December 19, 2007

ಸಿಂಡರೆಲಾ

ಕಹಿ ಕಾಫಿಯ ಆಳದಲಿ
ಅವಳು ನಕ್ಕು ಸಿಹಿಯಾಗಿ
ನನ್ನೆದೆಯ ಪ್ರೇಮ ಸುಪ್ತವಾಗಿಳಿದು
ಅರಿಯೆನೆಂದಿತು ಹೆಸರ
"ಯಾರೇ ನೀನು ಬೆಳ್ಳಕ್ಕಿ ಮುಗಿಲೇ"
ಪ್ರಶ್ನೆಗೂ ಮುನ್ನ ಹೊರಟೇ ಹೋದಳು
"ಹನ್ನೆರಡಾಯಿತು,ಅವನು ಕಾಯುತ್ತಾನೆ ಬಂದು,
ನಾನಿನ್ನು ಹೊರಡುತ್ತೇನೆ" ಎಂದು
ಉಲಿದವಳು ನಿಲ್ಲಲೇ ಇಲ್ಲ
ಎಲ್ಲವಳೆಂದು ಶೋಧಿಸಲು
ತನ್ನೊಂದು ಚಪ್ಪಲಿಯ
ಸುಳಿವ ಬಿಟ್ಟಿರಲಿಲ್ಲ

ಯಾರಿವಳು?
ಸಂಜೆಬೆಳ್ಳಕ್ಕಿಯ ಹಾದಿಯೆಡೆ ಮೊಗಮಾಡಿ
ನಡೆದಳೋ ಆರಾಧನಾ ದೀಪ್ತಿಯಂತೆ
ನೋಟಕೂ ನೂರರ್ಥ ಹಚ್ಚಿ
ಆಳದೊಳಗೊಂದು ನಗು ಬಿತ್ತಿ
ಮೆಲ್ಲ ಸರಿದವಳು
ಕಣ್ಣೊಳಗಣ ಕವನವಾದವಳು
ನಾಳೆ ಬರುವಳೋ ಹೇಗೆ
ನಗುವ ಮೊಳಕೆಗೆ ನೀರುಣಿಸಲು
ಆ ನನ್ನ ಪ್ರೇಯಸಿ?

December 17, 2007

ಕಾವಲುಗಾರನೇ ಕಳೆದು ಹೋದರೆ......

"ಬಸ್ ಬರ ಹೊತ್ತಾತು ಜಗಳ ನಿಲ್ಸಿ ಬೇಗ ರೆಡಿಯಾಗಿ ಇಬ್ರೂ, ಕಾಲೇಜಿಗೆ ಹೋಗದಿಲ್ಯ?" ಆವತ್ತು ಬೆಳಿಗ್ಗೆ ಅಮ್ಮ ಗೊಣಗಾಡ್ತನೇ ಇದ್ದಳು.

"ಹಂ...ನಿಲ್ಸಿದ್ರೆ ನಾನೇ ನಿಲ್ಸವ್ವು ಜಗಳನ, ಅದು ಎಲ್ಲಿ ಸುಮ್ನಿರ್ತು, ಎನೇ ಅಡ್ಜಸ್ಟ್ ಆಗದಾದ್ರೂ ಆನೇ ಆಗವ್ವು" ಅಂತ ಅಕ್ಕ ಎನಿಸಿಕೊಂಡ ನನ್ನ ಸೋಗು.

"ಬೆಳ್ ಬೆಳಿಗ್ಗೆ ಜಗಳ ಶುರು ಮಾಡ್ದವ್ವು ಯಾರು ಹೇಳು ಅವ್ವೆ.. ಜಗಳ ನಿಲ್ಸವ್ವು" ನನ್ ತಂಗಿ ಸಹನಾ ಅಡ್ಡ ಉತ್ತರ ಕೊಡಲು ಬಲು ಹುಷಾರು.
"ನಿನಗೆ ಯಾವ್ ಗಳಿಗೆಲ್ಲಿ ಸಹನಾ ಅಂತ ಹೆಸರು ಇಟ್ವೇನ ಯಂಗ, ಸಹನೆ ಹೇಳದೆ ಇಲ್ಲೆ ನಿಂಗೆ" ಅಮ್ಮನ ಮಮತೆಯ ಗೊಣಗಾಟ.

ಆಸ್ರಿಗೆ ಕುಡಿತಾ ಇದ್ದಂಗೆ ಬಸ್ ಊರ್ಬಾಗ್ಲಿಗೆ ಬಂದು ನಿಂತು ಹಾರನ್ ಮಾಡೇ ಬಿಡ್ತು. ಸಹನಾ ಇನ್ನೂ "ಬಸ್ ಪಾಸ್ ಎಲ್ಲಿಟ್ಗಂಡಿ?" ಅಂತ ಅಮ್ಮನ್ ಹತ್ರ ರೇಗಾಡ್ತ ಇದ್ಲು. ತಿಂಡಿ ಬಟ್ಟಲು ಅಲ್ಲೆ ಅಪ್ಪನ ಕೈಗೆ ಕೊಟ್ಟು ಕೈ ತೊಳಕೊಂಡು ಬ್ಯಾಗ್ ತೊಗೊಂಡು ಎಲ್ರಿಗೂ ಬಾಯ್ ಹೇಳಿ ನಾ ಓಡೋಗಿ ಬಸ್ ಹತ್ತಿ ಕೂತ್ಕೊಂಡೆ. ಸಹನಂಗೂ ಪಕ್ಕದಲ್ಲಿ ಸೀಟ್ ಹಿಡಿಯಲು ಮನಸ್ಸು ಮರೆಯೋದೇ ಇಲ್ಲ. ಬಸ್ ಹತ್ತಿದ್ ತ್ರಿವೇಣಿ "ಹಾಯ್ ಸಾಧನಾ, ಸಹನಾ ಬರಲ್ಯನೆ ಇವತ್ತು?" ಅಂತ ಕೇಳಿದ್ಳು. ಅಷ್ಟ್ರಲ್ಲೆ ಸಹನಾ ಓಡಿ ಬಂದು ಬಸ್ ಹತ್ತಿ "ಹ್ಹಾ..ಹ್ ..ಯ್ ತ್ರಿವೇಣಿ" ಅಂತ ಓಡೋವಾಗ ಹಿಡಿದ್ಕೊಂಡಿದ್ ಶ್ವಾಸನೆಲ್ಲ ಒಂದೇಸಲಕ್ಕೆ ಉಸಿರಾಡ್ತಾ ನನ್ ಪಕ್ಕಕ್ಕೆ ಕುತ್ಗೊಂಡ್ಲು. ಗಡಿಬಿಡಿಯಲ್ಲಿ ಜಗಳದ್ ಸಿಟ್ಟೆಲ್ಲ ಮಾಯ! "ಬಸ್ ಪಾಸ್ ಅಪ್ಪ ಹುಡ್ಕೊಟ್ಟ, ಫಿಸಿಕ್ಸ್ ನೋಟ್ಸ್ ಸಿಗ್ಲಿಲ್ಲೆ, ಇವತ್ತು ರಫ್’ಬುಕ್ಕಲ್ಲೆ ನೋಟ್ಸ್ ಬರ್ಕಳದೆಯ" ಸಹನಾ ಏನೇನೋ ಹೇಳ್ತಾ ಇದ್ಲು ಟೆನ್ಶನ್ನಲ್ಲಿ.


ಮಾರಿಗುಡಿ ಬರತನಕ ನನ್ನ ಗಂಭೀರತೆ ಮೌನವಾಗಿತ್ತು ಅವಳತ್ತ. ಇನ್ನು ಬಸ್ಟ್ಯಾಂಡ್ ಬಂದ್ರೆ ಬಸ್ ಇಳ್ದು ನಾ ದೊಡ್ ಕಾಲೇಜಿಗೆ ಹೋದ್ರೆ, ಅವಳು ಮಾರಿಕಾಂಬಾ ಕಾಲೇಜು. ನಾ ಸೋಮ್ವಾರದಿಂದ ಶನಿವಾರದ್ ತನಕ ರೂಮಲ್ಲೇ ಇರೋದು. ಅವಳಿಗೆ ಅಪ್ಪ-ಅಮ್ಮನ್ ಹತ್ರ ದಿನಾ ಜಗಳ ಆಡ್ದೇ ಹೋದ್ರೆ ನಿದ್ರೆ ಸುಳಿಯಲ್ವಂತೆ, ಅದಿಕ್ಕೆ ಅವಳು ದಿನ ಮನೆಯಿಂದ ಅಪ್ ಎಂಡ್ ಡೌನ್ . ಇನ್ನು ಇವತ್ತು ಬಸ್ ಇಳಿದ್ರೆ ಈ ಜೋಡಿ ಸಿಗೋದು ಶನಿವಾರ ಸಂಜೆ ಬಸ್’ಅಲ್ಲಿ.

ಮಾರಿಗುಡಿ ಮುಂದೆ ಒಬ್ಬ ಅಜ್ಜ ಹೂವು ಮಾರ್ತಾ ಕುಂತಿದ್ರು. ನಾ ಸಹನಂಗೆ ಹೇಳ್ದೆ ಅವಳನ್ನ ನಗ್ಸೋಕ್ಕೆ ಅಂತ "ಎಂತೆ ಸಹನಾ, ನಿನ್ ಗಂಡನ್ ಬೆಳ್ಬೆಳಿಗ್ಗೆ ಹೂವು ಮಾರ್ಸಕ್ಕೆ ಕೂರ್ಸಿದ್ದೆ ಮಾರಿಗುಡಿ ಮುಂದೆ?" ಅಂದೆ. (ನಿಜವಾಗ್ಲೂ ನಮ್ಮಿಬ್ರಿಗಿನ್ನೂ ಮದ್ವೆ ಆಗಿಲ್ಲ, ನಾನಿನ್ನೂ BSc ಓದ್ತಿದ್ರೆ ಸಹನಾ PUC ಮೊದಲ್ನೇ ವರ್ಷ)
ನಾ ಅವಳ ಗಂಡನ್ನ ನಿನ್ ಗಂಡ ಅಂದ್ರೂ ಅವಳು ಮಾತ್ರ ಅಕ್ಕನ್ ಗಂಡಂಗೆ ಬಾವ ಅಂತನೇ ಹೇಳೋದು. (ನಮ್ಮಿಬ್ಬರ ತಮಾಷೆಗಳಲ್ಲಿ ಆಗಾಗ ಇಣುಕುವ ಗಂಡಂದಿರು ಬಂದುಹೋಗುವುದು ಸಾಮಾನ್ಯವಾದ್ದು.)

"ಹಂ ಆವತ್ತು ನಂಗ್ಳ್ ಕಾಲೇಜ್ ಗಟಾರ್ದಿಂದ ಓಡ್ಸಿದ್ದಿ ಬಾವನ್ನ, ಇವತ್ತು ಮಾರಿಗುಡಿ ಗಟಾರ್ದಲ್ಲಿ ಹೊಳ್ಳಾಡ್ತಾ ಇದ್ದ" ಅಂದ್ಲು ಅಲ್ಲೇ ಗಟಾರದಲಿ ಮೇಯ್ತಿದ್ದ ಹಂದಿನ ತೋರ್ಸಿ.

"ನಿನ್ ಗಂಡ ಹೂ ಮಾರಿದ್ರೂ ನೋಡ್ಲಕ್ಕು, ನಿನ್ನೆ ಸೊಪ್ಪಿನ್ ಹೊರೆ ಹೊತ್ಗ ಬಂದಿದ್ದು ನೋಡಿ ಪಾಪ ಅನ್ಸಿತ್ತು, ಕಾಲಿಗೆ ಚಪ್ಲಿನೂ ಹಾಕಿ ಕಳಿಸಲ್ಯಾ ನೀನೂ, ಪಾಪ ಬರ್ರೇ ಕಾಲಲ್ಲಿ ಸಪ್ಪು ಹೊರ್ತ ಇದ್ದಿದ್ದ." ಅಂದೆ.

"ಹಂ..ಬಾವ ನಮ್ಮನೆ ಮುಂದೆ ನಿತ್ಗಂಡು ಕಾಗ್ದದ್ ಚೂರು, ಹಳೆ ಬಟ್ಟೆ ತಿನ್ನದೆಲ್ಲಾ ನೋಡಕ್ಕಾಗ್ದೆ ಸೊಪ್ಪರೂ ಹಾಕನ ಅಂತ ನಿನ್ನೆ ನನ್ ಗಂಡಂಗೆ ಹೇಳಿ ಸೊಪ್ಪು ತರ್ಸಿದ್ದಿ" ಅಂತ ಸಹನಾ ಹೇಳಿದ ಜೋಕಿಗೆ ಬಸ್’ಸ್ಟ್ಯಾಂಡ್ ಹತ್ರ ಬಸ್ ‘ಗಕ್’ ಅಂತ ನಕ್ಕು ನಿಂತುಬಿಡ್ತು.


ಬಸ್ಸೊಳಗೆ ಹಿಂದೆ ನಿಂತು ಜನ ಎಲ್ಲ ನುಗ್ಗಿ ನುಗ್ಗಿ ಒಟ್ಟಿಗೇ ಇಳಿಯುವುದ ನೋಡುತ್ತಿದ್ದರೆ ಬಸ್ ವಾಂತಿ ಮಾಡುತ್ತಿದ್ದಂತೆ ಅನಿಸಿ ಮೈ ಹೀಕರಿಸಿತು. ಅವಸರವಿರುವರನ್ನು ಮುಂದಕ್ಕೆ ಬಿಟ್ಟು ಹಿಂದೆ ನಿಂತೆ. ಸಹನಾ ಮಾಮೂಲಿನಂತೆ ಎಲ್ಲರ ಮಧ್ಯೆ ನುಗ್ಗಿಸಿಕೊಂಡು ಇಳಿದು ಇನ್ನೂ ಬಸ್ಸಲ್ಲೇ ಇದ್ದ ನನ್ ನೋಡಿ ಬೀಗ್ತಾ ಇದ್ಲು ಏನೋ ಸಾಧಿಸಿದವ್ರಂಗೆ. ಎಲ್ಲರೂ ಇಳಿದಾದ ಮೇಲೆ ನಿಧಾನಕ್ಕೆ ಇಳ್ದು ಸಹನಂಗೆ ಬಾಯ್ ಹೇಳಿ 2ನಂಬರ್ ಬಸ್ ಹತ್ತಿದ್ರೆ ಆ ಬಸ್’ಅಲ್ಲಿ ಕಾಲಿಡಕ್ಕೆ ಜಾಗ ಇಲ್ಲ, ಒಬ್ರು ಕಾಲ್ ಮೆಲೆ ಒಬ್ರು ನಿತ್ಕೊಂಡ್ಬಿಟ್ಟಿದ್ರು.ಅದೇ ಬಸ್ಸೊಳಗೇ ಮರಾಠಿಕೊಪ್ಪ ಸುತ್ಕೊಂಡು ಆದರ್ಶನಗರದಲ್ಲೇ ಇಳ್ದೆ. ಅಬ್ಬಾ! ಉಸರಾಡಕ್ಕೆ ಗಾಳಿ ಸಿಕ್ಕಿದ್ ಮೂಗಿನ ಖುಷಿಗೆ ಎಲ್ಲೆನೇ ಇಲ್ಲ! ’ಬುಸು ಬುಸು’ ನಗ್ತಾ ಇತ್ತು ಮೂಗು. ಒಂದೊಂದ್ಸಲ ಬಸ್ಸಲ್ಲಿ ಸೀಟು ಸಿಕ್ಕು ಸಿರ್ಸಿ ಊರೆಲ್ಲ ಸುತ್ತಿ ಕನ್ಸು ತೋರ್ಸೊ 2ನಂಬರ್ ಬಸ್ಸೇನಾ ಇದು ಅನ್ನೋ ಅಷ್ಟು ಜನ ಇರ್ತಾರಪ್ಪ ಈ ಬೆಳಿಗ್ಗೆ 9ಗಂಟೆ ಟೈಮಲ್ಲಿ ಮಾತ್ರ.


ಬುಧವಾರ ಬೆಳಿಗ್ಗೆ ಸಹನಾ ನನ್ ರೂಮಿಗೆ ಬಂದ್ಬಿಟ್ಟಿದಾಳೆ . ಯಾವಾಗ್ಲೂ ಎಳೆಅಡಿಕೆಸಿಂಗಾರದ ಹಂಗಿರೋ ಅವಳ ಮುಖ ಒಣಗಿರೋ ಹೊಂಬಾಳೆ ಹಂಗಿತ್ತು. "ಏನೇ ಇವತ್ತಿಲ್ಲಿ? ಅಪ್ಪ-ಅಮ್ಮನ್ ಜೊತೆ ಜಗಳಾನಾ?" ಅಂದೆ. "ಅಪ್ಪ ಮನೆಲ್ಲಿದ್ರೆ ತಾನೇ ಜಗಳ ಆಡಕ್ಕೆ" ಅಂದ್ಲು. "ಓ, ಅಷ್ಟೊಂದು ಬ್ಯುಸಿನಾ ಅಪ್ಪ? ಬ್ಯುಸಿನೆಸ್ ಚೆನ್ನಾಗಿ ನಡೀತಾ ಇದ್ದಿಕ್ಕು, ಅದಿಕ್ಕೆ ಮನೆಗೆ ಬರ್ಲಿಲ್ಯನ, ಅಲ್ದಾ?" ಅಂದೆ. "ಬುಸಿನೆಸ್ ಏನೂ ಚೆನಾಗಿಲ್ಲೆ, ಈಗೀಗ ಅಂಗಡಿಯಲ್ಲಿ ದಿವ್ಸಕ್ಕೆ ಒಂದು ಸಿಮೆಂಟ್ ಚೀಲ ಕೂಡ ಹೋಗದು ಕಷ್ಟ ಇತ್ತು, ಅಪ್ಪ ನಮಗೆ ಇದನ್ನೆಲ್ಲ ಹೇಳ್ಲೇ ಇಲ್ಲೆ. ಸಾಲ ಕೊಟ್ಟವ್ವೆಲ್ಲ ಫೋನ್ ಮಾಡದೂ ಅಲ್ದೆ ಮನೆಗೂ ಬರಕ್ಕೆ ಶುರು ಮಾಡಿದ್ಮೇಲೆ ನಂಗೂ ಗೊತ್ತಾಗಿದ್ದು, ಸರಿ ಹೋಗ್ತೆನ ಅಂತ ನಿಂಗೆ ಹೇಳ್ಲಿಲ್ಲೆ ನಾನು. ಸೋಮ್ವಾರ ಮನೆಯಿಂದ ಹೋದ ಅಪ್ಪ ಇನ್ನೂ ಪತ್ತೆ ಇಲ್ಲೆ. " ಅವಳು ಗಂಟಲಿನ ದುಃಖ ಬಾಯಿಗೆ ಬಿಡದೆ ಮೂಗಿಂದ ಹೊರ ಹಾಕ್ತಾ ಇದ್ಲು. ಕಣ್ಣು ಮಾತ್ರ ಮಳೆ ನಿಂತ ನೆಲದಂತಿತ್ತು. " ಯಾರಿಗಾದ್ರೂ ಹೇಳಿದ್ರಾ ಈ ವಿಷ್ಯನಾ? ಅಪ್ಪನ್ನ ಹುಡುಕಿದ್ರಾ ನಿಂಗ?" ಅಂತ ಕೇಳಿದ್ದಕ್ಕೆ " ಕಾಯನ ಇರು, ಅಪ್ಪ ನಮ್ಮನ್ನ ಬಿಟ್ಟಿಕ್ಕೆ ಎಲ್ಲೂ ಹೋಗಲ್ಲೆ, ಬರ್ತ, ಜನಕ್ಕೆಲ್ಲ ವಿಷ್ಯ ಗೊತ್ತಾಗಿ ಗುಲ್ಲು ಮಾಡದ್ ಬೇಡ ಅಂದ್ಲು ಅಮ್ಮ, ಅದಿಕ್ಕೇ... ನಿನ್ನತ್ರ ಬಂದಿ ನಾನು" ನನ್ನ ಸಂತೈಸಕ್ಕೆ ನೋಡ್ತಾ ಇದ್ಲು ಸಹನಾ. "ಕ್ಲಾಸೂ ಬೇಡ ಗೀಸು ಬೇಡ, ಬಾ ಮನೆಗ್ ಹೋಗಿ ಅಮ್ಮನ್ ಜೊತೆ ಅಪ್ಪಂಗಾಗಿ ಕಾಯನ, ಅಪ್ಪನ್ ಬಗ್ಗೆ ನಿಂಗೆ ಇಷ್ಟೇನಾ ಕಾಳ್ಜಿ? ನಿನ್ನೆನೆ ನಂಗೆ ಹೇಳಿದ್ರೆ ಏನಾಗ್ತಿತ್ತು ನಿಂಗೆ?" ಅಂತ ನಾ ಅವಳನ್ನ ಬಯ್ತಾ ಇದ್ರೆ ಅವಳು ಇನ್ನೋನನ್ನೋ ಯೋಚಿಸ್ತಾ ಇದ್ಲು ಅಪ್ಪನಿಗಾಗಿ.


ಮನೆ ಮುಟ್ಟಿದ್ರೆ ಅಮ್ಮ ಹಿತ್ತಲಿನ ಅಂಗಳದಲ್ಲಿ ಚಿಕ್ಕು ಗಿಡ ನೋಡ್ತಾ ನಿಂತಿದ್ರು. "ಅಮಾ..." ಅಂತ ನಾವಿಬ್ರೂ ಕರೆದ್ರೆ ಅಮ್ಮನ ದನಿಯು ಅಪ್ಪನನ್ನ ಹುಡುಕಿ ಹೈರಾಣಾಗಿ ಅಪ್ಪನೊಡನೆ ಕಳೆದು ಹೋದಂತಿತ್ತು. ಮಾತಿನ ಮನೆ ಮೌನದ ಕಾನಾಗಿತ್ತು. ಮುಗಿಯುತ್ತಿದ್ದ ಮಧ್ಯಾಹ್ನವೂ ಯಾರೊಡನೆಯೂ ಮಾತಾಡದೇ ಮುಳುಗಿ ಸಹನೆ ಹೊತ್ತ ಸಂಜೆ ನಮ್ಮನ್ನು ಸಂತೈಸಲು ಬಾರದೆ ಅಮ್ಮ ಮಕ್ಕಳ ಸುಖವನ್ನೆಲ್ಲಾ ಒರೆಸಿ ದುಃಖವನ್ನಷ್ಟು ಎದುರು ಹಾಸಿ ಹೋಯ್ತು. ಅಪ್ಪ ಮನೆಗೆ ಬಂದಿದ್ದರು. ನಮ್ಮ ಮೌನದ ಜೊತೆ ಅವರು ಮಾತಾಡ್ತಾ ಇರ್ಲಿಲ್ಲ. ಸಾಲದೊಳಗೆ ಅಪ್ಪನ ಉಸಿರು ಮುಳುಗಿ ಅವರ ಉಸಿರು ಉಸಿರಾಡುತ್ತಲೇ ಇರಲಿಲ್ಲ. ನೂರು ಕಣ್ಣುಗಳು ನಮ್ಮನ್ನು ಸಂತೈಸಿದರೂ ಕಣ್ಣೀರು ಆರಲೇ ಇಲ್ಲ. ನಮ್ಮ ಕಣ್ಣೀರ ಒರೆಸಲು ಮುಂದೆ ಅಪ್ಪ ಇರಲೇ ಇಲ್ಲ. ಅಪ್ಪನಿಗಾಗಿ ಕಾಯುತ್ತಿದ್ದವರು ಸದಾ ಅಪ್ಪನಿಗಾಗಿ ಕಾಯುವಂತೆ ಬಾಯ್ ಹೇಳದೆಲೆ, ಬೀಳ್ಕೊಡುಗೆಯಿಲ್ಲದೆಲೆ ಅಪ್ಪ ಗಾಳಿಯಂತೆ ಸುಳಿವಿಲ್ಲದೆ ನಡೆದಿದ್ದರು.

ಎಲ್ಲವೂ ಮುಗಿದು ಮನೆ ಮತ್ತೂ ಶಾಂತ. ಈಗ ನಾವಿಬ್ಬರು ಮನೆಯಲ್ಲಿ ಜಗಳಾಡೋದಿಲ್ಲ. ಸಹನಾ ನನ್ ದುಃಖವನ್ನ ಅರ್ಧ ಹಂಚಿಕೊಂಡುಬಿಡ್ತಾಳೆ. ಅಮ್ಮ ಜೀವ ಹೊತ್ತ ದೇಹದಂತೆ ಇರ್ತಾಳೆ. ಅಮ್ಮನ ಮಾತು ಅಪ್ಪನ ದೇಹದೊಂದಿಗೆ ಸಹಗಮನವಾಗಿ ಹೋಗಿದೆ.


ದಿನಾ ನಮ್ಮಿಬ್ಬರನ್ನು ಹೊತ್ತ ಬಸ್ ಮಾರೀಗುಡಿ ಮುಂದೆ ನಿಂತರೆ ಆ ಅಜ್ಜ ಹೊಸ ಹೂವ ಮಾರ್ತಾನೇ ಇರ್ತಾನೆ. ಆ ಮೋರಿಯ ಹಂದಿ ಒಂದೊಂದು ದಿನ ಇರುತ್ತೆ, ಒಂದೊಂದು ದಿನ ಇರೋಲ್ಲ. ಆದ್ರೆ ನಾವಿಬ್ರು ಈಗ ಗಂಡಂದಿರ ಬಗ್ಗೆ ಮಾತಾಡಲ್ಲ.
ದಿನಾ ಸಂಜೆ ನಾನೂ ಮನೆಗ್ ಬರ್ತೀನಿ, ಅಪ್ಪ-ಅಮ್ಮನ್ ಜೊತೆ ಜಗಳ ಆಡಕ್ಕಂತೂ ಅಲ್ಲ. ನಾನು ಸಹನಳಿಗೆ ಅಪ್ಪ ಆಗ್ಬೇಕಾಗಿದೆ. ಸಹನಾ ನಂಗೆ ಮಗಳು, ಗೆಳತಿ ಎಲ್ಲ..ಎಲ್ಲ...ಅವಳೆಂಬ ಭಾವನೆ. ಸಹನಾ ’ಸಹನಾ’ ಆಗ್ಬಿಟ್ಟಿದ್ದಾಳೆ. ಅಂದ್ಮೇಲೆ ಸಾಧನಾ ಸಾಧನೆಯತ್ತ ಯೋಚಿಸ್ಬೇಕಷ್ಟೆ!
ಸಹನಳ ಬೆಲೆ ನಂಗೆ ಗೊತ್ತಾಗಿದೆ. ರಕ್ತ ಹಂಚ್ಕೊಂಡವ್ಳು ಒಬ್ಳು ಇದ್ದಿದ್ದಕ್ಕೆ ನನ್ನ ರಕ್ತ ಸಲೀಸಾಗಿ ನನ್ನಮೈಯಲ್ಲೇ ಹರೀತಿದೆ ಅನಿಸ್ತಿದೆ.

ನಾನೂ ದಿನಾ ಮನೆಗೆ ಬರೋದೀಗ ಅಮ್ಮನ್ ಕಣ್ಣೀರು ಹೊರಗೆ ಹರಿದ ದಿನ ಅದನ್ನು ಒರೆಸೋಕೆ. ಸಹನಾ ಕೂಡ ಸಹನೆಯಿಂದ ಅದಕ್ಕಾಗಿ ನನ್ನೊಡನೆ ಕಾಯ್ತಾನೇ ಇದಾಳೆ. ನಮ್ಮಿಬ್ರಿಗೂ ಗೊತ್ತು ಅಮ್ಮನ ಕಣ್ಣೀರು ಹರಿದ ದಿನ ಅಮ್ಮ ಖಂಡಿತ ನಗ್ತಾಳೆ, ನಮ್ಮೊಡನೆ ಮಾತಾಡ್ತಾಳೆ ಅಂತ. ಅಮ್ಮ ಅಳುವುದಕ್ಕಾಗಿ ಅಪ್ಪನ ಬರ ಹಾಯ್ತಾ ಇದಾಳೆ. ಯಾವತ್ತೂ ಎಲ್ಲರ ಕಣ್ಣೊರೆಸಿದ ಅಪ್ಪಂಗಾಗಿ ಅಮ್ಮ ಕಾಯ್ತಾ ಇದ್ದಾಳೆ. ಅಮ್ಮನ ಕಣ್ಣೀರಿನ ಕಾವಲುಗಾರರಂತೆ ನಾವಿಬ್ಬರು. ಇನ್ನೆಷ್ಟು ದಿನ ನಿಂತಿರಬೇಕೆಂದು ಯೋಚಿಸುತ್ತಾ, ಅಮ್ಮನ ನಗುವಿಗಾಗಿ ಕಾಯುತ್ತಾ. ಅಮ್ಮನ ಕಣ್ಣುಗಳು ಮಾತ್ರ ಮನೆ ಮುಂದೆ ಬಣ್ಣ ಕಳೆದುಕೊಳ್ಳುತ್ತಾ, ಬಿಸಿಲು, ಮಳೆ ಗಾಳಿಗೆ ಸ್ಪಂಧಿಸುತ್ತಾ ಸೋಲುತ್ತಿರುವ ಅಪ್ಪನ ಬೈಕ್ ಧೂಳನ್ನು ಒಂದಿನ ಬಿಡದೇ ಒರೆಸುತ್ತದೆ. ಎಳೆಯ ನಾಲ್ಕು ಕಣ್ಣುಗಳು ಸವಾರನಾಗಿ ಬಾರದ ಅಪ್ಪನ ಹಾದಿಯಲ್ಲಿ ಅಪ್ಪನಿಗಾಗಿ ಅರಸುತ್ತಾ ಬಸ್ ಹತ್ತುತ್ತಿವೆ.

ದಿನಾ ಸಂಜೆ ಮನೆಗೆ ಬಂದ್ರೆ ಜಗುಲಿಯ ಗೋಡೆಯಲ್ಲಿ ಅಜ್ಜನ ಪಕ್ಕದಲ್ಲಿ ಅಪ್ಪ ಎತ್ತರಕ್ಕೆ ನಗ್ತಾ ಇದ್ರೆ ಎದುರು ಗೋಡೆಗೆ ಸಾತು ಕುಳಿತ ಅಮ್ಮ ಅಳೋದಿಲ್ಲ.
ಒಮ್ಮೊಮ್ಮೆ ಕರೆಂಟ್ ಇಲ್ಲದ ಸಂಜೆಗಳಲ್ಲಿ ಲಾಟೀನ್ ಹಚ್ಚಿಟ್ಟು ನಮ್ಮಿಬ್ಬರ ಮುಖವನ್ನು ದಿಟ್ಟಿಸುತ್ತಾಳೆ. ಬದುಕಲ್ಲಿ ತೀರ ಕತ್ತಲು ಬಂದುಬಿಟ್ಟರೆ ಲಾಟೀನಾಗಿ ನಾನಿದ್ದೇನೆ ನಿಮ್ಮಗಳ ಜೊತೆ ಎನ್ನುವವಳಂತೆ.

ಎಂದಿನಂತೆ ಬೆಳಗಿನ ಬಸ್ ಬರುತ್ತೆ. ತಿಂಡಿ ತಿನ್ನುವ ನನ್ನ ಕೈ ಅಪ್ಪನಿಗಾಗಿ ಹುಡುಕೋದಿಲ್ಲ. ಮನದೊಳಕ್ಕೆ ಅಪ್ಪನನ್ನು ಹತ್ತಿಸಿಕೊಂಡ ನಾನು ಬಸ್ ಹತ್ತುತ್ತೇನೆ. ನನ್ನ ಗಾಂಭೀರ್ಯ ಇನ್ನೂ ಗಂಭೀರವಾಗಿಬಿಟ್ಟಿದೆ. ಆದ್ರೆ ಸಹನಳ ಬಸ್’ಪಾಸ್ ಕಳೆಯೋದಿಲ್ಲ ಈಗ ಮೊದಲಿನ ಹಾಗೆ. ಸಹನಾ ಶಿಸ್ತಿನಂತೆ ಕಾಣುತ್ತಾಳೆ. ಅವಳ ವಸ್ತುಗಳನ್ನೀಗ ಕಳ್ಕೊಳ್ಳೊದಿಲ್ಲ, ಯಾಕಂದ್ರೆ ಕಳ್ಕೊಂಡಿದ್ದನ್ನ ಹುಡುಕ್ಕೊಡವ್ರು ಯಾರೂ ಇಲ್ಲ. ಕೆಲವೊಮ್ಮೆ ಕಳೆದು ಹೋದವುಗಳು ಹುಡುಕಿದರೆ ಮತ್ತೆ ಸಿಗೋಲ್ಲಾ ಅಂತವಳಿಗೆ ಅರಿಕೆಯಾಗಿದೆ.

December 5, 2007

ಬೆಳದಿಂಗಳಾಯ್ತು ನೋಡಾ ಬೆಳಕಿನ ಹಬ್ಬ

ಬಿಸಿಲಿಲ್ಲದೆ ಬಿಸಿಲ ಕಂಪನ್ನಷ್ಟೆ ಹೊಮ್ಮಿಸಿದ್ದ ಸುಂದರ ಮಧ್ಯಾಹ್ನಕ್ಕೆ ಸಂಜೆಯ ನವಿರು ನೆರೆಯುತ್ತಲಿತ್ತು. ಸಂಜೆ ಆವರಿಸುತ್ತಿದ್ದ ಐದು ಗಂಟೆಯ ಸಮಯ.(ಶನಿವಾರ , December 1, 5:00PM) Californiaದ Sunnyvale Cityಯ Fairoaks Parkನ Community Centre ಹೊಕ್ಕುತ್ತಿದ್ದಂತೆ ನವವಸ್ತ್ರ(ಭಾರತೀಯ ಉಡುಗೆ) ಧರಿಸಿದ ವ್ಯಕ್ತಿಗಳು Parkನ ಆವರಣದಲ್ಲಿ ಸಂಭ್ರಮದಿಂದ ತಮ್ಮ Car ಹೊತ್ತು ತಂದಿದ್ದ ಸಾಮಾನು ಸರಂಜಾಮುಗಳನ್ನು Community Centre ಒಳಗಡೆ ಸಾಗಿಸುತ್ತಿದ್ದುದು ಸಂಭ್ರಮದ ಸುವಾಸನೆಯ ಸ್ವಾಗತ ಸೂಸುತ್ತಿತ್ತು. ಒಳಗಡಿ ಇಡುವ ಮೊದಲು ಕಾರ್ಯಕ್ರಮ ನಡೆಯಲಿದ್ದ Hallನ ಸುತ್ತಲೂ ದೇವೀಪಾದ, ಕಳಶ, ಸ್ವಸ್ತಿಕ್, ದೀಪಾಲಂಕಾರದ ರಂಗೋಲೆ ಚಿತ್ತಾರಗಳು ಅತಿಥಿಗಳನ್ನೆಲ್ಲಾ ಸ್ವಾಗತಿಸಿ ಒಳಬಿಟ್ಟವು. ಒಳ ಹೊಕ್ಕರೆ ಬೃಹತ್ ಅವಿಭಕ್ತ ಹವ್ಯಕ ಕುಟುಂಬದ ನೂರೈವತ್ತಕ್ಕೂ ಮೀರಿದ ಸದಸ್ಯರೆಲ್ಲಾ ಒಬ್ಬೊಬ್ಬರೂ ಒಂದೊಂದು ಕಾರ್ಯದಲ್ಲಿ ನಿರತರಾಗಿದ್ದು ಕುಟುಂಬದ ಒಗ್ಗಟ್ಟಿಗೆ ಮಾದರಿಯಾಗಿತ್ತು. ರಂಗುರಂಗಿನ ಹೊಸಬಟ್ಟೆ ತೊಟ್ಟ ಎಲ್ಲ ವದನಗಳಲ್ಲಿಯೂ ದೀಪಾವಳಿಯ ರಂಗು ಹೊರಹೊಮ್ಮುತ್ತಿತ್ತು. ಹಚ್ಚಿಟ್ಟ ಹಣತೆಗಳಂತೆ ಮಕ್ಕಳೆಲ್ಲ ಕುಳಿತಲ್ಲೆ ಕುಣಿಯುತ್ತ ಖುಷಿಯಲ್ಲಿದ್ದರು. ಹಬ್ಬಕ್ಕೆ ಇನ್ನಷ್ಟು ರಂಗು ಭರಿಸುವ ಸಲುವಾಗಿ ಮಕ್ಕಳಿಗೆಲ್ಲಾ ಬಿಳಿ ಹಾಳೆಯ ಮೇಲಿನ ಚಿತ್ರಕ್ಕೆ ಬಣ್ಣಬಳಿಯುವ ಕೆಲಸ ನೀಡಿ ಕಾರ್ಯನಿರತರಾಗುವಂತೆ ಮಾಡಲಾಗಿದ್ದರಿಂದ ಚಿಣ್ಣರೆಲ್ಲಾ ಮುದದಿಂದ ಬಣ್ಣದ ಲೋಕದಲ್ಲಿ ವಿಹರಿಸುತ್ತಿದ್ದರು.

ಎದುರಿಗಿನ ಭಿತ್ತಿಯ ಮಧ್ಯದಲ್ಲಿ ಅಕ್ಕಿ, ರವಾ, ಬಿಳಿ ಮತ್ತು ಕಪ್ಪು ಎಳ್ಳು, ಸಬ್ಬಕ್ಕಿ, ಹೆಸರುಬೇಳೆ, ಹೆಸರುಕಾಳು, ಮೆಂತ್ಯದಕಾಳುಗಳಿಂದ ಉದ್ಭವಳಾದ ಶ್ರೀಲಕ್ಷ್ಮಿದೇವಿಯು ಶ್ರೀಮತಿ ಮೀರಾ ಹೆಗಡೆಯವರ ಹಸ್ತದಿಂದ ಉದಯಿಸಿದ್ದು, ಕಬ್ಬಿನಗಿಡಗಳ ನಡುವೆ ಸರ್ವರನ್ನೂ ಆಶೀರ್ವದಿಸುತ್ತಾ ಎಲ್ಲರ ಕಣ್ಮನ ಸೆಳೆಯುತ್ತ ನಗುತ್ತಲಿದ್ದಳು. ದೇವಿಯ ಸುತ್ತ ನೀರಿನಲ್ಲಿ ಈಜುತ್ತಿದ್ದ ದೀಪಗಳು ಎಲ್ಲರ ನಯನಗಳಲ್ಲಿ ಹೊಳೆದು ಸುತ್ತ ದೀಪಾವಳಿಯ ಬೆಳಕನ್ನು ಬೀರಿದವು. ಈ ಎಲ್ಲ ದೀಪಗಳ ಸುತ್ತ ನಲಿಯುತ್ತಿದ್ದ ಬಣ್ಣದ ರಂಗೋಲೆ ಹಬ್ಬಕ್ಕೆ ಕಳೆಯಾಗಿತ್ತು.
ಶ್ರೀ ಶಿವರಾಮ ಭಟ್’ರವರು ಪುರೋಹಿತರಾಗಿ "ನಮಸ್ತೇಸ್ತು ಮಹಮಾಯೇ ಶ್ರೀಪೀಠೇ ಸುರಪೂಜಿತೆ" ಎಂದು ದೇವಿಯನ್ನು ಮಂತ್ರ-ಶ್ಲೋಕಾದಿಗಳಿಂದ ಪೂಜಿಸಿದಾಗ ಬಾಂಧವರೆಲ್ಲಾ ಭಕ್ತಾದಿಗಳಾಗಿ ಕರಮುಗಿದು ನಿಂತರು. ‘ಸ್ವಾಮಿ ದೇವನೆ ಲೋಕಪಾಲನೇ’ ಎಂಬುದಾಗಿ ಭಜಿಸಿದ ಮಾತೆಯರ ಕಂಠಗಳಿಗೆ ಬಾಂಧವರೆಲ್ಲರೂ ಧ್ವನಿಯಾಗಿ ಭಜಿಸಿ ಕೊನೆಯಲ್ಲಿ ‘ರಾಮ.. ರಾಮಾ..ಎನ್ನಿರೋ...’ ಎಂಬ ಭಜನೆಯಲ್ಲಿ ರಾಮನನ್ನು ನೆನೆದು ಭಜನೆ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದರು.

ಅಧ್ಯಕ್ಷ ಶ್ರೀ ವಿಶ್ವನಾಥ ಹೆಗಡೆಯವರು ದೀಪಾವಳಿಯನ್ನು ಆಚರಿಸಲು ಆಗಮಿಸಿದ ಹವ್ಯಕ ಬಾಂಧವರಿಗೆಲ್ಲಾ ಅತಿಥೇಯ "ದಿವ್ಯಜ್ಯೋತಿ" ಬಳಗದ ಪರವಾಗಿ ಆದರದ ಸ್ವಾಗತ ಕೋರಿದ್ದಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು. ನಂತರ ಶ್ರೀ ಗಿರೀಶ ಹೆಗಡೆಯವರ ನಿರ್ವಹಣೆಯಲ್ಲಿ ಚಿಗುರಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ "ದಿವ್ಯಜ್ಯೋತಿ" ಬಳಗದ ಸಪ್ತಜ್ಯೋತಿಯರು ‘ದೇವೀ.. ಭಾಗ್ಯದಾತೆ’ಎನ್ನುತ್ತ ದೇವಿಯನ್ನು ಸ್ತುತಿಸಿದ ಮರುಕ್ಷಣದಲ್ಲಿ ತೇಲಿಬಂದ ಅದೇ ಬಳಗದ ಚಿಣ್ಣಾರಿಗಳ ಸಪ್ತಸ್ವರಗಳು ಒಂದಾಗಿ ‘ಜ್ಯೋತಿ ಬೆಳಗುತಿದೇ..’ಎಂದು ಹಾಡಿದ ಬೆಳಕಿನ ಹಾಡನ್ನು ಆಲಿಸುತ್ತಾ ಪುಟಾಣಿಗಳೆಲ್ಲಾ ಬಣ್ಣದ ಲೋಕದಿಂದಿಳಿದು ಬಂದು ತಮ್ಮ ತಾಯ್ತಂದೆಯರ ಸಮ್ಮುಖದಲ್ಲಿ ದೇವಿಯ ಮುಂದೆ ಒಬ್ಬೊಬ್ಬರಾಗಿ ಜ್ಯೋತಿ ಬೆಳಗಿಸಿದಾಗ ನೂರು ದೀಪಗಳೆಲ್ಲಾ ಒಂದಾಗಿ ಉಜ್ವಲ ಬೆಳಕ ಚೆಲ್ಲಿದವು.
ಚಂದನ್, ಶ್ರೇಯ, ಐಶ್ವರ್ಯ, ಸ್ನೇಹ, ಅನಿಶಾರೆಂಬ ಪಂಚ ಪುಟಾಣಿಗಳು ಅಧ್ಬುತವಾಗಿ ಮುದ್ದುಮಾತುಗಳಲ್ಲಿ ದೀಪಾವಳಿಯ ಬಗ್ಗೆ ಮಾಹಿತಿ ನೀಡುವಾಗ ಬಾಂಧವರೆಲ್ಲಾ ಮೂಕರಾಗಿ ಕರ್ಣಗಳಿಗೆ ಕೆಲಸ ಕೊಟ್ಟರು. ಕೃತಿಕಾ ಹಾಗೂ ಪ್ರಕೃತಿಯರು ನರ್ತಿಸಿದ ಭರತನಾಟ್ಯ ಹಾಗೂ ಕಥಕ್ ಶೈಲಿಯ ನಾಟ್ಯವು ನೋಡುಗರ ಕಣ್ಮನ ಸೆಳೆಯಿತು. ‘ಬಾರಾ..ಬಾರಾ..’ ಎಂಬ ಹಾಡಿಗೆ ಚಿಕ್ಕದಾದ ರಂಗಸ್ಥಳಕ್ಕೆ ಹೊಂದಿಕೊಂಡು ಹೆಜ್ಜೆಹಾಕಿದ ಈ ಪುಟಾಣಿಗಳ ನೃತ್ಯ ಪ್ರಶಂಸನೀಯ. ಪ್ರಣವ್, ಅಂಜಲಿ, ವಿಕಾಸ್’ರ ನೇತೃತ್ವದಲ್ಲಿ ರಸಪ್ರಶ್ನೆ ಕಾರ್ಯಕ್ರಮ ರಸವತ್ತಾಗಿ ಮೂಡುತ್ತಿದ್ದಂತೆ ಇತ್ತ ಅತಿಥೇಯ ಗೃಹಿಣಿಯರಿಂದ ಭೋಜನದ ಸಿದ್ಧತೆ ನಡೆದಿತ್ತು. ಬೆಳಕಿನ ಹಬ್ಬದಲ್ಲಿ ಉಪಸ್ಥಿತರಿದ್ದ ಎಲ್ಲ ಮಾತೆಯರ ರುಚಿ ರುಚಿಯ, ವಿಧವಿಧದ ಭಕ್ಷ್ಯಗಳು ಅಂಗಿತೊಟ್ಟ ಮೇಜನ್ನು ರಂಗಾಗಿ ಶೃಂಗರಿಸಿದ್ದವು. ಅನ್ನಪೂರ್ಣೆಯರ ಕೈಗಳು ಅಕ್ಕಿ ತೊಳೆಯುತ್ತಿದ್ದರೆ, ಕಣ್ಣುಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ಅವಲೋಕಿಸಿದವು.
ಇತ್ತ ಅಂಜಲಿ, ಅನನ್ಯ, ಪ್ರಕೃತಿ, ಕೃತಿಕಾರವರು ಪ್ರೇಕ್ಷಕರ ಕಣ್ಮನ ಸೆಳೆಯುತ್ತ ಹಿಮಾಚಲಪ್ರದೇಶಕ್ಕೆ ಕರೆದೊಯ್ಯುತ್ತಿದ್ದಂತೆ ಇತ್ತ ಮಲ್ಲಿಗೆಯ ಅನ್ನ ಬೆಳ್ಳನೆಯ ನಗೆಸೂಸಿ ಅರಳುತ್ತಲಿತ್ತು .ಅಂಕಿತಳ ಚಂದದ ತೊಂಡೆಕಾಯಿ-ಬೆಂಡೆಕಾಯಿಯ ಹಾಡನ್ನಾಲಿಸಿದ ಹಿಂದೆಯೇ ‘ಸೊಂಟದ ಮೇಲೆ ಕೈಯಿಟ್ಟುಕೊಂಡು’ ಎಂಬ ಹಾಡಿಗೆ ಜನಪದ ಮತ್ತು ಪಾಶ್ಚಾತ್ಯಗಳೆರಡೂ ಮಿಶ್ರಗೊಂಡ ಶೈಲಿಯಲ್ಲಿ ಐಶ್ವರ್ಯ ಮತ್ತು ಶ್ರೇಯ ಎಲ್ಲರೂ ಮೂಗಿನ ಮೇಲೆ ಬೆರೆಳಿಟ್ಟುಕೊಳ್ಳುವಂತೆ ನರ್ತಿಸಿ ಮುಗಿಸಿದಾಗ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿದಾಯ ಹೇಳುವ ಸಮಯವಾಗಿತ್ತು. ಪೂರ್ವಸಿದ್ಧತೆಯೊಂದಿಗೆ ಉತ್ಸುಕರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುವಾಗಿದ್ದ ಕೆಲವು ಪುಟಾಣಿಗಳ ಕಾರ್ಯಕ್ರಮ ರದ್ದಾಗಿದ್ದು ಸಮಯದ ಅಭಾವದಿಂದ ಎಂಬುದು ವಿಷಾದದ ಸಂಗತಿ.
ಹಬ್ಬದ ವಿಶೇಷತೆಗಳಲ್ಲಿ ಒಂದಾಗಿ ಎಲ್ಲರ ಬಾಯಲ್ಲಿ ನಿಂತ ವೀಷಯವೆಂದರೆ ಶ್ರೀ ರಾಮಚಂದ್ರ ಸ್ವಾಮೀಜಿಯವರ ಸಾಧನೆಯ ಪ್ರದರ್ಶನ! ಮನುಷ್ಯನ ಯಾವುದಾದರೊಂದು ಅಂಗವನ್ನು ನಿರ್ಜೀವಗೊಳಿಸಿ, ಪುನಃ ಅಸ್ತಿತ್ವಕ್ಕೆ ತರುವಂಥಹ ಅವರ ಸಾಧನೆ ಸೇರಿದವರನ್ನೆಲ್ಲಾ ಬೆರಗುಗೊಳಿಸಿ ಆ ಸ್ಥಳವನ್ನೊಮ್ಮೆ ಸ್ತಬ್ಧಗೊಳಿಸಿತು.

ತದನಂತರದಲ್ಲಿ Bay-Areaಗೆ ಹೊಸದಾಗಿ ಆಗಮಿಸಿದ ಅಪರಿಚಿತ ಹವ್ಯಕ ಮುಖಗಳೆಲ್ಲಾ ಮುಂದಾಗಿ ತಮ್ಮ ಪರಿಚಯ ಅರುಹಿ ಬೃಹತ್ ಅವಿಭಕ್ತ ಹವ್ಯಕ ಕುಟುಂಬದ ಬಾಂಧವರಾಗುತ್ತಿದ್ದಂತೆ ಬೋಜನಕ್ಕೆ ಸಿದ್ಧವಾಗಿ ವಿರಾಜಿಸುತ್ತಿದ್ದ ಭಕ್ಷಗಳೆಲ್ಲ ಬಂಧುಗಳನ್ನು ಕೈ ಬೀಸಿ ಕರೆದವು. ಸೇರಿದವರ ಅರ್ಧ ಹೊಟ್ಟೆ ತುಂಬುತ್ತಿದ್ದಂತೆಯೇ ಬಾಯಿಚಪ್ಪರಿಸುವಂತಿದ್ದ ಭಕ್ಷಗಳ ಪಾತ್ರೆಗಳು ಖಾಲಿಹುಟ್ಟು ತೋರಿಸಿದರೆ,ಚಪಾತಿ, ಅನ್ನ, ತಂಬುಳಿ, ಸಾಂಬಾರ್’ಗಳು ಎಲ್ಲರನ್ನು ತಮ್ಮೆಡೆಗೆ ಸೆಳೆದವು. ಮೈಸೂರುಪಾಕ್ ಮತ್ತು ಕ್ಯಾರಟ್ ಖೀರುಗಳು ಮಾತ್ರ ಭೋಜನಾಂತ್ಯದವರೆಗೂ ನೆಲೆಯಾಗಿ ನಿಂತು ಎಲ್ಲರ ಮನವನ್ನು ಸಿಹಿಯಾಗಿಸಿದವು.
ಚದುರಿಕೊಂಡಿದ್ದ ಭೋಜನಪಂಕ್ತಿಯೊಳಗಿಂದ ಗ್ರಂಥಗಳು ತೇಲಿಬಂದು ‘ಭೋಜನಕಾಲೇ ಸೀತಾಕಾಂತಸ್ಮರಣ’ ಎಂದಾಗ ಎಲ್ಲರೂ ಒಕ್ಕೊರಲಿನಿಂದ ‘ಜೈ ಜೈ ರಾಮ್’ ಎಂದು ಧ್ವನಿ ಸೇರಿಸಿದರು.
ಈ ಎಲ್ಲ ಗಳಿಗೆಗಳಲ್ಲಿ ಪೀಠದ ಮೇಲಿದ್ದ ಧಾನ್ಯಲಕ್ಷ್ಮಿಯು ಮನುಜಕುಲವನ್ನೆಲ್ಲಾ ಆಶೀರ್ವದಿಸುತ್ತಾ ಸುತ್ತ ಧಾನ್ಯಗಳ ಸುರಿಸುವಂತೆ, ನಗುವಿನ ಹೊಂಬೆಳಕ ಬೀರಿದಂತೆ ತೋರುತ್ತಿತ್ತು.ಎಲ್ಲ ಕಾರ್ಯಕ್ರಮಗಳು ಮುಗಿಯುತ್ತಿದ್ದಂತೆ ಬೀಳ್ಕೊಡುತ್ತಿದ್ದ ಬಾಂಧವರನ್ನು ೨೦೦೭ನೇ ಸಾಲಿನ ಹವ್ಯಕ ದೀಪಾವಳಿಯು ೨೦೦೮ನೇ ಸಾಲಿನ ಹವ್ಯಕ ಸಂಕ್ರಾಂತಿಗೆ ಶ್ರೀ ಗೋಪಾಲ ಭಟ್’ರವರ ಕಂಠದಿಂದ ಆಮಂತ್ರಣ ಕೋರಿತು. ಸಂಕ್ರಾಂತಿಯ ನಿರೀಕ್ಷೆಯಲ್ಲಿ ದೀಪಾವಳಿಗೆ ವಿದಾಯ ಹೇಳುತ್ತಾ ಒಬ್ಬೊಬ್ಬರಾಗಿ ಮನೆಯತ್ತ ಮರಳುತ್ತಿದ್ದರೂ ಹವ್ಯಕ ಭಾಷೆಯ ಸೊಗಡು ಹತ್ತುದಿಕ್ಕಿನಿಂದ ಬಂದ ನೂರೈವತ್ತು ಜನರಲ್ಲಿ ಆತ್ಮೀಯತೆಯನಿತ್ತ ಬೆಸೆದಿತ್ತು. ಸರ್ವ ಹವ್ಯಕ ಬಾಂಧವರಿಂದ ಸಾಂಗೋಪಸಾಂಗವಾಗಿ ಜರುಗಿದ ದೀಪಾವಳಿಯನ್ನು ಮೆಲುಕುಹಾಕುತ್ತ, ಯಶಸ್ಸಿಗೆ ಕಾರಣವಾದ ಎಲ್ಲ ಹಸ್ತಗಳು ಹಸ್ತ ಕೂಡಿಸಿಕೊಂಡು ಎಲ್ಲರಿಗೂ ಧನ್ಯವಾದ ಅರ್ಪಿಸಿ ‘ದಿವ್ಯಜ್ಯೋತಿ’ ಬಳಗ hallನಿಂದ ಹೊರಬಂದಾಗ ಬೆಳಕಿನ ಹಬ್ಬವೇ ಸುತ್ತ ಬೆಳದಿಂಗಳಾದಂತೆ, ಮೇಲೆ ನಕ್ಷತ್ರಗಳು ಸಂಕ್ರಾಂತಿ ಬೀರಲಿರುವ ಬಿಳಿಎಳ್ಳಿನಂತೆ ಆಗಸದಲ್ಲಿ ನಗುತ್ತ ಶುಭಕೋರಿದವು.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.