December 19, 2007

ಸಿಂಡರೆಲಾ

ಕಹಿ ಕಾಫಿಯ ಆಳದಲಿ
ಅವಳು ನಕ್ಕು ಸಿಹಿಯಾಗಿ
ನನ್ನೆದೆಯ ಪ್ರೇಮ ಸುಪ್ತವಾಗಿಳಿದು
ಅರಿಯೆನೆಂದಿತು ಹೆಸರ
"ಯಾರೇ ನೀನು ಬೆಳ್ಳಕ್ಕಿ ಮುಗಿಲೇ"
ಪ್ರಶ್ನೆಗೂ ಮುನ್ನ ಹೊರಟೇ ಹೋದಳು
"ಹನ್ನೆರಡಾಯಿತು,ಅವನು ಕಾಯುತ್ತಾನೆ ಬಂದು,
ನಾನಿನ್ನು ಹೊರಡುತ್ತೇನೆ" ಎಂದು
ಉಲಿದವಳು ನಿಲ್ಲಲೇ ಇಲ್ಲ
ಎಲ್ಲವಳೆಂದು ಶೋಧಿಸಲು
ತನ್ನೊಂದು ಚಪ್ಪಲಿಯ
ಸುಳಿವ ಬಿಟ್ಟಿರಲಿಲ್ಲ

ಯಾರಿವಳು?
ಸಂಜೆಬೆಳ್ಳಕ್ಕಿಯ ಹಾದಿಯೆಡೆ ಮೊಗಮಾಡಿ
ನಡೆದಳೋ ಆರಾಧನಾ ದೀಪ್ತಿಯಂತೆ
ನೋಟಕೂ ನೂರರ್ಥ ಹಚ್ಚಿ
ಆಳದೊಳಗೊಂದು ನಗು ಬಿತ್ತಿ
ಮೆಲ್ಲ ಸರಿದವಳು
ಕಣ್ಣೊಳಗಣ ಕವನವಾದವಳು
ನಾಳೆ ಬರುವಳೋ ಹೇಗೆ
ನಗುವ ಮೊಳಕೆಗೆ ನೀರುಣಿಸಲು
ಆ ನನ್ನ ಪ್ರೇಯಸಿ?

December 5, 2007

ಬೆಳದಿಂಗಳಾಯ್ತು ನೋಡಾ ಬೆಳಕಿನ ಹಬ್ಬ

ಬಿಸಿಲಿಲ್ಲದೆ ಬಿಸಿಲ ಕಂಪನ್ನಷ್ಟೆ ಹೊಮ್ಮಿಸಿದ್ದ ಸುಂದರ ಮಧ್ಯಾಹ್ನಕ್ಕೆ ಸಂಜೆಯ ನವಿರು ನೆರೆಯುತ್ತಲಿತ್ತು. ಸಂಜೆ ಆವರಿಸುತ್ತಿದ್ದ ಐದು ಗಂಟೆಯ ಸಮಯ.(ಶನಿವಾರ , December 1, 5:00PM) Californiaದ Sunnyvale Cityಯ Fairoaks Parkನ Community Centre ಹೊಕ್ಕುತ್ತಿದ್ದಂತೆ ನವವಸ್ತ್ರ(ಭಾರತೀಯ ಉಡುಗೆ) ಧರಿಸಿದ ವ್ಯಕ್ತಿಗಳು Parkನ ಆವರಣದಲ್ಲಿ ಸಂಭ್ರಮದಿಂದ ತಮ್ಮ Car ಹೊತ್ತು ತಂದಿದ್ದ ಸಾಮಾನು ಸರಂಜಾಮುಗಳನ್ನು Community Centre ಒಳಗಡೆ ಸಾಗಿಸುತ್ತಿದ್ದುದು ಸಂಭ್ರಮದ ಸುವಾಸನೆಯ ಸ್ವಾಗತ ಸೂಸುತ್ತಿತ್ತು. ಒಳಗಡಿ ಇಡುವ ಮೊದಲು ಕಾರ್ಯಕ್ರಮ ನಡೆಯಲಿದ್ದ Hallನ ಸುತ್ತಲೂ ದೇವೀಪಾದ, ಕಳಶ, ಸ್ವಸ್ತಿಕ್, ದೀಪಾಲಂಕಾರದ ರಂಗೋಲೆ ಚಿತ್ತಾರಗಳು ಅತಿಥಿಗಳನ್ನೆಲ್ಲಾ ಸ್ವಾಗತಿಸಿ ಒಳಬಿಟ್ಟವು. ಒಳ ಹೊಕ್ಕರೆ ಬೃಹತ್ ಅವಿಭಕ್ತ ಹವ್ಯಕ ಕುಟುಂಬದ ನೂರೈವತ್ತಕ್ಕೂ ಮೀರಿದ ಸದಸ್ಯರೆಲ್ಲಾ ಒಬ್ಬೊಬ್ಬರೂ ಒಂದೊಂದು ಕಾರ್ಯದಲ್ಲಿ ನಿರತರಾಗಿದ್ದು ಕುಟುಂಬದ ಒಗ್ಗಟ್ಟಿಗೆ ಮಾದರಿಯಾಗಿತ್ತು. ರಂಗುರಂಗಿನ ಹೊಸಬಟ್ಟೆ ತೊಟ್ಟ ಎಲ್ಲ ವದನಗಳಲ್ಲಿಯೂ ದೀಪಾವಳಿಯ ರಂಗು ಹೊರಹೊಮ್ಮುತ್ತಿತ್ತು. ಹಚ್ಚಿಟ್ಟ ಹಣತೆಗಳಂತೆ ಮಕ್ಕಳೆಲ್ಲ ಕುಳಿತಲ್ಲೆ ಕುಣಿಯುತ್ತ ಖುಷಿಯಲ್ಲಿದ್ದರು. ಹಬ್ಬಕ್ಕೆ ಇನ್ನಷ್ಟು ರಂಗು ಭರಿಸುವ ಸಲುವಾಗಿ ಮಕ್ಕಳಿಗೆಲ್ಲಾ ಬಿಳಿ ಹಾಳೆಯ ಮೇಲಿನ ಚಿತ್ರಕ್ಕೆ ಬಣ್ಣಬಳಿಯುವ ಕೆಲಸ ನೀಡಿ ಕಾರ್ಯನಿರತರಾಗುವಂತೆ ಮಾಡಲಾಗಿದ್ದರಿಂದ ಚಿಣ್ಣರೆಲ್ಲಾ ಮುದದಿಂದ ಬಣ್ಣದ ಲೋಕದಲ್ಲಿ ವಿಹರಿಸುತ್ತಿದ್ದರು.

ಎದುರಿಗಿನ ಭಿತ್ತಿಯ ಮಧ್ಯದಲ್ಲಿ ಅಕ್ಕಿ, ರವಾ, ಬಿಳಿ ಮತ್ತು ಕಪ್ಪು ಎಳ್ಳು, ಸಬ್ಬಕ್ಕಿ, ಹೆಸರುಬೇಳೆ, ಹೆಸರುಕಾಳು, ಮೆಂತ್ಯದಕಾಳುಗಳಿಂದ ಉದ್ಭವಳಾದ ಶ್ರೀಲಕ್ಷ್ಮಿದೇವಿಯು ಶ್ರೀಮತಿ ಮೀರಾ ಹೆಗಡೆಯವರ ಹಸ್ತದಿಂದ ಉದಯಿಸಿದ್ದು, ಕಬ್ಬಿನಗಿಡಗಳ ನಡುವೆ ಸರ್ವರನ್ನೂ ಆಶೀರ್ವದಿಸುತ್ತಾ ಎಲ್ಲರ ಕಣ್ಮನ ಸೆಳೆಯುತ್ತ ನಗುತ್ತಲಿದ್ದಳು. ದೇವಿಯ ಸುತ್ತ ನೀರಿನಲ್ಲಿ ಈಜುತ್ತಿದ್ದ ದೀಪಗಳು ಎಲ್ಲರ ನಯನಗಳಲ್ಲಿ ಹೊಳೆದು ಸುತ್ತ ದೀಪಾವಳಿಯ ಬೆಳಕನ್ನು ಬೀರಿದವು. ಈ ಎಲ್ಲ ದೀಪಗಳ ಸುತ್ತ ನಲಿಯುತ್ತಿದ್ದ ಬಣ್ಣದ ರಂಗೋಲೆ ಹಬ್ಬಕ್ಕೆ ಕಳೆಯಾಗಿತ್ತು.
ಶ್ರೀ ಶಿವರಾಮ ಭಟ್’ರವರು ಪುರೋಹಿತರಾಗಿ "ನಮಸ್ತೇಸ್ತು ಮಹಮಾಯೇ ಶ್ರೀಪೀಠೇ ಸುರಪೂಜಿತೆ" ಎಂದು ದೇವಿಯನ್ನು ಮಂತ್ರ-ಶ್ಲೋಕಾದಿಗಳಿಂದ ಪೂಜಿಸಿದಾಗ ಬಾಂಧವರೆಲ್ಲಾ ಭಕ್ತಾದಿಗಳಾಗಿ ಕರಮುಗಿದು ನಿಂತರು. ‘ಸ್ವಾಮಿ ದೇವನೆ ಲೋಕಪಾಲನೇ’ ಎಂಬುದಾಗಿ ಭಜಿಸಿದ ಮಾತೆಯರ ಕಂಠಗಳಿಗೆ ಬಾಂಧವರೆಲ್ಲರೂ ಧ್ವನಿಯಾಗಿ ಭಜಿಸಿ ಕೊನೆಯಲ್ಲಿ ‘ರಾಮ.. ರಾಮಾ..ಎನ್ನಿರೋ...’ ಎಂಬ ಭಜನೆಯಲ್ಲಿ ರಾಮನನ್ನು ನೆನೆದು ಭಜನೆ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದರು.

ಅಧ್ಯಕ್ಷ ಶ್ರೀ ವಿಶ್ವನಾಥ ಹೆಗಡೆಯವರು ದೀಪಾವಳಿಯನ್ನು ಆಚರಿಸಲು ಆಗಮಿಸಿದ ಹವ್ಯಕ ಬಾಂಧವರಿಗೆಲ್ಲಾ ಅತಿಥೇಯ "ದಿವ್ಯಜ್ಯೋತಿ" ಬಳಗದ ಪರವಾಗಿ ಆದರದ ಸ್ವಾಗತ ಕೋರಿದ್ದಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು. ನಂತರ ಶ್ರೀ ಗಿರೀಶ ಹೆಗಡೆಯವರ ನಿರ್ವಹಣೆಯಲ್ಲಿ ಚಿಗುರಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ "ದಿವ್ಯಜ್ಯೋತಿ" ಬಳಗದ ಸಪ್ತಜ್ಯೋತಿಯರು ‘ದೇವೀ.. ಭಾಗ್ಯದಾತೆ’ಎನ್ನುತ್ತ ದೇವಿಯನ್ನು ಸ್ತುತಿಸಿದ ಮರುಕ್ಷಣದಲ್ಲಿ ತೇಲಿಬಂದ ಅದೇ ಬಳಗದ ಚಿಣ್ಣಾರಿಗಳ ಸಪ್ತಸ್ವರಗಳು ಒಂದಾಗಿ ‘ಜ್ಯೋತಿ ಬೆಳಗುತಿದೇ..’ಎಂದು ಹಾಡಿದ ಬೆಳಕಿನ ಹಾಡನ್ನು ಆಲಿಸುತ್ತಾ ಪುಟಾಣಿಗಳೆಲ್ಲಾ ಬಣ್ಣದ ಲೋಕದಿಂದಿಳಿದು ಬಂದು ತಮ್ಮ ತಾಯ್ತಂದೆಯರ ಸಮ್ಮುಖದಲ್ಲಿ ದೇವಿಯ ಮುಂದೆ ಒಬ್ಬೊಬ್ಬರಾಗಿ ಜ್ಯೋತಿ ಬೆಳಗಿಸಿದಾಗ ನೂರು ದೀಪಗಳೆಲ್ಲಾ ಒಂದಾಗಿ ಉಜ್ವಲ ಬೆಳಕ ಚೆಲ್ಲಿದವು.
ಚಂದನ್, ಶ್ರೇಯ, ಐಶ್ವರ್ಯ, ಸ್ನೇಹ, ಅನಿಶಾರೆಂಬ ಪಂಚ ಪುಟಾಣಿಗಳು ಅಧ್ಬುತವಾಗಿ ಮುದ್ದುಮಾತುಗಳಲ್ಲಿ ದೀಪಾವಳಿಯ ಬಗ್ಗೆ ಮಾಹಿತಿ ನೀಡುವಾಗ ಬಾಂಧವರೆಲ್ಲಾ ಮೂಕರಾಗಿ ಕರ್ಣಗಳಿಗೆ ಕೆಲಸ ಕೊಟ್ಟರು. ಕೃತಿಕಾ ಹಾಗೂ ಪ್ರಕೃತಿಯರು ನರ್ತಿಸಿದ ಭರತನಾಟ್ಯ ಹಾಗೂ ಕಥಕ್ ಶೈಲಿಯ ನಾಟ್ಯವು ನೋಡುಗರ ಕಣ್ಮನ ಸೆಳೆಯಿತು. ‘ಬಾರಾ..ಬಾರಾ..’ ಎಂಬ ಹಾಡಿಗೆ ಚಿಕ್ಕದಾದ ರಂಗಸ್ಥಳಕ್ಕೆ ಹೊಂದಿಕೊಂಡು ಹೆಜ್ಜೆಹಾಕಿದ ಈ ಪುಟಾಣಿಗಳ ನೃತ್ಯ ಪ್ರಶಂಸನೀಯ. ಪ್ರಣವ್, ಅಂಜಲಿ, ವಿಕಾಸ್’ರ ನೇತೃತ್ವದಲ್ಲಿ ರಸಪ್ರಶ್ನೆ ಕಾರ್ಯಕ್ರಮ ರಸವತ್ತಾಗಿ ಮೂಡುತ್ತಿದ್ದಂತೆ ಇತ್ತ ಅತಿಥೇಯ ಗೃಹಿಣಿಯರಿಂದ ಭೋಜನದ ಸಿದ್ಧತೆ ನಡೆದಿತ್ತು. ಬೆಳಕಿನ ಹಬ್ಬದಲ್ಲಿ ಉಪಸ್ಥಿತರಿದ್ದ ಎಲ್ಲ ಮಾತೆಯರ ರುಚಿ ರುಚಿಯ, ವಿಧವಿಧದ ಭಕ್ಷ್ಯಗಳು ಅಂಗಿತೊಟ್ಟ ಮೇಜನ್ನು ರಂಗಾಗಿ ಶೃಂಗರಿಸಿದ್ದವು. ಅನ್ನಪೂರ್ಣೆಯರ ಕೈಗಳು ಅಕ್ಕಿ ತೊಳೆಯುತ್ತಿದ್ದರೆ, ಕಣ್ಣುಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ಅವಲೋಕಿಸಿದವು.
ಇತ್ತ ಅಂಜಲಿ, ಅನನ್ಯ, ಪ್ರಕೃತಿ, ಕೃತಿಕಾರವರು ಪ್ರೇಕ್ಷಕರ ಕಣ್ಮನ ಸೆಳೆಯುತ್ತ ಹಿಮಾಚಲಪ್ರದೇಶಕ್ಕೆ ಕರೆದೊಯ್ಯುತ್ತಿದ್ದಂತೆ ಇತ್ತ ಮಲ್ಲಿಗೆಯ ಅನ್ನ ಬೆಳ್ಳನೆಯ ನಗೆಸೂಸಿ ಅರಳುತ್ತಲಿತ್ತು .ಅಂಕಿತಳ ಚಂದದ ತೊಂಡೆಕಾಯಿ-ಬೆಂಡೆಕಾಯಿಯ ಹಾಡನ್ನಾಲಿಸಿದ ಹಿಂದೆಯೇ ‘ಸೊಂಟದ ಮೇಲೆ ಕೈಯಿಟ್ಟುಕೊಂಡು’ ಎಂಬ ಹಾಡಿಗೆ ಜನಪದ ಮತ್ತು ಪಾಶ್ಚಾತ್ಯಗಳೆರಡೂ ಮಿಶ್ರಗೊಂಡ ಶೈಲಿಯಲ್ಲಿ ಐಶ್ವರ್ಯ ಮತ್ತು ಶ್ರೇಯ ಎಲ್ಲರೂ ಮೂಗಿನ ಮೇಲೆ ಬೆರೆಳಿಟ್ಟುಕೊಳ್ಳುವಂತೆ ನರ್ತಿಸಿ ಮುಗಿಸಿದಾಗ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿದಾಯ ಹೇಳುವ ಸಮಯವಾಗಿತ್ತು. ಪೂರ್ವಸಿದ್ಧತೆಯೊಂದಿಗೆ ಉತ್ಸುಕರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುವಾಗಿದ್ದ ಕೆಲವು ಪುಟಾಣಿಗಳ ಕಾರ್ಯಕ್ರಮ ರದ್ದಾಗಿದ್ದು ಸಮಯದ ಅಭಾವದಿಂದ ಎಂಬುದು ವಿಷಾದದ ಸಂಗತಿ.
ಹಬ್ಬದ ವಿಶೇಷತೆಗಳಲ್ಲಿ ಒಂದಾಗಿ ಎಲ್ಲರ ಬಾಯಲ್ಲಿ ನಿಂತ ವೀಷಯವೆಂದರೆ ಶ್ರೀ ರಾಮಚಂದ್ರ ಸ್ವಾಮೀಜಿಯವರ ಸಾಧನೆಯ ಪ್ರದರ್ಶನ! ಮನುಷ್ಯನ ಯಾವುದಾದರೊಂದು ಅಂಗವನ್ನು ನಿರ್ಜೀವಗೊಳಿಸಿ, ಪುನಃ ಅಸ್ತಿತ್ವಕ್ಕೆ ತರುವಂಥಹ ಅವರ ಸಾಧನೆ ಸೇರಿದವರನ್ನೆಲ್ಲಾ ಬೆರಗುಗೊಳಿಸಿ ಆ ಸ್ಥಳವನ್ನೊಮ್ಮೆ ಸ್ತಬ್ಧಗೊಳಿಸಿತು.

ತದನಂತರದಲ್ಲಿ Bay-Areaಗೆ ಹೊಸದಾಗಿ ಆಗಮಿಸಿದ ಅಪರಿಚಿತ ಹವ್ಯಕ ಮುಖಗಳೆಲ್ಲಾ ಮುಂದಾಗಿ ತಮ್ಮ ಪರಿಚಯ ಅರುಹಿ ಬೃಹತ್ ಅವಿಭಕ್ತ ಹವ್ಯಕ ಕುಟುಂಬದ ಬಾಂಧವರಾಗುತ್ತಿದ್ದಂತೆ ಬೋಜನಕ್ಕೆ ಸಿದ್ಧವಾಗಿ ವಿರಾಜಿಸುತ್ತಿದ್ದ ಭಕ್ಷಗಳೆಲ್ಲ ಬಂಧುಗಳನ್ನು ಕೈ ಬೀಸಿ ಕರೆದವು. ಸೇರಿದವರ ಅರ್ಧ ಹೊಟ್ಟೆ ತುಂಬುತ್ತಿದ್ದಂತೆಯೇ ಬಾಯಿಚಪ್ಪರಿಸುವಂತಿದ್ದ ಭಕ್ಷಗಳ ಪಾತ್ರೆಗಳು ಖಾಲಿಹುಟ್ಟು ತೋರಿಸಿದರೆ,ಚಪಾತಿ, ಅನ್ನ, ತಂಬುಳಿ, ಸಾಂಬಾರ್’ಗಳು ಎಲ್ಲರನ್ನು ತಮ್ಮೆಡೆಗೆ ಸೆಳೆದವು. ಮೈಸೂರುಪಾಕ್ ಮತ್ತು ಕ್ಯಾರಟ್ ಖೀರುಗಳು ಮಾತ್ರ ಭೋಜನಾಂತ್ಯದವರೆಗೂ ನೆಲೆಯಾಗಿ ನಿಂತು ಎಲ್ಲರ ಮನವನ್ನು ಸಿಹಿಯಾಗಿಸಿದವು.
ಚದುರಿಕೊಂಡಿದ್ದ ಭೋಜನಪಂಕ್ತಿಯೊಳಗಿಂದ ಗ್ರಂಥಗಳು ತೇಲಿಬಂದು ‘ಭೋಜನಕಾಲೇ ಸೀತಾಕಾಂತಸ್ಮರಣ’ ಎಂದಾಗ ಎಲ್ಲರೂ ಒಕ್ಕೊರಲಿನಿಂದ ‘ಜೈ ಜೈ ರಾಮ್’ ಎಂದು ಧ್ವನಿ ಸೇರಿಸಿದರು.
ಈ ಎಲ್ಲ ಗಳಿಗೆಗಳಲ್ಲಿ ಪೀಠದ ಮೇಲಿದ್ದ ಧಾನ್ಯಲಕ್ಷ್ಮಿಯು ಮನುಜಕುಲವನ್ನೆಲ್ಲಾ ಆಶೀರ್ವದಿಸುತ್ತಾ ಸುತ್ತ ಧಾನ್ಯಗಳ ಸುರಿಸುವಂತೆ, ನಗುವಿನ ಹೊಂಬೆಳಕ ಬೀರಿದಂತೆ ತೋರುತ್ತಿತ್ತು.ಎಲ್ಲ ಕಾರ್ಯಕ್ರಮಗಳು ಮುಗಿಯುತ್ತಿದ್ದಂತೆ ಬೀಳ್ಕೊಡುತ್ತಿದ್ದ ಬಾಂಧವರನ್ನು ೨೦೦೭ನೇ ಸಾಲಿನ ಹವ್ಯಕ ದೀಪಾವಳಿಯು ೨೦೦೮ನೇ ಸಾಲಿನ ಹವ್ಯಕ ಸಂಕ್ರಾಂತಿಗೆ ಶ್ರೀ ಗೋಪಾಲ ಭಟ್’ರವರ ಕಂಠದಿಂದ ಆಮಂತ್ರಣ ಕೋರಿತು. ಸಂಕ್ರಾಂತಿಯ ನಿರೀಕ್ಷೆಯಲ್ಲಿ ದೀಪಾವಳಿಗೆ ವಿದಾಯ ಹೇಳುತ್ತಾ ಒಬ್ಬೊಬ್ಬರಾಗಿ ಮನೆಯತ್ತ ಮರಳುತ್ತಿದ್ದರೂ ಹವ್ಯಕ ಭಾಷೆಯ ಸೊಗಡು ಹತ್ತುದಿಕ್ಕಿನಿಂದ ಬಂದ ನೂರೈವತ್ತು ಜನರಲ್ಲಿ ಆತ್ಮೀಯತೆಯನಿತ್ತ ಬೆಸೆದಿತ್ತು. ಸರ್ವ ಹವ್ಯಕ ಬಾಂಧವರಿಂದ ಸಾಂಗೋಪಸಾಂಗವಾಗಿ ಜರುಗಿದ ದೀಪಾವಳಿಯನ್ನು ಮೆಲುಕುಹಾಕುತ್ತ, ಯಶಸ್ಸಿಗೆ ಕಾರಣವಾದ ಎಲ್ಲ ಹಸ್ತಗಳು ಹಸ್ತ ಕೂಡಿಸಿಕೊಂಡು ಎಲ್ಲರಿಗೂ ಧನ್ಯವಾದ ಅರ್ಪಿಸಿ ‘ದಿವ್ಯಜ್ಯೋತಿ’ ಬಳಗ hallನಿಂದ ಹೊರಬಂದಾಗ ಬೆಳಕಿನ ಹಬ್ಬವೇ ಸುತ್ತ ಬೆಳದಿಂಗಳಾದಂತೆ, ಮೇಲೆ ನಕ್ಷತ್ರಗಳು ಸಂಕ್ರಾಂತಿ ಬೀರಲಿರುವ ಬಿಳಿಎಳ್ಳಿನಂತೆ ಆಗಸದಲ್ಲಿ ನಗುತ್ತ ಶುಭಕೋರಿದವು.

November 14, 2007

ಮೂರುದಿನಗಳಿಂದ ಆಕಾಶ್, ರಾಜೀವ, ಮತ್ತು ಭರತಖಾನ್ ಒಂದೇ ಬಟ್ಟೆ ತೊಟ್ಟು ಓಡಾಡುತ್ತಿರುವುದು ಸೂಕ್ಷ್ಮಮತಿಯಾದ ಕವಿತಾ ಗಮನಿಸಿದರೂ ಯಾವುದೋ ಸಂಕೋಚ ಅವರಿಗೆ ಬಟ್ಟೆಬದಲಾಯಿಸುವ ಸಲಹೆ ನೀಡಲು ಅವಳನ್ನು ಹಿಂದೆಳೆದಿತ್ತು. ಆಕಾಶ್ ಮತ್ತು ರಾಜೀವ ಮನೆಯಲ್ಲೇ ಇದ್ದು ಅಂಟಿಕೊಂಡ ಎರಡುದಿನಗಳ ತಮ್ಮ ಬೇಸರವನ್ನು ಕಳೆಯಲು ನೀಲಿಕೆರೆಯಲ್ಲಿ ಈಜುವ ಕಾರ್ಯಕ್ರಮದ ಬಗ್ಗೆ ಚರ್ಚಿಸಿ, ತಕ್ಷಣವೇ ಹೊರಡುವ ಯೋಚನೆ ಬಂದು, ಧರಿಸಿದ ಫಾರ್ಮಲ್ ಶರ್ಟ್ ಗಳನ್ನು ಕಳಚಿಟ್ಟು,ಟೀಶರ್ಟ್ ಹಾಗೂ ಬರ್ಮುಡ ತೊಟ್ಟು ನೀಲಿಕೆರೆಯೆಡೆ ವ್ಯಾವಹಾರಿಕ ಮಾತುಗಳನ್ನು ಹಂಚಿಕೊಳ್ಳುತ್ತ ನಡೆದಿದ್ದರು. ಆಕಾಶ್ ಮತ್ತು ರಾಜೀವರಿಗೆ ನಗರದ ಈಜುಕೊಳಗಳಲ್ಲದೇ ನಿಸರ್ಗದ ಮಡಿಲೊಳಗೆ ಮತ್ತೊಂದು ಮಡಿಲಿನಂತೆ ಕಾಣುವ ಕೆರೆಗಳಲ್ಲಿಯೂ ಈಜಿ ದಡ ಸೇರುವ ಚಾತುರ್ಯ ಬಾಲ್ಯದ ಆಟಗಳಲ್ಲಿ ಒಂದಾಗಿತ್ತು. ಇವೆಲ್ಲ ಅರಿಯದ ಭರತನನ್ನು‘ನಾವಿದ್ದೇವೆ, ನಿನ್ನನ್ನು ಮುಳುಗಲು ಬಿಡ್ತೀವಾ? ಬಾ ಹೋಗೋಣ’ ಎಂದು ಆಕಾಶ್ ನೀಡಿದ ಭರವಸೆ ತನ್ನ ಮತ್ತು ಆಕಾಶ್ ಗಿರುವ ಸಂಬಂಧವನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿತ್ತು. ಈ ಸಜ್ಜನರ ನಡುವೆ ತಾನಿರಲು ಪಡೆದಿರದ ಅದೃಷ್ಟದ ಬಗ್ಗೆ ತನ್ನ ಬಗ್ಗೆ ತಾನೇ ಮರುಕಪಡಬೇಕಾಗಿ ಬಂದ ತನ್ನಸ್ಥಿತಿಯ ಬಗ್ಗೆ ಮರುಕಪಡಲು ತನ್ನೊಬ್ಬನನ್ನು ಬಿಟ್ಟರೆ ಯಾರಿಲ್ಲವಲ್ಲವೆನಿಸಿ ಮೊದಲಬಾರಿಗೆ ಅನಾಥಪ್ರಜ್ನೆ ಕಾಡತೊಡಗಿತ್ತು. ತಾಯಿಯ ಪತ್ರವನ್ನು ಓದಿದ್ದ ಮನಸ್ಸು ನೂರು ಧ್ವನಿಗಳನ್ನು ಆಲಿಸುತ್ತಿರುವ ಎರಡು ಕಿವಿಗಳ ಪಾಡಾಗಿ ಗೊಂದಲದಲ್ಲಿ ಸಿಲುಕಿತ್ತು. ತಾನೆಲ್ಲಿ ಹೋಗುತ್ತಿದ್ದೇನೆ ಎಂಬ ಅರಿವಿಲ್ಲದೆಯೇ ಆಕಾಶ್ ಮತ್ತು ರಾಜೀವರೊಡನೆ ಹೆಜ್ಜೆಗಳನ್ನು ಕೂಡಿಸಿಕೊಂಡಿದ್ದ.


ಇತ್ತ ಅವರೆಲ್ಲ ಮನೆಯ ಆವರಣ ದಾಟಿ ದೂರವಾಗಿದ್ದನ್ನು ಕಂಡ ಕವಿತಾ ಅವರೆಲ್ಲರ ಬಟ್ಟೆಗೆ ಈ ಮನೆಯ ನೀರಲ್ಲಿ ಸ್ನಾನ ಕಾಣಿಸುವ ತವಕದಿಂದ ಎಲ್ಲರ ಶರ್ಟ್ಸ್ ಮತ್ತು ಪ್ಯಾಂಟ್ಸಿನ ಕಿಸೆಗಳನ್ನು ಖಾಲಿ ಮಾಡಿ ಆ ವಸ್ತುಗಳನ್ನು ಪಕ್ಕದಲ್ಲಿದ್ದ ಮೇಜಿನ ಮೇಲಿಡುವ ಸನ್ನಾಹದಲ್ಲಿರುವಾಗ ಭರತನ ಅಂಗಿಕಿಸೆಯಲ್ಲಿನ "PRIVATE: To Bharata Kaan" ಎಂಬ ಹಣೆಪಟ್ಟಿಯೊಂದಿಗೆ ಮಡಚಿದ್ದ ಕಾಗದ ಕುತೂಹಲ ಹುಟ್ಟಿಸಿತು. ಹೀಗೆ ಬೇರೆಯವರ ಕಾಗದ ಓದುವುದು ಗುಣವಲ್ಲ ಎಂದು ಮನಸ್ಸು ಒಮ್ಮೆ ನುಡಿದರೂ, ಪ್ರಥಮಬಾರಿಗೆ ಪ್ರೀತಿ ಅಂಕುರಿಸಿದ ಪುರುಷನ ಮೇಲಿನ ಆಸಕ್ತಿ ಈ ಲೆಟರ್ ಒಳಗಿನ ಬರಹವನ್ನು ಓದಲು ಅವಳನ್ನು ಪ್ರೇರೇಪಿಸಿತ್ತು. ಮನೆಯಲ್ಲಿ ಮತ್ತೊಬ್ಬರ ಕಣ್ಣಿಗೆ ಬೀಳುವ ಮುನ್ನ ಸರಸರನೇ ಲೆಟರನ್ನು ಭರತನ ಶರ್ಟ್ ಪಾಕಿಟಿನೊಳಗಿಟ್ಟು, ಸ್ನಾನದ ನೆಪದಿಂದ ಶರ್ಟ್ ಸಮೇತ ಬಾತ್ ರೂಂ ಸೇರಿ ಬಾಗಿಲು ಭದ್ರಪಡಿಸಿಕೊಂಡಳು. ನಿರಾಳವಾಗಿ ಲೆಟರ್ ತೆಗೆಯುವ
ಸಲುವಾಗಿ ಶರ್ಟ್ ಕಿಸೆಯೊಳಗೆ ಕೈ ತೂರಿ ತೆಗೆದರೆ ಅವಳಿ ಕಾಗದಗಳು ಕೈಗೆ ಬಂದವು! ಒಂದರ ಮೇಲೆ PRIVATE:To Bharata Kaan ಎಂದಿದ್ದರೆ, ಇನ್ನೊಂದು ಹಣೆಬರೆಹವಿಲ್ಲದ್ದು!(ಹಣೆಬರಹ ಇಲ್ಲದವನು ಬರೆದದ್ದು ಎಂದರೂ ಸರಿಯೆ.)
ಮೊದಲು ಸಿಕ್ಕ ಲೆಟರ್ ಮಾತ್ರ ಪ್ರವಲ್ಲಿಕಾಳದೇ ಇರಬಹುದು! ಇನ್ನೊಂದು ! ಭರತ್ ಪ್ರವಲ್ಲಿಕಾಳಿಗೆ ಬರೆದ ರಿಪ್ಲಾಯ್ ಇರಬಹುದು ಎಂಬ ಸವತಿಮತ್ಸರದ ಗುಮಾನಿಯ ಜೊತೆ ಆಸಕ್ತಿ ಜಾಸ್ತಿಯಾದುದರಿಂದ To Bharata Kaan ಎಂದಿದ್ದ ಲೆಟರನ್ನು ಓದಲು ಮೊದಲಿಗೆ ಅನುವಾದಳು. ಕಾಗದ ಓದಿ ಮುಗಿದಾಗ ಭರತನ ಗತ ಜೀವನದ ನೂರರಲ್ಲಿ ನಲವತ್ತರಷ್ಟು ಭಾಗ ತನ್ನ ವಶಕ್ಕೊಳಗಾದ ಅನುಭವ ಭೀತಿ ಹುಟ್ಟಿಸಿತಾದರೂ, ಅವನ ಮೇಲಿನ ಆಕರ್ಷಣೆ ಅನುಕಂಪವಾಗಿ ಅವಳೊಳಗೆ ಅಡಗಿ ಮೊಳಕೆಯೊಡೆಯುತ್ತಿದ್ದ ಪ್ರೀತಿಗೆ ಸತ್ವ ಉಣಿಸಿತ್ತು. ಡವಢವನೆ ಹೊಡೆದುಕೊಳ್ಳುತ್ತಿದ್ದ ಹೃದಯವು ಎರಡನೆಯ ಕಾಗದವನ್ನು ಓಪನ್ ಮಾಡುವಾಗ ಕೈಗಳನ್ನು ನಡುಗಿಸಿ ಕೈಯಲ್ಲಿನ ಕಾಗದ ಬಾತ್ ರೂಂ ನೆಲಕಂಟಿ ಮಲಗಿದ್ದ ಹಾಸುಗಲ್ಲನ್ನು ಸ್ಪರ್ಷಿಸುವ ತವಕದಲ್ಲಿದ್ದಾಗಲೇ ಎತ್ತಿಕೊಂಡು ಮೈಮೇಲಿನ ತೊಟ್ಟಬಟ್ಟೆಗೆ ನವುರಾಗಿ ಉಜ್ಜಿದಳು. ಕಾಗದ ಲವಲೇಶವೂ ತೇವವಾಗಿರಲಿಲ್ಲ. ಬಿಡಿಸಿ ಓದಿದರೆ,
ಡೀಯರ್ ಮಾಮ್..ಎಂಬ ಕಂಠದಾಳದ ಕರೆಯೆಂಬಂತೆ ಆರಂಭಗೊಂಡ ಸಾಲು ತಾನು ಪ್ರವಲ್ಲಿಕಾಳನ್ನು ಈ ಕ್ಷಣದಲ್ಲಿಯೇ ಮದುವೆಯಾಗುವ ವಿಚಾರವನ್ನು ಕೈಬಿಟ್ಟು, ಅವಳನ್ನು ಸಹೋದರಿಯಾಗಿ ಸ್ವೀಕರಿಸಿದ್ದಲ್ಲದೇ, ಇಂದು ರಾತ್ರಿ ಎಲ್ಲರ ಕಣ್ಣಿಂದ ದೂರವಾಗಿ ಮನೆಯಿಂದ ಹೊರಡುತ್ತಿರುವ ತನ್ನ ಪಯಣದ ವಿವರಗಳಾದಿಯಾಗಿ ಎಲ್ಲ ಸಾಲುಗಳನ್ನು ಭರಿಸಿದ್ದಲ್ಲದೆ
ಫಾರ್ ಎವರ್ ಎನ್ ಎವರ್
ಯುವರ್ ಸನ್
ಭರತಖಾನ್. ಎಂಬ ಭರವಸೆಯ ನುಡಿಯೊಂದಿಗೆ ಅಂತ್ಯ ಕಂಡಿತ್ತು. ಅಂತಿಮವಾಗಿ ತಾಯಿಯ ಮುಖದರ್ಶನ ಮಾಡಿ ಈ ಕಾಗದ ತಲುಪಿಸಿ ಕಣ್ಮರೆಯಾಗುವ ಉದ್ದೇಶದಿಂದ ಭರತಕಾನ್ ತನ್ನಮ್ಮನಿಗೆ ಬರೆದಿಟ್ಟ ಕಾಗದ ಅದಾಗಿತ್ತು.

ಈ ಎಲ್ಲವ ಓದಿಮುಗಿಸಿ ತುಂಬಿಕೊಂಡ ಕಣ್ಣಾಲೆಗಳನ್ನು ಒರೆಸಿಕೊಂಡ ಕವಿತಾ ಕಾಗದದೊಂದಿಗೆ ಎಲ್ಲ ಬಟ್ಟೆಗಳನ್ನು ಮೇಜಿನ ಮೇಲಿನ ಪರ್ಸ್,ಪೆನ್ ಗಳೊಂದಿಗೆ ಆಯಾ ಜಾಗಗಳಲ್ಲಿ ಮೊದಲಿಟ್ಟಂತೆ ಅಣಿಗೊಳಿಸಿ ನಿಟ್ಟುಸಿರುಬಿಟ್ಟು ಮನೆಯಲ್ಲಿ ಸ್ವಕಾರ್ಯಗಳಲ್ಲಿ ಮಗ್ನರಾದ ಎಲ್ಲರ ಗಮನಕ್ಕೆ ಇವು ಯಾವುವೂ ಬಂದಿಲ್ಲವೆಂಬುದನ್ನು ಖಚಿತಪಡಿಸಿಕೊಂಡು ಖಿನ್ನ ಮನಸ್ಕಳಾಗಿ ಹೊರಜಗಲಿಯಲ್ಲಿ ಕುಳಿತು ಯೋಚಿಸತೊಡಗಿದಳು. ಥಟ್ಟನೆ ಯೋಚನೆಯೊಂದು ಹೊಳೆದು ಅದು ನಿರ್ಧಾರವಾಗಲು ಹೆಚ್ಚು ವೇಳೆ ಹಿಡಿಯಲಿಲ್ಲ. ಅವಳೀಗ ತೆಗೆದುಕೊಂಡ ನಿರ್ಧಾರದಲ್ಲಿ ತಪ್ಪು-ಸರಿಗಳು ತಮ್ಮ ಅರ್ಥದ ಸ್ಥಾನವನ್ನು ಅದಲುಬದಲಾಯಿಸಿಕೊಂಡಿದ್ದು ಎಷ್ಟು ಸರಿ ಎಂಬುದನ್ನು ವಿವೇಚಿಸುವಷ್ಟು ಸಮಯ-ಸಂಯಮಗಳೆರಡೂ ಅವಳಲ್ಲಿ ಇರಲಿಲ್ಲ. ಆ ಕ್ಷಣದ ಸಮಸ್ಯೆಗೆ ಸರಿಯಾದ ಪರಿಹಾರ ಅವಳಿಂದ ಆಗಲಿದ್ದ ಆ ತಪ್ಪೊಂದೇ ಆಗಿತ್ತು!

ನೀಲಿಕೆರೆಯಲ್ಲಿ ಈಜಿ ಸುಸ್ತಾಗಿ ಮನೆಗೆ ಬಂದ ಆಕಾಶ್ ಮತ್ತು ರಾಜೀವ ಕುಳಿತು ನೀರಲ್ಲಿಳಿದ ಪ್ರಸಂಗಗಳನ್ನು ಬಣ್ಣಬಣ್ಣವಾಗಿ ಎಲ್ಲರಿಗೂ ವಿವರಿಸುತ್ತಿದ್ದರೆ ಭರತ್ ಮನದೊಳಗೆ ಹಲವು ಬಣ್ಣಗಳು ಕಲೆತು ಮೇಲೋಗರವಾಗಿ ಮುಖ ಸೌಂದರ್ಯಕಳೆದುಕೊಂಡಿತ್ತು. ಅವನ ಸಪ್ಪೆ ಮುಖ ಎಲ್ಲರಿಗೆ ನೀರಲ್ಲಿಳಿದ ಸುಸ್ತಾಗಿ ಕಂಡರೆ ಕವಿತಾಳಿಗೆ ಅದೇ ಮುಖ ಮನದಾಳದ ಕತೆಯನ್ನು ಹೇಳುತ್ತಿರುವಂತೆ ಕಂಡಿತ್ತು.

ಸಂಜೆ ಕಳೆದು ರಾತ್ರಿ ಊಟವಾದ ಮೇಲೆ ‘ಇಲ್ಲೇ ಮುಂದಿನ ತೋಟದ ಬೆಳದಿಂಗಳ ಅಂಗಳದಲ್ಲಿ ಸ್ವಲ್ಪ ವಿಹರಿಸುತ್ತೇನೆ’ ಎಂದು ಹೊರಟವಳಿಗೆ ಯಾರ ಆಡ್ಡಿಯೂ ಬಾರದಿದ್ದುದಕ್ಕೆ ಕಾರಣ ‘ಬೆಳದಿಂಗಳ ಅಂಗಳದ ವಿಹಾರ’ ಅವಳ ಆಗಾಗಿನ ಅಭ್ಯಾಸವಾದ್ದರಿಂದ. ಆದರೆ ಅವಳು ಕುಳಿತಿದ್ದು ಮೊದಲೆ ತಾನು ಅನ್ಲಾಕ್ ಮಾಡಿಟ್ಟುಕೊಂಡಿದ್ದ ಭರತಖಾನನ ಕಾರಿನ ಹಿಂಬದಿಯ ಸೀಟಿನ ಕತ್ತಲ ಭಾಗದಲ್ಲಿ. ಹಿಂದೆ ಟ್ರಂಕಿನಲ್ಲಿ ಬೆಳಿಗ್ಗೆ ತಂದಿಟ್ಟ ಬಟ್ಟೆಬರೆಗಳನ್ನು ಬಿಟ್ಟು ಉಳಿದೆಲ್ಲ ತನ್ನದು ತನ್ನವರನ್ನು ಕವಿತಾ ತೊರೆಯಲು ಮನಸ್ಸನ್ನು ಶೀಘ್ರವಾಗಿ ಅಣಿಗೊಳಿಸಿಕೊಂಡಿದ್ದಳು!

ಎಲ್ಲರೂ ಮಲಗಿದಾಗ ಶಾರದಮ್ಮ ಅವಳನ್ನು ಒಳಬರುವಂತೆ ಹೇಳಿ ಉತ್ತರಕ್ಕೆ ನಿಲ್ಲದೆ ಅವಳಿಗೋಸ್ಕರ ಬಾಗಿಲು ಮುಚ್ಚದೇ ಮಲಗಿಬಿಟ್ಟಿದ್ದರು. ತೆರೆದಿಟ್ಟ ಬಾಗಿಲು ಕವಿತಾಳನ್ನು ಬರಮಾಡಿಕೊಳ್ಳದೇ ನಡುರಾತ್ರಿಯಲ್ಲಿ ನಡೆದ ಭರತಖಾನನಿಗೆ ಸಹಾಯಹಸ್ತ ಬೀಸಿ ಬೀಳ್ಕೊಟ್ಟಿತ್ತು.
ಬಾಗಿಲು ತೆರೆದೇ ಇದ್ದುದ್ದು ಏಕೆಂಬುದನ್ನೂ ಕೂಡ ವಿವೇಚಿಸಲಾಗದಂತಿದ್ದ ಭರತಖಾನ ಭೂತ ಬಡಿದವನಂತೆ ಭರಭರನೇ ಹೊರಗಡೆ ಬಂದು ಕಾರಲ್ಲಿ ಕೂತಿದ್ದ. ಭರತನಿಂದ ಚಾಲನೆ ಪಡೆದ ಕಾರು ಶರವೇಗದಿಂದ ಬೆಂಗಳೂರಿನ ಕಡೆ ಓಡುತ್ತಿತ್ತು.

(ತುಳಸೀವನದಲ್ಲಿ ಪ್ರಕಟವಾದ ಐದಾರು ಕಥೆಗಾರರು ಕೂಡಿ ಬರೆದ ಕಥೆಯೊಳಗಿನ ನಾ ಬರೆದ ಭಾಗ)

November 3, 2007

ಧನ್ಯವಾದಗಳು.


ಕೊನೆಕೊಯಿಲಿಗೆ ಒಂದು ಅವಕಾಶ ಮಾಡಿಕೊಟ್ಟ ‘ದಟ್ಸ್-ಕನ್ನಡ’ಕ್ಕೆ ಧನ್ಯವಾದಗಳು.
ಪ್ರಕೃತಿ ವಿಕೋಪ, ರಾಜಕೀಯ, ಸಿನೇಮಾರಂಗಗಳ ನಡುವೆ ಕೊನೆಕೊಯಿಲಾಗಿತ್ತಿರುವುದನ್ನು ನೋಡಬೇಕೆ?ಇಲ್ಲಿ ಕ್ಲಿಕ್ಕಿಸಿ

October 10, 2007

ಬೊಗಸೆಯೊಳು ಭಾವ

ನೆನಪ ಹಂದರಕೆ ಮೌನ ಹೊದಿಕೆ
ಬೊಗಸೆ ತುಂಬಾ
ನಿನ್ನಾಳದ ಕನಸ ಬೀಜ
ಉತ್ತುವೆ ಬದುಕ ಬಯಲ
ಬಿತ್ತು ಕನಸಬೀಜಗಳ
ಮೊಳಕೆಯೊಡೆಯಲಿ ಕನಸು
ನನಸ ಗಿಡವಾಗಿ

ಕನಸ ಸಸಿಗಳ ಸುತ್ತಿ ನಿನ್ನಭಯದ ಬೇಲಿ
ಕಾಯ್ದುಕೋ ಪ್ರೀತಿಯೇ ಬದುಕ ಬಯಲನ್ನು!


ಜನಮನದ ಜಂಗುಳಿಯು
ಜೀವಕಣಗಳ ರಾಶಿ
ಜಗದ ಕಡಲೊಳವು
ಕಣವೆರಡೆಯೇನು ತೆರೆ ತೆಕ್ಕೆಯಲ್ಲಿ
ಒಡಲೊಳಗೆ ನಾನು ಆ ದಡವೆ ನೀನು
ಸುಳಿ ಹಾದಿಯಲಿ ತೇಲಿ ನಮ್ಮ ನೌಕೆ!
ಸಾಗಿಸಲು ನಾವಿಕನೇ ಎದೆಯು ಇಹುದೇ?
ತೆರೆ ಬಾರೆ ರೋಷದಲಿ
ಕನಸು ತೆರೆಯಲಿ ಬಿತ್ತಿ
ತೇಲುವುದ ಸಹಿಪ ಚಿತ್ತವೇ
ನಿನಗೊಂದು ಮನಸು ಇದೆಯೇ
ಕನಸು ಕರಗುವ ಕೊನೆಗೆ
ಮಣಿವ ಮನಸಿಗು ಮುನ್ನ
ತೆರೆಯು ತೇಲುವ ತಾಣಕೆ
ಸಾಗಿಸು ಸಹನೆಯೇ ಸಹನೆಯಿದೆಯೆ?

October 9, 2007

ನಿಮ್ಮಲ್ಲಿ ಮತ್ತಷ್ಟು.....

ಸಧ್ಯಕ್ಕೆ ಲಭ್ಯವಿದ್ದ ಆ ದಿನಗಳಲ್ಲಿ ಬರೆದವುಗಳನ್ನು ಮುಚ್ಚುಮರೆಯಿಲ್ಲದೆ ನಿಮ್ಮೆದುರಿಗೆ ತೆರೆದಿಟ್ಟಿದ್ದಾಯ್ತು. ಕಾಲೇಜಿನ ದಿನಗಳಲ್ಲಿ ಬರೆದ ಇನ್ನು ಕೆಲವು ನನ್ನ ಕೈಗೂ ಸಿಗಲಾರದಷ್ಟು ದೂರದಲ್ಲಿದ್ದುದರಿಂದ ನೀವೆಲ್ಲ ಅದನ್ನು ಓದುವ ಸಮಸ್ಯೆಯಿಂದ ಪಾರಾಗಿದ್ದೀರ.
ಇನ್ನು ಮುಂದೆ 2007ರ ನಂತರ ಬರೆದವುಗಳನ್ನು ಬ್ಲಾಗಲ್ಲಿ ತುಂಬುವ ಕಾರ್ಯ ಶುರುವಾಗಲಿದೆ.

‘ಕೊನೆಕೊಯ್ಲು’ಇದನ್ನು" HAVYAKA ASSOCIATION OF AMERICA" ನವರು '2007 SOUVENIR'ನಲ್ಲಿ ಪಬ್ಲಿಶ್ ಮಾಡುವ ಮೊದಲು ನನ್ನ ಹದಿಹರೆಯದ ತೊದಲು ನುಡಿಗಳ ಬರಹಗಳಲ್ಲಿ ಕೆಲವು ಶಿರಸಿಯ "ಧ್ಯೇಯನಿಷ್ಠ ಪತ್ರಕರ್ತ"ದ ಪುಟಗಳಲ್ಲಿ ಕಾಣಿಸಿಕೊಂಡಿದ್ದವು ಎಂಬುದನ್ನು ಬಿಟ್ಟರೆ ಉಳಿದವುಗಳನ್ನು ಬಹಿರಂಗಗೊಳಿಸುವ ಯತ್ನವನ್ನೇ ನಾನು ಮಾಡಿರಲಿಲ್ಲ.I would like to thank Souvenir of HAA and ಧ್ಯೇಯನಿಷ್ಠ ಪತ್ರಕರ್ತ.

ಬ್ಲಾಗ್ ಬರೆಯಲು ಸ್ಫೂರ್ತಿ ನೀಡುವಂತಹ ಪ್ರೋತ್ಸಾಹದಾಯಕ ಮಾತುಗಳನ್ನಾಡಿದ ಎಲ್ಲರಿಗೆ,
ಓದಿದಾಗ ‘ನಾನೂ ಬರೆಯಬೇಕು’ ಎಂಬ ಹುಮ್ಮಸ್ಸು ಕೊಡುವ "ಬರಹ ಬೃಂದಾವನ"ದಲ್ಲಿರುವಂತಹ ಬ್ಲಾಗುಗಳಿಗೆ,
ಹಂಚಿಕೊಳ್ಳುತ್ತಿರುವ ಎಲ್ಲಾ ಓದುಗ ಮಿತ್ರರಿಗೆ ಈ ಬ್ಲಾಗನ್ನು ಸಮರ್ಪಿಸುತ್ತಿದ್ದೇನೆ.
ನಿಮ್ಮೆಲ್ಲರಿಗೆ ಧನ್ಯವಾದ ಅರ್ಪಿಸುತ್ತಾ...

-ಶಾಂತಲಾ ಹೆಗಡೆ.

October 3, 2007

ನಿಮ್ಮೊಳಗೊಂದಿಷ್ಟು.........

ಹೀಗೇ ಸಮಯ ಸಿಕ್ಕಾಗ ಕುಳಿತು ಉತ್ಸಾಹಿ ಬರಹಗಾರ-ಬರಹಗಾರ್ತಿಯರ ಬ್ಲಾಗ್ಸ್ ಓದಿ ಖುಷಿ ಪಡುವಾಗೆಲ್ಲಾ ಅನಿಸಿದ್ದು ನಾನೂ ಕೂಡ ಒಂದು ಬ್ಲಾಗ್ ಕ್ರಿಯೇಟ್ ಮಾಡಿ ನನ್ನ ಬರಹಗಳನ್ನು ಅನ್ನುವುದಕ್ಕಿಂತ, ನಾನು ಗೀಚಿದ್ದನ್ನ ಅದರಲ್ಲಿ ಸುರುವಬೇಕೆಂದು. ಅದಕ್ಕೆ ಮುಹೂರ್ಥ ಸಿಕ್ಕಿದ್ದು ನಿನ್ನೆ ಸಂಜೆ.

ಮೊದಲಿಗೆ ನನ್ನ ಹದಿಹರೆಯದಲ್ಲಿ ಬರೆದ ಅ ಆ ಇ ಈ ಗಳಿಂದ ಪ್ರಾರಂಭಿಸುತ್ತಿದ್ದೇನೆ. ಅವುಗಳೆಲ್ಲಾ ನನ್ನ ಪ್ರಕಾರ ಕವನಗಳು ಎನಿಸಿಕೊಂಡಿದ್ದಂತಹವುಗಳು. ನೀವು ಅವುಗಳನ್ನೋದಿ ಏನೆನ್ನುತ್ತೀರೋ ಗೊತ್ತಿಲ್ಲಾ.....
ಎಷ್ಟೋ ಸಲ ಅವುಗಳನ್ನೋದಿ ನಾನೇ ನನ್ನಳೊಗೆ ನಕ್ಕಿದ್ದಿದೆ. ನಿಮಗೂ ನಗು ಬಂದರೆ ನಕ್ಕು ಬಿಡಿ..... ಈ ರೀತಿಯಲ್ಲಾದರೂ ನಿಮ್ಮನ್ನೆಲ್ಲಾ ನಗಿಸಿದ್ದೇನಲ್ಲಾ ಎಂಬ ಖುಷಿ ನನ್ನ ಪಾಲಿಗಿರಲಿ. ಏಕೆಂದರೆ ನನ್ನ ಕವನಗಳು ‘ಕವನಗಳು’ ಅನ್ನಿಸಿಕೊಳ್ಳುವುದಕ್ಕಿಂತ ‘ಶೈಲಿಯಿರದ ಶಬ್ದಗಳ ಸರ’ ಎನ್ನುವ ಹಾಗಿವೆ.
ಮದುವೆ, ಮನದಿನಿಯ, ಮನೆ, ಮಗ ಇವೆಲ್ಲವನ್ನೂ ಒಟ್ಟಿಗೆ ನಿಭಾಯಿಸುವ ಭರದಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗಿತ್ತೋ, ಇಲ್ಲಾ ಕಳೆದುಕೊಂಡಿದ್ದೆನೋ ಗೊತ್ತಿಲ್ಲಾ.

ಮತ್ತೆ ಮೊದಲಿಗೆ ಮರಳುವ ಮನಸ್ಸಾಗಿದೆ. ಅರಿಯದೇ ಅರಳುವ ಅಕ್ಷರಗಳಿಗೆ ಅರ್ಥವಿಡುವ ಅಳಿಲು ಯತ್ನ ಮಾಡುತ್ತಿದ್ದೇನೆ.
ಸಹೃದಯಿಗಳ ಸಲಹೆಗಳಿಗೆ ಸದಾ ಸ್ವಾಗತ. ‍

- ಶಾಂತಲಾ ಭಂಡಿ.

ನಿನ್ನ ಪ್ರೀತಿಗೆ ಅದರ ರೀತಿಗೆ...

ಓದುವ ಹಂಬಲವೇ ಬರಹಕ್ಕೆ ಬೆಂಬಲವೇ ಸ್ವಾಗತ. ಅಪೇಕ್ಷೆಯಿರದ ಪ್ರೋತ್ಸಾಹವೇ ವಂದನೆ. ಸಿಗದ ಉತ್ತರಕ್ಕೆ ಇರದ ನಿರೀಕ್ಷೆಗಳೇ ನಿಮಗೂ.
ಪ್ರೋತ್ಸಾಹದ ಹೆಜ್ಜೆಗಳೇ ನಿಂತು ದಣಿವಾರಿಸಿಕೊಳ್ಳಿ. ನೆನಪಿನ ಗಡಿಗೆಯೊಳಗೆ ಕನಸೆಂಬ ತಣ್ಣನೆಯ ನೀರನ್ನಿಟ್ಟು ನಡೆದುಬಿಟ್ಟಿರುತ್ತಾಳೆ. ಸಿಕ್ಕಿತ ನೀರು? ಇಲ್ಲಿ ಇಂಗಿಹೋದರೆ ನೀರು ತುಂಬಿಡಲು ಅವಳನ್ನೊಮ್ಮೆ ಕೂಗಿ, ಇಲ್ಲಿಟ್ಟ ಗಡಿಗೆ ಒಡೆದರೂ ಅವಳನ್ನೇ ಕೂಗಿ.

ತಣ್ಣಗೆ ಬೀಸುತ್ತಲಿರುವುದು ಕಲ್ಪನೆಯ ಗಾಳಿಯೇ? ಸಕಲವೂ ಇಲ್ಲಿ ನೆನಪು ಕನಸುಗಳ ನಡುವೆ. ಅಗೋ... ಅಲ್ಲಿ ಆ ಆಂತರ್ಯದ ನಡುವಣ ವಾಸ್ತವ ಸೇತುವೆಯೂ...

.