೇ ವೇಗದಲ್ಲಿ ರ್ರುಂಯ್ ಅಂತ ಹೋಗುತ್ತಿದ್ದ ರವಿ, ಉಳಿದಂತೆ ಒಂದಿನಿತೂ ಬದಲಾಗದ ಈ ರವಿಯಲ್ಲಿ ಇವತ್ತು ಕಾಣಿಸಲಿಲ್ಲ. ಒಂದು ಗತಿಯಲ್ಲಿ ಗಾಡಿ ಓಡಿಸುತ್ತಿದ್ದ ರವಿಯಲ್ಲಿ ಪ್ರೌಢತೆ ಇನ್ನಷ್ಟು ಕಾಣಿಸಿತು. ಒಮ್ಮೆಯೂ ‘ನಿಧಾನಕ್ಕೆ ಹೋಗು ರವೀ..’ ಅಂತ ನಾನು ಅವನಿಗೆ ಹೇಳುವ ಪ್ರಸಂಗವೂ ಬರದೇ ನಮ್ಮಿಬ್ಬರ ನಡುವೆ ಜಗಳವೂ ಆಗಲಿಲ್ಲ.

ಕೊನೆಯಲ್ಲಿ ನೀಲೇಕಣಿಯಲ್ಲಿ ಶುಂಠಿ ಸೋಡಾ ಕುಡಿವಾಗ ನನಗೂ ಕೊಡಿಸಿದ. ‘ನಿಂಗೆ ಮತ್ತೆಂತೋ ಕೊಡಸ್ತಿಕಾ...’ ಅನ್ನುತ್ತ ಖರ್ಜೂರದ ಪಾನ್ ಕೊಡಿಸಿದ. ತಿನ್ನುವಾಗ ನನ್ನ ಕೈ ಅಂಟಾಯಿತು. ಕೈತೊಳೆಯಲು ನೀರು ಬೇಕು ಅಂದೆ. ಕಣ್ಬಿಟ್ಟು ಗಾಡಿ ಹತ್ತಿ ಗಾಡಿ ಸ್ಟಾರ್ಟ್ ಮಾಡಿದ. ಅಂಟಾದ ಕೈಯ್ಯಲ್ಲಿ ಖರೀದಿಸಿದ ವಸ್ತುಗಳ ಬ್ಯಾಗ್ ಹಿಡ್ಕೊಂಡು ಗಾಡಿಯಲ್ಲಿ ಕೂತ್ಕೋಳೋಲ್ಲ ಅಂತ ಹೇಳಿದ್ದಕ್ಕೆ ‘ನೀನೇನ್ ತಲೆ ಮ್ಯಾಲ್ ಹೊತ್ಗಂಡ್ ಕುತ್ಗತ್ಯ, ಬ್ಯಾಡ್ದೇ ಹೋದ್ರೆ ಬಿಸಾಕ್ ಅತ್ಲಗೆ’ ಅಂದ. ನಾನು ಗಾಡಿಯಲ್ಲಿ ಕುಳಿತೇ ಅವನ್ನೆಲ್ಲ ಕೆಳಕ್ಕೆ ಬಿಸಾಕಿ ನನ್ನ ಮುಗ್ಧತೆಯನ್ನ ಪ್ರದರ್ಶಿಸಿದೆ. ಎಲ್ಲವನ್ನೂ ಎತ್ತಿಕೊಟ್ಟ, ಇಟ್ಕೊಂಡು ಕುಳಿತೆ.

ಕೆಲಸಗಳನ್ನೆಲ್ಲ ಮುಗಿಸಿಕೊಂಡು ಮೂವರೂ ಒಟ್ಟಾಗಿ ಮನೆಗೆ ಬಂದೆವು. ಊಟ ಮುಗಿಸಿ ಒಂದೆರಡು ತಾಸು ಎಲ್ಲರೂ ಒಟ್ಟಿಗೆ ಅಪ್ಪಯ್ಯ -ಆಯಿ(ಅತ್ತೆ-ಮಾವ)ಯವರ ರೂಮಿನಲ್ಲಿ ಕುಳಿತು ಹರಟಿದೆವು. ನನ್ನ ಅಮ್ಮ, ತಮ್ಮ ಎಲ್ಲರೂ ಆವತ್ತು ನಮ್ಮ ಮನೆಯಲ್ಲಿ ಸೇರಿದ್ದುದು ಖುಷಿಯನ್ನಿಷ್ಟು ಹೆಚ್ಚಿಸಿತ್ತು.

ಆ ವತ್ತು ರಾತ್ರಿ ನಿದ್ರೆ ಬರುವುದು ತಡವಾಯ್ತಿರಬೇಕು. ಆದರೂ ಬೆಳಗಾಯ್ತು. ಮಧ್ಯಾಹ್ನವೂ ಆಗಿ ಊಟವಾದ ತಕ್ಷಣ ಅಮ್ಮ ‘ಹೊರಟುಬಿಡ್ತೀನಿ, ರಾತ್ರಿ ನೀವೆಲ್ಲ ಹೊರಡುವ ಸಮಯದಲ್ಲಿ... ಬೇಡ ಈಗ್ಲೇ ಹೊರಟುಬಿಡ್ತೀನಿ’ ಅಂತ ಹೇಳಿ ಮೊಮ್ಮಗನನ್ನ ಮುದ್ದಿಸಿ, ನನ್ನ ಹಣೆಗೂ ಒಂದು ಮುತ್ತಿಟ್ಟು ಆಟೋ ಹತ್ತಿ ಮುಂದೆ ಹೋದ್ಮೇಲೆ ಕಣ್ಣೊರಿಸಿಕೊಂಡರಿರಬೇಕು. ಅಮ್ಮನ ಕಣ್ಣೀರು ಆಚೆ ಬಂದಿದ್ದೇ ಅದರೆ ಖಂಡಿತ ತಮ್ಮ ಒರೆಸಿರುತ್ತಾನೆ ಎಂಬ ಸಮಾಧಾನದಿಂದ ಮನೆಯವರೆಲ್ಲರ ಜೊತೆ ಒಳಬಂದೆ.

ಸಂಜೆಯಾಗ್ತಿದ್ದ ಹಾಗೆ ಗೆಳೆಯ ಗೆಳತಿಯರು ಒಬ್ಬೊಬ್ಬರಾಗಿ ಸೇರುತ್ತಿದ್ದರೆ ಮನೆಯೊಳಗೆ ಬರೀ ನಗು ಅಪ್ಪುಗೆ. ಮಾತೆಲ್ಲ ಖರ್ಚಾಗಿ ಹೋದಂತೆನಿಸ್ತು ನಮಗೆ ಗೆಳತಿಯರಿಗೆ. ಗೆಳೆಯರೆಲ್ಲ ಸುಮ್ಮ ಸುಮ್ಮನೆ ನಗುತ್ತಲಿದ್ದರು. ‘ಬೇಗ್ನೆ ಊಟ ಮಾಡಿ ರೆಡಿಯಾಗ್ರೋ...’ ಅನ್ನುವಂಥಹ ಮಾತಿಗೂ ನಗುತ್ತಲಿದ್ದರು. ನಕ್ಕು ವಾತಾವರಣವನ್ನು ತಿಳಿಯಾಗಿಸೋದಕ್ಕೋ, ಅಥವಾ ಒಳಗೆ ನಡೆಯುತ್ತಲಿದ್ದ ಅಗಲಿಕೆಯ ನೋವನ್ನ ಕರಗಿಸಲಿಕ್ಕೋ... ಒಟ್ಟಿನಲ್ಲಿ ಹೀಗೆಲ್ಲ ಮಾಡುತ್ತಲಿದ್ದರು. ಅಂತೂ ನಮ್ಮ ನಾಲ್ವರ ಹತ್ತು ಬ್ಯಾಗುಗಳು ಮನೆಯಿಂದಾಚೆ ಬಂದಾಗ ಮನೆಯೆಲ್ಲ ಖಾಲಿಯಾಯಿತು. ನಾವೂ ಹೊರಬಂದಾಗ.....


ಪೇಟೆಯೊಳಗೆ ಬಂದಾಗ ಬೆಂಗಳೂರಿಗೆ ಹೊರಟುನಿಂತಿದ್ದ ವಿ ಆರ್ ಎಲ್ ನಮಗೇ ಕಾಯುತ್ತಲಿತ್ತು. ನಾವು ನಾಲ್ವರು ಬಸ್ ಹತ್ತಿದೆವು. ನಮ್ಮನ್ನು ಬೀಳ್ಕೊಡಲು ಬಂದಿದ್ದ ಇಪ್ಪತ್ತೈದು ಮೂವತ್ತು ಜನರೆಲ್ಲ ಬಸ್ಸಿನ ಹೊರಗೆ ನಿಂತಿದ್ದರು. ಕಿಟಕಿಯಲ್ಲಿ ಬಗ್ಗಿ ಸೀಟಿನಲ್ಲಿ ಕುಳಿತುಕೊಳ್ಳುತ್ತ ಟಾಟಾ ಟಾಟಾ ಎನ್ನುವಾಗ ಜೀನ್ಸ್ ಕಿಸೆಯಲ್ಲಿದ್ದ ಪಾನ್ ನೆನಪಾಗಿ ತೆಗೆದೆ. ಗೆಳೆಯನೊಬ್ಬ ನಮಗಿಷ್ಟವಾಗುವ ಸ್ವೀಟ್ ಪಾನ್ ಕಟ್ಟಿಸಿ ತಂದು ಡೈನಿಂಗ್ ಟೇಬಲ್ ಮೇಲಿಟ್ಟಿದ್ದನ್ನ ಬರುವಾಗ ಅತ್ತೆ ನನ್ನ ಕೈಲಿಟ್ಟಿದ್ದರು, ಕಿಸೆಯಲ್ಲಿ ತುಂಬಿಕೊಂಡಿದ್ದೆ. ತೆಗೆದು ರವಿಯ ಪಾಲನ್ನು ಅವನ ಕೈಲಿಟ್ಟೆ. ತೆಗೆದುಕೊಂಡು ಕಿಸಿಯಲ್ಲಿಟ್ಟುಕೊಂಡ.

ನಮ್ಮನ್ನು ಕಳಿಸಲು ಬಂದಿದ್ದ ಗೆಳೆಯ ಗೆಳತಿಯರು, ಮನೆಯವರು ಕೆಳಗೆ ನಿಂತಿದ್ದರು. ಅರ್ರೆ..ಅಪ್ಪಯ್ಯ ಕಾಣ್ತಾ ಇಲ್ಲೆ.... ಬಸ್ಸಿನಲ್ಲಿ ಬೇಕಾಗದಿರಬಹುದು ಅಂತ ಹಣ್ಣನ್ನು ಮನೆಯಿಂದ ತಂದಿರಲಿಲ್ಲ. ನನಗೇಂತ ಹಣ್ಣು ಕೊಳ್ಳಲು ಅಪ್ಪಯ್ಯ(ಮಾವ) ಹಣ್ಣಿನಂಗಡಿಗೆ ಹೋಗಿದ್ದರಿರಬೇಕು. ಬಸ್ಸು ಇನ್ನೇನು ಬಿಡಬೇಕು ಅನ್ನುವಷ್ಟರಲ್ಲಿ ಬಂದೇ ಬಿಟ್ಟರು. ಕಿಟಕಿಯಲ್ಲಿ ಹಣ್ಣು ಕೊಟ್ಟರು. ತಗೊಂಡೆ. ಇನ್ನೊಂದು ಬಾರಿ ಅವರನ್ನಪ್ಪಿ ಅಳಬೇಕೆನ್ನಿಸಿದರೂ ಬಸ್ಸು ಹೊರಟೇ ಬಿಟ್ಟಿತು. ಟಾ...ಟಾ...

ಏರ್ ಪೋರ್ಟ್ ಹೊಕ್ಕಾಗ ಮಗ ಕೆಳಿದ ‘ಅಮ್ಮಾ...... ಅಪ್ಪಚ್ಚಿ ನಮ್ ಸಂತಿಗೆ ಬರ್ತ್ನಿಲ್ಯ?’ ಅಂತ. ಅಳುತ್ತಿದ್ದ ಮಗನನ್ನ ನಾನು ರಮಿಸಿದೆ ‘ಅಂವ ನಮ್ ಸಂತಿಗೆ ಬರ್ತ್ನಿಲ್ಲೆ ಮಗ, ಅಲ್ಲಿ ಪಲ್ಲವಿ ಚಿಕ್ಕಮ್ಮ ಒಬ್ಳೇ ಆಗೋಗ್ತಲ, ಅದ್ಕೇ ಅಂವ ಮತ್ತೆ ಆಷ್ಟ್ರೇಲಿಯಾಕ್ಕೆ ಹೋಗ್ತ, ಅವಂಗೆ ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಫ್ಲೈಟ್,
ದೇ...ಅಲ್ನೋಡು..
ಇನ್ನೂ ಅಪ್ಪಚ್ಚಿ ಅಲ್ಲಿ ನಿತ್ಗಂಡಿದ್ದ....
ಟಾಟಾ ಮಾಡು...
ದೇ... ಅಲ್ಲಿ....
ಗ್ಲಾಸಿನ್ ಹೊರಗೆ...’


‘ಹಲೋ ಅಪ್ಪಯ್ಯ...ಯಂಗ ಫ್ಲೈಟ್ ಅಲ್ಲಿದ್ಯ, ಹೋಗಿ ಮುಟ್ಟಿದ್ಕುಳೆ ಕಾಲ್ ಮಾಡ್ತ್ಯ, ಟಾಟಾ....’

December 20, 2008

ಕೊನೆಯ ಕನಸಿಗೊಂದು ನಮನ

ಕನಸಿನಂಗಡಿಯೊಡತಿ ನಾನು
ನನಗೆ ಲಾಭ ನಷ್ಟವಿಲ್ಲ
ಬಿದ್ದರೆ ಒಡೆಯುವವು
ಬೆಳೆಸಿದರೆ ಬೆಳೆವವು
ಬಿದ್ದು- ಬೆಳೆಯುವ ನಡುವೆ ಲಾಭನಷ್ಟವೆಲ್ಲ


ಕೊಳುವಾಗ ಕನಸುಗಳ
ಬೆಲೆಯ ಕೇಳುವುದಿಲ್ಲ
ಮಾರಿಬಂದ ಲಾಭಕ್ಕೆ
ಮಾರುಹೋಗುವುದಿಲ್ಲ
ಕೊಡು-ಕೊಳುಗಳ ನಡುವೆ ಲಾಭನಷ್ಟವೆಲ್ಲ

ಸತ್ತರೀ ಕನಸುಗಳು
ನೆನಪಾಗಿ ಬರುವವು
ಬೆಳೆಯುತಲಿ ಬದುಕಿದರೆ
ನನಸಾಗಿ ನಲಿಯುವವು
ನೆನಪು-ನನಸುಗಳ ನಡುವೆ ಲಾಭನಷ್ಟವೆಲ್ಲ

ನೆನಪು ಕನಸುಗಳ ನಡುವೆ ಲಾಭ ನಷ್ಟವಿಲ್ಲ

ಕನಸುಗಳ ಹುಗಿಯೆ
ಘೋರಿಯಾಯ್ತದುವೆ
ಸುಟ್ಟರೆ ಕಟ್ಟಿಗೆಯಡಿ
ಸುಡುಬೂದಿಯಾಯ್ತು
ಸುಟ್ಟು-ಹುಗಿಯುವ ನಡುವೆ ಲಾಭನಷ್ಟವೆಲ್ಲ

ನಾನು ಅಂಗಡಿಯ ಒಡತಿ
ಕನಸ ಕಾಣುವುದನಿವಾರ್ಯ
ಅಂಗಡಿಯಿದಿರು ನನ್ನಂತ ನೂರುಜನ
ಇಕೋ ಕೊಳ್ಳಿ ಕನಸುಗಳ
ಕನಸ ಕಾಣುವರಿಗೆಂದೂ ಲಾಭನಷ್ಟವಿಲ್ಲ

December 5, 2008

ಒಗ್ಗಟ್ಟಿಗೆ ಬಲವಿದೆಯೇ?

ಪ್ರಿಯ ಸಹ ಬ್ಲಾಗಿಗರೇ...
‘ನೀಲಾಂಜಲ’ ಕರೆಗೆ ಓಗೊಟ್ಟು ನೀವೂ ನಿಮ್ಮ ಬ್ಲಾಗಿನ ಹಣೆಪಟ್ಟಿಯನ್ನು ಕಪ್ಪುಬಣ್ಣಕ್ಕೆ ಬದಲಾಯಿಸಿದ್ದೀರ? ಹಾಗಾದರೆ ನಮ್ಮ ಈ ಆಂದೋಲನದ ಒಗ್ಗಟ್ಟಿನ ಬಲದ ಸಾಕ್ಷಿಗಾಗಿ ನೀಲಾಂಜಲದಲ್ಲೊಂದು ‘ನಾನೂ ಬ್ಲಾಗಿನ ಹಣೆಪಟ್ಟಿಯನ್ನು ಕಪ್ಪಾಗಿಸಿದ್ದೇನೆ’ ಎಂಬೊಂದು ಮಾತಿನ ಪ್ರತಿಕ್ರಿಯೆ ನೀಡಿ ಒಗ್ಗಟ್ಟಿನ ಬಲವನ್ನು ಹೆಚ್ಚಿಸಿ. ನಮ್ಮ ಒಗ್ಗಟ್ಟಿಗೆ ನಾವೇ ಸಾಕ್ಷಿಯಾಗೋಣ.

ಎಲ್ಲರಿಗೂ ವಂದನೆ.

November 20, 2008

ಒಡಂಬಡಿಕೆ

ಅದೊಂದು ಚಂದದ ಗಳಿಗೆ. ಆ ಸುಸಂದರ್ಭವೆಂದರೆ ಶ್ರೀ ಜಿ. ಜಿ.ಹೆಗಡೆ, ಕೋಡಗದ್ದೆ ಇವರ ಪರಿಚಯವಾಯ್ತು. ಮಾತಿನ ಮಧ್ಯೆ ಜಿ.ಜಿ.ಹೆಗಡೆಯವರು ಹೇಳಿದರು ‘ಆನೂ ಒಂದು ಪುಸ್ತಕ ಬರಕಂಜಿ’ (ನಾನೊಂದು ಪುಸ್ತಕ ಬರೆದಿಟ್ಟುಕೊಂಡಿದ್ದೇನೆ) . ಆ ಸರಳತೆಯೊಳಗೆ ಕಳೆದುಹೋದೆ.

‘ಇಲ್ಲಿ ಟೈಂ ಪಾಸ್ ಆಗುವುದು ಕಷ್ಟ’ ಎಂದರು. ‘ನನ್ನಲ್ಲಿ ಕೆಲವು ಪುಸ್ತಕಗಳಿವೆ, ಅವೆಲ್ಲ ಬಹುಷಃ ನೀವು ಓದಿದವುಗಳೇ ಆಗಿರಲಿಕ್ಕೆ ಸಾಕು’ ಅಂದೆ. ಇಲ್ಲ, ನಾಲ್ಕಾರು ವರ್ಷಗಳಿಂದೀಚೆಗೆ ಬಂದ ಪುಸ್ತಕಗಳನ್ನ ಓದಲಾಗಿರಲಿಲ್ಲ’ ಎಂದರು. ಮಾತು ಹೀಗೆಯೇ ಅರಳಿಕೊಳ್ಳುತ್ತ ವಸುಧೇಂದ್ರರ ತನಕ ಬಂದು ನಿಂತಿತು.

ಈ ಸಲ ಭಾರತಕ್ಕೆ ಬಂದಾಗ ಸಂದೀಪ ಗಿಫ್ಟಿಸಿದ್ದ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ವಸುಧೇಂದ್ರರ ಲಲಿತ ಪ್ರಬಂಧಗಳ ನೆನಪಾಯ್ತು. ಆ ಪುಸ್ತಕವನ್ನ ಉಡುಗೊರೆ ಕೊಡುವ ಮುನ್ನ ಸಂದೀಪ ಕೇಳಿದ್ದ ‘ನೀ ವಸುಧೇಂದ್ರ ಅವರನ್ನ ಓದಿದ್ಯಾ?’

‘ಇಲ್ಲೆ, ಹಂಗಂದ್ರೆ ಯಾರು?’ ಅಂತ ಕೇಳಿದ್ದೆ ಯಾವತ್ತಿನದೇ ಪೆದ್ದುತನದಲ್ಲಿ.

‘ಇದನ್ನ ಓದು, ಚೊಲೊ ಇದ್ದು’ ಅಂತ ಕೊಟ್ಟ। ಮುಖಪುಟ ಎಲ್ಲೋ ನೋಡಿದೀನಿ ಅನ್ನಿಸ್ತು। ತಕ್ಷಣ ನೆನಪಿಗೆ ಬಂತು ‘ನನ್ನ ಬ್ಲಾಗ್ ಪ್ರೊಫೈಲ್ ಫೋಟೋ ಇದೇ ಥರಹವೇ ಇದೆ’ ಅಂತ। ಆ ಪುಸ್ತಕದ ಮುಖಪುಟದಲ್ಲಿ ಅಮ್ಮನ ಕೈ ಮತ್ತು ಪಾಪುನ ಕಾಲು ಇತ್ತು। ನನ್ನ ಬ್ಲಾಗ್ ಪ್ರೊಫೈಲ್ ಅಲ್ಲಿರೋ ಫೊಟೋ ಅಲ್ಲಿ ಪಾಪುನ ಕಾಲು ಮಾತ್ರ ಇದೆ। ಕಣ್ಣಗಲಿಸಿ, ಹಲ್ಕಿರಿದು ‘ಎಷ್ಟ್ ಚೊಲೋ ಇದ್ದಲಾ....’ ಅಂದೆ। ಅದ್ಕೇ ಕೊಟ್ಟಿದ್ದು ಅಂದ। ಸಂದೀಪನಿಗೆ ಥ್ಯಾಂಕ್ಸ್ ಹೇಳಿದ್ನೋ ಬಿಟ್ನೋ ಮರ್ತಿದೀನಿ। ಆ ಪುಸ್ತಕವನ್ನ ಓದಿಯಾದ್ಮೇಲೆ ಸಂದೀಪನಿಗೆ ಥ್ಯಾಂಕ್ಸ್ ಹೇಳಲೇಬೇಕು ಎನ್ನಿಸಿತ್ತು.

ಆವತ್ತು ಸಂಜೆ ಗಾಂಧೀಬಾಜಾರ್ ಅಲ್ಲಿ ‘ಅಂಕಿತ’ ಹೊಕ್ಕಿದ್ದಾಗ ‘ಯುಗಾದಿ’ ‘ಚೇಳು’ ಎಲ್ಲ ತಗೊಂಡು ಮರುದಿನ ಯುಗಾದಿ ಹಬ್ಬ ಇದೆ ಅಂತ ಊರಿಗೆ ಬಂದಿದ್ದೆಲ್ಲ ನೆನಪಾಗಿ ‘ಮಾವಾ...ನನ್ ಹತ್ರ ಯುಗಾದಿ, ಚೇಳು ಎಲ್ಲ ಇದ್ದು, ನಿಮಗೆ ಕೊಡ್ತಿ ನಾನು’ ಅಂದೆ. ‘ನಮ್ಮಮ್ಮ ಅಂದ್ರೆ ನಂಗಿಷ್ಟ ನಂಗೂ ತುಂಬಾ ಇಷ್ಟ, ನೀವು ಓದಿ ನೋಡಿ ನಿಮಗೂ ಇಷ್ಟ ಆಗ್ತು’ ಅಂದಿದ್ದೆ.

ಇವತ್ತು ಮತ್ತೆ ಅವರನ್ನ ಭೇಟಿಯಾಗಿದ್ದೆ। ‘ವಿಚಿತ್ರಾನ್ನ’ ಪುಸ್ತಕದ ಹಾಳೆ ತಿರುವುತ್ತ ‘ವಿಜಯ ಕರ್ನಾಟಕದಲ್ಲಿ ಜೋಶಿಯವರ ಅಂಕಣ ಓದ್ತಿ ನಾನು’ ಅಂದ್ರು. ‘ಇವತ್ತು ಸಾಹಿತ್ಯದ ಬಗ್ಗೆ ಮಾತಾಡುತ್ತಿದ್ದರೆ ಕೇಳಲು ಪುರುಸೊತ್ತು ಸಿಗದಿರುವಂಥಹ ವೃತ್ತಿಯಲ್ಲಿದ್ದೂ ಇವರೆಲ್ಲ ಪುಸ್ತಕ ಬರೆದು ಸಾಧಿಸಿದ್ದಾರಲ್ಲ’ ಅಂತ ಖುಷಿಪಟ್ಟರು ಜಿ.ಜಿ.ಹೆಗಡೆಯವರು. ನಿಜ, ಆಸಕ್ತಿಯಿರುವಲ್ಲಿ ಸಮಯ ತಾನಾಗೇ ಹೊಂದಿಕೊಳ್ಳುತ್ತದೆ ಎನ್ನಿಸಿತು. ‘ಯಾವುದೇ ವಿಷಯದ ಬಗ್ಗೆ ಒಲವು, ಆಸಕ್ತಿ ಇದ್ರಷ್ಟೇ ಇವೆಲ್ಲ ಸಾಧ್ಯ’ ಅಂತ ಹೇಳಿದ ಜಿ.ಜಿ.ಹೆಗಡೆಯವರ ಮಾತು ಅದೆಷ್ಟು ಸತ್ಯ ಎನ್ನಿಸಿತು.

‘ಮಂಕುತಿಂಮನ ಕಗ್ಗ’ ಗಳಲ್ಲೊಂದಿಷ್ಟನ್ನು ತಮ್ಮ ಕೈಯ್ಯಾರೆ ಟೈಪಿಸಿ, ಪ್ರಿಂಟ್ ಔಟ್ ತೆಗೆದುಕೊಟ್ಟರು. ಅತ್ತೆ(ಜಿ।ಜಿ।ಹೆಗಡೆಯವರ ಪತ್ನಿ) ಯವರು ಕೊಟ್ಟ ರುಚಿಯಾದ ಖೀರನ್ನು ನಾನು ಸವಿಯುತ್ತಲಿದ್ದರೆ ಮಾವ(ಜಿ.ಜಿ.ಹೆಗಡೆಯವರು) ರಾಗವಾಗಿ ಕಗ್ಗವನ್ನು ಹೇಗೆ ಹಾಡಿಕೊಂಡರೆ ನಾಲಿಗೆಯಲ್ಲಿಯೇ ಉಳಿದೀತು ಅಂತ ತೋರಿಸುತ್ತಿದ್ದರೆ ನನ್ನ ನಾಲಿಗೆಯಲ್ಲಿದ್ದ ರುಚಿ ಖೀರಿನದೋ ಅಥವಾ ಕಗ್ಗದ್ದೋ ಗೊತ್ತಾಗಲಿಲ್ಲ.

ಬರುವಾಗ ಜಿ.ಜಿ.ಹೆಗಡೆಯವರು ತಮ್ಮ ಕವನ ಸಂಕಲನದ ಪ್ರತಿಯೊಂದನ್ನು ಕೈಗಿತ್ತರು. ಮತ್ತೆ ಯಾವತ್ತಿನಂಗೆ ಕಣ್ಣಗಲಿಸಿ ಹಲ್ಕಿರಿದು ‘ಥ್ಯಾಂಕ್ ಯೂ’ ಅಂದೆ. ‘ಆವರಣ’ ಹಾಗೂ ‘ಜಯಂತ ಕಾಯ್ಕಿಣಿ ಕಥೆಗಳು’ ಇವೆರಡನ್ನು ಅವರಿಗೆ ಓದುವುದಕ್ಕೋಸಕರ ಕೊಟ್ಟು, ಎಲ್ಲರಿಗೂ ಟಾಟಾ ಹೇಳಿ ಅವರ ಮನೆಯಿಂದ ಹೊರಟಿದ್ದೆ. ದಾರಿಯಲ್ಲಿಯೇ ಅವರ ಕವನ ಸಂಕಲನ ತೆರೆದು ಓದಲಾರಂಭಿಸಿದ್ದೆ. ಸ್ಟ್ರೀಟ್ ಲೈಟ್ ಎದುರುಬಂದಾಗೆಲ್ಲ ಸರಸರನೆ ಓದಿಕೊಂಡು ಕತ್ತಲು ಬೆಳಕಿನಾಟದಲ್ಲಿ ಎರಡು ಕವನ ಓದುವಷ್ಟರಲ್ಲಿ ಮನೆ ತಲುಪಿದ್ದೆವು. ನನ್ನವನು ‘ಮನೆ ಬಂತು, ಇಳಿ ’ ಅಂದ. ‘ಇವತ್ತು ಈ ಕವನ ಪುಸ್ತಕ ನಂಗೆ ಕೊಡು, ನಾನು ಬೇಗ ಓದಿ ಮುಗ್ಸಿ ನಾಳೆ ನಿಂಗೆ ಕೊಡ್ತಿ’ ಅಂದವನ ಮಾತಿಗೆ ದುರುಗುಟ್ಟಿ ಅವನ ನೋಡಿದ್ದೇ ಉತ್ತರ. ‘ನೀನಿವತ್ತು ಇದನ್ನ ಓದು’ ಅಂತ ಬೇರೊಂದು ಚಂದದ ಪುಸ್ತಕವನ್ನ ಅವನಿಗೆ ಹಿಡಿಸಿ ಇಲ್ಲಿ ಬಂದು ಒಬ್ಬಳೇ ಕುಳಿತು ಜಿ.ಜಿ.ಹೆಗಡೆಯವರ ಚಂದದ ಕವನಗಳನ್ನ ಓದ್ತಾ ಇದ್ರೆ ಯಾಕೋ ಅವುಗಳನ್ನ ನಾನೊಬ್ಬಳೆ ಓದೋಕೆ ಮನಸಾಗ್ಲಿಲ್ಲ. ಒಂದು ಕವನವನ್ನು ನೀವುಗಳೂ ನನ್ನೊಡನೆ ಓದಿ ಸವಿಯಲಿ ಎನ್ನಿಸಿತು. ಕವನ ಸಂಕಲನದ ಶೀರ್ಷಿಕೆ ಏನಂತ ಕೇಳಿದ್ರಾ? ಒಡಂಬಡಿಕೆ . ಅದರೊಳಿಗಿಂದ ಈ ಒಂದು ಕವನ ನಿಮ್ಮೆಲ್ಲರಿಗಾಗಿ.

ಸಮರಸ

ಎಲ್ಲರಂತೆಯೆ ನೀನಿರು ಎಲ್ಲರೊಳಗೊಂದಾಗಿರು

ಬಲ್ಲೆನೆಲ್ಲವನೆಂಬ ಗರ್ವದ ಗುಲ್ಲುಸಲ್ಲದು ನಿಷ್ಠುರ

ನಿನ್ನ ಭಿನ್ನತೆ ಇನ್ನು ಅಧಿಕತೆ

ಭೇದ ಮೆರೆಸುವುದೇತಕೆ?

ಸುಖದ ಆಶಯ ಕೀರ್ತಿ ಹಂಬಲ

ಸಿರಿಪದದ ಪಟ್ಟಕೆ ಕಾತರ

ಪ್ರೀತಿಯಪ್ಪುಗೆ ಪ್ರೇಮ ವರ್ಷಕೆ

ಮಮತೆ ಹೃದಯದ ವಿಕಸನ

ಒಲವು ಹಲಬಗೆ ಚಲವು ತಿಳಿದೊಡೆ

ಗೆಲವು ಲೋಕಕೆ ಸಂಭ್ರಮ

ಮುಗಿಲಗಣ್ಣಿನ ಧಾರೆ ಧುಮುಕದೆ

ನೆಲದ ಎದೆಗುದಿ ಸ್ಪಂದನ

ಹರಿವ ನದಿ ತೊರೆ ತೆರದಿ ಬದುಕಿನ

ಜೀವವಾಹಿನಿ ಧಾವನ

ಹುಟ್ಟುಸಾವಿನ ಸತ್ಯ ಶೋಧನೆ

ಮುಟ್ಟು ಕೊನೆ ಪರ್ಯಂತರ

ಉಗಮಕೆಡೆಯದೊ ಪೂರ್ವದಾರ್ಜಿತ

ಜಗವೆ ಚೇತನ ನಿಗಮವು

*****************************

ಓದುತ್ತ ಕುವೆಂಪು ನೆನಪಾಗುತ್ತಿದ್ದಾರೆ। ನಿಜ, ಕೋಡಗದ್ದೆ ಶಿವಮೊಗ್ಗೆಯಿಂದೇನೂ ದೂರವೇನಿಲ್ಲ.

November 13, 2008

ಮುರುಕು ಮಂಟಪದೊಳಗಿನ ಹರುಕುಬುಟ್ಟಿಯೊಳಗೆ...

*ಪುಟ್ಟಪುಟ್ಟಸಾಲುಗಳು ಕಟ್ಟಿಕೊಳ್ಳುತ್ತ ಕಟ್ಟಿಹಾಕುತ್ತವೆ, ಕಟ್ಟನ್ನು ಬಿಡಿಸಿಕೊಳ್ಳುವ ಯತ್ನದಲ್ಲಿ ಬರೆಸಿಕೊಳ್ಳುತ್ತವೆ, ಒರೆಸಿಬಿಡುತ್ತವೆ ।

**********


*ಅಕ್ಷರಗಳನ್ನೇ ಬಿತ್ತಿ ಅಕ್ಷರಗಳನ್ನೆ ಬೆಳೆಯುವ ಕನಸು। ಅಂತದ್ದೊಂದು ದೃಶ್ಯ ಅವನು ಕೆತ್ತಿದ ಯಾವ ಚಿತ್ರದಲ್ಲಿಯೂ ಇರುವುದಿಲ್ಲ, ಅವಳು ಬಿಡಿಸಿದ ಚಿತ್ರಗಳಲ್ಲಿಯೂ।

**********

*‘ಹೀಗೆ ಶುರುವಾದದ್ದು ಇಲ್ಲೀತನಕ ಬಂದು ಮುಟ್ಟುತ್ತದೆ ಅಂತ ಅವಳಿಗೆ ಕಿಂಚಿತ್ ಕಲ್ಪನೆಯೂ ಇರಲಿಲ್ಲ’ ಅವನು ಬರೆದಿಟ್ಟು ಹೋದ ಸಾಲನ್ನ ನಾನು ಕಥೆಯಾಗಿಸ್ತೀನಿ ಅಂತ ನಂಗೂ ನಂಬಿಕೆ ಇರಲಿಲ್ಲ।

**********


*ಕಲ್ಪನೆಗಳ ಕೆತ್ತು, ಕನಸಾಗುವುದಿಲ್ಲ। ಕನಸುಗಳನ್ನು ಹುಗಿ, ಸತ್ತು ಶವವಾಗುತ್ತವೆ, ನಿನ್ನದೇ ನೆನಪುಗಳಾಗಿ ಬೆರೆತುಹೋಗುತ್ತವೆ। ಕನಸುಗಳ ಬಿತ್ತು, ನನಸಾಗುತ್ತವೆ, ನಿನ್ನ ಜೊತೆಯಾಗಿರುತ್ತವೆ।

**********

*ಇವಳು ಶಕುಂತಲೆಯೋ ಅಥವಾ ಶಾಂತಲೆಯೋ ಎಂಬ ಪ್ರಶ್ನೆಗೆ ಉತ್ತರ ಹುಡುವಾಗ ಯೋಚಿಸುತ್ತಿದ್ದ। ಕೊನೆಗೂ ತಾನು ದುಶ್ಶಂತನೋ, ವಿಷ್ಣುವರ್ಧನನೋ ಅರಿವಾಗಲೇ ಇಲ್ಲ।

**********

*‘ಆಹಾ॥ಏನ್ ಮಹಾ...ಪಾನಿ ಪೂರಿ, ಅದನ್ ತಿನ್ನೋಕೆ ಜಯನಗರ ಫೋರ್ಥ್ ಬ್ಲಾಕ್ ಗೇ ಹೋಗ್ಬೇಕಾ? ಹನುಮಂತನಗರ ಕಗ್ಗೀಸ್ ಬೇಕರಿ ಎದ್ರುಗಡೆ ಸಿಗೋ ಮಸಾಲೆಪೂರಿ ತಿಂದ್ರೆ ಆಮೇಲೆ ಅಲ್ಲಿಂದ ನೀವ್ ಕದಲೋಲ್ಲ॥ಗೊತ್ತಾ?’

**********


*ದಿನಾ ಅವನನ್ನ ಕೊರೀತಿದ್ದೆ ಸಿಗರೇಟ್ ಸೇದ್ಬೇಡ, ಬಿಟ್ಬಿಡು ಅಂತ। ಹ್ಞೂ...’ಅಂತಿದ್ದೋನು ಕೊನೆಯಲ್ಲಿ ಬಿಟ್ಟಿದ್ದು ಸಿಗರೇಟನ್ನಲ್ಲ, ನನ್ನ ಜೊತೆ ಮಾತು। ಸಿಗರೇಟಿಗಿಂತ ನನ್ನ ಮಾತು ಅವನನ್ನ ಹೆಚ್ಚು ಸುಟ್ಟಿತ ಅಂತ ಯೋಚನೆ. ನೀತಿಗಳು ಗಳಿಸಿಕೊಟ್ಟಷ್ಟನ್ನೇ ಕಳೆದುಹಾಕಬಲ್ಲವು.

**********


*ಒಳ್ಳೇ ಕಾಫಿ ಬೇಕಾದ್ರೆ ಬನಶಂಕರಿ ಕಾಂಪ್ಲೆಕ್ಸ್ ಹತ್ರ ಸುಳಿದಾಡ್ತಿದ್ರೆ ಕಾಫಿ ಡೇ ಕಾಫಿಯ ಪರಿಮಳ ಅಲ್ಲೇ ಸುಳಿದಾಡ್ತಿರತ್ತೆ। ಸುಗಂಧ ದೂರದವರೆಗೆ ಪಸರಿಸಿಕೊಳ್ಳಬಲ್ಲುದು, ಘಮದ ನೆನಪು ಹೊಸ ಘಮವನ್ನಿತ್ತು ಖುಷಿಕೊಡಬಲ್ಲುದು।

**********


*ಬನಶಂಕರಿ ಕಾಂಪ್ಲೆಕ್ಸ್ ಹತ್ರ ಇರೋ ಕಾಫಿ ಡೇ ಗೆ ಹೋದ್ರೆ ಕಾಫಿ ಸಿಗತ್ತೆ, ಕಾಫಿಯ ಘಮ ಮೆಡಿಕಲ್ ಕಾಲೇಜಿನ ಹುಡುಗ ಹುಡುಗಿಯರ ಸಿಗರೇಟಿನ ಹೊಗೆಯೊಳಗೆ ಹುಗಿದುಹೋಗಿರತ್ತೆ। ತಾಣಗಳ ಘಮದ ತ್ರಾಣವನ್ನು ಸುತ್ತಲಿನ ಗಾಳಿ ನುಂಗಬಲ್ಲುದು।

**********

*ಕಲ್ಲಾಗಿದ್ದೆ। ಅವನು ಕೊಟ್ಟ ರೂಪಕ್ಕೆ ಶಿಲಾಬಾಲಿಕೆಯಾದೆ। ಶಾಂತಲೆ ಅಂದ। ಅವನು ಕೊಟ್ಟ ಉಂಗುರ ಕಳಕೊಂಡು ಶಕುಂತಲೆಯಾದೆ।

****************************************************************************************

October 23, 2008

ವಿಚಿತ್ರಾನ್ನ ಸವಿಯುವಾಗ ಹೀಗೆನಿಸುತ್ತದೆ...

ಯಾರಾದರೂ ಚಿತ್ರಾನ್ನದ ಬಗ್ಗೆ ಮಾತನಾಡುತ್ತ  ಪನ್ ಡಿತರು ಅಂದರೆ ತಕ್ಷಣ  ನೆನಪಿಗೆ ಬರುವ ವ್ಯಕ್ತಿ ನಮ್ಮ ನಿಮ್ಮೆಲ್ಲರ ಪ್ರೀತಿಗೆ, ಅಭಿಮಾನಕ್ಕೆ ಪಾತ್ರರಾದ ಶ್ರೀವತ್ಸ ಜೋಶಿಯವರಲ್ಲವೇ! ಖಂಡಿತ ಈಗ ಪ್ರಸ್ತಾಪಿಸಬಯಸುತ್ತಿರುವುದೂ ಅವರ ಬಗ್ಗೇಯೇ. ಪ್ರೀತಿಯಿಂದ, ಅಭಿಮಾನದಿಂದ, ಗೌರವದಿಂದ ನೀವೆಷ್ಟೇ ತಲೆತಿಂದರೂ ಬೇಸರಿಸಿಕೊಳ್ಳದ ಜೋಶಿಯವರು ನಮ್ಮ ಕಾಲೆಳೆದು ನಗಿಸಬಲ್ಲವರು.  ‘ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ’ ಅಂತ ಹಾಡುತ್ತ ಬೇಸರಿಸಿಕೊಂಡು ಕುಳಿತಿದ್ದ ಪಕ್ಷ ಜೋಶಿಯವರು ನಿಮಗೆ ಮಾತಿಗೆ ಸಿಕ್ಕಿದ್ದೇ ಆದಲ್ಲಿ ಅದು  ಭಾಗ್ಯವೆಂದೇ ಹೇಳಬೇಕು. ನಕ್ಕು ನಗಿಸಿ ಭ್ರಮೆಯಿಂದ ಭುವಿಗೆ ತಂದಿಳಿಸುವ ಚಾಕಚಕ್ಯತೆ ಅವರಲ್ಲಿದೆ.

ಜೋಶಿಯವರು ಉತ್ಸಾಹದ ಚಿಲುಮೆಯಂತೆ ಎಂಬುದನ್ನು  ಹೊಸದಾಗಿ ಹೇಳಬೇಕಾಗಿಲ್ಲ.  ಅನಿವಾಸಿ ಕನ್ನಡಿಗರಿಗೂ ಸಹ  ಸುಲುಭ ಲಭ್ಯವಾದ ಅತ್ಮೀಯಇ-ಪತ್ರಿಕೆಯಾದ ದಟ್ಸ್ ಕನ್ನಡದಲ್ಲಿ ‘ವಿಚಿತ್ರಾನ್ನ’ಪಾತ್ರೆಯ ಒಡೆಯರಾಗಿಯೂ,  ನಮ್ಮ ನಿಮ್ಮೆಲ್ಲರ ನೆಚ್ಚಿನ ದಿನಪತ್ರಿಕೆಗಳಲ್ಲೊಂದಾದ ವಿಜಯ ಕರ್ನಾಟಕದ ‘ಪರಾಗ ಸ್ಪರ್ಶ’ ಅಂಕಣದ ಯಜಮಾನರಾಗಿಯೂ  ಜೋಶಿಯವರು ಚಿರಪರಿಚಿತರು.  ಸಹನಾಮಯಿಯಾದ ಜೋಶಿಯವರು  ಸಹನಾಮಯಿ ಸಹಾನಾರವರ ಮನದೊಡೆಯರು ಸಹ. ಸೃಜನಶೀಲರಾದ ಇವರು ಸೃಜನ್ ಅವರ ಪಿತೃದೇವ ಹಾಗೂ ನಮ್ಮಂಥ ಅನೇಕಾನೇಕ ಓದುಗರ ಅಭಿಮಾನಕ್ಕೆ ಪಾತ್ರರಾದವರು.  ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ  ವೃತ್ತಿಯಲ್ಲಿದ್ದೂ  ‘ವಿಚಿತ್ರಾನ್ನ’ವನ್ನು ಸತತ ಐದುವರ್ಷಗಳಕಾಲ ಪ್ರತಿಮಂಗಳವಾರ ದಟ್ಸ್ ಕನ್ನಡ ಓದುಗರಿಗೆ ಉಣಬಡಿಸಿ ‘ವಿಚಿತ್ರಾನ್ನದಾತಾ ಸುಖೀಭವ’ ಎನಿಸಿಕೊಂಡವರು. ಕಂಪ್ಯೂಟರಿನ ಹಾಳೆಗಳಲ್ಲಿ ಮಾತ್ರ ಲಭ್ಯವಾಗಿದ್ದ ‘ವಿಚಿತ್ರಾನ್ನ’ ಇದೀಗ ಪುಸ್ತಕ ರೂಪದಲ್ಲಿಯೂ ಲಭ್ಯವಿರುವುದು ನಮ್ಮೆಲ್ಲರ ಭಾಗ್ಯ. ‘ಮತ್ತೊಂದಿಷ್ಟು ವಿಚಿತ್ರಾನ್ನ’ಮತ್ತು  ‘ಇನ್ನೊಂದಿಷ್ಟು ವಿಚಿತ್ರಾನ್ನ’ಒಂದಾದ ಮೇಲೆ ಒಂದನ್ನು ಸವಿಯಬಹುದಾದ  ಬುತ್ತಿಯನ್ನದ ಎರಡು ಪಾತ್ರೆಗಳು.


‘ವಿಚಿತ್ರಾನ್ನ’ವನ್ನು  ದಿನಕ್ಕೊಂದು ಕಥೆಯಂತೆ ಓದುತ್ತಿರುತ್ತೇನೆ. ಇವು ನೀತಿಕಥೆಗಳ ಹಾಗಿರದಿದ್ದರೂ ಮಾಹಿತಿಕತೆಗಳಂತೆ ವಿಜೃಂಭಿಸುತ್ತವೆ.  ಹೀಗೇ  ಕುಳಿತಿದ್ದಾಗ  ಹಸಿವಾದರೆ ಕೆಲವೊಮ್ಮೆ ನನ್ನಿಷ್ಟದ ಖಾದ್ಯವಾದ ಚಿತ್ರಾನ್ನದ ನೆನಪಾದಾಗ ಚಿತ್ರಾನ್ನವನ್ನ ಪಾಕಿಸಿ ತಿನ್ನಲು ಸೋಮಾರಿಯಾಗಿ ಕುಳಿತಾಗಲೂ ಜೋಶಿಯವರ ‘ವಿಚಿತ್ರಾನ್ನ’ವೇ ನನ್ನ ಸಹಾಯಕ್ಕೆ ಬರುವುದು.  ನವಿರು ಹಾಸ್ಯ ಚಟಾಕಿಗಳನ್ನೊಳಗೊಂಡ ಜೋಶಿಯವರ ಲೇಖನಗಳು ತುಂಬು ಲವಲವಿಕೆಯಿಂದ ಸಾಗುತ್ತ ಮಾಹಿತಿ ಒದಗಿಸುತ್ತ ಹೋಗುವ ರೀತಿ ಓದುಗರನ್ನು ಸಂತೃಪ್ತಗೊಳಿಸುತ್ತದೆ. ಕೆಲವೆಡೆ ವಿಚಿತ್ರಾನ್ನ ತನ್ನದೇ ಪರಿಮಳವನ್ನು ಹೊಂದಿದ ರುಚಿಯಾದ  ಗಂಜಿಯಷ್ಟು ಸರಳವಾಗಿಯೂ ನಮ್ಮನ್ನು ತಂಪಾಗಿಸುತ್ತದೆ. ಇನ್ನು ಕೆಲವೆಡೆ ಬಂಗಾರಬಣ್ಣಕೆ ಹುರಿದ  ಕಡಲೆಬೇಳೆ ಎನ್ನಿಸಿದರೂ ಸ್ವಲ್ಪ ಅಗಿದು ತಿನ್ನುವವರಿಗೆ ಅದರ ಸ್ವಾದದ ಹಿತವೇ ಬೇರೆ. ‘ವಿಚಿತ್ರಾನ್ನ’ ಬರಿಯ ಒಗ್ಗರಣೆ ಅನ್ನವಾಗಿ ಯಾವತ್ತೂ ಅನ್ನಿಸುವುದೇ ಇಲ್ಲ. ಬೇರೆ ಬೇರೆ ಪ್ರದೇಶಗಳ, ರಾಜ್ಯಗಳ, ನಾಡುಗಳ, ಗ್ರಹಗಳಿಂದ ತಂದ ಉತ್ತಮ ಖಾದ್ಯ ಸಲಕರಣೆ(ವಿಷಯ)ಗಳನ್ನೆಲ್ಲ ಬಳಸಿ ತಯಾರಾದ ಪೌಷ್ಟಿಕ ಖಾದ್ಯವಾಗಿ  ಪರಿಣಾಮ ಬೀರುತ್ತದೆ . 

‘ವಿಚಿತ್ರಾನ್ನ’ ಪುಸ್ತಕ ರೂಪದಲ್ಲಿ ಲಭ್ಯವಿರುವ ವಿಚಾರಕ್ಕೆ ಶ್ರೀವತ್ಸ ಜೋಶಿಯವರನ್ನು ಅಭಿನಂದಿಸುವ ಮೊದಲಿಗೆ ‘ವಿಚಿತ್ರಾನ್ನ’ವನ್ನು ಪುಸ್ತಕರೂಪದಲ್ಲಿಯೂ ಹಾಗೂ ಇ ರೂಪದಲ್ಲಿಯೂ ನಮ್ಮ ಕೈಗೆಟಕುವಂತೆ ಅನುಗ್ರಹಿಸಿರುವದಕ್ಕಾಗಿ ಧನ್ಯವಾದ ಹೇಳಲೇಬೇಕು.     ‘ವಿಚಿತ್ರಾನ್ನ’ಪುಸ್ತಕರೂಪದಲ್ಲಿ ಲಭ್ಯವಿರುವಂಥಹ ಸಿಹಿಸುದ್ದಿಯು ಈಗಾಗಲೇ ನಮಗೆಲ್ಲ ಗೊತ್ತಿರುವಂತದ್ದೇ.  ಪುಸ್ತಕ ರೂಪದಲ್ಲಿ  ‘ವಿಚಿತ್ರಾನ್ನ’ಲಭ್ಯವಿರುವುದರಿಂದ  ಬೇಕಾದ ತಾಣದಲ್ಲಿ ಕುಳಿತು ಅಥವಾ ನಿಂತು ಅದರ ಸವಿಯನ್ನು  ಸವಿಯಬಹುದಾಗಿದೆ. ‘ವಿಚಿತ್ರಾನ್ನ’ ಪುಸ್ತಕ ಲಭ್ಯವಿದೆಯಾ, ಹಾಗಾದರೆ ಇವತ್ತೇ ಕೊಂಡುತಂದು ಆರಾಮವಾಗಿ ಮಲಗಿಕೊಂಡು ಓದಿಬಿಡುತ್ತೇನೆ’ ಅಂತ  ಮಲಗಿಕೊಂಡು ‘ವಿಚಿತ್ರಾನ್ನ’ ಸವಿಯುವಾಗ ಗಂಟಲಲ್ಲಿ ಸಿಕ್ಕೀತಾದರೆ ನನ್ನನ್ನು ನೀವು ಬೈದಲ್ಲಿ ಅದಕ್ಕೆ ನಾನು ಜವಾಬ್ಧಾರಳಲ್ಲ.  ವಿಚಿತ್ರಾನ್ನವು ತದೇಕಚಿತ್ತರಾಗಿ ಕುಳಿತು ಓದುವವರ ಮಿದುಳನ್ನೂ ಮನಸನ್ನೂ ತುಂಬಿಸಿ ಹಸಿವೆಯನ್ನು ಮರೆಸಬಲ್ಲಂತಹುದಾಗಿದೆಯೇ ಹೊರತು ಆಲಸಿಯಾಗಿ ಮಲಗಿ ನಿದ್ರೆತಂದುಕೊಳ್ಳುವುದಕ್ಕಾಗಿ ಓದುವ ಪುಟಗಳನ್ನು ಹೊಂದಿಲ್ಲ. ಅರ್ಥೈಸಿಕೊಳ್ಳುವಂಥಹ, ಆಳವಡಿಸಿಕೊಳ್ಳುವಂಥಹ ವಿಚಾರಧಾರೆಗಳಿಗಿಲ್ಲಿ ಖಂಡಿತ ಕೊರತೆಯಿಲ್ಲ. ಪರಧ್ಯಾನತೆಯಿಂದ ಓದಿದರೂ  ಅರ್ಥವಾಗಿಬಿಡುವಂತೆ ಹೆಣೆದ ದಿಢೀರ್ ಇಷ್ಟವಾಗುವ ಕಥೆಪುಸ್ತಕ ‘ವಿಚಿತ್ರಾನ್ನ’ಅಲ್ಲವೆನ್ನುವುದೂ ಅಷ್ಟೇ ಸತ್ಯ. ಓದುತ್ತ ಓದುತ್ತ ಓದಿಸಿಕೊಂಡು ಆಪ್ತವಾಗುವ ಅಂಕಣಮಾಲೆಯಿದು.   ಜಗತ್ತಿನ ಹಲವು ವಿಚಾರಧಾರೆಗಳ ಹೊತ್ತ ನದಿ, ಮಾಹಿತಿಗಳ ಸರೋವರವೆಂದರೆ ತಪ್ಪಾಗಲಾರದು.     
ಇಂತಹ ‘ವಿಚಿತ್ರಾನ್ನ’ವನ್ನು ನೀವೂ ಸವಿದಿರುತ್ತೀರಿ. ಅಥವಾ ಸವಿಯಬೇಕೆನಿಸಿದ ಪಕ್ಷ ಹೆಚ್ಚಿನ ಮಾಹಿತಿಗಾಗಿ srivathsajoshi@yahoo.com ವಿಳಾಸಕ್ಕೆ ಪ್ರೀತಿಯಿಂದ ಒಂದು ಪತ್ರ ಬರೆಯಿರಿ.  ಪ್ರೀತಿಯಿಂದ ಪ್ರತಿಕ್ರಿಯಿಸುತ್ತಾರೆ.  


‘ವಿಚಿತ್ರಾನ್ನ’ ಓದುಗರ ಮಿದುಳನ್ನ ಸಾಣೆಹಿಡಿದು ಚುರುಕಾಗಿಸಬಲ್ಲುದು, ಹೊಳಪಾಗಿಸಬಲ್ಲುದು.  ಓದುತ್ತ ಓದುತ್ತ ಮನವನ್ನು ಪ್ರಸನ್ನಗೊಳಿಸಬಲ್ಲ ಅಂಕಣಮಾಲೆಯಿದು ಎನ್ನಿಸದೇ ಇರಲಾರದು.  ಓದುತ್ತ ಓದುತ್ತ ಹಲವಾರು ಕಂಡು ಕೇಳರಿಯದ ವಿಷಯಗಳನ್ನೆಲ್ಲ ಕಾಣುತ್ತ ಹೋಗುತ್ತೇವೆ ನಾವಿಲ್ಲಿ. ಜೊತೆ ಜೊತೆಗೆ ಈ ಎಲ್ಲ ವಿಚಾರಧಾರೆಗಳನ್ನ ಹೆಣೆದ ರಚನೆಕಾರರ ಬೌದ್ಧಿಕ ಕುಶಲತೆ ನಮ್ಮನ್ನು ಚಕಿತರನ್ನಾಗಿಸುತ್ತದೆ, ಯೋಚನೆಗೆ ತಳ್ಳುತ್ತದೆ. ಜೋಶಿಯವರ ಸೃಜನಶೀಲತೆ ಬೆರಗುಗೊಳಿಸುತ್ತದೆ.  ಹುಟ್ಟುತ್ತಿರುವ ಸೂರ್ಯನ ಎಳೆಬೆಳಕನ್ನೂ, ಮುಳುಗುವ ಸೂರ್ಯನ ರಂಗನ್ನೂ, ಮುಸ್ಸಂಜೆಯ ತಂಗಾಳಿಯ ಬಾಹ್ಯಸೊಬಗನ್ನು ಸವಿಯುವವರಿಗೂ, ಅವುಗಳ ಆಂತರ್ಯ ಅರಸುವವರಿಗೂ, ಅವುಗಳಿಗೆಲ್ಲ ಮೂಲಹುಡುಕುವವರಿಗೆ,  ಎಳೆಬೆಳಕಿನ ಎಳೆಯ ಜಾಡು ಅರಸುವವರಿಗೆ, ರಂಗಿನ ರಚನೆಗಳ ಅರಿಯಬೇಕೆನಿಸಿದವರಿಗೆ, ತಂಗಾಳಿಬೀಸುವ ದಿಕ್ಕಿಗೊಂದು ಕಾರಣ ಕೇಳುವವರನ್ನು,  ಜಗತ್ತಿನ ಹೊಸ ಹೊಸ ವಿಚಾರಗಳನ್ನೂ ನಮ್ಮದೇ ಭಾಷೆಯೊಳಗೆ ಕಂಡುಕೊಳ್ಳಹೊರಟಿರುವವರಿಗೆಲ್ಲರಿಗೂ  ದಾರಿಯಾಗುತ್ತದೆ ‘ವಿಚಿತ್ರಾನ್ನ’.  ನಾವೆಲ್ಲ ಓದಿ ಅರ್ಥೈಸಿಕೊಳ್ಳಬೇಕಾದ್ದು, ಆಳವಡಿಸಿಕೊಳ್ಳಬೇಕಾದವುಗಳೆಲ್ಲವುಗಳ ಮಾಹಿತಿ ಮಾಲೆಯೇ ‘ವಿಚಿತ್ರಾನ್ನ’ವೆಂದರೆ ಖಂಡಿತವಾಗಿಯೂ ಉತ್ಪ್ರೇಕ್ಷೆಯೆನಿಸಲಾರದು. ‘ವಿಚಿತ್ರಾನ್ನ’ವನ್ನು ಓದಿ ನೋಡಿದಾಗಲೇ ಅರಿವಾಗುವುದು ಪ್ರಾಪಂಚಿಕ ಭಾವಗಳ ಹಾದಿಯಲ್ಲಿ ಮಾಹಿತಿಕೇಂದ್ರಕ್ಕೆ ತಲುಪಿದ್ದೇವೆ ಎಂಬುದು.

  

  

October 15, 2008

ಅರಿವಿಗೇನರಿವು...

ಕುಂಚಕರಿವಿಹುದೆ ತಾ ಬಳಿವ ಬಣ್ಣದ್ದು
ಹರಿವ ಜಲಕೇನರಿವು ತನ್ನಂಚೆ ವಿಳಾಸ
ಆಗಸವು ಅರಿತಿಹುದೆ ತನ್ನಾದಿ ಅಂತ್ಯವನು
ನಿನಗೆ ಅರಿವಿತ್ತೆ ಈ ಹೊಸಿಲು ನಿನದೆಂದು

ಮೊಗ್ಗರಿತು ಅರಳುವುದೆ ಹೂವಾಗಿ ತಾನು
ಮೊಳಕೆಗೇನರಿವು ತಾನೊಂದು ಎಲೆಯೆಂದು
ಸಸಿಗೆ ಅರಿವಿಹುದೇ ನಾಳೆ ತಾ ಮರವೆಂದು
ಹುಟ್ಟು ತಾ ಹುಟ್ಟುವುದೆ ಮರಣವನು ಅರಿತು


ಬತ್ತಿಗರಿವಿಹುದೆ ತಾ ಬೆಳಗುತಿಹೆನೆಂದು
ತೈಲಕೇನರಿವು ದೀಪವೇ ತಾನೆಂದು
ಮೌನ ಅರಿತಿಹುದೆ ತನ್ನರ್ಥವೇನೆಂದು
ಮಾತರಿತು ಮುಗಿವುದೇ ಮೌನ ತಾನೆಂದು

ಸತ್ಯಕ್ಕೆ ಅರಿವಿಹುದೆ ತಾನೊಂದು ಸುಳ್ಳೆಂದು
ಸುಳ್ಳಿಗೇನರಿವು ಶೂನ್ಯ ತಾನೆಂದು
ಆಳಕ್ಕೆ ಅರಿವಿಹುದೆ ತನ್ನೆತ್ತರದ ಮಿತಿ
ಎತ್ತರವು ಅಳೆಯುವುದೆ ತನ್ನಾಳವನ್ನು

ನಿನಗರಿವೆ ನಿನ್ನರ್ಥಕೆ ಅರ್ಥವೇನೆಂದು
ಇಂದುನಾಳೆಗಳಂಚಿಗೆ ಹೆಸರು ಏನೆಂದು
ಅನಂತಕೂ ಅಂತ್ಯವೊಂದಿರಲೇಬೇಕು
ಪ್ರತಿ ಅಂತ್ಯಕೂ ಆದಿಯೊಂದಿರಲೇಬೇಕು

October 9, 2008

ಕುಂಚಕೇನರಿವು ಹಿನ್ನೆಲೆಯ ರಂಗಿನದು...

‘ಕೋಪವಾ?’ ಅಂದವನ ಮಾತಿಗೆ ಮೌನದಲ್ಲಿಯೇ ನಕ್ಕು ಸುಮ್ಮನಾಗಿದ್ದೇನೆ.
‘ನಿನ್ನೊಳಗೇನೋ ನೋವಿದೆ, ಹೇಳುತ್ತಿಲ್ಲ ’ ಅಂದವನ ಮಾತಿಗೆ ನಿಧಾನಕ್ಕೆ ಉಸುರಿದೆ.
‘ಅವನ ಫೋಟೋ ಡೆಸ್ಕ್ ಟಾಪ್ ಅಲ್ಲಿಟ್ಟಿದ್ದೆ , ಈಗ ಕಾಣಿಸ್ತಿಲ್ಲ’ಅಂದೆ.
‘ಓ..ಅದಾ..ಸ್ಸಾ..ರೀ. ನಾನು ನಿನ್ನೆ ಅದನ್ನ ನೋಡಿದೆ, ನಿಂಗೆ ಬೇಡವೇನೋ ಅಂದ್ಕೊಂಡು ನಿನ್ನ ಕೇಳ್ದೇನೇ ರಿಸೈಕಲ್ ಬಿನ್ ಗೆ ಹಾಕ್ಬಿಟ್ಟೆ, ಅಲ್ಲೊಂದ್ಸಲ ಹುಡ್ಕು ಸಿಗ್ಬಹುದು’ ಅಂದ.
ಯಾಕೋ ಏನು ಮಾಡೋಕೆ ಹೋದ್ರೂ ಈಗೀಗ ಕೆಲಸಗಳ್ಯಾವುವೂ ಸುಸೂತ್ರವಾಗಿ ಸಾಗ್ತ ಇಲ್ಲ, ಬರೆಯೋಕೆ ಮನ್ಸಿಲ್ಲ, ಓದೋಕೆ ...ಓದೋಕೂ ಮನ್ಸಿಲ್ಲ.
‘ಸುಮ್ನೆ ಕೂತಿರ್ಬೇಕು ಅಂದ್ಕೊಂಡು ಕೂತ್ಕೊಳ್ಳೋಕೆ ಹದಿಮೂರುವರ್ಷದ ಹುಡುಗಿಗೆ ಸಿಗೋವಷ್ಟು ಟೈಮ್ ನಂಗೆ ಸಿಗತ್ತಾ? ಹದಿಮೂರನ್ನ ತಿರುಮುರುವಾಗಿಡೋಷ್ಟು ವಯಸ್ಸಾಗ್ತ ಬಂತು’ ಅಂತ ಯೋಚಿಸಿದವಳಿಗೆ ನಗು ಬಂತು ‘ವರ್ಷ ಎಷ್ಟೇ ಆದ್ರೂ ದಿನಕ್ಕಿರೋದು ಇಪ್ಪತ್ನಾಲ್ಕು ಗಂಟೆ ಮಾತ್ರ ಅಲ್ಲವಾ?’ ಅನ್ನಿಸಿ ತುಟಿಬದಿಗೆ ನಕ್ಕು ಸುಮ್ಮನಾದೆ.

ಯೋಚಿಸ್ತಿರೋವಾಗ್ಲೇ ಮತ್ತೆ ಕೇಳ್ದ ‘ಏನೇ.. ಯಾಕ್ ಹೀಗಿರ್ತೀಯಾ?’ ಅಂದ.
ಹೀಗೇ ಕೂತಿದ್ರೆ ಇವನಿನ್ನು ಸುಮ್ಮನಿರೋಲ್ಲ ಅಂತ ಗೊತ್ತಾಯ್ತು, ಆಗಿದ್ದಾಗ್ಲಿ, ಹೇಳಿಯೇಬಿಡೋಣ ಅಂದ್ಕೊಂಡು ಹೇಳ್ದೆ ‘ಅವನನ್ನ ಸೆಲೆಕ್ಟ್ ಮಾಡೋಕೆ ಟ್ರೈ ಮಾಡ್ತಿದ್ದೆ, ಆಗ್ಲಿಲ್ಲ ’ ಅಂದೆ ಸಣ್ಣ ಧ್ವನಿಯನ್ನ ಕಷ್ಟಪಟ್ಟು ಆಚೆತಂದ್ಕೊಂಡು. ಇವನೇನಂತಾನೋ ಅನ್ನೋ ಭಯ ಧ್ವನಿಯನ್ನ ಸುತ್ಕೊಂಡ ಹಾಗಿತ್ತು.
‘ಎಲ್ಲಿದಾನೆ ಅವನು?’ ಅಂತ ಕೆಳ್ದ.
‘ಇಲ್ಲೇ....ಸಿಕ್ದ, ನೋಡು’ ಅಂದೆ. ‘ಹಾಗಾದ್ರೆ...magic wand tool ತಗೊಂಡು ಅವನ ಸುತ್ತಲೂ ಒಂದು ಸುತ್ತು ಓಡಾಡ್ಸು, ಆಗ ನೋಡು, ಅವನನ್ನ ನೀನ್ ಸೆಲೆಕ್ಟ್ ಮಾಡ್ತೀಯೋ, ಅವನು ನಿನ್ನ ಸೆಲೆಕ್ಟ್ ಮಾಡ್ತಾನೋ ಗೊತಾಗತ್ತೆ..’ ಅಂತ ಹೇಳಿ ನಕ್ಕವನನ್ನೇ ನೋಡ್ತಾ ಇದ್ದೆ.
ನಂಗೂ ನಗು ಬಂತು ನಿಜವಾಗ್ಲೂ.... ಎಷ್ಟು ಒಳ್ಳೆಯವನು ಅಂತ ಮತ್ತೆ ಮತ್ತೆ ಅನ್ನಿಸಿಬಿಡೋದು ಇಂತ ಗಳಿಗೆಗಳಲ್ಲೇ.....

ಅವನ ಕೈ ಹಿಡ್ಕೊಂಡು ಮನೆಯಾಚೆ ಕರಕೊಂಡುಬಂದು ನಿಲ್ಲಿಸಿ ಆಗಸ ನೋಡ್ತಾ ಅಲ್ಲೇ ನಿಂತ್ಕೊಂಡೆ. ಮತ್ತೆ ಹೇಳ್ದೆ ಅವನ ಕಿವಿಯಲ್ಲಿ ‘ನಿನ್ನ ಸೆಲೆಕ್ಟ್ ಮಾಡಿದ್ದಾಯ್ತು, ನಿನ್ನಿಷ್ಟದ ನೀಲಿಯಲ್ಲಿ ಯಾವ ನೀಲಿಯನ್ನ background ಗೆ ಇಡಲಿ’ ಅಂತ ಕೇಳ್ದೆ. ಇಬ್ರೂ ಆಗಸ ನೋಡ್ತಾ ನಿಂತಿದ್ವಿ. ಆಗಸದಲ್ಲಿ ಆರು ಥರದ ನೀಲಿಗಳು ತೇಲಾಡ್ತಾ ಇದ್ರೆ... ಅವನಲ್ಲಿ ಮುಳುಗ್ತಾ ಇದ್ದ, ಇವನು ಮಸುಕಾಗಿ ನಿಂತಿದ್ದ. ದೂರದಲ್ಲಿ ಹಕ್ಕಿಗಳೆರಡು ಹಾರ್ತಾ ಇದ್ರೆ ರೆಕ್ಕೆಯಿಲ್ಲದೇ ನಾ ಇವನ ಜೊತೆ ಹಾರಡ್ತಾ ಇದ್ದೆ.

ಕುಂಚಕ್ಕೆ ಗೊತ್ತಿರುವುದಿಲ್ಲ ಹಿನ್ನೆಲೆಗೆ ಯಾವ ಬಣ್ಣ ಹೊಂದುತ್ತದೆಯಂತ, ಹಿನ್ನೆಲೆಯ ಬಣ್ಣವನ್ನೂ ನಾವೇ ಆರಿಸಿಕೊಂಡಿರಬೇಕು.

October 2, 2008

ಹ್ಯಾಪಿ ಬರ್ಥ್ ಡೇ... ಬ್ಲಾಗ್ ಮರಿ...


ನಿಮ್ಮೆಲ್ಲರ ಮಡಿಲೊಳಾಡಿದ ಮುದ್ದು ಮರಿಯಿದು. ನಾ ಟೈಪಿಸಿದ ತೊದಲುಗಳನೆಲ್ಲ ಕಲಿತುಕೊಂಡು ನಿಮ್ಮೆಲ್ಲರ ಮುಂದಾಡುತ್ತ ವರ್ಷವುರುಳಿದ್ದನ್ನೇ ನಾನು ಮರೆಯುವಂತೆ ಮರೆಸಿದ ನನ್ನ ಬ್ಲಾಗ್ ಮರಿಯಿದು. ಇವತ್ತು ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಜಯಂತಿಯ ಘಮದ ನಡುವೆಯೇ ನನ್ನೀ ಬ್ಲಾಗ್ ಗೂ ವರುಷ ತುಂಬಿತು. ಇವತ್ತಿಲ್ಲಿ "ನೆನಪು ಕನಸುಗಳ ನಡುವೆ" ಎಂಬ ನನ್ನ ಪುಟಾಣಿ ಬ್ಲಾಗ್ ಮರಿಗೆ ಹುಟ್ಟಿದ ದಿನ. ಬ್ಲಾಗ್ ಮರಿಯನ್ನ ಎತ್ತಿ ಆಡಿಸಿ, ಆನಂದಿಸಿ, ಮುದ್ದಿಸಿ, ಗದರಿ ಅಳಿಸಿ, ನಗಿಸಿ ನಲಿಸಿದ ನಿಮ್ಮೆಲ್ಲರಿಗೂ ಬ್ಲಾಗ್ ಮರಿಯ ಹುಟ್ಟುಹಬ್ಬಕ್ಕೆ ಆಮಂತ್ರಣ ಕೋರುತ್ತಿದ್ದೇನೆ. ಇವತ್ತು ನನ್ನ ಬ್ಲಾಗ್ ಮರಿಯ ಹುಟ್ಟುಹಬ್ಬವನ್ನು ನಿಮ್ಮೆಲ್ಲರ ಸಮ್ಮುಖದಲ್ಲಿ ಆಚರಿಸೋಣ ಅಂತ ನಿಮ್ಮೆಲ್ಲರಿಗಾಗಿ ಕಾಯ್ತಾ ಇಲ್ಲೇ ಬ್ಲಾಗ್ ಮರಿಗೆ ಹೊಸ ಬಟ್ಟೆ ತೊಡಿಸಿ ನಿಮ್ಮೆಲ್ಲರ ಬರುವಿಕೆಯನ್ನೇ ಕಾಯ್ತಾ ನಾನೂ ಮತ್ತು ನನ್ನ ಬ್ಲಾಗ್ ಮರಿ ಇಬ್ಬರೂ ಕುಳಿತಿದ್ದೇವೆ. ನೀವೆಲ್ಲ ಬಂದಾದ ತಕ್ಷಣ ಕೇಕ್ ಕಟ್ ಮಾಡಲಿದ್ದೇವೆ..

September 29, 2008

ತೀರದ ತೀರವಿದು, ಮುಗಿಸದಿರು ಯಾನ...

ಗೆಳೆಯ/ಗೆಳತಿಯರೇ...
ನಮ್ಮೆಲ್ಲರ ಪ್ರೀತಿಯ, ಮುದ್ದಿನ, ಚಂದದ ದೋಣಿಯೊಂದು ದೂರತೀರಯಾನ ಹೊರಟಿದೆ. ಹಿಡಿದು ನಿಲ್ಲಿಸುವ ಬನ್ನಿ. ಸಣ್ಣಗೆ ನಗುವ ತಣ್ಣಗಿನ ಮೌನದಲಿ, ಮುದ್ದಿಸುವ ಮಾತಿನಲಿ, ತಂಪುಗಾಳಿಯಲಿ, ಇಂಪು ಮುಸ್ಸಂಜೆಯಲಿ, ಚುಮುಚುಮು ನಸುಕಿನಲಿ, ಅರೆಬಿರಿದ ಬೆಳಗಿನಲಿ, ಬೆಳಕರೆವ ಹಾದಿಯಲಿ, ಎಳೆಬೆಳದಿಂಗಳಲಿ, ದಿನಬೆಳೆದ ಚಂದ್ರನಡಿ ಸದ್ದಿರದ ತಂಗಾಳಿಯೊಲರಳಿ ಘಮ ಸೂಸಿದ ಮೊಗ್ಗಿನಲಿ, ಗರಿಗರಿಯ ಮಂಜಿನಲಿ, ಬಿಳಿಬೆರೆತ ಇಬ್ಬನಿಯಲಿ, ಭಾವ ಬಿರಿದರಳಿದ ಹೂವಿನಲಿ, ಬಳ್ಳಿಯಂಚಲರಳಿದ ಗೊಂಚಗೊಂಚಲು ಮಲ್ಲಿಗೆಯಲಿ, ನೀರಪರದೆಯಲಿ ಬೆರಳಂಚು ಬೆರೆತಾದ ಆ ಸಣ್ಣ ಅಲೆಯಲ್ಲಿ ನಮ್ಮನೆಲ್ಲ ನವಿರಾಗಿ ಹೊತ್ತೊಯ್ದು ತೀರದಲೆಗಳಲಿ ತೇಲಿಸಿ ನಲಿನಲಿಸಿದ ದೋಣಿಯೊಂದು ಯಾನ ಹೊರಟಿದೆ, ಹಿಡಿದು ನಿಲ್ಲಿಸುವ ಬನ್ನಿ.

ಯಾನವಿರಾಮದಲಿ ಪಯಣಿಸಿದ ಹಾಡು ಇಲ್ಲಿ ಕೆಳಗಿದೆ ನೋಡಿ, ದಯಮಾಡಿ ಹಿಡಿದು ನಿಲ್ಲಿಸಿ ದೋಣಿ...

-ಶಾಂತಲಾ ಭಂಡಿ.


ಆಶೆಯೆಂಬ ತಳವೊಡೆದ ದೋಣಿಯಲಿ ದೂರತೀರಯಾನ..

ಕಣ್ಣಿಗೆ ಕಂಡದ್ದೆಲ್ಲವನ್ನೂ
ಮನದ ಭಿತ್ತಿಯೊಳಗೆ ಮೂಡಿಸಲಾಗುವುದಿಲ್ಲ;
ಒಳಗೆ ಮೂಡಿದ್ದೆಲ್ಲವನ್ನೂ
ಹೊರಗೆ ಹಂಚಿಕೊಳ್ಳಲೂ ಆಗುವುದಿಲ್ಲ.
ಕಂಬನಿಯ ಬದುಕಿಗೆ
ಕವಿತೆಯ ಕರವಸ್ತ್ರ ಕೊಟ್ಟವರು
ಮಾತಿನ ಹಾದಿಯುದ್ದಕ್ಕೆ
ಮೌನದ ಹೆಜ್ಜೆ ಇಟ್ಟು ಹೋಗಿದ್ದಾರೆ.

ಇಷ್ಟಕ್ಕೂ ಭಾವವೊಂದು
ನನ್ನದೇ ಮಾತಾಗಿ ದಾಖಲಾಗಲೇಬೇಕೆ!
ಗುಳ್ಳೆ-
ಒಳಿತು,ಚೆಲುವು,ಭಾವ,ಸಹಯಾನ,ಬದುಕು,ಬದಲಾವಣೆ,ನಾನುಇತ್ಯಾದಿ..
- ಎಲ್ಲ ಗುಳ್ಳೆಗಳೂಒಡೆದಿವೆ,
ಈ ದಾರಿ ಕೊನೆಗೊಂಡಿದೆ.

ಎಲ್ಲರ ಪ್ರೀತಿಯ ಸ್ಪಂದನೆಗೆ ತಲೆಬಾಗಿ ನಮಿಸುತ್ತಾ
ನೇಪಥ್ಯ ಸಿಂಧುವಿನೊಳಗಿನ್ನೊಂದು ಬಿಂದುವಾಗಿ..

-ಪ್ರೀತಿಯಿಂದ
ಸಿಂಧು

September 19, 2008

ನಕ್ಕು ಬಿಡು ಒಮ್ಮೆ...

‘ಈ ವರ್ಷ ನಿಮ್ಮೆಜಮಾನ್ರ ಬರ್ಥಡೇಗೆ ಏನ್ ಸ್ಪೆಷಲ್, ಏನಾದ್ರೂ ಸರ್ಪ್ರೈಸ್!!’ ಅಂತ ಗೆಳತಿ ಕೇಳಿದ್ಲು. ನಾನ್ ಹೇಳ್ದೆ ‘ಹ್ಮ್...ಸುರ್ಪ್ರೈಸ್ ಮಾಡೋಕೆ ಹೋಗಿ ಅವರ ಬರ್ಥ್ ಡೇನೆ ಮರತ್ಬಿಟ್ಟಿದ್ದೆ...’ ಅಂದೆ. ‘ಆರು ವರ್ಷ ಆಯ್ತಾ ಮದ್ವೆ ಆಗಿ?’ ಅಂತ ಕೇಳಿದ್ಲು. ‘ಎಂಟು ವರ್ಷ ಆಗ್ತಾ ಬಂತು’ ಅಂದೆ. ‘ ಮದ್ವೆ ಆಗಿ ಐದು ವರ್ಷದ್ ತನಕ ಜ್ಞಾಪಕ ಇಟ್ಕೊಂಡ್ರೆ ಸಾಕಾಗತ್ತೆ, ಏಳು ವರ್ಷ ಮರಿದೇನೆ ವಿಶ್ ಮಾಡಿದ್ಯಲ್ಲ ಸಾಕು ಬಿಡು’ ಅಂದ್ಲು.
ಆವತ್ತು ಗೆಳತಿ ಹೇಳ್ತಾ ಇದ್ಲು. ‘ನಿನ್ನೆ ರಾತ್ರಿ ನಿದ್ರೆ ಮಾಡೋದು ತುಂಬ ಲೇಟ್ ಆಯ್ತು ಕಣೇ...’ ಅಂತ. ‘ಯಾಕೇ?’ ಅಂದೆ ಕಕ್ಕುಲತೆಯಿಂದ. ‘ಮಕ್ಕಳು ಮಲ್ಗೋದೆ ಲೇಟು, ಅದಾದ್ಮೇಲೆ ಇವನು ಕೈಕಾಲೆಲ್ಲ ನೋವು’ ಅಂದ. ‘ಕೈಕಾಲನ್ನೆಲ್ಲ ಮಸಾಜ್ ಮಾಡ್ಕೊಟ್ಬಿಟ್ಟು ನಾನು ಮಲ್ಕೊಳೋದೇ ಲೇಟ್ ಆಗೋಯ್ತು’ ಅಂದ್ಲು. ಮಧ್ಯೆ ಅದ್ಯಾರೋ ಕೇಳಿದ್ರು ‘ಅಲ್ಲಾ, ಕಂಪ್ಯೂಟರ್ ಮುಂದೆ ಕೂತು ಕೆಲ್ಸ ಮಾಡಿದ್ದಕ್ಕೆ ದಿನಾ ಮಸಾಜ್ ಮಾಡೋಷ್ಟು ಗ್ರಹಚಾರದ್ ನೋವಾ...ಏನ್ ದೋಡ್ ಕಲ್ಲ್ ಕಡಿಯೋಕೆ ಹೋಗೋರ ಥರ. ಬೆಳಗ್ಗೆದ್ದು ಪಾದಕ್ಕೆ ನಮಸ್ಕಾರ ಮಾಡೋ ಪರಿಪಾಠನೂ ಇದ್ಯಾ ಮತ್ತೆ?’ ಅಂತೆಲ್ಲ ಪ್ರಶ್ನಿಸಿ ವಿಷ್ಯ ಬೆಳಗ್ಗೆದ್ದು ಯಾರ್‍ಯಾರು ಅವರ ಪತಿಯ ಪಾದಕಮಲಗಳಿಗೆ ಎರಗಿ(ಎಡವಿ)ಬೀಳ್ತಾರೆ ಅನ್ನುವಲ್ಲಿಗೆ ಮುಟ್ಟಿದ್ದಾಯ್ತು. ನಾನಂತು ಸುಮ್ನಾಗ್ಬಿಟ್ಟೆ. ನಾನು ಬೆಳಿಗ್ಗೆದ್ದು ಇವನ ಪಾದ ಹುಡುಕ್ಕೊಂಡು ಕೂತ್ರೆ ಬೆಳಗಿನ ಕೆಲ್ಸ ಎಲ್ಲ ಮುಗಿದಂಗೆ. ಇವನು ಒಂದೊಂದು ಪಾದ ಒಂದೊಂದ್ ದಿಕ್ಕಿಗೆ ಎಸೆದು ಮಲ್ಕೊಂಡಿರ್ತಾನೆ, ಅವುಗಳನ್ನ ಎಲ್ಲಿಲ್ಲಿವೆ ಅಂತ ಹುಡುಕಿ, ಜೋಡ್ಸಿ ನಮಸ್ಕಾರ ಮಾಡೋಷ್ಟ್ರಲ್ಲಿ ಅವನಿಗೇ ಆಫೀಸಿಗೆ ಲೇಟ್ ಆಗ್ಬಿಡತ್ತೆ . ಇಲ್ಲಾ ಅಂದ್ರೆ ಪಾದಕ್ಕೆರ್ಗಕ್ಕೆ ನಂದೇನೂ ಆಬ್ಜಕ್ಷನ್ ಇರ್ಲಿಲ್ಲ.


ಹೀಗೆ ಒಂದಿನ ಸುಮ್ನೆ ಕೂತಿದ್ದೆ. ನಾನು ಸುಮ್ನೆ ಕೂತಿದ್ರೂ ನೋಡೋಕಾಗಲ್ಲ ಆಸಾಮಿಗೆ. ‘ಏನು....ಇವತ್ಯಾವ್ದ್ರ ಬಗ್ಗೆ ಆಲೋಚನಾ ಸಂಶೋಧನೆ? ಎಷ್ಟುವರ್ಷದ್ ಹಿಂದೆ ನಾನೇನ್ ಮಾಡಿದ್ದೆ ಅಂತ ನಿಂಗಿವತ್ತು ಕೋಪ?’ ಅಂದ್ಕೊಂಡು ಬರ್ತಾನೆ. ‘ಅದ್ಯಾವ ಜನ್ಮದಲ್ಲಿ ಪಾಪ ಮಾಡಿದ್ನೋ ಅಂತಾರೆ ನೋಡು, ಅ ಮಾತನ್ನ ಯಾವತ್ತೋ ಏನೋ ಮಾಡಿದ್ದನ್ನ ಇವತ್ತು ನೆನಪಿಸ್ಕೊಂಡು ಬೇಸರ ಮಾಡ್ಕೊತೀರ ನೀವು ಹೆಂಗಸ್ರು, ಅದ್ಕೆ ಗಂಡಸರು ಮಾತ್ರ ಆಡ್ಬೇಕಾಗಿರೋ ಮಾತುಗಳು ಅವು, ನೀವು ಹೆಂಗಸ್ರು ಹಾಗೆ ಹೇಳ್ಲೇ ಬಾರದು’ ಅಂತೆಲ್ಲ ಭಾಷಣ ಶುರು ಮಾಡಿದ. ನಾನ್ಯಾವತ್ತೂ ಆಡ್ದೇ ಇರೋ ಮಾತಿಗೂ ಇವತ್ತೊಂದು ಕೊಂಕು. ಇವತ್ತಿವಳು ಸುಮ್ನೆ ಇರ್ತಾಳೆ ಅಂತ ಗೊತ್ತಾದ್ರೆ ಇವರುಗಳು ಜೋರಾಗೇಬಿಡ್ತಾರೆ. ನಾನೇನಾದ್ರೂ ಧಬಾಯಿಸಿ ಉತ್ರ ಕೊಟ್ರೆ ಮತ್ತೆ ಒಂಥರಾ ನಗೋದು ನನ್ನ ಕಡೆ ನೋಡಿ. ಇವೇ ಆಗೋಲ್ಲ. ಒಂದ್ಸಲ ಅವನ ಕಡೆ ನೋಡಿ ‘ಸಾಕು, ಸುಮ್ನೆ ಇದ್ಬಿಡೋಣ’ ಅಂದ್ಕೊಂಡು ಸುಮ್ನಾದೆ. ಅವನಷ್ಟಕ್ಕೆ ಅವನು ಹೇಳ್ತಾ ಇದ್ದ. ‘ನೀನು ಸುಮ್ನೆ ಏನೇನೋ ಹೇಳ್ಬೇಡ, ಈಗ ಸುಮಾರು ಮೂರುವರ್ಷದಿಂದ ಜವಾಬ್ಧಾರಿನೆಲ್ಲ ಸ್ವಲ್ಪ ನಾನೂ ವಹಿಸ್ಕೋತಾ ಇದೀನಿ’ ಅಂದ. ನಾನೇನು ಹೇಳ್ದೇನೆ ಇವನ್ಯಾಕೆ ಇದನ್ನೆಲ್ಲ ಹೇಳ್ತಿದಾನೆ ಅನ್ನಿಸ್ತು. ಮದುವೆ ಆದಾಗಿಂದ ಒಂದುಕಾಸು ಸಂಪಾದನೆ ಇಲ್ದೇ ಮನೇಲಿ ಕೂತಿರೋಳು ನಾನು. ಆದ್ರೂ ಅವನ ತಲೇಲಿ ಈ ಸಂಸಾರಕ್ಕೆ ತಾನೇನೂ ಮಾಡ್ತಿಲ್ಲ ಅಂತ ಅನ್ನಿಸೋ ಅಷ್ಟು ಕೊರೆದು ಮನೇಲಿ ಕುಳಿತು ನಾ ಮಾಡೋ ಅಡುಗೆ ಕೆಲಸವೇ ಸಂಸಾರ ನಡೆಯೋಕೆ ಆಧಾರ ಅನ್ನಿಸೋ ಹಾಗೆ ತಲೆಕೊರ್ದಿದೀನಾ ಅನ್ನಿಸ್ತು. ಈ ಕುಡುಕ್ರು ಪಡಕ್ರು , ಮನೆ ಹಾಳು ಮಾಡ್ಕೊಂಡೋವ್ರು ಎಲ್ಲ ಹೇಳೋ ಹಾಗೆ ಇನ್ನೊಂದ್ಸಲ ಹೇಳ್ದ. ‘ನಿಜವಾಗ್ಲೂ ಈಗ ಸುಮಾರು ಮೂರುವರ್ಷದಿಂದ ಜವಾಬ್ಧಾರಿನೆಲ್ಲ ಸ್ವಲ್ಪ ನಾನು ವಹಿಸ್ಕೋತಾ ಇದೀನಿ, ಪುಟ್ಟುಗೆ ಸ್ನಾನಗೀನ ಮಾಡಿಸ್ತೀನಲ್ಲ’ಅಂದ. ‘ಪಾಪ, ಎಷ್ಟೆಲ್ಲ ಜವಾಬ್ಧಾರಿವಹಿಸ್ಕೊಂಡಿದಾನೆ ಮನೆದು’
ಅನ್ನಿಸ್ತು. ‘ನಮ್ಮದೇ ಮಗು ತಾನೆ, ನೀನ್ ಸ್ನಾನ್ ಮಾಡ್ಸೋದ್ ಪಕ್ಕದ್ ಮನೆ ಮಗೂಗೇನೂ ಅಲ್ವಲ್ಲಾ?’ ಅಂತ ಕೇಳಿ ದಂಗುಮಾಡಿಬಿಡೋಣ ಅನ್ನಿಸ್ತು.
ಆದ್ರೂ ಯಾವಾಗ್ಲೂ ಮನೆ ಜವಾಬ್ಧಾರಿ ವಹಿಸ್ಕೊಂಡಿದ್ದು ಅವನೇ ಅನ್ನೋ ರಹಸ್ಯ ಅವನಿಗೇ ಗೊತಾಗೋಕೆ ನಾನು ಬಿಡದೇ ಇರೋ ನನ್ನ ಸಾಮರ್ಥ್ಯಕ್ಕೆ ನಾನೇ ಭುಜ ತಟ್ಕೊಂಡೆ. ‘ಏನದು? ಭುಜ ತಟ್ಕೋತಾ ಇದೀಯ?’ ಅಂದ. ‘ಇಲ್ಲ, ಇವತ್ಯಾಕೋ ಬೆನ್ನು ನೋವು’ ಅಂದೆ.ಪಾಪ, ಆವತ್ತು ಅವನು ಮನೆ ಜವಾಬ್ಧಾರಿ ನಿಭಾಯಿಸ್ತಾ ಇದ್ದ (ಅದೇ ಮಗನಿಗೆ ಸ್ನಾನ ಮಾಡಿಸೋದು). ತುಂಬ ಹೊತ್ತಿಂದ ಸ್ನಾನ ಮಾಡ್ತಿಲ್ಲ ಬೇರೇನೋ ಮಾಡ್ತಿರಬೇಕು, ಹೋಗಿ ನೋಡೋಣ ಅಂದ್ಕೊಂಡು ಬಾಥ್ ರೂಂಗೆ ಹೋಗಿ ನೋಡಿದ್ರೆ ಮಗನಿಗೆ ಹಲ್ಲುಜ್ಜಿಸ್ತಾ ಇದ್ರು ಅವರಪ್ಪ. ಮಗನ ಬಾಯಿತುಂಬಾ ನೊರೆನೊರೆ. ಮಗ ದೋಡ್ ದಾಗಿ ಬಾಯಿ ತೆರಕೊಂಡು ನಾಲಿಗೇನ ಊದ್ದಕ್ಕೆ ಹೊರಗೆ ಚಾಚ್ಕೊಂಡು ಟೂಥ್ ಬ್ರಶ್ ನಿಂದ ಗಸ ಗಸ ನಾಲಿಗೇನ ಉಜ್ಜತಾ ಇದ್ದ ಬಾಥ್ ರೂಂ ತೊಳೆದಂಗೆ. ಅವರಪ್ಪ ‘ಹೂಂ....ಉಜ್ಜು ಉಜ್ಜು, ಇನ್ನು ಗಟ್ಟಿ’ ಅಂತಾ ಇದ್ರು. ‘ಏನ್ ಮಾಡ್ತಿದೀರಾ ಇಬ್ರೂ?’ ಅಂತ ಕೇಳಿದ್ದಕ್ಕೆ ‘ನಾಲಿಗೆ ಉಜ್ತಿದಾನೆ’ ಅಂತ ನನ್ ಕಡೆ ತಿರುಗ್ದೆನೇ ಉತ್ತರ ಬಂತು. ಬಾಯಿ ತುಂಬ ನೊರೆ ತುಂಬ್ಕೊಂಡಿದ್ರಿಂದ ತಾವಿಬ್ರೂ ಮಾಡ್ತಿರೋ ಸಾಹಸಾನ ವರ್ಣಿಸೋಕಾಗದೆ ಮಗ ಬಾಯಿ ತೆರಕೊಂಡೇ ಕೋರೆಗಣ್ಣಲ್ಲಿ ನನ್ನ ನೋಡಿ ಮತ್ತೆ ತನ್ನ ಕೆಲಸ ಮುಂದ್ವರಿಸಿದ. ‘ಏನಷ್ಟೊಂದು ನೊರೆ?’ ಅಂದಿದ್ದಕ್ಕೆ ‘ಟೂಥ್ ಪೇಸ್ಟ್ ಹಾಕಿ ಉಜ್ಜತಿದಾನೆ’ ಅಂತ ಉತ್ರ ಬಂತು. ಸಧ್ಯ ಶಾಂಪೂ ಹಾಕಿ ಉಜ್ಜಲಿಲ್ವಲ್ಲ! ಅಂದ್ಕೊಂಡು ಸುಮ್ನೆ ಈ ಕಡೆ ಬಂದು ಸ್ವಲ್ಪ ಹೊತ್ತು ಕೂತ್ಕೊಂಡು ನನಗೆ ನಾನೆ ಸಮಾಧಾನ ಹೇಳ್ಕೊಂಡು ಎದ್ದೆ.

ದೀತ್ಯಾ ದೊಡ್ಡಬಾಯಿ ತೆರೆದು, ಮುದ್ದಾದ ಎರಡೇ ಹಲ್ಲು ತೋರ್ಸಿ ಆಹ್ಹ ಆಹ್ಹ ಆಹ್ಹ ಅಂತ ನಗುವಾಗ ನನ್ ಮಗ ‘ಎಂತದೇ ಮುಗಳ್ನಗಾಡ್ತೆ’ ಅಂದಾಗ ಸುಮ್ನೇ ನೋಡ್ತಾ ಇದ್ದೆ. ಆಗ ನಗು ಬರಲಿಲ್ಲ. ಮರುದಿನ ಒಬ್ಬಳೇ ಕುಳಿತಿದ್ದಾಗ ದೀತ್ಯಾ ಅಷ್ಟು ದೋಡ್ ದಾಗಿ ನಗ್ತಿದ್ರೆ ನನ್ ಮಗ ‘ಯಾಕೆ ಮುಗುಳ್ನಗ್ತೀಯಾ?' ಅಂತ ಕೇಳಿದ್ದು ನೆನಪಾಗಿ ನಗು ಬಂತು. ಪರವಾಗಿಲ್ಲ, ಅರ್ಥ ಗೊತ್ತಾಗ್ದಿದ್ರೂ ನಿಧಾನಕ್ಕೆ ಶಬ್ದಸಂಗ್ರಹಿಸ್ತಿದಾನೆ ಅನ್ಕೊಂಡು ಸುಮ್ನಾದೆ. ಇವನೇನೋ ಚಿಕ್ಕವನು, ಇವರಪ್ಪ ಯಾಕೆ ಹಾಗೆ ಅಂತ ಯೋಚ್ಸಿದಾಗ ನಾನೂ ಒಂದ್ಸಲ ಒಬ್ಬಳೇ ದೋಡ್ಡದಾಗಿ ಹೆ ಹ್ಹೆ ಹ್ಹೆ ಅಂತ ನಕ್ಕೆ. ಮತ್ತೆ ಇವನು ‘ಅದ್ಯಾಕೆ ಹಾಗೆ ಮುಗುಳ್ನಗ್ತೀಯಾ’ ಅನ್ನೋಥರ ನನ್ನೇ ನೋಡ್ತಾ ಇದ್ದ. ಆ ಜಾತಿನೆ ಹಾಗೆ ಅನಿಸಿಬಿಡ್ತು...

ಆವತ್ತು ಮಧ್ಯಾಹ್ನ ನನ್ ಕೊರೆತ ತಪ್ಪಿಸ್ಕೊಂಡು ಆಫೀಸಿಗೆ ಹೊರಟ ಖುಷಿಯಲ್ಲಿ ಲ್ಯಾಪ್ ಟಾಪ್ ಮನೆಲ್ಲೇ ಬಿಟ್ಟು ಓಡಿ ಹೊರಟಿದ್ದ. ಮತ್ತೆ `ಲ್ಯಾಪ್ ಟಾಪ್ ತಗೊಂಡುಹೋಗೋಕೆ ಬಂದೆ’ ಅಂತ ವಾಪಸ್ ಬರ್ತಾನೆ ಅಂತ ನಾನು ಬೇಗ ಬೇಗ ಅದನ್ನ ತಗೊಂಡು ಹೋಗಿ ಅವನ ಹೆಗಲಿಗೇರಿಸಿ ಕಳ್ಸಿದ್ದೆ. ಹೋಗೋವಾಗ ‘ಎಷ್ಟೊತ್ತಿಗ್ ಬರ್ತೀಯ?’ ಅಂದ್ರೆ ‘ಐದು ಗಂಟೆ’ ಅಂದ. ನಾನೂ ಬಿಡ್ಲಿಲ್ಲ ‘ನಾಲ್ಕು ಗಂಟೆಗೇ ಬಾ’ ಅಂದೆ. ‘ಹೆ ಹ್ಹೆ ಹ್ಹೆ’ ಅಂದ. ‘ಮೂರು ಗಂಟೆಗೆ ಬರ್ತೀನಿ’ ಅಂದ್ರೂ ‘ಎರಡ್ ಗಂಟೆಗೇ ಬಾ’ ಅನ್ನೋದೊಂಥರಾ ಅಭ್ಯಾಸ ನಂಗೆ. ಆದ್ರೂ ಇವನು ಹೀಗೆ ನಗೋದು ಸರಿಯಲ್ಲ ಅಲ್ವಾ? ನಾನೂ ಅವನನ್ನ ನೋಡಿ ಹೀಗೇ ನಗ್ತಾ ಇದ್ರೆ? ಒಂಥರಾ ಚೆನ್ನಾಗಿರಬಹುದು ಬಿಡಿ, ಬೆಳಿಗ್ಗೆಯಿಂದ ಸಂಜೆತನಕ ಮನೆಯೊಳಗೆ ಮಾತಿಲ್ಲ ಕಥೆಯಿಲ್ಲ, ಎಲ್ಲದಕ್ಕೂ ನಗು.

September 11, 2008

ಹೇಳಲೊಂಥರಾ ಥರಾ...ನೋಡಲೊಂಥರಾಥರಾ....

ಇಲ್ಲೊಂದೆರಡು ವಿಡಿಯೋತುಣುಕುಗಳನ್ನ ನಿಮ್ಮ ಮುಂದಿಟ್ಟಿದೀನಿ. ಬ್ಲಾಗ್ ಅಲ್ಲಿ ಹಾಕೋಕೆ ತುಂಬ ಮುಜುಗರವಾಗಿದ್ರಿಂದ ಇಷ್ಟು ದಿನ ಇದನ್ನ ಬ್ಲಾಗಲ್ಲಿ ಹಾಕಿರ್ಲಿಲ್ಲ. ಮೊನ್ನೆ ಒಬ್ಬರು ತುಂಬ ಒತ್ತಾಯ ಮಾಡಿದ್ರು ‘ಬ್ಲಾಗಲ್ಲಿ ಹಾಕು ಆ ವಿಡಿಯೋನ’ ಅಂತ. ಬ್ಲಾಗ್ ಬರೆಯೋಕೆ ಆರಂಭಿಸಿದಾಗ ಮೊದಲೆಲ್ಲ ಸಲಹೆಗಳನ್ನ ಕೊಟ್ಟು ಸಲಹಿದ ಹಿತೈಷಿ ಅವರು. ಅಂಥವರ ಮಾತನ್ನ ಮೀರೋಕಾಗ್ದೇ ತುಂಬ ಮುಜುಗರದಿಂದ ಈ ವಿಡಿಯೋನ ನಿಮ್ಮಗಳ ಮುಂದೆ ಇಡ್ತಿದೀನಿ. ಅಷ್ಟೊಂದು ಚೆನಾಗಿ ಅಡುಗೆ ಮಾಡೋಕೆ ಬರೋಲ್ಲ, ಆದ್ರೂ ಒಂದ್ಸಲ ಟ್ರೈ ಮಾಡಿದ್ದೆ, ಅದೇ ಇದು.

ETV Kannada - ಸವಿರುಚಿಯ 2006/ May- ಚಿತ್ರೀಕರಣ
June/ 9/ 2006 ಪ್ರಸಾರ
ನಿಶಿತಾ ಗೌಡರ ಕಾರ್ಯಕ್ರಮ ನಿರ್ವಹಣೆ
ಮಿಸ್ ಪಂಕಜ ನಿರ್ದೇಶನ
ಶ್ರೀ ರಾಮು ಅವರ ಸಲಹೆ ಸಹಕಾರಗಳು
ಮರೆಯಲಾಗದ ಒಂದು ಸಂತಸದ ಅನುಭವ.

ಶೂಟಿಂಗ್ ಮುಗ್ಸಿ ಅಮ್ಮಂಗೆ ಫೋನ್ ಮಾಡಿದ್ದೆ. ‘ಹೇಗಾಯ್ತು?’ ಅಂತ ಅಮ್ಮ ಕೇಳಿದ್ರು. ‘ಪರವಾಗಿಲ್ಲ’ ಅಂತ ಹೇಳ್ದೆ. ಮನೆಗೆ ಬರೋಷ್ಟ್ರಲ್ಲಿ ಸುಸ್ತಾಗಿತ್ತು,(ಇಷ್ಟೆಲ್ಲ ಅಡುಗೆ ಮಾಡಿದ್ರೆ ಸುಸ್ತಾಗದೇ ಇರತ್ತ,?) ಮಲ್ಕೊಂಬಿಟ್ಟೆ.
ಈ ಟಿವಿಲಿ ಪ್ರಸಾರ ಆದ ದಿನ ಅಮ್ಮ ನೋಡ್ಬಿಟ್ಟು ‘ಇದೆಂತೆ ಪುಟ್ಟಾ....!!!ಬೆಳ್ಳುಳ್ಳಿ ತಂಬುಳಿ ಮಾಡೋದನ್ನ ಅಷ್ಟು ನೀಟಾಗಿ ಕಲ್ಸಿ ಕಳ್ಸಿದ್ದಿ, ನೀನೆಂತೋ ಹೊಸರುಚಿ ಮಾಡಿಟ್ಟಿದ್ದೆ...ಈರುಳ್ಳಿ ಉದ್ದಿನ್ ಬೇಳೆ ತಂಬುಳಿ!!!’ ಅಂತ ಅಮ್ಮ ಹುಬ್ಬೇರಿಸಿದ್ರು. ಅಜ್ಜಿ ಹೇಳ್ತಾ ಇದ್ರು ‘ಎಂತ ಆಗದಿಲ್ಲೆ ತಗ...ಇದೂ ಒಂದ್ ನಮೂನಿ ಚೊಲೊನೆ ಆಗ್ತು’ ಅಂತ ನಾ ಮಾಡಿದ ತಂಬುಳಿ ಉಂಡಷ್ಟೇ ಖುಷಿಪಟ್ಟರಲ್ಲದೇ ನನ್ನ ಮುದ್ದು ಮಾಡಿದ್ರು. (ನಂಗೆ ನಿಜವಾಗ್ಲೂ ಅಮ್ಮ ಹಿಂದಿನ್ ದಿನ ಕಲಿಸಿದ್ದ ರೆಸಿಪಿ ಮರ್ತೋಗಿತ್ತು ಅನ್ಸತ್ತೆ, ಬೆಳ್ಳುಳ್ಳಿ ಬದಲು ಈರುಳ್ಳಿ ಹಾಕಿದೀನಿ ತಂಬುಳಿಗೆ. ಆದ್ರೂ ನೀವೂ ಟ್ರೈ ಮಾಡ್ಬಹುದು ಅನ್ಸತ್ತೆ )

ನಾನು ಮಾತ್ರ ಈ ವಿಡಿಯೋ ನೋಡೋಕೇ ಹೋಗೋಲ್ಲ, ಏನೋ ಒಂಥರಾ ಆಗತ್ತೆ ನಂಗೆ ಇದನ್ನ ನೋಡಿದ್ರೆ. ಈ ವಿಡಿಯೋ ತುಣುಕುಗಳನ್ನ ನಿಮ್ಮ ಮುಂದೆ ಇಟ್ಬಿಟ್ಟು ನಾನಂತೂ ಓಡಿಹೋಗ್ತಿದೀನಿ. ನೋಡಿಯಾದ್ಮೇಲೆ ನೀವು ಹೇಳಿ ‘ನೋಡಿಯಾಯ್ತು, ಬಾ ಶಾಂತಲಾ...’ ಅಂತ. ಅಲ್ಲಿತನಕ ಬಬಾ.....ಯ್.ಮತ್ತೊಮ್ಮೆ ಈಟಿವಿ ಬಳಗದವರನ್ನ ನೆನೆಯುತ್ತ,
-ಶಾಂತಲಾ ಭಂಡಿ.

September 6, 2008

ನೀಲುವಿನ ಅಂಗಳದ ಆ ಬೆಳದಿಂಗಳು

ಬೆಳಕು ಅರೆಬಿರಿದು ಕಣ್ಣುಮಿಟುಕಿಸುತ್ತಿದೆ ಚುಮು ಚುಮು ತುಂತುರಿನಲ್ಲಿ. ಅಂಗಳದ ಮಣ್ಣು ತುಂತುರ ನೆನೆದು ನಗುತ್ತಿದೆ. ಕೊಂಚವೇ ಹಸಿಯಾಗುತ್ತ ನಾಚುತ್ತಲಿದೆ.ಘಮ ಘಮವೆನಿಸುತ್ತದೆ. ಸೀರೆಯಂಚನ್ನ ಚೂರು ಮೇಲಕ್ಕೆತ್ತಿ ಪಾದಗಳನ್ನ ಅಂಗಳದ ಹಸಿಯೊಳಗಿಡುತ್ತಿದ್ದೇನೆ.ತಂಪು, ತಂಪೇ ಇದು. ಆಹ್ಲಾದ. ಮಳೆಯಲ್ಲಿ ಮನೆಯೊಳಗೆ ಕುಳಿತು ಹೀರುವ ಬಿಸಿಕಾಫಿಗಿಂತ ಆಹ್ಲಾದ. ನಿನ್ನ ನೆನಪಾಗುತ್ತದೆ. ನೀನಿದ್ದರೆ ಇನ್ನೂ ಖುಷಿ ಪಡುತ್ತಿದ್ದೆಯೆನಿಸಿ ನಗು. ಮೊನ್ನೆಯಷ್ಟೇ ನೀ ತಂದ ಹೊಸ ಕಾಲ್ಗೆಜ್ಜೆ ಕೆಸರೊಂದಿಗೆ ಆಟವಾಡ್ತಿದೆ. ಎಲ್ಲವೂ ಹೊಸತು, ಹೊಸತನದ ಗುಂಗಿನಲ್ಲಿ ಅಂಗಳದಲ್ಲಿ ಸಾಲು ಚುಕ್ಕಿಗಳಿಳಿದು ಮೂಡುತ್ತವೆ. ಒಂದೊಂದು ಚುಕ್ಕಿಯನ್ನೂ ಸೇರಿಸುತ್ತ ಸೇರಿಸುತ್ತ ಮನಸಿಗೆ ಬಂದಂತೆ ನನ್ನಿಷ್ಟದ ಹಾಗೆ ಗೆರೆ ಎಳೆಯುತ್ತ ಸುತ್ತದಿಕ್ಕುಗಳಿಂದೆಲ್ಲ ಕತ್ತು ಹೊರಳಿಸಿ ಬಗ್ಗಿಸಿ ತಿರುವುತ್ತ ಆಹ್! ಎಂದುಕೊಳ್ಳುತ್ತೇನೆ.ರಂಗೋಲೆ! ನಾನು ಬಿಡಿಸಿದ ನನ್ನೊಳಗಿನ ಚಿತ್ರ ಅಂಗಳದ ಬಾಗಿಲಿಗಿಂದು ರಂಗೋಲೆ. ನೀನಿರಬೇಕಿತ್ತು ಎನ್ನಿಸುತ್ತಿದೆ.ಸುತ್ತೆಲ್ಲ ನೋಡುತ್ತೇನೆ. ಹಸಿರೆಲೆಗಳೇ ಹೂಬಿಟ್ಟಂತೆ! ಒಂದೊಂದು ಎಲೆಗೂ ಬೆಳ್ಳನೆಯ ಹೂಗುಚ್ಚ. ಆಗಸವೂ ಮಂದ ಬಿಳುಪು. ತುಂತುರು. ಎಳೆಬಿಸಿಲು ಯಾರನ್ನೋ ಚುಂಬಿಸಲೆಂದೇ ಬಂದಿರುವಂತೆ, ಹಸಿರೆಲೆಗಳ ನಡುವೆ ಬಿಳಿ ಹೂಗಳಲಿ ನೆಲೆಯಾಗುವಂತೆ ಹರಡಿಕೊಳ್ಳುತ್ತಿದೆ. ಹೂಗಳು ನನ್ನ ನೋಡಿ ಮಂದಹಾಸ ಬೀರುತ್ತಿವೆ. ನಾನೂ ನಗುತ್ತೇನೆ.
ನನ್ನದೇ ಗುಂಗಿನಲ್ಲಿ ಕತ್ತೆತ್ತಿದರೆ ಸೂರ್ಯನ ಬಣ್ಣ ಬೆಳಕಾಗುವುಷ್ಟರಲ್ಲಿ ಬೇರೆಯದೇ! ಆ ಬಣ್ಣವೂ ಇಷ್ಟವೇ ಎನಿಸಿಬಿಡುತ್ತದೆ. ಅವನು ಯಾವ ಬಣ್ಣದಲ್ಲಿದ್ದರೂ ನನಗಿಷ್ಟವೇ, ಅವನೇ ಹಾಗೆ. ಬೆಳಿಗ್ಗೆ, ಮಧ್ಯಾಹ್ನ ಸಂಜೆಯೊಳಗೆ ಬಣ್ಣಬದಲಾಯಿಸಿಕೊಳ್ಳುತ್ತಲೇ ಸಂಜೆಯಾರಿದ ಮೇಲೆ ಅವನು ಅವನಾಗಿಯೇ ಇರುವ ಅವನ ನೆನೆದು ಮುದ್ದು ಬರತ್ತೆ. ಮುಗುಳ್ನಕ್ಕು ಕಣ್ಣುಮಿಟುಕಿಸಿ ಮಗುವಾಗುತ್ತೇನೆ. ತುಂತುರುವೊಂದು ಆಗಸದಿಂದ ಕಣ್ಣಂಚಿಗೆ ಬಂದು ‘ನನಗಿಂತ ನಿನ್ನ ಮನ ತಣ್ಣಗಿದೆಯಲ್ಲೆ,ಮನಸನ್ನೊಂಚೂರು ಬಿಸಿಲಿಗೆ ಹರವು, ಸರಿಹೋಗಬಹುದು’ ಅಂತ ಪಿಸುನುಡಿದು ಕೆನ್ನೆಗುಂಟ ಬಳಸಿ ಹರಿದ ಹಾದಿಯನ್ನ ಹಿಡಿದು ನನ್ನೆದೆಗಿಳಿದು ಆರಿ ಹೋದಹಾಗೆ ಅನ್ನಿಸುತ್ತದೆ. ಕತ್ತೆತ್ತಿ ಸುತ್ತ ದಿಟ್ಟಿಸಿದರೆ ಸುತ್ತಲಿನ ಪ್ರಕೃತಿ ನನ್ನೆಡೆಗೆ ಮುತ್ತಿಕೊಂಡು ಕಳೆದುಹೋಗುತ್ತೇನೆ. ಅಂಗಳವನ್ನು ಇನ್ನಷ್ಟು ಚಂದ ಮಾಡುವ ಹುಮ್ಮಸ್ಸು ಯಾವತ್ತೂ ಇದೆ. ತುಂತುರುವಿನ ಸಾನ್ನಿಧ್ಯದಲ್ಲೂ ಇಬ್ಬನಿಯ ನೆನಪು.ಇಬ್ಬನಿಗೂ ತುಂತುರುವಿಗೂ ಹೊಂದಿಕೆಯಾಗುವ ಹೂಗಿಡವೊಂದನ್ನು ನೆಡಬೇಕೆನ್ನಿಸುತ್ತದೆ. ಹಾಡೊಂದನ್ನ ಗುನುಗುತ್ತೇನೆ.
"ಮೂಡಲ ಮನೆಯ ಮುತ್ತಿನ ನೀರಿನ
ಎರಕಾವ ಹೊಯ್ದ, ನುಣ್ಣನೆ ಎರಕಾವ ಹೊಯ್ದ"
ಹಾಡುಮುಗಿವಂತೆ ಅಂಗಳ ಮಂಗಳದ ಮನೆಯಾಗುತ್ತದೆ.ಸುತ್ತೆಲ್ಲ ಕಣ್ಣು ಹಾಯಿಸಿ ನನ್ನೊಳಗೇ ಹಿಗ್ಗುತ್ತೇನೆ. ಅಂಗಳದ ತುಂಬೆಲ್ಲ ಸಂತಸದ ಹರಿವು. ನೀ ತಂದ ಬಿಳಿಸೀರೆಯ ನಿರಿಗೆಗಳನ್ನ ಉದ್ದಕ್ಕೆ ಅಲೆಸುತ್ತ ಅಂಗಳದಲ್ಲೆಲ್ಲ ನಡೆದಾಡುತ್ತೇನೆ. ನಾಲ್ಕು ಹೆಜ್ಜಯಿಡುವಷ್ಟರಲ್ಲಿ ನನ್ನದೇ ಹೆಜ್ಜೆಗುರುತುಗಳ ಅಲ್ಲಿ ಕಂಡು ನಾಚುತ್ತೇನೆ. ಅಲ್ಲೆಲ್ಲೋ ನೀನು ಅವಿತು ಕುಳಿತಿರಬಹುದೆನಿಸುತ್ತದೆ ಇದನ್ನೆಲ್ಲ ನೋಡುತ್ತ, ಭಯ ಆವರಿಸಿ ಕೈಯೊಳಗಿನ ಹೂವಿನ ಪಾತ್ರೆ, ರಂಗೋಲೆ ಬಟ್ಟಲುಗಳನ್ನ ಸರಕ್ಕನೆ ಎತ್ತಿಕೊಂಡು ಅಂಗಳದಿಂದ ಮಾಯವಾಗುತ್ತೇನೆ.
ಬಿಸಿಯಕಾಫಿ ಬಟ್ಟಲ ಹಿಡಿದು ಬರುವಷ್ಟರಲ್ಲಿ ನೀನಲ್ಲಿ ಕುಳಿತು ತಂಬೂರ ನುಡಿಸುತ್ತಿರುತ್ತೀಯ. ನಾನದನು ನಿಧಾನಕ್ಕೆ ಪಕ್ಕಕ್ಕಿಟ್ಟು ಕಾಫಿಬಟ್ಟಲನ್ನು ಕೈಯೊಳಗಿತ್ತು ಪಕ್ಕ ನಿಲ್ಲುತ್ತೇನೆ. ನೀನ್ಯಾವತ್ತಿನಂತೆ ‘ನೀಲಾ’ ಅಂತ ಕರೆಯೋದಿಲ್ಲ. ನೀಲಿಯಂಗಳದ ತುಂಬೆಲ್ಲ ನೀಹಾರ! ಸುತ್ತಲಿನ ನೀಹಾರ ಕೂಡ ನೀರಸವೆನಿಸುತ್ತದೆ. ಬಿಸಿಲಿಗೂ ಬೇರೆಯದೇ ಬಣ್ಣ. ನೂಪುರದ ಸದ್ದಡಗಿ ನೀರವ. ‘ಅಂಗಳ ಹೇಗಿದೆ’ ಕೇಳುತ್ತೇನೆ. ‘ಆತ್ಮರತಿ ಅನಿಸುತ್ತಿಲ್ಲವಾ’ ನಿನ್ನ ಧ್ವನಿಯೊಳಗಿನ ಭಾವ ಕೇಳಿಸುವುದಿಲ್ಲ, ಮಾತು ಮಾತ್ರ. ನಿಲ್ಲದೆ ಹೊರಟುಹೋಗುತ್ತೀಯ. ‘ನಿನ್ನಮನೆ ಬೀಗದಕೈ,ನನಗಿದು ಭಾರ,ನೀನಿಟ್ಟುಕೋ’ ಅಂತ ಅಂಗಲಾಚಿದ್ದು ಕೇಳದಷ್ಟು ಆಳಕ್ಕಿಳಿದ ಯೋಚನೆ ನಿನ್ನಾಳವನ್ನು ಅಲುಗಿಸಗೊಡುವುದಿಲ್ಲ,ನಾನೂ ಮೌನಿಯಾಗಿ ಮನೆಯೊಳಗಡಿಯಿಡುತ್ತೇನೆ.
ಮತ್ತೆ ವಾಪಸಾಗುವಷ್ಟರಲ್ಲಿ ಅಂಗಳದ ಅಲಂಕಾರವೇ ಹೊಸತೆನಿಸುತ್ತದೆ. ಹಸಿರುಗಿಡದ ನೀಲಿಹೂಗಳ ಬಿಟ್ಟು ನಾನಿತ್ತ ರಂಗೋಲೆಯ ಹರಿವಿಲ್ಲ, ಬೆಳ್ಳಿಚುಕ್ಕೆಗಳ ಬೆಳದಿಂಗಳಿಲ್ಲ, ಸುತ್ತ ಬಳ್ಳಿಗಿಡದ ನಿಲುವಿಲ್ಲ. ಬಿಳಿ ಬಣ್ಣದ ಹೂಗಳ ನಡುವೆ ನೀಲ ನಕ್ಷತ್ರಗಳು, ಸುತ್ತ ನೀಲಬೆಳದಿಂಗಳು ಮಾತ್ರ ನೆಲೆಯಾಗಿರುತ್ತವೆ. ಹೊಸತೆನಿಸುತ್ತದೆ. ಅಲ್ಲಿ ನನ್ನ ಹೆಜ್ಜೆಯ ಗುರುತನ್ನೆಲ್ಲ ಯಾರೋ ಅಳಿಸಿದ ನೋವು. ಅದು ನೀನೆಂಬ ಅನುಮಾನಕ್ಕೆ ಸಾಕ್ಷಿಯನ್ನು ಅಂಗಳದ ಗಿಡಗಳ ನಡುವೆ ಹುಡುಕುತ್ತೇನೆ.ಕೋಪದಿಂದ ನಿನ್ನ ಕಣ್ಣುಗಳ ದಿಟ್ಟಿಸುತ್ತೇನೆ, ಅಲ್ಲಿಯೂ ಮಂದ ಹೊಳಪು. ಕೇಳುತ್ತೇನೆ ‘ನಾನು ಬಡವ ಅನ್ನುತ್ತಿದ್ದೆಯಲ್ಲ,ಒಲವೇ ನಮ್ಮ ಬದುಕಾಗಿರುವಾಗ ಇಷ್ಟು ದುಬಾರಿಯ ಹೊಳಪು ನಿನ್ನ ಕಣ್ಣುಗಳಿಗೆ ಹೇಗೆ ಬಂತು? ಅಂಗಳದಲ್ಲಿ ಬೆಲೆಬಾಳುವ ಈ ನಕ್ಷತ್ರಗಳ ತಂದಿಟ್ಟವರಾರು?’ ಅಂತ. ಮಾತು ಕಳೆದವನಂತೆ ಬಿಳಿಹೂ ಗಿಡಗಳ ನೆಡುವುದರಲ್ಲಿ ನೀನು ಮಗ್ನನಾಗಿದ್ದು ಅಳು ಬರಿಸುತ್ತದೆ. ಮುಖಕ್ಕೆ ಸೆರಗು ಮುಚ್ಚಿಕೊಂಡು ಹೊರಟುಬಿಡುತ್ತೇನೆ. ಮನಸ್ಸು ತಡೆಯದೇ ಮತ್ತೆ ವಾಪಸ್ಸಾದರೆ ಅಲ್ಲಿ ನೀನಿರುವುದಿಲ್ಲ. ಅಂಗಳದ ತುಂಬ ಬಿಳಿಬಣ್ಣದ ಹೂ, ನಕ್ಷತ್ರ, ಬೆಳಕು ಮತ್ತು ಬೆಳ್ಳ ಬೆಳದಿಂಗಳು ಹಗಲಿನಲ್ಲೂ, ದೂರದಲ್ಲೊಂದು ನನ್ನದೇ ಹೆಜ್ಜೆಗುರುತು.
ಏನಾಗುತ್ತಿದೆ ಅಂತ ಅರಿವುದರೊಳಗೆ ಒಪ್ಪ‌ಓರಣಗಳನೆಲ್ಲ ಕಿತ್ತುಬಿಸಾಕುತ್ತೇನೆ. ಮೌನಿ ನೀನು, ನೀನಿದ್ದರೂ ಮಾತು ಸಿಗುತ್ತಿರಲಿಲ್ಲ ಈ ಹೊತ್ತಿಗೆ ಅನ್ನುವದನರಿತೂ ಅಂಗಳದ ತುಂಬೆಲ್ಲ ಹರಿದಾಡುತ್ತೇನೆ "ಯಾರು ಹೇಳ್ತಾರೆ ಬೆಳಗಿಗೆ ಬೆಳಕಿದೆ ಅಂತ.ನೋಡು ಬೆಳಗಿಗೆ ಬಣ್ಣವೂ ಇಲ್ಲ, ಬೆಡಗೂ ಇಲ್ಲ. ಬೆಳಗು ಬಂಧನ. ನೀನು ಮಾತಾಡ್ಬೇಡ, ನಂಗಿಷ್ಟವಾಗೋಲ್ಲ.ನಿನ್ನ ಧ್ವನಿ ನನಗೆ ಹಿಡಿಸೋಲ್ಲ. ಇನ್ನು ಮೇಲೆ ಹಾಡಬೇಡ. ಆ ತಂಬೂರವಿದೆಯಲ್ಲ! ಅದರ ತಂತಿಗಳನ್ನ ಕಿತ್ತು ಬಿಸಾಕಿದ್ದೇನೆ. ಅದು ಹೇಗೆ ನುಡಿಸುತ್ತೀಯೋ ನಾನೂ ನೋಡುತ್ತೇನೆ. ಹಾರ್ಮೋನಿಯಂ ಇದೆಯಲ್ಲ, ಅದರ ಮನೆಗಳೆಲ್ಲ ನೋಡು ಚೂರಾಗಿ ಬಿದ್ದಿವೆ ನನ್ನೆದೆ ಗೂಡಿನ ಹಾಗೆ. ಯಾವುದೋ ಹಾಡು ಕೇಳಿಸಿದೆಯಲ್ಲ..ನೋಡು ಅದಕ್ಕೆ ಧ್ವನಿಯೇ ಇಲ್ಲ.ಅಥವಾ ನನ್ನ ಕಿವಿ ಸತ್ತು ಹೋಗಿರಬೇಕು ನಿನ್ನ ಮಾತುಗಳ ಹಾಗೆ. ಹಾಡು ಅಲ್ಲಿ ಬಿದ್ದಿದೆ ನೋಡು ಕಾಗದ ಚೂರೊಳಗಿನ ದೋಣಿಯಾಗಿ! ತೇಲುವಷ್ಟು ನೀರಿಲ್ಲದೆ ತುಂತುರಲ್ಲಿ ನೆನೆದು ನೀಲಿ ನೀಲಿಮಸಿಯನೆಲ್ಲ ಹೀರಿಕೊಂದು ನೀಲಿಯಾಗಿ ಬಿದ್ದಿದೆ.
ನಾನು ನಿನ್ನ ಹಾಗಲ್ಲ ನೋಡು, ನಿನಗೊಂದು ಬದುಕಿದೆ, ಆ ಬದುಕಿಗೆ ಬೆಳ್ಳಗಿನ ಬಣ್ಣವಿದೆ. ‘ನೀನೋ ಬೆಳದಿಂಗಳು’ ಎನ್ನುತ್ತಿದ್ದೆಯಲ್ಲ! ಹೌದಲ್ಲವಾ?ನಗು ಬೆಳದಿಂಗಳಲ್ಲ ಸದಾ ಅಂತ ನಾನು ಹೇಳಿರಲಿಲ್ಲವ ನಿನಗೆ? ನೀನಾಗಲೇ ಅರಿತುಕೊಳ್ಳಬೇಕಿತ್ತು. ನನ್ನ ಕೋಪವೆಂದರೆ ಅಳು ಮಾತ್ರ. ಅಳುವನ್ನ ನೀನು ನೋಡಿಲ್ಲ. ಅದಕ್ಕೇ ಕೋಪವೂ ಚಂದವೇ ಅಂದ್ಯಲ್ಲ. ಇನ್ನೊಂದಿಷ್ಟು ಸಾಲುಗಳು ಬೇಕಿದ್ದವು ನಿನಗೆ, ಅದಕ್ಕೆ ಕೋಪದಲ್ಲೂ ಚೆಲುವನರಸಿದ್ದು. ಬಿಸಿ ಕಾಫಿ ಆರುವ ತನಕವೂ ನಿಂತಲ್ಲೇ ನಿಂತಿದ್ದೆನಲ್ಲ. ನಿನ್ನ ಕಣ್ಣುಗಳು ಅಲ್ಲಿ ಏನನ್ನೋ ಅರಸುತ್ತಿದ್ದವು, ನನಗಾಗಿ ಅಲ್ಲ, ಕಳೆದುಕೊಂಡಿದ್ದನ್ನೇನೋ,ಇನ್ನೇನೋ ಪಡೆಯಲಿಕ್ಕಾಗಿ.
ನೀನು ಏನು ಅಂತ ಚೆನ್ನಾಗಿ ಗೊತ್ತಿತ್ತು,ಗೊತ್ತಿದೆ, ನಿನ್ನಂಥವರೇ ಇಷ್ಟವಾಗೋದು, ಯಾಕೆ ಹೇಳು. ದುರ್ಜನರ ಸಂಗಕ್ಕಿಂತ ಸಜ್ಜನರೊಡನೆ ಜಗಳ ಲೇಸು."ನೆನಪುಗಳ ಸರಿಸುತ್ತಿರುವಂತೆ ಮಧ್ಯಾಹ್ನ ಅಂಗಳವನ್ನಾವರಿಸುತ್ತಿದೆ. ನಿಂತಲ್ಲೆ ನಿಧಾನಕ್ಕೆ ಕುಳಿತುಕೊಳ್ಳುತ್ತೇನೆ,ನಿನ್ನ ಬರುವಿಕೆಯ ಹಾದಿಯಲ್ಲಿ.
. ಬೆಳ್ಳನೆಯ ಪರದೆಯೊಳಗೆ ಬಿಳಿ ಮಂಚದ ಬಿಳಿ ಹಾಸಿಗೆಯಲ್ಲಿ ನಾನು ಬೆಳ್ಳನ ಬೆಳದಿಂಗಳಾಗಿ ಮಲಗಿರುವಂತೆ ಭಾಸವಾಗುತ್ತದೆ. ಎಚ್ಚರವಾಗುತ್ತದೆ.ಏಳುತ್ತಿರುವಂತೆಯೇ ನೀ ತಂದ ನೀಲಿ ಪೀತಾಂಬರ ನೆನಪಿಗೆ ಬಂದು ‘ನೀಲಿ ಪೀತಾಂಬರ ’ ಬೇಕು ಅಂತ ಹಠಮಾಡುತ್ತೇನೆ. ನಾಲ್ಕೈದು ದಾದಿಯರು ನನ್ನ ಗಟ್ಟಿಯಾಗಿ ಹಿಡಿದು ಮತ್ತೆ ಹಾಸಿಗೆಯಲ್ಲಿಟ್ಟು ರಮಿಸುತ್ತಾರೆ. ನೀನು ನನ್ನ ನೀಲಿ ಪೀತಾಂಬರ ಹಿಡಿದು ಬರುತ್ತೀಯ. ನೀನು ಮೌನಿ. ನಾನೂ ಶಾಂತವಾಗುತ್ತೇನೆ.
ದಿನವೂ ನೀ ಬರುವ ಹೊತ್ತು ‘ನೀಲ ಮನೋಚೇತನ’ ಆಸ್ಪತ್ರೆಯಲ್ಲಿ ನನ್ನ ಕೋಣೆ ಶಾಂತವಾಗಿರುತ್ತದೆ. ಸುತ್ತಲೂ ಮೌನ ಕವಿದುಕೊಳ್ಳುತ್ತದೆ.ತಿಂಗಳು ಕಳೆಯುತ್ತಿದ್ದಂತೆಯೇ ಅಂಥದೇ ಒಂದುಸಂಜೆ ನೀ ಬಂದಾಗ ನಿನ್ನ ಕೈಯೊಳಗೊಂದು ಹೊತ್ತಿಗೆಯಿರುತ್ತದೆ,ನೀನೇ ಬರೆದದ್ದು. ನಿನ್ನ "ಬೆಳ್ಳನ ಬೆಳದಿಂಗಳು" ನಿನ್ನ ಈ ಹೊತ್ತಿಗೆಯ ಮೂವತ್ಮೂರು ಕತೆಗಳೂ ಹೊತ್ತ ನಾಯಕಿ ನಾನೇ ಆಗಿರುತ್ತೇನೆ.

August 23, 2008

ಸರಿದುಹೋದನೇ "ಸ್ವರಭಾಂಧವ"...?

ಪ್ರತಿವರ್ಷದಂತೆ ಕಾಲೇಜು ಆರಂಭವಾಗಿದೆ ಅಂದಷ್ಟೇ. ಕ್ಲಾಸಲ್ಲಿ ಕುಳಿತು ಪಾಠ ಕೇಳುವಾಗಿನ ಮಳೆ ಹೊರಬಂದಾಗ ಇರಲಿಲ್ಲ. ಗೆಳತಿ ಮ್ಯೂಸಿಕ್ ಕ್ಲಾಸಿಗೆ ಹೋದರೆ ಅವಳು ಜಿಮುರುವ ಮಳೆಗೆ ತಂಪಾಗುತ್ತ ಲೈಬ್ರರಿಯ ಕಡೆ ಕಾಲು ಹಾಕುತ್ತಿದ್ದಾಗಲೇ ಒಬ್ಬರು ಎದುರಾಗಿ ಅವಳನ್ನ ನಿಲ್ಲಿಸುತ್ತಾರೆ. "ನನ್ನ ಹೆಸರು ...., ನಾನು ಸಂಗೀತ ವಿಧ್ಯಾರ್ಥಿ. ಸಂಗೀತ ವಿಭಾಗದ ವತಿಯಿಂದ ಮೂರು ವರ್ಷಗಳಿಂದ ಪಾಕ್ಷಿಕ ಪತ್ರಿಕೆಯೊಂದನ್ನ ನಡೆಸಿಕೊಂಡು ಬಂದಿದ್ದೆ. ಪದವಿ ಮುಗಿಸಿ ಇದೀಗ ತೆರಳುತ್ತಿದ್ದೇನೆ, ಆ ಪತ್ರಿಕೆಯನ್ನ ನೀನು ಮುಂದುವರೆಸುತ್ತೀಯ ದಯವಿಟ್ಟು? ಇಲ್ಲವಾದರೆ ಆ ಪತ್ರಿಕೆ ನನ್ನ ಬೆನ್ನಿಗೇ ಹೇಳುವ ಹೆಸರಿಲ್ಲದೆ ಹೋಗುತ್ತದೆ, ಕೊನೆಯ ಪಕ್ಷ ನೀನು ಈ ಕಾಲೇಜಲ್ಲಿರುವ ತನಕವಾದರೂ ನಮ್ಮ ಈ ಪತ್ರಿಕೆಯ ಜವಾಬ್ಧಾರಿ ಹೊತ್ತುಕೊಳ್ಳುವೆ ಎಂಬ ಭರವಸೆಯಿಂದ ಕೇಳುತ್ತಿದ್ದೇನೆ" ಎನ್ನುವಾಗ ಧ್ವನಿಯಲ್ಲಿ "ಸ್ವರಭಾಂಧವ"ದ ಬಗ್ಗೆ ಗೌರವ ತುಂಬಿ ಬರುತ್ತಿದೆ, ಆ ಪತ್ರಿಕೆ ನಿಲ್ಲಬಾರದು ಎಂಬ ನೋವಿದೆ. ಪರಿಚಯವೇ ಇಲ್ಲದ ಧ್ವನಿ. ಆದರೂ ಆಪ್ತತೆ. "ನಂಗೆ ಸಂಗೀತ ಅಂದ್ರೆ ಏನು ಅಂತಾನೂ ಗೊತ್ತಿಲ್ಲ, ನಾನು ಹೇಗೆ ಈ ಪತ್ರಿಕೆಯ ಜವಾಭ್ಧಾರಿ ಹೊರಲಿ, ಅದಕ್ಕೆ ಸರಕನ್ನ ಎಲ್ಲಿಂದ ತರಲಿ?" ಅಂದವಳ ಪ್ರಶ್ನೆಗೆ ಸಿಕ್ಕ ಉತ್ತರ "ಸಂಗೀತದ ಸರಕುಗಳೇ ಬೇಕಂತಿಲ್ಲ, ಅದರೊಳಗಿನ ಸಾಹಿತ್ಯವನ್ನ ಉಳಿಸಿಕೊಂಡು ಹೋಗು ತಕ್ಕಮಟ್ಟಿಗೆ, ನಿನ್ನ ಕೈಲಾದ ಮಟ್ಟಿಗೆ" ಈಗವಳಿಗೆ "ಆಗೋಲ್ಲ" ಅನ್ನುವುದಾಗುತ್ತಿಲ್ಲ. "ಸರಿ" ಅಂತ ಗೋಣಲ್ಲಾಡಿಸುತ್ತಾಳೆ.

ಹೋಗಿ ಗೆಳತಿಯರನ್ನೆಲ್ಲ ಕೇಳುತ್ತಾಳೆ "ಈ ಪತ್ರಿಕೆಯನ್ನ ನಮ್ಮ ಕೈಲಾದ ಮಟ್ಟಿಗೆ ಉಳಿಸಿಕೊಂಡು ಹೋಗೋಣವಾ?" ಯಾರೂ‘ಇಲ್ಲ’ ಅನ್ನುವುದಿಲ್ಲ. ಕುಳಿತು ಹೀಗೆ ಬರೆಯುತ್ತಾಳೆ:-

"ಸಹೃದಯರೇ...

ವರ್ಷಕ್ಕೆ ಹರುಷಗೊಂಡ ಮಯೂರ ಗರಿಬಿಚ್ಚಿ ನಲಿವಂತೆ, ವಸಂತಕ್ಕೆ ಕೋಗಿಲೆ ತನ್ನಿರುವ ಸೂಚ್ಯ ಕೊಡುವ ಪರಿಯಲ್ಲಿ ಹಾಡುವಂತೆ, ಮಾಸದ ಆರಂಭದಲ್ಲೊಮ್ಮೆ ನಮ್ಮ "ಸ್ವರ ಭಾಂಧವ"ನ ಆಗಮನವಾಗಲಿದೆ.
ಉದಯೋನ್ಮುಖ ಕವಿ-ಕವಿಯಿತ್ರಿ-ಲೇಖಕ-ಲೇಖಕಿ ಬರಹಗಾರರಿಂದ ಉದಯಿಸಿದ ಬರಹಗಳಿಗೆ "ಸ್ವರಭಾಂಧವ"ನ ಸ್ವಾಗತ.

ಇಂದಿನಿಂದ ಆಗಮಿಸುತ್ತಲಿರುವ "ಸ್ವರ ಭಾಂಧವ"ನ ಸ್ವರವು ಸುಶ್ರಾವ್ಯವಾಗಿ ತೇಲಬೇಕಾದಲ್ಲಿ ಬರಹಗಾರ ಭಾಂಧವರೇ ನಿಮ್ಮೆಲ್ಲರ ಸಹಕಾರ ಸದಾ "ಸ್ವರ ಭಾಂಧವ"ನ ಸಂಪಾದಕೀಯ ವರ್ಗಕ್ಕಿದೆಯೆಂಬ ಅಚಲ ವಿಶ್ವಾಸದೊಂದಿಗೆ...

ಸೂರ್ಯನ ಕಿರಣಗಳ ಹೊಮ್ಮುವಿಕೆಗೇ ಅವಕಾಶ ಕೊಡದೇ ಎಡೆಬಿಡದ ವರ್ಷನ ಆರ್ಭಟವನ್ನು ನೋಡುತ್ತಿದ್ದೀರಲ್ಲಾ? ಹಠ ಹಿಡಿದು ಪಕ್ಷ ದಿನಗಳ ಕಾಲ ಇಳೆಯನ್ನ ತೋಯಿಸುತ್ತಿದ್ದಾನೆ.
ಕ್ಲಾಸುಗಳಲ್ಲಿ ಮುಂದಿನ ಡೆಸ್ಕುಗಳಲ್ಲಿ ಆಸೀನರಾದವರಿಗೆ ವರ್ಷನ ದರ್ಶನವಾದರೆ ಹಿಂದೆ ಕುಳಿತವರ ಕಿವಿಗಳಲ್ಲೆಲ್ಲ ಮಳೆರಾಯನ ಹರ್ಷದ ಸುಶ್ರಾವ್ಯ ಗಾಯನ.
ಅಬ್ಬಬ್ಬಾ! ಗಾಳಿ!! ಮಳೆ!!! ಚಳಿಯಲ್ಲವೇ!!!! ಅದಕ್ಕೇ ಇರಬೇಕು ನಮ್ಮ "ಸ್ವರಭಾಂಧವ" ಹೊದ್ದು ಬೆಚ್ಚಗೆ ಮಲಗಿದ್ದನಿರಬೇಕು. ಹಿಂದೆಲ್ಲ ಸದಾ ಕಾರ್ಯನಿರತನಾಗಿದ್ದು ಹದಿನೈದು ದಿನಗಳಿಗೊಮ್ಮೆ ತನ್ನ ಕಾರ್ಯಫಲವನ್ನು ವರದಿ ಮಾಡುತ್ತಿದ್ದ "ಸ್ವರ ಭಾಂಧವ"ನಿಗೆ ವಿಶ್ರಾಂತಿ ನೀಡಿದ್ದಾಗಿದೆ, ಇನ್ನಾದರೂ ಅವನನ್ನು ನಿದ್ರೆಯಿಂದೆಬ್ಬಿಸಬೇಕಲ್ಲವೇ?
ಪುನಃ ಎಚ್ಚೆತ್ತುಕೊಂಡು ಓದುಗರ ಇದಿರು ದರ್ಶನ ನೀಡಲಿದ್ದಾನೆ "ಸ್ವರಭಾಂಧವ"

ನಿಮ್ಮೆಲ್ಲರ ಸಹಕಾರ ಕೋರುತ್ತ,
-ಸಂಪಾದಕಿ.

"ಸ್ವರಭಾಂಧವ" ಪತ್ರಿಕೆಯ ಸಂಪಾದಕೀಯ ಬಳಗದಲ್ಲಿ

ಉಪಸಂಪಾದಕಿ:- ಶ್ಯಾಮಲಾ ಹೆಗಡೆ ಜಾನ್ಮನೆ.
ಲತಾ ಹೆಗಡೆ.
ಶಾಂತಲಾ ಡಿ ಹೆಗಡೆ
ಉಪಸಂಪಾದಕ:- ರಾಘವೇಂದ್ರ ಬೆಟ್ಟಕೊಪ್ಪ
ಕಲೆ ಮತ್ತು ಬರಹ:- ಅಂಜಲಿ ಹೆಗಡೆ
ಸಂಪಾದಕಿ:-??????
****************************************************************************

ಹೀಗೆ ಸಂಪಾದಕೀಯ ಬರೆದ ನಾಲ್ಕೆಂಟು ದಿನಗಳಲ್ಲಿ ಎಚ್ಚೆತ್ತು ಬರುತ್ತಾನೆ ಸ್ವರಭಾಂಧವ.

ಭಾಂಧವರೇ...
ಅಭಿನಂದನೆಗಳು
ಹಲವಾರು ಶ್ರೋತೃಗಳು "ಸ್ವರಭಾಂಧವ"ನ ಕರೆಗೆ ಓಗೊಟ್ಟಿದ್ದಾರೆನ್ನಲು ಸಂತಸ. ವಾಸ್ತವದಲ್ಲಿ ಹಿಂದೆಲ್ಲ "ಸ್ವರಭಾಂಧವ"ನ ಹಿನ್ನೆಲೆಯಲ್ಲಿ ಸಂಗೀತದ ವಿದ್ಯಾರ್ಥಿಗಳೇ ಇದ್ದು, ಸಂಗೀತಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿ "ಸ್ವರಭಾಂಧ"ವ ಸಂಗೀತಗಾರನೂ ಆಗಿದ್ದ. ತಮ್ಮೆಲ್ಲ ಸಮ್ಮಿಶ್ರ ಸಹಕಾರದಿಂದ "ಸ್ವರಭಾಂಧವ"ನ ಸಾಹಿತ್ಯವನ್ನಾದರೂ ಉಳಿಸಿಕೊಳ್ಳುವ ಪುಟಾಣಿ ಪ್ರಯತ್ನವೊಂದನ್ನು ಮಾಡುತ್ತಿದ್ದೇನೆ. ಅಲ್ಪ ಮಟ್ಟಿನ ಯಶನ್ನನ್ನು ಪಡೆವಲ್ಲಿ ಬೃಹತ್ ಸಹಕಾರ ನೀಡಿದ ನಿಮ್ಮೆಲ್ಲರಿಗೂ ಅನಂತ ವಂದನೆಗಳು.

ವಿಷ್ಣುನಾಯ್ಕರ ಪರಿಚಯ ನೀಡುವ ಜೊತೆಯಲ್ಲಿ ಪರಿಚಯವಾಗುತ್ತಿರುವ ಪಲ್ಲವಿ ಆಲ್ಮನೆ,ಸ್ವರಭಾಂಧವ ಬಳಗವನ್ನು ನಿರಾಸೆಗೊಳಿಸದೆ ಸಹಕಾರ ನೀಡಿರುವ ಪ್ರಭಾ ಹೆಗಡೆ, ಸದಾ ಜಟಿಪಿಟಿಯಾಗಿ, ಉತ್ಸಾಹದ ಚಿಲ್ಮೆಗಳಂತಿರುವ ಪತ್ರಿಕೋದ್ಯಮದ ವಿಧ್ಯಾರ್ಥಿಗಳಾದ ರಷ್ಮಿ ಹೆಗಡೆ, ಪೂರ್ಣಿಮಾ ಭಟ್, ಬೀನಾ ಹೆಗಡೆ ಇವರೆಲ್ಲರ ಸಹಕಾರಕ್ಕೆ ಋಣಿಯಾಗಿದ್ದೇನೆ.
ಸರ್ವರ ಲೇಖನಿಗಳಿಂದ ಜಾರಿದ ಭಾವನೆಗಳಿಗೆ ಸ್ವಾಗತ ಕೋರುವ ಸ್ವರಭಾಂಧವನ ಸಂಪಾದಕ ಬಳಗಕ್ಕೆ ತಮ್ಮೆಲ್ಲರ ಸಹಕಾರ ಬಯಸುತ್ತ...
-ಸಂಪಾದಕಿ.

ಅಂತೆಲ್ಲ ಬರೆದು ಪತ್ರಿಕೆಯನ್ನ ಮುನ್ನಡೆಸಿದವಳು, ಸಂಪಾದಕಿ(?) ಎಂಬ ಹೊಣೆಹೊತ್ತವಳು ವರ್ಷ್ಯಾಂತ್ಯದಲ್ಲಿ ಕಳೆದು ಹೋಗುತ್ತಾಳೆ ಅಷ್ಟುದಿನತನಕ ಆ ಪತ್ರಿಕೆಯ ನಡೆಸಲು ಸಹಕರಿಸಿದ ಎಲ್ಲರನ್ನೂ ನೆನೆಯುತ್ತ. ಸರಿದು ಹೋದ "ಸ್ವರಭಾಂಧವ"ನಲ್ಲಿ ಸದಾ ಕ್ಷಮೆಯಾಚಿಸುತ್ತಾ...
ಕೊನೆಯ ಸಂಪಾದಕೀಯ ಬರೆದ ನೆನಪವಳಿಗೆ ಬರುವುದೇ ಇಲ್ಲ, ಬಹುಷಃ ಕೊನೆಯ ಸಂಪಾದಕೀಯ ಕಾಣದೆಲೇ "ಸ್ವರಭಾಂಧವ" ಕಣ್ಮರೆಯಾದನಾ! ಅಂತ ಯೋಚಿಸುತ್ತಾಳೆ ಆಗಾಗ. ಕ್ರಮೇಣ "ಸ್ವರ ಭಾಂಧವ" ಮುಂದೇನಾದ ಎನ್ನುವುದನ್ನು ಸಂಪೂರ್ಣ ಮರೆತುಹೋದವಳಿಗೆ ಈಗೀಗ ಸ್ವರಭಾಂಧವನ ನೆನಪು ಪದೇ ಪದೇ ಕಾಡುತ್ತದೆ. "ಸ್ವರಭಾಂಧವ"ನ ಸುಳಿವೇ ಸಿಗುವುದಿಲ್ಲ. ಕಳೆದು ಹೋಗಿದ್ದು "ಸ್ವರ ಭಾಂಧವ"ನಾ ಅಥವಾ ಅದರ ಹೊಣೆ ಹೊತ್ತ ಸಂಪಾದಕಿಯಾ? ಹುಡುಕುತ್ತ ಹೋದಂತೆ ಎಲ್ಲವೂ ಕಳೆದೇ ಹೋಗುತ್ತವೆ. ಹಾಗೆ ಹುಡುಕಲೇಬಾರದು, ಅವಳೂ ಕಳೆದುಹೋಗಿದ್ದಾಳೆ, ಹುಡುಕಿದಷ್ಟೂ ಕಳೆದು ಹೋಗುತ್ತಾಳೆ.

August 18, 2008

ನೆನಪುಗಳ್ಯಾಕೆ ಮರೆಯುವುದಿಲ್ಲ?

ರಸ್ತೆಯ ಪಕ್ಕದಲ್ಲಿ ಮನೆಯೆದುರಿನ ತೆಂಗಿನ ಗಿಡಕೆ ಒರಗಿ ನಿಂತು ಮಗಳು ಬರುವುದನ್ನೇ ಕಾದು ನಿಂತು ಅಗೋ ರಸ್ತೆಯ ಆ ತುದಿಯಲ್ಲಿ ಮಗಳ ಮುಖ ಕಂಡ ಕ್ಷಣದಲ್ಲಿ ಅದೆಷ್ಟು ಖುಷಿಯಿರುತ್ತಿತ್ತು ಅಮ್ಮನ ಮೊಗದಲ್ಲಿ. ಅಮ್ಮ ಮಗಳನ್ನೆತ್ತಿ ಮುದ್ದಿಡುತ್ತಿದ್ದರಲ್ಲ! ಆಗೆಲ್ಲ ಅಮ್ಮನಿಗೆ ಏನು ಸಿಗುತ್ತಿತ್ತು? ಆ ಸಂತಸದ ಪ್ರೀತಿಯ ನಾನ್ಯಾಕೆ ಹಿಡಿದಿಟ್ಟುಕೊಳ್ಳಲಿಲ್ಲ?


ಶಾಲೆಯಿಂದ ನಡೆದು ಬರುತ್ತ ಓಣಿಯೊಳಗೆ ಹರಿಯುತ್ತಿದ್ದ ನೀರ ದಾಟುವಾಗ ಅಚಾನಕ್ ಜಿಗಣೆಯೊಂದು ಕಾಲಿಗೆ ಅಂಟಿಕೊಂಡು ಅದೇನಂತ ಗೊತ್ತಾಗದೇ ಅತ್ತರೆ ಅದೇ ರಸ್ತೆಯಲ್ಲಿ ಅಲ್ಲೆಲ್ಲೋ ನಡೆದು ಹೋಗುತ್ತಿದ್ದ ಮಂಜಿ ಅವಳ ಬಾಯೊಳಗಿನ ತಂಬಾಕಿನ ತಾಂಬೂಲದ ರಸ ಉಗುಳಿ ಪುಟ್ಟ ಕಾಲಿಂದ ಜಿಗಣೆ ಬಿಡಿಸಿ ‘ಶಣ್ಣಮ್ಮ, ಜಿಗಣೆ ಅದೂ..ರಕ್ತ ಹೀರ್ಬುಡ್ತಿತ್ತು ನಾ ಬರ್ದಿದ್ರೆ....’ ಅನ್ನುತ್ತ ಮುದ್ದಿಸಿದ ಮಂಜಿಯ ಪ್ರೀತಿಯ ನಾನ್ಯಾಕೆ ಹಿಡಿದಿಟ್ಟುಕೊಳ್ಳಲಿಲ್ಲ?

ನೋಡೋಕೆ ಪಾಟಿಕಡ್ಡಿ ಹಾಗಿದ್ದರೂ ಅಕ್ಷರ ಮಾತ್ರ ಗುಂಡಗೆ ಬರೆದಾಗೆಲ್ಲ ಹಣೆಗೊಂದು ಮುತ್ತಿತ್ತು ‘ಚಂದ ಬರೇತ್ಯಲೇ ಕೂಸೆ, ಇನ್ನೂ ಚಂದ ಬರೆಯೂಲೆ ಟ್ರೈ ಮಾಡೋ’ ಅಂದ ಮಾಸ್ತರರ ಪ್ರೀತಿಯ ನಾನ್ಯಾಕೆ ಹಿಡಿದಿಟ್ಟುಕೊಳ್ಳಲಿಲ್ಲ?

ಮನೆಗೆಲಸಕ್ಕೆ ಬರುತ್ತಿದ್ದ ಮಾತಾಡಲೇ ಬಾರದ ‘ಹಾದಿ’ ಎಂಬ ಪ್ರೀತಿಯ ಹೆಣ್ಣಿನ ಮುಂದೆ ಒಂದಿಷ್ಟು ಪ್ರಶ್ನೆ ಕೇಳುವಾಗೆಲ್ಲ ನನಗ್ಯಾಕೆ ಗೊತ್ತಿರಲಿಲ್ಲ ಅವಳು ಮೂಗಿ ಎಂದು? ನಾ ಚೆಲ್ಲಿದ ಪ್ರಶ್ನೆಗೆಲ್ಲ ‘ಅ ಆ’ ಕಾರದಲ್ಲೇ ಉತ್ತರವಿಟ್ಟು ಮುಗ್ಧವಾಗಿ ಅವಳು ನಕ್ಕು ಈ ಪುಟ್ಟ ತಲೆಯ ನೇವರಿಸಿದ ಪ್ರೀತಿಯ ನಾನ್ಯಾಕೆ ಹಿಡಿದಿಟ್ಟುಕೊಳ್ಳಲಿಲ್ಲ? ಅವಳ ಭಾಷೆಯ ನಾನ್ಯಾಕೆ ಕಲಿತುಕೊಳ್ಳಲೇ ಇಲ್ಲ?

ಬೆಳೆದಂತೆ ಬೆಳೆದಂತೆ ಅಪ್ಪನಿಗೆ ಗೆಳತಿಯಾಗಿ, ಸಲಹೆ ಕೇಳುತ್ತ-ಸಲಹಿಸುತ್ತ, ಕವಿತೆ ಬರೆದು ಅಪ್ಪನ ಮುಂದೆ ಓದಿ ಆ ಕವಿತೆಗೆ ಹೀಗೆ ಸ್ಟೆಪ್ಸ್ ಹಾಕಬಹುದು ಅಂತೆಲ್ಲ ನಲಿದು ತಮಾಷೆ ಮಾಡುವಾಗ ನಕ್ಕಾಗಿನ ಅಪ್ಪನ ಖುಷಿಯ ನಾನ್ಯಾಕೆ ಹಿಡಿಟ್ಟುಕೊಳ್ಳಲಿಲ್ಲ?

ಒಂದು ತುತ್ತನ್ನ ಮೂವತ್ತೆರಡುಸಲ ಅಗಿದು ನುಂಗೆನ್ನುವ ಅಪ್ಪನ ಮಾತನ್ನ ಶಿರಸಾವಹಿಸಿ ಪಾಲಿಸಿದ ಮಗಳನ್ನ ‘ನೀನು ಇಷ್ಟು ನಿಧಾನಕ್ಕೆ ಊಟ ಮಾಡಿದ್ರೆ, ನಾಳೆ ಗಂಡನಮನೆಗೆ ಹೋದ್ರೆ ಅಲ್ಲಿ ಉಳಿದೆಲ್ಲ ಕೆಲಸ ಮಾಡಿದಂಗೆ, ದೇವ್ರೇ ಗತಿ!!’ ಅಂತಂದ ಅಮ್ಮನ ಹುಸಿಗೋಪದ ಪ್ರೀತಿಯ ನಾನ್ಯಾಕೆ ಹಿಡಿದಿಟ್ಟುಕೊಳ್ಳಲಿಲ್ಲ?

ನಾಲ್ಕು ಗಾಲಿಯ ಮುಚ್ಚಿದ ಗೂಡೊಳಗಿವನು ಕೂತು ನಾನು ಕೈಯ್ಯಾಡಿಸಿ ಬಾಯ್ ಅಂದಾಗ ಅವನು ‘ಬಾಯ್’ ಅಂದದ್ದು ಅವನ ವಾಹನದ ಕಪ್ಪು ಗಾಜಿನಾಚೆಗೆ ಕಾಣದೇ ಹೋದಾಗೆಲ್ಲ ಅಂದುಕೊಳ್ಳುತ್ತೇನೆ, ಆವತ್ತು ಟೂವ್ಹೀಲರ್ ಅಲ್ಲಿ ಕೂತು ಮನೆ ಬಾಗಿಲಿಂದ ಬಾಯ್ ಹೇಳುತ್ತ ಅರ್ಧ ಕಿಲೋಮೀಟರ್ ದೂರ ನಡೆದು ರಸ್ತೆ ತಿರುವು ಕಂಡ ಮೇಲೂ ಮೂಲೆಯಂಗಡಿಯ ಎರಡು ಕಟ್ಟಡಗಳ ನಡುವಿನ ಇಷ್ಟೇ ಇಷ್ಟು ಗ್ಯಾಪ್ ಮುಂದೆ ಗಾಡಿ ನಿಲ್ಲಿಸಿ ನನ್ನತ್ತ ಕೈಮಾಡಿ ಮುಂದೆ ನಡೆಯುತ್ತಿದ್ದ ಇದೇಗೆಳೆಯನ ಪ್ರೀತಿಯ ಅಂದು ನಾನ್ಯಾಕೆ ಹಿದಿದಿಟ್ಟುಕೊಳ್ಳಲಿಲ್ಲ? ಈಗೀಗ ಅವನು ತಿರುವು ದಾಟುವವರೆಗೆ ಅವಗೆ ಕಾಯುತ್ತ ಅಲ್ಲಿ ನಾನ್ಯಾಕೆ ನಿಲ್ಲುವುದಿಲ್ಲ?

ಎಲ್ಲವೂ ಬದಲಾಗುತ್ತದೆ ಕಾಲದೊಂದಿಗೆ, ಇಂದಿನ ಪ್ರೀತಿಯ ರೀತಿ ನಾಳೆ ಬದಲಾಗುತ್ತದೆ. ಕೊನೆಯಲ್ಲಿ ಯಾರ ಪ್ರೀತಿಯೂ ದಕ್ಕುವುದೇ ಇಲ್ಲ,ಮೊದಲೇ ಎಲ್ಲವನ್ನೂ ಬಾಚಿ ಹಿಡಿದಿಟ್ಟುಕೊಂಡುಬಿಡಬೇಕು.

July 17, 2008

ಬತ್ತಿದ ಬೆಳದಿಂಗಳು ಹರವಿಕೊಳದು

ಪ್ರೀತಿಯ ನೀವುಗಳೆ....


ಬರೆಯಲು ಬೇಜಾರಾಗಿದೆ. ಬರೆಯಬೇಕು ಅನಿಸುತ್ತಿಲ್ಲ. ಬ್ಲಾಗ್ ಬರವಣಿಗೆಯಿಂದ ದೂರವಿರಬೇಕು ಎನಿಸುತ್ತಿದೆ.
ಸೋರಿಚೆಲ್ಲುತ್ತಿರುವ ಈ ನೆನಪು ಕನಸುಗಳನ್ನೆಲ್ಲ ನಿಮಗೆಲ್ಲ ಹೇಳದೆಲೆ ಒರೆಸಿಬಿಡಲು ಮನಸಾಗಲಿಲ್ಲ. ಹಿಡಿದಿಡುವ ಮನಸೂ ಇಲ್ಲ.

ತನ್ನಿಷ್ಟದ ಎಲ್ಲ ಬ್ಲಾಗುಗಳಿಗೆ ಭೇಟಿ ನೀಡುವುದನ್ನಿವಳು ಬಿಡಲಾರಳು, ಎಲ್ಲಿಯಾದರೂ ಇವಳದೊಂದು ಹೆಜ್ಜೆಗುರುತು ಕಂಡೀತು ನಿಮಗೆ.

"ನಾಳೆ ಮಂಗಳವಾರ, ಮಾರನೆಯ ದಿನ ನವಮಿ, ಆಮೇಲೆ ನಿಲ್ಲುವೆನೆ ನಾನು ಇಲ್ಲಿ?"

ಶುಕ್ರವಾರ ಬರಲಿರುವ ಹುಣ್ಣಿಮೆಯಿರುಳಿನ ಬೆಳದಿಂಗಳ ಜಾತ್ರೆಯಲಿ ನೆನಪು ಕನಸುಗಳನೆಲ್ಲ ತೂರಿಬಿಡುತ್ತಿದ್ದೇನೆ. ಇನ್ನಿಲ್ಲಿ ಯಾವ ನೆನಪು ಕನಸು, ಬೆಳದಿಂಗಳು, ಹುಣ್ಣಿಮೆಗಳ ಹಿಡಿದು ತಂದು ಹರಿಸುವ ಯೋಚನೆಯಿಲ್ಲ.

ಪ್ರಿಯ ಓದುಗ...

"ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು"ನನ್ನ ಬರಹಗಳನ್ನ ಬೆನ್ನುತಟ್ಟಿ, ಕಮೆಂಟಿಸಿ, ಓದಿ , ಕೈ ಹಿಡಿದು ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ಒಂದಿಷ್ಟು ಪ್ರೀತಿ.

ಹೋಗಿ ಬರುತ್ತೇನೆನ್ನುವಾಗ ಮತ್ತೆದೇ ಹಾಡು "ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ"


ನಿಮ್ಮೆಲ್ಲರ
-ಶಾಂತಲಾ ಭಂಡಿ.

July 14, 2008

ಮೂಡಲ ಮನೆಯ ಮುತ್ತಿನ ನೀರಿನ ನೆನಪು

ಪದವಿಯ ಮೊದಲವರ್ಷದಲ್ಲಿದ್ದಾಗ ಕಾಲೇಜಿನ ವಾರ್ಷಿಕ ಸಂಚಿಕೆಗಾಗಿ ಬರೆದ ಲೇಖನವೊಂದು ಸಿಕ್ಕಿತು. ಆ ದಿನಗಳ ನೆನಪುಗಳು ಕೊಡುವ ಖುಷಿಯೇ ಬೇರೆ. ಆ ನೆನಪುಗಳೇ ಸಾಕು ದಿನ ಸಂಪೂರ್ಣವಾಗಲು. ಅದರಲ್ಲೂ ಡಾ. ದ ರಾ ಬೇಂದ್ರೆಯಂತವರ ನೆನಪಿನಲ್ಲಿ ತೇಲುತ್ತಿರುವಾಗ ನಿಮ್ಮೆಲ್ಲರ ನೆನಪು. ನೆನಪಿನ ದೋಣಿಯಲ್ಲಿ ನಿಮ್ಮೆಲ್ಲರೊಂದಿಗೆ ವಿಹರಿಸುವ ಖುಷಿಯೇ ಬೇರೆ ಎನಿಸಿತು. ಬೇಂದ್ರೆಯವರ ‘ಸಖಿಗೀತ’ ಓದಿ ಆ ದಿನಗಳಲ್ಲಿ ನನಗನಿಸಿದ ನನ್ನೊಳಗಿನ ಭಾವಗಳ ತುಣುಕುಗಳಿವು ಅಂತ ಮಾತ್ರ ಹೇಳಬಲ್ಲೆ. ವಿಮರ್ಶೆಯಂತೂ ಅಲ್ಲವೇ ಅಲ್ಲ. ಮುದುಡಿ ಮೂಲೆಯಲ್ಲಿದ್ದ ಹಳೆಯ ಹಾಳೆಗಳ ನಿಮಗಾಗಿ ತೆರೆದಿಟ್ಟೆ. ಒಂದಿಷ್ಟು ಧೂಳನ್ನೆಲ್ಲ ಕೊಡವಿ ಹಳೆಯ ಪುಟಗಳಿಗೆ ಹೊಳಪು ಕೊಡುವ ನಿಮ್ಮೆಲ್ಲರಿಗಾಗಿ ಈ ಪುಟಗಳು. ಓದಬೇಕೆನ್ನಿಸಿದರೆ ಪ್ರತಿ ಪುಟದ ಮೇಲೂ ಕ್ಲಿಕ್ಕಿಸುವ ಕಷ್ಟವನ್ನು ನಿಮಗೇ ಬಿಟ್ಟಿದ್ದೇನೆ. ಇನ್ನು ನೀವುಂಟು, ನನ್ನ ಹಳೆಯ ಪುಟವುಂಟು.


‘ಸಖಿಗೀತ’ ಕ್ಕೆ ಸಂಬಂಧಿಸಿದ ನಿಮ್ಮ ಅನಿಸಿಕೆಗಳನ್ನೂ ಇಲ್ಲಿಷ್ಟು ತೇಲಬಿಡಿ, ನಿಮ್ಮೆಲ್ಲರ ಅನಿಸಿಕೆಗಳಿಲ್ಲಿ ಕಲೆತು ಸಿಹಿಹೂರಣವಾಗಲಿ ಈ ಸಮಯ.

ನನ್ನ ಕಾಲೇಜಿನ ವಾರ್ಷಿಕ ಸಂಚಿಕೆಯ ಮುಖಪುಟ (ಹಾಳೆ ಹಳೆಯದಾದರೇನು ನೆನಪು ನವನವೀನ. ಅಲ್ಲವೇ?:)
ಪುಟ ೧


ಪುಟ೨


ಪುಟ೩


ಪ್ರೀತಿಯಿಂದ,
-ಶಾಂತಲಾ ಭಂಡಿ.

**********************************************************************************************


Harish - ಹರೀಶ said...
ಶಾಂತಲಕ್ಕ, ಎಷ್ಟೋ ಜನಕ್ಕೆ (ಅಲ್ಲಿ ಓದಿದವ್ವೆಯ) ಎಂ.ಎಂ. ಅಂದ್ರೆ ಮೋಟಿನಸರ ಮೆಮೋರಿಯಲ್ ಅಂತ ಗೊತ್ತಿಲ್ಲೆ...

ಯಾರ್ನಾದ್ರೂ ಕೇಳಿ ನೋಡು :-)

July 14, 2008 7:59 PM
xx said...
shanatala avare, nimma bhavanegaLu nijakkoo nammannu yavudo lokakke karedoiuttade. nimma kannada jnaana, padhakosha adbhuta! naanoo ille nimma cupertino dalle iddeene. neevu illi elliddeera?

July 14, 2008 10:13 PM
xx said...
kshamisi. Nanna parichaya maadikolluvuda marethe. Naanu saraswathi vattam antha. iththeechige taane bengaloorininda bandiddene. nanage nanna magalaLu nimma blog torisidalu. Odi bahaLa ishta aayithu. nimma innitara lekhanavannooo oduttiddene. specially the blog that you have written about 'mother's feeling' is excellent. Keep up the good job!

July 14, 2008 10:27 PM
ತೇಜಸ್ವಿನಿ ಹೆಗಡೆ- said...
ಶಾಂತಲಾ,

ದಾಂಪತ್ಯದ ಸಾರವನ್ನು.. ಅದರೊಳಗಿನ್ ಸಿಹಿ-ಕಹಿ ಪಿಸುಮಾತುಗಳನ್ನು, ವಿರಸ-ಸರಸಗಳನ್ನು ಓದಬೇಕಾದರೆ ಅದಕ್ಕೆ ಸಖೀಗೀತಕ್ಕಿಂತ ಉತ್ತಮ ಕವನ ಸಿಗಲಾರದೇನೋ. ಅದ್ಭುತ ಕವನ. ಗೂಡಾರ್ಥಗಳನ್ನೊಳಗೊಂಡಿದ್ದರೂ ಸರಳತೆಯನ್ನೇ ಹೊದ್ದು ಅದ್ದಿರುವ ಕವನ ನನ್ನ ಮೆಚ್ಚಿನ ಕವನವೂ ಹೌದು. ಅದನ್ನು ವಿವರಿಸಲು ಯತ್ನಿಸಿದ ನಿನ್ನ ಪ್ರಯತ್ನ ತುಂಬಾ ಶ್ಲಾಘನೀಯ. ತುಂಬಾ ಇಷ್ಟವಾಯಿತು. ಮತ್ತಷ್ಟು ಇಂತಹ ಬರಹಗಳು ಬರಲಿ.

July 15, 2008 8:00 AM
sunaath said...
ಶಾಂತಲಾ,
ಬೇಂದ್ರೆಯವರ ಸಖೀಗೀತದ ಸಾರವನ್ನು ಎಷ್ಟು ಚೆನ್ನಾಗಿ ಬರೆದಿದ್ದೀಯಮ್ಮ. ಅವರ ಇತರ ದಾಂಪತ್ಯಗೀತಗಳ ಭಾವಗಳನ್ನೂ ಸಂಕಲಿಸಿ, ಒಂದು ಲೇಖನವನ್ನು ನೀನು ನೀಡಿದರೆ
ಸ್ವಾರಸ್ಯಕರವಾಗುವದೆಂದು ನನ್ನ ಭಾವನೆ.
-ಸುನಾಥ ಕಾಕಾ

July 24, 2008 2:57 PM
ಸಿಮ್ಮಾ said...
ಶಾಂತಲಾ ಅವರೇ,
ನಂಗೆ ಈ ವಿಮರ್ಶೆ ಇದೆಲ್ಲಾ ಬರೋಲ್ಲ, ಅದೂ ಅಲ್ದೆ ನಾನು ಬೇಂದ್ರೆಯವರನ್ನ ಜಾಸ್ತಿ ಓದಿದವನೂ ಅಲ್ಲ. ಆದರೆ ಅವರ ಕೆಲವು ಕವನಗಳಲ್ಲಿನ ಸಾಲುಗಳು ತುಂಬಾ ಇಷ್ಟ ಅವುಗಳನ್ನಷ್ಟೇ ನಾನಿಲ್ಲಿ ಹಂಚಿ ಕೊಳ್ಳ ಬಲ್ಲೆ.
1. ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೊಯ್ದ
ನುಣ್ಣನ್ನೆರಕಾವ ಹೊಯ್ದ.
ಬಾಗಿಲುನ ತೆರೆದು ಬೆಳಕು ಹರಿದು
ಜಗವೆಲ್ಲಾ ತೊಯ್ದ........

2. ನೀ ಹೀಂಗ ನೋಡ ಬ್ಯಾಡದಲ್ಲಿನ,
ಮುಗಿಲಿನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನ..

3. ಯುಗಾದಿಯ,

ವರುಷಕೊಂದು ಹೊಸತು ಜನ್ಮ
ಹರುಕೊಂದು ಹೊಸತು ನೆಲೆಯು
ಅಖಿಲ ಜೀವ ಜಾಲಕೆ

ಒಂದೇ ಒಂದು ಜನ್ಮದಲ್ಲಿ
ಒಂದೇ ಬಾಲ್ಯ,ಒಂದೇ ಹರೆಯ
ನಮಗದಷ್ಟೇ ಏತಕೆ?

ಇದನ್ನೆಲ್ಲಾ ನೆನಪಿಸಿದ್ದಕ್ಕೆ ಧನ್ಯವಾದಗಳು

July 25, 2008 7:01 AM
ಶಾಂತಲಾ ಭಂಡಿ said...
@ಹರೀಶ
ಧನ್ಯವಾದಗಳು,
ನೀನು ಹೇಳಿದ್ದು ನಿಜ, ಅಲ್ಲೇ ಡಿಗ್ರಿ ತಗಂಡುಹೋದ್ರೂ ಎಂ.ಎಂ. ಅಂದ್ರೇನು ಅನ್ನೋ ಬಗ್ಗೆ ಯೋಚ್ನೆ ಮಾಡದ ಜನ ಇರ್ತ. ಎಂತಕ್ಕೆ ಹೇಳಿ ನಂಗೂ ಗೊತ್ತಿಲ್ಲೆ.

@XX
ನಿಮ್ಮ ಮೆಚ್ಚುಗೆಯ ಪ್ರೋತ್ಸಾಹಕ್ಕೆ ಧನ್ಯವಾದಗಳು.
ನೀವು ನನ್ನ ಬರಹಗಳನ್ನ ಇಷ್ಟು ಪ್ರೀತಿಯಿಂದ ಓದುತ್ತಿರುವುದು ನನ್ನ ಖುಷಿ.

@ತೇಜಸ್ವಿನಿ
ಧನ್ಯವಾದಗಳು,ಕಾಲೇಜಿನ ದಿನಗಳಲ್ಲಿ ಬರೆದದ್ದು, ತಪ್ಪುಗಳೆಷ್ಟಿವೆಯೋ ಗೊತ್ತಿಲ್ಲ, ನೀವು ಮೆಚ್ಚಿದ್ದು ನನ್ನ ಖುಷಿ.

@ಸುನಾಥ ಕಾಕ
ಧನ್ಯವಾದಗಳು, ಬೇಂದ್ರೆಯವರ ಬಾಂದಳದಿಂದ ಸುರಿದ ವರ್ಷಧಾರೆಯನ್ನ ಈ ಪುಟ್ಟ ಬೊಗಸೆಯಲ್ಲಿ ಹಿಡಿವ ಚಿಕ್ಕಯತ್ನವಾಗಿತ್ತು. ಏನೂ ಅರಿವಿರದ ದಿನಗಳಲ್ಲಿ ಬರೆದದ್ದು. ಈಗ ಬೇಂದ್ರಯವರ ಗೀತೆಗಳನ್ನ ಬಿಡಿಸಿಡುವುದು ನನ್ನಿಂದ ಅಸಾಧ್ಯವೇ.
ನೀವು ಆ ಕಾರ್ಯವನ್ನ ಚಂದದಿಂದ ನಿರ್ವಹಿಸುತ್ತಿದ್ದೀರಿ ಕಾಕಾ.
ಆ ಕಾರ್ಯವನ್ನ ನೀವೇ ಮಾಡಿದರೆ ಸೊಗಸು ಕೂಡ.
ನೀವು ಬರೆಯಿರಿ, ನನಗೆ ನಿಮ್ಮ ಬರಹಗಳು ತುಂಬ ಇಷ್ಟ.

@ಸಿಮ್ಮಾ
ನಿಮ್ಮಿಷ್ಟದ ಸಾಲುಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.


ಎಲ್ಲರ ಗಮನಕ್ಕೆ: ಈ ಲೇಖನದ ಪುಟಗಳಲ್ಲಿ ಅನೇಕ ಮುದ್ರಣ ದೋಷಗಳಿವೆ.
‘ಸಖೀಗೀತ’ ‘ಸಖಿಗೀತ’ ಎಂದಾಗಿದೆ.
‘ಸಖಿ ನಮ್ಮ ಸಖ್ಯದ ಆಖ್ಯಾನ ಕಟು ಮಧುರ’ ಎಂಬ ಸಾಲು
‘ಸಖೀ ನಮ್ಮ ಸಖ್ಯದ ಆಖ್ಯಾನ ಬಲು ಮಧುರ’ಎಂಬುದಾಗಿ ಓದಿದ ನೆನಪು.
‘ನನ್ನ ಚಿತ್ತದೊಳಿರುವ ಚಿತ್ರಗಾರನು ಬರೆದ ಚಿತ್ರಕೆ ಬಹದೆಂದೋ ಜೀವಕಳೆ’ ಎಂಬ ಸಾಲು
‘ನನ್ನ ಚಿತ್ತದೊಳಿರುವ ಚಿತ್ರಗಾರನು ಬರೆದ ಚಿತ್ರಕೆ ಬಹುದೆಂದೋ ಜೀವಕಳೆ’ ಎಂದಾಗಬೇಕೇನೋ ಎಂಬ ಗುಮಾನಿ. ಇವನ್ನೆಲ್ಲ ತಿದ್ದಲು ಸಧ್ಯಕ್ಕೆ ‘ಸಖೀಗೀತ’ ನನ್ನಲ್ಲಿ ಲಭ್ಯವಿರದ ಕಾರಣ ಈ ಪುಟಗಳಲ್ಲಿ ಇಂತಹ ದೋಷಗಳು ಗಮನಕ್ಕೆ ಬಂದಲ್ಲಿ ದಯವಿಟ್ಟು ತಿಳಿಸಿರೆಂದು ಕೇಳಿಕೊಳ್ಳುತ್ತೇನೆ.

July 28, 2008 11:15 AM

July 7, 2008

ಸಿಂಡ್ರೆಲಾ

ಕಹಿಕಾಫಿಯಾಳದಲೂ ನಗು
ನಗು ಬಿರಿವಾಗ
ಏನೋ ನೋವು
ಕಹಿಕಾಫಿಯಾಳ
ಇನ್ನಷ್ಟು ಆಳ
ಮನದಾಳದಂತೆ

ಬಂದವಳು
ಹೊರಟೇ ಹೋದಳು
ಅದೇ ಸಮಯವಲ್ಲ
ಅದೊಂಥರ ವೇಳೆ
ಚಪ್ಪಲಿಯ ಸುಳಿವ
ಬಿಡಲಿಲ್ಲವೀಗಲೂ

ಫ್ರಿಜ್ಜೊಳಗೆ ತಣ್ಣಗೆ
ಕೂತ ಡಬ್ಬಗಳದು ಮಾತೇ ಇಲ್ಲ
ಸಿಟ್ಟಿಂಗ್ ಹಾಲಿನ ಮಧ್ಯೆ
ಅವಳದೇ ಹೊಲಿಗೆ ಯಂತ್ರ
ಕ್ರಿಸ್ ಮಸ್ ಗೆ ಕಾಯುತ್ತಲಿದೆ
ಕ್ರಿಸ್ ಮಸ್ ಟ್ರೀ
ನಾನವಳ ಬರುವ ಕಾಯುವಂತೆ

ನಿನ್ನದೇ ಕರೆಯಾ
ಬೆಳ್ಳಕ್ಕಿ ಮುಗಿಲೆ, ಸಾರಿ
ಸುಪ್ತವಾಗಿ ಮೊಬೈಲ್
ಮಾತಾಡಿದ್ದು
ಅರಿವಾಗಲಿಲ್ಲ

ಕಿಟಕಿಗಾನಿಸಿ ನಿಂತು
ನೋಡುತ್ತೇನೆ
ಮೇಲೆ ಬೆಳ್ಳಕ್ಕಿ ಹಿಂಡು
ಅದರೊಳಗೆ ಅವಳೂ ಒಬ್ಬಳಾ
ಆ ನನ್ನ ಸಿಂಡರೆಲಾ?

ಸುಮ್ಮನೆ ಸಾಗುವ ಸಾಲುಗಳು

*ಗುರುಬಲ*
ಗುರುವೇ ಬಲವಾಗಿ
ಬಲವೇ ಗುರುವಾಗಿ
ಬಂದಾಗಲೇ
ಬಂದಿದ್ದು
ಗುರುಬಲ

*ಅದೃಷ್ಟ*
ಕವಿತೆಯೊಳಗೆ
ಕಳೆದ
ಅದೇ ಬೀಗದ ಕೈ
ಲೇಖನದೊಳಗೆ
ಕೀಲಿಕೈ ಆಗಿ ಸಿಕ್ಕಿದ್ದು!

*ನೆನಪು*
ಹಾದಿಯುದ್ದಕ್ಕೂ
ಹರಿದು
ತೀರದುದ್ದಕ್ಕೂ
ತೀರದ
ಸಂಗಾತಿ

*ಹುಣ್ಣಿಮೆ*
ಮೋಡಮರಗಳ ರಾಶಿ
ತಾರೆಮರಿಗಳ ದಿಂಡು
ಕಣ್ಣುಗಳದೇ ಜಾತ್ರೆ
ಚಂದ್ರಿಕೆಯ ಪಲ್ಲಕ್ಕಿ
ಚಂದ್ರನಿಲ್ಲ!

June 29, 2008

ಭಾವ ಬನ

*ಹೊಂದಾಣಿಕೆ*
ಅವನ ಹೊಸ ಮನೆ
ನನಗದು ಹಳೆಯ ಅಂಗಳ
ಅವನ ಹಳೆಮನ
ಹೊಸ ಕಿನ್ನರಿಯರ ಕಿನ್ನರಿ
ಇದು ಅವನದೇ ಹೊಸಬಿಂಬ
ನಾನು ಹಳೆಯ ಕನ್ನಡಿ

*ವಿಪರ್ಯಾಸ*
ಅವನ ಕಾಫಿತಳದಿಳಿದು
ಕರಗಿದ ಸಕ್ಕರೆ
ಇವನ ಟೀಯುಗುಳಿದ
ಹಬೆಯಿಂದೆದ್ದು ಬಂದದ್ದು!*ಸಂಬಂಧ*
ಕಳಚಿಕೊಂಡಷ್ಟೂ ಕೂಡಿ
ಕೂಡಿದ್ದೆಲ್ಲ ಕಳಚಿ
ಕಳೆದುಕೂಡಿ
ಕೂಡಿಕಳೆದು
ಕಳೆದದ್ದನ್ನೇ ಕಳೆದು
ಕೂಡಿಸಿದ್ದನ್ನೇ ಕೂಡಿಸಿ
ಕಾಯುತ್ತ ಕೊಲ್ಲುವ
ಕಾಗುಣಿತಗಣಿತ ಕೊಂಡಿ

*ನನ್ನ ಸಾಲು*
ಹೊಸಸಾಲಿಗೂ ಬೇಕು
ಓಬಿರಾಯನ ಉಪಮಾ
ಹಳೆಯರೂಪಕಕ್ಕೆ
ಹೊಸತನದ ಟೀಕೆ
ಓಬಿರಾಯಗೆ ತೃಪ್ತಿ
ಕವಿಗಳಿಗೊಂದಷ್ಟು ಸಾಲು ದಕ್ಕಿದ್ದಕ್ಕೆ

June 12, 2008

ಬೆಳದಿಂಗಳ ಕರೆಯೋಲೆ...

ಅವನು ಯಾವಾಗಲೂ ಹಾಗೆಯೇ... ಮುಸ್ಸಂಜೆಯ ಚಾದರಹೊದ್ದು ಮಲಗಿಬಿಡುತ್ತಾನೆ. ಅವನಿಲ್ಲ ಅಂದರೆ ನಮಗೇನು ಬೆಳಕೇ ದಕ್ಕದೋ..? ಇವನಿದ್ದಾನಲ್ಲಾ .....ಒಂಟಿಜೀವದ ನಿಟ್ಟುಸಿರೊಂದು ಮನೆಯಂಗಳದಲ್ಲಿ ಲೀನವಾಗುತ್ತದೆ.
ಮುಸ್ಸಂಜೆಯ ಮನೆಯೊಳಗೆ ದೀಪವನ್ನಿಟ್ಟು
"ಬಿದಿಗೆ ಚಂದ್ರ ಬಂದ ನೋಡು....ದೀಪ ಹಚ್ಚಿದಂತೆ ಜೋಡು...ಯಾರ ಮನೆಯು ಅಲ್ಲಿ ಇಹುದೋ ಯಾರು ಬಲ್ಲರು..."
ಗುನುಗುಡುತ್ತ ಕಿಟಕಿಯಾಚೆಗಿನ ಆಗಸ ನೋಡಿದರೆ....
"ಶಶಿಬಿಂದುಧರ...ನಸುನಗೆಯ ಮಧುರ ಮಂದಾರ ಗಂಧ ಚೆಲ್ಲಿ..."
ಹತ್ತು ವರ್ಷಗಳ ಹಿಂದೆ ಅವನೊಡನೆ ಆ ಬೆಟ್ಟದ ಮೇಲಿನ ಬಿಳಲು ಮರದಾಚೆಯ ಕಲ್ಲಿನಆಲಯವೊಂದಕ್ಕೆ ಹೋಗಿ ಬಂದ ನೆನಪು ಪ್ರತಿಹುಣ್ಣಿಮೆಯಲ್ಲೂ ಕಾಡುತ್ತದೆ. ಪ್ರತಿ ಪೌರ್ಣಿಮೆಗೂ ಒಂದೊಂದು ಹೊಸಹಾಡು ಆ ದಿಕ್ಕಿನಿಂದ ಹರಿದುಬರುತ್ತೆದೆ. ಹಾಗಾದರೆ ಅವಳಿನ್ನೂ ಇದ್ದಾಳೆ. ಇರಲೇಬೇಕು, ಹಾಡು ಕೇಳಿಸುತ್ತಿದೆಯಲ್ಲಾ!
ಹುಣ್ಣಿಮೆಯ ಚಂದ್ರನ ಸುತ್ತ ಹಾಡೊಂದು ಹಸನಾಗಿ ಹರಿದಾಡುತ್ತದೆ. ದೂರದ ಗುಡ್ಡದ ಮೇಲಿನ ಆಗಸದಜೋಪಡಿಯೊಂದರಲ್ಲಿ ಲಾಟೀನು ತೂಗಾಡುತ್ತಿದೆ. ಹೌದು..ಅವಳೇ...ಅವಳೇ ಸರಿ...ಹಾಡುತ್ತಿದ್ದಾಳೆ, ಲಾಟಿನಿನ ಬೆಳಕು ಅವಳನ್ನೆಲ್ಲ ಮುತ್ತಿಕೊಂಡಿದೆ . ಹೌದು..ಅವಳೇ..ತುಟಿಬಿರಿಯದೆಯೇನಗುತ್ತಿದ್ದಾಳೆ. ತುಸುಬೆಳಕಿನಲ್ಲಿ ನಸುನಗುವೊಂದು ಹಾಸಿ ಹಾಯ್ದುಹೋಗುತ್ತದೆ.
ಹುಣ್ಣಿಮೆಯೊಂದು ಬಂದು ಮನೆಯಂಗಳದಲ್ಲಿ ಚೆಲ್ಲಪಿಲ್ಲಿಯಾಗಿ ಮನಸುಬಂದಲೆಲ್ಲ ಹುಚ್ಚಾಗಿ ಹರವಿಕೊಂಡಿದೆ. ಇವತ್ತು ಬೆಳದಿಂಗಳು! ಬಂದು ನಮ್ಮನೆಲ್ಲ ಕರೆಯುತ್ತಿದೆ. ಬೆಳದಿಂಗಳಿಗೇಕೋ ಬೇಸರವಂತೆ ಬರೀ ನೆನಪು ಕನಸುಗಳ ನಡುವಿದ್ದು. ಬೆಳದಿಂಗಳು ಕಾಡುತ್ತದೆ "ಶ್ರಾವಣದ ಮಳೆಯಲ್ಲಿ ನೆನೆದಾಡಬೇಕು. ಬಂದು ಬೆಚ್ಚಗೆ ಅಮ್ಮನ ಮಡಿಲಲ್ಲಿ ಮಲಗಿ ಮಗುವಾಗಬೇಕು" ಅಂತ.
ನಸುಗತ್ತಲ ಹಾದಿಯಲ್ಲೇ ಅವಳನ್ನು ಶ್ರಾವಣದ ಮಳೆಯತ್ತ ಕರೆದೊಯ್ಯುತ್ತಿದ್ದೇನೆ. ಅಮ್ಮನ ಮಡಿಲು ಕೈಬೀಸಿ ಕರೆಯುತ್ತಿದೆ. ನಸುಬೆಳಕಿನ ಹಾದಿ. ಕೈಯ್ಯಲ್ಲೊಂದು ಬೆಳಗುವ ಹಣತೆಯಿದೆ. ಜೊತೆ ಅವಳೂ ಬೀರಿದ ಬೆಳಕು. ತಡವುತ್ತ ಎಡವುತ್ತ ಹಾದಿ ಹುಡುಕುತ್ತಿದ್ದೇನೆ. ಅಲ್ಲಿ ತುಸು ಮುಂದೆ ನನ್ನವರೆಂಬ ನೀವೆಲ್ಲ ಇದ್ದೀರಿ .ಪ್ರತಿ ಕೈಯ್ಯೊಳಗೂ ಒಂದೊಂದು ಹಣತೆ, ಇನ್ನಷ್ಟು ಬೆಳಕು. ಧೈರ್ಯ ಉಮ್ಮಳಿಸಿಬಂದು ನಿಮ್ಮೆಡೆಗೆ ಧಾವಿಸುತ್ತೇನೆ.ಮುಂದೆ ಕಾಡು, ಬೆಳದಿಂಗಳು ಹಿಂದೆ ಹಿಂದೆ. ಈಗ ನಿಮ್ಮೆಲ್ಲರೊಟ್ಟಿಗೆ ಶ್ರಾವಣದ ಮಳೆಯಲ್ಲಿ ತೋಯ್ದು ಅಮ್ಮನ ಮಡಿಲಿಗೆ ಧಾವಿಸುತ್ತೇನೆ. ಅಮ್ಮನ ಕೈ ಮಗುವಿನ ಮನವನ್ನು ಮೃದುವಾಗಿ ನೇವರಿಸುತ್ತದೆ. ಬೆಳದಿಂಗಳು ಮುಗ್ಢವಾಗಿ ಅಮ್ಮನನ್ನೇ ನೋಡುತ್ತದೆ. ಮನಸ್ಸು ಹಗುರಾಗಿ ನಿಟ್ಟುಸಿರೊಂದು ಬೆಳದಿಂಗಳೊಳಗೆ ಕರಗುತ್ತದೆ. ಶ್ರಾವಣದ ಮಳೆಯಂಗಳದೆದುರು ನಾವೆಲ್ಲ! ಅಮ್ಮ ಅಲ್ಲಿಯೇ ನಿಂತು ನಮಗಾಗಿ ಕಾಯುತ್ತಿದ್ದಾಳೆ...
ಈಗ ಎಲ್ಲರ ಮೊಗದಲ್ಲೂ ನಗು. ಬೆಳದಿಂಗಳು ಮುಂದಕ್ಕೆ ಧಾವಿಸಿ ನಮ್ಮನೆಲ್ಲ ಕರೆಯುತ್ತದೆ "ಬನ್ನಿ, ಬನ್ನಿ..." ಎನ್ನುತ್ತ ಸುತ್ತಲಿನ ಶ್ರಾವಣದಲ್ಲಿ ಹರವಿಕೊಂಡು ಮಳೆಯಮಡಿಲಲ್ಲಿ ನೆನಪು ಕನಸುಗಳ ನಡುವೆ ಬೆರೆತುಹೋಗುತ್ತದೆ.

June 7, 2008

ಭಾವ ಬನ

*ಆಕಸ್ಮಿಕ*

ನಾ ಹೋದಲ್ಲೆಲ್ಲ
ನೀ ನೆರಳಾಗಿ
ನಿಲ್ಲುವುದು!

ಬಿಸಿಲು ಬೆನ್ನುಬಿಡದೇ
ನನ್ನ ಸುತ್ತ
ನಿನ್ನಾಡಿಸುವುದು!

ತಂಪನ್ನರಸಿ ನೀ
ನನ್ನೆಡೆಗೆ
ವಾಲುವುದು!
________________


*ಆಘಾತ*


ನನ್ನದೇ ನೆನಪಲ್ಲಿ
ನೀ ನನ್ನ ಮರೆತಿದ್ದು!
ನಿನ್ನ ಮರೆತಾದ
ಮೇಲೆ
ನೀನೆದುರು ಕಂಡಿದ್ದು!
_______________


*ಅಸೂಯೆ*


ಅಂದು ನೀ ತೋರಿಸಿದ
ಅಸ್ತವಾಗುತಲಿದ್ದ
ಅದೇ ಸೂರ್ಯ
ಉದಯವಾಗುವುದ ಕಂಡು
ನಾನಿಂದು ನಕ್ಕಾಗ!
_______________


*ಏಕಾಂತ*

ಗುಂಪೊಳಗೆ ನಾ
ಹಾಯಾಗಿರುವ
ನೀ ಕಾಡದ ಹೊತ್ತು
_______________

March 20, 2008

ಮರಳುವ ಮೊದಲು

ನಾ ಕಲಿತ ವಿಶ್ವವಿದ್ಯಾಲಯದ ನೆನಪು ಇಂದು ಮರುಕಳಿಸುತ್ತಿದೆ. ಸುಂದರ ಮುಂಜಾವು. ತಿಳಿಗುಲಾಬಿ ಬಣ್ಣದ ಅಂಚಿಗೆ ಹಾಲಿನ ಬಣ್ಣದ ಮೈಯ್ಯುಳ್ಳ ಸೀರೆಯೊಂದನ್ನು ಕಷ್ಟಪಟ್ಟು ಸುತ್ತಿಕೊಂಡು ಹೊರಟಾಗ ಯಾವುದೋ ಕಂಪನ ಮೈಯನ್ನ ಆವರಿಸಿತ್ತು. ತಿರು ತಿರುಗಿ ನಕ್ಕ ಹಾಸ್ಟೆಲ್ ರೂಂ ಮೇಟ್ ಹೇಳಿದ್ದಳು "ಸಿಂಪಲ್ಲಾಗೇ ಸೆಳೆದುಬಿಡ್ತೀಯ" ಅಂತ ನಕ್ಕಿದ್ದಳು. ಅವಳನ್ನೊಮ್ಮೆ ಗುರಾಯಿಸಿ ‘ತಮಾಷೆ ಸಾಕು’ ಅಂತ ನಸುನಕ್ಕು ಸೆಮಿನಾರ್ ಬಗೆಗಿನ ನನ್ನ ಟೆನ್ಷನ್ ಅವಳೆದುರು ಹೇಳಿಕೊಂಡು ಸುಮ್ಮನೆ ನಡೆದಿದ್ದೆ.
ವಿಶ್ವವಿದ್ಯಾಲಯದಲ್ಲಿನ ಗೆಸ್ಟ್ ಹೌಸ್ ಪಕ್ಕದ ಕಾನ್ಫರೆನ್ಸ್ ಹಾಲ್ ಭಾರತದ ಸುಮಾರು ೬೦ ವಿಶ್ವವಿದ್ಯಾಲಯಗಳಿಂದ ನೆರೆದ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥರು, ವಿಧ್ಯಾರ್ಥಿಗಳಿಂದ ತುಂಬಿಕೊಂಡು ನಳನಳಿಸುತ್ತಿತ್ತು.
ನಮ್ಮ ವಿಶ್ವವಿಧ್ಯಾಲಯದಿಂದ ‘ಜ್ಯೂನಿಯರ್ ಜಿಯಾಗ್ರಫರ್’ ಅಂತ ಆಯ್ಕೆಯಾಗಿದ್ದ ನಾನು ಕಾನ್ಫರೆನ್ಸಿನ ಮೊದಲ ದಿನವಾದ ಅಂದು ಸೆಮಿನಾರ್ ಕೊಡುವುದಿತ್ತು. ಅದೆಷ್ಟೋ ದಿನಗಳಿಂದ ತಯಾರಿ ನಡೆಸಿಕೊಂಡಿದ್ದ ಸೆಮಿನಾರ್ ಅರ್ಧಗಂಟೆಯಲ್ಲಿ ಮುಗಿದೇ ಹೋಗಿದ್ದು ಮನ್ಸೆಲ್ಲ ಖಾಲಿ ಖಾಲಿ ಅನಿಸಿತ್ತಾದರೂ ‘ಹೇಗಿತ್ತೋ ಏನೋ’ ಎಂದು ಭಯವೂ ಸುತ್ತಿಕೊಳ್ಳುತ್ತಲಿತ್ತು. ಸೆಮಿನಾರ್ಗೆ ನನ್ನನ್ನು ಸಿದ್ಧಗೊಳಿಸಿದ ನನ್ನ ಪ್ರೀತಿಯ ಗುರುವರ್ಯರ ಕಣ್ಣಿನ ಪ್ರೀತಿಯನ್ನ ಅರಸಿ ಅವರು ಸ್ಟೇಜಿನ ಮೇಲಿದ್ದುದರಿಂದ ದೂರದಿಂದಲೆ ಮುಗುಳ್ನಗೆಯೊಂದರಿಂದ ವಂದಿಸಿ ಚಹದ ಕಪ್ ಒಂದನ್ನು ಕೈಯಲ್ಲಿ ಹಿಡಿದು ಕಾನ್ಫರೆನ್ಸ್ ಹಾಲ್ ಇಂದ ಹೊರಗೆ ಬಂದು ಮೆಟ್ಟಿಲೊಂದರ ಮೇಲೆ ಕುಳಿತೆ. ಅರ್ಧಗಂಟೆಕಾಲ ಕಟ್ಟಿಹೋದಂತಿದ್ದ ಉಸಿರಿಗೆ ಸ್ವಾತಂತ್ರ್ಯ ಸಿಕ್ಕಿತ್ತು .
ಆಗಲೇ ಅವನು ಬಂದು ಎಷ್ಟೋ ದಿನದ ಪರಿಚಯವೆಂಬಂತೆ ಪಕ್ಕಕ್ಕೆ ಕುಳಿತಿದ್ದ. "ಸೆಮಿನಾರ್ ಚೆನ್ನಾಗಿತ್ತು" ಅಂದ. ಉಸಿರು ತಾಕುವಷ್ಟು ಪಕ್ಕ ಬಂದು ಕುಳಿತಿದ್ದವನಿಗೆ ಉತ್ತರಿಸಲು ಸ್ವಲ್ಪ ಮುಜುಗರವಾಯ್ತಾದರೂ ಮುಗುಳ್ನಕ್ಕೆ. ಕೊಂಚ ಭಯ ಕೂಡ. ಆತ್ಮೀಯತೆ ಕೂಡ ಇಣುಕಲಿಲ್ಲ ಅವನು ನನಗೆ ತೋರಿಸಿದಷ್ಟು .ವಿಷಯವೆಂದರೆ ಅವನು ಭಾರತೀಯನಾಗಿರಲಿಲ್ಲ,

ತಾನು ಭೂಗೋಳಶಾಸ್ತ್ರ ವಿಷಯದ ರಿಸರ್ಚ್ ವಿಧ್ಯಾರ್ಥಿಯಾಗಿದ್ದು ನಾನಂದು ಸೆಮಿನಾರ್ ಕೊಟ್ಟ ವಿಷಯವೇ ಅವನ ರಿಸರ್ಚಿನ ವಸ್ತುವೆಂದೂ ತಿಳಿಸಿದ. ಆ ವಿಷಯದ ಅಧ್ಯಯನದ ಸಲುವಾಗಿ ಕಿರು ಅವಧಿಗಾಗಿ ತಾನು ಭಾರತಕ್ಕೆ ಬಂದಿರುವುದಾಗಿಯೂ ಹೇಳಿದನಲ್ಲದೆ ಅದೇ ವಿಷಯದ ಕುರಿತಾಗಿ ಇನ್ನಷ್ಟು ಮಾಹಿತಿ ನೀಡಿದ ಅವನ ಮಾತುಗಳಿಗೆ ಸ್ಪಂಧಿಸುವಷ್ಟು ಜ್ಞಾನ ನನ್ನದಾಗಿರಲಿಲ್ಲ. ಅಲ್ಲದೆ ಐದು ನಿಮಿಷಗಳ ಕಾಲ ಉಸಿರಾಡಿಕೊಳ್ಳಲು ಹೊರಬಂದವಳನ್ನು ಅವನು ಹದಿನೈದು ನಿಮಿಷಗಳ ಕಾಲ ಹೊರಗೆ ನಿಲ್ಲಿಸಿಬಿಟ್ಟಿದ್ದ. ಒಳಗೊಳಗೇ ಚಡಪಡಿಸುತ್ತಿದ್ದವಳನ್ನು ಅರ್ಥೈಸಿಕೊಂಡವನಂತೆ ಮುಗುಳ್ನಕ್ಕು ‘ಕಾರ್ಯಕ್ರಮದತ್ತ ತೆರಳೋಣ ಬಾ’ ಎಂದವನೇ ಕಾನ್ಫರೆನ್ಸ್ ಹಾಲ್ ಒಳಗೆ ನುಸುಳಿ ಮಾಯವಾಗಿದ್ದ.
ನಂಬಿದರೆ ನಂಬಿ, ಬಿಟ್ಟರೆ ಬಿಡಿ ಅಂತೂ ಹತ್ತು ದಿನಗಳ ವರ್ಕ್ ಶಾಪ್ ಮುಗಿಯುವುದರೊಳಗೆ ಹಿಂದೆಯೇ ಸುಳಿದಾಡುತ್ತ ಮುಗುಳ್ನಗುತ್ತಿದ್ದವನು ತನ್ನ ಮನದಿಚ್ಛೆಯನ್ನೆಲ್ಲ ಮುಂದಿಟ್ಟು ಕ್ರಮೇಣ ಮನವನಾವರಿಸಿಕೊಂಡುಬಿಟ್ಟಿದ್ದ. ಆರು ತಿಂಗಳು ಕಾಲ ನಮ್ಮ ಡಿಪಾರ್ಟ್ ಮೆಂಟಿನಲ್ಲಿಯೇ ರಿಸರ್ಚ್ ಸಲುವಾಗಿ ನಿಂತಿದ್ದ. ನನ್ನಿಷ್ಟದ ವಿಷಯದ ಬಗ್ಗೆ ಅವನಿಗಿರುವ ಅತೀವ ಜ್ಞಾನ ಹಾಗೂ ಆಸಕ್ತಿ ನನ್ನನ್ನು ಅವನೊಂದಿಗೆ ಕಟ್ಟಿಹಾಕಿಬಿಟ್ಟಿತ್ತು. ನನ್ನ ಜಾತಿಯ ಯಾವ ಹುಡುಗನಿಗೆ ಇವನು ಕಮ್ಮಿ? ಅಂತನಿಸಿಬಿಟ್ಟಿದ್ದ. ಎಲ್ಲಕ್ಕೂ ಮಿಗಿಲಾಗಿ ಅವನ ಸರಳತೆ, ಒಳ್ಳೆಯತನ ನನ್ನನ್ನು ಪೂರ್ತಿ ನುಂಗಿಕೊಂಡುಬಿಟ್ಟಿತ್ತು.
ಮನೆಯಲ್ಲಿ ವಿಷಯವಿಟ್ಟೆ ಸಂಪೂರ್ಣ ನಿರ್ಧಾರ ತೆಗೆದುಕೊಳ್ಳುವುದರೊಳಗೆ. ಮನೆಯಲ್ಲಿ ಯಾರೂ ಒಪ್ಪಲಿಲ್ಲ ಮಾಂಸ ತಿನ್ನುವ ಅದರಲ್ಲೂ ಪರದೇಸಿಗನೊಬ್ಬನನ್ನು ಮದುವೆಯಾಗಲು.
ಅವನು ತನ್ನ ದೇಶಕ್ಕೆ ಹೊರಟು ನಿಂತಾಗ ನಾನವನೊಂದಿಗೆ ಹೊರಟು ನಿಂತದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಅವನೂ ಸಹ ನನ್ನನ್ನು ಬಿಟ್ಟು ಹೋಗಲಾರೆನೆಂದು ಹಠ ತೊಟ್ಟಿದ್ದ. ಏನೇನೋ ಕೊಸರಾಡಿ ಪಾಸ್ಪೋರ್ಟ್ ಅಲ್ಲಿ ಅವನ ಬಾಳಸಂಗಾತಿಯೆನಿಸಿಕೊಂಡ ನಾನು ವಿಸಾ ಪಡೆದವಳು, ನನ್ನವರು ಎಂಬ ಎಲ್ಲರನ್ನು ತೊರೆದು ಅವನೊಂದಿಗೆ ಹಾರಿ ಅವನ ನೆಲದಲ್ಲಿ ಬಂದಿಳಿದಿದ್ದೆ.

ಈ ಮಾತಿಗೆ ಎರಡು ವರ್ಷಗಳೇ ಸಂದುಹೋದವು. ಇಂದು ಬೆಳಿಗ್ಗೆ ಅವನಿಂದ ಡಿವೋರ್ಸ್ ಸಿಕ್ಕಿತು. ಕಾರಣ ನೀವಂದುಕೊಂಡಂತೆ ಅವನಿಗೆ ಇನ್ನೊಬ್ಬಳು ಗರ್ಲ್ ಫ್ರೆಂಡ್ ಇಲ್ಲ. ಭಾರತೀಯಳಾಗಿ ಹೇಳಬೇಕೆಂದರೆ ಅವನು "ಶ್ರೀರಾಮಚಂದ್ರ."

ಮೊದ ಮೊದಲು ಪ್ರೀತಿಯೆದುರು ಕೊರತೆಗಳ್ಯಾವುವೂ ಕಾಣಿಸಲಿಲ್ಲ. ಜೀವನ ನಾನಂದುಕೊಂಡಷ್ಟು ಕಷ್ಟವಿಲ್ಲವೆನಿಸಿದ್ದಂತೂ ನಿಜ. ಆದರೆ ನಿಜವಾದ ಕೊರತೆಯೊಂದಿತ್ತು ನನಗೆ ನಾನೇ ತಂದಿತ್ತುಕೊಂಡಿದ್ದು, ನನ್ನ ಪ್ರೀತಿಯ ಕುಟುಂಬವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೆ, ಅವರೊಂದಿಗೆ ಫೋನಾಯಿಸಿ ಮಾತನಾಡುವ ನೈತಿಕ ಹಕ್ಕನ್ನೂ ಕಳೆದುಕೊಂಡಿದ್ದು ದಿನ ಕಳೆದ ಹಾಗೆ ಬೃಹದ್ ಕೊರತೆಯಾಗಿ ನನ್ನನ್ನ ನರಳಿಸತೊಡಗಿದ್ದು, ಎಷ್ಟೆಂದರೆ ಹುಚ್ಚಿಯಾಗಿಬಿಡುವಷ್ಟು.

ಕಾರಣಗಳು ವೈಯಕ್ತಿಕ. ಅವು ನಮ್ಮಿಬ್ಬರ ವೈಯಕ್ತಿಕ ಅಂತಲೂ ಅನಿಸೋಲ್ಲ. ನನ್ನೊಬ್ಬಳ ವೈಯಕ್ತಿಕ ಅನಿಸುತ್ತವೆ. ಅವನು ಇನ್ನೂ ನನ್ನನ್ನು ಆರಾಧಿಸುತ್ತಾನೆ ಅಂತ ಗೊತ್ತಿದೆ. ನನ್ನಲೂ ಅಷ್ಟೆ, ಗೋಪುರದಷ್ಟು ಪ್ರೀತಿಯಿದೆ ಅವನಿಗಾಗಿ. ಕಳಚಿರದ ಕೊಂಡಿಯನ್ನು ಕಡಿದುಕೊಂಡು ಬರಬೇಕಿದೆ.
ಅಪ್ಪ-ಅಮ್ಮನ ನೆನಪು ಬೆಳಕಿನ ಕಿರಣಗಳ ಜೊತೆ ಹುಟ್ಟಿಕೊಂಡರೆ ಚಂದ್ರ ಮಾಯುವತನಕವೂ ಮಾಗುವುದಿಲ್ಲ. ಸಂಜೆ ದೇವರಿಗೆ ನಾನಂಟಿಸಿದ ದೀಪ ಅವನು ಬಂದ ತಕ್ಷಣ ಅವನ ಕೈಲಿರುವ ಫೈಲು ಅಪ್ಪಳಿಸುವ ರಭಸಕ್ಕೆ ಮುರುಟಿ ಆರಿ ಹೋದ ಕಮಟು ನನ್ನೊಳಗಿಳಿದು ಮುಸು ಮುಸು ಅಳುತ್ತದೆ. ವಾರಾಂತ್ಯಗಳಲ್ಲಿ ಅವನ ತಂದೆ-ತಾಯಿಗಳ ಜೊತೆ ಅವರ ಮನೆಯಲ್ಲಿ ಕಳೆಯುವುದು ನರಕ ಅಂತ ನಾನೇನೂ ಹೇಳುತ್ತಿಲ್ಲ. ಮೀಟಿನ ಕಮಟು ನನ್ನ ತರಕಾರಿಗಳ ರುಚಿಯನ್ನೂ ನುಂಗಿ ವಾರಾಂತ್ಯ ಪೂರ್ತಿ ಉಪವಾಸ ನರಳುತ್ತೇನೆ. ಸದಾ ಊಟದ ತಟ್ಟೆಯೊಂದಿಗೆ ಚಾಕು-ಫೋರ್ಕುಗಳನ್ನು ನೋಡುವಾಗ ಅಜ್ಜನ ಊಟದ ಬಟ್ಟಲಿನ ಎಡಗಡೆಯಲ್ಲಿರುತ್ತಿದ್ದ ತೀರ್ಥದ ತಟ್ಟೆಚಮಚಗಳು ಕಣ್ಣೆದುರು ಬಂದು ಕಂಬನಿ ಹನಿಸುತ್ತವೆ.
`ಪ್ರೀತಿ ಗೆಲ್ಲುತ್ತದೆ' ಎಂಬ ಮಾತನ್ನು ನಂಬಿ ಎಲ್ಲರನ್ನು ತೊರೆದು ಬಂದಿದ್ದೆ. ಈಗನ್ನಿಸುತ್ತದೆ ಪ್ರೀತಿಯನ್ನು ಗೆದ್ದರೆ ಎಲ್ಲವನ್ನೂ ಸೋಲಬೇಕಾಗುತ್ತದೆ ಅಂತ.
ಅವನು ನನ್ನೊಡನೆ ಬರಲಾರ, ಅವನಿದ್ದರೆ ನನ್ನವರು ನನ್ನನ್ನು ಸುತಾರಾಂ ಸೇರಿಸೋಲ್ಲ. ಇದೇ ಕಾರಣಗಳಿಂದ ಹಿಂದೊಮ್ಮೆ ಹುಟ್ಟಿದ ಮಾತು ಇಂದು ಡಿವೋರ್ಸ್ ಅಲ್ಲಿ ಅಂತ್ಯಗೊಂಡಿತು. ಈಗೊಂತರ ಮನುಷ್ಯ ಮುಟ್ಟಿದ ಗುಬ್ಬಿಯ ಹಾಗಾಗಿ ಬಿಟ್ಟಿದ್ದೇನಾದರೂ ಮರಳಿ ಬಂದು ನನ್ನವರನ್ನೆಲ್ಲ ಕೂಡಿಕೊಳ್ಳುವ ತವಕ ಹೆಚ್ಚುತ್ತಿದೆ. ನನ್ನವರೆಲ್ಲ ನನ್ನ ಸೇರಿಸಿಕೊಂಡಾರು ಎಂಬೊಂದು ಚಿಕ್ಕ ಆಸೆಯಿದೆ. ಅವರನ್ನೆಲ್ಲ ಬರಸೆಳೆದು ಅಪ್ಪಿಕೊಂಡು ಕ್ಷಮೆಯಾಚಿಸಿ ಬಿಕ್ಕುವ ಕನಸೊಂದಿದೆ.
ನನ್ನ ನೆಲದಲ್ಲಿಯೇ ಹೋಗಿಳಿದು ಆ ಮಣ್ಣಿನಲ್ಲಿಯೇ ಮಲ್ಲಿಗೆ ಬಳ್ಳಿಯೊಂದನ್ನು ನೆಟ್ಟು ಹೂ ಬಿಡಿಸಿ ನನ್ನವರನ್ನೆಲ್ಲ ಕರೆದು ತೋರಿಸಿ ನಗುವ ಹಂಬಲ ವಿಪರೀತ ಕಾಡುತ್ತಿದೆ. ಎಷ್ಟೆಂದರೆ ನನ್ನ ಬದುಕಾದ ನನ್ನ ಡ್ಯಾನಿಯೊ ಎಂಬ ಮರುಳು ಹುಡುಗನನ್ನು ತೊರೆದು ಬರುವಷ್ಟು.

ಡಿವೋರ್ಸ್ ಸಿಕ್ಕ ಮೆಲೂ ಅವನು ನನ್ನನ್ನು ಕಾಡುವಂತೆ ನಿಟ್ಟುಸಿರುಬಿಡುತ್ತಿದ್ದಾನೆ. ಕೈಯೊಡ್ಡಿ ಬೇಡಿಕೊಳ್ಳುತ್ತಿದ್ದಾನೆ. ಕಣ್ನೋಟದಲ್ಲೇ ‘ಬಿಟ್ಟು ಹೋಗ್ತೀಯಾ?’ ಅಂತ ಗೋಗರೆಯುತ್ತಾನೆ.ನನ್ನನ್ನು ಅಲುಗಿಸಿ ಅಲುಗಿಸಿ ಕೇಳುತ್ತಾನೆ ‘ಬಿಟ್ಟು ಹೋಗುವಂಥ ತಪ್ಪು ನಾನೇನು ಮಾಡಿದ್ದೇನೆ ಹೇಳು, ತಿದ್ದಿಕೊಳ್ಳುತ್ತೇನೆ’ ಅಂತ. ಬಾಯಿಬಿಟ್ಟು ಹೇಗೆ ಹೇಳಲಿ ನಿನ್ನ ಬದುಕಿನ ರೀತಿ-ನೀತಿಗಳು ನಂಗಿಷ್ಟವಾಗ್ತಿಲ್ಲ’ ಅಂತ! ‘ಮಾಂಸ ತಿನ್ನೋದು ಡಿವೋರ್ಸ್ ಮಾಡುವಂಥ ತಪ್ಪಾ’ ಅಂತ ನನ್ನನ್ನ ಕೆಳಗಿಟ್ಟು ನೋಡಿದರೆ! ‘ನಂಗೆ ನನ್ನವರೆಲ್ಲರ ಜೊತೆಯಲ್ಲಿರಬೇಕೆನ್ನಿಸುತ್ತೆ, ಬರ್ತೀಯಾ?’ ಅಂತ ಮಾತ್ರ ಕೇಳಿ ಸುಮ್ಮನಾಗುತ್ತೇನೆ. ಕುಳಿತಲ್ಲೇ ಕೂರಲಾರದೇ ಚಡಪಡಿಸಿ ಕೈಯಲ್ಲಿನ ಫೈಲನ್ನೇ ಮುಖಕ್ಕೆ ಮುಚ್ಚಿಕೊಳ್ಳುತ್ತಾನೆ, ಹಾಗಾಗಿ ಅವನ ಕಣ್ಣೀರು ನನಗೆ ಕಾಣಿಸುತ್ತಿಲ್ಲ.
ಸಮಂಜಸ ಕಾರಣವೇ ಇಲ್ಲದಾಗ್ಯೂ ಸುಳ್ಳು ಕಾರಣ ನೀಡಿ ಡಿವೋರ್ಸ್ ಪಡೆವಾಗ ತಪ್ಪು ತನ್ನದಿದೆ ಅಂತ ನನಗಾಗಿ ಒಪ್ಪಿಕೊಂಡವನ ಮುಖ ಎದುರು ಬಂದು ನನ್ನ ಕೆನ್ನೆಗೇ ನಾನು ನಾಲ್ಕು ರಪ ರಪನೆ ಬಾರಿಸಿಕೊಳ್ಳುವಂಥ ಗಿಲ್ಟ್ ಕಾಡುತ್ತದೆ. ಅಲ್ಲೂ ನನ್ನ ಪರವಾಗಿದ್ದು ನನ್ನನ್ನು ತನ್ನೊಳಗೆ ಉಳಿಸಿಕೊಂಡವನು ಗ್ರೇಟ್ ಅನಿಸಿ ಅವನೊಳಗೆ ಹುದುಗಿ ಕಳೆದುಹೋಗೋಣವೆನಿಸಿದರೂ ನನ್ನೂರು ನನ್ನವರೆಲ್ಲ ಎದುರಿಗೆ ಬಂದು ಕೈಗಳನ್ನು ಚಾಚಿ ನನ್ನನ್ನು ತಮ್ಮೆಡೆಗೆ ಬಾಚಿಕೊಂಡಂತೆ ಭಾಸವಾಗುತ್ತದೆ.

ತೆರಳಲಿದ್ದೇನೆ ನನ್ನ ನಾಡಿಗೆ.ಇದೇ ತಿಂಗಳು ೨೮ನೆಯ ತಾರೀಖಿನಂದು ನಿತ್ಯವೂ ನನ್ನ ದೇಶಕ್ಕೆ ಮರಳುವ ವಿಮಾನವೊಂದು ನನಗಾಗಿ ಕಾಯುತ್ತಿರುತ್ತದೆ ಎನಿಸುತ್ತಿದೆ.

ಸಮಯಗಳ ಅಂತರದಲ್ಲಿ ಕಳೆದುಕೊಂಡ ನನ್ನವರೆಲ್ಲರೂ ನನಗಾಗಿ ಕಾಯುತ್ತಿದ್ದಾರೆ. ಎರಡು ವರ್ಷಗಳ ಮೇಲೆ ಅಪ್ಪ-ಅಮ್ಮರೊಂದಿಗೆ ನಿನ್ನೆ ಮಾತಾಡಿದೆ.
ಅಮ್ಮ ಮಾಡುವ ತಂಬುಳಿ, ಅಪ್ಪನೊಂದಿಗೆ ಹಸಿರು ಹಾಸುಗಳಲ್ಲಿ ಸುತ್ತಾಟಗಳ ಕನವರಿಕೆಯಲ್ಲಿ ನನ್ನ ಹುಡುಗನ ಮಾತುಗಳನ್ನು ಮುಳುಗಿಸಿ ಕೇಳಿಯೂ ಕೇಳದವಳಂತೆ ನಾ ಬೆಳೆದ ಮಣ್ಣಿನ ವಾಸನೆಯನ್ನರಸಿ ಹೊರಟು ಬಿಡುತ್ತಿದ್ದೇನೆ. ಕೊನೆಯದಾಗಿ ಅವನಿಗೂ ಹೇಳಿದ್ದೇನೆ.
"ನನ್ನೊಡನೆಯೇ ಬದುಕುವಾಸೆಯಿದ್ದರೆ ನನ್ನ ನೆಲಕ್ಕೇ ಬಾ, ನಾ ಮಲ್ಲಿಗೆ ಬಳ್ಳಿ ನೆಡಲಿದ್ದೇನೆ ಅಲ್ಲಿ, ನೀನು ನೀರೆರೆಯಬಹುದು. ನೆಟ್ಟು ಹೂ ಬಿಟ್ಟಿದ್ದನ್ನು ನೋಡಿ ಇಬ್ಬರೂ ನಗಬಹುದು. ನಾವು ನಕ್ಕಿದ್ದನ್ನು ನೋಡುತ್ತ ನೋಡುತ್ತ ಅಪ್ಪ-ಅಮ್ಮ ಕ್ರಮೇಣ ನಿನ್ನ ಒಪ್ಪಿಕೊಳ್ಳಬಹುದು" ಅಂತ. ಅಷ್ಟೇ ಅಲ್ಲ ಹೀಗೂ ಹೇಳಿದ್ದೇನೆ " ನಂಗೆ ನೀನಿಲ್ಲದೆ ಬೇರೆ ಬದುಕಿಲ್ಲ ಕಣೋ...." ಅಂತ.
‘ಭೂಮಿ ಗುಂಡಗಿದೆ, ಹೇಗೆ ಬಂದರೂ ಸಿಕ್ಕೇ ಸಿಗುತ್ತೇವೆ ಇನ್ನೊಮ್ಮೆ’ ಅಂತ ನಾ ಹೇಳಿದರೆ "Nope, Earth is Geoid " ಅಂತ ಹೇಳಿಕೊಂಡು ಯಾವತ್ತಿನಂತೆ ನಗಲಾರದ ಸ್ಥಿತಿ ಇಬ್ಬರದೂ.

ನಾ ನೆಟ್ಟ ಬಳ್ಳಿಯ ಮಲ್ಲಿಗೆ ಕಂಪು ಅವನನ್ನು ಆವರಿಸಿ ನನ್ನೆಡೆಗೆ ಎಳೆದುಕೊಂಡು ಬರಬೇಕು ಅಂಥ ಮಲ್ಲಿಗೆಬಳ್ಳಿಯೊಂದನ್ನು ನಮ್ಮನೆಯ ಅಂಗಳದಲ್ಲಿ ಬೆಳೆಸುತ್ತೇನೆ, ಆಗವನು ನನ್ನನ್ನು ಹುಡುಕಿಕೊಂಡು ನಮ್ಮನೆಯ ಅಂಗಳದಲ್ಲಿ ನಿಲ್ಲುತ್ತಾನಲ್ಲವಾ?

ಪ್ಯಾಕಿಂಗ್ ಮಾಡುತ್ತ ಪ್ರತಿ ಬಟ್ಟೆಯ ಮಡಿಕೆಯೊಳಗೂ ಅವನಿಗಾಗಿ ಒಂದೊಂದು ಕಂಬನಿಯನ್ನು ಮುತ್ತಂತೆ ಇಟ್ಟು ಬಟ್ಟೆ ಬರೆಗಳನ್ನ ಪ್ಯಾಕ್ ಮಾಡುತ್ತಲಿದ್ದೇನೆ. ಅವನಿಷ್ಟದ ಹಾಲಿನ ಬಣ್ಣದ ಗುಲಾಬಿ ಅಂಚಿನ ಸೀರೆಯೊಂದನ್ನು ಅವನಿಗಾಗಿ ಬಿಟ್ಟು ಹೋಗುತ್ತಿದ್ದೇನೆ. ಅವ ಕೊಡಿಸಿದ ತಂಪು ಬಣ್ಣದ ಟೀ ಶರ್ಟನ್ನೂ ಹಾಗೂ ಅವನದೊಂದು ನೀಲಿಯ ಶರ್ಟನ್ನು ಮರೆಯದೇ ಬ್ಯಾಗಲ್ಲಿ ಸೇರಿಸಿಕೊಂಡಿದ್ದೇನೆ.
ತುಂಬಿದ ಬ್ಯಾಗುಗಳೊಂದಿಗೆ ಖಾಲಿ ಖಾಲಿ ಭಾವಗಳನ್ನು ಹೊತ್ತು ನಡೆಯುತ್ತಿರುವ ನನ್ನನ್ನವನು ಹಿಂಬಾಲಿಸಿ ಬರಲೆಂದು ಪ್ರಾರ್ಥಿಸಿಕೊಳ್ಳುತ್ತಾ...ನನ್ನ ನೆಲದೆಡೆಗೆ ಮುಖ ಮಾಡುತ್ತಿದ್ದೇನೆ.[ ಹೋಗಿಬರುತ್ತೇನೆ. ತಿಂಗಳುಗಳ ಕಾಲ ನನ್ನ ಬ್ಲಾಗ್ ಮರಿಯನ್ನು ಅನಾಥವಾಗಿಸದೇ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ನಿಮ್ಮೆಲ್ಲರ ಮೇಲಿರಿಸಿ ಮರಳುತ್ತಿದ್ದೇನೆ.]

March 4, 2008

ಅಪ್ಪ ಹುಟ್ಟಿದ ದಿನಕೆ

"ಕರಾಗ್ರೇ ವಸತೇಲಕ್ಷ್ಮೀ"ಗುಣುಗುಡುತ
ಅರಳಿದ ಬೆರಳ ನಡು ಹಸ್ತ ದಿಟ್ಟಿಸಿದೆ
ಹಸ್ತದ ಚಿತ್ರದಲಿ ಅಮ್ಮಗೇನೋ ಸಡಗರವು
ಇಲ್ಲವಂತವಳಿಗೆ ಪುರುಸೊತ್ತು
ಆಡಲು ನಾಲ್ಕು ಹೆಚ್ಚುಳಿದ ಮಾತು
ಕಾರಣವೇನಿಹುದು ಕಣ್ಣರಳಿ ಕೇಳಿದೆ
ಅಮ್ಮ ನುಡಿಯುತ್ತಾಳೆ"ಏನಿಲ್ಲ ಬಿಡು.."
ಮರುಪ್ರಶ್ನೆಯಡಿ ಮರೆಸಲೆತ್ನಿಸುತ್ತಾಳೆ
"ಹೌದೇನೆ ಕವನವಿಹುದಂತೆ ‘ಕನ್ನಡಪ್ರಭ’ದಲ್ಲಿ!
ಅಪ್ಪ ಓದಿಹರಂತೆ ನಾನೂ ಓದಿಬರಲೇನೇ?"
ಪುನಃ ಪುಸಲಾಯಿಸೆ ಪುನರಾವರಿಪ ಪ್ರಶ್ನೆ
ಆದರಮ್ಮನದು ಅದೇ ಉತ್ತರ
"ಏನಿಲ್ಲ ಬಿಡು ಏನಿಲ್ಲ ಬಿಡು"

ದೇವನೆದುರು ನಾಲ್ಕೆಳೆ ಹೆಚ್ಚೇ ರಂಗೋಲೆ
ತುಪ್ಪದ ದೀಪಗಳೇಕಿಂದು ಇಷ್ಟು ನಗಬೇಕು!
ಗ್ಯಾಸೊಲೆಯೂ ಕೆಂಪಗೆ ನಲಿಯುತ್ತ ಬ್ಯುಸಿ
ಅಡುಗೆ ಮನೆ ಹರಡಿ ಸಿಹಿಸಿಹಿ ಪರಿಮಳವು
ಸಾರುತಿವೆಯಲ್ಲ ಸರ್ವ ಸಂಭ್ರಮವನ್ನು
ಇನಿತು ಸುಳಿವ ನೀಡುತ್ತಿಲ್ಲಯಾರೂ !
ನನಗಿರದ ಸಂಭ್ರಮವು ಇವಕೆ ಏನು?


ಅಮ್ಮನೆದುರಿಟ್ಟೆ ಹುಸಿಮುನಿಸನೊಂದಿಷ್ಟು
ಅಮ್ಮ ನಕ್ಕಳು ಒಗಟ ಬಿಡಿಸಿಟ್ಟು
"ಅವನೊಡನೆ ಅಲ್ಲವೇ ಆಡಿ ಬೆಳೆದದ್ದು!
ಸೋದರ ಸೊಸೆ ನಾ ಸೊಸೆಯಾಗಿ ಬಂದದ್ದು
ಹಾಗೇ ಕಣೇ ಅಂದವಗೆ ನಾ ಮಡದಿಯಾಗಿದ್ದು
ಇಂದು ಶಿವರಾತ್ರಿ ಅವರು ಹುಟ್ಟಿದ ದಿನವು
ಅದಕೇ ನೋಡು ನನಗಿಷ್ಟು ಸಂಭ್ರಮವು!
ಇಟ್ಟೆ ದೇವಗೆ ಎರಡೆಳೆ ಜಾಸ್ತಿ ರಂಗೋಲೆ
ದೀಪಕ್ಕಿಷ್ಟೇ ಇಷ್ಟು ಜಾಸ್ತಿ ತುಪ್ಪ
ನಿನಗೊಂದಿಷ್ಟು ಬೇಡವೇ ಸಿಹಿಪಾಕ ಕೂಡ
ಅವಗಾಗಿ ನಾನಿಷ್ಟೂ ನಗಬಾರದೇನೆ?
ಇರು ಇಷ್ಟು ಕೆಲಸ ಜಾಸ್ತಿಯಿಹುದಿಂದು
ಕೋರಿಬರುವೆನು ಬೇಗ ಶುಭಾಶಯವ "ನೆಂದು
ಭರದಿ ನಡೆದಳು ಅಮ್ಮ ಅಪ್ಪನನ್ನರಸಿ

ಅಮ್ಮ ನುಡಿಯುತಲಿರೆ ಅಲವತ್ತುಕೊಂಡೆ
ಮರೆಯಿಸುವ ಮರೆವಿಗೆ ಮರುಗಿಕೊಂಡೆ
"ಅಯ್ಯೋ ಅಪ್ಪಾ... ಕ್ಷಮಿಸಿಬಿಡಿ
ಡೇಟುಗಳ ಕಾಲದಲಿ ತಿಥಿ ಲೆಕ್ಕದರಿವಿಲ್ಲ
ತಿಥಿಲೆಕ್ಕವನು ನೀವು ಕಲಿಸಿಕೊಡಲೇ ಇಲ್ಲ
ಇಗೊಳ್ಳಿ ಹುಟ್ಟುಹಬ್ಬಕೆ ಶುಭಾಶಯ
ಬೊಗಸೆಯಿಂದ ವಾಪಸ್ಸು ಮುಷ್ಠಿ ಪ್ರೀತಿ
ನೀವಿತ್ತಿದ್ದರಲ್ಲಿಯೇ ನಿಮಗಿಷ್ಟು
ಇಗೊಳ್ಳಿ ಆ ಕೆನ್ನೆಗೂ ಮುತ್ತು
ಕೊಡುವಿರಲ್ಲ ಅದರೊಳಗೆ ಒಂದು ವಾಪಸ್ಸು ?"

( ಬದುಕಿನ ಹೋರಾಟದ 53ನೇ ವರ್ಷಕ್ಕೆ ಕಾಲಿಟ್ಟ ನನ್ನ ತಂದೆಯವರ ಹುಟ್ಟುಹಬ್ಬದ ಶುಭಾಶಯವನ್ನು ಈ ವರ್ಷ ಅದೆಷ್ಟೋ ಮೈಲುಗಳಾಚೆಯಿಂದ ಹೀಗೆ ಕೋರುತ್ತಿದ್ದೇನೆ)

February 18, 2008

ನಕ್ಕುಬಿಡು ಒಮ್ಮೆ...

ಸಂದೀಪ ನಡಹಳ್ಳಿಯವರ ಅವನ ನೆನಪು ಲೇಖನದ ಮುಂದುವರಿಕೆಗೆ ಸಾಮ್ಯವೆನ್ನಬಹುದಾದ ಬರಹ.ಸಹನಾ ಬಟ್ಟೆ ಒಣಗ್ಸಕ್ಕೆ ಅಟ್ಟಕ್ಕೋಗಿ ಎಷ್ಟೊತ್ತಾತು, ಇನ್ನು ಬರ್ಲೆ. ಸ್ನಾನಕ್ಕೋದ್ರು ಹಂಗೇಯಾ...ಮೂರು ತಾಸು ಬೇಕು. ಊರ್ಮಿಳಾ ದೇವಿ. ಬಂದು ಮೂರು ದಿವ್ಸದಿಂದ ನೋಡ್ತಾ ಇದ್ದಿ. ಎಂತಾರು ಮಾಡ್ಕ್ಯಳ್ಲಿ. ಮತ್ತೆ ಅವ್ನ ಸುದ್ದಿ ಎತ್ತಿರ್ ಸಾಕು ಬಯ್ಯಕ್ಕೆ ಬತ್ತು ಅಂತ. ನಿನ್ನೆ ಮಧ್ಯಾಹ್ನ ಮನ್ಕ್ಯಂಡಾಗ ಹೇಳ್ತಿತ್ತಪ "ಅಕಾ...ಹೋದ್ವರ್ಷ ಎಂತ ಮಾಡಿದ್ದ ಗೊತ್ತಿದ್ದಾ...ಅಪ್ಪ ಅಮ್ಮನ್ ಮುಂದೇ ಗುಲಾಬಿ ಹೂ ಕೊಟ್ಟಿದ್ದ ಮಳ್ಳ, ಅದೂ ಮತ್ತೆ ವ್ಯಾಲಂಟೈನ್ ದಿನ." ಆನೂ ಕೇಳ್ದಿ ಧೈರ್ಯ ಮಾಡಿ "ಅಂವ ಎಂತಕ್ ಮಳ್ಳ? ಗುಲಾಬಿ ಹೂ ಕೊಟ್ಟಿದ್ದಕ್ಕ ಅಥ್ವಾ ಅಪ್ಪ ಅಮ್ಮನ್ ಮುಂದೇ ಕೊಟ್ಟಿದ್ದಕ್ಕ ?"ಹೇಳಿ. "ಇಲ್ಯೇ ಅಕ್ಕಾ..ಪಾಪ, ನಮ್ಮನೆ ಗಿಡದ್ದೆಯಾ..ಬಿದ್ದೋಗಿತ್ತಡ, ತಂದ್ಕೊಟ್ಟಿದ್ದ." ನಾವು ಎಂತರು ಕೇಳಿರ್ ಮತ್ ವಹಿಸ್ಗ್ಯ ಬತ್ತು ಅವನ್ನ. ಬಯ್ಯದ್ ನೋಡಿರೆ ಹೋದಂವ ಬಾರ. "ಅಂವ ರಜನಿ ಹೇಳ್ತ ಯಂಗೆ. ಆವತ್ತು ಕಾರಲ್ಲಿ ಹೋಪಕ್ಕರೆ ಶಿಟ್ಟು ಬಂದು ಕೇಳೇ ಬುಟಿ. ಎಂತಕ್ಕೆ ಹಾಂಗ್ ಕರಿತೆ ಹೇಳಿ." "ರಜನಿ ಅಂದ್ರೆ ಬೆಳದಿಂಗಳು ಹೇಳಿ, ಬೆಳದಿಂಗಳು ಅಂದ್ರೆ ಯಂಗ್ ಪ್ರೀತಿ ಅಂದ್ನಪ ಮಳ್ಳ" ಅಂತು ಕೂಸು.

ಅಲ್ಲಾ ಮಾತ್ ಮಾತಿಗೆ ಮಳ್ಳ ಹೇಳಿ ಬಯ್ಯದೆಂತಕ್ಕೆ ಅವನ್ನ ಹೇಳೇ ಗೊತ್ತಾಪ್ದಿಲ್ಲೆ. ಆನೂ ಬಂದಾಗಿಂದ ನೋಡ್ಕ್ಯೋತಿದ್ದಿ. ಅಂವ ಪ್ಯಾಟಿಗ್ ಹೊಂಟಿದ್ ದಿವ್ಸ ಇದಕ್ಕೆ ಸ್ಪೆಷಲ್ ಕ್ಲಾಸು. ಇಲ್ದೋದ್ ದಿವ್ಸ ಇಲ್ಲೆ. ಆವತ್ತಂತು ಅಪ್ಪ ಗಾಡಿ ನಿಲ್ಸಿಕ್ಕೆ ಔಷಿಧಿ ತರಕ್ಕೆ ಹೋಯ್ದ, ಗಾಡಿಂದ ಇಳ್ಕಂಡು ಎಂತಕ್ಕೋ ಇಚ್ಚೆ ಬದಿಗೆ ತಿರ್ಗಿರೆ ಅವನ್ ಸಂತಿಗೆ ಮಸಾಲೆ ಪುರಿ ತಿಂತಾ ಇದ್ದಲಾ ಬಸ್ಟ್ಯಾಂಡ್ ಬದಿಗೆ. ಅಪ್ಪನೂ ನೋಡಿದ್ದ ಹೇಳಿ ಅದ್ಕೆ ಗೊತ್ತಾಗಲ್ಲೆ ಕಾಣ್ತು.

ಮನಿಗೆ ಬಂದ್ಕುಳೆ ಅಪ್ಪ ಕೇಳಿರೆ "ಸ್ಪೆಷಲ್ ಕ್ಲಾಸ್ ಜಾಸ್ತಿ ಹೊತ್ತು ಇತ್ತು" ಹೇಳ್ಬುಡ್ತಲೇ... ಎಷ್ಟು ಧೈರ್ಯ ಅಂತ. ಯಂಗಾದ್ರೆ ಅಳುನೆ ಬತ್ತಿತ್ತಪ. ಯಂಗಂತೂ ರಾಶಿನೇ ಹೆದ್ರಿಕ್ಯಾಗ್ಬುಟ್ಟಿತ್ತು. ಮನೆಲ್ಲಿ ಹಬ್ಬ ಇದ್ದನ ಮಾಡ್ಕ್ಯಂಡಿದ್ದಿ. ಅಪ್ಪಗೂ ಖುಶಿ ಆಗಿಕ್ಕು ಬಿಡು. ಯಂಗೆ ಕಷ್ಟಪಟ್ಟು ಇಂಜಿನೀಯರ್ ಮಾಣಿ ಹುಡುಕದಂಗೆ ಇದಕ್ಕೆ ಹುಡ್ಕ ಕೆಲ್ಸ ತಪ್ತು ಅಂತ. ಹೆಂಗೂ ಸಾಫ್ಟ್ ವೇರ್ ಇಂಜಿನೀಯರ್, ವರ್ಷಕ್ ಮೂರು ಸಲ ಅಮೇರಿಕಕ್ಕೆ ಹೋಗ್ತ್ನಲ ಅಂತ.
ಸಂಜೆ ಊಟಬ್ಯಾಡ ಅಂದ್ಕುಳೆನೆ ಅಮ್ಮಂಗೂ ಗೊತ್ತಾಗಿತ್ತು ಕಾಣ್ತು "ರಸ್ತೆ ಬದಿಗಿನ್ ಹೊಲಸ್ ಹೊಲಸ್ ತಿಂದ್ಕಬಂದ್ಕಳಿ, ಕಡಿಗ್ ಊಟ ಸೇರದಿಲ್ಲೆ ಹೇಳಿ ನಿಂಗ" ಅಮ್ಮನೂ ಸಹನಂಗೆ ಹೇಳಿದ್ದು ಕೇಳಿದ್ದು ಯಂಗೆ.

ಲವ್ ಮಾಡ್ಕ್ಯಂಡು ಬಿಟ್ಟಿಕ್ ಹೋಗ್ದಿದ್ರೆ ಸಾಕು. ಇದಕ್ಕೂ ಅಷ್ಟೇಯ ಎಂತನ ಮತ್ತೆ. ಈಗ ಮಸಾಲೆ ಪುರಿ ತಿಂದಿದ್ದೆ ಬಂತು ಅಂದ್ಕಂಡಿದ್ದ ಅಥ್ವ ಖರೆ ಲವ್ವೇ ಮಾಡಿದ್ದ ಗೊತ್ತಿಲ್ಲೆ. ಹೇಳಿರಾತಲಿ ಗೊತ್ತಗದು ಬಾಯ್ ಬಿಟ್ಟು. ಯಾವಾಗ್ ನೋಡ್ರು ಮಳ್ಳ ಹೇಳಿ ಅವನ್ನ ಬಯ್ಯದು, ಮತ್ ಅವಂದೇ ಸುದ್ದಿ ಹೇಳದು ನೋಡಿರೆ ಯಂಗು ಡೌಟು. ಲವ್ವೇ ಮಾಡಿಕ್ಕು ತಗ.


ಅಂವ ಏನು ಕಮ್ಮಿ ಇದ್ದ ಮಾಡಿದ್ಯ? ಲಾಸ್ಟ್ ಟೈಂ ಅಮೇರಿಕಕ್ಕೆ ಬಂದಾಗ "ಆಸು ಪಾಸಲ್ಲೆ ಇದ್ಯನಾ ಮಾಣಿ?" ಕೇಳಿರೆ ಇಶ್ಶೋ..."ಯಾರ ಆಸು ಪಾಸಲ್ಲಿ?" ಕೇಳಿದ್ದ ಕೇಳ್ದವ್ವೆಲ್ಲಾ ನಿಗ್ಯಾಡಂಗೆಯಾ. ಅಡ್ಕೆ ಸುಲಿಯ ಹೆಂಗ್ಸ್ರು ಇವನ ಮಾತು ಕೇಳ್ಕ್ಯಂಡು ನಿಗ್ಯಾಡ್ತಾ ಹೇಳಿ ಆನು ನಿಗ್ಯಾಡ್ತಿ ಮಾಡ್ಕ್ಯಂಡಿದ್ದ ಕಾಣ್ತು. ಎಂತ ಮಾತಾಡಿರೂ ಅವನ ಮತ್ತೊಂದು ಬ್ಲಾಗಿನ ನೇರಕ್ಕೆ ಮಾತಾಡ್ತ. ಯಂಗೆ ಅಂತದೆಲ್ಲ ಹಿಡಸದಿಲ್ಲೆ. ಇಶ್ಶೋ... ಯಂಗೆ ಅಂಥ ಡಬ್ಬಲ್ ಮೀನಿಂಗ್ ಎಲ್ಲ ಹಿಡ್ಸದಿಲ್ಲೆ ಅಂತ ಅವಂಗೆ ಇನ್ನು ಗೊತ್ತಿಲ್ಲೆ ಅನುಸ್ತು. ಸುಳ್ಳು ಹೇಳದಲ್ಲ ಅವನ ಮಾತು ಕೇಳಿರೆ ನಿಗಿ ಬರದು ಹೌದು..ಅಡ್ಕೆ ಸುಲಿಯ ಹೆಂಗಸ್ರು ನಿಗ್ಯಾಡ್ತಾ ಹೇಳಲ್ಲ ಯಾರಿಗಾರೂ ನಿಗಿ ಬತ್ತು. ಆದ್ರೂ ಯನ್ನ ಹೆಡ್ತನ ಅವನ ಮುಂದೆ ಪ್ರದರ್ಶನ ಮಾಡ್ಕ್ಯಳದ್ ಬ್ಯಾಡ ಹೇಳಿ ಎಂತು ಮಾತಾಡಲ್ಲೆ. ಆದ್ರೂ ಸಹನಾ ಹುಷಾರಿದ್ದು ಚೊಲೊ ಮಾಣಿನೆ ಹಿಡ್ಕೈಂದು.

ಯಂಗೆಂತ ಗೊತ್ತಿಲ್ಯಾ..ಅಮ್ಮ ಸ್ನಾನಕ್ಕೋದ್ ಹೊತ್ನಲ್ಲೆ ಅವಂಗೆ ಇದು ತುಪ್ಪದ್ ದ್ವಾಸೆ ಮಾಡಿ ಹಾಕಿದ್ದು, ಮೂರು ದಿವ್ಸದಿಂದ ಅದೆ ಕಥೆ. ಅವನೂ ಶಣ್ಣಾಟದಂವ ಅಲ್ಲ. ಅಮ್ಮ ಸ್ನಾನಕ್ಕೋದ್ಮೇಲೆ ಎದ್ಕತ್ತ. ಅಮ್ಮನೂ ಹಂಗೆ ಮಾಡ್ತ ಎಂತನ ಗೊತ್ತಿಲ್ಲೆ ಅಂವ ಎದ್ಕಳ ಹೊತ್ತಿಗೆ ಸ್ನಾನಕ್ ಹೋಗ್ಗು. ಎಲ್ಲ ಶೇರ್ಕ್ಯಂಡು ನಾಟ್ಗ ಮಾಡ್ತ್ವ ಹೆಂಗೆ ಹೇಳಿ.

ಎದ್ದಂವ ಒಳಗ್ಬರಕ್ಕರೆ ಕೇಳ್ಕ್ಯೋತ ಬತ್ತ "ಯಾರಿದ್ರೇ ಗಂಡಸ್ರು?" ಹೇಳಿ . ಅಡ್ಗೆ ಮನೆಲ್ಲಿ ಗಂಡಸ್ರು ಇರ್ತ್ವನ ಅವ್ರೂರಾಗೆ. ಸಹನಾ ಕಿಷಿಕಿಷಿ ನಿಗ್ಯಾಡ್ತು. ಯಂಗೂ ನಿಗಿ ಬೈಂದು ಬಿಡು ಅವನ ಮನೆ ಗಂಡಸ್ರನ್ನ ಕರಿತ್ನ ಹೆಂಗಸ್ರನ್ನ ಕರಿತ್ನ ಅಂತ ಗೊತ್ತಾಗ್ದೆ ಇರಥರ ಮಾತಾಡ ಸ್ಟೈಲ್ ನೋಡಿ. ಅಪ್ಪ ತ್ವಾಟಕ್ಕೋಗದ್ರೊಳಗೆ ಇಬ್ರು ರೆಡಿಯಾಗ್ಬುಟ್ಟಿದ್ದ ಮತ್ತೆ ಸಿರ್ಸಿಗೋಗಕ್ಕೆ. ಅಪ್ಪಗೆಂತ ಗೊತ್ತಿಲ್ಯ? ಅಪ್ಪ ಇಂವ ಮುಂದಿನ್ವಾರ ಅಮೇರಿಕಕ್ಕೆ ಹೋಪದ್ರೊಳಗೆ ಅವನ ಅಪ್ಪನತ್ರೆ ಮಾತಾಡ್ತಿ ಹೇಳಿದ್ದ ನಿನ್ನೆ ಸಂಜೆ ಮನಿಗೆ ಬಂ...ದವ್ನೆಯಾ.

ಯಂಗೆಂತ ತೊಂದ್ರೆ ಇಲ್ಲೆ. ಮೇ ತಿಂಗಳಲ್ಲಿ ಕೂಸಿನ್ ಮದುವೆ ಇಟ್ರೆ ಮತ್ತೆ ಇಂಡಿಯಾಕ್ಕೆ ಬರಕ್ಕಾಗ್ತು ಹೇಳೆ ಖುಷಿ. ಹಿಂಗ್ ಹೇಳದಲ್ಲ ಮಾಣಿ ಗನಾವ್ನೆಯ. ರಾಶಿ ಕುಷಾಲು ಅಷ್ಟೆಯಾ ತಗ. ಆದ್ರೆ ಬೇಜಾರಾಗಿದ್ದು ಮತ್ತೆಂತಕ್ಕೂ ಅಲ್ಲಾ ...ಅಮ್ಮ ನಿನ್ನೆ ಹ್ಯಾಂಗೆ ಹೇಳ್ಬುಡ್ತು."ಕುಶಾಲು ಮಾಡಿರೆ ಎಂತ ಆಗ್ತು ತಗ, ರಮೇಶ್ನಂಗೆ ಮೂರು ತಾಸಿಗೊಂದು ಮಾತಾಡವ್ವಾದ್ರೂ ಬೇಜಾರ್ ಬಂದೋಗ್ತು ಯಂಗಕ್ಕೆ" ಹೇಳಿ. ಕೇಳನ ಮಾಡ್ಕ್ಯಂಡಿ ನಿಂಗನೇ ಹುಡ್ಕಿ ಮಾಡಿದ್ದಿ ಯನ್ನ ಮದುವೆನಾ. ಈಗ ಅಳಿಯ ಮಾತಾಡಲ್ಲೆ ಹೇಳ್ತಿ ಹೇಳಿ. ಕೇಳಕ್ಕೂ ಧೈರ್ಯ ಬೇಕು. ಅಷ್ಟೆಲ್ಲ ಧೈರ್ಯ ಇದ್ದಿದ್ರೆ ಯಂಗೆ ಮಾಣಿ ನೋಡಿ ಮದ್ವೆ ಮಾಡ ಕೆಲ್ಸ ಇರ್ತಿತ್ತಿಲ್ಲೆ ತಗ.

ಎಂತ ಆಪ್ದಿಲ್ಲೆ ಸಮಾ ಆಗ್ತು ತಗ. ಈಗ ಮೂರು ಮೇಲ್ ಮಾಡಿರೆ ಒಂದುಕ್ಕೂ ರಿಪ್ಲೈ ಮಾಡದಿಲ್ಲೆ. ಅಲ್ಲಿ ಬರ್ಲಿ ಇದೂವ. ಆವಾಗ ಅಮೇರಿಕದ ಕಷ್ಟ ಸುಖ ಎಲ್ಲ ಗೊತ್ತಾಗ್ತು. ಆವಾಗ ಇದೂ ಅವನಂಗೆ ಕಥೆ ಬರೆಯಕ್ಕು ಶುರು ಮಾಡ್ಗು ತಗ. ಅಲ್ಲಾ... ಎಂತ ಬೇಕರೂ ಮಾಡ್ಕ್ಯಳ್ಲಿ , ಯಂಗೆ ಎಂತ ಆಪುದು ಬಿದ್ದಿದ್ದು! ಅಲ್ಲಾ...ಅಮೇರಿಕದಾಗೆ ಇರ್ತ ಹೇಳೆ ಲವ್ ಮಾಡ್ಕೈಂದ ಎಂತ ಮತ್ತೆ. ಹಂಗೇನಾರೂ ಇದ್ರೆ ಲೈಫ್ ಸರಿ ಇರದಿಲ್ಲೆ ಮತ್ತೆ. ತಂಗಿ ಆಗ್ಲಿ ಅಕ್ಕ ಆಗ್ಲಿ ಹೇಳೇಬುಟ್ಟಿದ್ದಿ ಮತ್ತೆ. ಪ್ರೀತಿ ಮಾಡಿರೆ ಖರೇ ಪ್ರೀತಿ ಮಾಡವ್ವು, ಯನ್ನ ಉಮೇಶ ಪ್ರೀತಿ ಮಾಡಿದಿದ್ನಿಲ್ಯ ಹಂಗೆ. ಇನ್ನೂ ಗಡ್ದ ಬಿಟ್ಗಂಡು ತಿರಗ್ತಾ ಇದ್ದ ನೋಡು, ಪಾಪ ಕಾಣ್ತು.

ಅಮ್ಮ "ತಂಬ್ಳಿಗೆ ವಗ್ಗರಣೆ ಹಾಕ್ತ್ಯನೇ ತಂಗಿ" ಕೇಳ್ತು ಹೇಳಿ ಹಾಕನಾ ಹೇಳಿ ಅಡ್ಗೆ ಮನಿಗೆ ಹೋದಿ. ಸಂಬಾರ ಮರಿಗೆ ದಣಿ ತೆಗ್ದು ಗ್ಯಾಸ್ ಕಟ್ಟೆ ಮೇಲೆ ಇಟ್ಗೈಂದ್ದಿ. ಇಂವ ಬಂದು ಆಷ್ಟು ಕಾಳು ಬ್ಯಾಳೆನು ಶೇರ್ಶಿ ಇಟ್ಟಿದ್ದ. "ಅತ್ಗೇ... ಆರಾಮನೇ" ಕೇಳ್ಬುಟ ಅಷ್ಟು ಮಾಡ್ಕ್ಯಂಡು. ಯಂದೇನೂ "ಹೋಗೇ-ಬಾರೇ" ಹೇಳಷ್ಟು ಗುರ್ತಿಲ್ದೇ ಹೋದ್ರೂ ಕ್ಲೋಸಾಗೇ ಮಾತಾಡ್ದ ಆವತ್ತು. ಸಹನಾ ಬಿದ್ದಿದ್ರಲ್ಲಿ ಆಶ್ಚರ್ಯ ಇಲ್ಲೆ ಕಂಡ್ತು. ಅಂವ ಯಂಗೆ "ಅತ್ಗೆ" ಹೇಳಿ ಕರ್ದಿದ್ ಯಂತಕ್ಕೆ ಹೇಳಿ ಯಂಗೊತ್ತಾಗಲೆ ತಿಳ್ಕೈಂದ ಕಾಣ್ತು. ಆನು ಎಂತ ಅಷ್ಟೆಲ್ಲ ಹೆಡ್ಡಿ ಅಲ್ಲ. ಉಮೇಶ ಬಸ್ಸಲ್ಲಿ ಅಪ್ಪನ್ನ ಕಂಡ್ರೆ "ಮಾವಾ" ಹೇಳಿ ಮತಾಡ್ಸ್ತಿದ್ನಿಲ್ಯಾ? ಹಂಗೆಯ ಅನ್ಕಂಡಿ ಮತ್ತೆ. ಆದ್ರೂ ಉಮೇಶಂಗೆ ಯನ್ನ ಮದ್ವೆಪತ್ರ ಕೊಟ್ಟುಕೂಡ್ಲೆ ಎಷ್ಟು ಅಳುನೆ ಬಂದೋತು. ಅಪ್ಪನೂ ಇದ್ದಿದ್ದ ಸಂತಿಗೆ. ಅಪ್ಪನ್ ಎದ್ರಿಗೆ ಮಾತಾಡಲ್ಲಾಗ ಹೇಳಿ ಸುಮ್ನಿದ್ದ ಕಾಣ್ತು ಉಮೇಶ. ಪಾಪ ಸುಮ್ನೆ ಮದ್ವೆ ಪತ್ರ ತಗಂಡ. ಬೇಜಾರಾಯ್ದು ಬಿಡು ಅವಂಗೆ. ಯಂಗೆ ಆವತ್ತು ಬೇಜಾರಾಗ್ದೆ ಇದ್ರೂ ಅಮೇರಿಕದಲ್ಲಿ ಒಬ್ಬನೆ ಕುತ್ಗಂಡಾಗ ಅವನ್ನ ನೆನಪಾಗ್ದೆ ಹೋಗದಿಲ್ಲೆ. ಆದ್ರೂ ಉಮೇಶನ್ನ ನೆನಪಾದ್ರೂ ತಡಕತ್ತಿ. ರಮೇಶಗೆ ಮೋಸ ಆಗಲ್ಲಾಗ ನೋಡು.

ನಾಗತ್ತಿಗೆ ಮದ್ವಿಗೆ ಹೋದಾಗ ಅಜ್ಜನ ಮನೆ ಮಾವ ಮಶಿಗದ್ದೆ ತಿಂಮಾವಂಗೆ ಯನ್ನ ಗುರ್ತ ಮಾಡ್ಕೊಟ್ಟಿದ್ದೆ ನೆನಪಾಗ್ತು. "ಬಾವ, ಇದು ಯನ್ನ ಅಕ್ಕಯ್ಯನ್ ಮಗ್ಳು. ಮದ್ವಿಗೆ ಬೈಂದು" ಅಂತ. ತಿಂಮಾವ ಕೇಳೇ ಬುಟಾ. "ಜಾತ್ಗ ಹೊರಗೆ ಹಾಕಿದ್ರ?" ಹೇಳಿ. "ಥೋ..ಮದ್ವಿಗೆ ಬೈಂದು ಅಂದ್ರೆ ಹಾಂಗಲ್ದ ಮಾರಾಯಾ, ಇನ್ನೂ ಪೂರ್ತಿ ಓದ್ಯಾಗಲ್ಲೆ ಕೂಸಿಗೆ" ಹೇಳಿ ಮಾವ ಹೇಳಿದ್ಕುಳೆ ಯಂಗೆ ಹೆದ್ರ್ಕೆ ಆಗೋಗಿತ್ತು. ಬೆಳಿಗ್ಗೆ ಉಮೇಶನ್ನ ಪತ್ರ ಅರ್ಧ ಓದಿ ಅಮ್ಮ ಬಂತು ಹೇಳಿ ಮೆತ್ತಿ ಮೆಟ್ಲ ಕೆಳಗೆ ತುರ್ಕಿಕ್ಕೆ, ಮದ್ವಿಗೆ ರೆಡಿ ಆಕ್ಯ ಬಂದಿದ್ದು ನೆನಪಾಗಿ. ಹೋದ್ಕುಳೆ ಹರ್ದಾಕವ್ವು ಪತ್ರನ ಅನ್ಕಂಡಿದ್ದಿ. "ಅರ್ಧ ಓದ್ಯಾದ್ರೆ ತೊಂದ್ರೆ ಇಲ್ಯಾ...ಯಮ್ಮನೆ ಮಾಣಿಗೆ ಹೇಂಗಿದ್ರೂ ದಿವ್ಸಕ್ಕೆ ಎರಡ್ಸಲ ಪ್ಯಾಟಿಗೋಗವ್ವು, ಕಾಲೇಜಿಗೆ ತಗಂಡೋಗಿ ಬಿಡ್ತ, ಮದ್ವೆ ಆದ್ಮೇಲೆ ಉಳ್ದಿದ್ ಅರ್ಧ ಓದ್ಕ್ಯತ್ತು ಕೂಸು.ಯಮ್ಮನೆ ಮಾಣಿಗೆ ಹದಾ ಎತ್ರಿದ್ದು ಕೂಸು, ಯಮ್ಮನೆ ಮಾಣಿ ಸ್ವಲ್ಪ ಲೆಕ್ಕಕ್ಕಿಂತ ಜಾಸ್ತಿನೆ ಎತ್ರ" ಹೇಳಿದಿದ್ದ ತಿಂಮಾವ. ಮಾವನೂ ಕೇಳಿದಿದ್ದ. "ಪ್ಯಾಟಿಗೆಂತಕ್ಕೆ ಹೋಗ್ತ ದಿವ್ಸ ಅಂವ, ಪ್ಯಾಟೆಲ್ಲೆಂತ ಜಾಬ್ ಮಾಡ್ತ್ನ ಅಂವಾ?" ಅಂತ. "ದೋಸ್ತ್ರನ್ನ ಕಾಣಕ್ ಹೋಗ್ತ ಅಂವ, ಮನೆಲ್ಲಿ ಅಡ್ಗೆ ಮಾಡಕ್ಕೆ ಹೆಂಗ್ಸಿನ್ ಇಟ್ಗೈಂದಿ, ಬಾಕಿದೆಲ್ಲ ಒಳಬದಿದು ಯಮ್ಮನೆದು ನೋಡ್ಕ್ಯತ್ತು, ಹೊರಬದಿಗೆ ನೋಡ್ಕ್ಯಳಕ್ಕೆ ಹ್ಯಾಂಗೂ ಆನಿದ್ದಿ. ಅಂವ್ಗೆಂತ ಕೆಲಸ ಮನೆಲ್ಲಿ? ಯಮ್ಮನೆದುಕ್ಕೂ ಹುಷಾರಿಪ್ದಿಲ್ಲೆ, ಅಂತಂಥ ದಿವ್ಸ ದೇವ್ರ ದೀಪ ಹಚ್ಚಕ್ಕೆ ಒಂದು ಘನಾ ಕೂಸಿನ ನೋಡಿ ಯಮ್ಮನೆ ಮಾಣಿಗೂ ಜವಾಬ್ದಾರಿ ಗಂಟು ಹಾಕ್ಬುಡನ ಅಂತ" ತಿಂಮಾವ ಹೇಳಿದ್ ಎಂತ ಖರೆ ಹೇಳಿ? ಯಂಗೊತ್ತಿತ್ತು ಅವ್ರ ಮನೆ ಮಾಣಿ ದಿವ್ಸ ಎಂತಕ್ ಪ್ಯಾಟಿಗ್ ಬತ್ತ ಹೇಳಿ. ಗುಟ್ಕಾ ಖಾಲಿ ಆದ್ಕುಳೆ ಅವಂಗೆ ಮನೆಲ್ಲಿ ಕಾಲ್ ನಿಲ್ಲದಿಲ್ಲೆ ಅಂತ ಮಂಗಲಾ ಹೇಳ್ತಿತ್ತು ಯಂಗೆ. ಮಂಗಲಂಗೊಂದಿನ ಕಣ್ಣು ಹೊಡದಿದ್ನಡ. ದುರುಗುಟ್ಗಂಡು ಮಂಗಲನೂ ಅವನ್ನೆ ನೋಡಿದ್ದಕ್ಕೆ "ಕಣ್ಣಲ್ಲ್ ಕಸ ಬಿದ್ದವ್ರಂಗೆ ಕಣ್ಣು ತಿಕ್ಯಂಡ" ಅಂತ ಮಂಗಲ ಹೇಳಿದ್ದು ಯಂಗೆ ಇನ್ನೂ ನೆನಪಿದ್ದು. ಮಂಗಲನ್ ಧೈರ್ಯಕ್ಕು ಮೆಚ್ಚದೆಯಾ...ಯಂಗಾದ್ರೆ ಹೆದ್ರಿಕ್ಯಾಗೋಕ್ತಿತನ.

ಅಜ್ಜನ್ ಮನೆ ಮಾವ ಅಪ್ಪನ್ ಹತ್ರ ಕೇಳ್ದ ಕಡಿಗೆ "ಕೂಸಿನ್ ಮದ್ವೆ ಮಾಡ್ಬುಡನ ಹೇಳಿ, ಮಶಿಗದ್ದೆ ತಿಂಬಾವ ಅವ್ನ ಮಗಗೆ ಜಾತ್ಗ ತಗತ್ತ ಇದ್ನಡ, ಎತ್ತರನ್ ಕೂಸು ಬೇಕಡ" " ಈ ವರ್ಷ ಆಪದಲ್ಲ, ಅಡ್ಕೆ ರೇಟು ಇಳ್ದೋಯ್ದು, ಕೂಸಿಗೂ ಓದಿ ಮುಗಿಲಿ, ಸಮಾ ಬಂಗಾರ ಗಿಂಗಾರ ಮಾಡ್ಶಿಟ್ಗತ್ತಿ, ಎರ್ಡು ವರ್ಷ ಹೋಗ್ಲಿ" ಅಪ್ಪ ಫೋನಲ್ಲಿ ಮಾವನತ್ರ ಮಾತಾಡಿದ್ ಕೇಳಿ ಸಮಾಧಾನ ಮಾಡ್ಕ್ಯಂಡಿದ್ದಿ.

ಆದ್ರೆ ಈ ರಮೇಶ ಅಮೇರಿಕಾದಲ್ಲಿರ್ತ ಹೇಳಿ ಗೊತ್ತಾದ್ಕುಳೆ ಉಮೇಶನ್ನ ನೆನಶ್ಗ್ಯಂಡು ಬೇಜಾರಾದ್ರೂ ಒಪ್ಗ್ಯಂಡಿ. ಆನೇನು ಉಮೇಶಂಗೆ ಮಾತು ಕೊಟ್ಟಿರ್ಲಿಲ್ಲೆ ಮನಸಿದ್ರೂವ. ಯಂಗೂ ಅಮೆರಿಕ ನೋಡವ್ವು ಹೇಳಿ ಇದ್ದಿತ್ತು ಬಿಡು. ಅದ್ರೂ ಅಲ್ಲಿ ಹೋದ್ಕುಳೆ ನಿರಾಸ್ಯಾಗಿದ್ದು ಸುಳ್ಳಲ್ಲ. ಮಣ್ಣೆಲ್ಲ ಬಣ್ಣ ಬಣ್ಣದ್ದು ಇರ್ತು ತಿಳ್ಕಂಡಿದ್ದಿ. ಹಾಂಗೇನಿಲ್ಲೆ. ಮಣ್ಣು ಹುಡ್ಕ್ಯಂಡೋದ್ರೆ ಕರೇ ಬಣ್ಣದ್ದ್ ಮಣ್ಣೊಂದು ಕಾಣ್ತು. ನಮ್ಮಲ್ಲಿ ಥರ ಕೆಂಪಿ ಮಣ್ ಸೈತ ಇಲ್ಲೆ. ಆದ್ರೂ ಪ್ಯಾಂಟ್ ಹಾಕ್ಯಳ್ಲಕ್ಕು ಅಲ್ಲಿ, ಇಲ್ಲಿ ಹಂಗೆ ಚೂಡಿದಾರನೇ ಜೋಲಿಶ್ಗ್ಯಳವ್ವು ಹೇಳಿಲ್ಲೆ. ಹವ್ಯಕ ಹಬ್ಬದ್ ದಿವ್ಸ ಶೀರೆ ಉಟ್ಗಂಡು, ಕರಿಮಣಿ ಸರ ಹಾಕ್ಯಂಡು ಹೋದ್ರಾತು, ಬಾಕಿ ದಿವ್ಸ ಹ್ಯಾಂಗಿದ್ರೂ ಯಾರೂ ಕೇಳವ್ವಿಲ್ಲೆ ಬಿಡು.

ಆದ್ರೂ ಖುಷಿಯಾಗಿದ್ದು ಮತ್ತೆಂತಕ್ಕು ಅಲ್ಲ. ಆ ಮಾಣಿ - ಯಮ್ಮನೆ ಕೂಸು ಇಬ್ರ ಧೈರ್ಯನು ಮೆಚ್ಚವ್ವು. ಅಡ್ಡಿಲ್ಲೆ ತಗ, ಅದೂ ಲಗೂ ಅಲ್ಲೆ ಆಸ್ ಪಾಸಲ್ಲೆ ಬಂದ್ರೆ ಯಂಗೂ ಚೊಲೊನೆ ಆಗ್ತು. ಅಷ್ಟೆಲ್ಲ ಬೇಜಾರ್ ಬರದಿಲ್ಲೆ. ಶಾಪಿಂಗ್ ಎಲ್ಲ ಒಟ್ಟಿಗೆ ಹೋಪಲ್ಲಾಗ್ತು. ವೀಕೆಂಡ್ ಟೈಮ್ ಪಾಸ್ ಆಗ್ತು. ಮುಂದಿನ್ ವರ್ಷ ಯನ್ನ ಬಾಳಂತನಕ್ಕೆ ಅಮ್ಮಗೆ ವಿಸಾ ಸಿಗ್ದೇ ಹೋದ್ರೂ ಅಷ್ಟೆಲ್ಲ ಹೆದ್ರಿಕೆ ಆಗದಿಲ್ಲೆ. ಅಲ್ಲಾ...ಮಾಣಿಗೆ ಸಂಬಳ ಎಷ್ಟು ಬತ್ತನ? ರಮೇಶನ್ಕಿಂತ ಜಾಸ್ತಿ ಬತ್ತ ಎಂತನ? ಅದ್ಕೆ ಅಮ್ಮನು ಭಾರಿ ಖುಶ್ಯಲ್ಲಿ ಇದ್ದಂಗೆ ಕಾಣ್ತು. ಅವಂಗೆ ರಮೇಶನ್ಕಿಂತ ಜಾಸ್ತಿ ಸಂಬಳ ಬಂದ್ರೆ ಯಂಗೆಂತ ಬೇಜಾರಿಲ್ಲೆ..... ಯಂತಕ್ಕೋ ಒಂದ್ಸಲ ಹಾಂಗೆ ಅನ್ಶ್ಯೋತು, ಅಷ್ಟೆಯಾ.

ಮುಂದಿನ್ವಾರನೆ ವಿವೇಕ ಅಮೇರಿಕಕ್ಕೆ ಹೋಗಿ ಮೂರ್ತಿಂಗ್ಳಿಗೆ ವಾಪಸ್ ಬಂದ್ರೆ ಕೂಸಿನ್ ಮದ್ವೆ ಮೇ ತಿಂಗಳಲ್ಲಿ ಆಗ್ಗು. ಅಲ್ಲಿ ತನಕ ಇಲ್ಲೆ ಉಳ್ಕಂಡ್ರೆ ಹ್ಯಾಂಗೆ ಹೇಳಿ ಫೋನ್ ಮಾಡ್ದಾಗ ರಮೇಶನ್ನ ಕೇಳಿ ನೋಡಕ್ಕಾತು. ರಮೇಶ ಹಾಂಗೆಲ್ಲ ಅಲ್ಲ ಹೇಳದಿಲ್ಲೆ ಬಿಡು. ಒಳ್ಳೆಂವ....ಪಾಪ. ಯಾವ್ದುಕ್ಕು ಅಪ್ಪ ಯನ್ನ ಮುಂದೆ ಸಮಂಜಸ ವಿಚಾರ ಇಡ್ಲಿ. ತಂಗಿ ಮದ್ವೆ ಆದ್ರೆ ಯಂಗೊಂದು ರೇಷ್ಮೆ ಸೀರೆ ಬರ್ತು, ಉಳ್ದಿದ್ದೆಲ್ಲ ಡ್ರೆಸ್ಸೆ ತಗಬುಟ್ರಾತು ಅಷ್ಟೆಯ. ಸಹನಂಗೆ ಉಡ್ಗೇರೆ ಅಮೇರಿಕದಿಂದನೆ ತರಸ್ತಿ ರಮೇಶ್ ಬಪ್ಪಕಲ್ಕೆ.

January 12, 2008

ಇಂದು ಬೆಳಗಿನಲಿ

"ಸಂಕ್ರಾಂತಿಯ ಸಿಹಿ ಬದುಕಿನ ಸವಿಗಳಿಗೆಯ ನಾಳೆಗೆ ನಾಂದಿಯಾಗಲಿ" ತಮ್ಮೆಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳನ್ನು ಕೋರುತ್ತಾ...

ಮೂಡಲ ಮನೆಯ ಮುತ್ತಿನ ನೀರಿನೊಂದಿಗೆ ಎಂದಿನಂತೆ ಬೆಳಕಾಗುತ್ತದೆ, ಆದರೂ ಹೊಸ ದಿನಕೊಂದು ಹೊಸ ರೀತಿ, ಹೊಸ ವೈಶಿಷ್ಟ್ಯ ಇರುವಂತೆ...ಒಂದು ಬೆಳಗಿಗೆ ಮಳೆ ಮುತ್ತಾದರೆ ಇನ್ನೊಂದು ಬೆಳಗು ಇಬ್ಬನಿಯ ಮತ್ತೇ ಇದು ಎನುವಂತೆ. ಮಗದೊಂದು ಕತ್ತಲು ಕಳೆವ ಬಿಸಿಲ ಹೊಳಪಿನ ವಜ್ರದ ಹಾಗೆ. ಹೀಗೆ ಅವರವರ ಭಾವಕ್ಕೆ ಬದುಕಿಗೆ ತಕ್ಕ ಬೆಳಗು ಬೆಳಕ ಮೂಡಿಸುವ ಕಾಯಕ ಮರೆಯದು. ಭಾವಗಳು ಬೇರೆಯಾದರೂ ಬೆಳಗು ಮಾತ್ರ ಅದೇ ಆಗಿರುತ್ತದೆ.

ನಿಮ್ಮೆಲ್ಲರ ನೆನೆಯುತ್ತಾ ನನ್ನೀ ಬೆಳಗನ್ನು ಆರಂಭಿಸುತ್ತೇನೆ. ಎಲ್ಲೋ ಇದ್ದು, ಮತ್ತೆಲ್ಲೋ ಇದ್ದು, ಇಲ್ಲೇ ಇದ್ದು ಸ್ಪಂಧಿಸುವ ನಿಮ್ಮೆಲ್ಲರೊಂದಿಗೆ ಆರಂಭವಾಗುವ ಬೆಳಗು ಸುಂದರವೆನಿಸುತ್ತದೆ, ಆಹ್ಲಾದವೆನಿಸುತ್ತದೆ, ಕಂಬನಿ ತರುತ್ತದೆ. ಪ್ರೀತಿ ಉಕ್ಕಿಸುತ್ತದೆ, ಮತ್ತೆ ನಿಮ್ಮೆಲ್ಲರ ಬಗ್ಗೆ ಮತ್ತದೇ ಅಭಿಮಾನ ಮೂಡಿಸಿಬಿಡುತ್ತದೆ. ಮನ ತುಂಬಿ ಬಂದಾಗ ನಿಮ್ಮ ಮುಂದಿಟ್ಟು ಖಾಲಿ ಮಾಡಿಕೊಳಲೇ ಎನಿಸಿಬಿಡುತ್ತದೆ. ಕಂಡ, ಕಂಡಿರದ, ಅರಿಯದ, ಅರಿತ, ಪರಿಚಿತ, ಅಪರಿಚಿತ ಮುಖಗಳ ಚಿತ್ರಣ ಮುಂದೆ ಬರುತ್ತದೆ. ನನ್ನ ಭಾವನೆಗಳಿಗಿಷ್ಟು ತಿಳಿ ಹೇಳುವ ನೀವುಗಳು, ಅದೇ ಭಾವಗಳ ಜೊತೆ ಮಾತಾಡುವ ನೀವುಗಳು, ಮಾತನಾಡದೆಯೇ ಮನತುಂಬಿಕೊಳ್ಳುವ ನೀವುಗಳು, ಮೌನವಾಗಿ ಬಂದು ನನ್ನ ಮಾತುಗಳ ಕೇಳಿ ಮೌನವಾಗಿಯೇ ಹೊರಡುವ ನೀವುಗಳು ಒಬ್ಬೊಬ್ಬರಾಗಿ ಮನದ ಕಣ್ಣೊಳಗೆ ಹಾದು ಹೋಗುತ್ತಿರಿ. ಒಬ್ಬರು ನಿಧಾನಕ್ಕೆ ನಡೆದರೆ, ಇನ್ನೊಬ್ಬರು ಹಿತವಾದ ವೇಗದಿ, ಮಗದೊಬ್ಬರು ಭರ್ರನೆ ನಡೆದು ಮನ ಕಾಣಿಸದೇ ಬ್ಲರ್ ಆಗಿಬಿಡುತ್ತಾರೆ. ಮಗ ಬಂದು "ಇಲ್ಲೊಂಚೂರು ಟೇಪ್ ಹಾಕು" ಎನ್ನುತ್ತಾನೆ. ಟೇಪ್ ಹಾಕಿ ಹರಿದು ಹೋದವುಗಳ, ಒಡೆದು ಹೋದವುಗಳ ಕೂಡಿಸಿ ಬರುವಷ್ಟರಲ್ಲಿ ಯಾರೋ ಬಂದು ನಡೆದು ಬಿಟ್ಟಿರುತ್ತಾರೆ. ಆದರೂ ದುಗುಡದ ಕೊಡ ಹೊತ್ತವರ, ನಗೆ ಹೊನಲ ಕೆತ್ತಿದವರ, ಮಾತುಗಳ ಮುಚ್ಚಿಟ್ಟು ಮೌನವಾದವರ, ಮಾತುಗಳ ಬೆಳೆ ಬೆಳೆದವರ, ಮಾತುಗಳ ಧಾನ್ಯವನೊಂದಿಷ್ಟು ದಾನ ಮಾಡಿದವರ ಮುಖಗಳು ಹಾದು ಹೋಗುವ ಸರಣಿಯಲಿ ಸಾಲುಗಳ ಹಾಗೆ. ಇನ್ನೇನ ಹೇಳಲಿ ನಿಮ್ಮಗಳ ಬಗ್ಗೆ! ನನ್ನೀ ಓದುಗ ದೊರೆಗಳ ಬಗ್ಗೆ. ಸಂಕ್ರಾಂತಿಯ ಸಿಹಿಯಲ್ಲಿ, ಯುಗಾದಿಯ ಸಿಹಿ-ಬೇವಿನಲಿ, ಹುಣ್ಣಿಮೆಯ ಬೆಳದಿಂಗಳಿನೊಲು, ಅಮವಾಸ್ಯೆಯ ಕತ್ತಲೆಯಲಿ, ಮೇಣದ ಬತ್ತಿಯ ಮಂದದಲಿ, ಟಾರ್ಚ್ ನ ಶಾರ್ಪಿನಲಿ, ಹೀಗೆ...ಎಲ್ಲೆಲ್ಲೂ ಮುನ್ನಡೆಯಲು ಹಾದಿ ಮಾಡುವ ನಿಮ್ಮಗಳ ನಾ ಮರೆಯಲಿ ಹೇಗೆ?

ಆದರೂ ಒಂದಿಷ್ಟು ಹೇಳಬೇಕೆನ್ನುತ್ತಿದೆ ಮನ.

ನನ್ನೆಲ್ಲ ಓದುಗ ದೊರೆಗಳಿಗೂ, ನೀವೆಲ್ಲ ತೋರಿದ ಪ್ರೋತ್ಸಾಹಕ್ಕೂ, ಸಲಹೆಗಳಿಗೂ ನಾ ಆಭಾರಿ. "ಎಷ್ಟೆಲ್ಲ ಬರಿತ್ಯೆ ಮಾರಾಯ್ತಿ, ತಿಂಗಳಿಗೊಂದು ಪೋಸ್ಟ್ ಕೊಡು, ಓದಲು ಟೈಮ್ ಸಾಕಾಗ್ತಾ ಇಲ್ಲೆ" ಅಂತ ಸಲಹೆಯಿತ್ತು ನನ್ನ ಆಳಸಿತನಕ್ಕೆ ಸೊಪ್ಪು ಹಾಕಿದ ಪುಟ್ಟ ತಮ್ಮ ಸುಶ್ರುತನಿಗೂ, "ಎಲ್ಲ ಧರ್ಮಗಳ ಹಬ್ಬಕ್ಕೂ ಲೇಖನ ಕೊಟ್ಟು, ನಮಗೆಲ್ಲ ಅಜೀರ್ಣವಾಗುತ್ತಿದೆ"ಯೆಂದು ನೇರವಾಗಿ ನುಡಿದ mdಯವರಿಗೂ, "ಅನವಶ್ಯಕ ದೀರ್ಘ"ಗಳ ಬಗ್ಗೆ ನಗಿಸುತ್ತ ಸಲಹೆಯಿತ್ತ ಭಾಗವತರಿಗೂ, "ಎನ್ನೊಳಗ ದೀಪ" ಕವನದಲ್ಲಿ ತಪ್ಪಿದ ಕಾಗುಣಿತ ತಿದ್ದಿಸಿದ ಜ್ಯೋತಿ ಅಕ್ಕನಿಗೂ, "ಬೊಗಸೆಯೊಳಗಣ ಭಾವ" ಕವನದ ಸಾಲುಗಳ ತಿದ್ದಲು ಸಲಹೆಯಿತ್ತ proton ಅವರಿಗೂ, ಹೀಗೆಯೇ ಅದೆಷ್ಟೋ ಸಲಹೆಯಿತ್ತ ತಮ್ಮೆಲ್ಲರಿಗೂ ಇಂತದೇ ಇನ್ನಷ್ಟು ನೇರ ಸಲಹೆಗಳನ್ನು ಕೊಡಬೇಕಾಗಿ ಕೇಳಿಕೊಳ್ಳುವ ಜೊತೆ ಧನ್ಯವಾದಗಳನ್ನು ಹೇಳುತ್ತೇನೆ. "ನನ್ನ ಲೇಖನವೊಂದಕ್ಕೆ ನಿನ್ನ ಪಾತ್ರ ಬೇಕಾಗಿದೆ, ತೊಗೊಳ್ಲಾ?" ಎಂದಾಗ "no probs" ಎಂದು "ನಕ್ಕು ಬಿಡು ಒಮ್ಮೆ" ಕಥಾನಕಕೆ ಪಾತ್ರವಾದ ರವಿಗೂ ನನ್ನ ವಂದನೆಗಳು. ಇಷ್ಟೇ ಅಲ್ಲದೆ ಅದೆಷ್ಟೋ ಅನಿಸಿಕೆಗಳನ್ನು ತೆರೆದಿಟ್ಟು ಮನವನ್ನು ಇಲ್ಲೇ ಬಿಟ್ಟು ಹೋದ ನಿಮ್ಮೆಲ್ಲರ ಅಭಿಮಾನಕ್ಕೆ ನನ್ನ ಅನಂತ ವಂದನೆಗಳು. ಅದೆಷ್ಟೋ ಓದುಗ ಮಿತ್ರರು ಅನಿಸಿಕೆ ಹೇಳದಿದ್ದರೂ ನಿಮ್ಮಗಳ ಮನ ಇಲ್ಲಿ ಓಡಾಡಿ ಅಳಿಸದೇ ಇರುವ ಭಾವದ ಛಾಪುಗಳನ್ನು ಹಿಟ್ ಕೌನ್ಟರ್ ಹಿಡಿದಿಟ್ಟುಕೊಂಡಿದೆ. ನಿಮಗೆಲ್ಲರಿಗೂ ನನ್ನ ಧನ್ಯವಾದಗಳು.

ನೀವುಗಳೆಲ್ಲ ನನ್ನ ಬ್ಲಾಗ್ ಗಳಲ್ಲಿ ಬರೆದಂತೆಯೇ ನನ್ನ ಬರವಣಿಗೆಗೆ ಸಂಬಂಧಿಸಿದ ಪತ್ರವೊಂದರ ಖುಷಿ ನಿಮ್ಮೆಲ್ಲರನು ಪುನಃ ಪುನಃ ನೆನಪಿಸುವುದಲ್ಲದೇ ಇದನ್ನು ತಮ್ಮೆಲ್ಲರೊಂದಿಗೆ ಈ ಸಂದರ್ಭದಲ್ಲಿ ಹಂಚಿಕೊಳ್ಳಬೇಕೆನಿಸಿದೆ. ತೇಜಸ್ವಿನಿ ಅವರ ಆ ಮೇಲ್ ಅನ್ನು ನೇರವಾಗಿ ಈ ಲೇಖನದ ನನ್ನೆಲ್ಲ ಓದುಗ ದೊರೆಗಳ ಮುಂದಿಡುತ್ತಿದ್ದೇನೆ.ಅಂತೆಯೇ ಪತ್ರ ಬರೆದ ತೇಜಸ್ವಿನಿಯವರಿಗೆ ನನ್ನ ಧನ್ಯವಾದಗಳು. ಹೊಸವರ್ಷದ ಈ ಹೊಸ ಪತ್ರ ಓದಿ ಯಾಕೋ ಕಣ್ಣಂಚು ಒದ್ದೆ. ಸಾವಿರ ಮೈಲುಗಳಾಚೆಯ ಸ್ನೇಹಕ್ಕೆ ಸೇತುವೆಯಾಗಬಲ್ಲವು ಈ ನನ್ನ ಸಾಲುಗಳು ಎಂಬುದಾಗಿ ಬರೆವಾಗ ನಾ ಯೋಚಿಸಿರಲಿಲ್ಲ.
ಈ ಮುಂದಿನ ಸಾಲುಗಳು ಲೇಖಕಿ ತೇಜಸ್ವಿನಿಯವರು ಬರೆದ ಸಾಲುಗಳು.
ನಿಮ್ಮೆಲ್ಲರ ಹೇಳಿಕೆಗಳಿಗೆ ನಾ ಎಷ್ಟು ಪಾತ್ರಳೋ ಗೊತ್ತಿಲ್ಲ. ಮನಕೆ ತೋಚಿದ್ದನ್ನ ಗೀಚಿಬಿಡುವ ನನ್ನ ಬರವಣಿಗೆಗಳಲ್ಲಿ ತಿರುಳೆಷ್ಟಿದೆಯೋ ಕಾಣೆ. ಇಲ್ಲಿನ ತಪ್ಪುಗಳ ಎಣಿಸಿ ಲೆಕ್ಕವಿಡುವ ಕರಣಿಕನು ಯಾರೋ! ಇಂತಿದ್ದರೂ ಪ್ರೋತ್ಸಾಹಿಸುವ ನಿಮಗೆಲ್ಲ ನಾ ಚಿರಋಣಿ.ಸಿಂಧು ಅವರಿಗೆ, ನನ್ನಮ್ಮನಿಗೆ, ನನಗೆ ಹಾಗೂ ನಿಮ್ಮಲ್ಲರಿಗೆ ಇಷ್ಟವಾದ ಈ ಸಾಲುಗಳನ್ನು ಮಾತ್ರ ನಿಮ್ಮೆಲ್ಲರಿಗಾಗಿ ಹೇಳಬಲ್ಲೆ, ಅದೆಂದರೆ ಕೆ.ಎಸ್.ಎನ್ ಅವರು ಬರೆದ
"ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ"

"ಸಂಕ್ರಾಂತಿಯ ಸಿಹಿ ಬದುಕಿನ ಸವಿಗಳಿಗೆಯ ನಾಳೆಗೆ ನಾಂದಿಯಾಗಲಿ" ಮತ್ತೊಮ್ಮೆ ತಮ್ಮೆಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳನ್ನು ಕೋರುತ್ತಾ,

ಈ ಹಿಂದಿನ ಪ್ರೋತ್ಸಾಹವ ಮುಂದೆಯೂ ತಮ್ಮೆಲ್ಲರಲಿ ಕೇಳಿಕೊಳ್ಳುತ್ತಾ, ತಮ್ಮೆಲ್ಲರಿಗೂ ಮತ್ತೊಮ್ಮೆ ಧನ್ಯವಾದ ಹೇಳುತ್ತಾ, ಬ್ಲಾಗೆಂಬ ಬೊಗಸೆಯೊಳಗೆ ನೀವಿತ್ತ ಪ್ರೋತ್ಸಾಹ-ಪ್ರೀತಿಗಳ ಮನದಲ್ಲಿ ತುಂಬಿಟ್ಟುಕೊಳ್ಳುತ್ತಾ, ತಮ್ಮೆಲ್ಲರ ಪ್ರೋತ್ಸಾಹದ ಭಿಕ್ಷೆಗಾಗಿ ಸದಾ "ಭಿಕ್ಷಾಂದೇಹಿ" ಎನ್ನುವ ನಿಮ್ಮೆಲ್ಲರ
-ಶಾಂತಲಾ ಭಂಡಿ.

January 9, 2008

ನಕ್ಕು ಬಿಡು ಒಮ್ಮೆ (Try to Laugh) ಭಾಗ- 3

ಇವತ್ತೇನೂ ಅಂತ ವಿಷೇಶವಿಲ್ಲ. ಎಂದಿನಂತೆಯೇ ಬೆಳಗು. ಆದರೆ ಇವನಿಲ್ಲದ ಬೆಳಗು. ಹಾಗೆಯೇ ಮಧ್ಯಾಹ್ನವೂ ಮುದುಡಿ ಮರೆಯಾಗುವುದರಲ್ಲಿತ್ತಷ್ಟೆ. ಸದಾ ಚಳಿಗಾಲ ಹೊಂದಿರುವ ಪೋಲ್ಯಾಂಡ್’ನಲ್ಲಿ ಚಳಿ ಕಳೆದು ಇವನು ಬೆಂಗಳೂರಿಗೆ ನಿನ್ನೆ ವಾಪಸ್ಸಾಗಿದ್ದಾನೆ. ನಾಳೆ ಇಲ್ಲಿಗೂ ಬರಲಿದ್ದಾನೆ. ಅಂಥ ಖುಷಿಯಲ್ಲೂ ಒಂದು ತಿಂಗಳಿನಿಂದ ಮುಂಬರುವ ಪರೀಕ್ಷೆಗೆ ಓದುತ್ತಿರುವ ನನಗೆ ಸರಿಯಾಗಿ ನಿದ್ರೆಯಿಲ್ಲದ್ದಕ್ಕೋ, ಮೂರು ದಿನದಿಂದ ಜಾತ್ರೆ ತಿರುಗಿದ್ದಕ್ಕೋ ಅಥವಾ ಸಿರ್ಸಿಯ ಬಿಸಿಲಿಗೋ ಗೊತ್ತಿಲ್ಲ...ಮಧ್ಯಾಹ್ನ ವಿಶ್ರಾಂತಿಗಾಗಿ ಮಲಗಿದವಳಿಗೆ ಏಳಲಾರದ ಜ್ವರ. ಗೊತ್ತಾಗಿದ್ದೇ ಮನೆಮಂದಿಯೆಲ್ಲ ನನ್ನ ಉಪಚಾರದಲ್ಲಿ ತೊಡಗಿದರು. ಇವನು ಊರಲ್ಲಿಲ್ಲದಾಗ ಜ್ವರ ಬಂದಿದ್ದು ಎಲ್ಲರಿಗೆ ನನ್ನ ಮೇಲಿನ ಅನುಕಂಪ ಸ್ವಲ್ಪ ಜಾಸ್ತಿಯೇ ತಂದಿತ್ತಲ್ಲದೇ ಅವರೆಲ್ಲ ಗಾಬರಿಗೊಂಡಿದ್ದರು. ಅಲ್ಲದೇ ನಾಳೆ ಬೆಳಿಗ್ಗೆ ಸಿರ್ಸಿಗೆ ಬರುತ್ತಿರುವ ಇವನೊಡನೆ ನಾಳೆ ಬೆಂಗಳೂರಿಗೆ ಹೊರಡುತ್ತಿದ್ದೇನೆ. "ಈ ಜ್ವರದಲ್ಲಿ ಅದೊಂದು ಸಣ್ ಮಾಣಿನೂ ಕರೆಕೊಂಡು ಹ್ಯಾಂಗೆ ಹೋಗ್ತಾ ಏನ? ನಾಲ್ಕು ದಿನ ಜಾಸ್ತಿ ಇಲ್ಲಿದ್ದು, ಹುಷಾರಾದ್ಮೇಲೆ ಹೋದ್ರೆ ಆಗ್ತಿತ್ತು" ಅತ್ತೆಯ ಕಳಕಳಿ.

"ರವೀ..ಅತ್ಗೆನ ಆಸ್ಪತ್ರೆಗೆ ಕರ್ಕಂಡು ಹೋಗ್ಬತ್ಯನಾ ತಮಾ.." ರವಿಗೆ ಫೋನಾಯಿಸಿದರು ಮಾವ.

ಅರ್ಧ ಗಂಟೆಯಲ್ಲಿ ಮನೆಮುಂದೆ ಬಂದು, ಅತ್ತಿಗೆಯನ್ನು ಕುಳ್ಳಿರಿಸಿಕೊಂಡ ಮೈದುನನ ರಥ ಆಸ್ಪತ್ರೆಗೆ ಹೊರಡಲು ರೆಡಿಯಾಯ್ತು.

ನನಗೋ ಜ್ವರ ನೂರಮೂರು ಡಿಗ್ರೀ ಇರಲಿಕ್ಕೆ ಸಾಕು. ಮೈಯೆಲ್ಲ ಜ್ವರದ ಬಿಸಿಯಿಂದ ಸುಡುವುದು ನನಗೇ ಅರಿವಾಗುತ್ತಲಿತ್ತು. ಅಂತೂ ಇಂತೂ ಒಂದು ಸ್ವೆಟರ್ ಹಾಕಿ ಎದುರಿದ್ದ ಬೆಂಚಿನ ಮೇಲೆ ಕುಳಿತುಕೊಂಡೇ ಕಷ್ಟಪಟ್ಟು ಚಪ್ಪಲಿಯೊಂದನ್ನು ಮೆಟ್ಟಿಕೊಂಡು ರವಿಯ ರಥವನ್ನೇರಿದೆ.

ಮಗನನ್ನು ಚೆನ್ನಾಗಿ ಅರ್ಥೈಸಿಕೊಂಡ ನಮ್ಮತ್ತೆ ಹೇಳಿದರು "ರವಿ..ಸಾವ್ಕಾಶ್ ಗಾಡಿ ಹೊಡಿಯೋ..ಅತ್ಗಿಗೆ ಹುಷಾರ್ ಬೇರೆ ಇಲ್ಲೆ. ತಲೆ ಗಿಲೆ ಸುತ್ತಿ ಬಂದೋಕು...ನಿನ್ಮನೆ ಗಾಡಿ ಹೊಡ್ಯಾಣಕ್ಕೆ...."

ಆ ಗಾಡಿಯೋ ಹೊಸದೇ ಆದರೂ ರವಿಯ ಕೈ ಸೇರಿದ ಮೇಲೆ ಆದ ಅಭ್ಯಾಸ ಬಲದಿಂದ ಸ್ಟಾರ್ಟ್ ಆಗುವಾಗ "ರೊಂಯ್" ಎಂದು ಸ್ಟಾರ್ಟ್ ಆಗಿ, " ರೊಂಯ್...ರೊಂಯ್...ರೊಂಯ್..." ಎಂದು ನಮ್ಮನೆಯ ಮುಂದೆ ಮೂರು ಸಲ ಕೂಗಿಕೊಂಡು ಮುಂದೆ ಹೊರಟಿತು.

ಒಂದುಮಾರು ದೂರವನ್ನು ಕ್ರಮಿಸಿದ್ದೆವು ವಿಮಾನದ ವೇಗದಲ್ಲಿ, ನನಗ್ಯಾಕೋ ತಲೆ ಸುತ್ತಿದಂತಾಗಿ "ರವಿ ಗಾಡಿ ನಿಲ್ಸೂ... ಅಷ್ಟೆಲ್ಲ ಜೋರು ಹೋಗಡ ,ನಂಗೆ ತಲೆ ಸುತ್ತತಾ ಇದ್ದು.." ಅಂತ ರಿಕ್ವೆಸ್ಟ್ ಮಾಡ್ಕೊಂಡೆ ರವಿ ಹತ್ರ. ಅವನು "ಮೀಟ್ರು ನೋಡು ಬೇಕರೆ..ಎಷ್ಟು ಸಾವ್ಕಾಶ ಹೋಗ್ತಾ ಇದ್ದಿ." ಅಂದ. ನನಗೋ ತಲೆಯಲ್ಲಿ ಮೀಟರ್ ತಿರುಗುತ್ತಿರುವಂಥ ಅನುಭವ, ಗಾಡಿಯ ಮೀಟರ್ ನೋಡುವುದು ಆ ಮೇಲಿನ ಕಥೆ.

"ನಂಗೆ ತಲೆ ತಿರಗ್ತಾ ಇದ್ದು, ನೀ ಈಗ ಗಾಡಿ ನಿಲ್ಸ್ದೇ ಇದ್ರೆ ನಾ ಖಂಡಿತ ಈಗ ಗಾಡಿಯಿಂದ ಬೀಳ್ತಿ" ಅಂದೆ ಇದ್ದ ಧ್ವನಿಯನ್ನೆಲ್ಲಾ ಒಟ್ಟುಗೂಡಿಸಿ.
ಅವನು ಗಾಡಿ ನಿಲ್ಸಿ "ಈ ಹೆಣ್ಣುಡ್ರಿಗೆ...ಎಂತರೂ ಒಂಚೂರು ಹುಷಾರಿಲ್ದಿದ್ರೆ ಸಾಕಪಾ...ತಲೆ ತಿರಗಲ್ಲೆ ಶುರುವಾಗೋಗ್ತು...." ಎನ್ನುತ್ತ ಇಡೀ ನಾರೀ ಸಮುದಾಯವನ್ನೆಲ್ಲಾ ಸೇರಿಸಿಕೊಂಡು ಬಯ್ದನಾದರೂ ಗಾಡಿ ನಿಲ್ಲಿಸಿದ.

ಅರೆಕ್ಷಣ ಬಿಟ್ಟು "ಈಗ ಹುಷಾರಾತಾ? ಹೊರಡನ ಈಗ, ನೀನು ಇನ್ನೊಂದ್ಸಲ ತಲೆಸುತ್ತು ಬಂದ್ರೆ ಕಣ್ಣು ಮುಚ್ಗ್ಯಳಡ..ಕಣ್ಣು ಮುಚ್ಗ್ಯಂಡ್ರೆ ಇನ್ನೂ ಜಾಸ್ತಿ ಆಗ್ತು..ಕಣ್ಣು ಬಿಟ್ಗಂಡೇ ಇರು...ಸರಿಯಾ? " ಅಂತ ನಿಧಾನಕ್ಕೆ ಹೇಳಿದನಾದ್ರೂ "ರಾಶೀ ಹೊತ್ತು ಇಲ್ಲೇ ನಿತ್ಗಂಡ್ರೆ ಡಾಕ್ಟ್ರು ಮನಿಗ್ ನಡಿತ್ರು ಕಡಿಗೆ" ಅಂತ ಹೇಳಿ ಜ್ವರ ಬಂದ ನನ್ನ ಹೆದರಿಸಿಬಿಟ್ಟ. ನನಗೂ ಹೌದೆನಿಸಿ "ಸರಿ, ಸಾವ್ಕಾಶ ಹೋಗು ಪ್ಲೀಸ್" ಅಂದೆ.

ಇದೀಗ ಸಿರ್ಸಿಯ ಜಾತ್ರೆ ಜರುಗುತ್ತಿದೆ. ನಿನ್ನೆಯೂ ಸಹ ನಮ್ಮದೊಂದು ದೊಡ್ಡ ಗುಂಪು ಜಾತ್ರೆ ಸುತ್ತಾಡಿದ್ದೆವು. ಎಲ್ಲರೂ ದೊಡ್ದತೊಟ್ಟಿಲು ಹತ್ತಿದ್ರೂ ನಾ ಭಯವಾಗತ್ತೆ ಅಂತ ಹತ್ತಿರ್ಲಿಲ್ಲ. ಕೆಳಗೆ ನಿಂತು ಎಲ್ಲರೂ ಅಲ್ಲಿ ಎಂಜಾಯ್ ಮಾಡಿದ್ದು ನೋಡಿದ್ದೆ ಅಷ್ಟೆ. ಆದ್ರೆ ರವಿ ಅದ್ರಲ್ಲಿ ಕಣ್ಣು ಬಿಟ್ಗೊಂಡು ಒಂದೇ ಕಡೆ ನೋಡ್ತಾ ಯಾಕೆ ಕೂತಿದ್ದ ಅನ್ನೋದು ಈಗ ಅವನು ನನಗೆ ಕೊಟ್ಟ ಸಲಹೆಯಿಂದ ಚೆನ್ನಾಗಿ ಅರ್ಥ ಹೊಳೆದು ಆ ಜ್ವರದಲ್ಲೂ ನಗು ಬಂದ್ಬಿಡ್ತು.

ಸರಿ, ಮತ್ತೊಂದು ಮಾರು ಹೋದವಷ್ಟೆ, ಮತ್ತದೇ ಕತೆ..."ನಿಲ್ಸು " ಅಂದೆ.

"ಸಿಟಿ ಬಸ್ಸಿನ್ ಡ್ರೈವರನ್ ಕತೆ ಆತಲಾ ಯಂದು" ಎಂದನಾದರೂ ಅತ್ತಿಗೆಯ ಮೇಲಿನ ಕಳಕಳಿಗೆ ಗಾಡಿ ನಿಂತಿತು.

ನಂತರ ಮತ್ತೆಲ್ಲೂ ನಿಲ್ಲದೇ ಮುಂದೆ ಸಾಗಿದ ರಥ, ವೇಗದಲ್ಲಿ ಯಾವುದೇ ಮಿತಿಯನ್ನ ಕಾಣದೆ ಸಿ ಪಿ ಬಝಾರ್ ತಲುಪಿತಾದರೂ... ಅಲ್ಲಿ ವೇಗದ ಮಿತಿಯನ್ನು ತಗ್ಗಿಸಲೇ ಬೇಕಾದ ಅನಿವಾರ್ಯತೆಯನ್ನು ಜಾತ್ರೆಯ ಜನ ತಂದೊಡ್ಡಿದ್ದರು. "ಹೋ...ಥತ್...ಥೋ...... ಅದ್ಯಾನಮ್ನಿ ಜ್ಜನ... ಜ್ಜನಾ, ಎಲ್ಲಿಂದ ಬತ್ವಾ ಈ ನಮ್ನಿ ಜನಾ.. ಥೋ." ಎನ್ನುವ ರವಿಯ ಉದ್ಘಾರಗಳ ಜೊತೆ ನಮ್ಮ ದೇಹಸಮತೋಲನದಿಂದಲೇ ಬೀಳದ ಗಾಡಿ ಜನರಿಂದೆಲ್ಲ ತಪ್ಪಿಸಿಕೊಂಡು ದೊಡ್ಡೂರು ಡಾಕ್ಟರ್ ಕ್ಲಿನಿಕ್ ಮುಂದೆ ನಿಂತು ಸಾವರಿಸಿಕೊಂಡಿತು. ಕ್ಲಿನಿಕ್ ಒಳಹೊಕ್ಕ ನಾನು ಸುಸ್ತಾಗಿ ಎರಡು ಗೋಡೆಗಳ ಮೂಲೆಯೊಂದರ ಆಸನವೊಂದನ್ನು ಮೊದಲಾಗಿ ಹಿಡಿದು ಕುಳಿತೆನಾದರೂ ಇನ್ನೂ ರಥದಲ್ಲಿಯೇ ಕುಳಿತವಳಂತೆ ಆ ಕಡೆ ಈ ಕಡೆ ಓಲಾಡುತ್ತಿದ್ದೆ. ಅಷ್ಟರಲ್ಲಿ ನನ್ನ ಮುಖನೋಡಿಯೇ ನನ್ನ ಸ್ಥಿತಿಯನ್ನು ಅರ್ಥೈಸಿಕೊಂಡ ರೆಜಿಸ್ಟ್ರೇಶನ್ ಕೌಂಟರ್ ಅಲ್ಲಿ ಕುಳಿತಾಕೆ ರವಿಯ ಹತ್ತಿರ "ಅಪಾಯಿಂಟ್ ಮೆಂಟ್ ತಗಂಡವ್ರ ನೀವು?" ಅಂತ ಕೇಳಿದರು. ರವಿ "ಇಲ್ಲ" ಅಂದ.

"ಸರಿ ಹಂಗಾದ್ರೆ ಪೇಶಂಟ್ ಹೆಸ್ರೇಳಿ" ಅಂದರು.

"ಸಕುಂತಲಾ" ಅಂತ ಅವನು ಅಭ್ಯಾಸಬಲದಿಂದ ಹೇಳ್ಬಿಟ್ರೆ ಕಷ್ಟ ಅಂತ ಪಟಕ್ಕಂತ ನಾನೇ ನನ್ನ ಹೆಸ್ರು ಹೇಳ್ಬಿಟ್ಟೆ ಅನ್ಸುತ್ತೆ. (ಮೊದಲಿನಿಂದಲೂ ಪರಿಚಯವಿದ್ದುದರಿಂದಲೂ, ನನಗಿಂತಲೂ ದೊಡ್ಡವನಾದ್ದರಿಂದಲೂ , ಅತ್ತಿಗೆಯಾದ ನನ್ನನ್ನು ಹೆಸರಿಡಿದೂ ಕರೆಯಲಾರದೇ "ಅತ್ತಿಗೆ" ಅಂತಲೂ ಕರೆಯಲಾರದೇ ಇರುವ ರವಿಯ ಸಂದಿಗ್ಧತೆ ನನಗಿತ್ತ ಹೊಸ ನಾಮಕರಣವೇ ಈ "ಸಕುಂತಲಾ".)

ವಿಳಾಸ ಮಾತ್ರ ರವೀನೆ ಹೇಳಿದ್ನಾದ್ರೂ ಈ ಕಡೆ ಬಂದ ರವಿ ಅಲವತ್ತುಕೊಂಡ "ನಮ್ಮ ತಲೆಬಿಸಿ ನಮಗೆ..ಇವ್ಕೆ ಹೆಸ್ರು ಬೇರೆ ಹೇಳ್ಕ್ಯೋತ ಕುತ್ಗಳವ್ವು...ಹೆಸ್ರು ನೋಡ್ಕ್ಯಂಡು ಔಷಧಿ ಕೊಡವ್ರಂಗೆ ಮಾಡ್ತ್ವಪ, ಇವ್ಕೇನು ಜ್ವರಗಿರ ಬತ್ತೇ ಇಲ್ಲೆ, ನಮಗೊಂದೆ ಬಪ್ಪವ್ರಂಗೆ ಮಾಡ್ತ್ವಪ " ಅಂತ ಬಯ್ದುದು ಕೇಳಿಸಿತಾದ್ರೂ ನಗೋ ಸ್ಥಿತಿಯಲ್ಲಿ ನಾನು ಇರ್ಲಿಲ್ಲ.

ಸ್ವಲ್ಪ ಹೊತ್ತಾದ್ ಮೇಲೆ ನನ್ನ ಹೆಸರನ್ನ ಕೂಗಿದ್ರು. ಎರಡೇ ನಿಮಿಷದಲ್ಲಿ "ನಮಸ್ಕಾರ"ಎನ್ನುತ್ತ ನಾವು ಡಾಕ್ಟರ್ ಮುಂದೆ ಇದ್ವಿ. ನಮ್ಮನ್ನು ನೋಡಿದವರೇ ವೈದ್ಯರು "ಓ..ಭಂಡಿಮನೆಯನಾ..ಯಾರ ಮಗ ನೀನು?" ಅಂದ್ರು.

ರವಿ ಉತ್ತರಿಸಿದ. "ಅಪ್ಪಯ್ಯ ಎಂತ ಮಾಡ್ತಾ?" ಅಂತ ಡಾಕ್ಟ್ರು ಕೇಳಿದ್ರು.

ನನಗೋ ಭಯ! ರವಿ ಅಭ್ಯಾಸಬಲದಂತೆ ಬಾಯಿತಪ್ಪಿ "ಎಂತ ಬೇಕಾದ್ರೂ ಮಾಡ್ತಾ." ಅಂದುಬಿಟ್ಟರೆ ಅಂತ!

ಅದ್ರೆ ಹಾಗಾಗಲಿಲ್ಲ. ಎಲ್ಲ ಸರಿಯಾದ ನಯನಾಜೂಕಿನ, ಎಳ್ಳಿನಷ್ಟೂ ತಮಾಷೆಯಿರದ ಉತ್ತರಗಳನ್ನು ರವಿ ಕೊಟ್ಟಿದ್ದರಿಂದ ಹೊಸ ವ್ಯಕ್ತಿಯಂತೆ ಭಾಸವಾಗುತ್ತಿದ್ದ.

ಡಾಕ್ಟ್ರೂ ನನ್ನ ಕೇಳಿದ್ರು "ಏನು ಸಮಸ್ಯೆ?" ಅಂತ.

ನಾನು "ಜ್ವರ" ಅಂದೆ.

"ಮತ್ತೇನೇನಾಗ್ತಿದೆ" ಅಂತ ಕೇಳಿದ್ರು.

"ಕಣ್ಣು ನೋವು, ತಲೆ ಭಾರ, ತಲೆಚಕ್ರ, ಇತ್ಯಾದಿ.. ಇತ್ಯಾದಿ.."

ನಾನು ಹೇಳುತ್ತಿರುವಂತೆಯೇ ರವಿ ಡಾಕ್ಟ್ರಿಗೆ ಹೇಳಿದ "ಡಾಕ್ಟ್ರೇ..ನಾಳೆ ಅಣ್ಣಯ್ಯ ಊರಿಗೆ ಬತ್ತಾ ಇದ್ದ, ನಾಳೆ ಸಂಜೆನೇ ಇವೆಲ್ಲ ಬೆಂಗಳೂರಿಗೆ ಹೊರಡವಿದ್ದ, ಸೋ ನಾಳೆ ಹೇಳತನಕ ಹೋಗಿರವ್ವು..ಇರಲ್ಲಾಗ, ಅಂತ ಔಷಧಿ ಕೊಡಿ" ಅಂತ ರವಿ ಗಂಭೀರವಾಗಿ ಹೇಳಿದನಾದರೂ ಆ ಮಾತಿಗೆ ದ್ವಂದ್ವಾರ್ಥವಿದೆಯೆನಿಸಿ ಡಾಕ್ಟ್ರ ಮುಂದೆ ನಗಲಾರದೇ, ಸುಮ್ಮನಿರಲೂ ಆಗದೇ ತುಂಬ ಕಷ್ಟವಾಯಿತು ಆ ಕ್ಷಣ. ಏನೆಂದರೆ ನಾಳೆ ಎನ್ನುವಷ್ಟರಲ್ಲಿ ಹೋಗಬೇಕಾದ್ದು ನಾನೋ ಅಥವ ಜ್ವರವೋ ಒಂದೂ ಅರ್ಥವಾಗಿರಲಿಲ್ಲ!

ಔಷಧ ತೆಗೆದುಕೊಂಡು ಮನೆ ಸೇರುವಾಗ ಸಂಜೆಯ ಸುಗಂಧ ಹರಡಿ ಬಿಸಿಲಿಳಿದಂತೆ ಜಾತ್ರೆಯ ಮೆರುಗು ಏರುತ್ತಲಿತ್ತು. ವಾಪಸ್ಸಾಗುವಾಗಲೂ ನಮ್ಮ ಸಿಟಿ ಬಸ್ಸು ಅಲ್ಲಲ್ಲಿ ನಿಂತಿದ್ದರ ಕಾರಣ ನನ್ನ ತಲೆಸುತ್ತಾಗಿರಲಿಲ್ಲ. ರವಿಯ ದೋಸ್ತರಾಗಲೇ ಪೇಟೆಯ ರಸ್ತೆ ಅಂಚಿನ ಅಂಗಡಿಗಳ ಸಾಲಲ್ಲಿ ಪ್ರತ್ಯಕ್ಷ್ಯರಾಗಿ ನಿಂತಿದ್ದು ರವಿಗೆ ಹಸ್ತಬೀಸುತ್ತಿದ್ದರು. ಕೈ ಮಾಡಿದ ಗೆಳೆಯರೆಲ್ಲರಿಗೂ "ಅತ್ತಿಗೆ ಮನಿಗ್ ಬಿಟ್ಟಿಕ್ ಬತ್ತಿ, ಅತ್ಗೆ ಮನಿಗ್ ಬಿಟ್ಟಿಕ್ ಬತ್ತಿ" ಎನ್ನುತ್ತಾ ಕೈ ಮಾಡುತ್ತಾ ತಲೆಯಾಡಿಸುತ್ತಾ ಹೊರಟ ಸಿಳ್ಳೆಯೊಳಗೆ ಅಭ್ಯಾಸಬಲದಂತೆ ಗುಲಾಮ್ ಅಲಿಯ ಹಾಡುಗಳು ಕೇಳಿ ಬಂದವಾದರೂ ಜವಾಬ್ದಾರಿ ಮುಗಿಸಿ ಜಾತ್ರೆಗೆ ಹೊರಡಲನುವಾಗಿದ್ದ ರವಿ ಖುಷಿಯಲ್ಲಿದ್ದಂತೆ ತೋರಿತು.

ಮನೆಗೆ ಬಂದವಳೇ ಮತ್ತೆ ಮಲಗಿಬಿಟ್ಟೆ. ಅತ್ತೆ ರವಿಗೆ ಹೇಳುತ್ತಿದ್ದರು "ರವೀ..ಅತ್ತಿಗೆಯ ಬೆಂಗಳೂರಿಗೆ ಹೋಪ ಟಿಕೆಟ್ ಕ್ಯಾನ್ಸಲ್ ಮಾಡ್ಸಿಬಿಡ್ತ್ಯನ ತಮಾ... ಈಗ ಪ್ಯಾಟಿಗೆ ಹೋದವ್ನೆಯ. ಇನ್ನು ನಾಲ್ಕು ದಿನ ಬಿಟ್ಟು ಹುಷಾರಾದ್ಮೇಲೆ ನೋಡ." ಅಂತ ಹೇಳುತ್ತಿದ್ದುದ್ದು ಕೇಳಿತ್ತು ಮಾತ್ರ .ಜ್ವರದ ಸುಸ್ತಿಗೋ ಅಥವ ಔಷಧಿಯ ಪ್ರಭಾವವೋ ನಿದ್ರೆ ಆವರಿಸಿತು.

ಬೆಳಗಾಗಿ ಇವತ್ತು ಕಳೆದು ನಾಳೆಯಾಗಿದ್ದೂ ಆಯ್ತು. ಬೆಳಿಗ್ಗೆ ಕಂಡ ಇವನ ಮುಖ ಹಾಗೂ ದೊಡ್ಡೂರು ಡಾಕ್ಟರರ ಕೈಗುಣಗಳೆರಡರ ಪ್ರಭಾವದಿಂದ ಜ್ವರ ಪೂರ್ತಿ ವಾಸಿಯಾಗಿತ್ತು. ಎದ್ದು ಬಂದಾಗ ತಿಂಡಿ ಮೆಲ್ಲುತ್ತ ಇವನು ಕೇಳಿದ "ಇವತ್ತು ಯನ್ನ ಸಂತಿಗೆ ಜಾತ್ರಿಗ್ ಯಾರ್ ಬತ್ತಿ?" ನಾ ಕೈ ಮೇಲೆ ಮಾಡಿಯೇ ಬಿಟ್ಟೆ. ಇವನ ಪಕ್ಕ ಕುಳಿತ ರವಿ ಅಣ್ಣಂಗೆ ಬಯ್ದೇಬಿಟ್ಟ "ಹಂ...ನೀನು ಇವತ್ತು ಸಂಜೆ ತನಕ ಜಾತ್ರೆ ತಿರಗ್ಸಿಕ್ಕೆ ನೀ ಬೆಂಗಳೂರು ಬಸ್ ಹತ್ಬುಡು .. ನಾಳಗಿಂದ ಕೆಲ್ಸನೂ ಬಿಟ್ಬುಡ್ತಿ. ಮನೆಲ್ಲಿ ಇರ್ತಿ ಹ್ಯಂಗಿದ್ರುವ..ಆಸ್ಪತ್ರಿಗೆ ಕರ್ಕಂಢೋಗ್ಬತ್ತಿ..ದೊಡ್ಡೂರು ಡಾಕ್ಟ್ರು ಜಾತ್ರಿಗೆಲ್ಲ ರಜೆ ಹಾಕ್ತ್ರಿಲ್ಲೆ ಹ್ಯಂಗಿದ್ರೂವ." ಎನ್ನುತ್ತ ಕೈ ತೊಳೆಯಲು ಬಚ್ಚಲಮನೆಗೆ ಹೊರಟ ರವಿ ಹೇಳುತ್ತಿದ್ದ. "ನಿನ್ನೆ ನೋಡಿರೆ ಈಗ್ಲಾ ಆಗ್ಲಾ ಕಾಣ್ತಿತ್ತು..ಎಲ್ಲರಿಗೂ ರಾತ್ರೆನೇ ಫೋನ್ ಮಾಡವ್ವನ ಮಾಡ್ಕ್ಯಂಡಿದ್ದಿ .ಇವತ್ತು ಜಾತ್ರಿಗ್ ಹೋಪಂಗೆ ಆಗೋತಲಿ. ಆಗ್ಲಿ ಡಾಕ್ಟ್ರ ಕೈಗುಣ ಭಾರೀ ಚೊಲೋ ಇದ್ದು ಕಾಣ್ತು." ಮನೆಯವರೆಲ್ಲ ಅಡುಗೆ ಮನೆಯಲ್ಲಿ ನಗುತ್ತಿದ್ದರೆ ನನಗೆ ಮಾತ್ರ ಜ್ವರದಿಂದಾಗಿ ತಪ್ಪಿ ಹೋದ ಜಾತ್ರೆ ನೆನೆ ನೆನೆದು ಬೇಜಾರಾಗ್ತಾ ಇತ್ತು. ಇವರು ರವಿಯನ್ನು ಹೀಯಾಳಿಸುತ್ತಿದ್ದರು, "ಅತ್ಗೆನ ಆಸ್ಪತ್ರಿಗೆ ಕರ್ಕಂಡು ಹೋಗ್ಬಂದಿದ್ದಕ್ಕೇ ಹಿಂಗಾಡ್ತೆ. ನಿಂಗೊಂದು ಹೆಂಡ್ತಿ ಬಂದ್ಮೇಲೆ ನೋಡು...ಎಷ್ಟು ಖುಶಿಯಾಗ್ತು ಹೇಳಿ" ಅಂತ. "ಆನು ಡಾಕ್ಟ್ರ ಆಗಿರ ಕೂಸಿನ್ನೇ ಮದ್ವೆಯಾಗ್ಬಿಡ್ತಿ" ಅಂತ ರವಿ ಬಚ್ಚಲು ಮನೆಯಿಂದ ಹೇಳಿದರೆ ಇದೀಗ ಎಲ್ಲರೊಡನೆ ನಗುವ ಪಾಳಿ ನಂದೂ ಆಗಿತ್ತು.

ಆಮೇಲೆ ಜಾತ್ರೆಗೆ ನಾ ಹೋಗಿಬಂದಿದ್ದು ಆ ನಂತರದ ವಿಷಯ. ಆದರೂ ಆಸ್ಪತ್ರೆಗೆ ಬೇರೆಯವರನ್ನು ಕರೆದೊಯ್ದ ಅಭ್ಯಾಸವೇ ಇಲ್ಲದಿದ್ದರೂ ಅತೀ ಕಾಳಜಿಯಿಂದ ಕರೆದೊಯ್ದು, ಇವತ್ತು ಜಾತ್ರೆ ಸುತ್ತಾಡುವಷ್ಟು ಆರೋಗ್ಯ ಹೊಂದಲು ಕಾರಣನಾದ ರವಿಗಾಗಿ ಸಂಜೆ ಬರುವಾಗ ನಾನೂ ಮತ್ತು ನನ್ನವನೂ ಪ್ರೀತಿಯಿಂದ ಒಂದು ಆಟಿಗೆಯನ್ನು ತಂದಿಟ್ಟೆವು. ರವಿ ಜಾತ್ರೆಯಲ್ಲಿ ಸುತ್ತಾಡ ಹೊರಟಾಗೆಲ್ಲ ಅದನ್ನು ಕೊಂಡುಯ್ಯುತ್ತಿದ್ದುದು ನಮಗೆ ತುಂಬ ಖುಷಿ ಕೊಟ್ಟಿತು. ಅದಾವ ಆಟಿಗೆ ಅಂತ ಕೇಳ್ತೀರ..."ಊದಿದ ತಕ್ಷಣ ತಲೆಯೆತ್ತಿ , ಊದಿದ ಹಾಗೆಲ್ಲಾ ಉದ್ದವಾಗುತ್ತ ಹೋಗುವ ಅದ್ಯಾವುದೋ ಹೊಸ ಜಾತಿಯ ಪೀಪಳಿಯಂತೆ".

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

ಖಾಲಿ ಕಣಜ

.