October 17, 2007

ನಕ್ಕು ಬಿಡು ಒಮ್ಮೆ(Try to laugh) ಭಾಗ-2

ಹೀಗೆಯೇ ಒಮ್ಮೆ ಊರಿಗೆ ಹೋದಾಗಿನ ಒಂದು ಸಂಧರ್ಭ. ಅತ್ತೆ ‘ರಂಗೋಲೆ ಇಲ್ಲೆ ಮನೆಯಲ್ಲಿ, ರವಿಗೆ ಪೇಟೆಯಿಂದ ತರಲಿಕ್ಕೆ ಹೇಳು, ಫೋನ್ ಮಾಡು’ ಎಂದರು. ‘ಸರಿ, ಹೆಂಗೂ ಅವನ ಮೊಬೈಲ್ ಇದ್ದಲಾ, ಅದಿಕ್ಕೆ call ಮಾಡ್ತಿ’ ಎಂದು ರವಿಗೊಂದು call ಕೊಟ್ಟೆ, ತಕ್ಷಣ recieve ಮಾಡಿದ್ದು ರಂಗೋಲೆ ಪುಡಿ ಮನೆಗೇ ಬಂದಷ್ಟು ಖುಷಿಯಾಯ್ತು.(ಏಕೆಂದರೆ ನಾನೂ ಆ ದಿನ ಹೊಸ ರಂಗೋಲೆಪುಡಿಯಿಂದ ರಂಗೋಲೆ ಬಿಡಿಸಲು ತುಂಬ ಕಾತುರಳಾಗಿದ್ದೆ.)

ನಾನು:- ರವಿ ,ಎಲ್ಲಿದ್ದೆ ಈಗ?

ರವಿ:- ಇಲ್ಲೆಯಾ

ನಾನು:- ಇಲ್ಲೆಯ ಅಂದ್ರೆ ಎಲ್ಲಿ?

ರವಿ:- ಅದೆಲ್ಲ ಎಂತಕ್ಕೆ ನಿಂಗೆ? ಪುಡಿಸಾಹೇಬರ ಅಂಗಡಿ ಎದ್ರಿಗೆ!

(ಎಲ್ಲೋ ಇದ್ದುಕೊಂಡು ನನ್ನ ಮಾತಿಗೆ ಹೀಗೆಯೇ ತಮಾಷೆಗೆ ಕೊಟ್ಟ ಉತ್ತರವಾಗಿತ್ತು ಅದು! ಅಷ್ಟೊಂದು ವಿಚಾರ ತಲೆಗೆ ಹೋಗದ ನನಗಂತೂ ಗೊತ್ತಾಗಲೇ ಇಲ್ಲ.)
ಇದೆಲ್ಲ ತುಂಬ ಕಾಕತಾಳೀಯವೆನಿಸಿತು, ದೇವರ ವಸ್ತು ಅಲ್ಲವೇ ರಂಗೋಲೆ, ಅದಕ್ಕೇ ನಾ call ಮಾಡುವಾಗ ರವಿ ಕೂಡ ಪುಡಿಸಾಹೇಬರ ಅಂಗಡಿಯ ಎದುರೇ ಇದ್ದಾನೆ ಎಂದೆಲ್ಲ ಅನಿಸಿ,

ನಾನು:-ಆಯಿ ಹೇಳಿದ್ದು, ಅಲ್ಲೇಯಾ ರಂಗೋಲೆಪುಡಿ ತೆಗೆದುಕೊಂಡು ಬರವ್ವಡ. ಕಾಲು ಕಿಲೋ pack ತಗ ಬಾ.

ರವಿ:- ಅಲ್ಲೇಯಾ... ಅಂದ್ರೆ ಆನೀಗ ಪ್ರಶಾಂತನ್ ಮನೆಲ್ಲಿದ್ದಿ, ಅವ್ರ ಮನೆ ದೇವ್ರ ಮುಂದೆ ಇದ್ದಿದ್ದೇ ತರವ್ವಾ?

ನಾನು:-ಅಲ್ಲ, ಪುಡಿಸಾಹೇಬರ ಅಂಗಡಿಯಿಂದ, ನೀ ಅಲ್ಲೇ ಇದ್ದಿ ಅಂದ್ಯಲ್ಲಾ ಮತ್ತೆ!

ರವಿ:-ಹಂ, ತರ್ತಿಬಿಡು.ಮನೆಗ್ ಬರದ್ late ಆಗ್ತು.

ನಾನು:-ಹಂ, ಸರಿ, O.K Bye.

ಆ ಕಡೆಯಿಂದ line cut.


ಮತ್ತೆ ಅರ್ಧ ಗಂಟೆಯಲ್ಲಿ ನನ್ನ mobile ರಿಂಗಣ ಕೇಳಿಸಿ, displayನಲ್ಲಿ ಹೆಸರು ನೋಡಿ, greenbutton press ಮಾಡಿ,

ನಾನು:-ರವಿ, ಹೇಳು

ರವಿ:- ರಂಗೋಲಿಪುಡಿ ಪುಡಿಸಾಹೇಬರ ಅಂಗಡಿಯಲ್ಲಿ ಸಿಗ್ತಿಲ್ಯಡ, ಇಲ್ಲೇ ಎದ್ರಿಗೆ ಉಡುಪಿ ಹೊಟೆಲ್ ಇಂದ ತರ್ಲಾ?

ಮಧ್ಯಾಹ್ನ ಹನ್ನೆರಡು ಗಂಟೆಯ ಸೂರ್ಯ ನನ್ನ ತಲೆಯ ಮೇಲೆಯೇ ಬಂದಂತಾಗಿ, ಕೋಪವನ್ನೆಲ್ಲಾ ಒಳಗೇ ಇಟ್ಟುಕೊಂಡು ನಿಧಾನಕ್ಕೆ ಕೇಳಿದೆ.

ನಾನು:-ಹಳಸಿದ್ದ ನೋಡ್ಕ್ಯಂಡ್ ತಗ ಬಾ.

ರವಿ:-ಹಳಸಿದ್ದೇ ಆಗವ್ವಾ?

ನಾನು:- ಹುಂ...

ರವಿ:-ಅದು urgent ಬೇಕಾಗಿತ್ತಾ?(ನನಗೆ ಕೋಪ ಬಂದಿದ್ದು ಗೊತ್ತಾಗಿರಬೇಕು,ಈಗ ಧ್ವನಿಯಲ್ಲಿ ತಮಾಷೆ ಇರಲಿಲ್ಲ.)

ನಾನು:- ಹೌದು, ನಂಗೆ ಈಗ urgent ಬೇಕಾಗಿತ್ತು.

ರವಿ:-ನೀನೇ ರಂಗೋಲಿ ಬಿಡಿಸ್ತ್ಯಾ?

ನಾನು:-ಹೌದು.

ರವಿ:-ಎಲ್ಲಿ ಬಿಡಸ್ತೆ?

ನಾನು:-ದೇವರ ಮುಂದೆ, ಅಂಗಳದಲ್ಲಿ ಎಲ್ಲಾ ಕಡೆ.

ರವಿ:- ನೋಡು please,ದೇವರ ಮುಂದೆ ಬೇಡ, ಅಂಗಳದಲ್ಲಿ ಬೇಕಾದ್ರೆ ನೀ ಬಿಡಿಸು.(ಆ ಕಡೆಯಿಂದ ಬೇಡಿಕೊಳ್ಳುವ ಧ್ವನಿ)

ನಾನು:- ಎಂತಕ್ಕೆ?

ರವಿ:-ದೇವರ ಮುಂದೆ ನೀ ರಂಗೋಲೆ ಇಡುವ ಜಾಗದಲ್ಲೇ ಸ್ವಲ್ಪ ಮುಂದೆ ಮಾಳಿಗೆ ಬಾಗಿಲಿದ್ದು, ಯಾರಾದ್ರೂ ಬಾಗಿಲಿಂದ ಬಂದವ್ವು ನಿನ್ನ ರಂಗೋಲೆಗೆ ಎಡವಿ ಬಿದ್ರೆ! ರಂಗೊಲೆ ಎಲ್ಲ ಹಾಳಾದ್ರೆ, ಆಗ ನಿಂಗೆ ಬೇಜಾರಾಗ್ತಿಲ್ಯ? so ಅಲ್ಲಿ ಬೇಡ.

ನಾನು:-ಸರಿ (ಅವಸರದಲ್ಲಿ ನನಗೂ ಹೌದು ಅನಿಸಿ ಹೇಳಿದ್ದು.)

ರವಿ:- ಈಗ ಪುಡಿಸಾಹೇಬರ ಅಂಗಡಿ ಬಾಗಿಲು ತೆಗೆದಂಗೆ ಇದ್ದು, ರಂಗೋಲೆಪುಡಿ ಸಿಗ್ತಾ ಕೇಳ್ತಿ ಮತ್ತೊಂದು ಸಲ, ಇದ್ರೆ ತರ್ತಿ,bye.

(ನಾನು ಅಂಗಳದಲ್ಲಿ ಮಾತ್ರ ರಂಗೋಲೆ ಬಿಡುತ್ತೇನೆ ಎಂಬುದನ್ನು ಖಾತ್ರಿ ಮಾಡಿಕೊಂಡು ಹೇಳಿದ್ದೆಂದು ಅನಿಸುತ್ತಿತ್ತು.)

ನಾನು;- O.K, Bye.


ರವಿ ರೇಗಿಸಿದ್ದು ನನ್ನ ರಂಗೋಲೆಯನ್ನ, ಅದರಲ್ಲಿ ಸುಳಿದಾಡುವ(ಎಡವಿ ಬೀಳುವಷ್ಟು) ದಪ್ಪನೆಯ ರಂಗೋಲೆ ಎಳೆಗಳನ್ನ ಎಂಬ ವಿಷಯ ಮನದಟ್ಟಾದರೂ, ನಕ್ಕರೆ ಅತ್ತಿಗೆಯ ಗತ್ತಿಗೆ ಪೆಟ್ಟು ಬೀಳಬಹುದೆಂಬ ವಿಚಾರ ಬಂದು, ಎಲ್ಲರೂ ನಕ್ಕರೂ ನಾನು ನಗಲಿಲ್ಲ ಎಂಬುದು ನಂತರದ ವಿಷಯ.
ನನಗಂತೂ ರಂಗೋಲೆ ಪುಡಿ ಮನೆಗೆ ಬಂದಿದ್ದೇ ಖುಷಿಯಾಗಿತ್ತು.
ಹೀಗೆ ಅತ್ತಿಗೆ ಮೈದುನರ ಸಾಮಾನ್ಯ ಸಂಭಾಷಣೆಗಿಂತ ಇದು ಭಿನ್ನವಾಗಿ ಮನೆಯನ್ನೆಲ್ಲಾ ನಗಿಸಿ, ನಾನು ದಡ್ಡಿಯಾದ ಅದೆಷ್ಟೊ ವಿಷಯಗಳು ಮರೆತು ಹೋಗುವ ಮುನ್ನ ನಿಮ್ಮ ಮುಂದಿರಿಸುವ ಚಿಕ್ಕ ಯತ್ನವಾಗಿ ಕೊನೆಯಾದರೆ, ನಿಮಗೂ ಇಷ್ಟವಾದರೆ ಬರೆದದ್ದು ಸಾರ್ಥಕ ಎಂದುಕೊಳ್ಳುತ್ತೇನೆ.
*************************************************************************************

October 14, 2007

ನಕ್ಕು ಬಿಡು ಒಮ್ಮೆ( Try to laugh) ಭಾಗ- 1
(ನಗು ಬಂದಿಲ್ಲ ಅಂದ್ರೆ ಪಕ್ಕದಲ್ಲಿ ಕೂತ್ಕೊಂಡ್ ಇರೋರ್ ಹತ್ರ ಕಚ್ಗುಳಿ ಇಡಕ್ಕ್ ಹೇಳಿ, ಯಾಕೇಂದ್ರೆ ನಮಗ್ ನಾವೇ ಕಚ್ಗುಳಿ ಇಟ್ಕೊಂಡ್ರೆ ನಗು ಬರುಲ್ಲಾರೀ)
ಮೊನ್ನೆ ಶನಿವಾರ Perthಗೆ call ಮಾಡಿದ್ವಿ. ಮನೆಯವರೆಲ್ಲಾ ಮಾತಾಡಿಯಾದ ಕೊನೆಯಲ್ಲಿ ನಾನು ಮತ್ತು ರವಿಭಂಡಿ( ಸಂಬಂಧದಲ್ಲಿ ನಾನು ರವಿಯವರ ಅಣ್ಣನ ಹೆಂಡತಿ. ಅತ್ತಿಗೆ-ಮೈದುನರಾದರೂ ನಾವಿಬ್ರು friends.) ಪರಸ್ಪರ ಕುಶಲೋಪಚಾರ ವಿಚಾರಿಸಿಕೊಳ್ಳುವ ಹೊತ್ತೂ ಬಂತು. ಆ ಸಂಭಾಷಣೆ ಹೀಗಿದೆ.
ನಾನು:- ರವೀ... ಆರಮಿದ್ಯಾ?
ರವಿಭಂಡಿ:- ಹಂ.. ಈಗ್ ಸ್ವಲ್ಪ ಆರಮಿದ್ದಿ ಹಳ್ಳಿ ಔಷದಿ ತಗತ್ತಾ ಇದ್ದಿ. (ಅವರ ಆರೋಗ್ಯವೇನೂ ಹಾಳಾಗಿಲ್ಲವಾದರೂ ನಾ ಕೇಳಿದ ಪ್ರಶ್ನೆಗೆ ಉತ್ತರ ಬಂತು.) ಯಂಗ್ ಆರಮಾದ್ರೆ ಹೇಳ್ತಿ, ನೀನೂ ಅದನ್ನೆ ತಗಳ್ಲಕ್ಕಡ.(ನಾನೂ ಆರೋಗ್ಯವಾಗಿದ್ದೇನೆ.)

ನಾನು:- ಪಲ್ಲವಿ ಎಂತ ಮಾಡ್ತು?
ರವಿ:- ಅದೂ.. ಎಂತ ಬೇಕಾರೂ ಮಾಡ್ತು!

ಇದು ಆಗದ ಕೆಲಸವೆಂದು ಬೇರೆ ವಿಷಯಕ್ಕೆ ಬಂದೆ.

ನಾನು:- ಇಲ್ಲಂತೂ ಮನೆಯಲ್ಲಿ ಎಲ್ಲಾ ಕಡೆ carpet ಇರ್ತು. ನಂಗಂತೂ ಇಷ್ಟನೇ ಆಗಲ್ಲೆ. ಅಲ್ಲಿ?
ರವಿ:- ಇಲ್ಲೂ ಅಷ್ಟೇಯ, ಮನೆಯಲ್ಲಿ ಎಲ್ಲಾ ಕಡೆ carpet ಇರ್ತು. kitchen ಮತ್ತೆ bathroom ಅಲ್ಲಿ tiles ಇದ್ದು, roadಲ್ಲಿ ಮಾತ್ರ ಡಾಂಬರ್ ಹಾಕಿದ್ದ.

ಹೀಗೆಯೆ ಒಂದಿಷ್ಟು ಮಾತುಗಳು ಮುಗಿದು real estate ವಿಷಯಕ್ಕೆ ಬಂದು ಮುಟ್ಟಿದೆವು.
ರವಿ:- ಪಲ್ಲವಿ ಊರಲ್ಲಿದ್ದಾಗ ಒಬ್ಬ ಹುಡುಗಂಗೆ tution ಹೇಳ್ತಿತ್ತು, ಅದಕ್ಕೆ ಆ ಹುಡುಗಂಗೆ S.S.L.C pass ಮಾಡಲಿಕ್ಕೆ ಆಜಿಲ್ಲೆ. (ಪಕ್ಕದಲ್ಲಿದ್ದ ಪಲ್ಲವಿಯನ್ನು ರೇಗಿಸುವ ಸಲುವಾಗಿ ಹೇಳಿದ್ದು.) ಅದಿಕ್ಕೆ ಆ ಹುಡ್ಗ ಈಗ Bangaluru ಸೇರಿ real estate bussiness ಮಾಡ್ತಾ ಇದ್ದ. ಆ bussiness ಗೇನು ಇಷ್ಟು ಮಾತಾಡಲ್ಲೆ ಬಂದ್ರೆ ಸಾಕು ನೋಡು.....
‘ ಫ಼ುಲ್.... ಗಾಳಿ ಬೆಳಕೂ....., ಟ್ವೆಂಟಿಪೋರ್ ಆವರ್ಸ್ ಕಾ..ವೇರಿ ವಾಟ್ರೂ.......’

ನಾನು:- ರವಿ, ನೀ ಮಾತಾಡಡ ಮಾರಾಯಾ, ಇಂತದೇ ಎಂತಾರೂ ಹೇಳ್ತಾ ಇರ್ತೆ, ಯಂಗೆ ನಗು ತಡ್ಕಳಲ್ಲೆ ಆಗಲ್ಲೆ.
ರವಿ:- ಹಂ...ಮಾತಾಡದ್ ಬಿಡವ್ವು ಮಾಡಿದ್ನಲೇ... ಅದ್ಕೇಯಾ... , ಎಂತಕ್ಕೆ ಹೇಳು? "ಮಾತು ಮೌನ, ಬೆಳ್ಳಿ ಬಂಗಾರ"(ನಿಮಗೂ ಗೊತ್ತಲ್ಲ ಈ ಗಾದೆ ಇರುವುದು ಹೇಗೆಂದು? "ಮಾತು ಬೆಳ್ಳಿ, ಮೌನ ಬಂಗಾರ". ರವಿ ಬಾಯಲ್ಲಿ ಗಾದೆಗಳೆಲ್ಲ ಬರುವ ರೀತಿ ಬೆರೆಯೇ ಆಗಿರುತ್ತದೆ.
ಹೀಗೆ call ಮುಂದುವರೆದಿತ್ತು, ಅದನ್ನೆಲ್ಲ ಮತ್ತೊಮ್ಮೆ time ಇದ್ದಾಗ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದಿದ್ದೇನೆ.

October 10, 2007

ಬೊಗಸೆಯೊಳು ಭಾವ

ನೆನಪ ಹಂದರಕೆ ಮೌನ ಹೊದಿಕೆ
ಬೊಗಸೆ ತುಂಬಾ
ನಿನ್ನಾಳದ ಕನಸ ಬೀಜ
ಉತ್ತುವೆ ಬದುಕ ಬಯಲ
ಬಿತ್ತು ಕನಸಬೀಜಗಳ
ಮೊಳಕೆಯೊಡೆಯಲಿ ಕನಸು
ನನಸ ಗಿಡವಾಗಿ

ಕನಸ ಸಸಿಗಳ ಸುತ್ತಿ ನಿನ್ನಭಯದ ಬೇಲಿ
ಕಾಯ್ದುಕೋ ಪ್ರೀತಿಯೇ ಬದುಕ ಬಯಲನ್ನು!


ಜನಮನದ ಜಂಗುಳಿಯು
ಜೀವಕಣಗಳ ರಾಶಿ
ಜಗದ ಕಡಲೊಳವು
ಕಣವೆರಡೆಯೇನು ತೆರೆ ತೆಕ್ಕೆಯಲ್ಲಿ
ಒಡಲೊಳಗೆ ನಾನು ಆ ದಡವೆ ನೀನು
ಸುಳಿ ಹಾದಿಯಲಿ ತೇಲಿ ನಮ್ಮ ನೌಕೆ!
ಸಾಗಿಸಲು ನಾವಿಕನೇ ಎದೆಯು ಇಹುದೇ?
ತೆರೆ ಬಾರೆ ರೋಷದಲಿ
ಕನಸು ತೆರೆಯಲಿ ಬಿತ್ತಿ
ತೇಲುವುದ ಸಹಿಪ ಚಿತ್ತವೇ
ನಿನಗೊಂದು ಮನಸು ಇದೆಯೇ
ಕನಸು ಕರಗುವ ಕೊನೆಗೆ
ಮಣಿವ ಮನಸಿಗು ಮುನ್ನ
ತೆರೆಯು ತೇಲುವ ತಾಣಕೆ
ಸಾಗಿಸು ಸಹನೆಯೇ ಸಹನೆಯಿದೆಯೆ?

October 9, 2007

ನಿಮ್ಮಲ್ಲಿ ಮತ್ತಷ್ಟು.....

ಸಧ್ಯಕ್ಕೆ ಲಭ್ಯವಿದ್ದ ಆ ದಿನಗಳಲ್ಲಿ ಬರೆದವುಗಳನ್ನು ಮುಚ್ಚುಮರೆಯಿಲ್ಲದೆ ನಿಮ್ಮೆದುರಿಗೆ ತೆರೆದಿಟ್ಟಿದ್ದಾಯ್ತು. ಕಾಲೇಜಿನ ದಿನಗಳಲ್ಲಿ ಬರೆದ ಇನ್ನು ಕೆಲವು ನನ್ನ ಕೈಗೂ ಸಿಗಲಾರದಷ್ಟು ದೂರದಲ್ಲಿದ್ದುದರಿಂದ ನೀವೆಲ್ಲ ಅದನ್ನು ಓದುವ ಸಮಸ್ಯೆಯಿಂದ ಪಾರಾಗಿದ್ದೀರ.
ಇನ್ನು ಮುಂದೆ 2007ರ ನಂತರ ಬರೆದವುಗಳನ್ನು ಬ್ಲಾಗಲ್ಲಿ ತುಂಬುವ ಕಾರ್ಯ ಶುರುವಾಗಲಿದೆ.

‘ಕೊನೆಕೊಯ್ಲು’ಇದನ್ನು" HAVYAKA ASSOCIATION OF AMERICA" ನವರು '2007 SOUVENIR'ನಲ್ಲಿ ಪಬ್ಲಿಶ್ ಮಾಡುವ ಮೊದಲು ನನ್ನ ಹದಿಹರೆಯದ ತೊದಲು ನುಡಿಗಳ ಬರಹಗಳಲ್ಲಿ ಕೆಲವು ಶಿರಸಿಯ "ಧ್ಯೇಯನಿಷ್ಠ ಪತ್ರಕರ್ತ"ದ ಪುಟಗಳಲ್ಲಿ ಕಾಣಿಸಿಕೊಂಡಿದ್ದವು ಎಂಬುದನ್ನು ಬಿಟ್ಟರೆ ಉಳಿದವುಗಳನ್ನು ಬಹಿರಂಗಗೊಳಿಸುವ ಯತ್ನವನ್ನೇ ನಾನು ಮಾಡಿರಲಿಲ್ಲ.I would like to thank Souvenir of HAA and ಧ್ಯೇಯನಿಷ್ಠ ಪತ್ರಕರ್ತ.

ಬ್ಲಾಗ್ ಬರೆಯಲು ಸ್ಫೂರ್ತಿ ನೀಡುವಂತಹ ಪ್ರೋತ್ಸಾಹದಾಯಕ ಮಾತುಗಳನ್ನಾಡಿದ ಎಲ್ಲರಿಗೆ,
ಓದಿದಾಗ ‘ನಾನೂ ಬರೆಯಬೇಕು’ ಎಂಬ ಹುಮ್ಮಸ್ಸು ಕೊಡುವ "ಬರಹ ಬೃಂದಾವನ"ದಲ್ಲಿರುವಂತಹ ಬ್ಲಾಗುಗಳಿಗೆ,
ಹಂಚಿಕೊಳ್ಳುತ್ತಿರುವ ಎಲ್ಲಾ ಓದುಗ ಮಿತ್ರರಿಗೆ ಈ ಬ್ಲಾಗನ್ನು ಸಮರ್ಪಿಸುತ್ತಿದ್ದೇನೆ.
ನಿಮ್ಮೆಲ್ಲರಿಗೆ ಧನ್ಯವಾದ ಅರ್ಪಿಸುತ್ತಾ...

-ಶಾಂತಲಾ ಹೆಗಡೆ.

October 3, 2007

ನಿಮ್ಮೊಳಗೊಂದಿಷ್ಟು.........

ಹೀಗೇ ಸಮಯ ಸಿಕ್ಕಾಗ ಕುಳಿತು ಉತ್ಸಾಹಿ ಬರಹಗಾರ-ಬರಹಗಾರ್ತಿಯರ ಬ್ಲಾಗ್ಸ್ ಓದಿ ಖುಷಿ ಪಡುವಾಗೆಲ್ಲಾ ಅನಿಸಿದ್ದು ನಾನೂ ಕೂಡ ಒಂದು ಬ್ಲಾಗ್ ಕ್ರಿಯೇಟ್ ಮಾಡಿ ನನ್ನ ಬರಹಗಳನ್ನು ಅನ್ನುವುದಕ್ಕಿಂತ, ನಾನು ಗೀಚಿದ್ದನ್ನ ಅದರಲ್ಲಿ ಸುರುವಬೇಕೆಂದು. ಅದಕ್ಕೆ ಮುಹೂರ್ಥ ಸಿಕ್ಕಿದ್ದು ನಿನ್ನೆ ಸಂಜೆ.

ಮೊದಲಿಗೆ ನನ್ನ ಹದಿಹರೆಯದಲ್ಲಿ ಬರೆದ ಅ ಆ ಇ ಈ ಗಳಿಂದ ಪ್ರಾರಂಭಿಸುತ್ತಿದ್ದೇನೆ. ಅವುಗಳೆಲ್ಲಾ ನನ್ನ ಪ್ರಕಾರ ಕವನಗಳು ಎನಿಸಿಕೊಂಡಿದ್ದಂತಹವುಗಳು. ನೀವು ಅವುಗಳನ್ನೋದಿ ಏನೆನ್ನುತ್ತೀರೋ ಗೊತ್ತಿಲ್ಲಾ.....
ಎಷ್ಟೋ ಸಲ ಅವುಗಳನ್ನೋದಿ ನಾನೇ ನನ್ನಳೊಗೆ ನಕ್ಕಿದ್ದಿದೆ. ನಿಮಗೂ ನಗು ಬಂದರೆ ನಕ್ಕು ಬಿಡಿ..... ಈ ರೀತಿಯಲ್ಲಾದರೂ ನಿಮ್ಮನ್ನೆಲ್ಲಾ ನಗಿಸಿದ್ದೇನಲ್ಲಾ ಎಂಬ ಖುಷಿ ನನ್ನ ಪಾಲಿಗಿರಲಿ. ಏಕೆಂದರೆ ನನ್ನ ಕವನಗಳು ‘ಕವನಗಳು’ ಅನ್ನಿಸಿಕೊಳ್ಳುವುದಕ್ಕಿಂತ ‘ಶೈಲಿಯಿರದ ಶಬ್ದಗಳ ಸರ’ ಎನ್ನುವ ಹಾಗಿವೆ.
ಮದುವೆ, ಮನದಿನಿಯ, ಮನೆ, ಮಗ ಇವೆಲ್ಲವನ್ನೂ ಒಟ್ಟಿಗೆ ನಿಭಾಯಿಸುವ ಭರದಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗಿತ್ತೋ, ಇಲ್ಲಾ ಕಳೆದುಕೊಂಡಿದ್ದೆನೋ ಗೊತ್ತಿಲ್ಲಾ.

ಮತ್ತೆ ಮೊದಲಿಗೆ ಮರಳುವ ಮನಸ್ಸಾಗಿದೆ. ಅರಿಯದೇ ಅರಳುವ ಅಕ್ಷರಗಳಿಗೆ ಅರ್ಥವಿಡುವ ಅಳಿಲು ಯತ್ನ ಮಾಡುತ್ತಿದ್ದೇನೆ.
ಸಹೃದಯಿಗಳ ಸಲಹೆಗಳಿಗೆ ಸದಾ ಸ್ವಾಗತ. ‍

- ಶಾಂತಲಾ ಭಂಡಿ.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.